ಇಂದು ತುರ್ತುಪರಿಸ್ಥಿತಿ ಹೇರಿಕೆಯ ʼಚಿನ್ನದ “ಹಬ್ಬʼ !
ನನ್ನ ದೇಶ ನನ್ನ ದನಿ ಅಂಕಣ: ಅವು ತುರ್ತುಪರಿಸ್ಥಿತಿಯ (internal Emergency) ದಿನಗಳು. ತಮ್ಮ ಅಧಿಕಾರ ಉಳಿಸಿಕೊಳ್ಳುವ ಏಕೈಕ ದುರುದ್ದೇಶದಿಂದ ಇಂದಿರಾ ಗಾಂಧಿಯವರು (Indira Gandhi) ದೇಶದಾದ್ಯಂತ ಆಂತರಿಕ ತುರ್ತುಪರಿಸ್ಥಿತಿ ಹೇರಿದ್ದರು. ಎಲ್ಲ ಮಾಧ್ಯಮದವರು, ಓರಾಟಗಾರರು, ಬುದ್ಧಿಜೀವಿಗಳು, ಬಹುತೇಕ ವಿರೋಧ ಪಕ್ಷಗಳವರು ಶರಣಾಗತರಾಗಿಬಿಟ್ಟಿದ್ದರು, ಅಷ್ಟೇ ಅಲ್ಲ, ಮನೆಯಲ್ಲಿ ಮಂಚದ ಅಡಿಯಲ್ಲಿ ಅಡಗಿಕೊಂಡುಬಿಟ್ಟಿದ್ದರು. ತುರ್ತುಪರಿಸ್ಥಿತಿಯನ್ನು ರಾಷ್ಟೀಯ ಸ್ವಯಂಸೇವಕ ಸಂಘ (RSS) ಮತ್ತು ಅದರ ಪರಿವಾರ ಸಂಘಟನೆಗಳು ಮಾತ್ರವೇ ವಿರೋಧಿಸುತ್ತಿದ್ದುದರಿಂದ ಇಂದಿರಾ ಗಾಂಧಿಯವರು ಆರೆಸ್ಸೆಸ್ ಎಂದರೆ ಸಿಡಿಮಿಡಿಗೊಳ್ಳುತ್ತಿದ್ದರು.
1975ರ ಆ ವರ್ಷದ ಗಾಂಧೀ ಜಯಂತಿ (Gandhi Jayanthi) ಒಂದು ವಿಶೇಷ ಸಂದೇಶ ಹೊತ್ತು ತಂದಿತು. ಆದರೆ ಆ ಸಂದೇಶ, ಸರಕಾರದ ಕಾರ್ಯಕ್ರಮಗಳ ಭಾಗವಾಗಿ ಮೂಡಿಬಂದಿರಲಿಲ್ಲ. ಆ ದಿನಗಳಲ್ಲಿ ಗಾಂಧೀಜಯಂತಿ ಆಚರಿಸಿದವರು ಸಂಘದ ಭೂಗತ ಕಾರ್ಯಕರ್ತರು. ಎದೆಯ ಮೇಲೆ ಧರಿಸಲು ಗಾಂಧೀ ಬಿಲ್ಲೆಗಳು, ಗೋಡೆಗಳನ್ನು ಅಲಂಕರಿಸಲು ಗಾಂಧೀ ಭಿತ್ತಿಚಿತ್ರಗಳು. ಎರಡರಲ್ಲೂ ಗಾಂಧೀ ಚಿತ್ರದ ಕೆಳಗೆ “ಅಸತ್ಯ, ಅನ್ಯಾಯ, ದಬ್ಬಾಳಿಕೆಗಳಿಗೆ ತಲೆಬಾಗುವುದು ಹೇಡಿತನ” ಎನ್ನುವ ಗಾಂಧೀ ಉಕ್ತಿ. ಆದರೆ ಅಂದಿನ ಇಂದಿರಾ – ದೇವರಾಜ ಅರಸು ಅವರ ಕಾಂಗ್ರೆಸ್ ಸರ್ಕಾರಗಳಿಗೆ ಗಾಂಧಿಯ ಚಿತ್ರ, ಗಾಂಧಿಯ ಉಕ್ತಿ, ಗಾಂಧಿಯ ನೆನಪು ಎಲ್ಲಾ ನಿಷಿದ್ಧವಾಗಿತ್ತು.
ಗಾಂಧೀ ಭಿತ್ತಿಪತ್ರ ಅಂಟಿಸುತ್ತಿದ್ದ ಹಲವಾರು ಜನರನ್ನು ಪೊಲೀಸರು ಬಂಧಿಸಿದರು. ಅಹಿಂಸೆ, ಅಹಿಂಸೆ ಎಂದವರ ಚಿತ್ರ ಹಿಡಿದಿದ್ದಕ್ಕೆ ಹೊಡೆದು ಬಡಿದು ಬಂಧಿಸಿ, ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ಆಪಾದಿತರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸಿದಾಗ, ನ್ಯಾಯಾಧೀಶರು ತಮ್ಮ ಕಣ್ಣು – ಕಿವಿಗಳನ್ನು ನಂಬದಾದರು. “ಏನು, ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಕ್ರಿಮಿನಲ್ ಅಪರಾಧವಾಯಿತೇ?” ಎಂದು ಪ್ರಶ್ನಿಸಿದರು. ಇದಕ್ಕೆ ಪೊಲೀಸಿನವರು ಏನು ಹೇಳಿಯಾರು! “ಇವರೆಲ್ಲಾ ಆರೆಸ್ಸೆಸ್ ಕಾರ್ಯಕರ್ತರು” ಎಂಬ ನೆಪ ಹೇಳಿದರು. “ಇರಬಹುದು, ಆದರೆ ಇವರು ಮಾಡಿದ ಅಪರಾಧವೇನು?” ಎಂದ ನ್ಯಾಯಾಧೀಶರ ಪ್ರಶ್ನೆಗಳಿಗೆ ಪೊಲೀಸರು ನಿರುತ್ತರರಾದರು. ನ್ಯಾಯಾಧೀಶರು (ಕೆಲವೆಡೆ) ಪೊಲೀಸರಿಗೆ ಛೀಮಾರಿ ಹಾಕಿ ಬಂಧಿತರನ್ನು ಬಿಡುಗಡೆ ಮಾಡಿದರು.
ಹಿಂದೆ ಉಪ್ಪಿನ ಸತ್ಯಾಗ್ರಹದಲ್ಲಿ, ಭಾರತ್ ಛೋಡೋ ಚಳವಳಿಯಲ್ಲಿ ಭಾಗವಹಿಸಿ ‘ವಂದೇ ಮಾತರಂ’, ‘ಮಹಾತ್ಮಾ ಗಾಂಧೀ ಕೀ ಜೈ’, ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಘೋಷಿಸುತ್ತಿದ್ದವರ ಮೇಲೆ ಬ್ರಿಟಿಷ್ ಪೊಲೀಸರ ಲಾಠಿಯೇಟು, ಬೂಟಿನೇಟು ಬೀಳುತ್ತಿತ್ತು. ‘ಸ್ವಾತಂತ್ರ್ಯ’ ಬಂದ ಮೇಲೂ ಹಾಗೆ ಘೋಷಣೆ ಕೂಗಿದವರ ಮೇಲೆ, ಕಾಂಗ್ರೆಸ್ ಸರಕಾರದ ಪೊಲೀಸರ ಲಾಠಿಯೇಟು ಬಿದ್ದುದು, ಬರಿಯ ವಿಸ್ಮಯದ – ವಿಷಾದಭಾವದ ಮಾತಲ್ಲ. ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳದೆಯೇ, ಕಾಂಗ್ರೆಸ್ಸಿನಂತಹ ಪಕ್ಷಗಳನ್ನು ಬೆಂಬಲಿಸಿ ಮತ ಹಾಕುವುದರ ದುಷ್ಪರಿಣಾಮಗಳ ಅಂತಿಮ ಹಂತವಿದು.
1975ರ ನವೆಂಬರ್ 14ರಿಂದ ದೇಶಾದ್ಯಂತ ಪ್ರತಿಭಟನೆಯನ್ನು ಆರೆಸ್ಸೆಸ್ ಪರಿವಾರ ಸಂಘಟನೆಗಳು ಹಮ್ಮಿಕೊಂಡಿದ್ದವು. ಬಹುಪಾಲು ರಾಜಕಾರಣಿಗಳು, ನಾಯಕರು ಸೆರೆಮನೆಯಲ್ಲಿದ್ದರು. ಪ್ರತಿಭಟನೆಯನ್ನು ವಿಫಲಗೊಳಿಸಲು ಅಂದಿನ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆಯ ಬಂಧನಗಳಿಗೆ (Preventive Arrests) ಆಜ್ಞೆ ಮಾಡಿತ್ತು. ಆ ಕಾರಣಕ್ಕೆ ನಾವೆಲ್ಲಾ ಬಂಧನಕ್ಕೆ ಒಳಗಾದುದು ನವೆಂಬರ್ 13ರಂದು. ಪೊಲೀಸರು “ನೀವು ಭಾರತೀಯರೋ ರಾಷ್ಟ್ರೀಯರೋ?” ಎಂದು ಪ್ರಶ್ನೆ ಹಾಕಿದಾಗ ನಾನೂ ನನ್ನ ಉಳಿದ ಸ್ವಯಂಸೇವಕ ಬಂಧುಗಳೂ ಕಕ್ಕಾಬಿಕ್ಕಿಯಾದೆವು. ನಮ್ಮ ಮುಂದೆ PSR (Prisoners’ Search Register) ಹರಡಿಕೊಂಡಿತ್ತು. ಏನು ಹೇಳಬೇಕೆಂಬುದೇ ತಿಳಿಯಲಿಲ್ಲ. ಮುಗ್ಧತೆಯಿಂದ “ನಾವೆಲ್ಲಾ ಭಾರತೀಯರೂ ಹೌದು, ರಾಷ್ಟ್ರೀಯರೂ ಹೌದು” ಎಂದೆವು. “ಎರಡರಲ್ಲಿ ಒಂದು ಹೇಳ್ರೀ” ಎಂದು ಅವರು ಅಬ್ಬರಿಸಿದಾಗ ಇನ್ನಷ್ಟು ಗೊಂದಲ. ಕೊನೆಗೆ ಆ ಪ್ರಶ್ನೆ ನಾವು ರಾಷ್ಟೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದವರೋ, ಭಾರತೀಯ ಜನಸಂಘಕ್ಕೆ ಸಂಬಂಧಿಸಿದವರೋ ಎಂಬುದಾಗಿತ್ತು ಎಂದು ತಿಳಿದಾಗ, ಗೊಂದಲದಿಂದ ಪರಿಹಾರ. ನಾವೆಲ್ಲಾ ಒಕ್ಕೊರಲಿನಿಂದ “ನಾವು ರಾಷ್ಟೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು” ಎಂದೆವು. ಅಂದಿನ ದಿನಮಾನಗಳಲ್ಲಿ ರಾಷ್ಟೀಯ ಸ್ವಯಂಸೇವಕ ಸಂಘದ ಹೆಸರನ್ನು ಸರಿಯಾಗಿ ಉಚ್ಚರಿಸಲು, ಉಲ್ಲೇಖಿಸಲು ಬಹಳ ಜನರಿಗೆ ಬರುತ್ತಿರಲಿಲ್ಲ (ಕೆಲವರಿಗೆ ಈಗಲೂ ಗೊಂದಲ!).
ಇದೆಲ್ಲಾ ನಡೆದು ನಲವತ್ತೇಳು ವರ್ಷಗಳೇ ಉರುಳಿವೆ. ಕರಾಳ ತುರ್ತುಪರಿಸ್ಥಿತಿಯ ನೂರೆಂಟು ನೆನಪುಗಳು ಕಣ್ಮುಂದೆ ಸುತ್ತುತ್ತವೆ. ಇಡೀ ದೇಶದಲ್ಲಿ ಈ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ MP, MLA, MLC ಸತ್ಯಾಗ್ರಹ ಮಾಡಲಿಲ್ಲ, ಪ್ರತಿಭಟಿಸಲಿಲ್ಲ, ಬಂಧನಕ್ಕೆ ಒಳಗಾಗಲಿಲ್ಲ ಎಂಬುದು ಇಂದಿಗೂ ಪ್ರಶ್ನೆಯಾಗಿ ಕಾಡುತ್ತದೆ. ಎಂತಹ ಪಕ್ಷವಿದು. ನಾವೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆವು, ಬ್ರಿಟಿಷರಿಂದ ನಾವೇ ಸ್ವಾತಂತ್ರ್ಯವನ್ನು ಪಡೆದೆವು, ಎಂದು ದಶಕಗಳಿಂದ ಸುಳ್ಳು ಹೇಳಿಕೊಂಡೇ ಬಂದ ಕಾಂಗ್ರೆಸ್ಸಿನವರಿಗೆ ಇದು ಪ್ರಜಾದ್ರೋಹ, ಇದು ಸ್ವಾತಂತ್ರ್ಯಹರಣ, ಈ ತುರ್ತುಪರಿಸ್ಥಿತಿಯು ಅನ್ಯಾಯದ ಪರಮಾವಧಿ ಎಂದು ಅನ್ನಿಸಲೇ ಇಲ್ಲ! ಕಾಂಗ್ರೆಸ್ಸಿನ ಒಬ್ಬನೇ ಒಬ್ಬ MP ,MLA, MLC ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲೇ ಇಲ್ಲ. ಕಾಸು ಮಾಡಿಕೊಳ್ಳುವ ಧಂಧೆಯನ್ನು ಎಲ್ಲ ಕಾಂಗ್ರೆಸ್ಸಿಗರೂ ಇನ್ನಷ್ಟು ನಿರಾಳವಾಗಿ ಮುಂದುವರಿಸಿಕೊಂಡುಹೋದರು. ಕಳೆದ ಏಳೆಂಟು ದಶಕಗಳ ಭಾರತೀಯ ಇತಿಹಾಸವನ್ನು ಅವಲೋಕಿಸಿದರೆ ಈ ಕಾಂಗ್ರೆಸ್ ಎನ್ನುವುದು ಕೇವಲ ಒಂದು ರಾಜಕೀಯ ಪಕ್ಷವಾಗಿರದೆ, ದೇಶಕ್ಕೆ ಅಂಟಿದ ಒಂದು ಶಾಪ, ಒಂದು ರೋಗ ಎಂಬುದು ಖಚಿತವಾಗುತ್ತದೆ.
ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಪ್ಯಾರೇಲಾಲರು, ‘Mahatma Gandhi : The Last Phase’ ಎನ್ನುವ ಬೃಹತ್ ಗ್ರಂಥ ರಚಿಸಿದ್ದಾರೆ. ಅದನ್ನು ಗಾಂಧೀವಾದಿ ಕೆ.ವಿ.ಶಂಕರಗೌಡರು ‘ಮಹಾತ್ಮಾಗಾಂಧಿ: ಅಂತಿಮ ಹಂತ’ ಎಂದು ಅನುವಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯವು ಹೊರತಂದಿರುವ ಈ ಸಂಪುಟಗಳು ಓದಲೇಬೇಕಾದ ಅಪೂರ್ವ ಮಾಹಿತಿಗಳನ್ನು ದಾಖಲೆಗಳನ್ನು ಸಂಗತಿಗಳನ್ನು ಒಳಗೊಂಡಿದೆ.
“ವಿಧಾನ ಪರಿಷತ್ತು ಮತ್ತು ವಿಧಾನಸಭೆಯ ಸದಸ್ಯರನೇಕರು, ಗಾಳಿ ಬಂದಾಗ ತೂರಿಕೋ ಎನ್ನುವ ರೀತಿಯಲ್ಲಿ ಹಣ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‍ನಲ್ಲಿ ತಲೆದೋರಿರುವ ಗುಂಪುಗಾರಿಕೆ ಮತ್ತು ಮಂತ್ರಿಗಳ ದೌರ್ಬಲ್ಯವನ್ನು ಕಂಡ ಜನರಲ್ಲಿ ಒಂದು ಬಗೆಯ ದಂಗೆಯ ಮನೋಭಾವ ಮೂಡುತ್ತಿದೆ. ಜನರು ಬ್ರಿಟಿಷ್ ಸರ್ಕಾರವೇ ವಾಸಿಯಾಗಿತ್ತು ಎನ್ನುತ್ತಿದ್ದಾರಲ್ಲದೆ, ಕಾಂಗ್ರೆಸ್ಸನ್ನು ಹಳಿಯುತ್ತಿದ್ದಾರೆ” ಎಂದರು. ಗಾಂಧೀಜಿ. ಸರಿಯಾಗಿ ಗಮನಿಸಿ. ಇದು ಸ್ವಾತಂತ್ರ್ಯ ಬಂದ ಕೆಲವೇ ದಿನಗಳ ಅನಂತರ ಗಾಂಧೀಜಿಯವರು ಹೇಳಿದ ಮಾತುಗಳು. ಡಿಸೆಂಬರ್ 1947ರಲ್ಲಿ ಮತ್ತೆ ಗಾಂಧೀಜಿ ಹೇಳಿದರು “ಕಾಂಗ್ರೆಸ್‍ನಂತಹ ಬೃಹತ್ ಸಂಸ್ಥೆಗಳಿಂದ ಭ್ರಷ್ಟಾಚಾರ, ಅಸತ್ಯ ಮುಂತಾದ ಪೀಡೆಗಳನ್ನು ಉಚ್ಚಾಟಿಸದೇ ಹೋದರೆ, ನಾಲ್ಕೂ ಕಡೆಗಳಿಂದ ಸ್ವಾರ್ಥಿಗಳು ಕಾಂಗ್ರೆಸ್ಸನ್ನು ಮುತ್ತಿ, ಈ ಸಂಸ್ಥೆಯು ಧೂಳೀಪಟವಾಗುತ್ತದೆ ಮತ್ತು ಹಾಗಾದಾಗ ನಾನು ಒಂದು ತೊಟ್ಟು ಕಣ್ಣೀರನ್ನೂ ಸುರಿಸುವುದಿಲ್ಲ. ದೊಡ್ಡ ರೋಗದಿಂದ ಬಳಲುತ್ತಿರುವ ರೋಗಿಯನ್ನು ಗುಣಮಾಡಲು ಸಾಧ್ಯವಿಲ್ಲದೆ ಹೋದರೆ, ರೋಗಿ ಸಾಯುವುದು ಮೇಲು” (ಪುಟ 721).
ಈ ಪರಿಪ್ರೇಕ್ಷ್ಯದಲ್ಲಿ, ತುರ್ತುಪರಿಸ್ಥಿತಿಯ ಹೇರಿಕೆಯ (25/6/1975) ವಾರ್ಷಿಕೋತ್ಸವದ ಕಹಿನೆನಪುಗಳ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯದ ಪರಿಕಲ್ಪನೆಯ ಮೂಲದ್ರವ್ಯವು ನಮ್ಮಲ್ಲಿ ಅರ್ಥಪೂರ್ಣ ವಿಚಾರಗಳನ್ನು ಹೊಮ್ಮಿಸಲಿ.
ಇತಿಹಾಸ, ಸ್ವಾತಂತ್ರ್ಯ ಹೋರಾಟಗಳ ಸರಿಯಾದ ವಿಮರ್ಶಾತ್ಮಕ ವಿಶ್ಲೇಷಣೆಗಳು ನಮ್ಮ ಮೇಲೆ ಬೆಳಕು ಚೆಲ್ಲಲಿ, ನಮ್ಮನ್ನು ಕವಿದಿರುವ ಕತ್ತಲನ್ನು ಮತ್ತೊಮ್ಮೆ ನೀಗಲಿ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ʼಹಿಂದೂಗಳೇ ಕೊಲೆಗಾರರುʼ ಎಂಬ ಭಾರತ ವಿರೋಧಿ ಬಹುಸಂಖ್ಯಾತ-ವಾದ