Site icon Vistara News

ನನ್ನ ದೇಶ ನನ್ನ ದನಿ | ಪ್ರಾಚೀನ ಭಾರತದಲ್ಲಿ ಬೇಹುಗಾರಿಕೆಯ ಹೆಜ್ಜೆಗುರುತುಗಳು

espionage

ಈ ಅಂಕಣವನ್ನು ಇಲ್ಲಿ ಕೇಳಬಹುದು:

https://vistaranews.com/wp-content/uploads/2022/11/ANM-VISTARANEWS-ON-Ancient-Espionage-15th-Nov-2022.mp3

ಮೆಕಾಲೆವಾದಿ ಶಿಕ್ಷಣದಿಂದಾಗಿ, ಬ್ರಿಟಿಷರ ಮತ್ತು ಅವರ “ಪ್ರೀತಿಪಾತ್ರ ಉತ್ತರಾಧಿಕಾರಿಗಳ” ದಿವ್ಯಕೊಡುಗೆಯಿಂದಾಗಿ ನಮ್ಮ ಗ್ರಹಿಕೆಗಳಿಗೇ ಪಾರ್ಶ್ವವಾಯು ಬಡಿದಿದೆ. IB, RAW, ISIS, CIA, FBI, KGB, MI-6, MOSSAD ಮುಂತಾದ ಸಂಘಟನೆಗಳು ರೂಪುಗೊಳ್ಳುವಲ್ಲಿ ಬ್ರಿಟಿಷರ ಪ್ರತ್ಯಕ್ಷ ಪರೋಕ್ಷ ವಾರಸಿಕೆ ಇರುವುದರಿಂದ, ಸಹಸ್ರಾರು ವರ್ಷಗಳ ಈ ಎಲ್ಲ ಪರಿಕಲ್ಪನೆಗಳೂ ಅವರದ್ದೇ ಕೊಡುಗೆ ಎನ್ನುವ ಮಾನಸಿಕತೆ ನಮ್ಮದು. ಇದೆಲ್ಲಾ ಕಳೆದ ಒಂದೆರಡು ಶತಮಾನಗಳ ಕಥೆಯಾಯಿತು. ಬೇಹುಗಾರಿಕೆಯು ನಮ್ಮ ಹತ್ತಾರು ಸಹಸ್ರ ವರ್ಷಗಳ ಸಂಸ್ಕೃತಿ, ಶ್ರೀಮಂತ ಪರಂಪರೆ, ಸಾಮ್ರಾಜ್ಯಾಡಳಿತಗಳ ಅವಿಭಾಜ್ಯ ಅಂಗವಾಗಿತ್ತು, ಎನ್ನುವುದನ್ನು ಮರೆಯದಿರೋಣ.

ಇಪ್ಪತ್ತೈದು ಶತಮಾನಗಳ ಪೂರ್ವದ ಆಚಾರ್ಯ ಚಾಣಕ್ಯರ “ಅರ್ಥಶಾಸ್ತ್ರ”ವು ಜಗತ್-ಪ್ರಸಿದ್ಧ ಮಹತ್ಕೃತಿ. ಇದು ಕೇವಲ ಎಕನಾಮಿಕ್ಸ್ ಅಲ್ಲ. ಇಲ್ಲಿ ಆಡಳಿತ, ಬೇಹುಗಾರಿಕೆ, ತೆರಿಗೆ ನಿಯಮಾವಳಿ, ಕಾನೂನು, ಸಮರ-ನಿರ್ವಹಣೆ, ವಿಪತ್ತು-ನಿರ್ವಹಣೆ ಇತ್ಯಾದಿ ಸಮಸ್ತವೂ ಇದೆ. ರಾಮಾಯಣ, ಮಹಾಭಾರತ ಮಹಾಕಾವ್ಯಗಳ ಕಾಲದ ಆಡಳಿತ ವ್ಯವಸ್ಥೆಗಳ ಅಂದರೆ ಅಕ್ಷರಶಃ ಆಚಾರ್ಯ ಚಾಣಕ್ಯರಿಗೂ ಹಿಂದಿನ ಅನೇಕ ಸಾವಿರ ವರ್ಷಗಳ ಆಡಳಿತ-ತತ್ತ್ವಗಳ ಕ್ರೋಡೀಕರಣವೂ ಇಲ್ಲಿದೆ. ಬಹಳ ಮುಖ್ಯವಾದುದೆಂದರೆ, ಆಚಾರ್ಯರು ಇಲ್ಲಿ ತಮ್ಮ ಬಹುಮೂಲ್ಯ ಉಪಯುಕ್ತ ಸಲಹೆಗಳನ್ನೂ ನೀಡಿದ್ದಾರೆ. ಇದರಿಂದ ಈ “ಅರ್ಥಶಾಸ್ತ್ರ”ದ ಬಹು-ಆಯಾಮದ ಮೌಲ್ಯವರ್ಧನೆಯಾಗಿದೆ. ಇಲ್ಲಿ ಪ್ರಭುತ್ವವನ್ನು- ಸಾಮ್ರಾಜ್ಯದ ಸಮಸ್ತ ಪ್ರಜೆಗಳನ್ನು ಸಂರಕ್ಷಿಸುವ ಸಕಾರಾತ್ಮಕ ಚಿಂತನೆಗಳಿವೆ. ವಿದೇಶೀ ಆಕ್ರಮಣಕಾರಿಗಳನ್ನು ಯಶಸ್ವಿಯಾಗಿ ನಿಗ್ರಹಿಸುವ ಮೂಲತತ್ತ್ವಗಳಿವೆಯಾದರೂ, ಅನ್ಯ ದೇಶಗಳ ಸಂಸ್ಕೃತಿನಾಶದ ನಕಾರಾತ್ಮಕ ಪರಿಕಲ್ಪನೆಗಳಿಲ್ಲ.

ಮಂತ್ರಿಗಳ ಆಯ್ಕೆ ಮತ್ತು ನೇಮಕ, ಮಂತ್ರಿಮಂಡಲವನ್ನು ರೂಪಿಸುವುದು, ರಾಜನು ತನ್ನ ಮಕ್ಕಳನ್ನು ಪರೀಕ್ಷಿಸುವ ವಿಧಾನ, ರಾಜನು ಅನಿರೀಕ್ಷಿತವಾಗಿ ಮೃತನಾದ ಸಂದರ್ಭದಲ್ಲಿ ಮಂತ್ರಿಯ ಕಾರ್ಯಭಾರ, ರಾಜನ ದಂಡನಾಧಿಕಾರದ ಪ್ರಯೋಗ, ವಿವಿಧ ಬಗೆಯ ಕಾನೂನುಗಳು, ಅಂತರ-ರಾಜ್ಯ ಸಂಬಂಧಗಳು, ಶತ್ರುಗಳನ್ನು ಎದುರಿಸಲು ಅಗತ್ಯವಾದ ಆಕ್ರಮಣ – ಪ್ರತ್ಯಾಕ್ರಮಣ – ಆತ್ಮರಕ್ಷಣೆಗಾಗಿ ಯುದ್ಧಗಳು, ಇತ್ಯಾದಿ ಅನೇಕ ವಿಷಯಗಳನ್ನು ಆಚಾರ್ಯರು ಪರಿಶೀಲಿಸಿರುವುದು ವಿಸ್ಮಯಗೊಳಿಸುತ್ತದೆ. ನಮ್ಮ ದೇಶದ ನಿಜ-ಇತಿಹಾಸದ ಪರಿಚಯವೇ ಇಲ್ಲದಿದ್ದರೆ, ಇಂತಹ ಗ್ರಂಥಗಳ- ಕಾವ್ಯಗಳ- ಶಾಸ್ತ್ರಗ್ರಂಥಗಳ ಕನಿಷ್ಠ ಅವಲೋಕನವೂ ಇಲ್ಲದಿದ್ದರೆ “ಬ್ರಿಟಿಷರೇ ನಮ್ಮ ಪಾಲಿನ ಬೆಳಕು, ಈ ವಸಾಹತುಶಾಹಿ ಕುತಂತ್ರಿಗಳೇ ನಮ್ಮ ದೀವಟಿಗೆಗಳು” ಎನ್ನುವ ಮೂರ್ಖತನ ನಮ್ಮನ್ನು ಆವರಿಸುತ್ತದೆ.

ಆಚಾರ್ಯರ ರಾಜ್ಯಾಡಳಿತ- ಕಾರ್ಯವಿಧಾನವು ಮುಖ್ಯವಾಗಿ ಸಮರ್ಪಕವಾದ ಗೂಢಚಾರ ವ್ಯವಸ್ಥೆಯ ಮೇಲೆ ನಿಂತಿದೆ. ಈ “ಅರ್ಥಶಾಸ್ತ್ರ” ಗ್ರಂಥದಲ್ಲಿ ಬೇಹುಗಾರರ ಹಲವು ಪ್ರವರ್ಗಗಳನ್ನು ನೋಡುತ್ತೇವೆ. ಅದರಲ್ಲಿ ಎರಡು ಮುಖ್ಯವರ್ಗಗಳೆಂದರೆ, “ಸಂಸ್ಥೆ”ಗಳು ಮತ್ತು “ಸಂಚಾರಿ ಘಟಕ”ಗಳು. “ಸಂಸ್ಥೆ”ಗಳ ಕಾರ್ಯಭಾರ ಬಹುಮಟ್ಟಿಗೆ ಸ್ಥಿರ. ಹೆಸರೇ ಸೂಚಿಸುವಂತೆ, ಸಂಚಾರಿ ಘಟಕಗಳು ಚಲನಶೀಲ. ತಮ್ಮ ಬೇಹುಗಾರಿಕೆಯನ್ನು ನಿರ್ವಹಿಸುವುದಕ್ಕೆ ಈ ಘಟಕಗಳು ಶಿಷ್ಯರ, ಉಪಶಿಷ್ಯರ, ಅವರ ಕೈಕೆಳಗಿನ ಸಹಾಯಕರ ಒಂದು ಜಾಲವನ್ನೇ ಹೊಂದಿರಬೇಕು. ಉನ್ನತ ಮಟ್ಟದ ಆಡಳಿತಾಧಿಕಾರಿಗಳೂ – ಮಂತ್ರಿಗಳೂ ಈ ಘಟಕಗಳ ಕಣ್ಗಾವಲಿನಲ್ಲಿ (surveillance) ಇರುತ್ತಿದ್ದರು. ಇಂದಿನ ಆಧುನಿಕ ವೈಜ್ಞಾನಿಕ ಸಾಧನಗಳಿಲ್ಲದ ಆ ಕಾಲದಲ್ಲಿ ಇಂತಹ ಘಟಕಗಳ ನಿರ್ವಹಣೆಯಲ್ಲಿ ಮಾನವ ಸಂಪನ್ಮೂಲದ ಪಾತ್ರವೇ ಪ್ರಮುಖ. ಬೇಹುಗಾರರಲ್ಲೆಲ್ಲ ಅತ್ಯಂತ ಸ್ವಾರಸ್ಯಕರ ವ್ಯಕ್ತಿಯೆಂದರೆ “ಉಭಯ ವೇತನ” ಎಂದು ಕರೆಯಲ್ಪಡುತ್ತಿದ್ದವನು. ರಾಜನೇ ಸ್ವಯಂ ಅವನನ್ನು ಶತ್ರುರಾಜನ ಬಳಿ ಸಂಬಳಕ್ಕೆ ನಿಲ್ಲುವಂತೆ ಬಿಡುತ್ತಿದ್ದನು. ಅಲ್ಲಿಯೇ ಇದ್ದುಕೊಂಡು ಆ ರಾಜನನ್ನು – ಆ ರಾಜ್ಯವನ್ನು ಕುರಿತು ಬೇಹನ್ನು ಸಂಗ್ರಹಿಸಿ ಕಳುಹಿಸಿಕೊಡುವುದು ಅವನ ಕೆಲಸ. ಬೇಹುಗಾರಿಕೆಯನ್ನು ಕುರಿತ ಈ ಪರಿಕಲ್ಪನೆಗಿಂತಲೂ ಮುಂದೆ ಹೋಗಿ ಆಚಾರ್ಯ ಚಾಣಕ್ಯರು, ರಾಜನು, ತನ್ನ ಮತ್ತು ಶತ್ರುವಿನ ಪ್ರಜೆಗಳಲ್ಲಿ ಅತೃಪ್ತರಾದವರ, ಸ್ವಾರ್ಥಿಗಳ, ದುರಾಸೆಬುರುಕರ, ಗರ್ವಿಷ್ಠರ, ಗಾಬರಿಗೊಂಡವರ ಮತ್ತು ಉದ್ರಿಕ್ತರಾದವರ ವಿಷಯವಾಗಿ ಹೇಗೆ ನಡೆದುಕೊಳ್ಳಬೇಕೆಂಬ ಮತ್ತು ತನ್ನ ಕುಟುಂಬಕ್ಕೆ ಸೇರಿದ ರಾಜಕುಮಾರರ ಬಗೆಗೂ ಹೇಗೆ ವರ್ತಿಸಬೇಕೆಂಬ ಅಂಶಗಳನ್ನೂ ಚರ್ಚಿಸುತ್ತಾರೆ, ಮೌಲಿಕ ಸಲಹೆಗಳನ್ನೂ ನೀಡುತ್ತಾರೆ.

ಮುಂದುವರಿದಂತೆ, ಆಚಾರ್ಯರ ಕಾರ್ಯತಂತ್ರಗಳು ಇನ್ನಷ್ಟು ವಿಸ್ಮಯಗೊಳಿಸುತ್ತವೆ. ಪ್ರಭುನಿಂದಕರನ್ನು ಗೂಢಚಾರ ಚಟುವಟಿಕೆಗಳ ಮೂಲಕ ಹೇಗೆ ಸುಮ್ಮನಾಗಿಸಬೇಕೆಂಬುದನ್ನು ಹೇಳುತ್ತಾ, ಸಾರ್ವಜನಿಕ ಚರ್ಚೆಗಳಲ್ಲಿ ಬೇಹುಗಾರರು ಜನರಿಗೆ ಹೀಗೆ ಹೇಳಬೇಕು ಎಂದು ಆಚಾರ್ಯರು ವಿಧಿಸುತ್ತಾರೆ:

ಇದನ್ನೂ ಓದಿ | ನನ್ನ ದೇಶ ನನ್ನ ದನಿ | ಕನ್ನಡ ಸಂಸ್ಕೃತಿಯನ್ನು ಉಳಿಸಿದ- ಬೆಳೆಸಿದ ಮೈಸೂರು ಒಡೆಯರ್ ರಾಜವಂಶ

“ಹಿಂದೆ ಅರಾಜಕತೆಯಿಂದ ನರಳುತ್ತಿದ್ದ ಜನರು ಸೂರ್ಯನ ಮಗನಾದ ಮನುವನ್ನು ತಮ್ಮ ಮೊದಲನೆಯ ರಾಜನನ್ನಾಗಿ ಆರಿಸಿದರು; ಹೇಗೆ ಮನುವು ಅವರು ಬೆಳೆದ ಧಾನ್ಯಗಳ ಆರನೆಯ ಒಂದು ಭಾಗವನ್ನೋ, ಸಿದ್ಧವಸ್ತುಗಳ – ಉತ್ಪನ್ನಗಳ ಹತ್ತನೆಯ ಒಂದು ಪಾಲನ್ನೋ ಅಥವಾ ಹಣವನ್ನೋ ಪಡೆದು, ಅವರ ಜೀವನ ಹಾಗೂ ಆಸ್ತಿಪಾಸ್ತಿಗಳ ರಕ್ಷಣೆಯ ಹೊಣೆ ಹೊತ್ತನು. ಹೇಗೆ ವಿರಕ್ತರು ಕೂಡ ತಾವು ಸ್ವಲ್ಪ ಸ್ವಲ್ಪವಾಗಿ ಸಂಗ್ರಹಿಸಿದ ಧಾನ್ಯದಲ್ಲೂ ಆರನೆಯ ಒಂದು ಪಾಲನ್ನು ರಾಜನಿಗೇ ಒಪ್ಪಿಸುತ್ತಿದ್ದರು; ಈ ರಾಜನೇ ಇಂದ್ರದೇವನಂತೆ ಬಹುಮಾನಗಳ ವಿತರಣೆ ಮಾಡುತ್ತಾನೆ ಮತ್ತು ಯಮದೇವನಂತೆ ದಂಡನೆಗಳನ್ನು ವಿಧಿಸುತ್ತಾನೆ; ಆದುದರಿಂದ ರಾಜನನ್ನು ಎಂದಿಗೂ ತುಚ್ಛವಾಗಿ ಕಾಣಬಾರದು” ಎಂದು ಜನರಲ್ಲಿ ಈ ಬೇಹುಗಾರರು ಹೇಗೆಲ್ಲಾ ಅಭಿಪ್ರಾಯ ಮೂಡಿಸಬೇಕು, ಪ್ರಭುನಿಂದೆಯನ್ನು ನಿಗ್ರಹಿಸಬೇಕು, ಎಂದು ವಿವರಿಸಿದ್ದಾರೆ.

ನಮ್ಮ ಶ್ರೀಮಂತ ಭಾರತೀಯ ಪರಂಪರೆ, ಸಂಸ್ಕೃತಿಗಳ ಬಗೆಗೆ ಓದದೇ, ತಿಳಿದುಕೊಳ್ಳದೇ ಮಾತನಾಡುವವರು “ಅರ್ಥಶಾಸ್ತ್ರ”ದಂತಹ ಗ್ರಂಥಗಳನ್ನು ಪರಾಮರ್ಶಿಸಬೇಕು. ಏಕೆಂದರೆ, ಕಳೆದ ಒಂದೆರಡು ಸಾವಿರ ವರ್ಷಗಳಲ್ಲಿ ಬೇಹುಗಾರಿಕೆಯಂತಹ ಮಹತ್ತ್ವದ ಆಯಾಮವನ್ನು ನಿಧಾನವಾಗಿ ಹಂತಹಂತವಾಗಿ ಮರೆತುದರಿಂದಲೇ ನಾವು ಗುಲಾಮರಾಗಬೇಕಾಯಿತು.

ಶಿವಾಜಿ ಮಹಾರಾಜರ ಜಾಗರೂಕತೆ, ಆಡಳಿತ ನೀತಿ, ರಾಜಶಾಸನಗಳು ನಿಬ್ಬೆರಗುಗೊಳಿಸುತ್ತವೆ. ನೌಕರರ- ಸೈನಿಕರ ನೇಮಕಾತಿಯ ವಿಷಯದಲ್ಲಿಯೂ ಅವರು ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದರು: “ಹೊಸ ನೌಕರನನ್ನು ನೇಮಿಸಿಕೊಳ್ಳುವಾಗ ಅವನ ಪರಿವಾರದವರನ್ನು ಗಮನಿಸಿರಬೇಕು. ಅವನ ವಾಸಸ್ಥಳ ತಿಳಿದಿರಬೇಕು. ಈ ಮೊದಲು ಎಲ್ಲಿ ಕೆಲಸ ಮಾಡುತ್ತಿದ್ದ, ಅವನ ಬಂಧುಗಳು ಯಾರು ಯಾರಿದ್ದಾರೆ, ಎಂಬುದನ್ನು ಪರಿಶೀಲಿಸಬೇಕು. ನೌಕರನು ಮೋಸಗಾರ, ಕೊಲೆಪಾತಕಿ, ಕುಡುಕ, ಮಾದಕ ವ್ಯಸನಿ, ಅನೈತಿಕ ವ್ಯವಹಾರ ಇಟ್ಟುಕೊಂಡವನು, ಶತ್ರುಶಕ್ತಿಗಳ ಗುಪ್ತಚರ ಆಗಿರಬಾರದು. ಒಳ್ಳೆಯ ನಡತೆಯ ಸಾಹಸಿಗಳನ್ನು ಮಾತ್ರವೇ ಸೇವೆಗೆ ನೇಮಿಸಿಕೊಳ್ಳಬೇಕು. ಪರೀಕ್ಷೆ, ಪರಿಶೀಲನೆಗಳಿಲ್ಲದೆ ಸೇವಕನನ್ನು ನೇಮಿಸಿಕೊಳ್ಳಬಾರದು, ಸೈನಿಕನನ್ನಂತೂ ನೇಮಿಸಿಕೊಳ್ಳಲೇಬಾರದು” ಎಂಬಂತಹ ಅವರ ನಿಯಮಾವಳಿಗಳು ಅಚ್ಚರಿ ತರಿಸುತ್ತವೆ. ಭಾರತ-ನಾಶದ ದುರುದ್ದೇಶದ ಮುಸ್ಲಿಂ ಓಲೈಕೆಯ ಪಕ್ಷದ ಪ್ರಧಾನಿಯೊಬ್ಬರು ಸೇನಾ ನೇಮಕಾತಿಯಲ್ಲಿಯೂ ಮುಸ್ಲಿಮರಿಗೆ (ಸರಿಯಾಗಿ ಗಮನಿಸಬೇಕು, ಎಲ್ಲ ಅಲ್ಪಸಂಖ್ಯಾತರಿಗೆ ಅಲ್ಲ, ಕೇವಲ ಮುಸ್ಲಿಮರಿಗೆ) ಮೀಸಲಾತಿ ಬೇಕು ಎಂದು ರೋದಿಸಿದರು. ಮಹಾರಾಣಾ ಪ್ರತಾಪರಿದ್ದಿದ್ದರೆ, ಶಿವಾಜಿ ಮಹಾರಾಜರಿದ್ದಿದ್ದರೆ, ಇಂತಹವರಿಗೆ ಸಾರ್ವಜನಿಕವಾಗಿ ಛಡಿ ಏಟು ಬೀಳುತ್ತಿತ್ತು.

ಸಂತರ ವೇಷದಲ್ಲಿ ಸೂಫಿಗಳು ನಮ್ಮ ದೇಶಕ್ಕೆ ಬಂದು ಇಲ್ಲಿನ ಅರಮನೆಗಳ ಬಗೆಗೆ, ದೇವಾಲಯಗಳ ಬಗೆಗೆ, ಅವುಗಳ ವಿನ್ಯಾಸ – ರಹಸ್ಯಮಾರ್ಗಗಳ ಬಗೆಗೆ ಇಸ್ಲಾಮೀ ಆಕ್ರಮಣಕಾರಿ ಜಿಹಾದಿಗಳಿಗೆ ಮಾಹಿತಿ ಕೊಡುತ್ತಿದ್ದರು. ವಿಶಾಲ ಹೃದಯದ ನಮ್ಮ ಗುರುಗಳು, ಸಂತರು, ಸಾಧುಗಳು ಮುಗ್ಧತೆಯಿಂದ ತಮ್ಮ ಶಿಷ್ಯರನ್ನಾಗಿ ಈ ಸೂಫಿಗಳನ್ನು ಸ್ವೀಕರಿಸಿ ತಾವೂ ನಾಶವಾದರು, ತಮ್ಮ ದೇವಾಲಯಗಳ ಧ್ವಂಸಕ್ಕೂ ಪರೋಕ್ಷವಾಗಿ ಕಾರಣರಾಗಿಹೋದರು. ಆಕ್ರಮಣಕಾರಿಗಳಿಗೆ ನಮ್ಮ ದೇಶದ ಮಾರ್ಗ-ಪಥಗಳ ವಿವರಗಳನ್ನು ಕೊಟ್ಟು ಯುದ್ಧೋತ್ತರವಾಗಿ, ಇಲ್ಲಿ ಸರ್ವನಾಶವಾದ ಅನಂತರ, ಅಂತಹ ದೇವಾಲಯ- ಅರಮನೆಗಳನ್ನು ತಮ್ಮ ದರ್ಗಾಗಳನ್ನಾಗಿ ಮಾಡಿಕೊಂಡು ಈ ಸೂಫಿಗಳು ಅಲ್ಲಿಯೇ ತಳವೂರಿದರು. ಕಮ್ಯೂನಿಸ್ಟರು – ಮೆಕಾಲೆವಾದಿಗಳು ತಾವು ಬರೆದ ಪಠ್ಯಪುಸ್ತಕಗಳಲ್ಲಿ, ಇಂತಹ ಸೂಫಿಗಳನ್ನು ಸಂತರೆಂದೇ ಬಣ್ಣಿಸಿ ಬಣ್ಣಿಸಿ ವೈಭವೀಕರಿಸಿ ನಮ್ಮ ಅಜ್ಞಾನಕ್ಕೆ ಕಾರಣರಾಗಿದ್ದಾರೆ. ಆಚಾರ್ಯ ಚಾಣಕ್ಯರ ಸೂತ್ರಗಳನ್ನು ಮರೆತ ನಾವು, ವಿಧ್ವಂಸಕರನ್ನೇ ಸಂತರೆಂದು ನಂಬಿ ಬಹಳ ದೊಡ್ಡ ಬೆಲೆ ತೆರಬೇಕಾಯಿತು.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ | ದ್ರಷ್ಟಾರ, ಚಿಂತಕ ಸೀತಾರಾಮ ಗೋಯಲ್

ವಿವಿಧ ಕ್ಷೇತ್ರಗಳಲ್ಲಿರುವ ಭಾರತ-ಶತ್ರುಗಳ ಬಗೆಗೆ ನಮ್ಮ ಜನ, ನಮ್ಮ ಸರ್ಕಾರಗಳು ಸೂಕ್ತ ಗಮನ ನೀಡಬೇಕು. ನಮ್ಮ ತ್ರಿ-ಸೇನಾ ಮುಖ್ಯಸ್ಥರಾಗಿದ್ದ ಜನರಲ್ ರಾವತ್ ಅವರು, ಕೆಲವು ವರ್ಷಗಳ ಹಿಂದೆ, ಭಾರತವಿಂದು ಎರಡೂವರೆ ಸಮರಾಂಗಣಗಳಲ್ಲಿ (Two and Half Fronts) ಯುದ್ಧ ಮಾಡಬೇಕಾಗಿದೆ, ಎಂದರು. ಚೀನಾ, ಪಾಕಿಸ್ತಾನಗಳಲ್ಲದೇ ಒಳಗಿನ ಶತ್ರುಗಳ ಬಗೆಗೂ ದೇಶವು ಎಚ್ಚರ ವಹಿಸಬೇಕು, ಎಂಬ ಒಳಾರ್ಥದ ಅವರ ಮಾತಿಗೆ, ದೇಶದ್ರೋಹಿಗಳೆಲ್ಲರೂ ಅವರ ಮೇಲೆ ಮುಗಿಬಿದ್ದಿದ್ದರು. ವಿದೇಶೀ ಬೇಹುಗಾರಿಕೆಯ ಮಾಫಿಯಾ-ಜಾಲದ ಬಗೆಗೆ ಈಗಲೂ ಸರಿಯಾದ ಕ್ರಮ ಕೈಗೊಳ್ಳದಿದ್ದರೆ, ನಮಗೆಲ್ಲಾ ಸರ್ವನಾಶವೇ ಕಾದಿದೆ.

(ಲೇಖಕರು ಹಿರಿಯ ಪತ್ರಕರ್ತರು, ಅಂಕಣಕಾರರು, ವಾಯ್ಸ್ ಆಫ್‌ ಇಂಡಿಯಾ ಸರಣಿ ಸಂಪಾದಕರು)

Exit mobile version