Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಅಂಬೇಡ್ಕರ್, ಮುಸ್ಲಿಂ ಲೀಗ್ ಒತ್ತಾಯಿಸಿದರೂ ಜನಸಂಖ್ಯಾ ವಿನಿಮಯ ಆಗಲಿಲ್ಲ!

nanna desha nanna dani column ambedkar jinnah

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2024/05/WhatsApp-Audio-2024-05-20-at-7.21.11-AM.mp3

ನನ್ನ ದೇಶ ನನ್ನ ದನಿ ಅಂಕಣ: ಪಾಕಿಸ್ತಾನಕ್ಕೆ (pakistan) ಸಂಬಂಧಿಸಿದಂತೆ, 1940ರಷ್ಟು ಹಿಂದೆಯೇ, ಡಾ।। ಅಂಬೇಡ್ಕರ್ (Dr Ambedkar) ಅವರು ಜನಸಂಖ್ಯಾ ವಿನಿಮಯವನ್ನು ಪ್ರಸ್ತಾಪಿಸಿದ್ದರು. ಕ್ವಾಯಿಡ್-ಏ-ಆಜಂ (ಮಹಾನ್ ನಾಯಕ) ಎಂದೇ ಹೆಸರಾದ ಮೊಹಮ್ಮದ್ ಅಲಿ ಜಿನ್ನಾ (Mohammed Ali Jinnah) ಪಾಕಿಸ್ತಾನದ ನಿರ್ಮಾತೃ. ಪಾಕಿಸ್ತಾನದ ನಿರ್ಮಾಣದ ಅನಂತರ ಅವರು ಅಲ್ಲಿನ ಗವರ್ನರ್ ಜನರಲ್ ಆದರು. ಆ ಪದವಿ ಎಂದರೆ “ಸಶಸ್ತ್ರ ಪಡೆಗಳ ಮಹಾ ದಂಡನಾಯಕ” ಎಂದರ್ಥ. ಅದು ಬಹಳ ಬಹಳ ಮಹತ್ತ್ವದ್ದು ಎಂಬುದು ಜಿನ್ನಾಗೆ ಗೊತ್ತಿತ್ತು. ಭಾರತದ “ನಮ್ಮ” ನಾಯಕರು, ಯಾವುದಕ್ಕೂ ಹೇಸದ ನೀಚ – ಕುತಂತ್ರಿ ಮೌಂಟ್ ಬ್ಯಾಟನ್ ನನ್ನೇ ಇಲ್ಲಿನ ಗವರ್ನರ್ ಜನರಲ್ ಆಗಿ ಉಳಿಸಿಕೊಂಡುದರಿಂದ ಬಹಳ ಬಹಳ ತೊಂದರೆಯಾಯಿತು. ನವನಿರ್ಮಿತ ಇಸ್ಲಾಮಿಕ್ ದೇಶ ಪಾಕಿಸ್ತಾನದ ಕಡೆಯಿಂದ ಕಾಶ್ಮೀರವನ್ನು (Kashmir) ಆಕ್ರಮಿಸಿಕೊಳ್ಳಲು, ವಶಪಡಿಸಿಕೊಳ್ಳಲು ಪಾಕ್ ಸೇನೆ ನುಗ್ಗಿ ಬರುತ್ತಿದ್ದರೂ ನಮ್ಮ ಸೇನಾ ಪ್ರತ್ಯಾಕ್ರಮಣಕ್ಕೆ ಮೌಂಟ್ ಬ್ಯಾಟನ್ ಅನುಮತಿ ನೀಡಲೇ ಇಲ್ಲ. ಅವನು ಮೂಲಭೂತವಾಗಿ ಅಂತಹ ನೀಚನೇ, ಧೂರ್ತನೇ. ಹಾಗಾಗಿ ಕಾಶ್ಮೀರದ ಮೂರನೆಯ ಒಂದು ಭಾಗ ಇಂದಿಗೂ ಪಾಕಿಸ್ತಾನದಲ್ಲಿಯೇ ಇದೆ. ನಮ್ಮ “ಮಹಾನ್” ನಾಯಕರು ಮಾಡಿದ ಇಂತಹ ಅವಿವೇಕಗಳು ಒಂದು, ಎರಡು ಅಲ್ಲ.

ಜಿನ್ನಾ ಪಾಕಿಸ್ತಾನದ “ಫಾದರ್ ಆಫ್ ದ ನೇಷನ್” ಸಹ ಆದರು. ಅವರ ಚಿತ್ರವೇ ಪಾಕಿಸ್ತಾನದ ಕರೆನ್ಸಿ ನೋಟುಗಳ ಮೇಲೆ ಇಂದಿಗೂ ರಾರಾಜಿಸುತ್ತಿದೆ. ಪಾಕ್ ನಿರ್ಮಾಣಕ್ಕೆ ಮೊದಲೇ, ಅವಿಭಜಿತ ಭಾರತದಲ್ಲಿಯೇ ಜಿನ್ನಾ 1941ರಲ್ಲಿ “ದ ಡಾನ್” ಇಂಗ್ಲಿಷ್ ಪತ್ರಿಕೆಯನ್ನು ಹುಟ್ಟುಹಾಕಿದರು. “ದ ಡಾನ್” ಮುಸ್ಲಿಂ ಲೀಗಿನ ಮುಖವಾಣಿಯಾಗಿ ಬೆಳೆಯಿತು. ಅಭಿಲೇಖಾಗಾರಗಳಲ್ಲಿ (Archives) ದೊರೆಯುವ ಈ ಪತ್ರಿಕೆಯ ಸಂಚಿಕೆಗಳು, ಪ್ರಚಲಿತ ಸುಳ್ಳು ಇತಿಹಾಸವನ್ನೇ ಓದುತ್ತ ಬಂದವರಿಗೆ ಆಘಾತವನ್ನೇ ಉಂಟುಮಾಡುತ್ತವೆ.

1946-47ರ ಅತ್ಯಂತ ಭಯಾನಕ ಕಾಲಘಟ್ಟದಲ್ಲಿ ಜಿನ್ನಾ ಮತ್ತು ಮುಸ್ಲಿಂ ಲೀಗ್ ಕಾರಣದಿಂದ, 20ಲಕ್ಷಕ್ಕೂ ಹೆಚ್ಚು ಜನರ ಹತ್ಯೆ, ಆ ಕಾಲಕ್ಕೆ ಅತಿ ದೊಡ್ಡ ಸಂಖ್ಯೆ ಎನಿಸುವ ಎರಡು ಕೋಟಿ ಜನರು ಮನೆಮಠ ಆಸ್ತಿಪಾಸ್ತಿ ಕಳೆದುಕೊಂಡು ನಿರ್ಗತಿಕರಾಗಿ ವಲಸೆ ಹೋಗಿದ್ದು, ಅಕ್ಷರಶಃ ಅನೇಕ ಲಕ್ಷ ಹೆಣ್ಣುಮಕ್ಕಳ ಮೇಲೆ ಬರ್ಬರ ಅತ್ಯಾಚಾರ ಆದುದು ಕಟುವಾಸ್ತವ. ವಿಭಜನೆಯ ಮಹಾಕ್ಷೋಭೆಯನ್ನು ನಿರ್ವಹಿಸಲು “ಬ್ರಿಟಿಷರ ಪ್ರೀತಿಪಾತ್ರ”ರಂತೂ ಸಂಪೂರ್ಣವಾಗಿ ಅಸಮರ್ಥರಾಗಿದ್ದರು ಮತ್ತು ಗಮನಿಸಿ ನೋಡಿದರೆ, ಅವರ ಎಲ್ಲ ನಿರ್ಧಾರ – ಉದ್ದೇಶಗಳೂ ಅನುಮಾನಕ್ಕೆ ಕಾರಣವಾಗುತ್ತವೆ. ಪ್ರಸ್ತುತ ಬಾಂಗ್ಲಾದೇಶಕ್ಕೆ ಸೇರಿಹೋಗಿರುವ ಇಡೀ ನೋವಾಖಾಲೀ ಪ್ರದೇಶದಲ್ಲಿ ನಡೆದ ಮುಸ್ಲಿಮರ ದೌರ್ಜನ್ಯ, ಅತ್ಯಾಚಾರ, ಜಿಜಿಯಾ ತೆರಿಗೆ ಹಾಕುವುದು, ನರಸಂಹಾರಗಳು ಬೀಭತ್ಸ ಸ್ವರೂಪದವು. ವಿಚಿತ್ರವೆಂದರೆ, ಅಲ್ಲಿನ ಹಿಂದೂಗಳು ರೋಸಿಹೋಗಿ ಪ್ರತ್ಯಾಘಾತ ನೀಡಲು ಉದ್ಯುಕ್ತರಾದಾಗ, ಮಹಾತ್ಮರು ಅಲ್ಲಿಗೇ “ಶಾಂತಿಸ್ಥಾಪನೆಗೆಂದು ಹೋಗಿ” ಹಿಂದೂಗಳ ಕೈಕಟ್ಟಿಹಾಕಿದರು. ಅಂತೆಯೇ, ಬಿಹಾರದ ಮುಸ್ಲಿಮರ ಹಿಂಸೆ ಅತ್ಯಾಚಾರಗಳು ಮಿತಿಮೀರಿ, ಅಲ್ಲಿನ ಹಿಂದೂಗಳೂ ತಿರುಗೇಟು ನೀಡಲು ಪ್ರಾರಂಭಿಸಿದಾಗ ನೆಹರೂ ಅವರು ಬಿಹಾರದ ಮೇಲೆ ಬಾಂಬ್ ಹಾಕುವುದಾಗಿ ಘರ್ಜಿಸಿದರು.

ನಿಜೇತಿಹಾಸದ ಪುಟಗಳನ್ನು ಗಮನಿಸಿ ವಿಶ್ಲೇಷಿಸಿದಾಗ, ಹಿಂದೂ ಸಮಾಜಕ್ಕೆ ತನ್ನ “ಸ್ವಯಂಘೋಷಿತ ಶತ್ರುಗಳು” ಯಾರು, “ಅಘೋಷಿತ ಶತ್ರುಗಳು” ಯಾರು ಎನ್ನುವುದು ಅಂದಿಗೂ ಗೊತ್ತಾಗಿಲ್ಲ, ಇಂದಿಗೂ ಅರ್ಥವಾಗುತ್ತಿಲ್ಲ, ಎನಿಸಿ ವಿಷಾದವೆನಿಸಿಬಿಡುತ್ತದೆ.

ಡಾ|| ಅಂಬೇಡ್ಕರ್ ಅವರು ಪ್ರಸ್ತಾಪಿಸಿದ ಜನಸಂಖ್ಯಾ ವಿನಿಮಯವನ್ನು ಕಾಂಗ್ರೆಸ್ ಒಪ್ಪಿದ್ದರೆ ಕೋಟಿಗಟ್ಟಲೆ ಹಿಂದೂಗಳ ಮಾನಹಾನಿ, ಪ್ರಾಣಹಾನಿಗಳನ್ನು ತಪ್ಪಿಸಬಹುದಿತ್ತು. ವಿಚಿತ್ರ ನೋಡಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ, ವಿಭಜನೆಯ ಮಹಾದುರಂತಕ್ಕೆ ಮೊದಲೇ ಮುಸ್ಲಿಂ ಲೀಗ್ ಸಹ, ಜನಸಂಖ್ಯಾ ವಿನಿಮಯಕ್ಕೆ (Exchange of Population) ಒತ್ತಾಯಿಸಿತ್ತು. ಅಷ್ಟೇ ಅಲ್ಲ, “ಕಾಂಗ್ರೆಸ್ ರಕ್ತಪಾತವನ್ನು ಬಯಸುತ್ತದೆ” ಎಂದು ಟೀಕಿಸಿತ್ತು. “ಡಾನ್” ಪತ್ರಿಕೆಯ 1946ರ ಡಿಸೆಂಬರ್ 3ರ ಸಂಚಿಕೆಯನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ. ಲಾಹೋರ್ ಮೂಲದ ಈ ಸುದ್ದಿ ಮತ್ತು “Exchange of Population – A most practicable solution” ಮತ್ತು “Congress prefers Bloodshed to Peaceful Settlement” ಎನ್ನುವ ಶೀರ್ಷಿಕೆಗಳು ನಮ್ಮ ದುಃಖವನ್ನು ಮಡುಗಟ್ಟಿಸಿಬಿಡುತ್ತವೆ. ಸ್ವತಃ ಮುಸ್ಲಿಂ ಲೀಗ್ ಈ ವಿನಿಮಯಕ್ಕೆ ಒತ್ತಾಯಿಸಿದರೂ, ನಮ್ಮ ನಾಯಕರು ಬೇಕೆಂದೇ ವಿನಿಮಯವನ್ನು ಅನುಷ್ಠಾನಗೊಳಿಸದೇ, ಎಂತಹ ಅಕಾರ್ಯವನ್ನೆಸಗಿಬಿಟ್ಟರಲ್ಲಾ ಎನಿಸಿಬಿಡುತ್ತದೆ.

ಇದಕ್ಕೂ ಮೊದಲೇ ಇದೇ “ಡಾನ್” ಪತ್ರಿಕೆಯ (ದಿನಾಂಕ 26ನೆಯ ನವೆಂಬರ್ 1946) ಕರಾಚಿ ಮೂಲದ ಸುದ್ದಿಯಲ್ಲಿಯೂ “Exchange of Population Question must be taken up immediately” (ಹಿಂದೂ – ಮುಸ್ಲಿಂ ಜನಸಮುದಾಯದ ವಿನಿಮಯವನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು) ಎನ್ನುವ ಒತ್ತಾಯವಿದೆ. ಆದರೂ ಗಾಂಧೀ – ನೆಹರೂ ಮತ್ತು ಕಾಂಗ್ರೆಸ್ಸಿಗರ ಹೃದಯ ಹಿಂದೂಗಳಿಗಾಗಿ ಕರಗಲೇ ಇಲ್ಲ, ಮರುಗಲೇ ಇಲ್ಲ.

ಅಂಬೇಡ್ಕರ್ ಅವರು ಪ್ರತಿಪಾದಿಸಿದ ಮತ್ತು ಸ್ವತಃ ಮುಸ್ಲಿಂ ಲೀಗ್ ಒತ್ತಾಯಿಸಿದ ಜನಸಂಖ್ಯಾ ವಿನಿಮಯ ಏಕೆ ಆಗಲಿಲ್ಲ? ವಿಭಜನೆಯನ್ನೇ ಒಪ್ಪುವುದಿಲ್ಲ, ಎನ್ನುತ್ತಿದ್ದ ಗಾಂಧೀಜಿಯವರು ಜೂನ್ 1947ರ ಕಾಂಗ್ರೆಸ್ ಸಭೆಯಲ್ಲಿ ಯಾವುದೇ ಪ್ರತಿಭಟನೆ ಪ್ರತಿರೋಧಗಳನ್ನು ಮಾಡದೆಯೇ ವಿಭಜನೆಯನ್ನು ಏಕೆ ಒಪ್ಪಿಕೊಂಡರು, ಎನ್ನುವುದನ್ನೂ ಪ್ರಶ್ನಿಸಬೇಕಾಗುತ್ತದೆ. ದೇಶವಿಭಜನೆಗೆ, ಹತ್ಯಾಕಾಂಡಕ್ಕೆ ಕಾಂಗ್ರೆಸ್ಸಿಗರು RSS – ಸಾವರ್ಕರ್ – ಹಿಂದೂ ಮಹಾಸಭಾಗಳನ್ನು ಅಂದಿಗೂ ದೂಷಿಸುತ್ತಿದ್ದರು, ಇಂದಿಗೂ ಹೊಣೆ ಮಾಡುತ್ತಾರೆ. ಡಾ।। ಲೋಹಿಯಾ ತಮ್ಮ “GUILTY MEN OF PARTITION” ಗ್ರಂಥದಲ್ಲಿ ದಾಖಲಿಸಿರುವ ಸಂಗತಿಗಳು ಓದಿದವರ ರಕ್ತವನ್ನೇ ಹೆಪ್ಪುಗಟ್ಟಿಸುತ್ತವೆ. ವಿಭಜನೆಯ ನಿರ್ಧಾರದ ಮುಖ್ಯ ಪಾತ್ರಧಾರಿಗಳಾದ ನೆಹರೂ ಮತ್ತು ಇನ್ನಿತರ ಕಾಂಗ್ರೆಸ್ಸಿಗರನ್ನು ಲೋಹಿಯಾ ಖಂಡತುಂಡವಾಗಿ ಟೀಕಿಸಿದ್ದಾರೆ. ದೇಶವನ್ನು ತುಂಡು ತುಂಡು ಮಾಡಲು ಕಾತರರಾಗಿದ್ದ ಮತ್ತು ಅಧಿಕಾರ ಗ್ರಹಣಕ್ಕೆ ಹಾತೊರೆಯುತ್ತಿದ್ದ ಕಾಂಗ್ರೆಸ್ ವರ್ಕಿಂಗ್ ಕಮಿಟಿಯ ಆ ಐತಿಹಾಸಿಕ (ಜೂನ್ 1947) ಸಭೆಗೆ ಸಮಾಜವಾದಿಗಳಾದ ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣರು ವಿಶೇಷ ಆಹ್ವಾನಿತರಾಗಿ ಹೋಗಿದ್ದರು. ಅಂದಿನ ವಿಶೇಷವೆಂದರೆ, ಇವರೀರ್ವರೂ ವಿಭಜನೆಯನ್ನು ವಿರೋಧಿಸಿದರು (ಪುಟ 9). ಸಾರ್ವಜನಿಕ ಭಾಷಣಗಳಲ್ಲಿ “ದೇಶ ತುಂಡು ಮಾಡುವ ಮುನ್ನ, ನನ್ನ ದೇಹವನ್ನು ತುಂಡರಿಸಲಿ” ಎನ್ನುತ್ತಿದ್ದ ಗಾಂಧೀಜಿಯವರು ಮಾತ್ರ ಆ ನಿರ್ಣಾಯಕ ಸಭೆಯಲ್ಲಿ ವಿಭಜನೆಯನ್ನು ವಿರೋಧಿಸಲೇ ಇಲ್ಲ. ನೆಹರೂ, ಪಟೇಲ್ ನೇತೃತ್ವವು ಆ ಸಭೆಗೆ ಮೊದಲೇ ಎಲ್ಲವನ್ನೂ ತೀರ್ಮಾನಿಸಿಬಿಟ್ಟಿತ್ತು. ಆ ಸಭೆಯು ಕೇವಲ ಔಪಚಾರಿಕವಾಗಿಹೋಗಿತ್ತು. ಅಧಿಕಾರಕ್ಕಾಗಿ ನೆಹರೂ (ಪುಟ 12) ಬ್ರಿಟಿಷರೊಂದಿಗೆ ಕೈಜೋಡಿಸಿಬಿಟ್ಟಿದ್ದರು, ಎಂದು ವಿಷಾದಿಸಿದ್ದರು, ಡಾ।। ಲೋಹಿಯಾ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

“ಡಾನ್” ಪತ್ರಿಕೆಯ 4ನೆಯ ಡಿಸೆಂಬರ್ 1946ರ ಪತ್ರಿಕೆಯಲ್ಲಿ ಲಕ್ನೋ (ಇಂದಿನ ಉತ್ತರ ಪ್ರದೇಶದ ರಾಜಧಾನಿ) ಮೂಲದ ಸುದ್ದಿಯಲ್ಲಿ ಅಂದಿನ ಸಿಂಧ್ ಪ್ರಾಂತದ ಮುಸ್ಲಿಂ ಲೀಗ್ ಮುಖಂಡ ಗುಲಾಮ್ ಹುಸೇನ್ ಹಿದಾಯತುಲ್ಲಾ “ಸಿಂಧ್ ಪ್ರಾಂತದಲ್ಲಿ ನೆಲೆಸುವ ಉತ್ತರ ಪ್ರದೇಶದ ಮುಸ್ಲಿಮರಿಗಾಗಿ ಕೃಷಿ ಭೂಮಿ ನೀಡಲು ವ್ಯವಸ್ಥೆ” ಮಾಡುವುದಾಗಿ ಹೇಳಿದ್ದ. ಇತಿಹಾಸ ಬಹಳ ಬಹಳ ವಿಚಿತ್ರವಾದುದು. ಪಾಕಿಸ್ತಾನದ ಕಲ್ಪನೆ ಅಂಕುರಿಸಿದ್ದೇ ಉತ್ತರಪ್ರದೇಶದಲ್ಲಿ. ಇಂದಿಗೂ ಅಲ್ಲಿ ರಾರಾಜಿಸುತ್ತಿರುವ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿಯೇ “ಹಿಂದೂ ಮುಸ್ಲಿಂ ಸಹಬಾಳ್ವೆ ಸಾಧ್ಯವಿಲ್ಲ. ಮುಸ್ಲಿಮರಿಗೆ ಪ್ರತ್ಯೇಕ ದೇಶವೇ ಬೇಕು” ಎಂಬ ಪರಿಕಲ್ಪನೆ ಹುಟ್ಟಿಕೊಂಡಿದ್ದು. ಶತಮಾನದ ಕಾಲ ಸೈಯದ್ ಅಹಮದ್ ಖಾನ್, ಮೊಹಮ್ಮದ್ ಇಕ್ಬಾಲ್ ಮೊದಲಾದವರು ಮುಸ್ಲಿಂ ಪ್ರತ್ಯೇಕತೆಯನ್ನೇ ಪೋಷಿಸಿಕೊಂಡು ಬಂದರು. ಆದರೂ, ದೆಹಲಿ, ಬಿಹಾರ, ಮುಖ್ಯವಾಗಿ ಉತ್ತರಪ್ರದೇಶ ಮುಂತಾದ ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಂದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲು ಗಾಂಧಿ – ನೆಹರೂ ಜೋಡಿ ಬಿಡಲೇ ಇಲ್ಲ. ದೊಡ್ಡ ಸಂಖ್ಯೆಯ ಮುಸ್ಲಿಮರನ್ನು ಇಲ್ಲೇ ಉಳಿಸಿಕೊಂಡರು ಮತ್ತು ಸಂವಿಧಾನದ ಕೆಲವು ಅನುಚ್ಛೇದಗಳಲ್ಲಿ (ಅನುಚ್ಛೇದ 29, 30 ಇತ್ಯಾದಿ) ಅಲ್ಪಸಂಖ್ಯಾತರ ಹೆಸರಿನಲ್ಲಿ ಅಪರಿಮಿತ ಹಕ್ಕುಗಳನ್ನೂ ಸೌಲಭ್ಯಗಳನ್ನೂ ನೀಡಿದರು. ವಿಭಜನೆಯ ಸಮಯದಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಅನೇಕ ಮುಸ್ಲಿಮರು, ಅಲ್ಲಿ ಅವರಿಗೆ “ಸರಿಹೋಗದೆ” ಮತ್ತೆ ಭಾರತಕ್ಕೆ ಹಿಂತಿರುಗಿ ಬಂದಾಗ, ಅವರ ಎಲ್ಲ ಆಸ್ತಿಪಾಸ್ತಿ ಉಳಿಸಿಕೊಟ್ಟರು, ವಾಪಸ್ ಕೊಡಿಸಿದರು. ಎರಡೂ ದೇಶಗಳ ಹಿಂದೂಗಳು ಮಾತ್ರ ತುಂಬಾ ತುಂಬಾ ದುರದೃಷ್ಟಶಾಲಿಗಳು. ಪಶ್ಚಿಮ ಪಾಕಿಸ್ತಾನದಲ್ಲಿ ಇದ್ದ ಬಹುಪಾಲು ಎಲ್ಲ ಹಿಂದೂಗಳ ಕಗ್ಗೊಲೆಯಾಯಿತು, ಬಲವಂತದ ಮತಾಂತರವಾಯಿತು, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳಂತೂ ಅವರ್ಣನೀಯ. ಅಲ್ಲಿ ಅಳಿದುಳಿದ ಸಿಖ್ಖರ ಸ್ಥಿತಿಯೂ ತೀರಾ ಹೀನಾಯ.

ನಮ್ಮ ಶಾಲಾ ಕಾಲೇಜುಗಳ ಪಠ್ಯಪುಸ್ತಕಗಳನ್ನು ರೂಪಿಸಿದವರು, ಈ ಎಲ್ಲ ಸತ್ಯಸಂಗತಿಗಳನ್ನು ಮುಚ್ಚಿಟ್ಟು, ಬರೀ “ಅಹಿಂಸೆಯಿಂದ ಭಾರತಕ್ಕೆ ಸ್ವಾತಂತ್ರ್ಯ ಬಂದಿತು” ಎಂಬ ಸುಳ್ಳನ್ನೇ ಹಾಡುತ್ತಾ ಬಂದಿದ್ದಾರೆ. ಪ್ರತಿಯೊಂದು ಹಳ್ಳಿ, ಪಟ್ಟಣ ಮತ್ತು ನಗರಗಳಲ್ಲಿ ಗಾಂಧಿ – ನೆಹರೂ ಹೆಸರಿನಲ್ಲಿ ಬಡಾವಣೆಗಳು, ರಸ್ತೆಗಳು, ವೃತ್ತಗಳು, ಶಾಲೆಗಳು, ಸಂಸ್ಥೆಗಳನ್ನು ಹುಟ್ಟುಹಾಕಿದರೆ, ಸಹಜವಾಗಿ ಇಡೀ ಜನಕೋಟಿ “ಇವರೇ ಈ ದೇಶವನ್ನು ಕಟ್ಟಿ ಬೆಳೆಸಿದವರು, ಇವರೇ ಕಡಿದು ಕಟ್ಟೆಹಾಕಿದವರು” ಎಂದುಕೊಂಡುಬಿಡುತ್ತದೆ. ನಮಗೆಲ್ಲ ಆದುದೂ ಅದೇ! ಇಂದಿಗೂ ಭಾರತೀಯ ಜನಮಾನಸದಲ್ಲಿ ಇಂತಹ ಮಿಥ್ಯಾ ಪೂರ್ವಗ್ರಹಗಳೇ ತುಂಬಿಕೊಂಡಿವೆ.

ಪುಣ್ಯಕ್ಕೆ ಈಚಿನ ವರ್ಷಗಳಲ್ಲಿ ಮಹತ್ತ್ವದ ಅನೇಕ ಸತ್ಯಸಂಗತಿಗಳು, ದಾಖಲೆಗಳು ಜನರ ಮುಂದೆ ಕಾಣಿಸಿಕೊಳ್ಳುತ್ತಿವೆ. ಆ ಎಲ್ಲ ಬಹುಪಾಲು ದಾಖಲೆಗಳೂ ನಮ್ಮೊಳಗೆ ಉತ್ಪಾತವನ್ನೇ ಮಾಡುತ್ತಿವೆ, ಮಾಡಿಬಿಡುತ್ತವೆ. ದೇಶದ ಶತ್ರುಗಳು ನಮ್ಮಿಂದ ಮುಚ್ಚಿಟ್ಟ ನಿಜೇತಿಹಾಸದ ಗರ್ಭದಲ್ಲಿ ಇನ್ನೇನೇನು ಭಯಾನಕ ಸಂಗತಿಗಳು ಅಡಗಿವೆಯೋ!

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

Exit mobile version