Site icon Vistara News

ನನ್ನ ದೇಶ ನನ್ನ ದನಿ ಅಂಕಣ: ʼಹಿಂದೂಗಳೇ ಕೊಲೆಗಾರರುʼ ಎಂಬ ಭಾರತ ವಿರೋಧಿ ಬಹುಸಂಖ್ಯಾತ-ವಾದ

ನನ್ನ ದೇಶ ನನ್ನ ದನಿ ಅಂಕಣ hindu oppression

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2024/06/WhatsApp-Audio-2024-06-17-at-7.43.44-AM-1.mp3

ನನ್ನ ದೇಶ ನನ್ನ ದನಿ ಅಂಕಣ: ನಮ್ಮ ಬಳಿ ಯಾರಾದರೂ ಬಂದು, “ಸನಾತನ ಧರ್ಮ (Sanatan Dharma) ಮತ್ತು ಹಿಂದೂ ಸಮಾಜಗಳು (Hindu community) ಅಪಾಯದಲ್ಲಿವೆ. ವಿಶ್ವದಾದ್ಯಂತ ಇರುವ ಕಮ್ಯೂನಿಸ್ಟರು (Communists), ಇಸ್ಲಾಂ (Islam) ಮತ್ತು ಕ್ರೈಸ್ತ (Christian) ಮತೀಯ ಶಕ್ತಿಗಳು ಭಾರತವನ್ನು (India) ಸಂಪೂರ್ಣವಾಗಿ ನಾಶ ಮಾಡಲು ಪಣ ತೊಟ್ಟಿವೆ. ಕನಿಷ್ಠ ಒಂದು ಶತಮಾನದಿಂದ ಇಂತಹ ಷಡ್ಯಂತ್ರ ನಡೆಯುತ್ತಿದೆ. ಹಿಂದೂ ಸಮಾಜದ ಬೇರೆ ಬೇರೆ ಜಾತಿಗಳ ನಡುವೆ ಅಂತಃಕಲಹ, ವೈಮನಸ್ಯ, ದ್ವೇಷಗಳನ್ನು ಹುಟ್ಟುಹಾಕಲಾಗುತ್ತಿದೆ, ಲಿಂಗಾಯತರನ್ನು – ಸಿಖ್ಖರನ್ನು ಹಿಂದೂಗಳ ಮೇಲೆ ಎತ್ತಿಕಟ್ಟಲಾಗುತ್ತಿದೆ. ಅಮೆರಿಕಾ, ಇಂಗ್ಲೆಂಡ್, ಯೂರೋಪಿನ ಕೆಲವು ದೇಶಗಳು, ಇಸ್ಲಾಮೀ (Islamic) ದೇಶಗಳು ಈ ಗುರಿಯ ಬೆನ್ನುಹತ್ತಿ, ದೆಹಲಿ-ಕೇಂದ್ರಿತ ಲುಟ್ಯೆನ್ಸ್ ನೊಂದಿಗೆ ಷಾಮೀಲಾಗಿ ಕಾರ್ಯನಿರ್ವಹಿಸುತ್ತಿವೆ. ಭಾರತದ ನೆರೆಹೊರೆಯ ಎಲ್ಲ ದೇಶಗಳನ್ನು, ಭಾರತದ ವಿರುದ್ಧವೇ ಎತ್ತಿಕಟ್ಟಲು ಚೀನಾ – ಪಾಕಿಸ್ತಾನಗಳು ಕೆಲಸ ಮಾಡುತ್ತಲೇ ಇವೆ. ಭಾರತದ ವಿರೋಧ ಪಕ್ಷಗಳಿಗೆ ಬೇರೆ ಬೇರೆ ದೇಶಗಳಿಂದ ವಿವಿಧ ಬಗೆಯಲ್ಲಿ ಹಣ ಬರುತ್ತಿದೆ ಮತ್ತು ಚುನಾವಣೆಗಳಲ್ಲಿ ಬುಡಮೇಲು ಕೃತ್ಯಗಳನ್ನು ನಡೆಸಲಾಗುತ್ತಿದೆ. ಜಾರ್ಜ್ ಸೋರೋಸ್ ಮೊದಲಾದವರು ಬಹಳ ಬಹಳ ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಭಾರತವನ್ನು ಸರ್ವನಾಶ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಕಮ್ಯೂನಿಸ್ಟರ ನಿಯಂತ್ರಣದ “ನ್ಯೂಯಾರ್ಕ್ ಟೈಮ್ಸ್”, “ವಾಷಿಂಗ್ಟನ್ ಪೋಸ್ಟ್”, ಬಿಬಿಸಿ ಮುಂತಾದ ಮಾಧ್ಯಮ ಲೋಕದ ದುಃಶಕ್ತಿಗಳು ಮತ್ತು ಅಮೇರಿಕಾದ ಕೆಲವು ವಿಶ್ವವಿದ್ಯಾಲಯಗಳೂ ಈ ಮಾಫಿಯಾದ ಭಾಗವಾಗಿವೆ. ಅಂತರಜಾಲದ ಅನೇಕ ಸಾಮಾಜಿಕ ಮಾಧ್ಯಮಗಳಲ್ಲಿಯೂ ವ್ಯವಸ್ಥಿತವಾಗಿ ಈ ದುಷ್ಕಾರ್ಯ ನಡೆಯುತ್ತಿದೆ……”

ಎಂದರೆ, ನಾವು ಶತಕೋಟಿ ಭಾರತೀಯರೂ ಗಹಗಹಿಸಿ ನಗುತ್ತೇವೆ. “ಅಯ್ಯಾ, ಇದೇ ರೀತಿಯ ಇನ್ನೊಂದಿಷ್ಟು ಜೋಕುಗಳನ್ನು ಹೇಳು” ಎಂದು ಸಹ ದುಂಬಾಲು ಬೀಳುತ್ತೇವೆ.

ಆದರೆ, ವಾಸ್ತವದಲ್ಲಿ, ನಮಗೆ ಅಂದರೆ ಭಾರತೀಯರಿಗೆ ಮೇಲ್ನೋಟಕ್ಕೆ ಹಾಸ್ಯ ಎನ್ನಿಸುವ ಈ ಎಲ್ಲ ಸಂಗತಿಗಳೂ, ಈ ಎಲ್ಲ ಸಾಲುಗಳೂ ನಿಜ; ಅಕ್ಷರಶಃ ಶತಪ್ರತಿಶತ ಸತ್ಯ.

ನೋಡಿ, ಪಾಕಿಸ್ತಾನವಿದೆ, ಬಾಂಗ್ಲಾದೇಶವಿದೆ. ಎಂಟು ದಶಕಗಳ ಹಿಂದೆ, ಅವು ನಮ್ಮ ದೇಶದ ಭಾಗಗಳೇ ಆಗಿದ್ದವು. ಇಸ್ಲಾಮೀ “ರಿಲಿಜನ್” (“ಧರ್ಮ” ಸೂಕ್ತವಾದ ಪದ ಅಲ್ಲ. ಧರ್ಮದ ವ್ಯಾಖ್ಯೆಯೇ ಬೇರೆ) ಹೆಸರಿನಲ್ಲಿ ಬೇರೆಯೇ ದೇಶ ಬೇಕು ಎಂಬಂತಹ ಹಕ್ಕೊತ್ತಾಯ ಬಂದ ಕ್ಷಣದಿಂದ ಮತ್ತು ಹೊಸ ದೇಶ 1947ರಲ್ಲಿ ಹುಟ್ಟಿಕೊಂಡ ದಿನದಿಂದ, ಅವ್ಯಾಹತವಾಗಿ ಹಿಂದೂಗಳ – ಸಿಖ್ಖರ ಹತ್ಯೆ, ಅತ್ಯಾಚಾರ, ಬಲವಂತದ ಮತಾಂತರ ಆಗುತ್ತಲೇ ಇದೆ. ಭಾರತದ ಹಣ, ಭಾರತದ ಸಹಕಾರ, ಭಾರತದ ಸೈನಿಕರ ರಕ್ತದಿಂದಲೇ ಹುಟ್ಟಿಕೊಂಡ ಬಾಂಗ್ಲಾದೇಶದಲ್ಲಿಯೂ ಹಿಂದೂಗಳ – ಬೌದ್ಧರ ಹತ್ಯಾಕಾಂಡ ಇಂದಿಗೂ ನಡೆಯುತ್ತಲೇ ಇದೆ. ಪಶ್ಚಿಮ ಪಾಕಿಸ್ತಾನದಲ್ಲಂತೂ, 1947ರಲ್ಲಿ 20% ಇದ್ದ ಹಿಂದೂಗಳ ಶೇಕಡಾವಾರು, ಈಗ 2ಕ್ಕಿಂತ ಕಡಿಮೆಯಾಗಿದೆ! ಕಳೆದ ಐವತ್ತು ವರ್ಷಗಳಲ್ಲಿ ಭಾರತವು ಅದೆಷ್ಟು ಸಹಾಯ ಹಸ್ತ ಚಾಚಿದರೂ, ಬಾಂಗ್ಲಾದೇಶದಲ್ಲಿಯೂ ಹಿಂದೂಗಳ – ಬೌದ್ಧರ ಪರಿಸ್ಥಿತಿ ಭಿನ್ನವಾಗಿಲ್ಲ.

ಈ ಎರಡೂ ದೇಶಗಳಲ್ಲಿ, ಅಂದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಆಗುತ್ತಿರುವ ಹಿಂದೂಗಳ – ಸಿಖ್ಖರ – ಬೌದ್ಧರ ಹತ್ಯಾಕಾಂಡಗಳ ಬಗೆಗೆ ವರದಿಗಳೂ, ಚಿತ್ರಗಳೂ, ವೀಡಿಯೋಗಳೂ ಬರುತ್ತಲೇ ಇವೆ.

ಅದೇ ನೋಡಿ, ಭಾರತದಲ್ಲಿರುವ ಮುಸ್ಲಿಮರ ಒಟ್ಟು ಜನಸಂಖ್ಯೆಯಲ್ಲಿ ಮತ್ತು ಶೇಕಡಾವಾರಿನಲ್ಲಿ (Percentage) ಏರಿಕೆ ಆಗುತ್ತಲೇ ಇದೆ. ಒಂದು ಅಂದಾಜಿನ ಪ್ರಕಾರ ಈಗ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 25 ಕೋಟಿ ಇರಬಹುದು. ಕಳೆದ ಏಳೆಂಟು ದಶಕಗಳಲ್ಲಿ ಸಂವಿಧಾನಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ತುಂಬ ತುಂಬ ಸೌಲಭ್ಯಗಳು, ಮೀಸಲಾತಿ, ಅನುಕೂಲಗಳು, ಸಾಲ – ಸಹಾಯಧನಗಳು ಸಹಾ ಅವರಿಗೆ ದೊರೆಯುತ್ತಿವೆ.

ಆದರೆ, ಜಗತ್ತಿನ ಮಾಧ್ಯಮಗಳಲ್ಲಿ (ಕೇವಲ ಭಾರತದ ಮಾಧ್ಯಮಗಳಲ್ಲಿ ಮಾತ್ರವಲ್ಲ) ಮತ್ತು ಅಂತರಜಾಲದ ಅನೇಕ ಮಾಹಿತಿ-ವಿವರಗಳಲ್ಲಿ ಬೇರೆಯೇ ಚಿತ್ರ ಕಂಡುಬರುತ್ತದೆ. ಜಗತ್ತಿನಾದ್ಯಂತ ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ, ಹತ್ಯಾಕಾಂಡ ನಡೆಸುತ್ತಿದ್ದಾರೆ, ಕಿರುಕುಳ ಕೊಡುತ್ತಿದ್ದಾರೆ, ಅತ್ಯಾಚಾರ ಎಸಗುತ್ತಿದ್ದಾರೆ ಎಂಬಂತಹ ಸತ್ಯಸಂಗತಿಗಳಿವೆ. ವಿಶೇಷವಾಗಿ ಬಹುತೇಕ ಇಸ್ಲಾಮೀ ದೇಶಗಳಲ್ಲಿ ಕಾಫಿರರಿಗೆ ಕನಿಷ್ಠ ಸ್ವಾತಂತ್ರ್ಯವೂ ಇಲ್ಲ, ಕಾಫಿರರಿಗೆ ಅಲ್ಲಿ ಮನೆಯೊಳಗೂ ತಮ್ಮ ಸ್ವಂತದ ಮತಧರ್ಮಗಳ ಆಚರಣೆಗಳಿಗೂ ಅವಕಾಶವಿಲ್ಲ. ಆದರೆ, ಹಿಂದೂ ಬಹುಸಂಖ್ಯಾತರಿರುವ ಭಾರತದಲ್ಲಿ so called ಅಲ್ಪಸಂಖ್ಯಾತರಾದ ಮುಸ್ಲಿಮರು ಮತ್ತು ಕ್ರೈಸ್ತರು ತುಂಬ ಚೆನ್ನಾಗಿದ್ದಾರೆ ಮತ್ತು ಅವರಿಗೆ ಇಲ್ಲಿ ಅಪರಿಮಿತ ಸ್ವಾತಂತ್ರ್ಯವಿದೆ; ಹಕ್ಕುಗಳೂ, ಸೌಲಭ್ಯಗಳೂ ಧಂಡಿಯಾಗಿ ಇವೆ.

ವಸ್ತುಸ್ಥಿತಿ ಹೀಗಿದ್ದೂ ಅಂತರಜಾಲದಲ್ಲಿ ಮತ್ತು ಜಾಗತಿಕ ಮಾಧ್ಯಮಗಳಲ್ಲಿ, ಭಾರತ ಕುರಿತಂತೆ, ಭಯಾನಕವಾದ ಮತ್ತು ಅಪ್ಪಟ ಮಿಥ್ಯೆಯ ಮಾಹಿತಿ ದೊರೆಯುತ್ತದೆ. ಲೇಖಕ, ಚಿಂತಕ, ಸಂಶೋಧಕ, ಪ್ರೊಫೆಸರ್ ಕೌಶಿಕ್ ಗಂಗೋಪಾಧ್ಯಾಯ ಅವರು ತಮ್ಮ “ದ ಮೆಜಾರಿಟೇರಿಯನ್ ಮಿಥ್” ಗ್ರಂಥದಲ್ಲಿ ಕೊಟ್ಟಿರುವ ಅಂಕಿ ಅಂಶಗಳು, ಕೋಷ್ಟಕಗಳು (Tables) ಆಘಾತವನ್ನೇ ಉಂಟುಮಾಡುತ್ತವೆ.

“ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಒಂದು ಡಿಜಿಟಲ್ ರಿಸೋರ್ಸ್ ಅಂದರೆ ಅಂಕೀಯ ದತ್ತಾಂಶ ಮಾಹಿತಿಕೋಶ. ಈ ಜಾಲತಾಣದ ಅಭಿಲೇಖಾಗಾರದಲ್ಲಿ (Archives) ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲಾವಧಿಯ ಸುದ್ದಿಗಳ ದತ್ತಾಂಶವು ಸಂಗ್ರಹವಾಗಿದೆ. ಅಮೆರಿಕಾ, ಕೆನಡಾ, ಯೂರೋಪ್, ಆಫ್ರಿಕಾ, ಏಷ್ಯಾ, ದಕ್ಷಿಣ ಅಮೆರಿಕಾ ಖಂಡ, ಆಸ್ಟ್ರೇಲಿಯಾ ಇತ್ಯಾದಿಗಳ ಧ್ವನಿ ಕಡತಗಳು, ವೀಡಿಯೋಗಳು, ಜಾಲತಾಣಗಳು, ಬ್ಲಾಗ್ ಗಳು, ಪಾಡ್ ಕ್ಯಾಸ್ಟ್ ಗಳು, ಗ್ರಂಥಗಳು, ಸಮ್ಮೇಳನಗಳ ನಿರ್ಣಯಗಳು, ವಿಶ್ವಕೋಶಗಳು, ಆಧಾರ ಗ್ರಂಥಗಳು, ನಿಯತಕಾಲಿಕಗಳು, ವೃತ್ತಪತ್ರಿಕೆಗಳು, ಸುದ್ದಿ-ಜಾಲತಾಣಗಳು ಇತ್ಯಾದಿಗಳಲ್ಲಿ ಮೂರು ವರ್ಷಗಳ ಅವಧಿಯಲ್ಲಿ (2020, 2021 ಮತ್ತು 2022) ಪ್ರಕಟವಾದ ಮತ್ತು ದಾಖಲಾದ ಮಾಹಿತಿಯನ್ನು ವಿಶೇಷವಾಗಿ ಬಹುಸಂಖ್ಯಾತ-ವಾದ (Majoritarianism) ಕುರಿತ ದತ್ತಾಂಶಗಳನ್ನು ಆಳವಾಗಿ ಅಭ್ಯಾಸ ಮಾಡಿದಾಗ ಮತ್ತು ವಿಶ್ಲೇಷಿಸಿದಾಗ ದೊರೆಯುವ ಉಪಲಬ್ಧಿಗಳು ಅತ್ಯಂತ ಆಘಾತಕಾರಿಯಾಗಿವೆ. ಜಗತ್ತಿನ ಆರನೆಯ ಒಂದು ಭಾಗದಷ್ಟು ಜನಸಂಖ್ಯೆಯಿರುವ ಭಾರತದಲ್ಲಿ ಹೆಸರಿಗೆ ಬಹುಸಂಖ್ಯಾತರಾಗಿರುವ ಹಿಂದೂಗಳು so called ಅಲ್ಪಸಂಖ್ಯಾತರ ಮೇಲೆ ಮತ, ಭಾಷೆ ಮತ್ತು ಜನಾಂಗದ ಆಧಾರದ ಮೇಲೆ ದೌರ್ಜನ್ಯ ಮೆರೆದಿದ್ದಾರೆ ಎನ್ನುತ್ತವೆ ಈ ದತ್ತಾಂಶಗಳು. ಇನ್ನೂ ಭಯಂಕರವಾದ ಸಂಗತಿಯೆಂದರೆ, ಇಡೀ ಜಗತ್ತಿನ ಇಂತಹ ದತ್ತಾಂಶದಲ್ಲಿ 80% (ಹೌದು ಪ್ರತಿಶತ ಎಂಬತ್ತು) ಹಿಂದೂಗಳ ದೌರ್ಜನ್ಯದ ಮಾಹಿತಿಯೇ ಇಲ್ಲಿ ಪ್ರಧಾನವಾಗಿ ಲಭ್ಯವಾಗುತ್ತದೆ. ಅಂದರೆ, ಜಗತ್ತಿನಲ್ಲಿ ಭಾರತದ ಹಿಂದೂಗಳ ಬಗೆಗೆ, ಹಿಂದೂ-ವಿರೋಧೀ ಮಾಫಿಯಾ ಅದೆಂತಹ ದತ್ತಾಂಶವನ್ನು ದಾಖಲಿಸಿದೆ, ಎಂಬ ಈ ವಿವರಗಳು ನಿಜಕ್ಕೂ ಗಾಬರಿ ತರಿಸುತ್ತವೆ. ಹಿಂದುಗಳನ್ನು ರಾಕ್ಷಸರೆಂಬಂತೆ ಚಿತ್ರಿಸಲಾಗಿದೆ. ಆದರೆ, ಮುಸ್ಲಿಮರನ್ನು – ಕ್ರೈಸ್ತರನ್ನು ದುರುದ್ದೇಶಪೂರ್ವಕವಾಗಿ underplay ಮಾಡಿ, ದಮನಕಾರಿಗಳನ್ನೇ ದಮನಿತರೆಂಬಂತೆ ಬಿಂಬಿಸುವ ಕೆಲಸ ನಡೆಯುತ್ತಿದೆ. ಈ ಎಲ್ಲ ನಿಂದನೀಯ ದುಷ್ಕಾರ್ಯಗಳಲ್ಲಿ ಹಣ ಸಹ ದೊಡ್ಡ ಪಾತ್ರವನ್ನು ನಿರ್ವಹಿಸಿದೆ.

ಅದೇ ನೋಡಿ, ಕಾಫಿರರ ಮೇಲಿನ ಪಾಕಿಸ್ತಾನಿ ಮುಸ್ಲಿಮರ ದೌರ್ಜನ್ಯಗಳು, ಈ ದತ್ತಾಂಶದ ಪ್ರಕಾರ ಕೇವಲ 1.8% ಮಾತ್ರ! ಕನಿಷ್ಠ ಮಾಹಿತಿ, ಕನಿಷ್ಠ ಪ್ರಜ್ಞೆ ಇರುವ ಯಾರಿಗೇ ಆದರೂ, ಇದು ಸುಳ್ಳು ಎಂಬುದು ತಿಳಿಯುತ್ತದೆ. ಆದರೆ, ಇಂಥ ದಾಖಲೆಗಳ – ಸಾಕ್ಷ್ಯಾಧಾರಗಳ ಶಕ್ತಿಯೇ ಶಕ್ತಿ. ನ್ಯಾಯಾಲಯಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ವರದಿಗಳು, ವಿಶ್ವಕೋಶಗಳು ಇಂತಹ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶನ್ನೇ ಆಧರಿಸಿ ತಮ್ಮ ಷರಾ ಬರೆಯುತ್ತವೆ, ತೀರ್ಮಾನಗಳನ್ನು ಮಾಡುತ್ತವೆ. ಈ ಪರಿಪ್ರೇಕ್ಷ್ಯದಲ್ಲಿ ಭಾರತ-ವಿರೋಧೀ ದುಃಶಕ್ತಿಗಳು ಹೇಗೆಲ್ಲಾ ಕೆಲಸ ಮಾಡುತ್ತಿವೆ, ಹೇಗೆಲ್ಲಾ ವಂಚನೆಯಿಂದ ಸಾಕ್ಷ್ಯಾಧಾರಗಳನ್ನು ದಾಖಲಿಸುತ್ತವೆ ಎಂಬುದನ್ನು ಗಮನಿಸುವಾಗ ಆತಂಕವಾಗುತ್ತದೆ.

ಈ ದತ್ತಾಂಶದಲ್ಲಿ, ಕಾಶ್ಮೀರದಲ್ಲಿ ಮುಸ್ಲಿಮರ ದೌರ್ಜನ್ಯಕ್ಕೆ ಸಿಲುಕಿದ ಲಕ್ಷಾವಧಿ ಹಿಂದೂಗಳಿಗೆ ಸಂಬಂಧಿಸಿದಂತೆ; ಅವರ ಹತ್ಯೆ, ಅವರ ಮೇಲಾದ ಅವರ್ಣನೀಯ ಅತ್ಯಾಚಾರಗಳಿಗೆ ಸಂಬಂಧಿಸಿದಂತೆ 1,802 ವರದಿಗಳು ದಾಖಲಾಗಿದ್ದರೆ, ಗುಜರಾತಿನಲ್ಲಾದ 2002ರ ಗಲಭೆಗಳಿಗೆ ಸಂಬಂಧಿಸಿದಂತೆ 29,092 (ಹದಿನಾರು ಪಟ್ಟು) ವರದಿಗಳು ದಾಖಲಾಗಿವೆ. ಗುಜರಾತಿನಲ್ಲಿ ಆಗ ಹತ್ಯೆಯಾದವರ ಸಂಖ್ಯೆ ಅಧಿಕೃತವಾಗಿ 254 ಹಿಂದೂಗಳು ಮತ್ತು 790 ಮುಸ್ಲಿಮರು ಎನ್ನುವುದನ್ನು ಸಹ ಸಾಂದರ್ಭಿಕವಾಗಿ ನಾವಿಲ್ಲಿ ನೆನಪಿಸಿಕೊಳ್ಳಬೇಕಾಗಿದೆ.

ಇನ್ನೂ ಒಂದು ಉದಾಹರಣೆ ನೋಡಿ. 1984ರಲ್ಲಿ ಸಿಖ್ ಅಂಗರಕ್ಷಕರಿಂದ ಇಂದಿರಾ ಗಾಂಧಿಯವರ ಹತ್ಯೆಯಾಯಿತು. ಆಗ ಪ್ರತೀಕಾರ ರೂಪದಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಿ (ಅಧಿಕೃತವಾಗಿ) ಸತ್ತವರು 3,350 ಮಂದಿ. ಆದರೆ, ಈ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶದಲ್ಲಿ 10,977 (ಕಾಶ್ಮೀರದ ಅಂಕಿ ಅಂಶಗಳ ಐದು ಪಟ್ಟು) ವರದಿಗಳು ದಾಖಲಾಗಿವೆ.

ಕಳೆದ ಏಳೆಂಟು ದಶಕಗಳಲ್ಲಿ ಕಮ್ಯೂನಿಸ್ಟರು – ಜಿಹಾದಿಗಳು ಸೇರಿ ಭಾರತದ ಇತಿಹಾಸವನ್ನೇ ವಿಕೃತವನ್ನಾಗಿ – ವಿಷಪೂರಿತವನ್ನಾಗಿ ಮಾಡಿದ್ದಾರೆ, ಎಂಬುದನ್ನು ಇಲ್ಲಿ ಸ್ಮರಿಸಿದರೆ, ಜಾಗತಿಕ ದಾಖಲೆಗಳ ದತ್ತಾಂಶದ ವಿಷಯದಲ್ಲಿಯೂ ಏನೆಲ್ಲಾ ನಡೆಯುತ್ತಿದೆ ಎಂಬುದು ಗಾಬರಿ ಉಂಟುಮಾಡುತ್ತದೆ. ಶಾಲಾ-ಕಾಲೇಜುಗಳ ಪಠ್ಯಗಳಲ್ಲಿರುವ ಸುಳ್ಳು – ಇತಿಹಾಸದ ದುಷ್ಪರಿಣಾಮದಿಂದ ಭಾರತ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗ ಜಾಗತಿಕ “ಗ್ಲೋಬಲ್ ನ್ಯೂಸ್ ಸ್ಟ್ರೀಮ್” ಡಿಜಿಟಲ್ ದತ್ತಾಂಶಗಳ ಈ ಆಯಾಮವು ಶತಕೋಟಿ ಭಾರತೀಯರಿಗೆ ಎಚ್ಚರಿಕೆಯ ಘಂಟೆಯಾಗಿದೆ.

ಜಗತ್ತೇ ವಿಚಿತ್ರ!

ಒಳಗಿನ ಶತ್ರುಗಳಂತೆಯೇ, ಹೊರಗಿನ ಕಟುಸತ್ಯಗಳು – ಭಾರತವಿರೋಧೀ ದುಃಶಕ್ತಿಗಳು ಸಹ ಅದೆಷ್ಟು ಘೋರ, ಅದೆಷ್ಟು ಭಯಾನಕ! ಅನೇಕ ದಶಕಗಳಿಂದ ಈ ಬಹುಸಂಖ್ಯಾತ-ವಾದ (Majoritarianism) ಎನ್ನುವುದೇ ಭಾರತೀಯ ಹಿಂದುಗಳನ್ನು ಹಣಿಯುವ, ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ, ಕಮ್ಯೂನಿಸ್ಟ್ ನೇತೃತ್ವದ ಮಾಫಿಯಾದ ಹುನ್ನಾರವಾಗಿದೆ. ನಮ್ಮಲ್ಲೇ ತುಂಬ ತುಂಬ ಉದಾಹರಣೆಗಳಿವೆ. ಪಾಕಿಸ್ತಾನ್ ಮೂಲದ ಭಯೋತ್ಪಾದಕ ಅಜ್ಮಲ್ ಕಸಬ್ ಮೊದಲಾದವರ ತಂಡವು, ಹಿಂದೂಗಳ ವೇಷದಲ್ಲಿಯೇ ದಾಳಿ ನಡೆಸಿತ್ತು ಮತ್ತು ಮುಂಬಯಿ ಮೇಲಿನ ಈ 2008ರ ಕುಖ್ಯಾತ ದಾಳಿಯ ಹಿಂದೆ ಬಹಳ ದೊಡ್ಡ ಷಡ್ಯಂತ್ರವನ್ನು ರೂಪಿಸಲಾಗಿತ್ತು. ಕಸಬ್ ಅಕಸ್ಮಾತ್ತಾಗಿ ಸೆರೆ ಸಿಕ್ಕು ಬಹಳಷ್ಟು ರಹಸ್ಯಗಳು ಬಯಲಾದವು. ಕೆಲವರಂತೂ ಹಿಂದೂ ರಾಷ್ಟ್ರೀಯ ಸಂಘಟನೆಗಳನ್ನೇ ಗುರಿ ಮಾಡಿ ಪುಸ್ತಕಗಳನ್ನೂ ಬರೆಸಿ, ಹಿಂದೂ-ಭಾರತವನ್ನೇ ಕಟಕಟೆಯಲ್ಲಿ ನಿಲ್ಲಿಸಲು ವ್ಯವಸ್ಥೆ ಮಾಡಿಕೊಂಡಿದ್ದರು.

ಭಾರತೀಯ ಸಮಾಜವು ಸಾವಿರ ಸಾವಿರ ವರ್ಷಗಳ ಯಾತನೆ, ಹಿಂಸೆ, ಹತ್ಯಾಕಾಂಡಗಳನ್ನು ಅನುಭವಿಸಿದ್ದು ಸಾಕು. ಇನ್ನಾದರೂ ಅರಿವಿನ ಬೆಳಕು ನಮ್ಮಲ್ಲಿ ಎಚ್ಚರ, ಜಾಗೃತಿಗಳನ್ನು ಉದ್ದೀಪಿಸಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಬ್ರಿಟಿಷರು ಬರುವ ಮೊದಲು ರಸ್ತೆಗಳೇ ಇರಲಿಲ್ಲವಾದರೆ, ಕೃಷ್ಣದೇವರಾಯನ ಭಾರಿ ಸೈನ್ಯ ಆಕಾಶದಲ್ಲಿ ಹಾರಾಡುತ್ತಿತ್ತೇ?

Exit mobile version