Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಸಾಬ್, ಇದರ ಮೇಲೆಯೇ ದೇಶವಿಭಜನೆಯ ಡೀಲ್ ಆದದ್ದು!

shimla palace

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2023/08/WhatsApp-Audio-2023-07-29-at-205.mp3

ಹಿಮಾಚಲ ಪ್ರದೇಶದ ಶಿಮ್ಲಾ – ಮನಾಲಿಗಳ ಇಡೀ ಭೂಭಾಗವೇ ಅತಿಸುಂದರ. 20 ವರ್ಷಗಳ ಹಿಂದೆ ನೋಡಿದಾಗ, ಭೂಮ, ಭವ್ಯ, ಅದ್ಭುತ, ಅಸೀಮ ಇತ್ಯಾದಿ ಪದಗಳ ನಿಜಾರ್ಥದ ಅರಿವಿಗೆ ಹಿಮಾಚಲಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕು, ಎನ್ನಿಸಿತು. ಈ ಪ್ರದೇಶ ಅದೆಷ್ಟು oxygen-rich ಎಂದರೆ, ಈ ದೇವಭೂಮಿಯನ್ನು ಪ್ರವೇಶಿಸಿದ ಕ್ಷಣಮಾತ್ರದಲ್ಲಿಯೇ ನಮ್ಮ ಮೆದುಳೇ ಚುರುಕಾಗಿಬಿಡುತ್ತದೆ. ಒಮ್ಮೆ ಸುದೀರ್ಘವಾಗಿ ಉಸಿರೆಳೆದುಕೊಂಡರೆ ಸವಿಶೀತಲ ತಂಗಾಳಿಯು ನೀಡುವ ಆ ಆಹ್ಲಾದದ ಸೊಗಸೇ ಅದ್ಭುತ. ಇಂದಿಗೂ ಕಣ್ಣು ಮುಚ್ಚಿಕೊಂಡು ಕುಳಿತು ಧ್ಯಾನಿಸಿದರೆ ಆ ದಿವ್ಯಾನುಭವದ ಪುನಾಸೃಷ್ಟಿ.

ಶಿಮ್ಲಾ ತುಂಬ ಸುಂದರವಾಗಿದೆ. ಇಲ್ಲಿನ ಉದ್ಯಾನಗಳು, ಅಲ್ಲಲ್ಲೇ ಇರುವ ವಿಹಂಗಮ ನೋಟದ ತಾಣಗಳು, ತಣ್ಣನೆಯ ಗಾಳಿ, ಎಲ್ಲವೂ ಚೆನ್ನ. ಬಿರುಬೇಸಿಗೆಯ ಕಾಲದಲ್ಲಿ ಹೋದರಂತೂ ಇನ್ನಷ್ಟು ಆಪ್ಯಾಯಮಾನವೆನ್ನಿಸಬಹುದು. ಎಲ್ಲೆಲ್ಲೂ ಕಾಣುವ ವಿಭಿನ್ನ ರಾಜ್ಯಗಳ – ದೇಶಗಳ ಪ್ರವಾಸಿಗಳನ್ನು ನೋಡುವುದೇ ಒಂದು ಸೊಗಸು. ಸುರಂಗ ಮಾರ್ಗದೊಳಗೆ ಹೋಗುವ ಪುಟಾಣಿ ರೈಲುಗಳು ಶಿಮ್ಲಾದ ವೈಶಿಷ್ಟ್ಯ. ಊರೊಳಗೆ ಕೆಳಗಿನಿಂದ ಮೇಲೆ, ಮೇಲಿನಿಂದ ಕೆಳಗೆ ಏರಲು – ಇಳಿಯಲು ರಸ್ತೆಗಳಲ್ಲೇ ಲಿಫ್ಟ್ ಗಳಿವೆ. ಸ್ಥಳೀಯರೇನೋ ತೆಳ್ಳಗಿರುತ್ತಾರೆ. ಹೊರಗಿನಿಂದ ಬರುವ, ಭೂಮಿಗೆ ಭಾರವಿರುವ ನಮ್ಮಂತಹ ಸ್ಥೂಲಕಾಯರಿಗಾಗಿ ಈ ವ್ಯವಸ್ಥೆ.

ಜನನಿಬಿಡ ಮಾಲ್ ನಡುವೆಯೇ ಸೂರ್ಯಾಸ್ತದ ದಿವ್ಯದರ್ಶನಕ್ಕಾಗಿ ವ್ಯೂ ಪಾಯಿಂಟ್‌ಗಳಿವೆ. ಎಲ್ಲ ಪ್ರವಾಸಿಗಳೂ ಇಂತಹ ಕಡೆಯೇ ಮುಗಿಬಿದ್ದಿರುತ್ತಾರೆ. ಅಲ್ಲೊಂದು ಫೋಟೋ ತೆಗೆದೆ. ಇಷ್ಟವಾಯಿತು. ಅಷ್ಟೊಂದು ಜನರ ನಡುವೆ, ಮಾಲ್ ಒಂದರಲ್ಲಿ ತೆಗೆದ ಫೋಟೋ ಅದು ಎಂದು ಹೇಳುವುದೇ ಕಷ್ಟ. ಅಷ್ಟು ವಿಶೇಷವಾಗಿದೆ.

ಶಿಮ್ಲಾದ ಒಂದು ಬೆಟ್ಟದ ಮೇಲೆ ಹನುಮಂತನ ದೇವಸ್ಥಾನವಿದೆ. ದೊಡ್ಡದು. ಸಂಜೀವಿನೀ ಪರ್ವತವನ್ನು ಎತ್ತಿಕೊಂಡು ಬಂದ ಹನುಮಂತನು ಈ ಬೆಟ್ಟದ ಮೇಲೆ ನಿಂತು, ಇಲ್ಲಿಂದ ಲಂಕೆಗೆ ಹೇಗೆ ಹಾರಬಹುದು ಎಂದು ಯೋಚಿಸಿ, ಅನಂತರ ಹಾರಿದನಂತೆ. ಹಾಗಾಗಿ ಈ ದೇವಸ್ಥಾನ. ಹನುಮಂತನ ಮಂದಿರ ಎಂದ ಮೇಲೆ, ಇಲ್ಲಿ ಕೋತಿಗಳದ್ದೇ ಸಾಮ್ರಾಜ್ಯ. ತಿಂಡಿ ತಿನಿಸುಗಳಿಗಾಗಿ ಅವು ತಡಕಾಡುತ್ತವೆ. ಕೆಲವಂತೂ ತುಂಟ ಹುಡುಗರಂತೆ, ಪೋಕರಿಗಳಂತೆ ಬಂದು ಬಂದು ಕಿರಿಕಿರಿ ಮಾಡುತ್ತಿದ್ದವು. ದೇವಾಲಯದ ಒಳಗೆ ಒಂದು ಕಪ್ಪು ಬಿಳುಪು ಛಾಯಾಚಿತ್ರವಿದೆ. ಇದೇ ತಾಣದ ಛಾಯಾಚಿತ್ರವದು. 1837ರಲ್ಲಿ ತೆಗೆದದ್ದು. ನನಗೆ ನೋಡಿ ಸೋಜಿಗವೆನಿಸಿತು. ಇಂದಿಗೂ ಬಲುದೂರ ಎನ್ನಬಹುದಾದ ಈ ಊರಿನ ಈ ಬೆಟ್ಟದ ತುದಿಗೆ, ಎರಡು ಶತಮಾನಗಳ ಹಿಂದೆ ತ್ರಿಪಾದವನ್ನೂ – ಕ್ಯಾಮೆರಾವನ್ನೂ ಹೊತ್ತು ತಂದು, ಆ ಪುಣ್ಯಾತ್ಮ ಹೇಗೆ ಫೋಟೋ ತೆಗೆದನಪ್ಪಾ ಎನ್ನಿಸಿತು.

ಇದೇ ಶಿಮ್ಲಾದಲ್ಲಿ ಇಂದಿರಾ ಗಾಂಧಿ ಮತ್ತು ಜುಲ್ಫಿಕರ್ ಅಲಿ ಭುಟ್ಟೋ ನಡುವೆ, 1972ರಲ್ಲಿ ಒಪ್ಪಂದವಾದ ಕಟ್ಟಡವಿದೆ. ಪುಟ್ಟ ಕಟ್ಟಡ. ಆದರೆ ಆ ಕಟ್ಟಡದಲ್ಲಿ ಆದ ನಷ್ಟ ಮಾತ್ರ ಬಹಳ ದೊಡ್ಡದು. ಪಶ್ಚಿಮ ಪಾಕಿಸ್ತಾನದ ಪಾಶವೀ ಆಡಳಿತಕ್ಕೆ ಸಿಕ್ಕು, ಪೂರ್ವ ಪಾಕಿಸ್ತಾನದ ಜನ ಹತಾಶರಾಗಿಹೋಗಿ ಹೋರಾಟಕ್ಕೆ ಇಳಿದಿದ್ದರು. ಅದರಲ್ಲೂ ಬಾಂಗ್ಲಾದೇಶದ ಹಿಂದುಗಳ ಪಾಡು ಹೇಳತೀರದು. ಮತದ ಮೇಲೆ ಭಾಷೆ ಹಿಡಿತ ಸಾಧಿಸಿತು, ಎಂದು ಎಲ್ಲರೂ ಭ್ರಮಿಸಿದ ವಿಲಕ್ಷಣ ಸನ್ನಿವೇಶವದು. 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾರತದ ಸೈನಿಕರೂ ಅತೀವ ಶ್ರಮ ಹಾಕಿದರು, ಬಲಿದಾನ ಮಾಡಿದರು. ಸ್ಯಾಮ್ ಮಾಣೆಕ್ ಷಾ, ಜಗಜೀತ್ ಸಿಂಗ್ ಅರೋಡಾ ಅವರ ಸೇನಾಪಡೆಗಳು ಬರಿಯ ಯುದ್ಧವನ್ನು ಮಾತ್ರ ಗೆಲ್ಲಲಿಲ್ಲ. ತೊಂಬತ್ಮೂರು ಸಾವಿರ ಪಾಪಿ ಪಾಕಿ ಸೈನಿಕರನ್ನು ಸೆರೆ ಹಿಡಿದಿದ್ದವು. ಅದೊಂದು ಮಹತ್ತರವಾದ ಸಾಧನೆ.

indira gandhi

ತಂದೆ ಜವಾಹರಲಾಲ್‌ರಂತೆಯೇ, ಮಗಳು ಇಂದಿರೆಗೂ ಅಂತಾರಾಷ್ಟ್ರೀಯ ಪ್ರಸಿದ್ಧಿಯ ಹುಚ್ಚು. ಅದೂ ಎಂತಹ ಬೆಲೆ ತೆತ್ತು? ಪಾಕಿಸ್ತಾನದ 93,000 ಸೈನಿಕರು ನಮ್ಮ ವಶದಲ್ಲಿದ್ದಾಗ, ಆಕ್ರಮಿತ ಕಾಶ್ಮೀರದಿಂದ ಹಿಂದೆ ಸರಿಯಿರಿ ಎನ್ನಬಹುದಿತ್ತು. ಷರತ್ತುಗಳನ್ನು ವಿಧಿಸಬಹುದಿತ್ತು. ಅನಪೇಕ್ಷಿತ ಯುದ್ಧದ ವೆಚ್ಚ ಕಕ್ಕಿಸಬಹುದಿತ್ತು, ಕಡೆಯಪಕ್ಷ ಪಾಕ್ ಸೆರೆಮನೆಗಳಲ್ಲಿದ್ದ ಭಾರತೀಯರನ್ನೂ – ಭಾರತೀಯ ಸೈನಿಕರನ್ನೂ – ಬೆಸ್ತರನ್ನೂ ಬಿಡುಗಡೆ ಮಾಡಿಸಬಹುದಿತ್ತು. ಮೂರ್ಖತನದ ಪರಮಾವಧಿ ಎನ್ನಬಹುದಾದ ಈ ಶಿಮ್ಲಾ ಒಪ್ಪಂದಕ್ಕೆ ಇಂದಿರಾ ಸಹಿ ಹಾಕಿದರು. ಇದನ್ನು ಅಜ್ಞಾನಿಗಳು ‘ಶಿಮ್ಲಾ ಶಾಂತಿ ಒಪ್ಪಂದ’ ಎಂದು ಕರೆಯುವುದುಂಟು. ದುಷ್ಟ ಜಿಹಾದೀ ಭುಟ್ಟೋ, ಭಾರತದ ಮೇಲೆ ಸಾವಿರ ವರ್ಷಗಳ ಯುದ್ಧ ಸಾರಿದ್ದ. ಪಾಕಿಗಳಲ್ಲಿರುವ ಭಾರತದ ವಿರೋಧಕ್ಕೆ ಎಣ್ಣೆ ಸುರಿದಿದ್ದ. ಆದರೆ, ಸಮರಾಂಗಣದಲ್ಲಿ ಸೋತಿದ್ದ ದಾಳಿಕೋರ ಭುಟ್ಟೋ ಇಲ್ಲಿ ಗೆದ್ದ. ಯುದ್ಧ ಗೆದ್ದಿದ್ದ ಇಂದಿರಾ ಗಾಂಧಿ ಸೋತರು, ಇತಿಹಾಸದ ಅಪೂರ್ವ ಅವಕಾಶವೊಂದನ್ನು ಹಾಳು ಮಾಡಿದರು.

ಸುಮನೋಹರ ಹಿಮಾಚಲ ಪ್ರದೇಶ ರಾಜ್ಯದ ರಾಜಧಾನಿ ಈ ಶಿಮ್ಲಾ. ಸುಂದರ ಗಿರಿಧಾಮ. ಹಿಮಪರ್ವತಗಳು, ಝರಿಗಳು, ವಿಹಾರಧಾಮಗಳು, ತಂಪುತಂಪು ಹವೆ. ಇಪ್ಪತ್ತೊಂದನೆಯ ಶತಮಾನದಲ್ಲೂ ಬಲುದೂರ ಎನ್ನಬಹುದಾದ ಈ ಶಿಮ್ಲಾದ, ಎತ್ತರದ ಭಾಗದಲ್ಲಿ ದೊಡ್ಡ ಅರಮನೆಯೊಂದಿದೆ. ರಾಷ್ಟ್ರಪತಿ ನಿವಾಸ್ ಎನ್ನುತ್ತಾರೆ. ಹಿಂದೆ ವೈಸ್ ರೀಗಲ್ ಲಾಡ್ಜ್ ಎನ್ನುತ್ತಿದ್ದರು. ತುಂಬ ಹಳೆಯದು. ಕಟ್ಟಿದ್ದು 1,888ರಲ್ಲಿ. ಸಾರ್ವಜನಿಕ ವಿದ್ಯುತ್ ಸಂಪರ್ಕದ ಆವಿಷ್ಕಾರಕ್ಕೂ ಮುಂಚಿನದು. ವಿಸ್ಮಯದ ವಿಷಯವೆಂದರೆ, ಇಲ್ಲಿ ಮಳೆಕೊಯ್ಲು (Rain Harvest) ವ್ಯವಸ್ಥೆಯಿದೆ. ಅರಮನೆಯ ಮುಂಭಾಗದಲ್ಲಿ ದೊಡ್ಡ ಹುಲ್ಲುಹಾಸು. ಅಲ್ಲೊಂದು ದೊಡ್ಡ ಘಂಟೆ. ಅದು ನೇಪಾಳದ ಮಹಾರಾಜರು ಅಂದಿನ ವೈಸ್‌ರಾಯ್‌ಗೆ ಅರ್ಪಿಸಿದ ಕಾಣಿಕೆ. ಭಾರತದ ಬಿರುಬೇಸಿಗೆ ಬ್ರಿಟಿಷರಿಗೆ ಅಸಹನೀಯವಾಗಿತ್ತು. ಬೇಸಿಗೆಯಲ್ಲಿ ದೆಹಲಿಯ ಬದಲು ಶಿಮ್ಲಾದಿಂದ ರಾಜ್ಯಭಾರ ಮಾಡುತ್ತಿದ್ದರು. ಈ ಅರಮನೆ ನೋಡಲು ಅರ್ಧಮೈಲಿ ನಡೆಯಬೇಕು. ಹತ್ತಬೇಕು ಎಂದರೂ ಸರಿಯೇ! ಅಷ್ಟು ಎತ್ತರವಿದೆ. ನಡೆಯಲು ಶ್ರಮವಾಯಿತು. ಹತ್ತುತ್ತ ಹೋಗುವಾಗ, ಭವ್ಯವಾದ ಈ ಅರಮನೆಯ ನಿರ್ಮಿತಿಯ ಹಿಂದೆ, ಭಾರತೀಯ ಶ್ರಮಜೀವಿಗಳ ರಕ್ತ – ಬೆವರು ಅದೆಷ್ಟು ಹರಿದಿದೆಯೋ! ಎನ್ನಿಸಿತು.

ಪ್ಯಾಲೇಸ್ ಎಂದೇ ಖ್ಯಾತಿ ಪಡೆದ, ಈ ಅರಮನೆಯ ಒಳಗೋಡೆಗಳಿಗೆ ಹಾಕಿರುವ ವಾಲ್‌ಕ್ಲಾತ್ ನಿನ್ನೆಯೋ ಮೊನ್ನೆಯೋ ಹಾಕಿದಂತಿದೆ. ಅದು ನೂರಾರು ವರ್ಷಗಳ ಹಿಂದೆಯೇ ಜೋಡಿಸಿರುವುದು ಎಂಬುದು ತಿಳಿದಾಗ ಅಚ್ಚರಿ ಮೂಡುತ್ತದೆ. ಇಲ್ಲಿ 1940ರ ದಶಕದ ವಿಶೇಷವಾದ ಛಾಯಾಚಿತ್ರಗಳಿವೆ. ಅಂದಿನ ಅವಿಭಜಿತ ಭಾರತವನ್ನು ಆಳುತ್ತಿದ್ದ ವೈಸರಾಯ್‌ನನ್ನು ನೋಡಲು ಕಾಂಗ್ರೆಸ್ ನಾಯಕರು ಬರುತ್ತಿದ್ದುದು ಇಲ್ಲಿಗೇ. ಕಾರೊಂದರಲ್ಲಿ ಗಾಂಧೀಜಿಯವರು ಬಂದು ವೈಸ್‌ರಾಯ್‌ನನ್ನು ಭೇಟಿ ಮಾಡುವ, ಕುದುರೆ ಏರಿ ಜವಾಹರಲಾಲ್ ನೆಹರೂ ಇಲ್ಲಿಗೆ ಬರುವ ದೃಶ್ಯಗಳನ್ನು ಹಳೆಯ ಚಲನಚಿತ್ರ ಪ್ರದರ್ಶನಗಳಲ್ಲಿ, ದೂರದರ್ಶನದಲ್ಲಿ ಅನೇಕ ಬಾರಿ ನೋಡಿದ್ದೆ. ಸಾಲು ಸಾಲು ಐತಿಹಾಸಿಕ ಛಾಯಾಚಿತ್ರಗಳ ನಡುವೆ, ಈ ಅರಮನೆಯಲ್ಲಿ ದೊಡ್ಡದೊಂದು ಟೀಪಾಯಿ ಇದೆ. ಎಲ್ಲವನ್ನೂ ಆಸಕ್ತಿಯಿಂದ ಗಮನಿಸುತ್ತಿದ್ದ ಮತ್ತು ಛಾಯಾಚಿತ್ರಗಳನ್ನು ತೆಗೆಯುತ್ತಿದ್ದ ನನ್ನನ್ನು ಉದ್ದೇಶಿಸಿ, ಸ್ಥಳೀಯನಾದ ನಮ್ಮ ಪ್ರವಾಸಿ ಗೈಡ್ ‘ಸಾಬ್, ಇದರ ಮೇಲೆಯೇ ದೇಶವಿಭಜನೆಯ ಡೀಲ್ ಆದದ್ದು’ ಎಂದ.

indira gandhi

ಕಣ್ಣು ಕತ್ತಲಿಡುವಂತಾಯಿತು. ಸಾವರಿಸಿಕೊಂಡೆ.

ಅರಮನೆಯ ಎದುರಿನ ಹಸಿರು ಹುಲ್ಲುಹಾಸಿನಲ್ಲಿ ತುಂಬ ಹೊತ್ತು ಕುಳಿತೆ. ಗೈಡ್ ಹೇಳಿದ್ದನ್ನು, ಅಲ್ಲಿನ ಕಪ್ಪು ಬಿಳುಪು ಛಾಯಾಚಿತ್ರಗಳನ್ನು, ಇತಿಹಾಸದ ಪರಿಪ್ರೇಕ್ಷ್ಯದಲ್ಲಿ ಜೀರ್ಣಿಸಿಕೊಳ್ಳಲು ಪ್ರಯತ್ನಿಸಿದೆ. ದೈನೇಸಿಗಳಂತೆ ನಡು ಬಗ್ಗಿಸಿ ಕಾಂಗ್ರೆಸ್ಸಿನವರು ಬ್ರಿಟಿಷರಿಗೆ ಬಿನ್ನಹ – ಬೇಡಿಕೆ ಸಲ್ಲಿಸುವುದು, ಅವರು ನಿರಾಕರಿಸುವುದು. ಭಗತ್ ಸಿಂಗ್ – ಚಂದ್ರಶೇಖರ ಆಜಾದ್ – ಸುಭಾಷ್ ಚಂದ್ರಬೋಸ್‌ರಂತಹ ಕ್ರಾಂತಿಕಾರಿಗಳ ಒಂದೊಂದು ಹ್ಞೂಂಕಾರಕ್ಕೆ ಬ್ರಿಟಿಷ್ ಸಾಮ್ರಾಜ್ಯವೇ ನಡುಗಿಹೋಗುವುದು. ಬ್ರಿಟಿಷರ ಒಡೆದು ಆಳುವ ಕುತಂತ್ರಗಳು, ಎಲ್ಲ ಇಲ್ಲಿ ನೆನಪಾಗುತ್ತಹೋದವು. ಬ್ರಿಟಿಷರ ಶಿಸ್ತು, ಯೋಜನಾಬದ್ಧ ಕಾರ್ಯತಂತ್ರಗಳನ್ನು ನಮ್ಮ ಕಾಂಗ್ರೆಸ್ ಪ್ರಭುಗಳು ಕಲಿಯದೇ ಹೋದರೂ, ಅವರ ಒಡೆದು ಆಳುವ ದುಷ್ಟನೀತಿಯನ್ನು ಮಾತ್ರ ಕರಗತ ಮಾಡಿಕೊಂಡರು.

ಗಾಂಧಾರ, ಶ್ರೀಲಂಕಾ, ಬರ್ಮಾ, ನೇಪಾಳ ಮುಂತಾದ ಅನೇಕ ಭೂಭಾಗಗಳು ಎಂದೋ ಕೈಬಿಟ್ಟುಹೋಗಿದ್ದವು. ನಮ್ಮನ್ನು ಆಳಲು ಉದ್ದೇಶಿಸಿದ್ದ ಕಾಂಗ್ರೆಸ್ಸಿನವರಿಗೆ, ಹೇಗೋ ಅಷ್ಟಿಷ್ಟು ಉಳಿಸಿಕೊಂಡು ದೆಹಲಿಯ ಸಿಂಹಾಸನ ಹಿಡಿದರೆ ಸಾಕು ಎನ್ನುವ ಲೆಕ್ಕಾಚಾರ ಮಾತ್ರ. ಮುಸ್ಲಿಂ ಲೀಗ್‌ನ ಮಹಮ್ಮದಾಲಿ ಜಿನ್ನಾ ಹಾಕಿದ ಬೀದಿಯುದ್ಧದ ಬೆದರಿಕೆಗೆ ಹೆದರಿ, ಕಂಗಾಲಾಗಿ ಸೋತು ಶರಣಾದರು. ಪೂರ್ವ ಪಾಕೀಸ್ಥಾನ, ಪಶ್ಚಿಮ ಪಾಕೀಸ್ಥಾನಗಳ ನಿರ್ಮಾಣವಾದರೆ, ಅಲ್ಲಿನ ಕೋಟ್ಯಂತರ ಹಿಂದುಗಳ ಪಾಡು ಏನಾದೀತು ಎಂಬ ಕಾಳಜಿ – ಆತಂಕಗಳಿಗಿಂತ, ತಮ್ಮ ಅಧಿಕಾರದ ಆಸೆ ಹೆಚ್ಚಾಯಿತು. ದೇಶ ಒಡೆಯಬೇಡಿ ಎಂಬ ಪ್ರಾಜ್ಞರ ಮಾತು, ನೆಹರೂ ಗುಂಪಿಗೆ ಅಪಥ್ಯವಾಯಿತು. ಈ ಟೀಪಾಯಿಯ ಮೇಲೆಯೇ ದೇಶವಿಭಜನೆಯ ಒಳಸಂಚು – ಒಳಒಪ್ಪಂದ ಕುದುರಿದ್ದು ಎಂದು ಕೇಳಿದೊಡನೆಯೇ, ಮನಃಪಟಲದ ಮೇಲೆ ಸ್ವಾತಂತ್ರ್ಯಪೂರ್ವ ಭಾರತದ ಇತಿಹಾಸದ ದುಃಖಭರಿತ ದೃಶ್ಯಾವಳಿಯ ಮೆರೆವಣಿಗೆ.

ಕಿವಿಗಳಲ್ಲಿ ಮತೀಯ ಗಲಭೆಗಳ ಕಿವಿಗಡಚಿಕ್ಕುವ ಸದ್ದುಗಳ ಮೊರೆತ. ಇತಿಹಾಸದ ರಕ್ತಸಿಕ್ತ ಪುಟಗಳ ಪರಪರ ಹಾರಾಟ. ಹೆಂಡತಿಯನ್ನು ದಾಳವಾಗಿಯೇ ಉಪಯೋಗಿಸಿದ ಮೌಂಟ್‌ಬ್ಯಾಟನ್, ಹಿಂದು-ವಿರೋಧಿ ನೆಹರೂ, ಹಟಮಾರಿ ಮಹಮ್ಮದಾಲಿ ಜಿನ್ನಾ ಮುಂತಾದವರ ಈ ಕಪ್ಪು ಬಿಳುಪು ಚಿತ್ರಗಳು, ದೇಶವಿಭಜನೆಯ ದಳ್ಳುರಿಗೆ ಸಿಕ್ಕಿ ಹುತಾತ್ಮರಾದ ಬಂಧು ಭಗಿನಿಯರ ಭಾವಚಿತ್ರಗಳ ಸುತ್ತ ಮೂಡಿದ ಕಪ್ಪು ಕಪ್ಪು ಚೌಕಟ್ಟುಗಳಾಗಿ ಬಿಗಿದುಕೊಂಡಂತೆ ಭಾಸವಾಗತೊಡಗಿದವು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ನಮ್ಮ ನಾಳೆಗಳಿಗಾಗಿ ಇಂದು ಜೀವ ತೆತ್ತವರು

ಈ ಅರಮನೆಯ ಹೊರಗೆ ನೇಪಾಳದ ಮಹಾರಾಜರು ವೈಸ್‌ರಾಯ್‌ಗೆ ಉಡುಗೊರೆಯಾಗಿ ನೀಡಿದ ಬೃಹತ್ ಘಂಟೆಯನ್ನು ಸದ್ದು ಮಾಡದಂತೆ ಕಟ್ಟಿಬಿಟ್ಟಿದ್ದಾರೆ.

ಹೇಳಲಾಗದ, ಹೇಳಿಕೊಳ್ಳಲಾಗದ ನೋವನ್ನು, ಸತ್ತುಹೋದ ಆತ್ಮಾಭಿಮಾನವನ್ನು ಅದು ಪ್ರತಿನಿಧಿಸುತ್ತಿದೆಯೇನೋ ಎಂಬಂತೆ ಇಡಿಯ ವಾತಾವರಣದ ಮೌನ ಧ್ವನಿಸುತ್ತಿತ್ತು.


ಅಕ್ಟೋಬರ್ ತಿಂಗಳು. ಬಣ್ಣಬಣ್ಣದ ಹೂವುಗಳು ದಾರಿಯ ಇಕ್ಕೆಲಗಳಲ್ಲಿ ನಗುತ್ತಿದ್ದವು. ಹಿಂತಿರುಗುವ ಹಾದಿ ಇಳಿಜಾರಾಗಿತ್ತು. ಹವೆ ಹಿತವಾಗಿತ್ತು. ಆದರೆ ಇತಿಹಾಸದ ಪುಟಗಳು, ವರ್ತಮಾನದ ದಿಟವಾಸ್ತವಗಳು ಹೇರಿಕೊಂಡಿದ್ದುದರಿಂದ ಮೈಮನಸ್ಸುಗಳು ಭಾರವೆನಿಸುತ್ತಿದ್ದವು. ಈ ಅರಮನೆಯಾಗಲೀ, ಶಿಮ್ಲಾ ಒಪ್ಪಂದದ ಆ ಕಟ್ಟಡವಾಗಲೀ, ಕಹಿನೆನಪುಗಳ ಭಾರಕ್ಕೆ ಮತ್ತೊಂದಿಷ್ಟು ನೋವು ತುಂಬುತ್ತ ಹೋದವು.

ಹಿಮಾಲಯದ ಈ ಪರಿಸರದ ಮತ್ತು ಪರಿಸರ-ಸಮತೋಲನದ ಅವೈಜ್ಞಾನಿಕ ಮತ್ತು ಅಸಮರ್ಪಕ ನಿರ್ವಹಣೆಯಿಂದ ಇಂದು ಶಿಮ್ಲಾ – ಮನಾಲಿಗಳ ಈ ಅತಿಸುಂದರ ಭಾಗದ ಸೇತುವೆಗಳು, ಮನೆಗಳು, ಅಷ್ಟೇಕೆ, ಜನಜೀವನವೇ ಕುಸಿಯುತ್ತಿದೆ.

ಭಾರತದ ಕುಸಿಯುವಿಕೆಯೂ ಆ ಕುಖ್ಯಾತ ಟೀಪಾಯಿಯ ಮೇಲೆ ಡೀಲ್ ಆದಾಗಲೇ ಪ್ರಾರಂಭವಾಯಿತೋ ಏನೋ?

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಸ್ವಾತಂತ್ರ್ಯ ದಿನ ಆಚರಿಸುವ ನೈತಿಕತೆ ಇವರಿಗಿದೆಯೇ?

Exit mobile version