Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ

nanna desha nanna dani column

ಈ ಅಂಕಣವನ್ನು ಇಲ್ಲಿ ಆಲಿಸಿ:

http://vistaranews.com/wp-content/uploads/2024/05/ANM-Vistaranews-7th-May-2024-China-Translation.mp3

ನನ್ನ ದೇಶ ನನ್ನ ದನಿ ಅಂಕಣ: ಅನುವಾದ ಮತ್ತು ಭಾಷಾಂತರ ಕ್ಷೇತ್ರಗಳ ಮಹತ್ತ್ವವೇ ನಮಗೆ ತಿಳಿಯದು. ಸಾಮಾನ್ಯರಿರಲಿ, ವಿಶ್ವವಿದ್ಯಾಲಯಗಳಲ್ಲಿ ವಿರಾಜಮಾನರಾಗಿರುವ ಬಹುತೇಕ ಪ್ರಭೃತಿಗಳಿಗೂ ತಿಳಿಯದು. ಭಾಷಾಂತರ ಕ್ಷೇತ್ರದ ಆಳ – ಅಗಲಗಳ ಸರಿಯಾದ ಅಂದಾಜೇ ನಮಗಿಲ್ಲ. ಕಳೆದ ಆರೇಳು ದಶಕಗಳಲ್ಲಿ ಇಂಗ್ಲಿಷ್ ಭಾಷೆ ಮತ್ತು ರೋಮನ್ ಲಿಪಿಗಳ ಅಟ್ಟಹಾಸ, ಅಬ್ಬರಗಳ ಮಹಾಪೂರದಲ್ಲಿ ಭಾರತೀಯ ಭಾಷೆಗಳು ಸೊರಗುತ್ತಿವೆ, ನಿಧಾನವಾಗಿ ನೇಪಥ್ಯಕ್ಕೂ ಸೇರುತ್ತಿವೆ. ಇನ್ನೂ ಹೆಚ್ಚಿನ ದುರಂತವೆಂದರೆ, ನಮ್ಮ ಸೋ ಕಾಲ್ಡ್ ಶಿಕ್ಷಣ ತಜ್ಞರಿಗೆ ಇದರ ಅಂದಾಜೂ ಆಗುತ್ತಿಲ್ಲ. ಇತ್ತೀಚಿನ ಒಂದೆರಡು ದಶಕಗಳಲ್ಲಿ, ಸಂವಾದ – ಚರ್ಚೆ – ಉಪನ್ಯಾಸಮಾಲೆ – ಎಲ್ಲವೂ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಎಂಬಂತಾಗಿವೆ. ಈ ಪಿಡುಗು ಇನ್ನಷ್ಟು ಮುಂದುವರಿದು ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮೊದಲ್ಗೊಂಡು, ಶಾಲಾ ಕಾಲೇಜುಗಳ ವಿದ್ಯಾರ್ಥಿ ಸಂಘಗಳ ಕಾರ್ಯಕ್ರಮಗಳನ್ನೂ ಇಂಗ್ಲಿಷ್ ಭಾಷೆ ಆವರಿಸಿಕೊಂಡುಬಿಟ್ಟಿದೆ. ಇನ್ನು ಇಡೀ ದೇಶದ ಬೌದ್ಧಿಕ – ಶೈಕ್ಷಣಿಕ ಕ್ಷೇತ್ರಗಳು, ಇಂಗ್ಲಿಷ್ ಭಾಷೆ – ಇಂಗ್ಲಿಷ್ ಮಾಧ್ಯಮಗಳ ಉಪೋತ್ಪನ್ನಗಳಾಗಿ ಹೋಗಿರುವುದು, ಈ ಎಲ್ಲಾ ಅಪಸವ್ಯಗಳಿಗೆ ಕಲಶವಿಟ್ಟಂತಾಗಿದೆ.

ಪ್ರಾಚೀನ ಭಾರತ, ಅಷ್ಟೇಕೆ, ಪ್ರಾಚೀನ ಜಗತ್ತಿನ ಬಹುಪಾಲು ಆಳರಸರಿಗೆ ಭಾಷಾಂತರ ಕ್ಷೇತ್ರದ ಮಹತ್ತ್ವ ತಿಳಿದಿತ್ತು. ಭಾಷೆಗಳನ್ನು ಯಾರೂ ಸಮಸ್ಯೆಯನ್ನಾಗಿ ಮಾಡಿಕೊಂಡಿರಲಿಲ್ಲ. ಹಿಂದೀ – ತಮಿಳು ಭಾಷೆಗಳನ್ನು ಮತ್ತು ಭಾಷಿಕರನ್ನು ದ್ವೇಷಿಸುವ ನಮ್ಮ ಇಂದಿನ ಯುಗಮಾನದ ಅವಿವೇಕ ಅಂದಿನವರಿಗೆ ಇರಲಿಲ್ಲ. ನಾಲ್ಕೈದು ದಶಕಗಳ ಹಿಂದೆ ಬಂಗಾಳಿ, ತಮಿಳು, ತೆಲುಗು, ಮರಾಠೀ ಮುಂತಾದ ಭಾಷೆಗಳಿಂದ ನೇರವಾಗಿ ಅನುವಾದ ಮಾಡುವವರು ನಮ್ಮಲ್ಲಿಯೇ ಇದ್ದರು. ಈಗ ವಿಚಿತ್ರವೆಂದರೆ, ಭಾರತೀಯ ಭಾಷೆಗಳ ನಡುವಣ ಕೊಡುಕೊಳ್ಳುವಿಕೆಗೂ ಇಂಗ್ಲಿಷ್ ಭಾಷೆಯು ಅನಿವಾರ್ಯ ಮಾಧ್ಯಮ ಎಂಬಂತಾಗುತ್ತಿದೆ. ಇದಕ್ಕಿಂತ ದೊಡ್ಡ ದುರಂತವಿನ್ನೇನು ಇದ್ದೀತು!

ಸಾವಿರಾರು ವರ್ಷಗಳ ನಿಜೇತಿಹಾಸಾಧ್ಯಯನ ನಮ್ಮ ದಿಗ್ಭ್ರಮೆಗೆ ಕಾರಣವಾಗುತ್ತದೆ. ನೋಡಿ, ನಮಗೆ ಯುವಾನ್ ಚ್ವಾಂಗ್ (ಇದು ಸರಿಯಾದ ಉಚ್ಚಾರಣೆ, ಹಿಂದೆ ಹ್ಯೂ ಎನ್ ತ್ಸಾಂಗ್ ಎನ್ನಲಾಗುತ್ತಿತ್ತು) ಫಾಹಿಯಾನ್ ಮಾತ್ರ ಗೊತ್ತು. ಅವರೆಲ್ಲ ಚೀನಾ ದೇಶದಿಂದ ಇಲ್ಲಿಗೆ ಬಂದು ಜ್ಞಾನಸಂಪತ್ತನ್ನು ಅಲ್ಲಿಗೆ ಕೊಂಡೊಯ್ದವರು. ಅವರು, ಅಂತಹವರು ಭಾಷಾಂತರದಿಂದ ಅದ್ಭುತವಾದ ಸಂಪತ್ತನ್ನು ಸಂಗ್ರಹಿಸಿದರು ಮತ್ತು ಅವರ ದೇಶದಲ್ಲಿ ಕಾಪಿಟ್ಟುಕೊಂಡರು. ನಿಜೇತಿಹಾಸದ ಇನ್ನಷ್ಟು ವಿವರಗಳು ಅಕ್ಷರಶಃ ನಮ್ಮನ್ನು ದಿಗ್ಭ್ರಮೆಗೊಳಿಸುತ್ತವೆ. ಇಲ್ಲಿಂದ ಅಲ್ಲಿಗೆ ಹೋಗಿ ಭಾಷಾಂತರ ಮಾಡಿದ ಭಾರತೀಯ ಮೂಲದ ವಿದ್ವಾಂಸರ ವಿವರಗಳು ಸಹ ದಿಕ್ಸೂಚಿಯಾಗಿವೆ.

ಸಾಮಾನ್ಯ ಯುಗದ ಮೊದಲನೆಯ ಶತಮಾನದಲ್ಲಿ (1st Century of Common Era) ಚೀನಾ ದೇಶದ ಸಮ್ರಾಟ ಮಿಂಗ್-ತಿ ಬೌದ್ಧ ಸಿದ್ಧಾಂತದ ಅಧ್ಯಯನಕ್ಕಾಗಿ 18 ಜನರ ತಂಡವನ್ನು ಭಾರತಕ್ಕೆ ಕಳುಹಿಸಿದ. ಅವರು ಇಲ್ಲಿಂದ ದೊಡ್ಡ ಸಂಖ್ಯೆಯ ಗ್ರಂಥಗಳನ್ನು ಪ್ರತಿ ಮಾಡಿಕೊಂಡು, ಅನುವಾದಿಸಿಕೊಂಡು ತೆಗೆದುಕೊಂಡುಹೋದರು ಮತ್ತು ಕಶ್ಯಪ ಮಾತಂಗ ಮತ್ತು ಧರ್ಮರತ್ನ ಎಂಬ ಬೌದ್ಧ ವಿದ್ವಾಂಸರನ್ನೂ ಕರೆದುಕೊಂಡುಹೋದರು. ಕಶ್ಯಪರು ಆಗ ಗಾಂಧಾರದಲ್ಲಿದ್ದರು (ಗಾಂಧಾರ ಎಂದರೆ ಇಂದಿನ ಆಫಘನಿಸ್ತಾನ. ಅದು ಇಸ್ಲಾಂ ಆಕ್ರಮಣಕ್ಕೆ ಮುಂಚೆ ಸಾವಿರಾರು ವರ್ಷಗಳ ಕಾಲ ಬೌದ್ಧ ಧರ್ಮಕ್ಕೆ ಹೆಸರಾಗಿತ್ತು). ಚೀನಾ ದೇಶದ ತರ್ಕೆಸ್ತಾನ್ ಪ್ರದೇಶದ ಪರ್ವತಗಳನ್ನು ಮತ್ತು ಗೋಬೀ ಮರುಭೂಮಿಯನ್ನು ದಾಟಿಹೋಗಲು ಕಶ್ಯಪರು ಪ್ರಯಾಸಪಡಬೇಕಾಯಿತು. ಆದರೆ, ಅವರ ಆ ಪರಿಶ್ರಮದ ಭೇಟಿಯ ಕಾರಣದಿಂದಲೇ ಅನಂತರದ ಅವಧಿಯಲ್ಲಿ, ಪ್ರಾಚೀನ ಭಾರತದ ವಿಶ್ವವಿದ್ಯಾಲಯಗಳಿಂದ ನೂರಾರು ಜನ ವಿದ್ವಾಂಸರು ಚೀನಾ ದೇಶದಲ್ಲಿಯೇ ಕುಳಿತು ಭಾಷಾಂತರ ಮಾಡುವಂತಹ ವ್ಯವಸ್ಥೆ ಬೆಳೆಯಲು ಸಾಧ್ಯವಾಯಿತು. ಅಗಾಧ ಪ್ರಮಾಣದ ಸಂಸ್ಕೃತ ಗ್ರಂಥಗಳನ್ನು ಅವರೆಲ್ಲ ಪ್ರತಿ ಮಾಡಿಕೊಂಡು ಇಲ್ಲಿಂದ ತೆಗೆದುಕೊಂಡುಹೋದರು. ಹಾಗೆ ಹೋದ ವಿದ್ವಾಂಸರಲ್ಲಿ ಸಂಘವರ್ಮ, ಧರ್ಮಸತ್ಯ, ಧರ್ಮಕಾಲ, ಮಹಾಬಲ, ವಿಘ್ನ, ಧರ್ಮಫಲ, ಕಲಾಸಿವಿ, ಕಲಾರುಚಿ ಮತ್ತು ಲೋಕರುಚಿ ಅವರು ಪ್ರಮುಖರಾದವರು.

ಆಗ ಕಾಶ್ಮೀರವೂ ಪ್ರಾಚೀನ ಭಾರತದ ಬಹಳ ದೊಡ್ಡ ಬೌದ್ಧ ಅಧ್ಯಯನ ಕೇಂದ್ರವಾಗಿತ್ತು. ಕಾಶ್ಮೀರದ ರಾಜವಂಶಕ್ಕೆ ಸೇರಿದ ಗುಣವರ್ಮರು ತಮ್ಮ ಪಾಂಡಿತ್ಯಕ್ಕೇ ಹೆಸರಾಗಿದ್ದರು. ಅವರು ಮೊದಲು ಶ್ರೀಲಂಕಾ ಮತ್ತು ಜಾವಾ ದೇಶಗಳಿಗೆ ಹೋಗಿ ಖ್ಯಾತರಾದರು. ಗುಣವರ್ಮರನ್ನು ಚೀನಾ ದೇಶದ ಚಕ್ರವರ್ತಿ ಆಹ್ವಾನಿಸಿದ. ಅಷ್ಟೇ ಅಲ್ಲ, ನಾಂಕಿಂಗ್ ಎಂಬ ಪಟ್ಟಣಕ್ಕೆ ಹೋಗಿ ಸ್ವತಃ ಗುಣವರ್ಮರನ್ನು ಎದುರುಗೊಂಡ. ಅವರ ಶಿಷ್ಯನೂ ಆದ. ಅವರಿಗಾಗಿ ಒಂದು ಬೌದ್ಧ ದೇವಾಲಯವನ್ನೂ ನಿರ್ಮಿಸಿದ. ಗುಣವರ್ಮರಂತೆಯೇ ಕಾಶ್ಮೀರದಿಂದ ಚೀನಾ ದೇಶಕ್ಕೆ ಹೋದ ವಿದ್ವಾಂಸರೆಂದರೆ ಬುದ್ಧಯಶಸ್, ಧರ್ಮಯಶಸ್, ಧರ್ಮಕ್ಷೇಮ, ಬುದ್ಧಜೀವ ಮತ್ತು ಧರ್ಮಮಿತ್ರ. ಈ ವಿವರಗಳು ಅದೆಷ್ಟು ಸಂತೋಷನೀಡುತ್ತವೆ ಎಂದರೆ, ನೋಡಿ, ದಕ್ಷಿಣ ಭಾರತದಿಂದಲೂ ಹಲವಾರು ವಿದ್ವಾಂಸರು ಚೀನಾ ದೇಶಕ್ಕೆ ಹೋದರು. ಹಾಗೆ ಹೋದ ಧರ್ಮರುಚಿ ಇಪ್ಪತ್ತು ವರ್ಷಗಳ ಕಾಲ (ಸಾಮಾನ್ಯ ಯುಗದ 693ರಿಂದ 713) ಚೀನಾ ದೇಶದಲ್ಲಿದ್ದು, ದಾಖಲೆ ಪ್ರಮಾಣದ ಐವತ್ಮೂರು ಗ್ರಂಥಗಳನ್ನು ಭಾಷಾಂತರಿಸಿದರು. ಚೀನೀ ಭಾಷೆಗೆ ವ್ಯವಸ್ಥಿತವಾದ ವ್ಯಾಕರಣವಿಲ್ಲ, ಒಂದು ಪದವನ್ನು ಒಂದು ಅಕ್ಷರವೋ – ಒಂದು ಚಿಹ್ನೆಯೋ ಪ್ರತಿನಿಧಿಸಿಬಿಡುತ್ತದೆ, ಎನ್ನುವ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತವಾದ ಸಂಸ್ಕೃತ ಮತ್ತು ಇನ್ನಿತರ ಭಾರತೀಯ ಭಾಷೆಗಳಿಂದ ಅನುವಾದಿಸುವುದು ಅದೆಷ್ಟು ಶ್ರಮದಾಯಕ, ಕ್ಲಿಷ್ಟಕರ ಎಂಬುದನ್ನು ನಾವಿಲ್ಲಿ ಅರ್ಥಮಾಡಿಕೊಳ್ಳಬೇಕಿದೆ. ಭಾಷಾಂತರದ ಆಯಾಮವೇ ಹಾಗೆ. ಸಂಸ್ಕೃತಿಗಳ – ರೀತಿನೀತಿಗಳ ವ್ಯತ್ಯಾಸ ಮತ್ತು ಅಂತರಗಳೂ ಪ್ರಮುಖ ಪಾತ್ರ ವಹಿಸುತ್ತವೆ.

ಬಹಳ ಮುಖ್ಯವಾದ ಅಂಶವೊಂದನ್ನು ಇಲ್ಲಿ ಪ್ರಸ್ತಾಪಿಸಬೇಕಿದೆ. ಜ್ಞಾನದ ಸಂಪತ್ತನ್ನು ವಿವಿಧ ಸಮುದಾಯಗಳಿಗೆ, ಅನೇಕ ದೇಶಗಳಿಗೆ ಹಂಚಲು ನೀಡಲು ಭಾಷಾಂತರದ ಇಂತಹ ಪ್ರಮುಖ ಆಯಾಮಕ್ಕೆ ರಾಜಾಶ್ರಯ ಇತ್ತು, ಇರಬೇಕು ಎನ್ನುವುದನ್ನು ಸಹ ನಾವಿಲ್ಲಿ ಗಮನಿಸಬೇಕಿದೆ. ಭಾರತ, ಚೀನಾ ಮುಂತಾದ ದೇಶಗಳಲ್ಲಿ ಅನೇಕ ರಾಜರು ಪ್ರೋತ್ಸಾಹ ನೀಡಿದುದರಿಂದಲೇ ಜ್ಞಾನ ಪರಂಪರೆ ಮುಂದುವರಿಯಲು ಮತ್ತು ಉಳಿದುಕೊಂಡು ಬರಲು ಸಾಧ್ಯವಾಯಿತು.

ಕಳೆದ ಎರಡು ಶತಮಾನಗಳಲ್ಲಿ ಭಾರತದ ಜ್ಞಾನಸಂಪತ್ತನ್ನು ಕೊಳ್ಳೆಹೊಡೆಯಲು ಬ್ರಿಟಿಷರು ಏನೇನು ಬೇಕೋ ಅಷ್ಟನ್ನೂ ಮಾಡಿದರು. ಬ್ರಿಟಿಷರ ಮೂಗಿನ ನೇರಕ್ಕೆ ಅನೇಕ ಭಾಷಾಂತರಗಳೂ ಆದವು. ಆದರೆ ಅನಂತರದ ಕಾಲಾವಧಿಯಲ್ಲಿ ಭಾಷಾಂತರಕ್ಕೆ ಸಿಕ್ಕಬೇಕಾದ ಪ್ರಾಮುಖ್ಯ ಸಿಕ್ಕಲೇ ಇಲ್ಲ. ಕನ್ನಡದ ವಿದ್ವಲ್ಲೋಕದಲ್ಲಿಯೂ “ಅನುವಾದವೇ, ಒಂದು ಡಿಕ್ಷನರಿ ಇದ್ದರಾಯಿತು” ಎಂಬಂತಹ ಔದಾಸೀನ್ಯ. ಹಾಗೆಂದೇ, ಕನಿಷ್ಠ ಎಂಬತ್ತು ಪ್ರತಿಶತ ಅನುವಾದಗಳು ಕಳಪೆ ಗುಣಮಟ್ಟದವಾಗಿಬಿಟ್ಟಿವೆ. ಇನ್ನು ಪ್ರಶಸ್ತಿ, ಸ್ಥಾನಮಾನಗಳನ್ನು ಅನುವಾದಕರು ನಿರೀಕ್ಷಿಸುವಂತೆಯೇ ಇಲ್ಲ. ಒಂದೋ ಎರಡೋ ಕು-ಕವನಗಳನ್ನು ಬರೆದವರು ತಾವು ಬರೆದ ಕವನಗಳಿಗಿಂತ ಹೆಚ್ಚು ಸಂಖ್ಯೆಯ ಪ್ರಶಸ್ತಿಗಳನ್ನು ಗಳಿಸಿಬಿಡುತ್ತಾರೆ. ಕನ್ನಡದಲ್ಲಿ “ಕುವೆಂಪು ಭಾಷಾ ಭಾರತಿ ಪ್ರಾಧಿಕಾರ”ವು, ಭಾಷಾಂತರಕ್ಕೆ ಒಳ್ಳೆಯ ಸಂಭಾವನೆಯನ್ನು ಕೊಡುತ್ತಿರುವುದು ಸ್ವಾಗತಾರ್ಹವೇ ಆದರೂ, ಮುಖ್ಯ ವಿಷಯ ಅದಲ್ಲ. ನಮ್ಮ ಪರಂಪರೆಯ ಹಾಗೂ ಅನೇಕ ಪ್ರಮುಖ ಗ್ರಂಥಗಳ ಸಮರ್ಥ ಮತ್ತು ಅಧಿಕೃತ ಅನುವಾದಗಳು ಆಗಬೇಕಿದೆ. ಅದು ಬರಿಯ ಸಂಭಾವನೆಯ ಸಂಗತಿಯನ್ನು ಮೀರಿದುದು. ಕೆಲವು ಗ್ರಂಥಗಳ ಅನುವಾದಕ್ಕೆ ಪ್ರತ್ಯೇಕ ಆದ್ಯತೆಯನ್ನೇ ನೀಡಬೇಕಾಗುತ್ತದೆ ಮತ್ತು ಬರಿಯ ಸಂಭಾವನೆ ಸಾಲದೆಹೋಗುತ್ತದೆ. ಈ ಕಾರ್ಯಕ್ಕೆಂದೇ ಪೂರ್ಣಾವಧಿ ಭಾಷಾಂತರಕಾರರ ನೇಮಕವಾಗಬೇಕಾಗಿದೆ.

ಹಿಂದೆ ರಾಜಾಶ್ರಯ ಇದ್ದ ಹಾಗೆ, ಈಗ ಸರ್ಕಾರೀ ಮತ್ತು ಸೇವಾ ಸಂಸ್ಥೆಗಳು ಪೂರ್ಣಾವಧಿ ಭಾಷಾಂತರಕಾರರನ್ನೇ ನೇಮಿಸಿಕೊಂಡು ಈ ಕಾರ್ಯವನ್ನು ಕೈಗೊಳ್ಳಬೇಕು. ಆಗ ಮಾತ್ರ ನಮ್ಮ ಪರಂಪರೆ ಮತ್ತು ನಿಜ-ಇತಿಹಾಸ ಗ್ರಂಥಗಳನ್ನು ಉಳಿಸಿಕೊಳ್ಳಲು ಸಾಧ್ಯ. ಹಾಗಾದಾಗ ಮಾತ್ರವೇ, ಪರೋಕ್ಷವಾಗಿ ಎಲ್ಲ ಭಾರತೀಯ ಭಾಷೆಗಳನ್ನೂ ಉಳಿಸಲು, ಉಳಿಸಿಕೊಳ್ಳಲು ಸಾಧ್ಯ.

ಅದೆಷ್ಟು ಪ್ರಮಾಣದಲ್ಲಿ ಮಹತ್ತ್ವದ ಗ್ರಂಥಗಳು ಬೇರೆ ಬೇರೆ ಭಾಷೆಗಳಲ್ಲಿ ಬರಬೇಕಾಗಿವೆ ಎಂದರೆ, ಭಾರತಾದ್ಯಂತ ಹತ್ತಾರು ಸಾವಿರ ಪೂರ್ಣಾವಧಿ ಭಾಷಾಂತರಕಾರರ ಅಗತ್ಯವಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಆ ಕರಾಳ ದಿನಗಳನ್ನು ನೆನಪಿಸಿ ಅಂತರಂಗ ಕಲಕುವ ಬುಗುರಿ

ವಿಚಿತ್ರ ನೋಡಿ. ಅಮೆರಿಕಾ, ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳ ದರೋಡೆಕಾರರಿಗೆ ನಮ್ಮ ಪ್ರಾಚೀನ ಗ್ರಂಥಗಳ ನಿಜ-ಮೌಲ್ಯ ಗೊತ್ತಿತ್ತು. ಈ ಮೂರೂ ದೇಶಗಳ ವಿದ್ವಾಂಸರು ಒಟ್ಟಾಗಿ ಕುಳಿತು, ಸಾಮಾನ್ಯ ಯುಗದ 17 – 18ನೆಯ ಶತಮಾನಗಳಲ್ಲಿ, ನಮ್ಮ “ಸೂರ್ಯ ಸಿದ್ಧಾಂತ” ಗ್ರಂಥವನ್ನು ಅನುವಾದಿಸಿಕೊಂಡು ಹೋದರು. ಖಗೋಳ ಶಾಸ್ತ್ರದ ಆ ಅಮೌಲ್ಯ ಗ್ರಂಥದ ಪ್ರಮುಖ ವೈಜ್ಞಾನಿಕ ಅಂಶಗಳನ್ನು ಅವರು ಬಳಸಿಕೊಂಡರು. ಮೆಕಾಲೆ ಹುಟ್ಟುಹಾಕಿದ ನಮ್ಮ ದೇಶದ ಇಂದಿನ ವಿಕೃತ ಶಿಕ್ಷಣ ವ್ಯವಸ್ಥೆ ಹೇಗಿದೆಯೆಂದರೆ, ಇಂದು ನಮ್ಮ ವಿಶ್ವವಿದ್ಯಾಲಯಗಳ ಮಹಾಶಯರಿಗೆ “ಸೂರ್ಯ ಸಿದ್ಧಾಂತ”ದ ಬಗೆಗೆ ಕೇಳಿದರೆ, ಅವರು “ಅದು ಬೆಕ್ಕೋ – ನಾಯಿಯೋ ಇರಬಹುದು” ಎಂದಾರು. ಕಮ್ಯೂನಿಸ್ಟರು ಅವರ ತಲೆಗೆ ತುಂಬಿರುವಂತೆ, ಪ್ರಾಚೀನ ಭಾರತವೆಂದರೆ ಅವರ ಪಾಲಿಗೆ “ಸತೀ ಸಹಗಮನ, ಅಸ್ಪೃಶ್ಯತೆ, ಜಾತೀಯತೆ, ಮೂಢ ನಂಬಿಕೆಗಳು, ಭೇದಭಾವ, ಶೋಷಣೆ, ಇತ್ಯಾದಿ” ಮಾತ್ರ!

ಅತ್ಯಂತ ನಿರುಪಯುಕ್ತವಾದ ಕೆಮಿಸ್ಟ್ರಿ (ಶಾಲಾ ಕಾಲೇಜುಗಳಲ್ಲಿ ನಾನೂ ಕೆಮಿಸ್ಟ್ರಿ ವಿದ್ಯಾರ್ಥಿಯೇ. ಅದರಿಂದ ಮೂರುಕಾಸಿನ ಪ್ರಯೋಜನವೂ ಇಲ್ಲವೆಂಬುದನ್ನು, ಕಳೆದ ಅರ್ಧ ಶತಮಾನದಲ್ಲಿ ಅರ್ಥ ಮಾಡಿಕೊಂಡಿದ್ದೇನೆ) ಮುಂತಾದವನ್ನು ಕೈಬಿಟ್ಟು, ಆಗಬೇಕಾದ ವಿಭಾಗಗಳಲ್ಲಿ ಆಗಬೇಕಾದ ಕೆಲಸಗಳಿಗೆ ಆದ್ಯತೆ ಕೊಟ್ಟರೆ, ನಮ್ಮ ವಿಶ್ವವಿದ್ಯಾಲಯಗಳೂ ಅರ್ಥಪೂರ್ಣ ಕೊಡುಗೆ ನೀಡಬಹುದು.

ಇಲ್ಲಿ ಇನ್ನೂ ಒಂದು ಪ್ರಮುಖ ಸಂಗತಿಯನ್ನು ಪ್ರಸ್ತಾಪಿಸಬಹುದು. ಮೇಲೆ ಉಲ್ಲೇಖಿಸಿದ ಉದಾಹರಣೆಗಳು, ಮತಧರ್ಮಗಳ ಶಾಸ್ತ್ರಗ್ರಂಥಗಳ ಅನುವಾದಕ್ಕೆ ಸಂಬಂಧಿಸುತ್ತವೆ, ಅದರ ಹಿಂದೆ ಧರ್ಮಶ್ರದ್ಧೆಯ ಆಯಾಮವಿದೆ ಎಂದು ಕೆಲವರು ಮೂಗು ಮುರಿಯಬಹುದು. ಚೀನಾ ದೇಶದ ಈ ಮೇಲಿನ ಯೋಜನೆಗಳಲ್ಲಿ, ಅವರಿಗೆ ಜೊತೆಜೊತೆಯಲ್ಲಿಯೇ ತರ್ಕಶಾಸ್ತ್ರ, ಔಷಧಶಾಸ್ತ್ರ, ಆಯುರ್ವೇದ ಮುಂತಾದ ಅನೇಕ ಜ್ಞಾನಶಾಖೆಗಳ ಲಾಭವೂ ಆಯಿತು. ನಮ್ಮ ಭಾರತ-ಮೂಲದ ಗಣಿತ, ಅಂಕಿಗಳು, ಕ್ಯಾಲ್ಕುಲಸ್, ಬುದ್ಧಿವಂತರ ಆಟ ಎಂದೇ ಹೆಸರಾದ ಚದುರಂಗದಾಟ (Chess) ಇತ್ಯಾದಿ ಮಹತ್ತ್ವದ ಸಂಗತಿಗಳು ಅರೇಬಿಯಾ ಮೂಲಕ ಯೂರೋಪಿಗೆ ಪರಿಚಯವಾದವು. ಪರೋಕ್ಷವಾಗಿ ಯೂರೋಪಿನಲ್ಲಿ ಆಧುನಿಕ ವಿಜ್ಞಾನದ ವಿಕಾಸ ಸಂಶೋಧನೆಗಳಿಗೆ ಇವೆಲ್ಲಾ ಸಾಧನಗಳಾದವು, ಎಂಬುದನ್ನೂ ನಾವು ಮರೆಯುವಂತಿಲ್ಲ.

ಹೌದು, ಭಾಷಾಂತರ ಕ್ಷೇತ್ರಕ್ಕೆ ಈಗಲಾದರೂ ಆದ್ಯತೆ ದೊರೆಯಬೇಕಿದೆ. ಭಾರತೀಯ ಸಮಾಜದ ಬೌದ್ಧಿಕ ಲೋಕದ ಚುಕ್ಕಾಣಿ ಹಿಡಿದವರು ಈ ನಿಟ್ಟಿನಲ್ಲಿ ತೀವ್ರ ಗಮನ ನೀಡಬೇಕಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಜೈಶಂಕರ್‌ ಕೃತಿ ʻಭಾರತ ಪಥʼ ತೆರೆದಿಡುವ ವಿದೇಶಾಂಗ ಸಂಬಂಧಗಳ ರೋಚಕ ಆಯಾಮ

Exit mobile version