Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಭಾರತೀಯ ಸೈನ್ಯದ ಸ್ವರೂಪ, ಪ್ರಸ್ತುತಿಗಳಲ್ಲಿ ಬದಲಾವಣೆ ಬೇಕಿದೆ

indian military

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2024/01/ANM-VistaraNews-25th-Jan-2024-Republic-day.mp3

ಯಾರಾದರೂ ವಿದೇಶೀಯರು ನಮ್ಮ ದೇಶದ ಸಾಂಸ್ಕೃತಿಕ ಅಧ್ಯಯನಕ್ಕೋ – ಸಮಾಜಶಾಸ್ತ್ರೀಯ ವಿಶ್ಲೇಷಣೆಗೋ ಬಂದರೆ, ಕಕ್ಕಾಬಿಕ್ಕಿಯಾಗುತ್ತಾರೆ. ವಿದೇಶೀ ಮೂಲದವರೊಬ್ಬರು, ಇಲ್ಲಿನ ರೀತಿ-ನೀತಿ, ಭಾಷೆಗಳು, ವಸ್ತ್ರ-ವೈವಿಧ್ಯ, ಪದ್ಧತಿಗಳು, ಅಷ್ಟೇಕೆ ದೇಶಾದ್ಯಂತ ರಸ್ತೆರಸ್ತೆಗಳಲ್ಲಿ ವಿರಾಜಿಸುವ ಇಂಗ್ಲಿಷ್ ನಾಮಫಲಕಗಳ ಬಗೆಗೆ ಪ್ರಶ್ನಿಸಿದರೆ, ಆಕ್ಷೇಪಿಸಿದರೆ ನಾವು ದಿಗ್ಭ್ರಮೆಗೊಳಗಾಗುತ್ತೇವೆ, ದಿಕ್ಕೆಟ್ಟೂಹೋಗುತ್ತೇವೆ. ನಾವೂ ಗೊಂದಲದಲ್ಲಿ ಮುಳುಗುತ್ತೇವೆ.

ಅವರು “ಹತ್ತು ಸಾವಿರ ವರ್ಷಗಳ ಪರಂಪರೆ ನಿಮ್ಮದೆನ್ನುತ್ತೀರಿ, ನಿಮ್ಮ ಬಹುಪಾಲು ನಾಮಫಲಕಗಳು ನಿಮ್ಮ ಭಾಷೆಗಳಲ್ಲಿರದೇ, ವಿದೇಶೀ (ಇಂಗ್ಲಿಷ್) ಭಾಷೆಯೊಂದರಲ್ಲಿವೆ! ನಿಮ್ಮ ನ್ಯಾಯಾಲಯಗಳು, ನಿಮ್ಮ ವಿಶ್ವವಿದ್ಯಾಲಯಗಳು, ನಿಮ್ಮ ಆಡಳಿತ ಕಚೇರಿಗಳು, ನಿಮ್ಮ ದೇಶದ ಆರ್ಥಿಕ ಸಂಸ್ಥೆಗಳು ನಿಮ್ಮ ಭಾಷೆಗಳಲ್ಲಿ ನಿರ್ವಹಣೆಯನ್ನೇ ಮಾಡುತ್ತಿಲ್ಲ. ನಿಮ್ಮ ಅನೇಕ ರಾಜ್ಯಗಳು ಪರಸ್ಪರ ಸಂವಾದಕ್ಕೆ, ವ್ಯವಹಾರಕ್ಕೆ ವಿದೇಶೀ ಭಾಷೆಯನ್ನು ಬಳಸುತ್ತಿವೆ. ನಿಮ್ಮ ಎಲ್ಲ ಪ್ರತಿಷ್ಠಿತ ಶಾಲೆಗಳಲ್ಲಿ ಭಾರತೀಯ ಭಾಷೆಗಳೇ ಕಾಣುವುದಿಲ್ಲ. ನಿಮ್ಮ ಪ್ರಭಾವಿ ಪತ್ರಿಕೆಗಳು, ಪ್ರಮುಖ ವಾರ್ತಾವಾಹಿನಿಗಳು ನಿಮ್ಮ ದೇಶಭಾಷೆಗಳಿಂದ ದೂರವಿವೆ. ನಿಮ್ಮ ಭಾರತೀಯ ಸಿನಿಮಾಗಳಲ್ಲಿ ಶೀರ್ಷಿಕೆಗಳು – ಉಪಶೀರ್ಷಿಕೆಗಳು ಇಂಗ್ಲಿಷ್ ಭಾಷೆಯಲ್ಲಿರುತ್ತವೆ. ಏನಾಗಿದೆ ನಿಮಗೆ?” ಎಂದು ಕೇಳಿದರೆ ನಾವೆಲ್ಲ ಅಕ್ಷರಶಃ ನಿರುತ್ತರಕುಮಾರರಾಗುತ್ತೇವೆ.

ನಿಜ, ಏನಾಗಿದೆ ನಮಗೆ?

ಯಾವುದೇ ಒಂದು ದೇಶದ ಸಂರಕ್ಷಣೆ, ಸುರಕ್ಷತೆಗಳ ಹೊಣೆ ಹೊತ್ತ ಸೈನ್ಯವು ಆ ದೇಶದ ಆತ್ಮವಾಗಿರುತ್ತದೆ, ಸ್ವಾಭಿಮಾನದ ಸಂಕೇತವಾಗಿರುತ್ತದೆ. ನಮ್ಮ ಭಾರತೀಯ ಸೈನಿಕರ, ಸೈನ್ಯಾಧಿಕಾರಿಗಳ ನಿಷ್ಠೆ – ತ್ಯಾಗ- ಬಲಿದಾನ – ಕರ್ತವ್ಯಪರತೆಗಳು ಆದರ್ಶಸ್ವರೂಪವಾಗಿವೆ. ಆದರೆ, ಸೈನ್ಯದ ಒಟ್ಟಾರೆ ರೂಪ – ಸ್ವರೂಪಗಳು ಹೇಗಿವೆ? ಪ್ರತಿವರ್ಷ ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ಭರ್ಜರಿ ಮೆರೆವಣಿಗೆ, ಪ್ರದರ್ಶನಗಳು ನಡೆಯುತ್ತವೆ. ಅವು ತುಂಬ ಆಕರ್ಷಕವಾಗಿಯೂ ಇರುತ್ತವೆ. ಭಾರತೀಯ ಸೈನ್ಯದ ಮತ್ತು ಅನೇಕ ಅರೆಸೇನಾ ಪಡೆಗಳ ಪಥಸಂಚಲನವಿರುತ್ತದೆ. ಅಂದು ಎಲ್ಲರ ಗೌರವ-ವಂದನೆ ಸ್ವೀಕರಿಸುವವರು ಅತ್ಯುನ್ನತ ಸಂವೈಧಾನಿಕ ಸ್ಥಾನಮಾನ ಇರುವ ರಾಷ್ಟ್ರಪತಿಗಳು. ಅವರು ಸಶಸ್ತ್ರ ಪಡೆಗಳ ಪದನಿಮಿತ್ತ ಮಹಾ-ದಂಡನಾಯಕರೂ ಆಗಿರುವಂತಹವರು.

ರಾಷ್ಟ್ರಪತಿಗಳಿಗೆ ಹೀಗೆ ಗೌರವ-ವಂದನೆ ಸಲ್ಲಿಸುವಾಗ, ಸದರಿ ಸೇನಾ ರೆಜಿಮೆಂಟಿನ ಸಂಕ್ಷಿಪ್ತ “ಇತಿಹಾಸ”ವನ್ನೂ ತಿಳಿಸಲಾಗುತ್ತದೆ. ಪ್ರತಿಯೊಂದು ರೆಜಿಮೆಂಟ್ ಪ್ರಾರಂಭವಾದ ವರ್ಷ, ಗಳಿಸಿದ ಪ್ರಶಸ್ತಿಗಳು-ಪದಕಗಳು, ಗೆದ್ದ ಯುದ್ಧಗಳು ಇತ್ಯಾದಿ ವಿವರಗಳನ್ನೂ ತಿಳಿಸಲಾಗುತ್ತದೆ. ಅನೇಕ ದಶಕಗಳಿಂದ ಈ ಪ್ರದರ್ಶನವನ್ನು ನೋಡುತ್ತ – ಕೇಳುತ್ತ ಬಂದಿರುವ ನನಗೆ ಪ್ರತಿಬಾರಿಯೂ ವ್ಯಥೆಯಾಗುತ್ತದೆ. ಮೋಸ-ಕುತಂತ್ರಗಳಿಂದ ನಮ್ಮ ದೇಶವನ್ನು ನೂರಾರು ವರ್ಷ ಆಳಿದ, ದೋಚಿದ ಬ್ರಿಟಿಷರು ಪ್ರಾರಂಭಿಸಿದ ರೆಜಿಮೆಂಟುಗಳಿವು. 1947ಕ್ಕೆ ಮೊದಲು, ಈ ರೆಜಿಮೆಂಟುಗಳು ಗೆದ್ದ ಯುದ್ಧಗಳು ನಮ್ಮ ಮೇಲೆಯೇ, ನಮ್ಮ ಸೋದರರ ಮೇಲೆಯೇ ಆದಂತಹುವು. ಈ ರೆಜಿಮೆಂಟುಗಳ ಇತಿಹಾಸದ ಪುಟಗಳಲ್ಲಿ ಭಾರತೀಯರ ರಕ್ತದ ಕಲೆಗಳಿವೆ. ಅಷ್ಟೇಕೆ, ಇಂದಿನ ಭಾರತೀಯ ಸೈನ್ಯದ ಶೂರ-ವೀರ ಸೈನಿಕರ ತಂದೆ, ತಾತಂದಿರ ರಕ್ತದ ಕಲೆಗಳೂ ಅಂಟಿಕೊಂಡಿವೆ.

ಈ ಸೇನಾ-ತುಕಡಿಗಳನ್ನು ಬ್ರಿಟಿಷರು ಕೇವಲ ತಮ್ಮ ಅನುಕೂಲಕ್ಕಾಗಿ ಪ್ರಾರಂಭಿಸಿದರು, ಮಾಡಿಕೊಂಡರು. ನಮ್ಮ ದೇಶದ ಸಾಮಾನ್ಯ ಜನರನ್ನು, ಸ್ವಾತಂತ್ರ‍್ಯ ಹೋರಾಟಗಾರರನ್ನು, ಕ್ರಾಂತಿಕಾರಿಗಳನ್ನು, ದೇಶೀಯ ಸಂಸ್ಥಾನಗಳ ಸೇನಾಪಡೆಗಳನ್ನು ಬಗ್ಗುಬಡಿಯಲು ಈ ಸೈನ್ಯವನ್ನೇ ಬಳಸಿಕೊಂಡರು. ಸೈನ್ಯಾಧಿಕಾರಿಗಳಲ್ಲಿ ಬ್ರಿಟಿಷರು ಗಣನೀಯವಾಗಿದ್ದರೂ, ಸೈನಿಕರು ಬಹುಪಾಲು ಭಾರತೀಯರೇ ಆಗಿದ್ದರು. ಉದಾಹರಣೆಗೆ, 1919ರ ಜಲಿಯನ್‌ವಾಲಾಬಾಗ್ ಹತ್ಯಾಕಾಂಡದಲ್ಲಿ ನಿರಪರಾಧಿಗಳಾದ, ನಿಶ್ಶಸ್ತ್ರರಾದ ಜನರ ಮೇಲೆ ಸೈನ್ಯಾಧಿಕಾರಿ ಡಯರ್‌ನ ಆಜ್ಞೆಯ ಮೇರೆಗೆ ಗುಂಡು ಹಾರಿಸಿದವರು, ಮುಗ್ಧ ಗೂರ್ಖಾ ಸೈನಿಕರು. “ಗುಂಡುಗಳು ಖಾಲಿಯಾದವು, ಇನ್ನಷ್ಟು ಕೊಡಿ” ಎಂದರಂತೆ ಅವರು. ಇಂದು ಗಣರಾಜ್ಯೋತ್ಸವದಲ್ಲಿ, ಗೂರ್ಖಾ ರೆಜಿಮೆಂಟಿನ ಅಥವಾ ಐಟಿಬಿಪಿ (ITBP) ತುಕಡಿಯ “ಇತಿಹಾಸ” ಹೇಳುವಾಗ, ಅದರ ನೂರಾರು ವರ್ಷಗಳ ಸಾಧನೆಯನ್ನು ಉಲ್ಲೇಖಿಸುವಾಗ ಗಮನಿಸಿ ನೋಡುವವರಿಗೆ – ಕೇಳುವವರಿಗೆ ದುಃಖವಾಗದೇ ಇದ್ದೀತೇ?

1947ರಲ್ಲಿ, ಒಂದು ಬಗೆಯ “ಸ್ವಾತಂತ್ರ‍್ಯ”ವನ್ನು ನಾವು ಪಡೆದೆವು, ನಿಜ. ಆ ಸಂಕ್ರಮಣ ಕಾಲದಲ್ಲಿಯೇ, ಆ ನವ-ಪರ್ವದಲ್ಲಿಯೇ, ಆ ಸನ್ನಿವೇಶದ ಬಿಸಿಯ ನಡುವೆಯೇ ಈ ಎಲ್ಲ ಸೇನಾ-ತುಕಡಿಗಳ ಪುನರ್ವಿಂಗಡಣೆ, ಪುನರ್‌ವ್ಯವಸ್ಥೆಗಳು ಆಗಬೇಕಿತ್ತು, ಆಗಲೇಬೇಕಿತ್ತು. ಹಾಗೆ ಆಗಿದ್ದಲ್ಲಿ ಮಾತ್ರವೇ, ಮೇಲೆ ಹೇಳಿದಂತಹ ಆಭಾಸಗಳು ತೊಲಗುತ್ತಿದ್ದವು. 1950ರ ದಶಕದಲ್ಲಿಯಾದರೂ, ಭಾರತೀಕರಣದ ಕೆಲಸ ಆಗಬೇಕಿತ್ತು. ಆಗಲೇ ಇಲ್ಲ.

ಸುಭಾಷ್‌ಚಂದ್ರ ಬೋಸ್‌ರ ಹೋರಾಟ ಮತ್ತು ಎಚ್ಚೆತ್ತ ಭಾರತೀಯ ಸೈನಿಕರೇ ಬ್ರಿಟಿಷರು ತೊಲಗಲು ಮುಖ್ಯ ಕಾರಣರಾದರೂ, ಸ್ವಾತಂತ್ರ‍್ಯದ “ಲಾಭ” ಪಡೆದವರು ಜವಾಹರಲಾಲ್ ನೆಹರೂ ಮತ್ತು ಕಾಂಗ್ರೆಸ್ ಪಕ್ಷದವರು ಮಾತ್ರ.

Republic Day 2023 parade on republic day

ಸುಭಾಷರನ್ನು, ಸರದಾರ್ ಪಟೇಲರನ್ನು ಮತ್ತು ಅಂತಹ ಎಲ್ಲರನ್ನೂ ಗಾಂಧೀಜಿಯವರು ಓಡಿಸಿದರು, ತುಳಿದರು, ಬದಿಗೆ ಸರಿಸಿದರು. ನಿಜ-ಭಾರತದ ಪರಿಚಯವಿರದಿದ್ದ, ಮುಸ್ಲಿಂ ಆಳುಕಾಳು ನಡುವೆಯೇ ಬೆಳೆದ, ಹಿಂದೂ ಧರ್ಮ ಮತ್ತು ಭಾರತೀಯ ಪರಂಪರೆಗಳ ಬಗೆಗೆ ತಿರಸ್ಕಾರವಿದ್ದಂತಹ, ತಮ್ಮ ಮಾನಸಪುತ್ರ ನೆಹರೂ ಅವರನ್ನೇ ಗಾಂಧೀಜಿಯವರು ಸ್ವತಂತ್ರ ಭಾರತದ ಮೊದಲ ಪ್ರಧಾನಮಂತ್ರಿಯಾಗುವಂತೆ ಮಾಡಿದರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಕಾಫಿರರನ್ನು ಬಿಡಿ, ಇಸ್ಲಾಂ ಅನುಸರಿಸುವವರಲ್ಲಿಯಾದರೂ ಸೋದರತ್ವ ಇದೆಯೇ?

ಅಂತಹ ಜವಾಹರಲಾಲ್ ನೆಹರೂ ಅವರು 1947ರ ಆಗಸ್ಟ್ 15ರಂದು “Tryst with Destiny” ಎಂದರು; ಹೊಸ ನಾಡನ್ನು ನಿರ್ಮಿಸೋಣ ಎಂದರು. ಆದರೆ, ವಾಸ್ತವದಲ್ಲಿ ಮೊಘಲರ-ಬ್ರಿಟಿಷರ ಎಲ್ಲ ವಾರಸಿಕೆಯನ್ನೂ, ಹೆಸರುಗಳನ್ನೂ ಹಾಗೆಯೇ ಉಳಿಸಿದರು. ಗುಲಾಮಗಿರಿಯ ಎಲ್ಲ ಸಂಕೇತಗಳೂ ಹಾಗೆಹಾಗೆಯೇ ಉಳಿದುಕೊಂಡವು. ಅಹಮದಾಬಾದ್, ಔರಂಗಾಬಾದ್, ತುಘಲಕಾಬಾದ್, ಹೈದರಾಬಾದ್‌ ಮುಂತಾದ ನೂರಾರು ಹೆಸರುಗಳು ಮುಂದುವರಿದವು. ಭಾರತೀಯ ಮೂಲದ ಯಾವ ಹೆಸರೂ, ಪರಂಪರೆಗಳೂ ಮೇಲೇಳದಂತೆ ಕಟ್ಟೆಚ್ಚರ ವಹಿಸಲಾಯಿತು. ಅಧಿಕಾರ ಲಪಟಾಯಿಸಿದ “ಬ್ರಿಟಿಷರ ಪ್ರೀತಿಪಾತ್ರರು” ಪರ‍್ಮಿಟ್-ಲೈಸೆನ್ಸುಗಳನ್ನು ಮಾರಿಕೊಳ್ಳುತ್ತಾ, ಕಾಳಸಂತೆಯಲ್ಲಿ – ಕಪ್ಪುಹಣ ಸಂಗ್ರಹಣೆಯಲ್ಲಿ ಮುಳುಗಿದರು, ದೇಶವನ್ನೇ ಮುಳುಗಿಸಿದರು. ನೆಹರೂ ಅವರ ಪೋಷಣೆ, ಬೆಂಬಲಗಳನ್ನು ಪಡೆದ ವಾಮಪಂಥೀಯರು ಎಲ್ಲ ಶಿಕ್ಷಣ ಸಂಸ್ಥೆಗಳನ್ನು, ವಿಶ್ವವಿದ್ಯಾಲಯಗಳನ್ನು ಮುಂಡಾಮೋಚಿದರು, ಹಾಳು ಮಾಡಿದರು. ನಾಲ್ಕು ದಶಕಗಳ ಹಿಂದೆ (1977ರಲ್ಲಿ) ಪ್ರಧಾನ ಮಂತ್ರಿಯಾಗಿದ್ದವರೊಬ್ಬರು “ಬ್ರಿಟಿಷರು ಬರುವ ಮುಂಚೆ, ನಾವೊಂದು ರಾಷ್ಟ್ರವೇ ಆಗಿರಲಿಲ್ಲ” (We were never a nation, before British) ಎಂದು ಘೋಷಿಸಿದ್ದರು. ಕಾನ್ವೊಕೇಷನ್ನುಗಳು, ಹುಡ್‌ಗಳು, ನ್ಯಾಯಾಧೀಶರ – ನ್ಯಾಯವಾದಿಗಳ ವಿಚಿತ್ರ ವೇಷಭೂಷಣಗಳು ಹಾಗೆಹಾಗೆಯೇ ಉಳಿದುಕೊಂಡುಬಿಟ್ಟವು. ಬ್ರಿಟಿಷರು ಬಿಟ್ಟು ಹೋದ ಎಲ್ಲ ಅನಿಷ್ಟ ಪದ್ಧತಿಗಳೂ, ವ್ಯವಸ್ಥೆಗಳೂ ಬದಲಾಗಲೇ ಇಲ್ಲ. ಇಂದಿಗೂ ಎಲ್ಲವೂ ಹಾಸ್ಯಾಸ್ಪದವಾಗಿಯೇ ಇವೆ. ಕಮ್ಯೂನಿಸ್ಟರು ವಿಷವುಣಿಸಿ ಬೆಳೆಸಿದ ಶಿಕ್ಷಣ ವ್ಯವಸ್ಥೆಯು ಹೇಗಿದೆಯೆಂದರೆ, ವಿಶ್ವವಿದ್ಯಾನಿಲಯಗಳ ಎಲ್ಲ ಶಿಕ್ಷಣವೇತ್ತರು – ಪ್ರಭೃತಿಗಳು ಜ್ಞಾನದ ಸಂಕೇತವಾದ “ಸರಸ್ವತಿ ವಂದನೆ”ಯನ್ನು ವಿರೋಧಿಸುತ್ತಾರೆ, ಪ್ರತಿಭಟಿಸುತ್ತಾರೆ. ಆದರೆ, ಗುಲಾಮಗಿರಿಯ ಎಲ್ಲ ಅನಿಷ್ಟ ಪದ್ಧತಿಗಳನ್ನು – ರಿವಾಜುಗಳನ್ನು ಭಕ್ತಿಯಿಂದ ಅನುಕರಿಸುತ್ತಾರೆ.

ಎಲ್ಲ ರೆಜಿಮೆಂಟುಗಳನ್ನು, ಎಲ್ಲ ಶಿಕ್ಷಣ ಸಂಸ್ಥೆಗಳನ್ನು, ಎಲ್ಲ ವಿಶ್ವವಿದ್ಯಾಲಯಗಳನ್ನು, ನ್ಯಾಯಾಲಯಗಳನ್ನು ಭಾರತೀಕರಣ ಮಾಡಲು, ಎಲ್ಲೆಡೆ ಸ್ವದೇಶೀ ಛಾಪು ಮೂಡಿಸಲು ಮತ್ತೊಮ್ಮೆ ನಮ್ಮ ಇತಿಹಾಸವು ಇದೀಗ ಸುವರ್ಣಾ ವಕಾಶವೊಂದನ್ನು ಒದಗಿಸಿದೆ. ನಿಜ, ಅಕ್ಷರಶಃ ಬೆಟ್ಟದಷ್ಟು ಸಮಸ್ಯೆಗಳಿವೆ, ಸವಾಲುಗಳಿವೆ. ಆದರೆ, ಸೂಕ್ತ ಅವಕಾಶ ಲಭಿಸುವುದು, ಯುಗಯುಗಗಳಲ್ಲಿ ಒಮ್ಮೆ ಮಾತ್ರ.

ಪ್ರತಾಪ ಸಿಂಹ ದಳ, ಶಿವಾಜಿ ಪಡೆ, ಸಾವರ್ಕರ್ ಸೇನೆ, ಪುಲಿಕೇಶಿ ಪಡೆ, ಸುಭಾಷ್‌ಚಂದ್ರ ಬೋಸ್ ಗಡಿ ರಕ್ಷಣಾ ದಳ, ರಾಣಿ ಅಬ್ಬಕ್ಕ ನೌಕಾ ಪಡೆ….. ಹೀಗೆ ಹೊಸ-ಹೆಸರು, ಹೊಸ-ಇತಿಹಾಸ, ಹೊಸ-ರೂಪ ಪಡೆದ ಭಾರತೀಯ ಸೈನ್ಯವು ನಮ್ಮದಾಗಲಿ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಲೂಟಿ ಮಾಡಿದವರು, ಬೇಟೆಯಾಡಿದವರು ಉದ್ಧಾರಕರಾಗಿ ಹೋದ ʼನಮ್ಮʼ ಇತಿಹಾಸ

Exit mobile version