ಈ ಅಂಕಣವನ್ನು ಇಲ್ಲಿ ಆಲಿಸಿ:
ನನ್ನ ದೇಶ ನನ್ನ ದನಿ ಅಂಕಣ: “ವಸಾಹತುಶಾಹಿ (colonialism) ನಿರ್ಗಮನದ ಅನಂತರವೂ ಒಬ್ಬ ಅದರ ಪರವಾಗಿಯೇ ಮಾತನಾಡುತ್ತಾನೆ, ಎಂದರೆ ವಸಾಹತುಶಾಹಿಯು ತುಂಬ ಪರಿಣಾಮಕಾರಿಯಾಗಿಯೇ ಬೇರೂರಿದೆ ಎಂದರ್ಥ”.
ಅನೇಕ ವರ್ಷಗಳಿಂದ ಈ ಚಿಂತನೆ, ಈ ಮಾತು, ಈ ಸಂಗತಿ ನನ್ನನ್ನು ಕಾಡುತ್ತಲೇ ಇದೆ. ನಿಜ. ನಮ್ಮ ಮೇಲಾದ ಆಕ್ರಮಣಗಳು ಬಹು-ಮುಖೀ. ನಾವು ಶತಾಯಗತಾಯ ಯುದ್ಧಗಳನ್ನು (wars) ಸೋಲಬಾರದು. ಸೋತರೆ ಪ್ರಣಶ್ಯತಿ. ಅಬ್ರಹಾಮಿಕ್ (abrahamic) ಮತಗಳ ವಿನಾಶಕಾರೀ ಆಕ್ರಮಣಗಳನ್ನು, ಧ್ವಂಸ-ವಿಧ್ವಂಸಗಳನ್ನು ಅಧ್ಯಯನ ಮಾಡಿದಾಗ ಮತ್ತು ಇವುಗಳಿಗಿಂತಲೂ ನಮ್ಮಂತಹ ಗುಲಾಮದೇಶಗಳ ಜನರ ಮಾನಸಿಕತೆ – ಅಭಿಪ್ರಾಯಗಳ ಮೇಲಾದ ಭಯಾನಕ ದುಷ್ಪರಿಣಾಮಗಳನ್ನು ನೋಡುವಾಗ, ಹೌದು, ನಾವು ಶತ್ರುಗಳನ್ನು (enemies) ಯಾವ ಕಾರಣಕ್ಕೂ ಔದಾರ್ಯದಿಂದ ಕಾಣಬಾರದಿತ್ತು. ಅವರ “ಭಾಷೆಯಲ್ಲಿಯೇ” ನಾವೂ ಉತ್ತರ ನೀಡಬೇಕಿತ್ತು, ಎನಿಸುತ್ತದೆ. ಶ್ರೀಕೃಷ್ಣನಂತೆ, (SriKrishna) ಆಚಾರ್ಯ ಚಾಣಕ್ಯರಂತೆ (Chanakya) ಸಂಪೂರ್ಣ ಶತ್ರುನಾಶವೇ ನಮ್ಮ ಕಾರ್ಯತಂತ್ರವೂ ಆಗಬೇಕಿತ್ತು, ಅನಿಸುತ್ತದೆ. ಬ್ರಿಟಿಷರು (British) ಮತ್ತು ಅವರ “ಪ್ರೀತಿಪಾತ್ರರು” ಬರೆಸಿರುವ – ಬರೆದಿಟ್ಟಿರುವ ಇತಿಹಾಸ ಪುಸ್ತಕಗಳನ್ನು ನೋಡಿದರೆ, ಇಡೀ ದಕ್ಷಿಣ ಭಾರತವನ್ನು ಈಗಲೂ ನಾಶ ಮಾಡುತ್ತಲೇ ಇರುವ ಅವೈಜ್ಞಾನಿಕವಾದ ಆರ್ಯ – ದ್ರಾವಿಡ (Arya Dravida) ಪೊಳ್ಳು ಸಿದ್ಧಾಂತದ ಪರಿಣಾಮವನ್ನು ನೋಡಿದರೆ ಗಾಬರಿಯಾಗುತ್ತದೆ. ನೋಡಿ, ನಮ್ಮ ದೇಶದ ಶಿಕ್ಷಣ, ಕೃಷಿ, ಉದ್ಯಮಗಳನ್ನು ನಾಶ ಮಾಡಿದ ಬ್ರಿಟಿಷರು, ಬಹಳಷ್ಟು ಭಾರತೀಯರ ದೃಷ್ಟಿಯಲ್ಲಿ ಇಂದಿಗೂ ಆರಾಧ್ಯದೈವಗಳಾಗಿದ್ದಾರೆ, ಉದ್ಧಾರಕರಾಗಿದ್ದಾರೆ! ವಸಾಹತುಶಾಹಿಯ ಅಧ್ಯಾಯ ಮುಗಿದಿದೆ, ನಾವೊಂದು ಸ್ವತಂತ್ರ ರಾಷ್ಟ್ರ, ಎಂದು ನಾವು ಎಷ್ಟೆಷ್ಟು ಬಾರಿ ಹೇಳಿಕೊಂಡರೂ, ವಸಾಹತುಶಾಹಿಯ ಮಾನಸಿಕತೆ – ಅವರ ಬಗೆಗಿನ ಆರಾಧನೆಗಳು ನಮ್ಮೊಳಗೆ ಇದ್ದರೆ, ನಾವಿನ್ನೂ ಗುಲಾಮರಾಗಿಯೇ ಮುಂದುವರಿದಿದ್ದೇವೆ, ಎನಿಸುವುದಿಲ್ಲವೇ?
ಇತಿಹಾಸಕಾರ ಬಾಮನ (ವಾಮನ) ದಾಸ ಬಸು (Baman Das Basu) ಅವರ “ಹಿಸ್ಟರಿ ಆಫ್ ಎಜುಕೇಷನ್ ಇನ್ ಇಂಡಿಯಾ ಅಂಡರ್ ದಿ ರೂಲ್ ಆಫ್ ಈಸ್ಟ್ ಇಂಡಿಯಾ ಕಂಪನಿ” (ಪ್ರಕಟಣೆ 1922) ಕೃತಿಯ ಕೆಲವು ಸಾಲುಗಳನ್ನು ಗಮನಿಸುವಾಗ, ಸಹಜವಾಗಿಯೇ ಕನ್ನಡದ ನಮ್ಮ ನವ್ಯ ಸಾಹಿತಿಗಳ ಮಾತು – ಭಾಷಣಗಳೇ ನೆನಪಾಗುತ್ತವೆ. ನಾಲ್ಕೈದು ದಶಕಗಳ ಹಿಂದೆ ನಮ್ಮಂತಹವರ ಮೇಲೆ ತುಂಬಾ ಪ್ರಭಾವ ಬೀರಿದವರು ಈ ನವ್ಯರು. Of Course, ಅವರೆಲ್ಲಾ ತುಂಬ ಚೆನ್ನಾಗಿ ಮಾತನಾಡುತ್ತಿದ್ದರು, ಆಕರ್ಷಕವಾದ ಹೊಸದೊಂದು ಭಾಷೆಯಲ್ಲಿ ಬರೆಯುತ್ತಿದ್ದರು. ಭಾರತೀಯ ಸಾಹಿತ್ಯದ ಮೇಲೆ, ಶಿಕ್ಷಣ – ಜನಜೀವನ – ಸಾಮಾಜಿಕ ವ್ಯವಸ್ಥೆಗಳ ಮೇಲೆ, ವಸಾಹತುಶಾಹಿಯ ಪ್ರಭಾವದ ಬಗೆಗೆ ಈ ನವ್ಯರ ಮಾತುಗಳನ್ನು ಕೇಳಿ ನಾನು ಬೆರಗಾದುದುಂಟು. ತಮ್ಮ ಮಾತಿನ ಪ್ರತಿ ಎರಡು ವಾಕ್ಯಗಳಿಗೊಮ್ಮೆ ಭಾರತದ, ಮುಖ್ಯವಾಗಿ ಹಿಂದೂಗಳ ಮೂಢನಂಬಿಕೆಗಳ ಬಗೆಗೆ, ಅಸ್ಪೃಶ್ಯತೆ – ಜಾತಿವ್ಯವಸ್ಥೆ – ಮುಂತಾದವುಗಳ ಬಗೆಗೆ ತಪ್ಪದೇ ಪ್ರಹಾರ ಮಾಡುತ್ತಿದ್ದರು. ವಸಾಹತುಶಾಹಿ ಬಂದುದೇ ನಮ್ಮ ವಿಮೋಚನೆಗೆ ಎಂದು ಪರೋಕ್ಷವಾಗಿ ಹೇಳುತ್ತಿದ್ದರು. ಈ ದೇಶದಲ್ಲಿ ಹೆಣ್ಣುಮಕ್ಕಳಿಗೆ, ಶೂದ್ರರಿಗೆ, ಅಸ್ಪೃಶ್ಯರಿಗೆ ಕಳೆದ ಐದು ಸಾವಿರ ವರ್ಷಗಳಿಂದ ವಿದ್ಯಾಭ್ಯಾಸಕ್ಕೆ ಅವಕಾಶವಿರಲಿಲ್ಲ, ಎಂದು ರೋದಿಸುತ್ತಿದ್ದರು. ಬ್ರಿಟಿಷರ ಪ್ರೀತಿಪಾತ್ರರೇ ಬರೆಸಿದ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಯೂರೋಪಿಯನ್ನರು ಇಲ್ಲಿಗೆ ಬಂದುದೇ ವ್ಯಾಪಾರದ ಹೆಸರಿನಲ್ಲಿ ಲೂಟಿ ಮಾಡಲು – ವಸಾಹತುಗಳನ್ನು ಸ್ಥಾಪಿಸಲು ಎಂದೆಲ್ಲಾ ಓದಿದವರಿಗೆ, ಈ ನವ್ಯರ ಮಾತುಗಳು ಗೊಂದಲವನ್ನುಂಟುಮಾಡುತ್ತಿದ್ದವು, ನಮಗೆಲ್ಲಾ ಅಯೋಮಯವಾಗುತ್ತಿತ್ತು. “ಈ ನವ್ಯ ಸಾಹಿತಿಗಳೆಲ್ಲಾ ವಸಾಹತುಶಾಹಿಯ ಪರವಾಗಿಯೇ ಮಾತನಾಡುತ್ತಿದ್ದಾರಲ್ಲಾ” ಎನಿಸಿ ವಿಷಾದವೂ ಉಂಟಾಗುತ್ತಿತ್ತು. ಭಾರತದಲ್ಲಿ ಆಸ್ಪತ್ರೆಗಳನ್ನು, ಶಾಲೆಗಳನ್ನು ಪ್ರಾರಂಭ ಮಾಡಿದವರೇ ಬ್ರಿಟಿಷರು. ಅವರಿಂದಾಗಿಯೇ ರೈಲು ವ್ಯವಸ್ಥೆ ಬಂದಿತು. ಆಧುನಿಕತೆ – ವಿಜ್ಞಾನ ಅವರಿಂದಲೇ ಬಂದಿತು…..ಇತ್ಯಾದಿ ಇತ್ಯಾದಿ……
ಭಾರತದಲ್ಲಿ ರಸ್ತೆಗಳನ್ನು ಮಾಡಿಸಿದವರೂ ಬ್ರಿಟಿಷರೇ, ಎಂದು ಈಗಲೂ ಕೆಲವರು ಉಗ್ಘಡಿಸುವುದುಂಟು. “ಹಾಗಿದ್ದಲ್ಲಿ, ಸ್ವಾಮೀ, ಬ್ರಿಟಿಷರಿಗಿಂತ ಮೊದಲು ಇದ್ದ ಕೃಷ್ಣದೇವರಾಯನ ಐದು ಲಕ್ಷ ಸೈನಿಕರು, 1200 ಆನೆಗಳು, 60,000 ಕುದುರೆಗಳು ಏನು ಆಕಾಶದಲ್ಲಿ ಓಡಾಡುತ್ತಿದ್ದವೇ” ಎಂದು ಕೇಳಿದರೆ ಉತ್ತರಿಸುವುದಿಲ್ಲ.
ಈಗ ಹದಿನಾಲ್ಕು ವರ್ಷಗಳ ಹಿಂದೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರೊಬ್ಬರು, ತಮ್ಮ ಮಾತುಗಳ ಆರಂಭದಲ್ಲಿಯೇ “ಬ್ರಿಟಿಷರು ನಮ್ಮ ದೇಶಕ್ಕೆ ಬರದೇಹೋಗಿದ್ದರೆ, ನಾವೆಲ್ಲಾ ಇನ್ನೂ ಅಂಧಕಾರದಲ್ಲಿ ಇರುತ್ತಿದ್ದೆವು” ಎಂದು ಹೇಳಿ ಆಘಾತವನ್ನೇ ಉಂಟುಮಾಡಿದ್ದರು.
ಬಾಮನದಾಸರು ದಾಖಲಿಸಿರುವ ಕೆಲವು ಅಂಶಗಳು ಗಮನಿಸುವಂತಹವು. ಇದು ನೂರು ವರ್ಷಗಳ ಹಿಂದಿನ ಗ್ರಂಥ ಮತ್ತು ಬ್ರಿಟಿಷರು ಆಳುತ್ತಿದ್ದಾಗಲೇ ಪ್ರಕಟವಾದ ಗ್ರಂಥ ಎನ್ನುವುದನ್ನು ನಾವು ಮರೆಯುವಂತಿಲ್ಲ.
ಭಾರತಕ್ಕೆ ಸಮುದ್ರ ಮಾರ್ಗದಲ್ಲಿ ಬರಲು ಧಾವಿಸಲು, ಯೂರೋಪಿಯನ್ನರ ಮಧ್ಯೆ 15ನೆಯ ಶತಮಾನದಿಂದಲೇ ಸ್ಪರ್ಧೆ – ಯುದ್ಧ ನಡೆಯುತ್ತಿತ್ತು. ಪೋರ್ತುಗೀಸರನ್ನು, ಡಚ್ಚರನ್ನು, ಫ್ರೆಂಚರನ್ನು ಬಗ್ಗುಬಡಿದು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯು ಭಾರತದಲ್ಲಿ ತನ್ನ ಪಾರಮ್ಯವನ್ನು ಸಾಧಿಸಿತು. ಭಾರತೀಯರ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಬ್ರಿಟಿಷರೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಇಲ್ಲಿನ ರಾಜರ – ಸುಲ್ತಾನರ ನಡುವೆ ರಾಜಕೀಯ ಮಾಡುತ್ತಾ ತಮ್ಮ ಲೂಟಿಯಲ್ಲಿ, ವ್ಯಾಪಾರದಲ್ಲಿ ಗರಿಷ್ಠ ಲಾಭ ಗಳಿಸುವಲ್ಲಿ ನಿರತರಾಗಿದ್ದರು. ಕೆಲಕಾಲಾನಂತರ ಭಾರತದ ಸ್ಥಳೀಯರಿಗೆ ಇಂಗ್ಲಿಷ್ ಶಿಕ್ಷಣ ನೀಡದಿದ್ದರೆ ತಾವು ಬಹಳ ಕಾಲ ವಸಾಹತುವನ್ನು ನಿಭಾಯಿಸಲು ಸಾಧ್ಯವಿಲ್ಲ, ಎಂಬುದು ಅವರಿಗೆ ಅರಿವಾಯಿತು. 18ನೆಯ ಶತಮಾನದ ಕೊನೆಯ ಹೊತ್ತಿಗೆ ಹಿಂದುಗಳಿಗೆ ಮತ್ತು ಮುಸ್ಲಿಮರಿಗೆ, ಕಾಶಿ ಮತ್ತು ಕೊಲ್ಕತ್ತಾಗಳಲ್ಲಿ ಸಂಸ್ಕೃತದ ಮತ್ತು ಇಸ್ಲಾಮೀ ಶಿಕ್ಷಣದ ಕಾಲೇಜುಗಳನ್ನು ಸ್ಥಾಪಿಸಿದರು. ತಮ್ಮ ಆಡಳಿತಾತ್ಮಕ ಉದ್ದೇಶಕ್ಕಾಗಿ ಈ ಕಾಲೇಜುಗಳನ್ನು ಸ್ಥಾಪಿಸಿದರೇ ವಿನಃ, ಸ್ಥಳೀಯರಿಗೆ ವಿದ್ಯೆ ಕಲಿಸುವ ಸದುದ್ದೇಶವಿರಲಿಲ್ಲ.
ಭಾರತದ ನೂರೆಂಟು ಭಾಷೆಗಳನ್ನು ತಾವು ಕಲಿತು ಆಡಳಿತ ಮಾಡುವುದರ ಬದಲಿಗೆ, ಇಲ್ಲಿನವರಿಗೇ ಇಂಗ್ಲಿಷ್ ಕಲಿಸಿಬಿಡುವುದು ಅವರಿಗೆ ಲಾಭದಾಯಕವಾಗಿತ್ತು.
ಇದೇ ಬ್ರಿಟಿಷರೇ, ತಮ್ಮ ಆಳ್ವಿಕೆಯಲ್ಲಿ, ಅಮೆರಿಕೆಯಲ್ಲಿ “ಶಿಕ್ಷಣದ ಉದ್ದೇಶಕ್ಕಾಗಿ ಕಪ್ಪು ಗುಲಾಮರನ್ನು ಒಂದೆಡೆ ಸೇರಿಸುವುದು ಕಾನೂನಿಗೆ ವಿರುದ್ಧವಾಗುತ್ತದೆ. ಉಲ್ಲಂಘಿಸಿದವರಿಗೆ ಉಗ್ರ ಶಿಕ್ಷೆ ನೀಡಲಾಗುತ್ತದೆ” ಎಂದು ಕಾನೂನು ಮಾಡಿದ್ದರು. ಇದು ಬ್ರಿಟಿಷ್ ಧೂರ್ತರ ನಿಜಸ್ವರೂಪ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಚೀನಾ ದೇಶದ ಪ್ರಾಚೀನ ದೊರೆಗಳು ನಮಗೆ ಪ್ರೇರಣೆ ನೀಡಲಿ
ನಮ್ಮ ದೇಶಕ್ಕೆ ಸಂಬಂಧಿಸಿದಂತೆ, ಮೆಕಾಲೆಯ ಶಿಫಾರಸ್ಸುಗಳೇನಿದ್ದವು, ಅವನ ಉದ್ದೇಶವೇನಿತ್ತು, ಇತ್ಯಾದಿ ನಮಗೆಲ್ಲ ಗೊತ್ತೇ ಇದೆ. ಬಾಮನದಾಸರು ತಮ್ಮ ಕೃತಿಯಲ್ಲಿ, ಮೆಕಾಲೆಯ ಬಂಧು ಚಾರ್ಲ್ಸ್ ಟ್ರೆವೆಲ್ಯಾನ್ ಎಂಬವನು, ಬ್ರಿಟಿಷ್ ಸಂಸತ್ತಿನ ಸಮಿತಿಯ ಮುಂದೆ ನೀಡಿದ ಹೇಳಿಕೆಯನ್ನೂ ಉಲ್ಲೇಖಿಸುತ್ತಾರೆ. “ಭಾರತದಲ್ಲಿರುವ ಹಿಂದೂಗಳು ಮತ್ತು ಮುಸ್ಲಿಮರು, ಬ್ರಿಟಿಷರನ್ನು ತಮ್ಮ ದೇಶವನ್ನು ವಶಪಡಿಸಿಕೊಂಡ ವಿದೇಶೀ ಶತ್ರುಗಳು ಎಂದೇ ಭಾವಿಸುತ್ತಾರೆ. ಐರೋಪ್ಯ ಶಿಕ್ಷಣವನ್ನು ನೀಡಿದ ಮೇಲೆ, ಅವರು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡುವುದನ್ನೇ ಬಿಟ್ಟುಬಿಡುತ್ತಾರೆ. ಬ್ರಿಟಿಷರನ್ನು ತಮ್ಮ ಶತ್ರುಗಳು ಮತ್ತು ತಮ್ಮ ದೇಶವನ್ನು ಆಕ್ರಮಿಸಿಕೊಂಡವರು ಎಂದು ಭಾವಿಸುವುದನ್ನು ಮರೆತು, ತಮ್ಮ ಸ್ನೇಹಿತರಂತೆ – ಪೋಷಕರಂತೆ ಕಾಣುತ್ತಾರೆ ” ಎಂದಿದ್ದ ಈ ಚಾರ್ಲ್ಸ್ ಟ್ರೆವೆಲ್ಯಾನ್.
ಶತಮಾನದ ಹಿಂದೆಯೇ, ಬ್ರಿಟಿಷರು ಆಳುತ್ತಿದ್ದಾಗಲೇ, ಬ್ರಿಟಿಷರ ಬಗೆಗೆ ಬಾಮನದಾಸರಂತಹವರು ಬರೆದಿಟ್ಟುಹೋಗಿದ್ದರೂ ನಮ್ಮ ಕನ್ನಡದ ನವ್ಯರಿಗೆ ರೋಮಿಲ್ಲಾ ಥಾಪರ್, ಇರ್ಫಾನ್ ಹಬೀಬ್, ಡಿ.ಎನ್.ಝಾ ರಂತಹ ಸುಳ್ಳು-ಇತಿಹಾಸಕಾರರ ಪುಸ್ತಕಗಳು ಮಾತ್ರವೇ ಪಥ್ಯವಾದವು. ಬಹಳ ಜನ ಕೊನೆಯವರೆಗೆ ಭಾರತ-ವಿರೋಧಿಗಳಾಗಿಯೇ ಇದ್ದುಬಿಟ್ಟರು. ಧರ್ಮಪಾಲ್, ಅರುಣ್ ಶೌರಿ, ಸೀತಾರಾಮ ಗೋಯಲ್, ರಾಮಸ್ವರೂಪ್ ಮೊದಲಾದವರ ಸಂಶೋಧನೆ – ವಿಶ್ಲೇಷಣೆಗಳನ್ನು ಓದುವ, ಪರಾಮರ್ಶಿಸುವ ಗೊಡವೆಗೆ ಒಬ್ಬರೂ ಹೋಗಲಿಲ್ಲ. ದುರಂತವೆಂದರೆ, ಈಗಲೂ ವಿವಿಧ ಕ್ಷೇತ್ರಗಳಲ್ಲಿರುವ ಅವರ ಶಿಷ್ಯಕೋಟಿ ಇನ್ನೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಬರೆಯುತ್ತಾರೆ, ಮಾತನಾಡುತ್ತಾರೆ, ವಾದಿಸುತ್ತಾರೆ.
ಹೌದು, “ವಸಾಹತುಶಾಹಿಯ ನಿರ್ಗಮನದ ಅನಂತರವೂ ಒಬ್ಬ ಅದರ ಪರವಾಗಿಯೇ ಮಾತನಾಡುತ್ತಾನೆ, ಎಂದರೆ ವಸಾಹತುಶಾಹಿಯು ತುಂಬ ಪರಿಣಾಮಕಾರಿಯಾಗಿಯೇ ಬೇರೂರಿದೆ ಎಂದರ್ಥ”.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಅಂಬೇಡ್ಕರ್, ಮುಸ್ಲಿಂ ಲೀಗ್ ಒತ್ತಾಯಿಸಿದರೂ ಜನಸಂಖ್ಯಾ ವಿನಿಮಯ ಆಗಲಿಲ್ಲ!