Site icon Vistara News

ನನ್ನ ದೇಶ ನನ್ನ ದನಿ ಅಂಕಣ | ದೆಹಲಿ ಬ್ರಿಟಿಷರ ರಾಜಧಾನಿ ಆದುದಾದರೂ ಹೇಗೆ?

new delhi roads

1981ರಲ್ಲಿ ನಾನು ಕೆಲಕಾಲ ದೆಹಲಿಯಲ್ಲಿದ್ದೆ. ನಮ್ಮಲ್ಲಿನ ರಸ್ತೆಗಳಿಗಿಂತ ದೊಡ್ಡದಾದ ಪಾದಚಾರಿಗಳಿಗಾಗಿ ಮೀಸಲಿಟ್ಟ ಪಥಗಳು (Footpaths), ಹಸಿರಿನಿಂದ ತುಂಬಿದ ವಿಶಾಲವಾದ ವೃತ್ತ – ಚೌಕಗಳು ಆಕರ್ಷಿಸಿದವು. ಲುಟ್ಯನ್ಸ್ ನವದೆಹಲಿಯ ವಾಸ್ತುಶಿಲ್ಪಿ. ರಾಷ್ಟ್ರಪತಿ ಭವನವನ್ನು ನೋಡಲು ನನಗೆ ಅವಕಾಶ ಸಿಕ್ಕಿತು. ಅಲ್ಲಿ ಈ ಲುಟ್ಯನ್ಸನ ಪ್ರತಿಮೆ ಇದೆ. 1910- 1920ರ ದಶಕಗಳಲ್ಲಿ “ವೈಸ್ ರಾಯ್ಸ್ ಹೌಸ್” (ಇಂದಿನ ರಾಷ್ಟ್ರಪತಿ ಭವನ) “ಇಂಡಿಯಾ ಗೇಟ್” ಮುಂತಾದ ಬೃಹತ್ ನಿರ್ಮಾಣಗಳ ವಾಸ್ತುಶಿಲ್ಪಿ ಅವನೇ. ನವದೆಹಲಿಯ ನಗರವಾಸ್ತುವೂ ಅವನ ವಿನ್ಯಾಸವೇ. ನವದೆಹಲಿಯ ಉದ್ಘಾಟನೆ 1931ರಲ್ಲಿ ಆದುದರಿಂದ, 1981ರಲ್ಲಿ ನವದೆಹಲಿಯ ಸುವರ್ಣ ಮಹೋತ್ಸವ ಸಂಭ್ರಮ. ಅಲ್ಲಿನ ಪತ್ರಿಕೆಗಳಲ್ಲಿ ಈ ಕುರಿತ ವಿಶೇಷ ಲೇಖನಗಳೂ ಅಚ್ಚಾಗುತ್ತಿದ್ದವು. ಇಂಡಿಯಾ ಗೇಟ್ ಬಳಿಯ ಸುವಿಶಾಲವಾದ ಹಸಿರುಹಾಸುಗಳ ಮೇಲೆ ಕುಳಿತು ಓದುವುದೂ ಒಂದು ಅನುಪಮಾನುಭವವೇ ಆಗಿತ್ತು.

ಭಾರತದ ಎಲ್ಲೆಡೆಯಿಂದ ಬಂದ ಪ್ರವಾಸಿಗಳು ದೆಹಲಿಯ ನಿತ್ಯ-ದರ್ಶನ ಪ್ರವಾಸಗಳಲ್ಲಿ “ಬರೀ ಗೋರಿಗಳು, ಸಮಾಧಿಗಳು, ಹೆಚ್ಚೆಂದರೆ ಬಿರ್ಲಾ ದೇವಾಲಯ ತೋರಿಸುತ್ತಾರೆ” ಎಂದು ವಿಷಾದಿಸುತ್ತಿದ್ದರು. ವಿಲಾಸದಲ್ಲಿಯೇ ಕಾಲಕಳೆದ ಷಾಹಜಹಾನನು, ನೂರು ವರ್ಷಗಳ ಅವಧಿಯಲ್ಲಿ ನಿರ್ಮಿಸುವುದೂ ಕಷ್ಟ ಎನ್ನುವಂತಹ ದೆಹಲಿಯ ಕೆಂಪುಕೋಟೆ, ಆಗ್ರಾದ ತಾಜಮಹಲ್‌ಗಳನ್ನು ಕಟ್ಟಿಸಿದ ಎನ್ನುವ ಫಲಕಗಳನ್ನು ಓದಿ ನಗು ಬರುತ್ತಿತ್ತು. ಭಾರತವನ್ನು ಲೂಟಿ ಮಾಡಿದ, ನಾಶ ಮಾಡಿದ ನರಹಂತಕರಾದ ಲೋಧಿ, ತುಘಲಕ್, ಔರಂಗಜೇಬ್, ಬಾಬರ್, ಅಕ್ಬರ್ ಮೊದಲಾದವರ ಹೆಸರಿನ ರಸ್ತೆಗಳನ್ನು ಪ್ರದೇಶಗಳನ್ನು ಬಡಾವಣೆಗಳನ್ನು ನೋಡಿ ಯಾತ್ರಿಕರು ಇದು ಭಾರತದ ರಾಜಧಾನಿಯೋ, ಪಾಕಿಸ್ತಾನದ ರಾಜಧಾನಿಯೋ ಎಂದು ಅಚ್ಚರಿಪಡುತ್ತಿದ್ದರು. ನವದೆಹಲಿಯೇ ಹೊಸದು. ಇಲ್ಲಿ ಈ ವಿಧ್ವಂಸಕರ ಹೆಸರುಗಳನ್ನು ಇಷ್ಟು ವ್ಯಾಪಕವಾಗಿ ಇಟ್ಟವರು ಯಾರು, ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತಿತ್ತು. ಬ್ರಿಟಿಷರ ಮತ್ತು ಬ್ರಿಟಿಷರ “ಪ್ರೀತಿಪಾತ್ರ” ಉತ್ತರಾಧಿಕಾರಿಗಳಾದ ಕಾಂಗ್ರೆಸ್ಸಿಗರ ನಿಜ-ಇತಿಹಾಸ ನಾಶದ ದುಷ್ಕೃತ್ಯಗಳು ಅನೂಹ್ಯ ಪ್ರಮಾಣದವು.

ನಿಜ ಇತಿಹಾಸದ ಪ್ರತಿ ಪುಟವೂ ರೋಚಕವೇ, ಪ್ರತಿ ಆಖ್ಯಾಯಿಕೆಯೂ ವಿಷಾದನೀಯವೇ. ಶತಮಾನಗಳ ಕಾಲ ಕೋಲ್ಕತಾ ಬ್ರಿಟಿಷರಿಗೆ ಪ್ರಿಯವಾದ ಮಹಾನಗರ. 18, 19ನೆಯ ಶತಮಾನಗಳ ಅಂದಿನ ಜಗತ್ತಿನಲ್ಲಿ ಸಮುದ್ರಮಾರ್ಗದ್ದೇ ದೊಡ್ಡ ಪಾತ್ರ. ಹಾಗೆಂದೇ ಮುಂಬಯಿ, ಚೆನ್ನೈ, ಕೋಲ್ಕತಾಗಳಲ್ಲಿ ಬ್ರಿಟಿಷ್ ಆಳ್ವಿಕೆಯ ಗುರುತುಗಳು ಅತಿಹೆಚ್ಚು. ಇಂಗ್ಲೆಂಡಿನ ರಾಜ ಪಂಚಮ ಜಾರ್ಜ್ ಡಿಸೆಂಬರ್ 1911ರಲ್ಲಿ ಕೋಲ್ಕತಾದಿಂದ ರಾಜಧಾನಿಯನ್ನು ದೆಹಲಿಗೆ ಸ್ಥಳಾಂತರಿಸುವ ನಿರ್ಧಾರವನ್ನು ಪ್ರಕಟಿಸಿದ. ಭಾರತದ ಸ್ವಾತಂತ್ರ್ಯಕ್ಕಾಗಿ ಪಣತೊಟ್ಟ ಕ್ರಾಂತಿಕಾರಿಗಳ ತವರು ಅಂದಿನ ಬಂಗಾಳ. ಹೆಚ್ಚು ಸುರಕ್ಷಿತ ಎನ್ನುವಂತಹ ದೆಹಲಿ ಬ್ರಿಟಿಷರಿಗೆ ಸೂಕ್ತವೆನಿಸಿತು. ಆದರೂ, ಇತಿಹಾಸದ ದಾಖಲೆಗಳನ್ನು ಪರಾಮರ್ಶಿಸುವಾಗ ದೆಹಲಿಯನ್ನೇ ಏಕೆ ಬ್ರಿಟಿಷರು ಆರಿಸಿಕೊಂಡರು ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿತ್ತು.

ತೈಮೂರ್ ವಂಶದ ಮೊಘಲರ ಕೊನೆಯ ಬಾದಷಹ ಬಹಾದುರ್ ಶಾ ಜ಼ಫರ್. ಆತ ದುರ್ಬಲ. ಅವನು ಉರ್ದು ಕವಿ. ಘಜಲುಗಳನ್ನೂ ಬರೆದಿದ್ದಾನೆ. ಅವನ “ಆಳ್ವಿಕೆ”ಯ ಅವಧಿಯಲ್ಲಿ ಮೊಘಲ್ “ಸಲ್ತನತ್” ಬರೀ ದೆಹಲಿ ಪಟ್ಟಣಕ್ಕೆ ಸೀಮಿತವಾಗಿಹೋಗಿತ್ತು. “ಮುಗ್ಧ” ಭಾರತೀಯರು 1857ರ ಸ್ವಾತಂತ್ರ್ಯ ಸಮರದಲ್ಲಿ ಬ್ರಿಟಿಷರ ವಿರುದ್ಧ ಹೋರಾಡುವಾಗ ಈ ಬಹಾದುರ್ ಶಾನನ್ನೇ ನಾಯಕ ಎಂದು ಘೋಷಿಸಿದ್ದರು. ಸಮರವಿಜಯದ ಅನಂತರ ಕುತಂತ್ರಿ ಬ್ರಿಟಿಷರು ಬಹಾದುರ್ ಶಾನನ್ನು ಇಲಿಯಂತೆ ಹಿಡಿದುಕೊಂಡು ಹೋಗಿ ಮಯನ್ಮಾರ್ ದೇಶದ ರಂಗೂನಿನಲ್ಲಿ ಸೆರೆಮನೆಗೆ ತಳ್ಳಿದರು. ನಾಲ್ಕು ವರ್ಷಗಳ ಸೆರೆವಾಸದ ಅನಂತರ ಅವನು ತೀರಿಕೊಂಡನೆಂದು ಘೋಷಿಸಲಾಯಿತು.

1857ರ ಅನಂತರದ ಈ ಕಾಲಘಟ್ಟದಲ್ಲಿ ದೆಹಲಿಯ ಮೇಲೆ ಬ್ರಿಟಿಷರು ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಭಾರತದ ಶಿಕ್ಷಣ ವ್ಯವಸ್ಥೆಯನ್ನು, ಕೃಷಿ ಮತ್ತು ಉದ್ಯಮಗಳನ್ನು ವ್ಯವಸ್ಥಿತವಾಗಿ ನಾಶ ಮಾಡಿದ ಬ್ರಿಟಿಷರು, ಅನಂತರ ತಮ್ಮ ಗಮನವನ್ನು ಭಾರತದ ಇತಿಹಾಸ-ಪಠ್ಯದ ವಿಕೃತಿಯತ್ತ ಹರಿಸಿದರು. 19ನೆಯ ಶತಮಾನದಲ್ಲಿ ಸೈಯದ್ ಅಹಮದ್ ಖಾನ್ ಅವರು ಬ್ರಿಟಿಷ್ ಪ್ರಣೀತ “ಆಧುನಿಕ” ಶಿಕ್ಷಣದ ಅಭಿಮಾನಿಯಾಗಿದ್ದರು ಮತ್ತು ಮುಸ್ಲಿಮರಿಗೆ ಅದು ದೊರೆಯಬೇಕೆಂದು ಒತ್ತಾಯಿಸುತ್ತಿದ್ದರು. ಅಂದಿನ ಈಸ್ಟ್ ಇಂಡಿಯಾ ಕಂಪನಿಯ ಉದ್ಯೋಗಿಯಾಗಿದ್ದ ಖಾನ್ ಅವರು, ಮುಸ್ಲಿಮರಿಗಾಗಿ 1875ರಲ್ಲಿ ಮೊಹಮ್ಮಡನ್ ಆಂಗ್ಲೋ- ಓರಿಯೆಂಟಲ್ ಕಾಲೇಜು ಸ್ಥಾಪಿಸಿದರು. ಮುಂದೆ ಅದೇ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವಾಯಿತು. ಪಾಕಿಸ್ತಾನದ ನಿರ್ಮಿತಿಗೂ ಕಾರಣವಾದ ಈ ವಿಶ್ವವಿದ್ಯಾಲಯವು ಬೆಳೆಸಿದ ವಿಷಜಂತುಗಳೇ, ಬ್ರಿಟಿಷರೊಂದಿಗೆ, ಅವರ “ಪ್ರೀತಿಪಾತ್ರ”ರೊಂದಿಗೆ ಸೇರಿ ಭಾರತದ ವಿಕೃತ ಇತಿಹಾಸವನ್ನು ರಚಿಸಿದರು.

“ಭಾರತೀಯ ಸಮುದಾಯವು (ಮುಖ್ಯವಾಗಿ ಹಿಂದೂಗಳು) ಬ್ರಿಟಿಷ್-ಪೂರ್ವ ಇತಿಹಾಸಾವಧಿಯಲ್ಲಿ ತಮ್ಮ ಸ್ಥಿತಿ ಉತ್ತಮವಾಗಿತ್ತು ಎಂದು ಪರಿಭಾವಿಸಲೇಬಾರದು, ಯಾವುದೇ ವಿರೋಧವಿಲ್ಲದೆ ಬ್ರಿಟಿಷರಿಗೆ ಧನ್ಯವಾದ ಸಮರ್ಪಿಸುವ ಮನೋಭಾವದಿಂದ ಅವರ ಆಳ್ವಿಕೆಯನ್ನು ಒಪ್ಪಿಕೊಳ್ಳುವಂತಹ ಮಾನಸಿಕತೆಯು ಜನರಲ್ಲಿ ನೆಲೆಗೊಳ್ಳಬೇಕು” ಮತ್ತು “ಭಾರತೀಯರು ಎಂದೂ ಒಂದು ದೇಶವಾಗಿರಲೇ ಇಲ್ಲ. ಎಲ್ಲೆಲ್ಲಿಂದಲೋ ವಲಸೆ ಬಂದ ಬೇರೆಬೇರೆ ಜನಸಮುದಾಯಗಳ ಕಲಬೆರಕೆ ಅಷ್ಟೇ. ಭಾರತೀಯರಿಗೆ ಐಕಮತ್ಯದ ಪರಿಕಲ್ಪನೆಗಳೇ ತಿಳಿದಿಲ್ಲ. ಭಾರತೀಯರ ಇತಿಹಾಸವೆಂದರೆ ಆಕ್ರಮಣಕಾರಿಗಳಾಗಿ ಬಂದ ವಿದೇಶೀಯರ ಮತ್ತು ಹಾಗೆ ಯುದ್ಧ ಗೆದ್ದವರ ಇತಿಹಾಸ ಮಾತ್ರ” ಎಂದು ಬರೆದಿಟ್ಟವರು ಇವರೇ. ಶಾಲಾ ಕಾಲೇಜುಗಳ ಪಠ್ಯಕ್ರಮದಲ್ಲಿ ಇದನ್ನೇ ನಮಗೆ ಬೋಧಿಸಲಾಯಿತು (ಈಗಲೂ ಬಹುಪಾಲು ಪಠ್ಯವು ಹಾಗೆಯೇ ಇದೆ. ಆಮೂಲಾಗ್ರ ಪರಿಷ್ಕರಣ ಆಗಬೇಕಿದೆ).

ನಾವೂ ಶ್ರದ್ಧೆಯಿಂದ ಇದನ್ನೇ ಸತ್ಯವೆಂದು ನಂಬಿದೆವು, ಕಲಿತೆವು. ಬ್ರಿಟಿಷರು ತೊಲಗಿದ ಮೇಲೂ ಈ ಬಗೆಯ ಮಾನಸಿಕತೆ ಮತ್ತು ಇದನ್ನೇ ಸತ್ಯವೆಂದು ನಂಬಿರುವುದು ಈಗಲೂ ನಮ್ಮ ಭಾರತೀಯ ರಾಜಕಾರಣದ ಚಿಂತನೆಯಾಗಿದೆ ಮತ್ತು ಗತ-ಇತಿಹಾಸವನ್ನು ಗ್ರಹಿಸುವ ಕ್ರಮವೇ ಇಂತಹುದಾಗಿಹೋಗಿದೆ. ಅದೆಂದರೆ, ಭಾರತವು ಬಹು-ಜನಾಂಗೀಯ, ಬಹು-ಭಾಷೀಯ, ಬಹು-ಸಂಸ್ಕೃತಿಯ ದೇಶವಾಗಿದ್ದು, ಬ್ರಿಟಿಷರ ಮತ್ತು ಅವರ ಪ್ರೀತಿಪಾತ್ರರ ಆಳ್ವಿಕೆಯಲ್ಲಿ ಐಕಮತ್ಯದ ಹಾಗೂ ಸೆಕ್ಯುಲರ್-ವಾದದ ಪರಿಕಲ್ಪನೆಗಳನ್ನು ಮೈಗೂಡಿಸಿಕೊಳ್ಳಲು ಹೆಣಗುತ್ತಿದೆ, ಎಂಬುದು ನಮ್ಮ ನಾಯಕಗಣದ- ಬುದ್ಧಿಜೀವಿಗಳ ಅಭಿಮತವೂ ಹೌದು.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ | ಶತಮಾನದ ಕಾಲ ತುಳಿಯಲ್ಪಟ್ಟರೂ ಭಾರತೀಯ ಕ್ಷಾತ್ರ ಸಿಡಿದೆದ್ದಿತು

ಭಾರತದಲ್ಲಿನ ತಮ್ಮ ಆಳ್ವಿಕೆಯನ್ನು ಸಮರ್ಥಿಸಿಕೊಳ್ಳುವುದೇ ಭಾರತದ ಇತಿಹಾಸದ ಪುಸ್ತಕಗಳನ್ನು ವಿಕೃತವಾಗಿ ಬರೆಯುವುದರ ಹಿಂದಿನ ಈ ಮಾಫಿಯಾ ಇತಿಹಾಸಕಾರರ ಉದ್ದೇಶವಾಗಿತ್ತು. ಏಕೆಂದರೆ, ಬ್ರಿಟಿಷರೂ ಸಾಮ್ರಾಜ್ಯಶಾಹಿ ಆಳರಸರಾಗಿದ್ದರು. ಆದುದರಿಂದಲೇ, ತಮಗಿಂತ ಮುಂಚಿನ ಮುಸ್ಲಿಂ ಆಳರಸರ ಬಗೆಗೆ ಅವರಿಗೆ ವಿಚಿತ್ರ ರೀತಿಯ ಸಹಾನುಭೂತಿಯಿತ್ತು. ಈ ಪರಿಕಲ್ಪನೆಗಳನ್ನು ಈ ಮಾನಸಿಕತೆಯನ್ನು ನಾವು ಬಹಳ ಎಚ್ಚರಿಕೆಯಿಂದ ಮತ್ತು ಗಂಭೀರವಾಗಿ ವಿಶ್ಲೇಷಿಸಬೇಕಿದೆ, ತಿಳಿಯಬೇಕಿದೆ, ಜೀರ್ಣಿಸಿಕೊಳ್ಳಬೇಕಿದೆ.

ಸಮರವಿಜಯದಿಂದಲೇ ಭಾರತದ ಮೇಲೆ ನಿಯಂತ್ರಣ ಸಾಧಿಸಿದ ಬ್ರಿಟಿಷರು, ಆ ಕಾರಣದಿಂದಲೇ ಅವರಿಗಿಂತ ಮುಂಚಿನ ಮೊಘಲರನ್ನು, ಆಫಘನರನ್ನು, ಅರಬರನ್ನು, ತುರುಕರನ್ನು ಮತ್ತು ಅವರ ಆಳ್ವಿಕೆಗಳನ್ನು ನ್ಯಾಯಸಮ್ಮತ ಎಂದು ಎತ್ತಿಹಿಡಿಯಬೇಕಿತ್ತು. ತಾವು ಮೊಘಲರ ನ್ಯಾಯಸಮ್ಮತ ಉತ್ತರಾಧಿಕಾರಿಗಳೆಂದೂ ಭಾರತದ ಗತ-ಇತಿಹಾಸಕ್ಕೆ ಅನುಗುಣವಾಗಿಯೇ ಈ ಮುಂದುವರಿಕೆಯಿದೆಯೆಂದೂ, ಇವರೆಲ್ಲಾ ತಮ್ಮ ಮೋಸದ ಪರಿಕಲ್ಪನೆಗಳ ಇತಿಹಾಸ ಪಠ್ಯರಚನೆಯ ಮೂಲಕ ಸಾಧಿಸತೊಡಗಿದರು.

ಮೊಘಲರೇ ಇಲ್ಲಿ ಸಾಮ್ರಾಜ್ಯವನ್ನು ನಿರ್ಮಿಸಿದವರು, ಅವರೇ ಭಾರತವನ್ನು ಒಗ್ಗೂಡಿಸಿದವರು. ಅವರೇ ಇಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ತಂದವರು, ಶಾಂತಿ ಸುಭದ್ರತೆಗಳನ್ನು ನೆಲೆಗೊಳಿಸಿದವರು, ಎಂಬಂತೆ ಇತಿಹಾಸ-ಪ್ರಸ್ತುತಿ ಮಾಡಲಾಯಿತು ಮತ್ತು ದೆಹಲಿಯ ಸಾಮ್ರಾಜ್ಯಶಾಹಿ ಪರಮಾಧಿಕಾರವನ್ನು ಎತ್ತಿಹಿಡಿಯಲಾಯಿತು. ಹೀಗೆ, ಮೊಘಲರ ಪರಮಾಧಿಕಾರವನ್ನು ಎತ್ತಿಹಿಡಿದ ಸಂಗತಿಗಳೇ ಬ್ರಿಟಿಷರ ಪರಮಾಧಿಕಾರವನ್ನೂ ಎತ್ತಿಹಿಡಿಯುವಂತಾಯಿತು.

ಅದೇ ದೆಹಲಿಯು ಬ್ರಿಟಿಷರ ರಾಜಧಾನಿಯೂ ಆಗಿಹೋಯಿತು.

ಇದನ್ನೂ ಓದಿ | ನನ್ನ ದೇಶ ನನ್ನ ದನಿ | ಪ್ರಾಚೀನ ಭಾರತದಲ್ಲಿ ಬೇಹುಗಾರಿಕೆಯ ಹೆಜ್ಜೆಗುರುತುಗಳು

Exit mobile version