Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಇತಿಹಾಸದ ಸಂಕ್ರಮಣ ಕಾಲದಲ್ಲಿ ಹಿಂದೂಗಳ ಸಹಾಯ ನಿರೀಕ್ಷಿಸಿದ್ದ ಪರ್ಷಿಯನ್ನರು

pursian dancers

ನನ್ನ ದೇಶ ನನ್ನ ದನಿ ಅಂಕಣ: ನಿಜ-ಇತಿಹಾಸದ ಪುಟಗಳೇ ಅದ್ಭುತ. ಬಹಳಷ್ಟು ಬಾರಿ ವಿಷಾದಕರ. ಪರ್ಷಿಯನ್ ಭಾಷೆ ಎಂದರೆ ಸಹಜವಾಗಿ ನಮಗೆಲ್ಲ ನೆನಪಾಗುವುದು, ಟಿಪ್ಪು ಆಡಳಿತದಲ್ಲಿ ಬದಲಾದ ಆಡಳಿತ ಭಾಷೆಯೇ. ಆವರೆಗೆ ಸಾವಿರಾರು ವರ್ಷಗಳಿಂದ ಆಡಳಿತ ಭಾಷೆಯಾಗಿದ್ದ ಕನ್ನಡದ ಬದಲು, ಟಿಪ್ಪು ಕಾಲದಲ್ಲಿ ಪರ್ಷಿಯನ್ ಭಾಷೆಯು ಬಳಕೆಗೆ ಬಂದಿತು. ಹಾಗೆಂದೇ, ಮೂಲ ಹೆಸರುಗಳ ಬದಲು ಕಚೇರಿ, ಖಾತಾ, ಅಮಲ್ದಾರ್, ತಹಸೀಲ್ದಾರ್, ಹುಜೂರ್, ನಜರಾಬಾದ್, ಮಂಜರಾಬಾದ್, ಕೊತ್ವಾಲ, ಕಾರಕೂನ, ಅಬಕಾರಿ, ಜಾಮೀನು, ಅರ್ಜಿ ಇತ್ಯಾದಿ ನೂರಾರು ಪದಗಳು ಜಾರಿಗೆ ಬಂದವು ಮತ್ತು ಇಂದಿಗೂ ಬಳಕೆಯಲ್ಲಿವೆ. ಟಿಪ್ಪುವಿನ ಕುಖ್ಯಾತ ಖಡ್ಗದ ಹಿಡಿಯ ಮೇಲೆ “ಕಾಫಿರರ ವಿನಾಶಕ್ಕೆಂದೇ ನನ್ನ ಈ ವಿಜಯಶಾಲೀ ಖಡ್ಗವು ಫಳಫಳ ಹೊಳೆಯುತ್ತದೆ” ಎಂದು ಬರೆಯಲಾಗಿದೆ. ಭಾರತದ ಹಿಂದೂಗಳ ಸರ್ವನಾಶಕ್ಕೆಂದೇ ಔರಂಗಜೇಬನು ಸಿದ್ಧಪಡಿಸಿದ ಕುಖ್ಯಾತ “ಫತಾವಾ-ಈ-ಆಲಂಗೀರೀ” ಬೃಹದ್ಗ್ರಂಥದ ಬಹುಭಾಗವು ಪರ್ಷಿಯನ್ ಭಾಷೆಯಲ್ಲಿಯೇ ರಚಿತವಾಗಿದೆ. ಏಕೆಂದರೆ, ಗ್ರಂಥರಚನೆಗೆ, ಅರೇಬಿಕ್ ಭಾಷೆಗಿಂತ ಪರ್ಷಿಯನ್ ಭಾಷೆಯಲ್ಲಿ ತುಲನಾತ್ಮಕವಾಗಿ ಹೆಚ್ಚು ಸೌಲಭ್ಯಗಳಿವೆ.

ಪರ್ಷಿಯನ್ ಭಾಷೆಯು ಕಳೆದ ಒಂದೂವರೆ ಸಾವಿರ ವರ್ಷಗಳಿಂದ ಇಸ್ಲಾಮಿನ ಜೊತೆಗೇ ಗುರುತಿಸಲ್ಪಟ್ಟಿದೆ. ಅದರ ಮೈ ತುಂಬಾ ಹಿಂದೂಗಳ ರಕ್ತದ ಕಲೆಗಳು ಅಂಟಿಕೊಂಡಿವೆ.

ಆದರೆ, ಇಸ್ಲಾಂಪೂರ್ವ ಇತಿಹಾಸಾವಧಿಯ ಪರ್ಷಿಯನ್ ಭಾಷೆ ಮತ್ತು ಪರ್ಷಿಯನ್ ಸಮುದಾಯಗಳು ಸಾಂಸ್ಕೃತಿಕ ಭಾರತದೊಂದಿಗೆ ಅವಿನಾ ಸಂಬಂಧವನ್ನು ಹೊಂದಿದ್ದವು. ತಾನು ಬೇರೆ ಎಂಬ ಭಾವನೆಯೇ ಅದಕ್ಕಿರಲಿಲ್ಲ. ಪ್ರಸ್ತುತ ಇರಾನ್ ದೇಶದ ಭೂಭಾಗದಲ್ಲಿದ್ದ ಈ ಪರ್ಷಿಯನ್ನರು ಸಾಮ್ರಾಜ್ಯ ವಿಸ್ತರಣೆಗೆ ಸಮರ ಸಾರಿದ್ದು ತಮ್ಮ ಪಶ್ಚಿಮ ದಿಕ್ಕಿನಲ್ಲಿದ್ದ ಗ್ರೀಸ್ – ರೋಮ್ ನಂತಹ ದೇಶಗಳೊಂದಿಗೆ ಮಾತ್ರ. ಪರ್ಷಿಯನ್ನರು ಒಮ್ಮೆಯೂ ತಮ್ಮ ಪೂರ್ವದಿಕ್ಕಿನ ಭಾರತ ದೇಶದ ರಾಜ್ಯಗಳ ಮೇಲೆ ದಾಳಿ ಮಾಡಲೇ ಇಲ್ಲ. ಪರ್ಷಿಯಾಗೆ ತಾನೂ ಸಾಂಸ್ಕೃತಿಕ ಭಾರತದ ಅವಿಭಾಜ್ಯ ಭಾಗವೇ ಎಂಬ ಸದ್ಭಾವನೆಯಿತ್ತು. ಭಾರತದ ಅನೇಕ ರಾಜರೊಂದಿಗೆ ಪರ್ಷಿಯನ್ನರ ಸಂಪರ್ಕವಿತ್ತು, ನೇರ ಸಂಬಂಧವಿತ್ತು, ವ್ಯಾಪಾರ ವ್ಯವಹಾರಗಳೂ ಇದ್ದವು.

ಸಾಂಸ್ಕೃತಿಕ ಭಾರತದಲ್ಲಿಯೂ ಕ್ಷಾತ್ರ ಇತ್ತು, ಆದರೆ, ರಾಜಕೀಯ-ಭಾರತವೇ ಬೇರೆ. ಸಾಂಸ್ಕೃತಿಕ-ಭಾರತವೇ ಬೇರೆ. ನಮ್ಮ “ಮುಗ್ಧ” ಅಕಾಡೆಮಿಷಿಯನ್ನರು, ಬ್ರಿಟಿಷರಿಗಿಂತ ಮೊದಲು ಸಂಪೂರ್ಣ ಭಾರತವನ್ನು ಯಾರು ಆಳಿದ್ದರು? ಅಶೋಕನಿಗಿಂತ ಮುಂಚೆ ಭಾರತವಿತ್ತೇ? ಎಂಬಂತಹ ಪ್ರಶ್ನೆಗಳಲ್ಲಿಯೇ ಕಾಲ ಕಳೆಯುತ್ತಾರೆ. ಹತ್ತಾರು ಸಹಸ್ರ ವರ್ಷಗಳಿಂದ ಧರ್ಮ-ಪ್ರಧಾನವಾದ ಭಾರತಕ್ಕಿರುವುದು ಸಾಂಸ್ಕೃತಿಕ ಆಯಾಮವೇ ಹೊರತು ರಾಜಕೀಯ ಆಯಾಮ ಅಲ್ಲ, ಎಂದು ತಲೆ ಚಚ್ಚಿಕೊಂಡರೂ ಅರ್ಥ ಮಾಡಿಕೊಳ್ಳುವುದಿಲ್ಲ. ಇನ್ನು ಕ್ಷಾತ್ರ ಅಂದೂ ಇತ್ತು, ಇಂದೂ ಇದೆ. ಅನೇಕ ಸಾವಿರ ವರ್ಷಗಳ ಹಿಂದೆಯೇ ಜಾವಾ, ಸುಮಾತ್ರ, ಇಂಡೋನೇಷ್ಯಾ, ಬಾಲಿ ಮುಂತಾದ ದೇಶಗಳಲ್ಲಿ ಭಾರತೀಯ ಹಿಂದೂಗಳು ಕ್ಷಾತ್ರತೇಜದಿಂದಲೇ ತಮ್ಮ ಸಾಂಸ್ಕೃತಿಕ ಸಾಮ್ರಾಜ್ಯದ ವಿಸ್ತರಣೆ ಮಾಡಿದ್ದನ್ನು ಸಹ ನಮ್ಮ “ಮುಗ್ಧ” ಅಕಾಡೆಮಿಷಿಯನ್ನರು – ಇತಿಹಾಸಕಾರರು ಗಮನಿಸಬೇಕಾಗಿದೆ.

ತನ್ನ ಜನಾಂಗೀಯ ಪೂರ್ವಿಕರು ಭಾರತದ ಹಿಂದೂಗಳೇ ಎಂದು ಪರ್ಷಿಯಾಗೆ ಚೆನ್ನಾಗಿಯೇ ಗೊತ್ತಿತ್ತು. ಆದರೆ, ಇಸ್ಲಾಮೀ ಆಕ್ರಮಣಕಾರಿಗಳ ದಾಳಿಯು ಪರ್ಷಿಯಾ ದೇಶವನ್ನು ಆಮೂಲಾಗ್ರವಾಗಿ ಬದಲಾಯಿಸಿತು. ಅತ್ಯದ್ಭುತವಾದ ಪರ್ಷಿಯನ್ ಭಾಷೆ ಮತ್ತು ಸಾಹಿತ್ಯಗಳು ಇತಿಹಾಸ ಸೇರಿದವು. ಅನಂತರದ ಇತಿಹಾಸದ ಭಯಾನಕ ಪರ್ವದಲ್ಲಿ, ಟಿಪ್ಪುವಿನ ಖಡ್ಗದ ಮೇಲೆ ಕೆತ್ತಲಾದ ಭಾಷೆಯ ಆಯಾಮವೇ ಪರ್ಷಿಯಾದ ಹೆಗ್ಗುರುತು ಎನಿಸಿತು.


ಇಸ್ಲಾಂಪೂರ್ವ ಅವಧಿಯ ಜಗತ್ತಿನ ಇತಿಹಾಸದ ಅನೇಕ ಚಿತ್ರಗಳು ಮನೋಹರವಾಗಿವೆ. ಪರ್ಷಿಯಾದ ಪಕ್ಕದ ಇಂದಿನ ಇರಾಕ್ ದೇಶದ (ಬಹುಪಾಲು) ಭೂಭಾಗದಲ್ಲಿದ್ದ, ಮೆಸೊಪೊಟೇಮಿಯಾದ ಉತ್ತರ ಭಾಗದಲ್ಲಿದ್ದ ಮಿತ್ತಾನೀ ಸಾಮ್ರಾಜ್ಯದ ವಿವರಗಳು ಮೈ ನವಿರೇಳಿಸುತ್ತವೆ. ಅದು ಸಾಮಾನ್ಯ ಯುಗ ಪೂರ್ವದ (BCE: Before Common Era) (ವಿದ್ವಾಂಸರು AD / BC ಬಳಕೆಯನ್ನು ನಿಲ್ಲಿಸಿ, ಹೆಚ್ಚು ವೈಜ್ಞಾನಿಕವಾದ BCE / CE ಗಳನ್ನು ಬಳಸುತ್ತಿದ್ದಾರೆ) ಸುಮಾರು ೧೪ನೆಯ ಶತಮಾನದ ಸುವರ್ಣಯುಗ.

ಅಲ್ಲಿನ ಕಿಕ್ಕುಲಿ ಎಂಬ ಲೇಖಕನು ರಚಿಸಿರುವ (Horse Trading Mannual) ಗ್ರಂಥದಲ್ಲಿ ಸಮರಾಶ್ವಗಳ ಬಗೆಗೆ ಮಾಹಿತಿ ಮತ್ತು ಮಾರ್ಗದರ್ಶನ ಲಭ್ಯವಿದೆ (ಇಲ್ಲಿ ನಮಗೆ ಸಹಜವಾಗಿಯೇ, ಮಹಾಭಾರತದ ನಳೋಪಾಖ್ಯಾನದ ನಳ – ಅಶ್ವರಹಸ್ಯ – ಋತುಪರ್ಣ, ಇತ್ಯಾದಿ ನೆನಪಾಗುತ್ತವೆ. “ಅಶ್ವರಹಸ್ಯ”ವು ಅದ್ಭುತವಾದ ಅಶ್ವವಿಜ್ಞಾನದ
ಜ್ಞಾನ-ಶಾಖೆ). ಈ ಗ್ರಂಥದಲ್ಲಿರುವ ಮಾಹಿತಿಯು ಅನೇಕ ಆಧುನಿಕ ಗ್ರಂಥಗಳಿಗಿಂತ ಉತ್ತಮ ಗುಣಮಟ್ಟದಲ್ಲಿದೆ. ಅಲ್ಲಿ ಅನೇಕ ಸಂಸ್ಕೃತ ಪದಗಳಿವೆ. ಅದು ವೇದಕಾಲದ ಸಂಸ್ಕೃತವಲ್ಲ, ಅದು ಅನಂತರದ ಕಾಲಘಟ್ಟದ ಸಂಸ್ಕೃತ ಭಾಷೆ. ಮಿತ್ತಾನೀ ವಂಶಜರ ಅನೇಕ ಹೆಸರುಗಳು ಸತ್ವರ್ಣ, ಕ್ಷತ್ರವರ, ವಸುಕ್ಷತ್ರ, ಕೀರ್ತ್ಯ ಹೀಗಿವೆ. ಅಲ್ಲಿನ ರಾಜರ ಭಾಷೆಯೇ ಸಂಸ್ಕೃತವಾಗಿತ್ತು. ಭಾರತದಲ್ಲಿ ಬಹುಪಾಲು ಸಂಸ್ಕೃತ ಭಾಷಾ ಬರೆಹಗಳು ತಾಳೆಗರಿ ಮತ್ತು ಶಿಲೆಗಳ ಮೇಲಿವೆ. ಆದರೆ, ಮಿತ್ತಾನೀ ಸಾಮ್ರಾಜ್ಯದವರ ಕೆಲ ಸಂಸ್ಕೃತ ಭಾಷಾ ಬರೆಹಗಳು ಜೇಡಿಮಣ್ಣಿನ ಮೇಲಿರುವುದು ತುಂಬಾ ವಿಶೇಷವಾಗಿದೆ. ಮಿತ್ತಾನೀ ಸಾಮ್ರಾಜ್ಯಕ್ಕೂ ತಾವು ಭಾರತದಿಂದ ಬಹು ಹಿಂದೆಯೇ ವಲಸೆ ಹೋದವರು ಎಂಬ ತಥ್ಯ ಗೊತ್ತಿತ್ತು.


ಇಸ್ಲಾಮೀ ಸಾಮ್ರಾಜ್ಯಶಾಹಿ ದಾಳಿಗೊಳಗಾಗಿ ಪರ್ಷಿಯಾ ದೇಶವು ನಾಶವಾಯಿತು. ಸಾಮಾನ್ಯ ಯುಗದ (Common Era) ೮ನೆಯ ಶತಮಾನದ ಪರ್ಷಿಯಾ ದೇಶದ ರಾಜ ವಹ್ರಾಮನು, ಆಗ ಭಾರತದ ಹಿಂದೂಗಳಿಂದ ಸಹಾಯ ನಿರೀಕ್ಷಿಸಿದ್ದ ಮತ್ತು ಆತ ಬರೆದ ಪತ್ರವು ಪರ್ಷಿಯನ್ ಸಾಹಿತ್ಯದಲ್ಲಿ “Ballad of King Vahram” ಎಂದೇ ಪ್ರಸಿದ್ಧವಾಗಿದೆ. ಇದು ಕಾವ್ಯರೂಪದ ಇತಿಹಾಸ. ಇದು ಪಹ್ಲವೀ ಭಾಷೆಯಲ್ಲಿದೆ:

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಶತಮಾನದಾಚೆಗೆ ವಿಸ್ತರಿಸಿದ ಪ್ರತಿಭೆ ಪ್ರೊ || ಎಲ್.ಎಸ್. ಶೇಷಗಿರಿರಾವ್

“….. ಅರೇಬಿಯಾದಿಂದ ಬಂದ ಮುಸ್ಲಿಮರು ನಮ್ಮ ಸಂಸ್ಕೃತಿಯನ್ನೇ ನಾಶ ಮಾಡಿದರು. ನಮ್ಮ ಅರಮನೆಗಳನ್ನು – ಆರಾಧನಾ ತಾಣಗಳನ್ನು ನಾಶ ಮಾಡಿದರು. ಇದು ಅಸುರರ ದಾಳಿ. ನರ-ರಾಕ್ಷಸರ ಪ್ರಹಾರ. ನಮ್ಮ ಹೆಣ್ಣುಮಕ್ಕಳನ್ನು ಬಲವಂತವಾಗಿ ಕಿತ್ತುಕೊಂಡುಹೋದರು. ಐಶ್ವರ್ಯವನ್ನು ಲೂಟಿ ಮಾಡಿದರು. ಭಾರೀ ತೆರಿಗೆ ಹಾಕಿದರು. ನಮ್ಮ ಈ ದುರ್ಗತಿ – ದುಸ್ಥಿತಿಗಳು ಭಾರತೀಯರಿಗೆ (ಹಿಂದೂಗಳಿಗೆ) ತಿಳಿಯಬೇಕು. ಅದಕ್ಕೆ ಸರಿಯಾದ ಒಬ್ಬ ದುಭಾಷಿ (interpreter) ಬೇಕು. ಅವನು ಈ ಎಲ್ಲ ಸಂಗತಿಗಳನ್ನೂ ಅವರಿಗೆ ಹೇಳಬೇಕು. ಅವರು ಸಾವಿರ ಆನೆಗಳೊಂದಿಗೆ ಬಂದು ನಮ್ಮನ್ನು ಸಂರಕ್ಷಿಸುತ್ತಾರೆ……..”

ಕಳೆದ ಎರಡು ಸಹಸ್ರಮಾನದಲ್ಲಿ ಭಾರತೀಯರು, ಶತ್ರುಗಳನ್ನು ಮತ್ತು ಮುಖ್ಯವಾಗಿ ವಿದೇಶೀ ಅಬ್ರಹಾಮಿಕ್ ರಿಲಿಜನ್ನುಗಳ ಆಕ್ರಮಣಕಾರೀ ಸ್ವರೂಪವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರೆ, ಸಾಂಸ್ಕೃತಿಕ ಭಾರತದ ಯಾವುದೇ ಭೂಭಾಗಕ್ಕೆ – ಜನಸಮುದಾಯಗಳಿಗೆ ದುರ್ಗತಿ ಬರುತ್ತಿರಲಿಲ್ಲ. Of Course, ಹಾಗೆ ಅರ್ಥ ಮಾಡಿಕೊಳ್ಳುವುದು ಪ್ರಸಕ್ತ ಭಾರತದ ಅಸ್ತಿತ್ವಕ್ಕೂ ಅನಿರ್ವಾಹವೇ ಆಗಿದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಭಾರತ- ದ್ವೇಷಿ ಹಿಟ್ಲರನ ಬಗೆಗೂ ಘನಘೋರ ಸುಳ್ಳುಗಳು

Exit mobile version