ಈ ಅಂಕಣವನ್ನು ಇಲ್ಲಿ ಕೇಳಿ:
ರಾಜೀವ್, ನರಸಿಂಹರಾವ್, ಸೋನಿಯಾ ಆಳ್ವಿಕೆಗಳಿರಲಿ, ಇಂದಿರಾ ಗಾಂಧಿಯವರೇ ಆ ಅವಧಿಯ ಭಾರತೀಯ ರಾಜಕಾರಣವನ್ನು ಆವರಿಸಿಕೊಂಡಿರಲಿಲ್ಲ. ಆದರೂ ಅಂತಹ ಕಾಲಘಟ್ಟದ ದಲವಾಯಿ ತುಂಬ ತುಂಬ ಮುಖ್ಯರಾಗುತ್ತಾರೆ, ಪ್ರಸ್ತುತರಾಗುತ್ತಾರೆ. ಮುಸ್ಲಿಂ ರಾಜಕಾರಣಿಗಳೆಂದರೆ ಇನ್ನಷ್ಟು-ಮತ್ತಷ್ಟು ಷರೀಯಾಗೇ ಆತುಕೊಳ್ಳುವ, ಅಲ್ಪಸಂಖ್ಯಾತರು ತಾವು ಎಂದು ದಿನಕ್ಕೆ ಮೂರು ಬಾರಿ ನೆನಪಿಸುವ, ಭಾರತಮಾತೆ ಬೇಡ – ದೇವಿ ಶಾರದೆ ಬೇಡ – ವಂದೇ ಮಾತರಂ ಬೇಡ ಎಂದೆಲ್ಲಾ ಹೇಳುವ, ಮೊದಲು ಇಸ್ಲಾಂ – ಅನಂತರ ದೇಶ ಎನ್ನುವವರೇ, ಹಾಗೆನ್ನುವವರು ಮಾತ್ರವೇ, ಕಾಣುವ ಅಂಧಕಾರದ ಆಗಸದಲ್ಲಿ ಹಮೀದ್ ದಲವಾಯಿ ತುಂಬ ಅಪರೂಪದ ರಾಜಕಾರಣಿಯಾಗಿ ಕಂಡುಬರುತ್ತಾರೆ.
ದಲವಾಯಿ ಅವರ ವಿಚಾರಗಳು – ಅಭಿಪ್ರಾಯಗಳು ಅದ್ಭುತವಾಗಿವೆ.
1971ರ ಸಂದರ್ಶನವೊಂದರಲ್ಲಿ ದಲವಾಯಿಯವರು “ಸಂಸತ್ತಿನಲ್ಲಿ ಹಿಂದುಗಳ ವಿರೋಧವನ್ನೂ ಕಡೆಗಣಿಸಿ, ಹಿಂದೂ ಕೋಡ್ ಬಿಲ್ ಕಾನೂನಾಯಿತು. ಸರ್ಕಾರವಾಗಲೀ, ಬಹುಮತದ ಸಂಸತ್ ಸದಸ್ಯರಾಗಲೀ, ಮುಸ್ಲಿಮರಿಗೆ ಸಂಬಂಧಿಸಿದ ಕಾನೂನುಗಳ ಸುಧಾರಣೆಗೆ ಮತ್ತು ಸಮಾನ ನಾಗರಿಕ ಸಂಹಿತೆಯ ಜಾರಿಗೆ ಏಕೆ ಪ್ರಯತ್ನಿಸಲಿಲ್ಲ” ಎಂದು ಸಕಾರಣವಾಗಿ ಆಕ್ಷೇಪಿಸಿದ್ದರು. ಹಿಂದುಗಳ ವಿರೋಧವನ್ನು ಲೆಕ್ಕಿಸದೇ, ಕಾನೂನು ಮಾಡಲು ಬಳಸಿದ ಸಂಸದೀಯ ಬಹುಮತವನ್ನು ಸಮಾನ ನಾಗರಿಕ ಸಂಹಿತೆಯ ವಿಷಯದಲ್ಲಿಯೂ ಉಪಯೋಗಿಸಿದ್ದಿದ್ದರೆ, ಮುಸ್ಲಿಮರ ಕೋಮುವಾದವೂ ಸಾಕಷ್ಟು ಕಡಿಮೆಯಾಗುತ್ತಿತ್ತು ಹಾಗೂ ಅವರಲ್ಲಿ ವಿಶಾಲ ಮನೋಭಾವವೂ ಬೆಳೆಯುತ್ತಿತ್ತು, ಎಂಬ ಖಚಿತ ಅಭಿಪ್ರಾಯ ಅವರದ್ದಾಗಿತ್ತು.
“ಕಾಂಗ್ರೆಸ್ ಪಕ್ಷವನ್ನು ಸೇರಿದ “ರಾಷ್ಟ್ರೀಯ” ಮುಸ್ಲಿಂ ನಾಯಕರು ಸಹ ಕೋಮುವಾದಿಗಳೂ – ಸ್ವಾರ್ಥಿಗಳೂ ಆಗಿದ್ದರು. ಮುಸ್ಲಿಂ ಸಮಾಜದ ಸುಧಾರಣೆಯನ್ನು ಅವರೂ ಬಯಸುತ್ತಿರಲಿಲ್ಲ. ಅಷ್ಟೇ ಅಲ್ಲ, ಅಜ್ಞಾನಿಗಳನ್ನು – ಅಮಾಯಕರನ್ನು ಹಾಗೆಯೇ ಇಟ್ಟು, ಅವರ ಪ್ರತ್ಯೇಕತಾ ಭಾವನೆಯನ್ನು ಪೋಷಿಸಿ, ಅದರ ಆಧಾರದ ಮೇಲೆ ತಮ್ಮ ನಾಯಕಪಟ್ಟವನ್ನು ಕಾಪಾಡಿಕೊಳ್ಳುವುದೇ ಅವರ ದುರುದ್ದೇಶವಾಗಿತ್ತು. ಇತರ “ಸೆಕ್ಯುಲರ್” ಪಕ್ಷಗಳ, ಸಮಾಜವಾದಿ ಪಕ್ಷಗಳ ಮುಸ್ಲಿಂ ಮಂತ್ರಿಗಳದ್ದೂ ಇದೇ ದೃಷ್ಟಿಕೋನ. ಹಿಂದುಗಳಂತೆ ಮುಸಲ್ಮಾನರೂ ಸುರಕ್ಷಿತರಾದರೆ ಹೊಸ ನಾಯಕರು ತಲೆ ಎತ್ತುತ್ತಾರೆ. ಆಗ ತಮ್ಮ ನಾಯಕತ್ವದ ಗುತ್ತಿಗೆ ಹೊರಟುಹೋಗುತ್ತದೆ, ಎಂಬುದು ಈ ಮುಸ್ಲಿಂ ಕೋಮುವಾದಿ ನಾಯಕರಿಗೆ ಚೆನ್ನಾಗಿ ಗೊತ್ತಿದೆ” ಎಂದಿದ್ದರು ಹಮೀದ್.
ಇದು 1971ರಲ್ಲಿ ನಡೆದ ಪತ್ರಿಕಾ ಸಂದರ್ಶನ. ಹಮೀದ್ ಅವರಂತಹ ಮುಸ್ಲಿಂ ನಾಯಕರು ಅದೆಷ್ಟು ದುರ್ಲಭ, ಅದೆಷ್ಟು ಅಪರೂಪ ಎಂಬ ಅಂಶವು ಕಳೆದ ನಾಲ್ಕಾರು ದಶಕಗಳ ನಮ್ಮ ದೇಶದ ರಾಜಕಾರಣವನ್ನು ಗಮನಿಸಿದವರಿಗೆ ವ್ಯಥೆಯುಂಟುಮಾಡುತ್ತದೆ. ‘ಮುಸ್ಲಿಮರೊಬ್ಬರು ಹೀಗೆಲ್ಲಾ ಯೋಚಿಸಲು ಸಾಧ್ಯವೇ?’ ಎಂಬ ವಿಷಾದಪೂರ್ಣ ಅಚ್ಚರಿಯ ಭಾವ ನಮ್ಮ ಮನಸ್ಸನ್ನು ಆವರಿಸುತ್ತದೆ ಮತ್ತು ಹಮೀದ್ ಅವರ ಸ್ಥಾನವಿನ್ನೂ ಖಾಲಿಯಾಗಿಯೇ ಇದೆ ಎಂಬ ಅಂಶವು ಇನ್ನಷ್ಟು ವ್ಯಥೆಯುಂಟುಮಾಡುತ್ತದೆ (ನಿಧನ: 3ನೆಯ ಮೇ 1977).
“ನಮ್ಮ ದೇಶದಾದ್ಯಂತ ಇರುವ ವಕ್ಫ್ ಹಣ ಬಹಳ ದೊಡ್ಡ ಪ್ರಮಾಣದ್ದು. ಅದನ್ನು ಕೋಮುದ್ವೇಷ ಹರಡಲು ಬಳಸಲಾಗುತ್ತಿದೆ. ಅದೇ ಹಣವನ್ನು ಮುಸ್ಲಿಮರಿಗೆ ಆಧುನಿಕ ಶಿಕ್ಷಣ ನೀಡಲು ಉಪಯೋಗಿಸಿದ್ದಿದ್ದರೆ, ಎಷ್ಟೋ ಹಾನಿ ಕಡಿಮೆಯಾಗುತ್ತಿತ್ತು. ಸರ್ಕಾರ ಈ ನಿಧಿಯ ಮೇಲೆ ನಿಯಂತ್ರಣವಿಟ್ಟುಕೊಳ್ಳಬೇಕು. ವಕ್ಫ್ ಹಣದ ವಿನಿಯೋಗ ಆಗುತ್ತಿರುವ ವಿಧಾನದ ತನಿಖೆಯೂ ಆಗಬೇಕು. ಆಗ ಅನೇಕ ಆಶ್ಚರ್ಯಕರ ಸಂಗತಿಗಳು ಹೊರಬೀಳುತ್ತವೆ. ಪ್ರತ್ಯೇಕತೆಯ ಅಪಾಯವೆಂದರೆ ಇದೇ. ಮುಸ್ಲಿಂ ಮತದಾರರಿಗೆ ಇದು ಗೊತ್ತೇ ಆಗುತ್ತಿಲ್ಲ. ಇತರರೊಡನೆ ಸೇರಿದಾಗ, ತಮ್ಮ ಮತ್ತು ಇತರರ ನಡುವಿನ ವ್ಯತ್ಯಾಸ ಗೊತ್ತಾಗುತ್ತದೆ ಮತ್ತು ಹೊಸಹೊಸ ವಿಚಾರಗಳು ತಿಳಿಯುತ್ತವೆ. ಅದಕ್ಕೇ ಈ ಪಟ್ಟಭದ್ರ ಹಿತಾಸಕ್ತಿಯ ಜನರು ಅವಕಾಶವನ್ನೇ ನೀಡುತ್ತಿಲ್ಲ. ಈ ಪ್ರತ್ಯೇಕತೆಯನ್ನು ದೂರ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ, ಎಂಬ ಕಾರಣಕ್ಕೇ ನನ್ನನ್ನು ‘ಮುಸ್ಲಿಂ ವಿರೋಧಿ’ ಎಂದು ಬಿಂಬಿಸುತ್ತಿದ್ದಾರೆ. ಸಾಮೂಹಿಕವಾಗಿ ಮುಸ್ಲಿಮರನ್ನು ಪ್ರತ್ಯೇಕಿಸುವ ಚಳವಳಿಗಳನ್ನು ಸಹ, ಈ ಜನರು ಸರ್ಕಾರದ ಬೆಂಬಲದಿಂದಲೇ ನಡೆಸುತ್ತಾರೆ” ಎಂದಿದ್ದರು ಹಮೀದ್ ದಲವಾಯಿ.
ಕೋಮುವಾದ ಮತ್ತು ಪ್ರತ್ಯೇಕತೆಗಳನ್ನು ಹಬ್ಬಿಸುವ ಒಂದು ಸಾಧನವಾಗಿ ಉರ್ದು ಭಾಷೆಯನ್ನು, ಬಳಸಿದ ಬಗೆಗೂ ದಲವಾಯಿ ಆಕ್ರೋಶ ವ್ಯಕ್ತಪಡಿಸಿದ್ದರು. “ಮಹಾರಾಷ್ಟ್ರದಲ್ಲಿ ಮರಾಠಿ, ಕರ್ನಾಟಕದಲ್ಲಿ ಕನ್ನಡ ಇರುವಂತೆ, ಉತ್ತರ ಪ್ರದೇಶದ ಭಾಷೆ ಹಿಂದಿ. ಆದರೆ, ‘ಉತ್ತರ ಪ್ರದೇಶದಲ್ಲಿ ಉರ್ದು ಭಾಷೆಗೆ ದ್ವಿತೀಯ ಭಾಷೆಯ ಮಾನ್ಯತೆ-ಸ್ಥಾನಮಾನ ನೀಡಬೇಕು; ಅದು ಮುಸ್ಲಿಮರ ಭಾಷೆ’ ಎಂಬ ಚಳವಳಿಯನ್ನು ಈ ‘ಸೆಕ್ಯುಲರ್’ ಮುಸ್ಲಿಂ ನಾಯಕರು ‘ಸೆಕ್ಯುಲರ್’ ಹಿಂದುಗಳ ಬೆಂಬಲದಿಂದ ನಡೆಸುತ್ತಿದ್ದಾರೆ. ಧರ್ಮಕ್ಕೆ ಭಾಷೆ ಇದೆಯೇ? ಸೆಕ್ಯುಲರ್-ವಾದಿಗಳು ಇದನ್ನು ಒಪ್ಪುವುದು ಎಷ್ಟು ಹಾಸ್ಯಾಸ್ಪದ, ನೋಡಿ!
ಆ ಸಂದರ್ಶನದಲ್ಲಿ, ಪ್ರಜಾತಂತ್ರೀಯ ಪ್ರಾತಿನಿಧ್ಯ ಕುರಿತು, ಚುನಾವಣೆಗಳ ಬಗೆಗೆ ದಲವಾಯಿ ಅವರು ಮಹತ್ತ್ವದ ಮಾತುಗಳನ್ನು ಆಡಿದ್ದಾರೆ. ಅವರ ದೂರದೃಷ್ಟಿ, ಅಪಾಯ-ಸಂಭಾವ್ಯತೆಯನ್ನು ಗುರುತಿಸುವ ಶಕ್ತಿ, ಕಳಕಳಿಗಳು ವಿಸ್ಮಯ ಹುಟ್ಟಿಸುತ್ತವೆ. “ಚುನಾವಣೆಗಳಲ್ಲಿ ಜಾತಿ-ಮತಗಳ ಆಧಾರದ ಮೇಲೆ ಪ್ರಾತಿನಿಧ್ಯವಿದ್ದರೆ ಅದು ಪ್ರಜಾತಂತ್ರ ಎನ್ನಿಸಿಕೊಳ್ಳುತ್ತದೆಯೇ? ನೈಜ ಸೆಕ್ಯುಲರಿಸಮ್ಮಿನ ಸಮಾಧಿಯನ್ನೇ ಇವರು ಕಟ್ಟುತ್ತಿದ್ದಾರೆ. ಉರ್ದು ಭಾಷೆಗೆ ವಿಶೇಷ ಸ್ಥಾನಮಾನ ಕೇಳುವ, ಈ ಪ್ರತ್ಯೇಕತಾವಾದಿ ಬೇಡಿಕೆಯನ್ನು ಬೇರೆ ರಾಜ್ಯಗಳಲ್ಲಿಯೂ ಹರಡುವ ಪ್ರಯತ್ನ ನಡೆದಿದೆ. ಮುಸ್ಲಿಮರದ್ದೇ ಒಂದು ಪ್ರತ್ಯೇಕ ಭಾಷೆ, ಅದರಲ್ಲಿಯೇ ಅವರು ಪ್ರಮಾಣವಚನ ಸ್ವೀಕರಿಸಬೇಕು, ಎಂಬುದನ್ನು ಒಪ್ಪಿದರೆ, ನಾಳೆ ಸರ್ಕಾರಿ ಗೆಜೆಟ್ ಅನ್ನು ಕೂಡ ಉರ್ದುವಿನಲ್ಲಿ ಹೊರಡಿಸಬೇಕೆಂಬ ಒತ್ತಾಯ ಬರಬಹುದು. ಅಷ್ಟೇ ಏಕೆ, ಮುಸ್ಲಿಮರ ಪ್ರತಿನಿಧಿಯಾಗಿ ಮುಸ್ಲಿಂ ಮಂತ್ರಿ ಇರಬೇಕೆನ್ನುವಾಗ, ನಾಳೆ ಮುಸ್ಲಿಮರ ಮೊಕದ್ದಮೆಗಳನ್ನು ಇತ್ಯರ್ಥ ಪಡಿಸಲು, ಮುಸ್ಲಿಂ ನ್ಯಾಯಾಧೀಶರೇ ಬೇಕು, ಎನ್ನುವ ಕಾಲ ಬರಬಹುದು. ಅಧಿಕಾರಕ್ಕಾಗಿ ಏನು ಮಾಡಲೂ ಹೇಸದ ‘ಸೆಕ್ಯುಲರ್’ ಹಿಂದೂ ನಾಯಕರು ಇಂತಹ ಬೇಡಿಕೆಗಳನ್ನು ಮಾನ್ಯ ಮಾಡಲೂ ಹಿಂಜರಿಯರು!
ನೋಡಿ! ಹಿಂದುಗಳು ತಾವಿರುವ ಪ್ರಾಂತದ ಭಾಷೆಯನ್ನೇ ಮಾತನಾಡುತ್ತಾರೆ. ಅದರಲ್ಲಿಯೇ ವ್ಯವಹರಿಸುತ್ತಾರೆ. ಪ್ರತ್ಯೇಕ ಭಾಷೆಯ ವಿಷಯ-ವಿಚಾರ ಅವರಿಗೆ ಬರುವುದೇ ಇಲ್ಲ. ಇದು ಅವರಲ್ಲಿ ವಿಶಾಲ ಭಾವನೆ, ರಾಷ್ಟ್ರೀಯ ವಿಚಾರಗಳು ತುಂಬಿರುವುದರ ಸಂಕೇತ. ಅಂತೆಯೇ, ಪ್ರಗತಿಶೀಲತೆ ಮತ್ತು ಶಿಕ್ಷಣದಲ್ಲಿ ಮುಂದುವರಿದಿರುವ ಹೆಗ್ಗುರುತೂ ಹೌದು. ಅದೇ ರೀತಿ, ಅವರು ಕೈಗಾರಿಕೆ – ವ್ಯಾಪಾರ – ವಿಜ್ಞಾನ ಮತ್ತಿತರ ರಂಗಗಳಲ್ಲಿಯೂ ಮುಂದುವರಿದಿದ್ದಾರೆ. ಅದೇ, ಮುಸಲ್ಮಾನರನ್ನು ಪ್ರತ್ಯೇಕವಾಗಿಟ್ಟು ಅಶಿಕ್ಷಿತರಾಗಿ ತಮ್ಮ ಗೂಡಿನಲ್ಲಿಯೇ ಇರುವಂತೆ ತಳ್ಳಿರುವುದರಿಂದ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅವರು ಹಿಂದುಳಿದಿದ್ದಾರೆ.
ಹಾಗಾಗಿ, ಮುಸ್ಲಿಮರನ್ನು ಪ್ರತ್ಯೇಕತೆಯ ಮತ್ತು ಕೋಮುವಾದದ ಆತಂಕದಿಂದ ಪಾರು ಮಾಡುವುದು, ಮತವೆಂಬುದು ವ್ಯಕ್ತಿಗತ ಮತ್ತು ರಾಷ್ಟ್ರೀಯತೆಯು ಇಡೀ ಸಮಾಜದ ಭಾವನೆ ಎಂಬ ವಿಚಾರವನ್ನು ಮನಗಾಣಿಸುವುದು ಕಷ್ಟಕರವಾಗಿದೆ. ಟರ್ಕಿ, ಇರಾಕ್, ಈಜಿಪ್ಟ್‌ಗಳಲ್ಲಿ ಉರ್ದು ಎಲ್ಲಿದೆ? ಬುರ್ಖಾ ಪದ್ಧತಿ ಎಲ್ಲಿದೆ? ಅಲ್ಲಿ ಬಹುಪತ್ನಿತ್ವವೂ ಇಲ್ಲ. ಆದರೆ, ಭಾರತದಲ್ಲಿ ಸುಧಾರಣೆಗಳನ್ನು ತರಲು ಸರ್ಕಾರದಲ್ಲಿರುವ ನಾಯಕರೇ ಅಡ್ಡಿಯಾಗಿದ್ದಾರೆ.
ಹಳೆಯ ಗೊಡ್ಡು ವಿಚಾರಗಳಿಂದ, ಪದ್ಧತಿಗಳಿಂದ ಮತ್ತು ಕೋಮುವಾದಿ ನಾಯಕರ ಪ್ರಭಾವಗಳಿಂದ ಮೊದಲು ಮುಸ್ಲಿಮರನ್ನು ಮುಕ್ತಗೊಳಿಸಬೇಕು. ಆಗ ಮಾತ್ರ ಅವರ ಪ್ರಗತಿ ಸಾಧ್ಯ. ಇದಕ್ಕಾಗಿಯೇ ಒಂದು ಸುಧಾರಣಾ ಚಳವಳಿ ಆರಂಭವಾಗಬೇಕು. ವಿಚಿತ್ರವೆಂದರೆ, ಇಂತಹ ಚಳವಳಿಯನ್ನು ಸೆಕ್ಯುಲರ್-ವಾದಿ ಹಿಂದೂಗಳು, ಕೋಮುವಾದಿ ಮುಸ್ಲಿಮರು ಒಟ್ಟಾಗಿಯೇ ವಿರೋಧಿಸುತ್ತಾರೆ! ಭಾರತೀಯ ಜನ ಸಮುದಾಯವನ್ನು ಇವರು ರಾಷ್ಟ್ರೀಯ ಸಮುದಾಯವೆಂದೇ ಪರಿಗಣಿಸುವುದಿಲ್ಲ ಮತ್ತು ಬಹು-ಸಂಸ್ಕೃತಿಯ ಸಮಾಜವೆಂದೇ ವಾದಿಸುತ್ತಾರೆ. ಇವರ ಆಲೋಚನಾ ವಿಧಾನದಲ್ಲಿಯೇ ದೋಷವಿದೆ. ಇದು ಅವರ ಸ್ವಾರ್ಥ ತುಂಬಿದ ರಾಜಕೀಯಕ್ಕೂ ಅನುಕೂಲಕರವೇ ಆಗಿದೆ! ಇದು ಬದಲಾಗಬೇಕು. ಪ್ರತ್ಯೇಕ ಉರ್ದು ಶಾಲೆಗಳು ಹೋಗಬೇಕು. ಶಾಲೆಗಳು – ಶಿಕ್ಷಣ ಎಲ್ಲರಿಗೂ ಸಮಾನವಾಗಿರಬೇಕು. ಕ್ಷೇತ್ರೀಯ ಭಾಷೆಗಳಲ್ಲಿ ಸಮಾನ ಪಠ್ಯಕ್ರಮದ ಶಿಕ್ಷಣ ಇರಬೇಕು.
ಇದನ್ನೂ ಓದಿ: ನನ್ನ ದೇಶ ನನ್ನ ದನಿ: “ಬೇಟೆಯಾಡಲು ಹೋಗಿ ಅಜಂತಾ ಕಂಡುಹಿಡಿದನಲ್ಲಾ ಒಬ್ಬ ಬ್ರಿಟಿಷ್ ಅಧಿಕಾರಿ, ಅದು ಅದ್ಭುತ”!
ಇದರಿಂದ ಮುಸ್ಲಿಂ ಪ್ರತ್ಯೇಕತೆಯು ಕೊನೆಗೊಂಡು, ಅವರಿಗೆ ವಿಶಾಲ ಸಮಾಜದೊಡನೆ ಬೆರೆಯುವ, ಹೊಸ ಬೆಳಕಿನಲ್ಲಿ – ಹೊಸ ವಾತಾವರಣದಲ್ಲಿ ಮುಕ್ತವಾಗಿ ಉಸಿರಾಡಿ ವಿಹರಿಸುವ ಅವಕಾಶಗಳು ದೊರೆಯುತ್ತವೆ. ಅವರ ಮನೋಭಾವದಲ್ಲಿ ಅಗತ್ಯವಿರುವ ಬದಲಾವಣೆಗೆ ಯೋಗ್ಯ ವಾತಾವರಣ ನಿರ್ಮಾಣವಾಗುತ್ತದೆ. ಇತರರಂತೆಯೇ, ತಾವೂ ಹಳೆಯ ಗೊಡ್ಡು ವಿಚಾರಗಳನ್ನು ಬಿಟ್ಟು ಆಧುನಿಕ ವಿಚಾರಗಳಿಂದ ಮುನ್ನಡೆಯಬೇಕು, ಶೈಕ್ಷಣಿಕ – ಔದ್ಯೋಗಿಕ – ಸಾಮಾಜಿಕ ರಂಗಗಳಲ್ಲಿಯೂ ರಾಜಕೀಯದಲ್ಲಿಯೂ ಎಲ್ಲರ ಜೊತೆಗೆ ಪ್ರಗತಿಯನ್ನು ಸಾಧಿಸಬೇಕು, ಎಂಬ ಆಕಾಂಕ್ಷೆ ಅವರಲ್ಲಿ ಮೂಡಲು ಸಹಾಯವಾಗುತ್ತದೆ. ಸಮಾನ ವ್ಯವಹಾರ – ವಿಚಾರ – ಏಕರಾಷ್ಟ್ರೀಯ ಭಾವನೆ – ಸಮಾನ ಆಸೆ ಆಕಾಂಕ್ಷೆಗಳ ಒಂದೇ ರಾಷ್ಟ್ರೀಯ ಸಮಾಜವು ಇವೆಲ್ಲ ಬದಲಾವಣೆಗಳಿಂದ ರೂಪುಗೊಳ್ಳಲು ಸಾಧ್ಯವಿದೆ.
ಇದೆಲ್ಲ ಸಾಧ್ಯವೇ, ಸಂಭವನೀಯವೇ ಎಂಬಂತಹ ಪ್ರಶ್ನೆಗೆ ನಾನು ಹೇಳುವುದಿಷ್ಟೆ. ನಾನು ಆಶಾವಾದಿ ಕಾರ್ಯಕರ್ತ. ಮುಸ್ಲಿಂ ಸಮುದಾಯದಲ್ಲಿಯೂ ಸ್ವಲ್ಪ ಜಾಗೃತಿ ಉಂಟಾಗಿದೆ. ಅದರ ಗತಿ ತೀವ್ರಗೊಳ್ಳಬೇಕು. ನನ್ನ ಇಂತಹ ವಿಚಾರಗಳನ್ನು ಅವರು ಉತ್ಸಾಹದಿಂದ ಕೇಳುತ್ತಿದ್ದಾರೆ, ಬೆಂಬಲ ನೀಡುತ್ತಿದ್ದಾರೆ. ಆದರೆ ಇಷ್ಟು ಸಾಲದು. ಸೆಕ್ಯುಲರ್-ವಾದಿ ಹಿಂದೂ ನಾಯಕರು, ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ಈ ಚಳವಳಿಯನ್ನು ಸ್ವಾಗತಿಸಬೇಕು, ಪ್ರೋತ್ಸಾಹಿಸಬೇಕು.”
ಈ ಪತ್ರಿಕಾ ಸಂದರ್ಶನವನ್ನು ನೀಡಿದಾಗ, ದಲವಾಯಿಯವರಿಗೆ ಬರಿಯ 39 ವರ್ಷ. ಅವರ ದೂರದೃಷ್ಟಿ, ಅಧ್ಯಯನ, ಕಳಕಳಿಗಳು ಸೋಜಿಗವನ್ನು ಉಂಟುಮಾಡುತ್ತವೆ. ಹಮೀದ್ ದಲವಾಯಿ ಅವರ ವಿಚಾರಗಳನ್ನು ಪರಾಮರ್ಶಿಸುವಾಗ, ಅಭಿಪ್ರಾಯಗಳನ್ನು ವಿಶ್ಲೇಷಿಸುವಾಗ ಥಟ್ಟನೆ ಅವರೀಗ ಇರಬೇಕಾಗಿತ್ತು ಅನ್ನಿಸುತ್ತದೆ. ಅವರ ಬದುಕಿನ, ಅವರ ವಿಚಾರಗಳ ಅರ್ಥಪೂರ್ಣತೆ ಇದ್ದುದೇ ಹಾಗೆ.
ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಪ್ರಾಚೀನ ಭಾರತದ ವಿಶಿಷ್ಟ ಸಾಂಸ್ಕೃತಿಕ ಲೋಕ