Site icon Vistara News

ನನ್ನ ದೇಶ ನನ್ನ ದನಿ ಅಂಕಣ: ಬ್ರಿಟಿಷರಿಗಿಂತಲೂ ನೆಹರೂ ಆಡಳಿತದಲ್ಲಿಯೇ ಹೆಚ್ಚಿತು ಮತಾಂತರ

nehru ans religious conversion

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2023/12/ANM-vistara-19th-Dec-2023-Nehru-conversions.mp3

ಜವಾಹರಲಾಲ್ ನೆಹರೂ (Jawaharlal Nehru) ಅವರ ಆಡಳಿತಾವಧಿಯಲ್ಲಾದ ಅವಘಡಗಳು, ಪ್ರಕರಣಗಳು, ನಂಬಲಸಾಧ್ಯ ಎನ್ನುವಂತಹವು. In Fact, ದುರಂತಗಳೇ ಹೆಚ್ಚು. 1950ರ ದಶಕದ ಚಿತ್ರವೊಂದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತೇನೆ:

ಫೆಲಿಕ್ಸ್ ಆಲ್ ಫ್ರೆಡ್ ಪ್ಲ್ಯಾಟನರ್ ಓರ್ವ ಜೆಸ್ಯೂಟ್ ಮತಪ್ರಚಾರಕ. ಆತನ “ದಿ ಕ್ಯಾಥೊಲಿಕ್ ಚರ್ಚ್ ಇನ್ ಇಂಡಿಯಾ: ಎಸ್ಟರ್ ಡೇ ಅಂಡ್ ಟುಡೇ” ಕೃತಿಯು 1964ರಲ್ಲಿ ಪ್ರಯಾಗರಾಜ್(ಅಲಹಾಬಾದ್)ನಿಂದ ಪ್ರಕಟವಾಗಿದೆ. ಓದುವವರಿಗೆ ಅಚ್ಚರಿಯೇ ಕಾದಿದೆ. 1950ರ ದಶಕದ ಸ್ವಾತಂತ್ರ್ಯೋತ್ತರ ಭಾರತದ ಭಯಾನಕ ಚಿತ್ರಗಳನ್ನು ಇಲ್ಲಿ ಕಾಣಬಹುದು. ಕ್ರೈಸ್ತ ಮತಪ್ರಚಾರಕರಿಗೆ ಒದಗಿಬಂದ ಒಳ್ಳೆಯ ಕಾಲದ ಬಗೆಗೆ ಪ್ಲ್ಯಾಟನರ್ ಹೀಗೆ ಬರೆದಿದ್ದಾನೆ:

“…..ಭಾರತದಲ್ಲಿರುವ ಅನುಕೂಲಕರ ಸನ್ನಿವೇಶಕ್ಕೆ ಚರ್ಚ್ ತುಂಬಾ ತುಂಬಾ ಸಂತೋಷಪಡಬೇಕು. ಇಲ್ಲಿನ ಹೊಸ ಸರ್ಕಾರವು ನಮಗೆ ಒಂದು ಸ್ವಚ್ಛಂದ ವಾತಾವರಣವನ್ನು ಕಲ್ಪಿಸಿದೆ. ಇತರ ರಿಲಿಜನ್ನುಗಳೊಂದಿಗೆ ಸಮಾನತೆಯನ್ನೂ ಖಚಿತಪಡಿಸಿದೆ. ಇದರಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಚರ್ಚ್, ಯಾವುದೇ ಅಂಕೆ ಶಂಕೆಗಳಿಲ್ಲದೆ, ಹಿಂದೆಂದೂ ಇಲ್ಲದಷ್ಟು ವ್ಯಾಪಕವಾಗಿ ತನ್ನ (ಮತಾಂತರದ religious conversion) ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು, ಬೆಳೆಸಿಕೊಂಡು ಹೋಗಲು ಅನುಕೂಲವಾಗಿದೆ…..” (ಪುಟ ೬).

ಈ ಕಾಲಘಟ್ಟದಲ್ಲಿ ವಿದೇಶೀ ಕ್ರೈಸ್ತ ಮತಪ್ರಚಾರಕರ ಸಂಖ್ಯೆಯು ಅಭೂತಪೂರ್ವವಾಗಿ ಹೆಚ್ಚಿತು. ಮುಂದುವರಿದಂತೆ, ಪ್ಲ್ಯಾಟನರ್ ಇನ್ನಷ್ಟು ವಿವರ ತಿಳಿಸುತ್ತಾನೆ:

“…… ಸ್ವಾತಂತ್ರ್ಯಾನಂತರ ಭಾರತಕ್ಕೆ ಬರುವ ಕ್ರೈಸ್ತ ಮತಪ್ರಚಾರಕರ ಸಂಖ್ಯೆಯು ಹೆಚ್ಚುತ್ತ ಹೋದುದು ಗಮನಾರ್ಹವಾಗಿದೆ. ದ್ವಿತೀಯ ಮಹಾಯುದ್ಧದ ಕಾಲಾವಧಿಯಲ್ಲಿ, ಎಲ್ಲೋ ಕೆಲವರಷ್ಟೇ ಭಾರತಕ್ಕೆ ಬರಲು ಸಾಧ್ಯವಾಗುತ್ತಿತ್ತು. ಭಾರತಕ್ಕಿಂತ ಯೂರೋಪಿನಲ್ಲಿ ಅವರ ಸಂಖ್ಯೆಯು ಹೆಚ್ಚಾಗಿತ್ತು. ಇದೇ ಅವಧಿಯಲ್ಲಿ ಚೀನಾದಲ್ಲಿ ಅಧಿಕಾರಕ್ಕೆ ಬಂದ ಕಮ್ಯೂನಿಸ್ಟರು, ಸಾವಿರಾರು ಕ್ರೈಸ್ತಮತ ಪ್ರಚಾರಕರನ್ನು ತಮ್ಮ ದೇಶದಿಂದ ಆಚೆ ಹಾಕಿದರು. ಹೊರಬಿದ್ದ ಕೆಲವರು ಭಾರತಕ್ಕೆ ವರ್ಗಾವಣೆಗೊಂಡರು (ಅದೇ ಕೃತಿ, ಪುಟ 10).

ಕ್ರೈಸ್ತ ಮಿಷನರಿಗಳ (Cristian missionaries) ಈ ಮುನ್ನಡೆಗಿಂತ ಹೆಚ್ಚು ಹಾನಿ ಉಂಟುಮಾಡಿದ್ದು, ಅವರು ಎರಡು ಪ್ರಕರಣಗಳನ್ನು “ಲೀಲಾಜಾಲವಾಗಿ” ನಿಭಾಯಿಸಿದ ಬಗೆ. 1950ರ ದಶಕದ ದಾಖಲೆಗಳನ್ನು ಅಧ್ಯಯನ ಮಾಡಿದಾಗ, ಉಂಟಾಗುವ ವಿಷಾದಕ್ಕಿಂತ ಆಘಾತವೇ ಹೆಚ್ಚು. 1953ರಲ್ಲಿ ಈ ಕುರಿತು ದಾಖಲೆಗಳನ್ನು ಪ್ರಕಟಿಸಿ, ಈ ಹಿಂದೂ-ದ್ರೋಹಿ ಮಿಷನರಿಗಳ ಚಟುವಟಿಕೆಗಳನ್ನು ಬಯಲು ಮಾಡಿದವರು ವಿದ್ವಾಂಸ ಕೆ.ಎಂ.ಪಣಿಕ್ಕರ್ (ಸರಿಯಾಗಿ ಗಮನಿಸಿ, ದೇಶದ್ರೋಹಿ ಕಮ್ಯೂನಿಸ್ಟ್ ಇತಿಹಾಸಕಾರ ಕೆ.ಎನ್.ಪಣಿಕ್ಕರ್ ಅಲ್ಲ, ಇವರೇ ಬೇರೆ). ಪಣಿಕ್ಕರ್ ಅವರ ಈ “Asia and Western Dominance”. London. 1953, ಗ್ರಂಥವು ಬಹಳ ಜನರ ಕಣ್ಣು ತೆರೆಸಿತು.

ಆಗ ಮಧ್ಯಪ್ರದೇಶದಲ್ಲಿದ್ದುದು ಕಾಂಗ್ರೆಸ್ ಸರ್ಕಾರವೇ. ಅದೆಷ್ಟು ದೇಶದ್ರೋಹಿ ಮತಾಂತರದ ಚಟುವಟಿಕೆಗಳು ನಿರ್ಲಜ್ಜೆಯಿಂದ ನಡೆಯುತ್ತಿದ್ದವು, ನಡೆದವು ಎಂದರೆ ಅಂದಿನ ಆ ಸರ್ಕಾರವೇ, ನಾಗಪುರದ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ|| ಭವಾನಿ ಶಂಕರ ನಿಯೋಗಿ ಅವರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿತು. ನ್ಯಾಯಮೂರ್ತಿ ನಿಯೋಗಿ ಅವರ ಈ ವರದಿಯು ಬಹಳ ಮಹತ್ತ್ವದ ದಾಖಲೆಯಾಗಿದೆ. ಮಧ್ಯಪ್ರದೇಶದಾದ್ಯಂತ ಪ್ರವಾಸ ಮಾಡಿ ಮತಾಂತರಿಗಳ ದುಷ್ಟ-ಹಾನಿಕಾರಕ ಚಟುವಟಿಕೆಗಳನ್ನು ವರದಿ ಮಾಡಲಾಯಿತು.

ನೆಹರೂ ಅದೆಂತಹ ಭಯದ ವಾತಾವರಣವನ್ನು ನಿರ್ಮಿಸಿದ್ದರೆಂದರೆ, ಆಗ ಅಧಿಕಾರದಲ್ಲಿದ್ದ ಮಧ್ಯಪ್ರದೇಶ ಸರ್ಕಾರ, ಎಲ್ಲ ರಾಜಕೀಯ ಪಕ್ಷಗಳು, ಎಲ್ಲ ಮಾಧ್ಯಮದವರು ಮತ್ತು ಸಹಜವಾಗಿ ದುರ್ಬುದ್ಧಿಜೀವಿಗಳು ಎಲ್ಲರೂ ಎಲ್ಲರೂ ತಮ್ಮದೇ ಆದ “ಕಾರಣಗಳಿಗಾಗಿ” ಈ ಕ್ರೈಸ್ತ ಮಿಷನರಿಗಳನ್ನು ಪರೋಕ್ಷವಾಗಿ ರಕ್ಷಿಸಿದರು. ನೆಹರೂ ಅವರ ಬತ್ತಳಿಕೆಯಲ್ಲಿದ್ದ ಅತ್ಯಂತ ಕೆಟ್ಟ ಬೈಗುಳವೆಂದರೆ “ಹಿಂದೂ ಕೋಮುವಾದಿ”. ತಮ್ಮನ್ನು ಎಲ್ಲಿ “ಹಿಂದೂ ಕೋಮುವಾದಿ” ಎಂದು ಬ್ರ್ಯಾಂಡ್ ಮಾಡಿಬಿಡುತ್ತಾರೋ ಎಂದು ಹೆದರಿ, ಈ ಸಮಸ್ಯೆಗಳ ಬಗೆಗೆ ಸಾರ್ವಜನಿಕ ಅಧ್ಯಯನಗಳನ್ನಾಗಲೀ, ಚರ್ಚೆಗಳನ್ನಾಗಲೀ ಯಾರೂ ಮಾಡಲೇ ಇಲ್ಲ.

“ಮತಪ್ರಚಾರದ ಹಕ್ಕು ಕೇವಲ ಭಾರತೀಯರಿಗೆ ಮಾತ್ರವೋ ಅಥವಾ ಭಾರತದಲ್ಲಿ ವಾಸಿಸುತ್ತಿರುವ ವಿದೇಶೀಯರಿಗೂ, ಉದಾಹರಣೆಗೆ, ಕ್ರೈಸ್ತ ಮಿಷನರಿಗಳಿಗೂ ಅನ್ವಯವಾಗುತ್ತದೆಯೋ?” ಎಂಬ ಪ್ರಶ್ನೆಯನ್ನು ಲೋಕಸಭೆಯಲ್ಲಿ ಎತ್ತಲಾಯಿತು. 1954ರ ಮಾರ್ಚ್ ತಿಂಗಳಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯವು “ಈ ಹಕ್ಕು ಮೂಲಭೂತ ಹಕ್ಕು. ಆದುದರಿಂದ ಭಾರತದ ಪೌರರಾಗಿರಲಿ ಆಗಿಲ್ಲದಿರಲಿ, ಭಾರತದ ಕಾನೂನಿನ ರಕ್ಷಣೆಯಲ್ಲಿರುವ ಎಲ್ಲರಿಗೂ ಅನ್ವಯವಾಗುತ್ತದೆ” ಎಂದು ವಿವರಣೆ ನೀಡಿತು. ನಮ್ಮ ನ್ಯಾಯಾಂಗ ವ್ಯವಸ್ಥೆಯು ತುಂಬ ತುಂಬ ಉದಾರಿ, ಬಿಡಿ!

ರಾಷ್ಟ್ರೀಯ ಶಕ್ತಿಗಳು ತಮ್ಮ ಹೋರಾಟವನ್ನು ನಿಲ್ಲಿಸಲಿಲ್ಲ. 1955ರಲ್ಲಿ ಭಾರತದ ಸಂಸತ್ತಿನಲ್ಲಿ ಒಂದು ಮಸೂದೆಯನ್ನು ಮಂಡಿಸಲಾಯಿತು. ಅದೇನಾದರೂ ಜಾರಿಗೆ ಬಂದರೆ, ಮಿಷನರಿಗಳ ಕೆಲಸಕ್ಕೆ ಭಾರಿ ಅಡ್ಡಿ ಉಂಟಾಗುತ್ತಿತ್ತು. ಬಲಪ್ರಯೋಗ, ವಂಚನೆ, ಆಮಿಷಗಳ ಮೂಲಕ ಎಗ್ಗಿಲ್ಲದೆ ಮತಾಂತರ ಮಾಡುತ್ತಿದ್ದವರನ್ನು ನಿಯಂತ್ರಿಸಲು ಆ ಮಸೂದೆ ಒಂದು ಕಟ್ಟುಪಾಡು ತರುತ್ತಿತ್ತು. ಸ್ವತಃ ಪ್ರಧಾನಮಂತ್ರಿ ನೆಹರೂ ಅವರೇ ಮಿಷನರಿಗಳ ರಕ್ಷಣೆಗೆ ಧಾವಿಸಿಬಂದರು. “ಈ ಮಸೂದೆಯು ದುಷ್ಕೃತ್ಯಗಳನ್ನು ತಡೆಗಟ್ಟಲು ಅಷ್ಟೇನೂ ಸಹಕಾರಿಯಾಗುವುದಿಲ್ಲ. ಬದಲಿಗೆ ಬಹಳ ಜನರ ಪೀಡನೆಗೆ ಕಾರಣವಾಗಿಬಿಡುತ್ತದೆಯೋ ಎಂಬ ಅಂಜಿಕೆ ನನಗೆ. ದುಷ್ಟಪ್ರವೃತ್ತಿಗಳನ್ನು ನಾವು ಬೇರೆಯೇ ರೀತಿಯಲ್ಲಿ ನಿಗ್ರಹಿಸಬೇಕು. ಕ್ರೈಸ್ತಮತವು ಭಾರತದ ಮುಖ್ಯ ರಿಲಿಜನ್ನುಗಳಲ್ಲಿ ಒಂದು. ಅದು ಭಾರತದಲ್ಲಿ ಸುಮಾರು ಎರಡು ಸಾವಿರ ವರ್ಷಗಳಿಂದ ನೆಲೆಗೊಂಡಿದೆ. ನಮ್ಮ ಕ್ರೈಸ್ತಮತೀಯ ಸ್ನೇಹಿತರು ಹಾಗೂ ದೇಶಬಾಂಧವರ ಮನಸ್ಸಿನಲ್ಲಿ ತಮ್ಮ ಮೇಲೆ ದಬ್ಬಾಳಿಕೆ ನಡೆಯುತ್ತಿದೆ, ಅಥವಾ ದಮನ ನಡೆಯುತ್ತಿದೆ, ಎಂಬ ಭಾವನೆಗಳು ಮೂಡದಂತೆ ನಾವು ಎಚ್ಚರದಿಂದ ವರ್ತಿಸಬೇಕಿದೆ” ಎಂಬ ಹೇಳಿಕೆ ನೀಡಿದರು, ನೆಹರೂ (“The Catholic Church in India: Yesterday and Today” ಪ್ಲ್ಯಾಟ್ ನರ್ ನ ಅದೇ ಗ್ರಂಥ. 1964. ಅಲಹಾಬಾದ್. ಪುಟ 6).

ಗತ ಇತಿಹಾಸದಲ್ಲಿ ಜರುಗಿದ ಕೆಲವು ಸಂಗತಿಗಳು ನಿಜಕ್ಕೂ ಬೆಚ್ಚಿಬೀಳಿಸುತ್ತವೆ. ಮಿಷನರಿಗಳ ದುಷ್ಟ ಚಟುವಟಿಕೆಗಳಿಗೆ ಲಂಗುಲಗಾಮು ಎರಡೂ ಇಲ್ಲದಂತಾದವು. ಬೇರೆಬೇರೆ ರೀತಿಯಲ್ಲಿ ಅವರು ತಮ್ಮ ವಿಧ್ವಂಸಕ ಕೃತ್ಯಗಳನ್ನು ಹೆಚ್ಚಿಸುತ್ತಹೋದರು. ನ್ಯಾಯಮೂರ್ತಿ ನಿಯೋಗಿ ಅವರ ವರದಿಯ ಪ್ರತಿಗಳು ಎಲ್ಲೆಲ್ಲಿ ದೊರೆಯುತ್ತವೆಯೋ, ಗ್ರಂಥಾಲಯಗಳಲ್ಲಿ – ಪುಸ್ತಕ ಮಾರಾಟ ಕೇಂದ್ರಗಳಲ್ಲಿ, ಅವುಗಳನ್ನು ಸಂಗ್ರಹಿಸಿ ಗುರುತು ಸಹ ಸಿಕ್ಕದಂತೆ ನಾಶಪಡಿಸಲಾಯಿತು. ಬಹಳ ಬಹಳ ಶ್ರಮದಿಂದ ಸೀತಾರಾಮ ಗೋಯಲ್ ಅವರು ಒಂದು ಪ್ರತಿಯನ್ನು ಪಡೆದು, 1996ರಲ್ಲಿ ತಮ್ಮ “ವಾಯ್ಸ್ ಆಫ್ ಇಂಡಿಯಾ” ಸಂಸ್ಥೆಯಿಂದ, ತಮ್ಮ ಪ್ರಸ್ತಾವನೆಯೊಂದಿಗೆ ಪ್ರಕಟಿಸಿದರು. ಇದು ಇಂದಿಗೂ ಬಹಳ ಬಹಳ ಮಹತ್ತ್ವದ ಸಾಕ್ಷ್ಯಾಧಾರಗಳನ್ನು ಒದಗಿಸುತ್ತದೆ.

ರಾಜಕುಮಾರಿ ಅಮೃತ್ ಕೌರ್ ಅವರು 20ನೆಯ ಶತಮಾನದ ಆರಂಭದ ದಶಕಗಳಲ್ಲಿ ಗಾಂಧೀ – ನೆಹರೂ ಅವರ ಆಪ್ತರಾಗಿದ್ದರು. ಅವರ ಹೆಸರೇ ಗೊಂದಲ ಹುಟ್ಟಿಸುವಂತಹುದು. ಗೋಲಕನಾಥ ಚಟರ್ಜೀ ಎಂಬಾತ ಬಂಗಾಳದ ಕ್ರೈಸ್ತ ಮಿಷನರಿ. ಈತನ ಒತ್ತಾಯದಿಂದ ಕಪುರ್ತಲಾ ರಾಜವಂಶದ ಸರ್ ಹರನಾಮ್ ಸಿಂಗ್ ಅಹ್ಲುವಾಲಿಯಾ ಕ್ರೈಸ್ತರಾದರು. ಈ ಹರನಾಮ್ ಸಿಂಗ್ ಮಗಳೇ ಅಮೃತ್ ಕೌರ್. ಅವರು ಬೆಳೆದುದೇ ಪ್ರಾಟೆಸ್ಟೆಂಟ್ ಕ್ರೈಸ್ತರಾಗಿ. ಇಂಗ್ಲೆಂಡಿನಲ್ಲಿ ತಮ್ಮ ಶಿಕ್ಷಣವನ್ನು ಪಡೆದು, ಭಾರತವನ್ನು “ಉದ್ಧಾರ ಮಾಡಲು” 1918ರಲ್ಲಿ ಅವರು ಭಾರತಕ್ಕೆ ಹಿಂದಿರುಗಿದರು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಜವಾಹರಲಾಲ್ ನೆಹರೂ ಅವರ ಮಂತ್ರಿಮಂಡಲದಲ್ಲಿ ಆರೋಗ್ಯ ಇಲಾಖೆ, ಕ್ರೀಡಾ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆಗಳ ಮಂತ್ರಿಯಾಗಿ “ಸೇವೆ” ಸಲ್ಲಿಸಿದರು. ಕ್ರೈಸ್ತ ಮಿಷನರಿಗಳ ಪರವಾಗಿಯೇ ಇದ್ದ ತಥಾಕಥಿತ ರಾಜಕುಮಾರಿ ಅಮೃತ್ ಕೌರ್ ಅವರು ಬಿಹಾರ ಮತ್ತು ಮಧ್ಯಪ್ರದೇಶಗಳಲ್ಲಿ ಕ್ರೈಸ್ತ ಮತಪ್ರಚಾರಕರಿಗೆ ಪ್ರತಿಕೂಲ ಪರಿಸ್ಥಿತಿ ಎದುರಾಗಿದೆ, ಎಂದು 1952ರಲ್ಲಿ, ನೆಹರೂ ಅವರ ಬಳಿ ಒದರಿದರು. ತಕ್ಷಣವೇ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ನೆಹರೂ ಅವರು ವಾಗ್ದಂಡನೆ ಮಾಡಿಯೇಬಿಟ್ಟರು. ಬೇರಾವ ರಾಜ್ಯಗಳಲ್ಲಿಯೂ ಕ್ರೈಸ್ತ ಮಿಷನರಿಗಳಿಗೆ ಅಪಚಾರವಾದ ಯಾವುದೇ ವರ್ತಮಾನವಿಲ್ಲದಿದ್ದರೂ, ಸಾರಾಸಗಟಾಗಿ ಎಲ್ಲರಿಗೂ ಎಚ್ಚರಿಕೆಯನ್ನೇ ಕೊಟ್ಟುಬಿಟ್ಟರು.

ಬ್ರಿಟಿಷರ ಕಾಲದಲ್ಲಿ ಅಪಾರವಾದ ಭೂಮಿಯನ್ನು, ಸೌಲಭ್ಯಗಳನ್ನು ದಕ್ಕಿಸಿಕೊಂಡಿದ್ದ ಮಿಷನರಿಗಳು ಅನಂತರದ ದಶಕಗಳಲ್ಲಿ ತಮ್ಮ ಸಾಮ್ರಾಜ್ಯಶಾಹಿಯನ್ನು ಇನ್ನಷ್ಟು ವಿಸ್ತರಿಸಿಕೊಂಡರು. ಅಗಣಿತ ಸಂಖ್ಯೆಯ ಶಿಕ್ಷಣ ಸಂಸ್ಥೆಗಳನ್ನು, ಆಸ್ಪತ್ರೆಗಳನ್ನು ಬೆಳೆಸಿಕೊಂಡರು. ಇಂದು ಕ್ರೈಸ್ತ ಸಂಸ್ಥೆಗಳಾಗಲೀ, ವಕ್ಫ್ ಆಸ್ತಿಗಳಾಗಲೀ ಅದೆಷ್ಟು “ಸಮೃದ್ಧವಾಗಿ” ಕೊಬ್ಬಿವೆಯೆಂದರೆ, ಅಧಿಕೃತ ಅಂಕಿಅಂಶಗಳನ್ನು ನೋಡಿದರೆ ಗಾಬರಿಯೇ ಆಗುತ್ತದೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಸಯ್ಯಿದ್ ರಿಜ್ವಿ ಸ್ವತಃ ಹೇಳಿದ ಸೂಫಿಗಳ ನಿಜ ಕಥನ

ಇದೀಗ 2024 ಧಾವಿಸಿಬರುತ್ತಿದೆ. ಕ್ರಿಸ್ಮಸ್ ಶುಭಾಶಯಗಳನ್ನು ಏಕಪಕ್ಷೀಯವಾಗಿ ಹೇಳುವ ಮುನ್ನ, ಗೋವಾದಲ್ಲಿ ಕ್ರೂರ ನರಹಂತಕ ಸೇಂಟ್ (ಸಂತ ಅಲ್ಲ) ಫ್ರಾನ್ಸಿಸ್ ಕ್ಸೇವಿಯರ್ ನ ಹೆಣದ ಮುಂದೆ “ಮುಗ್ಧ”ರಾಗಿ ಕ್ಯೂ ನಿಂತು ಕೈ ಮುಗಿಯುವ ಮುನ್ನ, ಅಂಧಾನುಕರಣೆಯಿಂದ “Happy New Year” ಹೇಳಿ ಹೇಳಿ ಹಿರಿಹಿರಿಹಿಗ್ಗುವ ಮುನ್ನ, ಇದ್ದಬದ್ದ ಮರ ಗಿಡಗಳನ್ನೆಲ್ಲಾ ಕತ್ತರಿಸಿ, ವಿದ್ಯುತ್ ದೀಪಗಳಿಂದ ಅಲಂಕರಿಸಿ, ಅದನ್ನೇ “ಕ್ರಿಸ್ ಮಸ್ ಟ್ರೀ” ಎಂದು ಮಕ್ಕಳಿಗೆಲ್ಲಾ ತೋರಿಸಿ ಕೇಕ್ ತಿನ್ನಿಸುವ ಮುನ್ನ;

ಯೂರೋಪ್ ಮೂಲದ ಮಿಷನರಿಗಳು ತಮ್ಮ ರಿಲಿಜನ್ನಿನ ಹೆಸರಿನಲ್ಲಿ ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ, ಆಸ್ಟ್ರೇಲಿಯಾ, ಆಫ್ರಿಕಾ ಖಂಡಗಳಲ್ಲಿ ನಡೆಸಿದ ಕೋಟಿ ಕೋಟಿ ಮೂಲನಿವಾಸಿಗಳ ಹತ್ಯಾಕಾಂಡವನ್ನು, ಅಲ್ಲಿನ ಸ್ಥಳೀಯ ಸಂಸ್ಕೃತಿಗಳ ವಿನಾಶವನ್ನು, ಆ ನಿಷ್ಪಾಪ ಜೀವಿಗಳನ್ನೆಲ್ಲಾ ಹಡಗುಗಳ ಮೂಲಕ ಕೊಂಡೊಯ್ದು ಹಿಂಸಿಸಿ ಗುಲಾಮರ ಮಾರುಕಟ್ಟೆಯಲ್ಲಿ ಮಾರಿ ಮಾರಿ ಇನ್ನಿಲ್ಲವಾಗಿಸಿದ ಮತಾಂತರಿ ಪಾಶವೀ ಶಕ್ತಿಗಳನ್ನು, ಮರಗಳನ್ನು ಉಳಿಸಲು ಬಲಿದಾನ ಮಾಡಿದ “ಚಿಪ್ಕೋ” ಆಂದೋಲನವನ್ನು, ಪೂರ್ವಾಂಚಲದ ಹತಭಾಗ್ಯರು ತಮ್ಮ ದೇಶದ ವಿರುದ್ಧವೇ ತಿರುಗಿಬೀಳುವಂತೆ ಮಾಡಿದ ಕುತಂತ್ರಿ ಮತಾಂತರಿಗಳನ್ನು, ಪೋರ್ತುಗಲ್ ನರ-ರಾಕ್ಷಸ ಮಿಷನರಿಗಳ ಹಿಂಸೆಗೆ ಬಲಿಯಾದ ಗೋಮಾಂತಕದ ಸೋದರ-ಸೋದರಿಯರನ್ನು….

ನಾವೆಲ್ಲ ಭಾರತೀಯರೂ ಒಮ್ಮೆಯಾದರೂ ನೆನಪಿಸಿಕೊಳ್ಳೋಣ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ವೇದಕಾಲದಲ್ಲಿ ಗೋ ಮಾಂಸ ಭಕ್ಷಣೆ ಇತ್ತೇ?

Exit mobile version