Site icon Vistara News

ನನ್ನ ದೇಶ ನನ್ನ ದನಿ ಅಂಕಣ | ಎಲ್ಲಿಯ ರೂಸ್‌ವೆಲ್ಟ್, ಎಲ್ಲಿಯ ಭಾರತ ಸ್ವಾತಂತ್ರ್ಯ !

churchil roosevelt

ಅಮೆರಿಕದ ಅಧ್ಯಕ್ಷನಾಗಿದ್ದ ಫ್ರ್ಯಾಂಕ್ಲಿನ್ ರೂಸ್‌ವೆಲ್ಟ್ ಐರೋಪ್ಯ ರಾಷ್ಟ್ರಗಳ ವಸಾಹತುಗಳ ನಿರ್ವಸಾಹತೀಕರಣ (decolonization) ಆಗಬೇಕು ಎಂಬುದನ್ನು ಪ್ರತಿಪಾದಿಸುತ್ತಿದ್ದ. ಶತಮಾನಗಳ ಕಾಲ ಇಂಗ್ಲೆಂಡ್, ಫ್ರಾನ್ಸ್, ಪೋರ್ತುಗಲ್, ಸ್ಪೇನ್, ನೆದರ್ಲ್ಯಾಂಡ್ಸ್ (ಅಂದಿನ ಹಾಲೆಂಡ್) ಅವರುಗಳ ವಸಾಹತೀಕರಣದ– ಶೋಷಣೆಯ ಹೊಡೆತಕ್ಕೆ ಇಡೀ ವಿಶ್ವವೇ ನಲುಗಿಹೋಗಿತ್ತು. ಅದರಲ್ಲೂ ಏಷ್ಯಾ-ಆಫ್ರಿಕಾ ಖಂಡಗಳ ಸಂಕಟ ಮಿತಿಮೀರಿ ಹೋಗಿತ್ತು. ಬಿಳಿಯರ ಪ್ರಾಬಲ್ಯದ ಅಮೆರಿಕಾ ಸಹ, ಇಂಗ್ಲೆಂಡಿನಿಂದ ಸ್ವಾತಂತ್ರ್ಯ ಪಡೆಯಲು 18ನೆಯ ಶತಮಾನದಲ್ಲಿ ದೊಡ್ಡ ಸಂಘರ್ಷವನ್ನೇ ನಡೆಸಿತ್ತು. 1929ರ ಬಹು ದೊಡ್ಡ ಆರ್ಥಿಕ ಹಿಂಜರಿತದ ಹೊಡೆತದಿಂದ ಚೇತರಿಸಿಕೊಂಡ ಅಮೆರಿಕಾ ದೇಶವು 1930ರ ದಶಕದ ಕೊನೆಯ ಹೊತ್ತಿಗೆ ಅದ್ಭುತವಾದ ಆರ್ಥಿಕ ಸಮೃದ್ಧಿಯನ್ನು ಸಾಧಿಸಿತ್ತು. ಯುದ್ಧವಿಮಾನಗಳು, ಶಸ್ತ್ರಾಸ್ತ್ರಗಳು ಯಥೇಚ್ಛವಾಗಿದ್ದವು. ಬಗೆಬಗೆಯ ಉತ್ಪನ್ನಗಳೇನೋ ಸಿದ್ಧವಾಗಿದ್ದವು. ಕೊಳ್ಳುವವರು ಯಾರು? ಒಂದು ರೀತಿಯಲ್ಲಿ, ಅಮೆರಿಕೆಗೆ ದೊಡ್ಡ ಮಾರುಕಟ್ಟೆ ಸಹ ಬೇಕಾಗಿತ್ತು. ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಅನೇಕ ದೇಶಗಳು ಐರೋಪ್ಯರ ಕಪಿಮುಷ್ಟಿಯಿಂದ ಹೊರಬಂದರೆ, ಅಮೆರಿಕೆಗೆ ಪರೋಕ್ಷವಾಗಿ ಮಾರುಕಟ್ಟೆಯ ಅವಕಾಶಗಳೂ ಹೆಚ್ಚಾಗುತ್ತಿದ್ದವು.

1939ರಲ್ಲಿ ಎರಡನೇ ಮಹಾಯುದ್ಧವು ಪ್ರಾರಂಭವಾದರೂ ಅಮೆರಿಕೆಯು ಮೂಗು ತೂರಿಸಲು ಹೋಗಿರಲಿಲ್ಲ. ಕೆನಡಾ ದೇಶದ ನ್ಯೂಫೌಂಡ್ ಲ್ಯಾಂಡಿನಲ್ಲಿ ರೂಸ್‌ವೆಲ್ಟ್ ಮತ್ತು ಬ್ರಿಟಿಷ್ ಪ್ರಧಾನಮಂತ್ರಿ ವಿನ್‌ಸ್ಟನ್ ಚರ್ಚಿಲ್ ನಡುವೆ ಆಗಸ್ಟ್ 1941ರಲ್ಲಿ ಜಂಟಿ ಘೋಷಣೆಯಾಯಿತು. ಇತಿಹಾಸಕಾರರು ಅದನ್ನು “ಅಟ್ಲಾಂಟಿಕ್ ಚಾರ್ಟರ್” ಎನ್ನುತ್ತಾರೆ. ಈ ಘೋಷಣೆಯ 3ನೆಯ ಅನುಚ್ಛೇದದಲ್ಲಿ “ಎಲ್ಲ ದೇಶಗಳ ಎಲ್ಲ ಜನರಿಗೆ ಅವರ ಇಚ್ಛೆಯಂತೆ ಸರ್ಕಾರಗಳನ್ನು ರಚಿಸುವ ಹಕ್ಕು ಇದೆ. ಅದನ್ನು ಗೌರವಿಸಬೇಕು. ಯಾವೆಲ್ಲಾ ದೇಶಗಳು ಇಂತಹ ಅವಕಾಶದಿಂದ ವಂಚಿತವಾಗಿವೆಯೋ, ಅವು ಸಾರ್ವಭೌಮ ಅಧಿಕಾರವಿರುವಂತಹ ಸ್ವಂತದ ಸರ್ಕಾರಗಳನ್ನು ರಚಿಸಲು ಅವಕಾಶ ದೊರೆಯಬೇಕು” ಎಂದು ಘೋಷಿಸಲಾಯಿತು.

ಆದರೆ, ಚರ್ಚಿಲ್ ಅತ್ಯಂತ ಧೂರ್ತನಾದ ವಸಾಹತುಶಾಹಿ ರಾಕ್ಷಸನಾಗಿದ್ದ. ತುಂಬ ಸ್ಪಷ್ಟವಾದ ವಿವರಗಳಿಲ್ಲದ ಈ ಅನುಚ್ಛೇದ 3ನ್ನು ತನ್ನ ಇಷ್ಟಾನುಸಾರ ವ್ಯಾಖ್ಯಾನ ಮಾಡಲೂ ಆತ ಹೇಸಲಿಲ್ಲ. 1941ರ ಸೆಪ್ಟೆಂಬರ್ 9ರಲ್ಲಿ, ಬ್ರಿಟಿಷ್ “ಹೌಸ್ ಆಫ್ ಕಾಮನ್ಸ್”ನಲ್ಲಿ ಈ ಚಾರ್ಟರ್ ಬಗೆಗೆ ಅವನಿಂದ ಸ್ಪಷ್ಟೀಕರಣ ಕೇಳಲಾಯಿತು. ಜಂಟಿ ಮಾತುಕತೆಯಲ್ಲಿ, ಘೋಷಣೆಯಲ್ಲಿ ಈ ಅನುಚ್ಛೇದದ್ದು ಪ್ರಧಾನವಾದ ಪಾತ್ರ ಅಲ್ಲ, ಎಂದ ಚರ್ಚಿಲ್. ಜರ್ಮನಿಯ ನಾಜಿ ದಾಳಿಯ ಈ ಸಮಯದಲ್ಲಿ, ಇದು ಐರೋಪ್ಯ ರಾಷ್ಟ್ರಗಳ ಸಾರ್ವಭೌಮತ್ವ, ಅಸ್ತಿತ್ವಗಳನ್ನು ಉಳಿಸುವ ಪ್ರಾಥಮಿಕ ಆಶಯವನ್ನು ಹೊಂದಿದೆ, ಎಂದು ಹೇಳಿಕೆ ನೀಡಿದ.

ಐದು ತಿಂಗಳ ಅನಂತರ, ಅಮೆರಿಕೆಯ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ನಿನ ಹುಟ್ಟುಹಬ್ಬದ ಆಚರಣೆಯ ಸಂದರ್ಭದ ರೇಡಿಯೋ ಪ್ರಸಾರ ಭಾಷಣದಲ್ಲಿ, ರೂಸ್‌ವೆಲ್ಟ್, ʼʼಅಟ್ಲಾಂಟಿಕ್ ಜಂಟಿ ಘೋಷಣೆಯು ಕೇವಲ ಅಟ್ಲಾಂಟಿಕ್ ಮಹಾಸಾಗರದ ತೀರದ ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ, ಇಡೀ ಜಗತ್ತಿಗೇ ಅನ್ವಯವಾಗುತ್ತದೆ” ಎಂದು ಘೋಷಿಸಿದ. ಇದು ಲಂಡನ್ನಿನ ʼದ ಟೈಮ್ಸ್ʼ ಪತ್ರಿಕೆಯ 1942ರ ಫೆಬ್ರುವರಿ 24ರ ಸಂಚಿಕೆಯಲ್ಲಿಯೂ ಪ್ರಮುಖ ಸುದ್ದಿಯಾಗಿ ಪ್ರಕಟವಾಯಿತು.

1942ರಲ್ಲಿ ಭಾರತದಲ್ಲಿ ʼಕ್ವಿಟ್ ಇಂಡಿಯಾʼ ಚಳವಳಿ ಪ್ರಾರಂಭವಾದಾಗ, ಬ್ರಿಟಿಷರು ಎಳ್ಳಷ್ಟೂ ತಲೆಕೆಡಿಸಿಕೊಳ್ಳದೆ, ಕಾಂಗ್ರೆಸ್ ನಾಯಕರನ್ನು ಜೈಲಿಗೆ ತಳ್ಳಿದರು. ಆಗ ಚೀನಾದ ಅಧ್ಯಕ್ಷನಾಗಿದ್ದ ಚಿಯಾಂಗ್ ಕೈ ಶೇಕ್ ಈ ಕುರಿತು ರೂಸ್‌ವೆಲ್ಟ್‌ಗೆ ಪ್ರತಿಭಟನೆಯ ಪತ್ರಗಳ ಸರಮಾಲೆಯನ್ನೇ ಬರೆದ. ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಬಾರದೆಂಬುದು ಚಿಯಾಂಗ್ ಕೈ ಶೇಕ್‌ನ ಅಭಿಮತವಾಗಿತ್ತು. ರೂಸ್‌ವೆಲ್ಟ್ ಆ ಪತ್ರಗಳನ್ನು ಚರ್ಚಿಲ್‌ನಿಗೆ ವರ್ಗಾಯಿಸಿದ. “ಇದು ಚೀನಾ ದೇಶದ ಅಧಿಕಪ್ರಸಂಗತನ. ಬ್ರಿಟನ್ನಿನ ಆಂತರಿಕ ವ್ಯವಹಾರಗಳಲ್ಲಿ ಚೀನಾ ಮೂಗು ತೂರಿಸಬಾರದು” ಎಂದ ನರರಾಕ್ಷಸ ಚರ್ಚಿಲ್.

ಇತಿಹಾಸದ ಕೆಲ ಘಟ್ಟಗಳೇ ವಿಚಿತ್ರ. 1945ರ ಏಪ್ರಿಲ್ ತಿಂಗಳಲ್ಲಿ ರೂಸ್‌ವೆಲ್ಟ್ ತೀರಿಹೋದ. ಅನಂತರ ಹ್ಯಾರಿ ಟ್ರೂಮನ್ ಅಧ್ಯಕ್ಷನಾದ. ಅನಂತರದ ಅಣುಬಾಂಬ್ ಸ್ಫೋಟ, ಜರ್ಮನಿ- ಜಪಾನ್ ದೇಶಗಳ ಸೋಲು-ವಿನಾಶದ ಕಥೆ ನಮಗೆಲ್ಲ ಗೊತ್ತೇ ಇದೆ. ಹೆಸರಿಗೆ ಯುದ್ಧವನ್ನು ಗೆದ್ದರೂ, ಇಂಗ್ಲೆಂಡ್ ಭಯಾನಕವಾದ ಆರ್ಥಿಕ ದುಃಸ್ಥಿತಿಗೆ ಸಿಲುಕಿತ್ತು. 1945ರಲ್ಲಿ ನಡೆದ ಚುನಾವಣೆಗಳಲ್ಲಿ ಚರ್ಚಿಲ್ ಸೋತು, ಲೇಬರ್ ಪಕ್ಷ ಗೆದ್ದು ಕ್ಲೆಮೆಂಟ್ ಅಟ್ಲೀ ಪ್ರಧಾನಮಂತ್ರಿಯಾದರು. ಆ ವೇಳೆಗೆ ಭಾರತದಂತಹ ವಸಾಹತುಗಳಲ್ಲಿ ಶೋಷಿಸಲು- ಲೂಟಿ ಮಾಡಲು ಇಂಗ್ಲೆಂಡಿಗೆ ಏನೂ ಉಳಿದಿರಲಿಲ್ಲ. ಅಟ್ಲೀಗೆ ಕೈ ತೊಳೆದುಕೊಂಡರೆ ಸಾಕು ಎನ್ನಿಸಿತ್ತು. ಟ್ರೂಮನ್ ಸಹ ರೂಸ್‌ವೆಲ್ಟ್‌ನ ನಿರ್ವಸಾಹತೀಕರಣದ ಪರಿಕಲ್ಪನೆಯನ್ನು ಪ್ರತಿಪಾದಿಸಿದರೂ, ಎಚ್ಚರಿಕೆಯಿಂದ ಹೆಜ್ಜೆಯಿಡತೊಡಗಿದ. ಏಕೆಂದರೆ, ಸ್ವಾಯತ್ತತೆ ಪಡೆದ ಅನಂತರ ಅನೇಕ ವಸಾಹತುಗಳು ಸೋವಿಯತ್ ಒಕ್ಕೂಟದ- ರಷ್ಯಾ ಬಣದ ತೆಕ್ಕೆಗೆ ಸೇರುವುದನ್ನು ತಪ್ಪಿಸಲು ಆತ (ಮತ್ತು ಅನಂತರದ ಅಧ್ಯಕ್ಷರುಗಳು) ತನ್ನ ಕಾರ್ಯವೈಖರಿಯನ್ನೇ ಬದಲಿಸಬೇಕಾಯಿತು.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ | ದೆಹಲಿ ಬ್ರಿಟಿಷರ ರಾಜಧಾನಿ ಆದುದಾದರೂ ಹೇಗೆ?

1945ರ ಕಾಲಘಟ್ಟದ ಅನಂತರ ಅನೇಕ ವಸಾಹತುಗಳು ಒಂದೊಂದಾಗಿ ಸ್ವಾಯತ್ತತೆ ಪಡೆದವು. ಇದು ಎರಡು ದಶಕಗಳನ್ನೂ ಮೀರಿದ ದೀರ್ಘಾವಧಿಯಲ್ಲಿ ನಡೆದ ಪ್ರಕ್ರಿಯೆ. ಅಮೆರಿಕೆಯ ಲೂಯಿವಿಲ್ಲ್ ವಿಶ್ವವಿದ್ಯಾಲಯದ ಟಿಮೋತಿ ಜೆ. ಪಿಫರ್ ತಮ್ಮ 2008ರ ಸಂಶೋಧನಾ ಪ್ರಬಂಧದಲ್ಲಿ, ಐರೋಪ್ಯರ ವಸಾಹತೀಕರಣವನ್ನು ಹೇಗೆಲ್ಲಾ ಟ್ರೂಮನ್ ವಿರೋಧಿಸಿದ, ಅದರ ಪರಿಣಾಮಗಳೇನು, ಎಂಬುದನ್ನು ವಿವರಿಸಿದ್ದಾರೆ. ಅಹಿಂಸೆ, ಸತ್ಯಾಗ್ರಹಗಳಿಲ್ಲದೆಯೂ 1948ರಲ್ಲಿ ನಮ್ಮ ನೆರೆಯ ಬರ್ಮಾ (ಮಯನ್ಮಾರ್) ಮತ್ತು ಶ್ರೀಲಂಕಾ ದೇಶಗಳು ಇಂಗ್ಲೆಂಡಿನಿಂದ ಸ್ವಾಯತ್ತತೆ ಪಡೆದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಪಶ್ಚಿಮ ಬಂಗಾಳದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಫಣಿಭೂಷಣ ಚಕ್ರವರ್ತಿಯವರು, 1956ರಲ್ಲಿ ಆ ರಾಜ್ಯದ ಪ್ರಭಾರಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಭಾರತ ಪ್ರವಾಸಕ್ಕೆ ಬಂದಿದ್ದ ಕ್ಲೆಮೆಂಟ್ ಅಟ್ಲೀ ಎರಡು ದಿನಗಳ ಕಾಲ ಉಳಿದಿದ್ದು, ಕೋಲ್ಕತ್ತೆಯ ರಾಜಭವನದಲ್ಲಿ. ಚಕ್ರವರ್ತಿಯವರು “1942ರ ಕ್ವಿಟ್ ಇಂಡಿಯಾ ಚಳವಳಿಯ ಅನಂತರದಲ್ಲಿ, 1947ರಲ್ಲಿ ಯಾವ ಒತ್ತಡವೂ ಇರಲಿಲ್ಲ. ಆದರೂ ಭಾರತಕ್ಕೆ ಸ್ವಾಯತ್ತತೆ ನೀಡಿದ್ದು ಹೇಗೆ? ಏಕೆ?” ಎಂದು ಪ್ರಶ್ನಿಸಿದಾಗ, ಅಟ್ಲೀ “ಆಗ ಇಲ್ಲಿನ ಸೇನೆಗೆ ಬ್ರಿಟಿಷರ ಮೇಲೆ ನಿಷ್ಠೆ ಹೊರಟುಹೋಗಿತ್ತು. ಸೇನೆಯ ಮೇಲೆ ಸುಭಾಷ್ ಚಂದ್ರ ಬೋಸ್ ಅವರ ಪ್ರಭಾವ ಹಾಗಿತ್ತು. ಹಾಗಾಗಿ ಸ್ವಾಯತ್ತತೆ ನೀಡಬೇಕಾಯಿತು” ಎಂದು ಉತ್ತರಿಸಿದರು.

1945ರಿಂದ 1951ರ ಅವಧಿಯಲ್ಲಿ ಬ್ರಿಟಿಷ್ ಪ್ರಧಾನಮಂತ್ರಿ ಆಗಿದ್ದುದು ಇದೇ ಅಟ್ಲೀ ಮತ್ತು ಈ ಕಾರಣದಿಂದಲೇ 1947ರಲ್ಲಿ ಭಾರತವು ಸ್ವಾಯತ್ತತೆ ಪಡೆಯಲು ಸಾಧ್ಯವಾಯಿತು. ಸ್ವಾತಂತ್ರ್ಯ ಬಂತು ಸ್ವಾತಂತ್ರ್ಯ ಬಂತು, ಎಂದು ನಾವೆಷ್ಟೇ ಹುಯಿಲೆಬ್ಬಿಸಿದರೂ, ಸ್ವಾತಂತ್ರ್ಯ ಪ್ರಾಪ್ತಿಗೆ ನಾವೇ ಕಾರಣ ಎಂದು ಕಾಂಗ್ರೆಸ್ಸಿಗರು ಅದೆಷ್ಟೇ ಕಿರುಚಾಡಿದರೂ, ದಾಖಲೆಗಳ ಪ್ರಕಾರ ಬ್ರಿಟಿಷರಿಂದ ಆದುದು “Transfer Of Power” ಮಾತ್ರ. ಇದನ್ನು ನಾವೆಲ್ಲಾ ಸರಿಯಾಗಿ ಗಮನಿಸಬೇಕು.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ | ಶತಮಾನದ ಕಾಲ ತುಳಿಯಲ್ಪಟ್ಟರೂ ಭಾರತೀಯ ಕ್ಷಾತ್ರ ಸಿಡಿದೆದ್ದಿತು

ಚಕ್ರವರ್ತಿಯವರು ಮತ್ತೂ ಒಂದು ಪ್ರಶ್ನೆ ಕೇಳಿದರು: “ಭಾರತವು ಸ್ವಾಯತ್ತತೆ ಗಳಿಸುವಲ್ಲಿ “ಗಾಂಧೀಜಿಯವರ ಮತ್ತು ಕಾಂಗ್ರೆಸ್ ಪಕ್ಷದ ಪ್ರಭಾವ ಎಷ್ಟು?”. ಅಟ್ಲೀ ವ್ಯಂಗ್ಯವಾಗಿ ನಗುತ್ತಾ “MINIMAL” (ಅತ್ಯಂತ ಕಡಿಮೆ) ಎಂದರು. ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ಕಾಂಗ್ರೆಸ್-ಕಮ್ಯೂನಿಸ್ಟ್ ವಿರಚಿತ ಅನೃತಭರಿತ ಇತಿಹಾಸದ ಪಠ್ಯಪುಸ್ತಕಗಳನ್ನು ಓದಿ, “ಅಹಿಂಸೆ-ಸತ್ಯಾಗ್ರಹಗಳಿಂದ ಸ್ವಾತಂತ್ರ್ಯ ಬಂದಿತು” ಎಂಬುದನ್ನು ನಂಬಿಕೊಂಡು ಬಂದ ನಮಗೆ ಆ ಅವಧಿಯ ಮೂಲ ದಾಖಲೆಗಳನ್ನು, ಸಾಕ್ಷ್ಯಾಧಾರಗಳನ್ನು, ವಿಶ್ಲೇಷಣಾ ವರದಿಗಳನ್ನು, ಸಂಶೋಧನಾ ಮಹಾಪ್ರಬಂಧಗಳನ್ನು ಓದಿದಾಗ ಆಘಾತವೇ ಆಗುತ್ತದೆ.

ಇಷ್ಟಕ್ಕೇ ಕಟುಸತ್ಯಗಳ ಅನಾವರಣ ಮುಗಿಯುವುದಿಲ್ಲ.

Exit mobile version