Site icon Vistara News

ನನ್ನ ದೇಶ ನನ್ನ ದನಿ ಅಂಕಣ: ವಾರಾಣಸಿಯ ನಂದಿ ಮುಖ ಮಾಡಿದ ಕಡೆಗೆ ಶಿವ ಬರಲು ಇನ್ನೆಷ್ಟು ಕಾಯಬೇಕು?

varanasi nandi

ಈ ಅಂಕಣವನ್ನು ಇಲ್ಲಿ ಆಲಿಸಿ:

http://vistaranews.com/wp-content/uploads/2024/03/ANM-Vistaranews-19th-March-2024-Kashi.mp3

ನನ್ನ ದೇಶ ನನ್ನ ದನಿ: ಭಾರತವನ್ನು ತುಂಡರಿಸಲಿಚ್ಛಿಸುವ ವಿಚ್ಛಿದ್ರಕಾರೀ ಶಕ್ತಿಗಳು ವಿಜೃಂಭಿಸುತ್ತಿವೆ! ಆಸುರೀ ಶಕ್ತಿಗಳೇ ಹಾಗೆ. ನಿಜ. ಅಬ್ಬರ ಜಾಸ್ತಿ. ಸನಾತನ ಧರ್ಮದ ಬಗೆಗೆ ಅಣು ಪ್ರಮಾಣದ ಅರಿವು ಇಲ್ಲದಿದ್ದರೂ, ಆರ್ಯ-ದ್ರಾವಿಡ ಜನಾಂಗೀಯ ಸಿದ್ಧಾಂತ ಎಂಬುದು ಶತಪ್ರತಿಶತ ಅಬದ್ಧ ಎಂಬುದು ವೈಜ್ಞಾನಿಕವಾಗಿ ರುಜುವಾತಾಗಿದ್ದರೂ, ದ್ರಾವಿಡ ಪಕ್ಷದ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿರುವವರು ನಾಲಿಗೆ ಹರಿಬಿಡುತ್ತಾರೆ. ಇನ್ನು ಕೆಲ “ಸಜ್ಜನರು” ಶ್ರೀರಾಮನ ಬಗೆಗೇ ವಿಷ ಕಾರುತ್ತಾರೆ.

ನಿಜ, ಇದು ಎಂದೆಂದಿಗೂ ಮುಗಿಯದ ಹೋರಾಟ. ಶ್ರೀರಾಮ ಜನ್ಮಭೂಮಿ ದೇವಾಲಯದ ಪುನರ್ನಿರ್ಮಾಣ, ಪ್ರಾಣ ಪ್ರತಿಷ್ಠಾಪನೆಗಳು ಒಂದು ಹಂತಕ್ಕೆ ಬರುತ್ತಿದ್ದಂತೆ ಭಾರತ-ವಿರೋಧೀ ಶಕ್ತಿಗಳಿಗೆ ಸಹಿಸಲಾರದಂತಹ ಸಂಕಟ.

ಭಾರತವನ್ನು ಜೋಡಿಸುವ ಹೆಸರಿನಲ್ಲಿ, ಜನರನ್ನು ಒಂದುಗೂಡಿಸುವ ಬದಲು, ಕೆಲವರು ಇನ್ನಷ್ಟು ವಿಭಜನೆಗೆ ಸನ್ನಾಹ ಮಾಡುತ್ತಿದ್ದಾರೆ. ಇನ್ನು ಕೆಲವರು ಉತ್ತರ ಭಾರತ – ದಕ್ಷಿಣ ಭಾರತಗಳನ್ನು ಬೇರೆ ಬೇರೆ ಮಾಡಲು ಹವಣಿಸುತ್ತಿದ್ದಾರೆ. ಕರ್ನಾಟಕದ ಕುಡಿಯುವ ನೀರನ್ನೂ ತಮಿಳುನಾಡಿಗೆ ಹರಿಸಿದವರು, ದಕ್ಷಿಣ ಭಾರತವೇ ಪ್ರತ್ಯೇಕವಾಗಬೇಕು ಎನ್ನುತ್ತಾರೆ. ಕರ್ನಾಟಕದ ಹಣ ಉತ್ತರ ಭಾರತಕ್ಕೆ ಹೋಗುತ್ತಿದೆ, ಎಂದು ಗುರುಗುಟ್ಟುವವರು ತೆರಿಗೆಯನ್ನೇ ಕಟ್ಟದ ಸಮುದಾಯಗಳಿಗೆ ತೆರಿಗೆದಾರರ ಕೋಟಿಕೋಟಿ ಹಣವನ್ನು ಸುರಿಯುತ್ತಾರೆ. ದೇವಾಲಯಗಳ ಹಣ ಸೂರೆಮಾಡಿ, ಚರ್ಚು – ಮಸೀದಿಗಳಿಗೆ ಬಹಳ ದೊಡ್ಡ ಮೊತ್ತವನ್ನು ಹಂಚಿ ಮೆರೆಯುತ್ತಿದ್ದಾರೆ.

ಸೋಮನಾಥನ, ಶ್ರೀರಾಮನ ದೇವಾಲಯಗಳ ವಿಮೋಚನೆಯಾಗಲು ಏಳೆಂಟು ದಶಕಗಳೇ ಬೇಕಾದವು. ಇದೀಗ ಮಥುರೆ – ಕಾಶಿಗಳು ಕಾಯುತ್ತಿವೆ.

ಕಾಶಿಯನ್ನು ಧ್ವಂಸ ಮಾಡಿದವನು ಬರೀ ಔರಂಗಜೇಬನಷ್ಟೇ ಅಲ್ಲ. ವಿಗ್ರಹ ಭಂಜನೆಗೇ ಕುಖ್ಯಾತನಾದ ಇಸ್ಲಾಮೀ ದಾಳಿಕೋರ ಕುತ್ಬುದ್ದೀನ್ ಐಬಕ್, ಸಾಮಾನ್ಯ ಯುಗದ 1194ರಲ್ಲಿ ಇದೇ ಕಾಶಿ ವಿಶ್ವನಾಥನ ದೇವಾಲಯವನ್ನು ಧ್ವಂಸ ಮಾಡಿದ. ಆ ಕಾಲದ (ಸಮಕಾಲೀನ) ಮುಸ್ಲಿಂ ಇತಿಹಾಸಕಾರ ಹಸನ್ ನಿಜಾಮಿ ದಾಖಲಿಸಿರುವಂತೆ, ಒಂದು ಸಾವಿರ ದೇವಾಲಯಗಳನ್ನು ನಾಶ ಮಾಡಿ ಲೂಟಿ ಮಾಡಿದ ಐಶ್ವರ್ಯವನ್ನು, ಈ ಐಬಕ್ ಹದಿನೆಂಟು ಒಂಟೆಗಳ ಮೇಲೆ ಮುನ್ನೂರು ಆನೆಗಳ ಮೇಲೆ ಕೊಂಡೊಯ್ದ. ಅಷ್ಟೇ ಅಲ್ಲ, ಸುಪ್ರಸಿದ್ಧ ಸಾರನಾಥ್ ಸೇರಿದಂತೆ, ಅನೇಕ ಬೌದ್ಧ ದೇವಾಲಯಗಳನ್ನೂ ಧ್ವಂಸ ಮಾಡಿದ. ಇಂದು ಸಾರನಾಥದ ಎಲ್ಲೆಡೆ ಕಾಣುವ ಧ್ವಂಸಾವಶೇಷಗಳನ್ನು ನೋಡಿದರೆ, ಮನಸ್ಸು – ನಾಲಿಗೆ – ಹೃದಯಗಳು ಕಹಿಯಾಗಿಬಿಡುತ್ತವೆ.

ಭಾರತೀಯರು ತಮ್ಮ ಹೋರಾಟವನ್ನು ಎಂದಿಗೂ ನಿಲ್ಲಿಸಿದವರಲ್ಲ. ಇಂದಿಗೂ ನಿಲ್ಲಿಸಬೇಕಿಲ್ಲ. ಸಾ|| ಯುಗದ 1212ರಲ್ಲಿ ಬಂಗಾಳದ ಸೇನ್ ವಂಶದ ರಾಜ ವಿಶ್ವರೂಪನು, ಕಾಶಿಗೆ ಬಂದು, ವಿಶ್ವನಾಥನ ದೇವಾಲಯದ ತಾಣದಲ್ಲಿಯೇ “ಈ ನಗರವು ವಿಶ್ವೇಶ್ವರನದು” ಎಂದು ಬರೆಸಿದ ಕಂಬವೊಂದನ್ನು ಸ್ಥಾಪಿಸಿದ. ಪೂರ್ವ ಭಾರತದ ರಾಜರೂ ದೇವಾಲಯ ಪುನರ್-ಸ್ಥಾಪನೆಯ ಈ ಹೋರಾಟದಲ್ಲಿ ಕೈಜೋಡಿಸಿದರು. ಗುಜರಾತ್ ಪ್ರಾಂತದ ವ್ಯಾಪಾರಿ ಸೇಠ್ ವಸ್ತುಪಾಲನು 1230ರಲ್ಲಿ ಒಂದು ಲಕ್ಷ ಸ್ವರ್ಣ ವರಹಗಳನ್ನು ಅರ್ಪಿಸಿ ಪುನರ್ನಿರ್ಮಾಣಕ್ಕೆ ಚಾಲನೆ ನೀಡಿದ. ಈ ನಿರ್ಮಾಣ ಕಾರ್ಯಕ್ಕೆ ಕನಿಷ್ಠ ನಲವತ್ತು ಐವತ್ತು ವರ್ಷಗಳು ಬೇಕಾದವು.

ಪೂರ್ವ-ಪಶ್ಚಿಮ, ಉತ್ತರ – ದಕ್ಷಿಣ ಎಂದು ಮತ್ತೆ ಮತ್ತೆ ನಮ್ಮ ದೇಶವನ್ನು ವಿಚ್ಛೇದಿಸುವ, ತುಂಡು ತುಂಡು ಮಾಡುವ ಉದ್ದೇಶದ ದೇಶದ್ರೋಹಿಗಳು ಈ ಎಲ್ಲ ಐತಿಹಾಸಿಕ ಸಂಗತಿಗಳನ್ನೂ ಅಧ್ಯಯನ ಮಾಡಬೇಕಿದೆ. ಜಾತಿ, ವರ್ಣ, ಪ್ರಾಂತ, ಭಾಷೆಗಳ ಮೇಲೆ ಜನರನ್ನು ಒಡೆದು ಆಳುವ ದುರ್ಬುದ್ಧಿಜೀವಿಗಳನ್ನು ನಮ್ಮ ಜನ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ.

ಅದೊಂದು ದುರ್ಭರ ಕಾಲ. ಇಸ್ಲಾಮೀ ದುರಾಡಳಿತಕ್ಕೆ ಕಾಶಿಯ ಪ್ರಾಂತ್ಯ ಸಿಲುಕಿತ್ತು. ತಮ್ಮ ದೇಶದಲ್ಲಿಯೇ ಕಾಫಿರರೆನಿಸಿಕೊಂಡ ದೌರ್ಭಾಗ್ಯದ ಹಿಂದೂಗಳು ಅತ್ಯಂತ ಅವಮಾನಕಾರವಾದ ಜಿಜಿಯಾ ತೆರಿಗೆಯನ್ನು ತೆರಬೇಕಿತ್ತು. ಅದೂ ತುಂಬಾ ಹೀನಾಯವಾಗಿ. ಜಿಜಿಯಾ ಕಿತ್ತುಕೊಳ್ಳುವ ಲೂಟಿಕೋರನು ಕುದುರೆಯ ಮೇಲೆ ಕುಳಿತು ದರ್ಪದಿಂದ ವಸೂಲಿ ಮಾಡುತ್ತಿದ್ದ. ತೆರಿಗೆದಾರರು ದೈನ್ಯದಿಂದ ಬರಿಗಾಲಲ್ಲಿ ಹೋಗಿ, ಜೀಹುಜೂರ್ ಸಲ್ಲಿಸಿ ಜಿಜಿಯಾ ತೆರಬೇಕಿತ್ತು. ಆದರೇನು. ಹಿಂದೂಗಳ ಧರ್ಮಶ್ರದ್ಧೆ ಅನುಪಮವಾದುದು. ಕಾಶಿಯ ವಿಶ್ವನಾಥನ ದರ್ಶನ ಮಾಡುವುದನ್ನು ಎಂದಿಗೂ ನಿಲ್ಲಿಸಲಿಲ್ಲ. ನಮ್ಮ ಕರ್ನಾಟಕದ ಹೊಯ್ಸಳರ ಮೂರನೆಯ ವೀರನರಸಿಂಹನು ಕಾಶಿಯ ಯಾತ್ರಿಕರು ಈ ತೆರಿಗೆ ಪಾವತಿಸಲು ನೆರವಾಗಲು, ಹೆಬ್ಬಾಳೆ ಎಂಬ ಗ್ರಾಮದ ಪೂರ್ಣ ಆದಾಯವನ್ನೇ ಮೀಸಲಾಗಿಟ್ಟಿದ್ದ. ಇತ್ತೀಚಿನ ಉತ್ಖನನದಲ್ಲಿ ವೀರನರಸಿಂಹನ ಶಿಲಾಶಾಸನವೊಂದು ಬೆಳಕಿಗೆ ಬಂದಿರುವುದನ್ನು ನಾವಿಲ್ಲಿ ಸ್ಮರಿಸಬಹುದು. ಪಕ್ಕದ ಆಂಧ್ರದ ತೆಲುಗು ಕವಿ ಶ್ರೀನಾಥನು ವಿಜಯನಗರದ ಆಸ್ಥಾನ ಕವಿ. ಅವನು ಕಾಶಿ ಖಂಡವನ್ನು ತೆಲುಗಿಗೆ ಅನುವಾದಿಸಿದ್ದಾನೆ. ಭಾಷೆಯ ಹೆಸರಿನಲ್ಲಿ ಭಾರತೀಯರನ್ನು ಒಡೆದು ಆಳುವ ದ್ರೋಹಿಗಳಿಗೆ, ಅವರ ಕೊರಳಪಟ್ಟಿ ಹಿಡಿದು ನಮ್ಮ ಜನ ಈ ಅಂಶವನ್ನು ತಿಳಿಸಬೇಕಿದೆ, ಪ್ರಶ್ನಿಸಬೇಕಿದೆ.

ಇಸ್ಲಾಮೀ ದಾಳಿಯ ಅಮಾನುಷ ಹೊಡೆತಕ್ಕೆ ಸಿಲುಕಿ ಕಾಶಿಯ ಅನೇಕ ವಿದ್ವಾಂಸರು – ಪಂಡಿತರು ದಕ್ಷಿಣ ಭಾರತದ ಅನೇಕ ಪ್ರಾಂತಗಳಿಗೆ ವಲಸೆ ಬಂದರು. ಭಟ್ಟ, ಶೇಷ, ಧರ್ಮಾಧಿಕಾರಿ ಮೊದಲಾದ ಉಪನಾಮಗಳ ಈ ವಿದ್ವಾಂಸರು, ಮತ್ತೆ ಕಾಶಿಗೆ ಹಿಂತಿರುಗಿ ಅಲ್ಲಿಯ ವಿದ್ವತ್-ಪುನರುತ್ಥಾನಕ್ಕೆ ಶ್ರಮಿಸಿದರು. ಕೆಲವು ಮೂರ್ಖರು ಶಿವಾಜಿ ಮಹಾರಾಜರಿಗೆ ಪಟ್ಟಾಭಿಷೇಕ ಮಾಡಲು ನಿರಾಕರಿಸಿದಾಗ, ಕಾಶಿಯಿಂದ ಬಂದ ಗಾಗಾ ಭಟ್ಟರು ಈ ಪಟ್ಟಾಭಿಷೇಕವನ್ನು ನಿರ್ವಹಿಸಿದುದು ಇತಿಹಾಸವೇ ಆಗಿದೆ. ವಿಶೇಷವೆಂದರೆ, ಅಂತಹ ವಲಸೆಯ ಋತ್ವಿಕರಾದ ದೀಕ್ಷಿತರೇ ಶ್ರೀರಾಮ ಜನ್ಮಭೂಮಿ ದೇವಾಲಯದ ಇತ್ತೀಚಿನ ಪ್ರಾಣಪ್ರತಿಷ್ಠೆಯ ಸೂತ್ರಧಾರರಾಗಿದ್ದುದು ಗಮನಿಸಬೇಕಾದುದು.

14ನೆಯ ಶತಮಾನದಲ್ಲಿ ಜೌನಪುರದ ನವಾಬ ಮತ್ತೆ ಕಾಶಿಯ ದೇವಾಲಯವನ್ನು ಧ್ವಂಸ ಮಾಡಿದ. ಮತ್ತೆ ನಿರ್ಮಿಸಲ್ಪಟ್ಟ ದೇವಾಲಯವನ್ನು ಸಿಕಂದರ್ ಲೋಧಿಯು ನೆಲಸಮ ಮಾಡಿದ. ಯಾರಪ್ಪಾ, ಈ ಲೋಧಿ ಎನ್ನುವಿರೋ? ದೆಹಲಿಯಲ್ಲಿ ಲೋಧಿ ಎಸ್ಟೇಟ್, ಲೋಧಿ ರೋಡ್, ಲೋಧಿ ಕಾಲೋನಿ ಇತ್ಯಾದಿ ಇತ್ಯಾದಿ ಇವೆಯಲ್ಲಾ, ಆ ಲೋಧಿ ವಂಶದವನೇ ಈತ. ಭಾರತದ ರಾಜಧಾನಿಯಲ್ಲಿ ಅಕ್ಬರ್ ರೋಡ್, ಬಾಬರ್ ರೋಡ್, ಔರಂಗಜೇಬ್ ರೋಡ್, ಮೊದಲಾದವನ್ನು ಹೆಸರಿಸಿದವರು, ಹಾಗೆ ಹೆಸರಿಸಿ ಧನ್ಯರಾದವರು ಮತ್ತು ಬ್ರಿಟಿಷರಿಗೆ ಪ್ರೀತಿಪಾತ್ರರಾಗಿ ಅವರಿಂದ ಅಧಿಕಾರ ಹಸ್ತಾಂತರ ಪಡೆದವರೇ. ಇಂದು ಆ ದಾಳಿಕೋರರ ಹೆಸರುಗಳನ್ನು ಬದಲಾಯಿಸಬೇಕೆಂದರೆ ಅಡ್ಡಗಾಲು ಹಾಕುತ್ತಿರುವವರೂ ಈ ಬ್ರಿಟಿಷ್ ಪ್ರೀತಿಪಾತ್ರರ ವಂಶೀಕರೇ!

ಲೋಧಿಯ ಅನಂತರ ಹಿಂದೂಗಳು ಮತ್ತೆ ಕಾಶಿಯ ವಿಶ್ವನಾಥನ ದೇವಾಲಯದ ಮರು-ನಿರ್ಮಾಣಕ್ಕೆ, ನಾರಾಯಣ ಭಟ್ಟರ ನೇತೃತ್ವದಲ್ಲಿ ರಾಜಾ ತೋಡರಮಲ್ ಸಹಾಯ ಪಡೆದರು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಇತಿಹಾಸದ ಸಂಕ್ರಮಣ ಕಾಲದಲ್ಲಿ ಹಿಂದೂಗಳ ಸಹಾಯ ನಿರೀಕ್ಷಿಸಿದ್ದ ಪರ್ಷಿಯನ್ನರು

ಔರಂಗಜೇಬನು ಇಸ್ಲಾಮಿನ ಕಡುನಿಷ್ಠ ಅನುಯಾಯಿ. ತನ್ನ ಮತಶ್ರದ್ಧೆಗೆ ಅನುಸಾರವಾಗಿ ಮಥುರೆ – ಕಾಶಿಗಳೂ ಸೇರಿದಂತೆ, ಅಕ್ಷರಶಃ ಸಾವಿರಾರು ದೇವಾಲಯಗಳನ್ನು ಧ್ವಂಸ ಮಾಡಿದ. ಆ ಅವಧಿಯಲ್ಲಿ ಮತ್ತು ಅನಂತರದಲ್ಲಿ ಅನೇಕ ಮರಾಠಾ ರಾಜರು, ಈ ಹಿಂದೂ ದೇವಾಲಯಗಳನ್ನು ಹಿಂಪಡೆಯಲು ಶ್ರಮಿಸಿದರೂ ಅದೇಕೋ ಸಾಧ್ಯವೇ ಆಗಲಿಲ್ಲ. ಮಲ್ಹಾರ್ ರಾವ್ ಹೋಳ್ಕರ್ ಸಹ ಕಾಶಿಯನ್ನು ಪಡೆಯಲು ಯತ್ನಿಸಿದರು. ಅದೂ ಸಾಧ್ಯವಾಗಲಿಲ್ಲ. ವಿಶೇಷವೆಂದರೆ, ಅವರ ಸೊಸೆ ಅಹಲ್ಯಾಬಾಯಿ ಹೋಳ್ಕರ್ ಅವರು ಮೂಲ ಕಾಶಿ ದೇವಾಲಯದ ಪಕ್ಕದಲ್ಲಿ ಹೊಸದೊಂದು ದೇವಾಲಯವನ್ನೇ ನಿರ್ಮಿಸಿದರು. ಅದೇ ಇಂದು ನಮ್ಮ ನಡುವೆ ಇರುವ ದೇವಾಲಯ. ಹಿಮಾಲಯದಿಂದ ಮೊದಲ್ಗೊಂಡು ನಮ್ಮ ಗೋಕರ್ಣವೂ ಸೇರಿದಂತೆ, ಇಡೀ ಭಾರತದಲ್ಲಿ ಅಹಲ್ಯಾಬಾಯಿ ಅವರು ಅನೇಕ ದೇವಾಲಯಗಳನ್ನು ನಿರ್ಮಿಸಿದರು, ಜೀರ್ಣೋದ್ಧಾರ ಮಾಡಿಸಿದರು. ಪ್ರತಿಕೂಲ ವಾತಾವರಣದಲ್ಲಿಯೂ ಅವರ ಈ ಸಾಹಸವು ಸನಾತನ ಧರ್ಮದ ಪುನರುತ್ಥಾನದ ಅಪೂರ್ವ ಘಟ್ಟವಾಗಿದೆ. ಕನ್ನಡ, ಮರಾಠೀ, ತೆಲುಗು, ತಮಿಳು ಎಂದೆಲ್ಲಾ ಭೇದ ಮಾಡಿ ಹೊಸ ಹೊಸ ವಿಚ್ಛಿದ್ರಕಾರೀ ಸಿದ್ಧಾಂತಗಳನ್ನು ಹೆಣೆಯುವ ದ್ರೋಹಿ ಅಕಾಡೆಮಿಷಿಯನ್ನರು ಈ ಸಂಗತಿಗಳನ್ನು ಅಪ್ಪಿತಪ್ಪಿ ಉಲ್ಲೇಖಿಸುವುದಿಲ್ಲ. 1835ರಲ್ಲಿ ಪಂಜಾಬಿನ ಸಿಂಹ, ಸಿಖ್ ದೊರೆ ರಣಜಿತ್ ಸಿಂಹರು ಕಾಶಿ ವಿಶ್ವನಾಥನ ಈ ದೇವಾಲಯದ ಗೋಪುರಕ್ಕೆ ಒಂದು ಟನ್ ತೂಕದ ಚಿನ್ನದ ತಗಡುಗಳನ್ನು ಹೊದಿಸುವ ಸೇವೆ ಸಲ್ಲಿಸಿದರು. ಹಿಂದೂಗಳ – ಸಿಖ್ಖರ ನಡುವೆ ಖಲಿಸ್ತಾನವನ್ನು ಹುಟ್ಟುಹಾಕಿದ ಬೆಳೆಸಿದ ದೇಶದ್ರೋಹಿಗಳಿಗೆ, ಜನರೇ ಈ ಅಂಶವನ್ನು ತಿಳಿಸಬೇಕಿದೆ.

ಶತಕೋಟಿ ಹಿಂದೂಗಳ ಪರಮೇಶ್ವರ ಇನ್ನೆಷ್ಟು ಕಾಯಬೇಕು? ಕಾದಿದ್ದು ಸಾಕು. ನಮಗೆ ಮುಕ್ತಿ ದಯಪಾಲಿಸುವ ಆ ಮುಕ್ತಿನಾಥನಿಗೆ ಇನ್ನಾದರೂ ವಿಮೋಚನೆಯಾಗಲಿ. ಶೀಘ್ರವಾಗಿ ನಂದಿಯ ಪ್ರತೀಕ್ಷೆಗೆ ಒಂದು ಸಕಾರಾತ್ಮಕ ಅಂತ್ಯ ದೊರೆಯಲಿ. ಸತ್ಯಂ ಶಿವಂ ಸುಂದರಂ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಶತಮಾನದಾಚೆಗೆ ವಿಸ್ತರಿಸಿದ ಪ್ರತಿಭೆ ಪ್ರೊ || ಎಲ್.ಎಸ್. ಶೇಷಗಿರಿರಾವ್

Exit mobile version