Site icon Vistara News

ನನ್ನ ದೇಶ ನನ್ನ ದನಿ ಅಂಕಣ: ದುರದೃಷ್ಟವಶಾತ್ ಬಾಲವೇ ನಾಯಿಯನ್ನು ಅಲ್ಲಾಡಿಸುವಂತಾಯಿತು!

freedom at midnight

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/08/audio-ANM-Freedom-at-Midnight-15.mp3

ಕೆಲವೊಮ್ಮೆ ಹಿಂತಿರುಗಿ ನೋಡಿದರೆ, ಅಚ್ಚರಿಗಿಂತಲೂ ಆಘಾತವೇ ಆಗಿಬಿಡುತ್ತದೆ. ನಮ್ಮದು ಹತ್ತಾರು ಸಾವಿರ ವರ್ಷಗಳ ಸಮೃದ್ಧ ಪರಂಪರೆ, ಒಳ್ಳೆಯ ಕೃಷಿ, ಅತ್ಯಪೂರ್ವ ಸಂಸ್ಕೃತಿ. ಎರಡೂವರೆ ಸಾವಿರ ವರ್ಷಗಳ ಹಿಂದೆಯೇ, ನಮ್ಮ ತಕ್ಷಶಿಲೆಯ ವಿಶ್ವವಿದ್ಯಾಲಯಕ್ಕೆ ಜ್ಞಾನಾರ್ಜನೆಗಾಗಿ ಅನೇಕ ದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಇಲ್ಲಿನ ಹಿಂದೂ ಸಮಾಜವು ಅವರಿಗೆಲ್ಲಾ ಆಹಾರ, ವಸತಿ ಕೊಟ್ಟು ಜ್ಞಾನದಾನವನ್ನೂ ಉಚಿತವಾಗಿಯೇ ಮಾಡುತ್ತಿತ್ತು. ಸಾಂಸ್ಕೃತಿಕ ಕೇಂದ್ರಗಳೇ ಆಗಿದ್ದ ದೇವಾಲಯಗಳಿಗೆ ಮತ್ತು ಇಂತಹ ವಿಶ್ವವಿದ್ಯಾಲಯಗಳಿಗೆ ನೆರವು ನೀಡಲು – ಪೋಷಿಸಲು, ನಮ್ಮ ಹಿಂದೂ ರಾಜರು ಸ್ಪರ್ಧೆಯನ್ನೇ ಮಾಡುತ್ತಿದ್ದರು. ದೇಶದೆಲ್ಲೆಡೆ ಆಂಜನೇಯ ಸ್ವಾಮಿಯ ದೇವಾಲಯಗಳು ಮತ್ತು ಗರಡಿ ಮನೆಗಳು. ಅವೆಲ್ಲಾ ವೀರಯೋಧರನ್ನು ನಿರ್ಮಿಸುವ ತಾಣಗಳೇ ಆಗಿದ್ದವು.

ಐಶ್ವರ್ಯ, ಸಮೃದ್ಧಿಗಳ ಪರಾಕಾಷ್ಠೆಯೇ ಹಾಗೋ ಏನೋ? ಅನಗತ್ಯ ಔದಾರ್ಯ ಮತ್ತು ಅಪಾತ್ರದಾನಗಳ ಮಬ್ಬು ನಮ್ಮ ಸಮಾಜವನ್ನು ಕವಿಯಿತು. ಶ್ರೀಕೃಷ್ಣನನ್ನು, ಆಚಾರ್ಯ ಚಾಣಕ್ಯರನ್ನು, ಮುಖ್ಯವಾಗಿ ಅವರ ಕಾರ್ಯತಂತ್ರ ಮತ್ತು ವಿಚಕ್ಷಣೆಗಳನ್ನು ನಾವು ಮರೆತುಬಿಟ್ಟೆವು. ಸಂಸ್ಕೃತಿವಿಹೀನ ಆಸುರೀ ಶಕ್ತಿಗಳು, ಪಾಶವೀ ಸೈನ್ಯಗಳು ನಮ್ಮ ಮೇಲೆ ದಾಳಿ ಮಾಡಿದಾಗ ನಮ್ಮ ಸೈನ್ಯ ಗೆದ್ದರೂ ನಾವು, ಈ ಶತ್ರುಗಳನ್ನು ನಿಶ್ಶೇಷ ಮಾಡುವಲ್ಲಿ ಸೋತೆವು, ಶತ್ರುಗಳನ್ನು ಉದಾರವಾಗಿ ಗಡಿ ದಾಟಿಸಿಬಿಟ್ಟು ಬಂದೆವು. ಘಜನಿ – ಘೋರಿ ಮೊಹಮ್ಮದರಂತಹ ದುಷ್ಟರು ಮತ್ತೆ ಹಿಂತಿರುಗಿ ಬಂದಾಗ, ನಮ್ಮ ಶ್ರದ್ಧಾಕೇಂದ್ರಗಳನ್ನು ಧ್ವಂಸ ಮಾಡಿದಾಗ, ನಮ್ಮ ಹೆಣ್ಣುಮಕ್ಕಳನ್ನು ಗುಲಾಮರ ಮಾರುಕಟ್ಟೆಯಲ್ಲಿ ಮಾರಿದಾಗಲೂ, ನಮ್ಮ ಸಮಾಜವು ಈ ಆಕ್ರಮಣಕಾರಿ ವಿದೇಶೀ ಸಾಮ್ರಾಜ್ಯಶಾಹಿ ಮತಗಳನ್ನು ಅರ್ಥವೇ ಮಾಡಿಕೊಳ್ಳದೇ “ನಮ್ಮಂತೆಯೇ” ಎಂದು ನಿರ್ಧರಿಸಿ, ಆತ್ಮಹತ್ಯಾತ್ಮಕ ನಿರ್ಣಯವನ್ನು ತೆಗೆದುಕೊಂಡು ಸ್ವನಾಶಕ್ಕೆ ಮುನ್ನುಡಿ ಬರೆದುಬಿಟ್ಟಿತು. ಈಗಲೂ ನಮ್ಮ ಈ ಮೂರ್ಖತನ ಮುಂದುವರಿದೇ ಇದೆ.

ಅತ್ಯದ್ಭುತವಾದ ಸಾಂಸ್ಕೃತಿಕ ಪರಂಪರೆ, ಆರ್ಥಿಕ ಸುಸ್ಥಿತಿ, ಸಮೃದ್ಧ ಕೃಷಿಗಳಿಗೆ ಸಹಸ್ರ ಸಹಸ್ರ ವರ್ಷಗಳ ಕಾಲ ಖ್ಯಾತಿ ಗಳಿಸಿದ್ದ ನಾವು ದಟ್ಟದರಿದ್ರರಾಗಿ ಹೋದೆವು. ಐರೋಪ್ಯ ಕ್ರೈಸ್ತ ವಸಾಹತುಶಾಹಿ ನೀಚರು ತಂದು ಹರಡಿದ ಪ್ಲೇಗ್ ಇತ್ಯಾದಿ ರೋಗಗಳಿಗೂ ಕ್ಷತವಿಕ್ಷತರಾಗಿ ಹೋದೆವು. ಲೋಕಕ್ಕೇ ಅನ್ನದಾನದ ಪಾಠ ಹೇಳಿದ ಪರಂಪರೆಯ ನಾವು, ಸ್ವತಃ ಅಕ್ಷರಶಃ ಭಿಕ್ಷೆ ಬೇಡುವಂತಾದೆವು. ಮೂವತ್ತು ಸಾವಿರ ವರ್ಷಗಳ ಇತಿಹಾಸದ ಉತ್ಕೃಷ್ಟ ಭಾಷೆ – ಲಿಪಿಗಳ ಸಮೃದ್ಧ ಸಾಹಿತ್ಯದ ನಮ್ಮ ಭಾಷೆಗಳನ್ನು ಕಡೆಗಣಿಸಿ, ಸ್ವಂತದ ಲಿಪಿಯೂ ಇಲ್ಲದ ಇಂಗ್ಲಿಷ್ ಭಾಷೆಯ ಗುಲಾಮರಾಗಿ ಹೋದೆವು. ಲಿಪಿಯೇ ಇಲ್ಲದ ಅವೈಜ್ಞಾನಿಕ ವಿನ್ಯಾಸದ ಈ ಭಾಷೆಯು ಇಂದಿಗೂ ನಮ್ಮ ತಲೆಯ ಮೇಲೆಯೇ ಕುಳಿತಿದೆ. ಭಾರತೀಯರಿಗೆ ಇನ್ನೂ ವಿಮೋಚನೆ ಸಿಕ್ಕಿಲ್ಲ, ಸಿಕ್ಕುವುದೂ ಇಲ್ಲ, ಬಿಡಿ (“ಶೋಲೆ” ಚಿತ್ರದಲ್ಲಿ, ಗಬ್ಬರ್ ಹೇಳುವಂತೆ “ಹಮ್ ದೇಖೇಂಗೇ ಭೀ ನಹ್ಞೀ”).

ಶತ್ರುಗಳನ್ನು ವಿನಾಶಕಾರಿ ರಿಲಿಜನ್ನುಗಳನ್ನು ಅರ್ಥ ಮಾಡಿಕೊಳ್ಳಲು, ಸೂಕ್ತವಾಗಿ ನಿರ್ವಹಿಸಲು ವಿಫಲರಾದ ನಾವು, ಕಳೆದ ಕೆಲವು ಶತಮಾನಗಳಲ್ಲಿ ಅನುಭವಿಸಿದ ಅವಮಾನ ಅನೂಹ್ಯವಾದದ್ದು.

ಲ್ಯಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲೇಪಿಯರ್ ಎಂಬ ಇಬ್ಬರು ಪ್ರಭೃತಿಗಳು, “ಫ್ರೀಡಮ್ ಅಟ್ ಮಿಡ್‌ನೈಟ್” (1979) ಎಂಬ ಪುಸ್ತಕ ಬರೆದಿದ್ದಾರೆ. ಅದರ ಮೊದಲ ಅಧ್ಯಾಯದ ಹೆಸರು “ಎ ರೇಸ್ ಡೆಸ್ಟೈನಡ್ ಟು ಗವರ್ನ್ ಅಂಡ್ ಸಬ್‌ಡ್ಯೂ”. ಬರೆದವರೂ ಬಿಳಿಯರೇ, ಇತಿಮಿತಿಯಿಲ್ಲದಷ್ಟು ಉಡಾಫೆಯಿಂದ ಬರೆದದ್ದೂ ಬಿಳಿಯರ ಬಗ್ಗೆಯೇ. ಯಾವ ಪುಸ್ತಕವನ್ನಾದರೂ ಓದಲಿ, ಬಿಡಲಿ. ಇದನ್ನಂತೂ ಓದಲೇಬೇಕು. ಅದರಲ್ಲೂ ಈ ಮೊದಲ ಅಧ್ಯಾಯವು ಮರೆಯಲಾಗದಂತಹುದು. ಓದಿ ಮುಗಿಸುವ ಮೊದಲೇ, “ದೇವರೇ, ಎಂತಹ ದೇಶಕ್ಕೆ ಎಂತಹ ಹೀನಸ್ಥಿತಿ ಬಂತಲ್ಲಾ” ಎಂದು ಮರುಗುವಂತಾಗುತ್ತದೆ.

ನಮ್ಮ ಮೂರ್ಖತನ, ನಮ್ಮ ಅಂತಃಕಲಹಗಳು, ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ಇಡಿಯ ದೇಶವನ್ನೇ ಆಪೋಶನ ತೆಗೆದುಕೊಳ್ಳುವಂತೆ ಮಾಡಿದವು. ಎಂತಹ ವಿಚಿತ್ರ ನೋಡಿ! ವಿದೇಶೀ ವಿಧ್ವಂಸಕ ಸೈನ್ಯಗಳನ್ನು ನಮ್ಮವರು ಊಹಿಸಿದರು, ಎದುರಿಸಿದರು. ಆದರೆ, ವ್ಯಾಪಾರಕ್ಕೆಂದು ಬಂದವರು ಇಲ್ಲಿ ದೊಡ್ಡದೊಂದು ವಸಾಹತುವನ್ನೇ ಮಾಡಿಕೊಂಡು ಕೊಳ್ಳೆಹೊಡೆಯುತ್ತಾರೆ, ನಮ್ಮನ್ನು ಅವರು ಆಳಬಹುದು ಎನ್ನುವುದನ್ನು ನಮ್ಮ ಜನ ಊಹಿಸಿಕೊಳ್ಳಲೂ ಇಲ್ಲ, ಕಲ್ಪಿಸಿಕೊಳ್ಳಲೂ ಇಲ್ಲ. ಜಗತ್ತಿಗೇ ಜ್ಞಾನ ಭಂಡಾರ ನೀಡಿದ ನಮ್ಮ ಪರಂಪರೆಯ ಗ್ರಂಥಗಳನ್ನು ಕದ್ದು ಭಾಷಾಂತರಿಸಿಕೊಂಡ (ಅನೇಕ ಸಂಗತಿಗಳ ಬಗೆಗೆ, ಇದೀಗ ಪೇಟೆಂಟ್ ಸಹ ಮಾಡಿಕೊಂಡಿರುವ!) ಐರೋಪ್ಯರು ಈಗ ನಮಗೆ ಅಜ್ಞಾನದ ಅಂಧಕಾರದಿಂದ ವಿಮೋಚನೆ ನೀಡುವ ಬೆಳಕಾಗಿ ಹೋಗಿದ್ದಾರೆ! ಆಕ್ಸ್ ಫರ್ಡ್, ಕೇಂಬ್ರಿಡ್ಜ್, ಲಂಡನ್ ಇತ್ಯಾದಿ ಹೆಸರಿಟ್ಟುಕೊಂಡರೂ ಸಾಕು, ಅಂತಹ ಫಲಕಗಳ ಕೆಳಗೆ ಶಾಲಾ-ಪ್ರವೇಶಾವಕಾಶಕ್ಕಾಗಿ ನಾವೆಲ್ಲಾ ಈಗಲೂ ಸಾಲುಗಟ್ಟುತ್ತೇವೆ.

british colony

ಇಂಗ್ಲೆಂಡಿನಲ್ಲಿ ಶಾಲೆ ಮುಗಿಸಿದ ಪಡ್ಡೆ ಹುಡುಗರು, 19 -20ನೆಯ ಶತಮಾನಗಳಲ್ಲಿ, ಇಲ್ಲಿ ಭಾರತದಲ್ಲಿ (ಅಲ್ಲಿನ ಸ್ಕಾಟ್ಲೆಂಡ್‌ಗಿಂತ ವಿಶಾಲವಾದ ಪ್ರದೇಶಗಳ) ಜಿಲ್ಲಾಧಿಕಾರಿಗಳಾದರು, ಕಲೆಕ್ಟರ್‌ಗಳಾದರು, ಆಳಿದರು, ಅಧಿಕಾರ ಚಲಾಯಿಸಿದರು. ನಮ್ಮನ್ನು ಆಳಲೆಂದೇ “ವಿಧಿ ನಿಶ್ಚಯಿಸಿದ ಜನಾಂಗ”ವಲ್ಲವೇ! ಇಲ್ಲಿಗೆ ಬಂದ ಬ್ರಿಟಿಷ್ ವ್ಯಕ್ತಿ, ತಾನು ಸಂಪಾದಕನಾಗಿರಲಿ, ಸಹಾಯಕ ವೃತ್ತಿಯವನಾಗಿರಲಿ, ಅಥವಾ ಮುಖ್ಯ ಕಮಿಷನರನ ಹುದ್ದೆಯಲ್ಲಿಯೇ ಇರಲಿ, ಅವನ ಮನಸ್ಸಿನಲ್ಲಿದ್ದುದು, “ಈ ಜನರನ್ನು ಆಳಲು, ಅಂಕೆಯಲ್ಲಿಡಲು ದೇವರೇ ನಿಗದಿ ಮಾಡಿದ ಜನಾಂಗವೊಂದಕ್ಕೆ ಸೇರಿದವ ತಾನು” ಎಂಬ ಭಾವನೆಯೇ. ಈ ದೇಶವನ್ನು ಆಳಲು, ಆಡಳಿತದ ಚುಕ್ಕಾಣಿ ಹಿಡಿಯಲು, ಅನನುಭವಿ ಇಂಗ್ಲಿಷ್ ತರುಣರ ದೊಡ್ಡ ಪಡೆಯೇ ಬಂದಿತು. ಅವರು ಹೇಳಿದ್ದೇ ನಿಯಮ. ಮಾಡಿದ್ದೇ ಕಾಯಿದೆ. ನಮ್ಮನ್ನು ಆಳಲೆಂದೇ ದೇವರು ತೀರ್ಮಾನಿಸಿದ ಈ ಜನಾಂಗದಲ್ಲಿ ಜನರ ಕೊರತೆಯುಂಟಾಗಿ, 1918 ರಿಂದ ಐ.ಸಿ.ಎಸ್. ಪರೀಕ್ಷೆಗೆ ಕೂರಲು ಅಭ್ಯರ್ಥಿಗಳೇ ಇಲ್ಲದೆ, ಅನಿವಾರ್ಯವಾಗಿ ಈ ಗುಲಾಮ ದೇಶ ಭಾರತದವರಿಗೆ ಅವಕಾಶ ನೀಡಲಾರಂಭಿಸಿದರಂತೆ!

ಇಲ್ಲಿ ಆಳಲು ಬಂದ ಇಂಗ್ಲೆಂಡಿನ ಪಡ್ಡೆ ಹುಡುಗರು ಆಡಳಿತಾಧಿಕಾರಿಗಳಾಗಿ ಭಾರತದ ಮೂಲೆಮೂಲೆಗಳಿಗೆ ಹೋಗಬೇಕಾಗಿ ಬಂದುದನ್ನು, ಹಿಂದೆ ಯಾರೂ (“…..ದೋಸ್ ಜನರೇಷನ್ ಆಫ್ ಬ್ರಿಟನ್ಸ್ ಪೊಲೀಸ್ಡ್ ಅಂಡ್ ಅಡ್ಮಿನಿಸ್ಟರ್ಡ್ ಇಂಡಿಯಾ, ಆ್ಯಸ್ ನೋ ಒನ್ ಬಿಫೋರ್ ದೆಮ್ ಹ್ಯಾಡ್…”) (ಪುಟ ೧೬) ಹೀಗೆ ಇವರಂತೆ ಆಳಿರಲಿಲ್ಲ ಎಂಬಂತೆ ಆಡಳಿತ ನಡೆಸಿದ್ದನ್ನು, ಹಾವು ಕಚ್ಚಿಯೋ – ಕಾಲರಾದಂತಹ ರೋಗಗಳಿಂದಲೋ ಸತ್ತು ಹೋದುದನ್ನು, ಆ “ದಿವ್ಯ ಸ್ಮಾರಕ”ಗಳ ವಿವರಗಳನ್ನು ಈ ಕಾಲಿನ್ಸ್ – ಲೇಪಿಯರ್ ಜೋಡಿಯು ಶ್ರದ್ಧೆಯಿಂದ ಒಟ್ಟು ಮಾಡಿದೆ! ಜಿಲ್ಲಾಧಿಕಾರಿಯೇ ಕಾಲರಾದಿಂದ ಸತ್ತು ಹೋಗಿರಬೇಕಾದರೆ, ಸಾಮಾನ್ಯ ಜನರ ಸ್ಥಿತಿ ಹೇಗಿತ್ತು, ಇವರ “ಅದ್ಭುತವಾದ ಆಡಳಿತದಲ್ಲಿ” ಎಂಬ ವಿವರಗಳನ್ನು ಮಾತ್ರ ನೀಡಿಲ್ಲ, ಪಾಪ!

ಬ್ರಿಟಿಷರ ಅವಧಿಯಲ್ಲಿ ಕ್ಷಾಮಗಳಿಂದ ಕೋಟಿಗಟ್ಟಲೆ ಜನ ಸತ್ತರು. ಇವರ ಎರಡು ವಿಶ್ವಯುದ್ಧಗಳಲ್ಲಿ ಭಾರತೀಯ ಸೈನಿಕರು ಬಲಿಯಾದರು. ತೆರಿಗೆ ಹೇರಿ ಹೇರಿ ರೈತರನ್ನು ದಿಕ್ಕೆಟ್ಟು ಹೋಗುವಂತೆ ಮಾಡಿ, ಸಾವಿರಾರು ವರ್ಷಗಳ ಸಮೃದ್ಧ ಕೃಷಿಯನ್ನು ನಿರ್ನಾಮ ಮಾಡಿ, ಬಡದೇಶ ಎನ್ನುವ ಹೆಸರು ಇಂದಿಗೂ ಉಳಿಯುವಂತೆ ಮಾಡಿದರು. ನಿರಂತರವಾಗಿ ನೂರಾರು ವರ್ಷಗಳ ಕಾಲ, ಇಲ್ಲಿನ ಐಶ್ವರ್ಯವನ್ನು ಲೂಟಿ ಮಾಡಿಮಾಡಿ ಕೊಳ್ಳೆಹೊಡೆದು ಸಾಗಿಸಿದರು; ಹೀಗಿದ್ದೂ ತಮ್ಮ ಆಡಳಿತವನ್ನು ಕೊಚ್ಚಿಕೊಳ್ಳುವ ಇಂತಹ ಧಾರ್ಷ್ಟ್ಯ ಈ ಶ್ವೇತವರ್ಣೀಯರಿಗೆ ಸಹಜವೋ ಏನೋ!

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಸಾಬ್, ಇದರ ಮೇಲೆಯೇ ದೇಶವಿಭಜನೆಯ ಡೀಲ್ ಆದದ್ದು!

ಶತಮಾನಗಳ ಕಾಲ, ಹೀಗೆ, ಬಾಲವೇ ನಾಯಿಯನ್ನು ಅಲ್ಲಾಡಿಸುವ ದುಃಸ್ಥಿತಿ ಇತ್ತು.

ಇವರು ಏನಾದರೂ ಹೇಳಿಕೊಳ್ಳಲಿ, ಏನಾದರೂ ಬರೆದಿಟ್ಟಿರಲಿ, ತಮ್ಮ ಚಲನಚಿತ್ರಗಳಲ್ಲಿ ಏನನ್ನೇ ತೋರಿಸಲಿ, ಪೂರ್ವಾಪರ ಜ್ಞಾನ ನಮಗೆ ಇರಬೇಕಾಗಿದೆ, ಇತಿಹಾಸವನ್ನು ಕಣ್ಣು ತೆರೆದೇ ಓದುವ ಪರಾಮರ್ಶೆಯ ಅಗತ್ಯವಿದೆ, ನಮ್ಮದೇ ಪರಂಪರೆಯ ಕುರಿತಾದ ಅರಿವಿನ ಬೆಳಕು ಬೇಕಾಗಿದೆ. ಎಚ್ಚರ ತಪ್ಪಿದರೆ, ಇವರ ಕುದುರೆಯ ಬಾಲದ ಹಿಂದೆ, ಇವರ ಸಾರೋಟಿನ ಹಿಂದೆ, ಇವರ ಕಾರುಗಳ ಹಿಂದೆ, ಅರೆಬೆತ್ತಲೆ ಓಡುವ ಸ್ಥಿತಿ ನಮಗೆ ಮತ್ತೆ ವಕ್ಕರಿಸುತ್ತದೆ. ಇವರ ಮನೆ ಮುಂದೆ, ಕಚೇರಿಗಳ ಮುಂದೆ ನಾಯಿಗಳಂತೆ ನಾವೆಲ್ಲಾ ಮತ್ತೆ ನಿಲ್ಲಬೇಕಾಗುತ್ತದೆ.

“ಸ್ವಾತಂತ್ರ್ಯ ಬಂತು, ಸ್ವಾತಂತ್ರ್ಯ ಬಂತು” ಎಂದು ನಾವೆಲ್ಲಾ ಎಷ್ಟೇ ಕುಣಿದಾಡಿದರೂ ಅದು ಈ ಬ್ರಿಟಿಷರಿಂದಾದ “Transfer of Power” ಮಾತ್ರ ಮತ್ತು ಮುಖ್ಯವಾಗಿ ಅದು ಕೇವಲ “Dominion Status” ಎಂಬ ಕಟುಸತ್ಯಾಂಶಗಳು ನಮ್ಮನ್ನು ನಿರ್ವಿಣ್ಣರನ್ನಾಗಿ ಮಾಡಿಬಿಡುತ್ತವೆ.

ವಿಶೇಷತಃ ಆಗಸ್ಟ್ ತಿಂಗಳಲ್ಲಿ ನಿಜೇತಿಹಾಸದ ಸಾಕ್ಷ್ಯಾಧಾರಗಳ ಚಾಟಿಯೇಟುಗಳು, ನಮ್ಮನ್ನು ಅಪ್ರತಿಭರನ್ನಾಗಿ ಮಾಡುತ್ತವೆ.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ನಮ್ಮ ನಾಳೆಗಳಿಗಾಗಿ ಇಂದು ಜೀವ ತೆತ್ತವರು

Exit mobile version