| ಚೈತನ್ಯ ಹೆಗಡೆ, ಬೆಂಗಳೂರು
ಸಮರ… ಅದು ಯುದ್ಧಭೂಮಿ ಆಗಿರಬಹುದು, ಯಾವುದೋ ಮಾರುಕಟ್ಟೆ ವ್ಯಾಪ್ತಿಯನ್ನು ಸೆಳೆದುಕೊಳ್ಳುವುದಕ್ಕಿರುವ ಕಾರ್ಪೋರೇಟ್ ಕದನ ಇರಬಹುದು ಅಥವಾ ಚುನಾವಣೆಯ (Lok Sabha Election 2024) ಕದನವಿದ್ದಿರಬಹುದು… ಎಲ್ಲದರಲ್ಲೂ ತಂತ್ರಗಾರಿಕೆಯ ಚರಮಸ್ಥಿತಿ ಬೇಕಾಗುತ್ತದೆ. ಹಾಗೆಂದೇ ಇದೇ ನೆಪದಲ್ಲಿ ಒಂದೋ ತಂತ್ರಜ್ಞಾನ-ಅನ್ವೇಷಣೆಗಳು ಬಲಗೊಳ್ಳುತ್ತವೆ ಇಲ್ಲವೇ ಹುಟ್ಟಿಕೊಳ್ಳುತ್ತವೆ. ಏಕೆಂದರೆ ಇಲ್ಲೆಲ್ಲ ಫಲಿತಾಂಶ ಕಾಣಲೇಬೇಕಾದ ಒತ್ತಡಗಳಿರುತ್ತವೆ.
ಸ್ಟೇನ್‌ಲೆಸ್ ಸ್ಟೀಲ್, ಸ್ಯಾನಿಟರಿ ಪ್ಯಾಡ್, ವೈಮಾನಿಕ ಸಂವಹನ ವ್ಯವಸ್ಥೆ, ಉಡುಪು-ಬ್ಯಾಗುಗಳಿಗೆ ಬಳಸುವ ಜಿಪ್, ಹೀಗೆ ಅಸಂಖ್ಯ ಅನ್ವೇಷಣೆಗಳೆಲ್ಲ ಸಮರಾಂಗಣದಲ್ಲೇ ತಮ್ಮ ಬೇರುಗಳನ್ನು ಹೊಂದಿವೆ. ಆನಂತರದಲ್ಲವು ವ್ಯಾಪಕವಾಗಿ ನಾಗರಿಕ ಬಳಕೆಗೆ ಬಂದವು. ಹಾಗೆಂದೇ ಕಾರ್ಪೋರೇಟ್ ಮತ್ತು ರಾಜಕೀಯ ಗುಂಪುಗಳು ಸಹ ನಿರ್ಣಾಯಕ ಪೈಪೋಟಿಯಲ್ಲಿ ತೊಡಗಿಸಿಕೊಂಡಿರುವ ತಮ್ಮ ಗುಂಪಿನ ಚಿಂತನಾಸ್ಥಳವನ್ನು ವಾರ್ ರೂಮ್ ಎಂದೇ ಕರೆಯುತ್ತವೆ.
ಇಷ್ಟೆಲ್ಲ ಪೀಠಿಕೆ ಏಕೆಂದರೆ ಭಾರತವು ಮತ್ತೆ ಲೋಕಸಭೆ ಚುನಾವಣೆಯ ಎದುರಿನಲ್ಲಿದೆ. ಹತ್ತಿರ ಹತ್ತಿರ 97 ಕೋಟಿಯಷ್ಟು ಮತದಾರರನ್ನು ಮುಟ್ಟಬೇಕಾದ ರಾಜಕೀಯ ಪಕ್ಷಗಳು ತಮ್ಮ ಸಾಮರ್ಥ್ಯಕ್ಕನ್ನುಗುಣವಾಗಿ ವಾರ್ ರೂಮ್ ರೂಪಿಸಿಕೊಂಡಿರುತ್ತವೆ. ಈ ಹಂತದಲ್ಲೂ ತಂತ್ರಜ್ಞಾನದ ಉತ್ಕರ್ಷ, ಐಡಿಯಾಗಳ ಹಣಾಹಣಿ ಗಮನ ಸೆಳೆಯುತ್ತದೆ. ಅದರಲ್ಲೂ ನರೇಂದ್ರ ಮೋದಿ (Narendra Modi) ನೇತೃತ್ವದ ಬಿಜೆಪಿ ತಂತ್ರಜ್ಞಾನದ ನಾವೀನ್ಯಗಳನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವುದರಲ್ಲಿ ಕಳೆದೆರಡು ಚುನಾವಣೆಗಳಲ್ಲೂ ತನ್ನದೇ ಛಾಪು ಒತ್ತಿದೆ.
2014ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ರಂಗಪ್ರವೇಶ. ಗುಜರಾತಿನಲ್ಲಿ ಅವರು ಹೆಸರು ಮಾಡಿದ್ದರಾದರೂ ದೇಶದೆಲ್ಲೆಡೆ ಅವರನ್ನು ಪ್ರಧಾನಿಪಟ್ಟದ ಮುಖವಾಗಿ ಪರಿಚಯಿಸಿ ಅಚ್ಚೊತ್ತಬೇಕಾಗಿತ್ತು. ಆ ಹಂತದಲ್ಲಿ ಬಿಜೆಪಿ ಟ್ವಿಟ್ಟರ್- ಫೇಸ್ಬುಕ್ ಸೇರಿದಂತೆ ಸಾಮಾಜಿಕ ತಾಣಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿತು. ಕಾಂಗ್ರೆಸ್ಸಿಗಿಂತ ಆ ವಿಚಾರದಲ್ಲಿ ಅದು ಎಷ್ಟೋ ಮುಂದಿತ್ತು, ಆಕ್ರಮಣಕಾರಿಯಾಗಿತ್ತು, ಆಕರ್ಷಕವಾಗಿತ್ತು. ಇದೊಂದು ಆಯಾಮವಾದರೆ, ಅವತ್ತಿಗೆ ತುಂಬ ಹೊಸದಾಗಿದ್ದ ಹೊಲೊಗ್ರಾಮ್ ಪ್ರಸ್ತುತಿಯನ್ನು ಮೋದಿ ಟೀಂ ದೇಶಾದ್ಯಂತ ದೊಡ್ಡ ಸಭೆಗಳಲ್ಲಿ ಬಳಸಿತು. ಮೋದಿ ಹೆಸರಿನ ಕುರಿತ ಕುತೂಹಲ-ಉತ್ಸುಕತೆಗಳು ದೇಶದ ಎಲ್ಲ ಕಡೆ ಇದ್ದವು. ಆದರೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪ್ರತಿಮೂಲೆಯನ್ನೂ ಖುದ್ದಾಗಿ ಸಂದರ್ಶಿಸಲಾಗದಲ್ಲ… ಮೋದಿ ಭಾಷಣದ ರೆಕಾರ್ಡಿಂಗ್ ಇರುವ ದೊಡ್ಡ ಪರದೆಗಳನ್ನು ಹಾಕಿ ಪ್ರದರ್ಶಿಸಬಹುದು. ಆದರೆ, ವ್ಯಕ್ತಿಯನ್ನು ಟಿವಿಯಲ್ಲಿ ನೋಡುವುದು ಎನ್ನುವುದು ಒಂದು ಸ್ಥಳದಲ್ಲಿ ಬಹಳ ಹೊತ್ತಿನವರೆಗೆ ಜನರನ್ನು ಹಿಡಿದಿಡುವುದು ಕಷ್ಟ. ಹಾಗೆಂದೇ, ಖುದ್ದು ಮೋದಿಯೇ ವೇದಿಕೆಯ ಆ ತುದಿಯಿಂದ ಈ ತುದಿಗೆ ನಡೆದು ಭಾಷಣ ಮಾಡಿದಂತೆ ಭಾಸವಾಗುವ, ಮೋದಿ ತಮ್ಮೆದುರೇ ಇದ್ದಾರೆ ಎಂದು ಜನಕ್ಕೆ ಅನಿಸುವಂತಾಗುವ 3ಡಿ ಹೊಲೊಗ್ರಾಮ್ ಗಳನ್ನು ಸುಮಾರು 3,000 ಕಾರ್ಯಕ್ರಮಗಳಲ್ಲಿ ಬಳಸಲಾಯಿತು. ವಿಶ್ವದ ಮತ್ಯಾವ ನೇತಾರನೂ ಹೊಲೊಗ್ರಾಮ್ ಅನ್ನು ಆ ವ್ಯಾಪ್ತಿಯಲ್ಲಿ ಬಳಸಿರಲಿಲ್ಲ.
ಅದಾಗಿ ಮುಂದೆ, 2019 ಬರುವಷ್ಟರಲ್ಲಿ ಸಾಮಾಜಿಕ ಮಾಧ್ಯಮದ ಆಟದಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳೂ ಪಳಗಿದ್ದವು. ಟ್ವಿಟ್ಟರಿನಲ್ಲಿ ಟ್ರೆಂಡ್ ಆಗಿಸುವುದು ಬಿಜೆಪಿ ತಂಡಕ್ಕೆ ಮಾತ್ರ ಗೊತ್ತು ಎಂಬಂಥ ಸ್ಥಿತಿಯೇನೂ ಇರಲಿಲ್ಲ. ಬಿಜೆಪಿಯ ಪ್ರಚಾರ ನಿಭಾಯಿಸಿದ್ದ ತಂಡದ ಹಲವರು ಬೇರೆ ಬೇರೆ ಪಕ್ಷಗಳಿಗೆ ತಮ್ಮ ವೃತ್ತಿಸೇವೆ ಕೊಡುತ್ತಿದ್ದರಾದ್ದರಿಂದ ಅಲ್ಲೊಂದು ಸಮಬಲದ ಪೈಪೋಟಿ ಇತ್ತು. ಆದರೆ, ಬಹಿರಂಗವಾಗಿ ಅಂಕಿಗಳು ಸಿಗದೇ, ಅಬ್ಬರವಾಗದಿದ್ದರೂ ರೀಚ್ ದೃಷ್ಟಿಯಿಂದ ಆ ಹೊತ್ತಿಗೆ ಬಹಳ ವಿಸ್ತಾರಗೊಂಡಿದ್ದ ವಾಟ್ಸಾಪ್ ಅನ್ನು ಬಿಜೆಪಿ ಚೆನ್ನಾಗಿ ಬಳಸಿಕೊಂಡಿತು ಎಂಬ ವರದಿಗಳು ಬಂದವು. ಅದೇ ಕಾರಣಕ್ಕೋ ಏನೋ, ಬಿಜೆಪಿ ಮತ್ತು ಬಿಜೆಪಿ ಬೆಂಬಲಿಗರನ್ನು ಟೀಕಿಸುವ ಸಂದರ್ಭ ಬಂದಾಗಲೆಲ್ಲ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು “ವಾಟ್ಸಾಪ್ ಯುನಿವರ್ಸಿಟಿ” ಎಂದು ಹಂಗಿಸಿದವು.
ಇವತ್ತಿಗೆ, ಸಾಮಾಜಿಕ ಮಾಧ್ಯಮ, ಟಿವಿ ಜಾಹೀರಾತುಗಳು, ವಾಟ್ಸಾಪು-ಇನ್ಸ್ತಾಗಳಲ್ಲಿ ಹರಿದಾಡುವ ಚಿಕ್ಕ ವಿಡಿಯೊ ತುಣುಕುಗಳು ಹೀಗೆ ಎಲ್ಲದರ ಪ್ರಭಾವವೂ ಇದೆ. ಆದರೆ ಇವುಗಳ ಬಳಕೆಯ ಕೌಶಲ ಬಿಜೆಪಿಗೇ ಇದೆ ಎಂಬ ಸ್ಥಿತಿಯೇನಿಲ್ಲ. ಎಲ್ಲರೂ ಒಂದುಹಂತದಲ್ಲಿ ಸಮಬಲರೇ. ಹೀಗಾಗಿ, ಈ 2024ರ ಲೋಕ ಕದನದಲ್ಲಿ ಬಿಜೆಪಿಯು ಇವೆಲ್ಲದರ ಜತೆ ತನ್ನದು ಎಕ್ಸಟ್ರಾ ಎಂಬಂತೆ ಏನನ್ನು ಕೊಡಲಿದೆ?
ಉತ್ತರ ಒಂದುಮಟ್ಟಕ್ಕೆ ಗೋಚರ. ಬಹುಶಃ, 2024ರ ಮತ ಮಹಾಸಮರದಲ್ಲಿ ಕೃತಕ ಬುದ್ಧಿಮತ್ತೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಪಕ್ಷ ಎಂಬ ಹೆಗ್ಗಳಿಕೆಯನ್ನು ಬಿಜೆಪಿಯೇ ಪಡೆಯಲಿಕ್ಕಿದೆ.
ಮೋದಿ ಬ್ರ್ಯಾಂಡ್ ಅನ್ನು ದಕ್ಷಿಣಕ್ಕೆ ಮತ್ತಷ್ಟು ಆಪ್ತವಾಗಿಸೀತೇ ಭಾಷಿಣಿ?
2023ರ ಡಿಸೆಂಬರ್‌ನಲ್ಲಿ ವಾರಣಾಸಿಯಲ್ಲಿ ಕಾಶಿ-ತಮಿಳು ಸಂಗಮ ಕಾರ್ಯಕ್ರಮ. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂಗ್ಲಿಷ್-ಹಿಂದಿ ಮಿಶ್ರಣದಲ್ಲಿ ಮಾತನಾಡುತ್ತಿದ್ದಂತೆಯೇ, ಕೇಂದ್ರ ಸರ್ಕಾರವೇ ಅಭಿವೃದ್ಧಿಪಡಿಸಿರುವ ಭಾಷಿಣಿ ಎಐ ತಂತ್ರಜ್ಞಾನ ಅದನ್ನು ಆ ಕ್ಷಣದಲ್ಲೇ ತಮಿಳಿನಲ್ಲಿ ಧ್ವನಿ ಸಹಿತ ಅನುವಾದಿಸಿ ಕೇಳಿಸುತ್ತಿತ್ತು. ಅನುವಾದ ಬೇಕಿದ್ದವರು ಸಣ್ಣ ಉಪಕರಣ ಬಳಸಬೇಕಿತ್ತಷ್ಟೆ. ಇತ್ತೀಚೆಗೆ, ತಮಿಳುನಾಡಿನ ತಂತಿ ಟಿವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂದರ್ಶನ ಬಿತ್ತರವಾಯಿತು. ವೇಶ್ಟಿ, ಬಿಳಿಯಂಗಿ, ಶಲ್ಯದ ಸಾಂಪ್ರದಾಯಿಕ ದಿರಸಿನಲ್ಲಿ ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಇಬ್ಬರು ಸಂದರ್ಶಕರು ಆಂಗ್ಲ-ಹಿಂದಿಗಳಲ್ಲಿ ಪ್ರಶ್ನಿಸಿದರು. ಹಿಂದಿಯಲ್ಲಿ ಮೋದಿ ಉತ್ತರಿಸುತ್ತಿದ್ದರು. ಅವೆರಡೂ ತಮಿಳಿಗೆ ಭಾಷಾಂತರವಾಗಿ ಧ್ವನಿ ಸಹ ಮಾತುಕತೆಗೆ ಹೊಂದಿಸಲಾಗಿತ್ತು. ಅಲ್ಲಿ ಭಾಷಿಣಿ ಅಥವಾ ಇನ್ಯಾವುದೇ ಕೃತಕ ಬುದ್ಧಿಮತ್ತೆ ಬಳಸಲಾಗಿತ್ತೋ ಸ್ಪಷ್ಟವಿಲ್ಲ. ಆದರೆ ದಕ್ಷಿಣದಲ್ಲಿ ಈ ಬಾರಿ ಮೋದಿ ತಲುಪಲಿರುವ ಫಾರ್ಮಾಟ್ ಮಾತ್ರ ಸ್ಪಷ್ಟ. ಅದೆಂದರೆ, ಸ್ಥಳೀಯ ಭಾಷೆಯಲ್ಲೇ ಮತದಾರರನ್ನು ಮುಟ್ಟುವ ಪ್ರಯತ್ನವನ್ನು ಮೋದಿ ಮಾಡಲಿದ್ದಾರೆ.
ಇದರಲ್ಲಿ ಅಂಥದ್ದೇನು ಫರಕ್ಕಿದೆ, ಪಕ್ಕದಲ್ಲಿ ಅನುವಾದಕನಿದ್ದರೆ ಸಾಕಲ್ಲವೇ ಎಂದೆನಿಸಬಹುದು. ಇದುವರೆಗೆ ಮಾಡುತ್ತಿದ್ದದ್ದು ಹಾಗೆಯೇ. ಆದರೆ ಗಮನಿಸಿ ನೋಡಿ…ಅದು ಮೋದಿ ಇರಲಿ, ಅಮಿತ್ ಶಾ ಇರಲಿ, ರಾಹುಲ್ ಗಾಂಧಿಯೇ ಇರಲಿ ಇವರೆಲ್ಲರ ಮಾತುಗಳನ್ನು ಆ ಕ್ಷಣಕ್ಕೆ ವೇದಿಕೆಯಿಂದ ಭಾಷಾಂತರಿಸಿ ಹೇಳುವವರೆಲ್ಲ ಎಡವಟ್ಟು ಮಾಡಿರುವ ಉದಾಹರಣೆಗಳೇ ಹೆಚ್ಚು. ಅಲ್ಲದೇ ಮುಖ್ಯ ಭಾಷಣಕಾರನ ಫ್ಲೋ ಸಹ ತುಂಡಾಗುತ್ತದೆ. ಈಗಿನ ಎಐ ಭಾವನಾತ್ಮಕ ಅಲ್ಲ ಎನಿಸಿದರೂ ಅದು ಈಗಿರುವ, ಅಂದರೆ ಮೋದಿ ಮಾತಾಡಿದ ನಂತರ ಇನ್ಯಾರೋ ಅನುವಾದ ಮಾಡಿ ಹೇಳುವ ಕ್ರಮಕ್ಕಿಂತ ಪರಿಣಾಮಕಾರಿ. ಮತ್ತೆ ಮೊದಲಿನ ಹೊಲೊಗ್ರಾಂ ಉದಾಹರಣೆ ನೆನಪಿಸಿಕೊಳ್ಳುವುದಾದರೆ, ಹಾಗೆಯೇ ದೊಡ್ಡ ಟಿವಿ ಪರದೆ ಹಾಕುವುದಕ್ಕೂ, 3ಡಿ ಆಯಾಮದಲ್ಲಿ ಮೋದಿಯವರನ್ನು ತೋರಿಸುವುದಕ್ಕೂ ಅದು ಉಂಟುಮಾಡುವ ಅನುಭವದಲ್ಲಿರುವ ವ್ಯತ್ಯಾಸದಂತೆ ಎಐ ಸಹ. ಇಲ್ಲಿ ಮಾತನಾಡುವ ವ್ಯಕ್ತಿಯ ಫ್ಲೋ- ಹರಿವಿನ ಧಾಟಿ ತುಂಡರಿಸದೇ ಎದುರಿಗೆ ಇರುವವನನ್ನು ಮುಟ್ಟುತ್ತದೆ.
ಈ ಲೇಖನವನ್ನು ಓದುತ್ತಿರುವ ಹೆಚ್ಚಿನವರಿಗೆ ಇಂಗ್ಲಿಷ್-ಹಿಂದಿ ಎಲ್ಲವೂ ಪರಿಚಿತ ಇದ್ದಿರಬಹುದು. ಮೋದಿ ಮಾತುಗಳನ್ನು ಹಿಂದಿಯಲ್ಲೇ ಕೇಳಿಕೊಂಡು ನಂತರ ಬೇಕಾದರೆ ನಮ್ಮ ಭಾಷೆಯಲ್ಲಿ ಮುಖ್ಯಾಂಶಗಳನ್ನು ಕೇಳಿಕೊಂಡರೆ ಅಥವಾ ಓದಿಕೊಂಡರೆ ಸಾಕಲ್ಲವೇ ಎನಿಸೀತೇನೋ. ಆದರೆ ಕಾರ್ಯಕರ್ತರು ಒಟ್ಟುಹಾಕಿ ತರುವ ಹಳ್ಳಿಗರಿಗೋ ಸ್ಥಳೀಯ ನಿವಾಸಿಗಳಿಗೋ ಎದುರಿಗೆ ಮೋದಿ ಬಾಯಿ ಅಲುಗಾಡಿಸುತ್ತಿರುವಾಗಲೇ ಕನ್ನಡದಲ್ಲೋ, ತೆಲುಗಿನಲ್ಲೋ, ತಮಿಳಿನಲ್ಲೋ ಅನುವಾದ ಕೇಳಿಬಂದರೆ ಅದರ ಪರಿಣಾಮ ಹೆಚ್ಚಿನದೇ ಆಗಿರುತ್ತದೆ. ನಿಮ್ಮ ನಿಮ್ಮ ಮನೆಗಳಲ್ಲಿ ಹಿಂದಿಯ ಟಿವಿ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಬರುತ್ತಿರುವುದನ್ನು ಆಸಕ್ತಿಯಿಂದ ನೋಡುತ್ತಿರುವವರನ್ನು ಗಮನಿಸಿದರೆ ಸ್ಥಳೀಯ ಭಾಷೆಯ ಉಪಯೋಗದ ಪ್ರಭಾವ ಅರ್ಥವಾಗುತ್ತದೆ. ರಾಜಕೀಯವಾಗಿಯೇ ನೋಡುವುದಾದರೆ ಸುಮಾರು 130 ಲೋಕಸಭೆ ಕ್ಷೇತ್ರಗಳನ್ನು ಈ ಮಾದರಿ ಪ್ರಭಾವಿಸಬಲ್ಲದು ಎಂಬ ಅಂದಾಜಿದೆ.
ಈ ಆಟವನ್ನು ತಕ್ಷಣಕ್ಕೆ ಪ್ರತಿಪಕ್ಷಗಳೂ ಆಡಬಹುದಲ್ಲವೇ ಎಂದು ಕೇಳುವಿರಾದರೆ, ಇನ್ನೆರಡು ತಿಂಗಳಲ್ಲಿ ಆ ಕ್ಷಮತೆ ಸಾಧಿಸುವುದು ಇನ್ಯಾರಿಗೇ ಆದರೂ ಕಷ್ಟಸಾಧ್ಯ. ಏಕೆಂದರೆ ಬೃಹತ್ ಭಾಷಾ ಮಾದರಿಯನ್ನು ತರಬೇತುಗೊಳಿಸುವುದಕ್ಕೆ ಸಮಯ ಹಿಡಿಯುತ್ತದೆ. ಭಾಷಿಣಿಯನ್ನೇ ಬಳಸಿಕೊಂಡು ರಾಹುಲ್ ಗಾಂಧಿಯೋ ಅಥವಾ ಇನ್ಯಾರೋ ನೇತಾರ ಈ ಸಂವಹನದ ಆಟದಲ್ಲಿ ಸಮಬಲರಾಗುವುದು ಸಹ ಈ ಚುನಾವಣೆಗೂ ಮೊದಲು ಸಾಧ್ಯವಿಲ್ಲ. ಅದಕ್ಕೆ ಕೆಲವು ಕಾರಣಗಳಿವೆ.
ಭಾಷಿಣಿ ಬಿಜೆಪಿಯದ್ದೇನಲ್ಲ, ಆದರೆ…
2022ರಲ್ಲಿ ಗುಜರಾತಿನ ಡಿಜಿಟಲ್ ಸಪ್ತಾಹದಲ್ಲಿ ನರೇಂದ್ರ ಮೋದಿ ಅವರು ಭಾರತ ಸರ್ಕಾರದ ಭಾಷಿಣಿ ಯೋಜನೆ ಪರಿಚಯಿಸಿದರು. ಭಾರತದ 22 ಅಧಿಕೃತ ಭಾಷೆಗಳಿಗೆ ಈ ಕೃತಕ ಬುದ್ಧಿಮತ್ತೆ ಮಾದರಿ ಭಾಷಾಂತರವನ್ನು ಮಾಡುತ್ತದೆ. ಭಾಷಿಣಿಗೆ ಸಾಮಾನ್ಯ ನಾಗರಿಕರು ಸಹ ಭಾಷಾದಾನ, ಧ್ವನಿ ನೀಡುವಿಕೆಗಳ ಮೂಲಕ ಕೊಡುಗೆ ನೀಡಬಹುದೆಂದು ಮೋದಿ ಆಗಲೇ ಆಹ್ವಾನಿಸಿದ್ದರು. ನಿರ್ದಿಷ್ಟ ಭಾಷೆಯಲ್ಲಿ ಬರೆದು ಅದನ್ನು ಎಐ ಕಲಿಕೆಗೆ ಒಪ್ಪಿಸುವ, ಆ ವೇದಿಕೆಯಲ್ಲಿರುವ ಚಿತ್ರಗಳನ್ನು ಆಯಾ ಭಾಷೆಯಲ್ಲಿ ಲೇಬಲಿಂಗ್ ಮಾಡುವ, ಬೇರೆಯವರು ಸೃಷ್ಟಿಸಿರುವ ವಿಡಿಯೊ-ಆಡಿಯೊ ತುಣುಕುಗಳನ್ನು ಪ್ರಮಾಣೀಕರಿಸುವ ಅವಕಾಶಗಳು ಅಲ್ಲಿದ್ದವು. ಇಲ್ಲಿನ ಮಾಹಿತಿಗಳನ್ನು ಎಐ ಕಲಿಕೆಗೆ ಒಳಪಡಿಸಿ ಸರ್ಕಾರದ ನಾನಾ ಇಲಾಖೆಗಳ ಕೆಲಸಗಳು, ಪ್ರಯೋಜನಗಳು ಮತ್ತದರ ಮಾಹಿತಿಗಳನ್ನು ಆಯಾಯ ಭಾಷೆಗಳಲ್ಲೇ ಬಿತ್ತರಿಸುವಂತೆ ಭಾಷಿಣಿಯನ್ನು ತರಬೇತುಗೊಳಿಸಲಾಗುತ್ತಿದೆ.
ಇವೆಲ್ಲ ಸರ್ಕಾರದ ಸಹಾಯಕ ಅಂಶಗಳು ಹಾಗೂ ಇವನ್ನು ಬಳಸಿ ಬೇರೆಯವರೂ ಮಾಡೆಲ್ ಕಟ್ಟಿಕೊಳ್ಳಬಹುದೆಂಬುದು ನಿಜ. ಆದರೆ ನಿರ್ದಿಷ್ಟವಾಗಿ ಮೋದಿಯವರಿಗೆ ಪ್ರಯೋಜನವಾಗಬಲ್ಲ ಕೆಲವು ತರಬೇತುಗಳು ಭಾಷಿಣಿ ವಿಚಾರದಲ್ಲಾಗಿವೆ. ಉದಾಹರಣೆಗೆ, ಆಕಾಶವಾಣಿಯು ಈವರೆಗೆ ಬಿತ್ತರಿಸಿರುವ ಪ್ರಧಾನಿ ಮೋದಿಯವರ ಮನ್ ಕೀ ಬಾತ್ ಆಡಿಯೊ ಮತ್ತು ಅಕ್ಷರಗಳನ್ನು ಭಾಷಿಣಿಯನ್ನು ತರಬೇತುಗೊಳಿಸಲು ಬಳಸಲಾಗಿದೆ. ಬಹಳ ವರ್ಷಗಳಿಂದ ಈ ಮನ್ ಕೀ ಬಾತ್ ಅವತರಣಿಕೆ ಬೇರೆ ಬೇರೆ ಭಾಷೆಗಳಲ್ಲಿ ಬಿತ್ತರಗೊಳ್ಳುತ್ತಿತ್ತೆಂಬುದು ತಿಳಿದಿರುವ ಅಂಶವೇ. ಹೀಗಾಗಿ ಮೋದಿಯವರ ಮಾತಿನ ಶೈಲಿ, ವಾಕ್ಯರಚನೆ, ನುಡಿಗಟ್ಟುಗಳನ್ನು ಇದು ಹೆಚ್ಚು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲುದೆಂಬುದು ಸ್ಪಷ್ಟ. ಉಳಿದಂತೆ, ಸರ್ಕಾರಿ ಯೋಜನೆಗಳನ್ನು ಜನರಿಗೆ ಅವರವರ ಭಾಷೆಗಳಲ್ಲಿ ಮುಟ್ಟಿಸುವುದೇ ಭಾಷಿಣಿಯ ಮುಖ್ಯ ಉದ್ದೇಶವಾಗಿರುವುದರಿಂದ ಒಟ್ಟಾರೆ ಮೋದಿ ಸರ್ಕಾರದ ಅಭಿವೃದ್ಧಿಗಾಥೆಯ ಪದಪುಂಜಗಳು ಮತ್ತು ವ್ಯಾಖ್ಯಾನಗಳನ್ನು ಈ ಎಐ ಮಾದರಿ ಚೆನ್ನಾಗಿ ಅರೆದು ಕುಡಿದಿರುತ್ತದೆ ಎಂಬುದನ್ನು ಯಾರಾದರೂ ಊಹಿಸಬಹುದು. ಅದಾಗಲೇ ನರೇಂದ್ರಮೋದಿ ಆ್ಯಪ್ ನಲ್ಲಿ ಭಾಷಿಣಿಯನ್ನು ಉಪಯೋಗಿಸಿಕೊಂಡು ಮೋದಿಯವರ ಕೆಲವು ಭಾಷಣಗಳನ್ನು ಎಲ್ಲ ಭಾಷೆಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಇದು ಶೇ.90ರಷ್ಟು ನಿಖರತೆ ಹೊಂದಿದೆ ಎಂಬುದು ಪರಿಣತರ ಮಾತು.
ತಂತ್ರಜ್ಞಾನಕ್ಕೆ ಹೊರತಾದ ಇನ್ನೊಂದಂಶ ಮೋದಿಯವರ ಪಾಲಿಗೆ ಅದಾಗಲೇ ಬ್ರಾಂಡ್ ಒಂದನ್ನು ಕಟ್ಟಿಕೊಟ್ಟಿದೆ. ಅದೆಂದರೆ, ಅವರು ಇತ್ತೀಚಿನ ವರ್ಷಗಳಲ್ಲಿ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಕೆಲವು ವಾಕ್ಯಗಳನ್ನಾಡಿ, ಸ್ಥಳೀಯ ಹೀರೋಗಳನ್ನು ನೆನಪಿಸಿಕೊಂಡು ನಂತರ ಹಿಂದಿಯಲ್ಲಿ ಮಾತು ಮುಂದುವರಿಸುತ್ತಾರೆ. ಅಂದರೆ, ಸ್ಥಳೀಯ ಭಾಷಾ ಪ್ರಯೋಗದ ವಿಚಾರದಲ್ಲಿ ಮೋದಿಯವರು ಅದಾಗಲೇ ಜನರನ್ನು ಒಂದುಮಟ್ಟಿಗೆ ಟ್ಯೂನ್ ಮಾಡಿದ್ದಾರಾದ್ದರಿಂದ, ಇನ್ನುಮುಂದಿನ ಪ್ರಚಾರಗಳಲ್ಲಿ ಅವರ ಮಾತುಗಳನ್ನು ತತ್ ಕ್ಷಣಕ್ಕೆ ಎಐ ಇಡಿಇಡಿಯಾಗಿ ಅನುವಾದಿಸುತ್ತ ಹೋಗುವುದನ್ನು ಸಹಜವಾಗಿ ಸ್ವೀಕರಿಸುವುದಕ್ಕೆ ಅವರು ಜನರ ಮನೋಭೂಮಿಕೆಯನ್ನು ಆಗಲೇ ಸಿದ್ಧಮಾಡಿಬಿಟ್ಟಿದ್ದಾರೆ.
ಈ ಎಲ್ಲ ಕಾರಣದಿಂದ, ಇನ್ಯಾರೋ ನೇತಾರ, ಅವರು ಬಿಜೆಪಿಯವರೇ ಆಗಿದ್ದರೂ, ತತ್‌ಕ್ಷಣದ ಎಐ ಭಾಷಣಾನುವಾದದ ಸಲಕರಣೆಯನ್ನು ಈ ಚುನಾವಣೆಯಲ್ಲಿ ಮೋದಿಯವರಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾರರು.
ಹೆಚ್ಚು-ಕಡಿಮೆ ಫಲಿತಾಂಶ ಬರಲಿರುವ ಜಾಡೇನೆಂಬುದು ಪಕ್ಕಾ ಆಗಿಬಿಟ್ಟಂತಿರುವ 2024ರ ಲೋಕಸಭೆ ಸಮರವು ಎಐ ಉಪಯೋಗದಿಂದ ನೆನಪಿನಲ್ಲುಳಿಯುವಂತೆ ನಿಲ್ಲಬಹುದೇ ಎಂಬುದು ಇನ್ನೂ ಉತ್ತರ ಸಿಗಬೇಕಿರುವ ಪ್ರಶ್ನೆ.
ಇದನ್ನೂ ಓದಿ: Pak Afghan Conflict: ಸಡಿಲವಾಯ್ತು ಆಫ್ಘಾನ್‌ನೊಂದಿಗಿನ ಪಾಕ್ ಸಖ್ಯ, ತಾಲಿಬಾನಿಗಳಿಗೂ ಈಗ ಭಾರತವೇ ಮುಖ್ಯ!