:: ಎಂ.ಎಲ್ ಬಾಬು ರಾಜಕೀಯ ವಿಶ್ಲೇಷಕರು
ನಮ್ಮ ಕಿರಿಯ ನೆರೆಯ ದೇಶವಾದ ಬಾಂಗ್ಲಾದೇಶ (1971ರಲ್ಲಿ ಅಸ್ತಿತ್ವಕ್ಕೆ ಬಂತು) ಈಗ ಚುನಾವಣಾ ಪರ್ವದಲ್ಲಿದೆ. ಅಲ್ಲಿನ ಸಂಸತ್‌ಗೆ ಇದೇ ಜನವರಿ 7ರಂದು ಭಾನುವಾರ ಚುನಾವಣೆ ನಡೆಯಲಿದೆ. ಹಾಗೆ ಗಮನಿಸಿದರೆ ಭಾರತ ಉಪಖಂಡದಲ್ಲಿ ಈ ವರ್ಷದ ಮೊದಲ ಆರು ತಿಂಗಳು ಚುನಾವಣಾ ಪರ್ವವೇ ಆಗಿದೆ. ಏಪ್ರಿಲ್‌ನಲ್ಲಿ ಪಾಕಿಸ್ತಾನದಲ್ಲಿ, ಮೇನಲ್ಲಿ ಪ್ರಾಯಶಃ ಭಾರತದಲ್ಲಿ ಮತ್ತು ಆಗಸ್ಟ್‌ನಲ್ಲಿ ಶ್ರೀಲಂಕಾದಲ್ಲಿ ಈ ಪ್ರಜಾಪ್ರಭುತ್ವದ ಹಬ್ಬ ಜರುಗಲಿದೆ.
ಹಿಂದೊಮ್ಮೆ ಅಮೆರಿಕಾದ ನಿಪುಣ ರಾಜತಂತ್ರಜ್ಞ ಹೆನ್ರಿ ಕಿಸೆಂಜರ್‌ನಿಂದ ʼಬಾಸ್ಕೆಟ್ ಕೇಸ್ʼ ದೇಶವೆಂದು, ಶೀಘ್ರ ಅವಸಾನದತ್ತ ಹೋಗಲಿದೆ ಎಂದು ಮೂದಲಿಸಲ್ಪಟ್ಟಿದ ಈ ಪುಟ್ಟ ದೇಶ ಇಂದು ಪ್ರಪಂಚಾದ್ಯಂತ ಕುತೂಹಲ ಕೆರಳಿಸುವ ಮಟ್ಟಿಗೆ ಬೆಳೆದಿದ್ದೆ ಒಂದು ರೋಚಕ ಚರಿತ್ರೆ. ಕಳೆದ 50 ವರ್ಷಗಳ ಕಾಲದಲ್ಲಿ ಅಧಿಕಾರದಲ್ಲಿದ್ದ ಇಬ್ಬರೂ ಪ್ರಧಾನಿಗಳು ಹತ್ಯೆಯಾಗಿದ್ದು, ಎರಡು ಬಾರಿ ಮಿಲಿಟರಿ ಶಾಸನ ಕಂಡಿದೆ. ಆದರೂ ಅಲ್ಲಿನ ನಾಜೂಕಾದ ಪ್ರಜಾಪ್ರಭುತ್ವ ಇಂದು ಗಟ್ಟಿಯಾಗಿ ಬೇರೂರುತ್ತಿರುವುದು ಸಂತಸದ ಸಂಗತಿ.
ಬಾಂಗ್ಲಾದೇಶದ ಸಂಸತ್ 350 ಸದಸ್ಯರ ಸಭೆ. ಇದರಲ್ಲಿ ಐವತ್ತು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರುವುದು ಅಲ್ಲಿನ ವಿಶೇಷ. ಹಾಲಿ ಜನಸಂಖ್ಯೆಯ ಪ್ರಕಾರ ಆ ದೇಶದ ಜನಸಂಖ್ಯೆ ಪ್ರಮಾಣ ಸುಮಾರು 17 ಕೋಟಿ ಮತ್ತು ಮತದಾರರ ಪ್ರಮಾಣ ಸುಮಾರು 11 ಕೋಟಿ. ಸದ್ಯ ಆಡಳಿತಾರೂಢ ಬಾಂಗ್ಲಾದೇಶ್ ಅವಾಮಿ ಲೀಗ್ ಮತ್ತು ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ, ಎರಡು ಪ್ರಮುಖ ರಾಜಕೀಯ ಪಕ್ಷಗಳು. ಇದಲ್ಲದೆ ಜಮಾತ್ ಎನ್ನುವ ತೀವ್ರ ಬಲಪಂಥೀಯ ಪಕ್ಷವು ಅಸ್ತಿತ್ವದಲ್ಲಿದೆ. ಆದರೆ ಈ ಬಾರಿಯ ಚುನಾವಣೆಯನ್ನು (BNP) ಬಹಿಷ್ಕರಿಸಿದೆ. ಆ ಪಕ್ಷದ ನೇತಾರರಾದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರು ಕಳೆದ ಎರಡು ವರ್ಷದಿಂದ ಗೃಹಬಂಧನದಲ್ಲಿದ್ದಾರೆ (ಭ್ರಷ್ಟಾಚಾರ ಪ್ರಕರಣ ಒಂದರಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ). ಮತ್ತು ಅವರ ಮಗ ಸಹ ಕ್ರಿಮಿನಲ್ ಆರೋಪ ಎದುರಿಸುತ್ತಿರುವುದರಿಂದ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ. ಶೇಖ್ ಹಸೀನಾ ವಾಜಿದ್ ಮತ್ತು ಅವರ ಪಕ್ಷವಾದ ಬಾಂಗ್ಲಾದೇಶ್ ಅವಾಮಿ ಲೀಗ್ (BAL) 2009ರಿಂದ ಆಡಳಿತದಲ್ಲಿದೆ. ಇದು ಅವರ ಅಧಿಕಾರ ಅವಧಿಯ ನಾಲ್ಕನೇ ಚುನಾವಣೆ.
ಶೇಕ್ ಹಸೀನಾ ಎಂಬ ಮುತ್ಸದ್ಧಿ
76 ವರ್ಷದ ಹಿರಿಯ ರಾಜಕಾರಣಿಯಾದ ಶೇಕ್ ಹಸೀನಾ (Sheik Hasina) ಅವರು ಬಾಂಗ್ಲಾದೇಶದ ರಾಷ್ಟ್ರಪಿತ ಎಂದೆ ಸಂಬೋಧಿಸಲ್ಪಡುವ ಶೇಕ್ ಮುಜಿಬುರ್ ರೆಹಮಾನ್ ಅವರ ಪುತ್ರಿ. ಇವರಿಗೂ ಭಾರತಕ್ಕೂ ವಿಶೇಷ ನಂಟಿದೆ. 1975ರಲ್ಲಿ ಅವರ ತಂದೆ ಪ್ರಧಾನಿಯಾಗಿದ್ದಾಗ ಹತ್ಯೆಗೈಯಲಾಗಿತ್ತು ಹಾಗೂ ಇವರು ಸಹ ಹತ್ಯೆಗಾರರ ಹಿಟ್ ಲಿಸ್ಟ್‌ನಲ್ಲಿದ್ದರು. ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರು ಇವರಿಗೆ ಭಾರತದಲ್ಲಿ ನೆಲೆಸಲು ಅವಕಾಶ ನೀಡಿದ್ದರು. 1975ರಿಂದ 1981ರವರೆಗೆ ಅವರು ಭಾರತದ ಆಶ್ರಯ ಪಡೆದಿದ್ದರು. ಅಲ್ಲಿನ ಮಿಲಿಟರಿಶಾಹಿ ಆಡಳಿತವನ್ನು ಕೊನೆಗಾಣಿಸಿ ಪ್ರಜಾಪ್ರಭುತ್ವವನ್ನು ಸ್ಥಾಯಿಗೊಳಿಸುವುದರಲ್ಲಿ ಅವರ ಪಾತ್ರ ಮಹತ್ವದ್ದು. ಇವರ ಆಡಳಿತ ಅವಧಿಯಲ್ಲಿ ಕಳೆದ ಒಂದು ದಶಕದಲ್ಲಿ ಬಾಂಗ್ಲಾದೇಶವು ಸರಾಸರಿ 6.5ರಷ್ಟು ಜಿಡಿಪಿ ಬೆಳವಣಿಗೆ ಹೊಂದಿದೆ ಹಾಗೂ ಪ್ರಪಂಚದ ಎರಡನೇ ದೊಡ್ಡ ಸಿದ್ಧ ಉಡುಪುಗಳ ರಫ್ತು ದೇಶವಾಗಿದೆ.
ಭಾರತ ಉಪಖಂಡದಲ್ಲಿ ಗುರುತಿಸಲಾಗುವ ಸಾಮಾಜಿಕ ಮತ್ತು ಆರ್ಥಿಕ ಅಂಕಿ ಅಂಶಗಳಲ್ಲಿ ಇತರ ದೇಶಗಳಿಂದ ಉತ್ತಮ ಮಟ್ಟದಲ್ಲಿದೆ (ಉದಾಹರಣೆಗೆ ಸರಾಸರಿ ತಲಾ ಆದಾಯ, ಹೆಣ್ಣು ಮಕ್ಕಳ ಉದ್ಯೋಗದಲ್ಲಿ ಪಾಲ್ಗೊಳ್ಳುವಿಕೆ, ಜನಸಂಖ್ಯಾ ಬೆಳವಣಿಗೆಯ ನಿಯಂತ್ರಣ ಇತ್ಯಾದಿ). ಇಲ್ಲಿ ಗಮನಾರ್ಹವಾದ ಅಂಶವೆಂದರೆ ಶೇಕ್ ಹಸೀನಾ ಅವರ ಮೇಲೆ ಇದುವರೆಗೂ 19 ಬಾರಿ ಹತ್ಯೆಯ ಸಂಚು ಅಥವಾ ಹಲ್ಲೆ ನಡೆದಿದೆ. 2006ರಲ್ಲಿ ನಡೆದ ಹತ್ಯೆಯ ಪ್ರಕರಣದಲ್ಲಿ ಅವರು ಒಂದು ಕಿವಿಯ ಶ್ರವಣಶಕ್ತಿಯನ್ನು ಕಳೆದುಕೊಂಡರು.
ವಿಶ್ವದ ಗಮನ ಸೆಳೆದದ್ದು ಹೇಗೆ?
ಬಾಂಗ್ಲಾದೇಶವು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುತ್ತಾ ಬಹುತ್ವ ಸಂಸ್ಕೃತಿಯನ್ನು ಅಪ್ಪಿಕೊಂಡು ಆರ್ಥಿಕ ಬೆಳವಣಿಗೆ ಸಾಧಿಸಿದೆ ಹಾಗೂ ತನ್ನ ನೆರೆಯ ಮತ್ತು ವಿಶ್ವದ ದೈತ್ಯ ರಾಷ್ಟ್ರಗಳಾದ ಚೈನಾ ಮತ್ತು ರಷ್ಯಾದೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಇದರ ಫಲಶ್ರುತಿಯೇ ಚೈನಾ ದೇಶವು ಚಿತ್ತಗಾವ್ ಎಂಬಲ್ಲಿ ಅಂತರ ಜಲ ಸಂಪರ್ಕ ಕಾಲುವೆಯನ್ನು (inland water way tunnel) ಕಟ್ಟಿಕೊಟ್ಟಿದೆ. ಇದು ಅಲ್ಲಿನ ಆಂತರಿಕ ಸಂಚಾರ ಮತ್ತು ವ್ಯಾಪಾರ ಅಭಿವೃದ್ಧಿಗೆ ಸಹಕಾರಿಯಾಗಿದೆ. ರಷ್ಯಾ ತನ್ನ ಅಣು ತಂತ್ರಜ್ಞಾನ ಸಹಕಾರವನ್ನು ಅಣು ವಿದ್ಯುತ್ ಘಟಕಗಳಿಗೆ (Atomic Energy) ರವಾನಿಸಿ ನಿಭಾಯಿಸುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಅಮೆರಿಕಾದ ಕೆಂಗಣ್ಣಿಗೆ ಗುರಿಯಾಗುವುದು ಸಹಜವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕ ಈ ಚುನಾವಣೆಯನ್ನು ಪ್ರಜಾಪ್ರಭುತ್ವ ವಿರೋಧಿ ಎಂಬಂತೆ ಪ್ರಚುತಪಡಿಸುತ್ತಿದೆ. ಆಗಸ್ಟ್ 23ರಿಂದ ಬಾಂಗ್ಲಾದೇಶದ ರಾಜತಂತ್ರಜ್ಞರಿಗೆ ತಾನು ನೀಡುವ ವಿಶೇಷ ವೀಸಾವನ್ನು ನಿರ್ಬಂಧಿಸಿದೆ. ಹಾಗಾಗಿ ಈ ಚುನಾವಣೆಯು ವಿಶ್ವದ ಎಲ್ಲಾ ದೇಶಗಳ ಗಮನ ಸೆಳೆದಿದೆ.
ಸಾಂವಿಧಾನಿಕ ವ್ಯವಸ್ಥೆ
1971ರಲ್ಲಿ ಪೂರ್ವ ಪಾಕಿಸ್ತಾನವು ಬೇರ್ಪಟ್ಟು ಬಾಂಗ್ಲಾದೇಶವಾದಾಗ ಹೊಸ ಸಂವಿಧಾನವನ್ನು ಅಳವಡಿಸಿಕೊಂಡಿತು. ಅದು ತನ್ನನ್ನು ಜಾತ್ಯತೀತ (Secular) ದೇಶವೆಂದು ಘೋಷಿಸಿಕೊಂಡಿತು. 1975ರ ಮುಜೀಬ್ ರೆಹಮಾನ್ ಹತ್ಯೆಯಾದ ನಂತರ ಬಂದಂತ BNP ಪಾರ್ಟಿಯು ದೇಶವನ್ನು ಇಸ್ಲಾಮಿಕ್ ದೇಶವೆಂದು ಘೋಷಿಸಿತು. ಇದನ್ನು 2009ರಲ್ಲಿ ಅಧಿಕಾರಕ್ಕೆ ಬಂದ ಶೇಕ್ ಹಸೀನಾ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತು ಮತ್ತು 2010ರಲ್ಲಿ ದೇಶವನ್ನು ಮತ್ತೊಮ್ಮೆ ಜಾತ್ಯತೀತವೆಂದು ಘೋಷಿಸಲಾಯಿತು.
ಜೋಗಿಂದರ್ ಮಂಡಲ್ ಎಂಬ ದೈತ್ಯ ದಲಿತ ಪ್ರತಿಭೆ
ಕಾಕಾತಾಳೀಯವೆಂಬಂತೆ ಭಾರತ ಮತ್ತು ಪಾಕಿಸ್ತಾನ ದೇಶದ ಆರಂಭದಲ್ಲಿ ಹೊಂದಿದ್ದ ಕಾನೂನು ಮಂತ್ರಿಗಳು ದಲಿತರಾಗಿದ್ದರು ಮತ್ತು ಎರಡು ದೇಶಗಳ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ನೆನೆಯುವುದು ಅಗತ್ಯ. ಭಾರತಕ್ಕೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಕೊಡುಗೆಯಂತೆ ಜೋಗೀಂದರ್ ಮಂಡಲ್ ಅಂದಿನ ಪಾಕಿಸ್ತಾನ (ಪೂರ್ವ ಮತ್ತು ಪಶ್ಚಿಮ) ಸಂವಿಧಾನದ ರಚನೆಗೆ ಮಹತ್ತರವಾದ ಕೊಡುಗೆ ನೀಡಿದರು. ಮಂಡಲ್ ಅವರು ಇಂದಿನ ಬಾಂಗ್ಲಾದೇಶದದಿಂದ ಬಂದವರು ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಹವರ್ತಿಗಳಾಗಿದ್ದರು. ಅಂದಿನ ಪೂರ್ವ ಪಾಕಿಸ್ತಾನದಲ್ಲಿ ಇಂದಿನ ಬಾಂಗ್ಲಾದೇಶದಲ್ಲಿ ಹೆಚ್ಚಿನ ಹಿಂದುಗಳು ಉಳಿದುಕೊಳ್ಳಲು ಅಥವಾ ದೇಶದ ವಿಭಜನೆಯ ಸಮಯದಲ್ಲಿ ಭಾರತಕ್ಕೆ ಹೋಗುವುದನ್ನು ತಡೆದರು. ಸ್ವಾತಂತ್ರ್ಯದ ಆರಂಭದಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಹಿಂದುಗಳ ಸಂಖ್ಯೆ ಒಟ್ಟು ಜನಸಂಖ್ಯೆಯ 34% ಇತ್ತು. ಕಾಲಕ್ರಮೇಣ ಇದು ಕಡಿಮೆಯಾಗಿ ಈಗ ಸುಮಾರು 9% ಅಷ್ಟು ಇದೆ. ಅಲ್ಲೇ ಉಳಿದ ಹಿಂದುಗಳು ಹೆಚ್ಚಿನವರು ದಲಿತರಾಗಿದ್ದು ಈಗ ಆ ದೇಶದ ಆರ್ಥಿಕ ಮತ್ತು ವಿವಿಧ ರಂಗಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಭಾರತದೊಂದಿಗೆ ಭಾಂದವ್ಯ
ಶೇಕ್ ಹಸೀನಾ ಸರ್ಕಾರವು ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ ಮತ್ತು ಅಭಿವೃದ್ಧಿಗೆ ಪೂರಕವಾಗಿದೆ. ಇದಕ್ಕೆ ಅವರ ಸರ್ಕಾರ ಅನುಸರಿಸುತ್ತಿರುವ ಜಾತ್ಯತೀತ ಮನೋಭಾವ ಹಾಗೂ ಭಾರತ ದೇಶವು ಅವರಿಗೆ ಸಂಕಷ್ಟದ ಸಮಯದಲ್ಲಿ ನೀಡಿದ ಸಹಾಯದ ಕೊಡುಗೆ ಸ್ಮರಣಾರ್ಹ. ಸಾರ್ಕ್ ದೇಶಗಳ ಒಕ್ಕೂಟದ ಸದಸ್ಯ ರಾಷ್ಟ್ರವಾಗಿರುವ ಬಾಂಗ್ಲಾದೇಶ ನಮ್ಮ ದೇಶದ ಪ್ರಿಫರೆನ್ಶಿಯಲ್ ಟ್ರೇಡ್ ಪಾರ್ಟ್ನರ್ ಆಗಿದೆ. ಬಂಗಾಳ ಕೊಲ್ಲಿಯಲ್ಲಿ ಭಾರತವು ಪಾರುಪತ್ಯ ಮತ್ತು ಮೇಲುಗೈ ಸಾಧಿಸಲು ಬಾಂಗ್ಲಾದೇಶದೊಳಗಿನ ಬಾಂಧವ್ಯ ಅತಿಮುಖ್ಯವಾದದು. ಆ ದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಯ ನೈತಿಕ ಜವಾಬ್ದಾರಿ ಇರುವ ಭಾರತ ಸರ್ಕಾರವು ಈ ಸಂಬಂಧವನ್ನು ಗಟ್ಟಿಗೊಳಿಸಲು ಆಶಿಸುತ್ತಿದೆ.
ಮುನ್ನೋಟ
ಈ ಚುನಾವಣಾ ಫಲಿತಾಂಶ ಮುಂದಿನ ದಶಕಕ್ಕೂ ತನ್ನ ಪ್ರಭಾವವನ್ನು ಬೀರಲಿದೆ. ಶೇಕ್ ಹಸೀನಾ ಅವರ ಹೆಚ್ಚುತ್ತಿರುವ ವಯಸ್ಸು ಮತ್ತು ಕುಂದುತ್ತಿರುವ ಆರೋಗ್ಯ ಅವರ ಮುಂದಿನ ಉತ್ತರಾಧಿಕಾರಿಯನ್ನು ಆಯ್ಕೆಗೊಳಿಸುವಲ್ಲಿ ಈ ಚುನಾವಣೆ ಪ್ರಮುಖ ಪಾತ್ರ ವಹಿಸಲಿದೆ. ಸದ್ಯದ ಪರಿಸ್ಥಿಯಲ್ಲಿ ಸುಭದ್ರ ಮತ್ತು ಉತ್ತಮ ಭಾಂದವ್ಯದ ನೆರೆ ದೇಶದ ಅಗತ್ಯ ಭಾರತಕ್ಕೂ ಇದೆ.
ಇದನ್ನೂ ಓದಿ: New Year 2024: ಇದು ಚುನಾವಣಾ ವರ್ಷ; ಮೋದಿ, ಬೈಡೆನ್‌ಗೆ ಸಿಗುತ್ತಾ ಮತ್ತೆ ಪವರ್?