Site icon Vistara News

Free Bus ಅಭಿಮತ: ʼನಾಲ್ಕು ಗೋಡೆ ಒಳಗೆ ಇರೋಳಿಗೆ…ʼ ಅನ್ನುವ ಮಾತು ಮತ್ತು ಫ್ರೀ ಬಸ್ ಪಾಸ್

free pass for woman in bus

:: ಕುಸುಮಾ ಆಯರಹಳ್ಳಿ

“ನಿಂಗೇನ್ ಗೊತ್ತಾದ್ದು? ನಾಕ್ ಗ್ವಾಡ ಮದ್ಯದಲ್ ಕೂತಿರೌಳಗ?” ಇದು ಸುಮಾರು ವರ್ಷಗಳಿಂದ ನಾನು ಕೇಳಿರುವ, ಕೇಳುತ್ತಲೇ ಇರುವ ಮಾತು. ನಮ್ಮಪ್ಪ ನಮ್ಮಮ್ಮನಿಗೆ ಯಾವಾಗಲೂ ಹೇಳುವ ಮಾತು. ಮತ್ತು ನನ್ನ ಹಳ್ಳಿಯ, ಸುತ್ತಲ ಹಳ್ಳಿಗಳ, ಬಂಧುಗಳ ಅನೇಕ ಗಂಡಸರ ಬಾಯಲ್ಲಿ ಅನೇಕ ವರ್ಷಗಳಿಂದ ಕೇಳುತ್ತಲೇ ಇರುವ ಮಾತು.

ಆಗ ರೇಷ್ಮೆ ನಮ್ಮ ಮುಖ್ಯ ಬೆಳೆ. ಅದಕ್ಕೆ ವ್ಯಯಿಸುತ್ತಿದ್ದ ಶ್ರಮ ಅಷ್ಟಿಷ್ಟಲ್ಲ. ಇಡೀ ದಿನ ಶ್ರಮವೋ ಶ್ರಮ. ಕೊನೆಗೂ ಹುಳಗಳು ಹಣ್ಣಾಗಿ, ಗೂಡಾಗಿ ರೇಷ್ಮೆ ಮಾರುಕಟ್ಟೆಗೆ ಹೊತ್ತುಕೊಂಡು ಹೋಗಿ ಮರಳುವಾಗ ಅಪ್ಪ, ತುದಿಗಾಲಲ್ಲಿ ನಿಂತು ಕೆಜಿಗೆ ಎಷ್ಟಿರಬಹುದು ಅಂತ ಕಾಯುತ್ತಿದ್ದಳು ಅಮ್ಮ. ನಮ್ಮಪ್ಪ ಆರುಕಾಸಿನ ಪದಾರ್ಥವನ್ನು ಮೂರುಕಾಸಿಗೆ ಕೊಟ್ಟು ಮೂರ್ಖತನ ಮೆರೆದುಬರುತ್ತಿದ್ದರು. ನಮ್ಮದೇ ಊರಿನ, ಬೀದಿಯ ಬೇರೆಯವರು ಹೆಚ್ಚಿನ ಬೆಲೆಗೆ ಮಾರಿಬಂದ ಉದಾಹರಣೆ ಹೇಳಿದರೆ “ಗೊತ್ತಾ ನಿನಗ? ತೂಕ ಇರಲಿಲ್ಲ. ಎಲ್ಲೆಲ್ಲಿಂದಲೋ ಬಂದುಬಿಟ್ಟಿತ್ತು ರಾಶಿಗಟ್ಟಲೆ ಗೂಡು, ತಗೊಳೋವ್ರೇ ಗತಿ ಇಲ್ಲ. ಗುಡ್ಡೆ ಹಿಡದದ ಮಾರ್ಕೆಟ್ಲಿ, ನಿನಗ್ ಚಿನ್ನವೇ ಇರಬೋದು ನಿನ್ನ ಗೂಡು, ಮಾರ್ಕೆಟ್ಟಲ್ಲಿ ಕಾಲಕಸ…ʼʼ ಅಂತೇನೇನೋ ಹೇಳಿ, ಕೊನೆಗೆ “ನಿಂಗೇನ್ ಗೊತ್ತು ನಾಕ್ ಗ್ವಾಡ ಮಧ್ಯದಲ್ ಕೂತಿರೌಳಗ?” ಅಂತಲೇ ಮಾತು ಮುಗಿಸುತ್ತಿದ್ದರು. ಮಳೆ ಆಶ್ರಯದಲ್ಲಿ ನಾವು ಬೆಳೆಯುತ್ತಿದ್ದ ರಾಗಿ, ಹೆಸರುಕಾಳು, ನೆಲಗಡಲೆ ಎಲ್ಲದರ ಗತಿಯೂ ಇದೇ. ಮತ್ತು ಕೊನೆಯ ಮಾತು ಅದೇ “ನಿಂಗೇನ್ ಗೊತ್ತು…?”

ಹಳೆಕಾಲದ್ದು ಮಾತ್ರವಲ್ಲ, ನಿನ್ನೆ ಮೊನ್ನೆಯ ಮಾತೂ ಇದೇ. ನಾವು ಬೆಳೆದ ಮಾವನ್ನು ಯಾವನೋ ತಲೆಮಾಸಿದ ವ್ಯಾಪಾರಗಾರನಿಗೆ ಕೆಜಿಗೆ ಇಪ್ಪತ್ರೂಪಾಯಿಗೆ ಕೊಟ್ಟುಬಿಡುತ್ತಿದ್ದರು. ಕೇಳಿದರೆ ಮತ್ತದೇ ಉತ್ತರ. “ಗೊತ್ತಾ ನಿನಗ? ಮಾರ್ಕೆಟ್ಟಲ್ಲಿ ಮಾವು ಗುಡ್ಡೆಹಾಕದ. ತಮಿಳುನಾಡಿಂದ ಟನ್ಗಟ್ಲೆ ಬಂದು ಕೊಳಿತಾವ. ಹತ್ ರೂಪಾಯ್ಗೂ ಕೇಳೌರಿಲ್ಲ. ನಿನಗೇನ್ ಗೊತ್ತು. ನಾಕ್ ಗ್ವಾಡ ಮದ್ಯದಲ್ ಕೂತಿರೌಳಗ?”

ಅದೇನೂ ಸುಳ್ಳೂ ಅಲ್ಲ, ಮದುವೆಗೆ, ಸಾವಿಗೆ, ನಾಮಕರಣ, ತಿಥಿ, ಗೃಹಪ್ರವೇಶ, ಜಾತ್ರೆಗಳಿಗೆ ಎಲ್ಲರ ಜೊತೆ ಹೋಗಿ ಕಾರ್ಯಕ್ರಮ ಮುಗಿಸಿ ಬರೋದು ಬಿಟ್ಟರೆ ಬೇರೆ ವ್ಯಾವಹಾರಿಕ ಕಾರಣಗಳಿಗಾಗಿ ನಮ್ಮ ಹಳ್ಳಿಗಳ ಹೆಣ್ಮಕ್ಕಳು ಕಾಲು ಹೊರಗಿಟ್ಟಿದ್ದಿಲ್ಲ. ಕೆಲವರ್ಷಗಳಿಂದ ಸ್ತ್ರೀಶಕ್ತಿ ಸಂಘ ಬಂದು, ಬ್ಯಾಂಕಿನ ವ್ಯವಹಾರ ಮಾಡಿಸುತ್ತಿದೆ. ಅದರ ಹೊರತಾಗಿ ಲಕ್ಷಾಂತರ ಹೆಣ್ಮಕ್ಕಳು ಹೊರಜಗತ್ತಿಗೆ ಬಾಗಿಲು ತೆರೆದವರೇ ಅಲ್ಲ. ತಮ್ಮ ಆಯುಷ್ಯದ 90% ಸಮಯವನ್ನು ಒಂದೇ ಊರು, ಒಂದೇ ಬೀದಿ, ಮನೆಯನ್ನು ದಾಟದೇ ಕಳೆದ, ಕಳೆಯುತ್ತಿರುವ ಹೆಣ್ಮಕ್ಕಳ ಸಾವಿರ ಸಾವಿರ ಉದಾಹರಣೆಗಳಿವೆ ಈಗಲೂ.

ನಮ್ಮನೆಯಲ್ಲಿ ಪರಿಸ್ಥಿತಿ ಬದಲಾಗಿದೆ. ಈಗ ನಾನೋ ತಂಗಿಯೋ ಹಾಪ್ಕಾಮ್ಸ್ ನಲ್ಲಿ ರೇಟು ವಿಚಾರಿಸುತ್ತೇವೆ, ವಾಟ್ಸಪ್ ಮೂಲಕವೇ, ತೋಟದ ಗೇಟೇ ದಾಟದೇ ಜನರೇ ಬಂದು ಕೊಳ್ಳುವ ಸಾಧ್ಯತೆಯನ್ನೂ ತೋರಿಸಿದ್ದೇವೆ. ಬೆಳೆದದ್ದನ್ನು ಮಾರಲು ಅವರಿಗಿಂತಲೂ ನಮಗೆ ಭಿನ್ನ, ಹೊಸ ಮಾರ್ಗಗಳು ಗೊತ್ತಿವೆ. ಹಾಗಾಗಿ ನಮ್ಮಪ್ಪ ನಮ್ಮಮ್ಮನಿಗೆ ಕಟ್ಟಿದ ಕತೆಗಳನ್ನು ನಮಗೆ ಕಟ್ಟಲಾಗುವುದಿಲ್ಲ. “ನಾಕ್ ಗ್ವಾಡ ಒಳಗ್ ಕೂತಿರೌರ್ಗೇನ್ ಗೊತ್ತು?” ನಮಗೆ ಅಂತ ಹೇಳುವ ಹಾಗೇ ಇಲ್ಲ. ನಾವು ನಾಕು ಗ್ವಾಡೆ ಮಧ್ಯದಲ್ ಕುಂತವರಲ್ಲ!

ಸುಮ್ಮನೇ ಒಂದಷ್ಟು ವಿಡಿಯೋಗಳನ್ನು ನೋಡುತ್ತಿದ್ದೇನೆ. ಉಚಿತ ಯೋಜನೆಗಳ ನಂತರದ್ದು. ಈ ಯೋಜನೆಗಳನ್ನು ಎಲ್ಲಿಂದ ದುಡ್ಡು ತಂದು ಮಾಡ್ತಾರೆ? ಬೇಕಿತ್ತಾ ಇದು? ದಿವಾಳಿ ಮಾಡ್ತಾರೆ ರಾಜ್ಯಾನೆಲ್ಲ ಅಷ್ಟೆ. ಶಿಕ್ಷಣ ಮತ್ತು ಆರೋಗ್ಯ ಎರಡನ್ನು ಸಂಪೂರ್ಣ ಉಚಿತ ಮಾಡಿಬಿಟ್ಟರೆ ಅದಕ್ಕಿಂತ ಅತ್ಯುತ್ತಮ ಕೊಡುಗೆ ಇನ್ಯಾವುದೂ ಇಲ್ಲ. ಹೀಗೆ ವಾದಗಳು, ಆಕ್ಷೇಪಗಳು ಮುಂದುವರೆದಿವೆ. ಅವುಗಳಲ್ಲಿ ನಿಜವಾದ ಕಾಳಜಿಯೂ ಇದ್ದೀತು. ಸಹಜ ಆತಂಕವೂ. ಈ ಪ್ರಶ್ನೆಗಳಿಗೆಲ್ಲ ಸರ್ಕಾರ ಮತ್ತು ಆರ್ಥಿಕ ತಜ್ಞರು ಉತ್ತರ ಕೊಡಬೇಕು. ಆದರೆ ಹೆಚ್ಚಿನ ಚರ್ಚೆಯಾಗುತ್ತಿರುವುದು, ಅದರಲ್ಲೂ ಹಳ್ಳಿಗಳಲ್ಲಿ ಚರ್ಚೆಯಾಗುತ್ತಿರುವುದು ಹೆಣ್ಮಕ್ಕಳಿಗೆ ಬಸ್ ಪ್ರಯಾಣ ಉಚಿತ (Free bus pass for women) ಮಾಡಿರುವ ಬಗ್ಗೆ!

ಮೊದಲ ದಿನವೇ ಒಬ್ಬಾತ ಹೇಳಿದ “ಬುದ್ದಿ ಇದಿಯೇನ್ರೀ ಸಿದ್ರಾಮಯ್ಯಾರೇ, ಡಿಕೆ ಶಿವಕುಮಾರ್ ಅವ್ರೇ…ಇನ್ನು ಎಂಗಸ್ಗಳೆಲ್ಲ ತಿರಗಕ್ ಸುರುವಾಯ್ತರೆ. ನಿಮ್ ಎಂಗಸ್ರೂ ತಿರಗಕ್ ಸುರುವಾಯ್ತರೆ ನೋಡ್ತಾ ಇರಿ” ಅಂದ. ಹ ಹ್ಹ ಪಾಪ, ಸಿಎಂ ಹೆಂಡತಿ ಬಗ್ಗೆಯೂ ಚಿಂತೆ ಅವನಿಗೆ. ಇನ್ನೊಬ್ಬ ವ್ಯಕ್ತಿ ಅನ್ನುತ್ತಿದ್ದ : “ಈ ಸರಕಾರದವ್ರು ಮಾಡಿರಾ ಕೆಲಸಕ್ಕ ನಮ್ ಎಂಡ್ತೀರೆಲ್ಲ ನಮ್ ಬುಟ್ಟೋಯ್ತರೆ. ಗಂಡನ ಜೊತೆ ಜಗಳ ಆಡಕಂಡು ಬಸ್ಸತ್ಕಂಡು ಓಡೋಯ್ತರೆ” ಮತ್ತೊಬ್ಬ ಅನ್ನುತ್ತಿದ್ದ “ಅಡಗೆ ಪಡಗೆ ಏನೂ ಮಾಡಲ್ಲ ಇನ್ನು ಎಂಗಸ್ಗಳು. ಫ್ರೀ ಬಸ್ಸು, ಕೈಗೆರಡ್ ಸಾವ್ರ ಕೊಟ್ರೆ, ಹೋಟ್ಲು ಪಿಚ್ಚರು ಅನ್ಕಂಡ್ ಓಯ್ತರೆ. ಇಂದಿರಾ ಕ್ಯಾಂಟೀನ್ಲಿ ಊಟ ಮಾಡ್ಕಂಡು ಸೋಕಿ ಮಾಡ್ಕಂಡ್ ಬತ್ತರೆ” “ಇನ್ನೇನಿದ್ರೂ ಎಂಗಸ್ಗಳ್ನೆಲ್ಲಾ ಬಸ್ಡಾಂಡ್ಗಳಲ್ಲೆ ಹುಡುಕಬೇಕು ಅಷ್ಟಿಯೇ. ಹಿಡಿತರ ಇನ್ನು ಆ ಊರು ಈ ಊರು ಅನ್ಕಂಡು. ಹಟ್ಟಿನೇ ಸೇರದಿಲ್ಲ” ಉತ್ಪ್ರೇಕ್ಷೆಯಲ್ಲ. ಈ ಎಲ್ಲ ಮಾತುಗಳ ವಿಡಿಯೋಗಳಿವೆ ನಮ್ಮಲ್ಲಿ!

ಅಬ್ಬಬ್ಬಾ… ಹೆಂಗಸರ ಬಸ್ ಪ್ರಯಾಣ ಉಚಿತ ಆದಕೂಡಲೇ ಇನ್ನು ಭೂಕಂಪಕ್ಕೂ ಮಿಗಿಲಾದ ಬಹುದೊಡ್ಡ ಅನಾಹುತವೇ ಸಂಭವಿಸಲಿದೆ. ಸಾವಿರಗಟ್ಟಲೆ ಸಂಸಾರಗಳು ಮುರಿದು ಬೀಳಲಿವೆ, ಹೆಂಗಸರು ಮನೆ ಬಿಟ್ಟು ಊರೂರು ಸುತ್ತುತ್ತಾ ಇದ್ದುಬಿಡುತ್ತಾರೆ ಅಂತೆಲ್ಲ ಲೆಕ್ಕ ಹಾಕುತ್ತಿರುವ, ರೋಷದಿಂದ ಪ್ರತಿಕ್ರಿಯಿಸುತ್ತಿರುವ , ಏನೆಲ್ಲಾ ಲೆಕ್ಕ ಹಾಕುತ್ತಿರುವ, ಚೇಳು ಕುಟುಕಿದಂಗೆ ಆಡುತ್ತಿರುವ ಗಂಡಸರ ಒಳಗಿರುವ ನಿಜವಾದ ಭಾವನೆ ಅಂದರೆ “ಅಳುಕು”! ಇವರು ಲೋಕ ಕಂಡುಕೊಂಡುಬಿಟ್ಟರೆ “ನಿನಗೇನ್ ಗೊತ್ತು ನಾಕ್ ಗ್ವಾಡ ಒಳಗ್ ಕೂತಿರೌಳಗ?” ಅಂತ ಹೇಳಿ ದಬಾಯಿಸುವ, ಆಳುವ ಚಾನ್ಸು ಹೋಗಿಬಿಟ್ಟರೆ? ತನ್ನ ಹೊರಗ್ಯಾನಗೆಷ್ಟೆಂಬುದರ ನಿಜಾಯಿತಿ ಅವಳಿಗೂ ಗೊತ್ತಾಗಿಹೋದರೆ? ಅರ್ಥಾತ್, ಬಾಯಿಮುಚ್ಚಿಸಿ ಕೂರಿಸುವ, ಆಳುವ, ಅಧಿಕಾರ ಚಲಾಯಿಸುವ, ಹೊರಪ್ರಪಂಚದ ಗ್ಯಾನವಿಲ್ಲ ಅಂತ ಹೀಯಾಳಿಸುವ, ಗಂಡು ಮೇಲರಿಮೆಯಿಂದ, ಗಂಡು ಅಹಂನಿಂದ ಮೆರೆಯುವ ಅವಕಾಶವೆಲ್ಲ ತಪ್ಪಿಹೋದರೆ? ಅದಕ್ಕಾಗಿ ಈ ಆಕ್ರೋಶ.

ಸುಮ್ಮನೇ ಗಮನಿಸಿ, ರಾಜಕಾರಣ ಅನ್ನತಕ್ಕಂತದ್ದೂ ಸೇರಿ, ಹೊರವ್ಯವಸ್ಥೆಯ ವಸ್ತು, ವಿಷಯಗಳೆಲ್ಲ ನನ್ನವು, ನಾಕು ಗೋಡೆಯ ಒಳವ್ಯವಹಾರ ನಿನ್ನದು ಎಂಬ ಸಿದ್ಧಸೂತ್ರ ಮೆದುಳೊಳಗೆ ಸಾಫ್ಟ್ವೇರ್ ಪ್ರೋಗ್ರಾಮಿನಂತೆ ಕೂತು ನಮ್ಮ ಸಮಾಜದ ಗಂಡು ಹೆಣ್ಣುಗಳೆರಡನ್ನೂ ಆಡಿಸುತ್ತಿದೆ. ಮನೆಗಳಲ್ಲಿ ಧಾರಾವಾಹಿ ಹೆಂಗಸರದು, ನ್ಯೂಸ್ ಚಾನೆಲು ಗಂಡಸರದು ಅನ್ನುವ ವಿಭಾಗೀಕರಣದ ಮಾನಸಿಕತೆಗೆ ಒಗ್ಗಿಹೋಗಿರುವ ಮನೆಗಳ ಲೆಕ್ಕವುಂಟೇ?

ಹೌದಪ್ಪಾ, ಹಿಂದಾದರೆ ನಮ್ಮ ಬದುಕು ಬೇರೆಯಾಗಿತ್ತು. ನಾಗರಿಕತೆಯ ಚೂರು ಹಿಂದೆ ಹೋದರೆ ಕಾಡಲ್ಲಿ, ಕೃಷಿಕರಾಗಿ ಬದುಕುತ್ತಿದ್ದೆವು. ಆಗ ದೈಹಿಕವಾಗಿ ಶಕ್ತಿಯುತನಾದ ಗಂಡು ಸಹಜವಾಗಿ ದುಡಿಯುತ್ತಿದ್ದ, ಉಳುಮೆ ಮಾಡುತ್ತಿದ್ದ. ಅದಕ್ಕೂ ಸಹಕಾರ ಕೊಟ್ಟುಕೊಂಡು ಹೆಣ್ಣು ಮನೆಯಲ್ಲಿ ಆಹಾರ ಬೇಯಿಸುತ್ತಿದ್ದಳು. ಈಗೆಲ್ಲಿದೆ ಆ ಪರಿಸ್ಥಿತಿ? ನಾಕು ಮನೆಯ ಹಳ್ಳಿಯಲ್ಲೂ ಫೋನು, ಫ್ಯಾನು, ಟಿವಿ ಎಲ್ಲವೂ ಬೇಸಿಕ್ ಈಗ. ಕಟ್ಟಡ ಕಟ್ಟುವ ಕೆಲಸಕ್ಕೆ ಇಬ್ಬರೂ ಹೋಗುತ್ತಾರೆ. ರಾತ್ರಿ ಬಂದು ಬೇಯಿಸೋಳು ಹೆಣ್ಣು. ಮಲಗಿ ಟಿವಿ ನೋಡೋನು ಗಂಡು. ಇಂತದ್ದು ಗಂಡು ಮಾಡಬೇಕು, ಇಂತದ್ದು ಹೆಣ್ಣು ಮಾಡಬೇಕು ಇಬ್ಬರಿಗೂ ಇರುವ ಬೆರಳುಗಳು ಹತ್ತೇ ಆದರೂ ಆ ಕೈಗಳು ಮಾಡುವ ಕೆಲಸ ಕೈ ಮಾಡಿದರೆ ಅವಮಾನಕರ. ಅವನು ಆಳಬೇಕು, ಇವಳು ಅಡಿಯಾಳಾಗಬೇಕು. ಹಾಗೆ ಆಳಲಿಕ್ಕೆ ಇರುವ ಮೂಲ ಸೂತ್ರ ಇದೇ… ತಾನು ಹೊರಗೆ ಹೋಗುವವನು. ನೀನು ಒಳಗೆ ಇರುವವಳು! ಈಗ ಫ್ರೀ ಬಸ್ಸತ್ತಿ ಇವಳೂ ಹೊರಹೋಗಿಬಿಟ್ರೆ ಕತೆ ಏನು?

ಹೋಯ್ ಗಂಡಸರೇ, ಅಷ್ಟೆಲ್ಲ ಹೆದರುವ ಅಗತ್ಯವಿಲ್ಲ ಮಾರಾಯರೆ ನೀವು. ಗಂಡಸು ಮಕ್ಕಳನ್ನು ಬಿಟ್ಟು ನಿರಾಳವಾಗಿ ಹೊರಗಿನ ವ್ಯವಹಾರಗಳನ್ನು ಪೂರ್ಣ ಮನಸಿಂದ ಮಾಡುತ್ತಾ ಇದ್ದುಬಿಡುವಂತೆ ಹೆಣ್ಣಿನ ಕೈಲಿ ಇರಲಾಗದು. ಮಕ್ಕಳೆಂದರೆ ಹೆಣ್ಮಕ್ಕಳ ಬೆನ್ನಹುರಿಗಂಟಿದ ಹುಕ್ಕು. ಎಲ್ಲಿ ಹೋದರೂ, ಏನು ಮಾಡುತ್ತಿದ್ದರೂ ಎಳೆಯುತ್ತಾ ಇರುತ್ತದೆ. ಮನೆ ಮಕ್ಕಳನ್ನೂ, ಮನೆಮಕ್ಕಳಂತಾ ದನಕರಗಳನ್ನೂ, ಜವಾಬ್ದಾರಿಗಳನ್ನೂ ಬಿಟ್ಟು ಫ್ರೀ ಬಸ್ಸು ಸಿಕ್ತು ಅಂತ ಎಲ್ಲಿ ಹೋಗ್ತಾರವರು? ಹೋದಾರು ಎಂದೋ ಅಮ್ಮನ ಮನೆಗೋ, ಅಕ್ಕ, ಅಣ್ಣನ ಮನೆಗೋ, ಎಲ್ಲಿಗೋ ಯಾವಾಗಾದರೊಮ್ಮೆ. ದಿನದಿನವೂ ಅಲ್ಲ. ಫ್ರೀ ಬಸ್ಸು ಕೊಟ್ಟರೂ ಓಡಾಡಲು ಬೆನ್ನ ಹುಕ್ಕು ಬಿಡಬೇಕಲ್ಲ? ಅದ್ಯಾವನೋ ಅಂದನಲ್ಲಾ… ಜಗಳ ಆಡ್ತಿದ್ದಂಗೇ ಒಂಟೋಯ್ತಾ ಇರ್ತಳೆ ಫ್ರೀ ಬಸ್ಸತ್ಕಂಡು ಅಂತ?…ಫ್ರೀ ಬಸ್ಸು ಹಾಗೆ ಉಪಯೋಗವಾದರೆ ಒಳ್ಳೇದೇ. ಅಂತೋನ ಕೈಲಿ ಬಡಿಸಿಕೊಂಡಿರೋದಕ್ಕಿಂತ ಅದೇ ವಾಸಿ.

ಇದನ್ನೂ ಓದಿ: ಸಕಾಲಿಕ: ಗುತ್ತಿಗೆ ಕಾರ್ಮಿಕರೆಂಬ ಬಾವಲಿಗಳ ಬವಣೆ ನೀಗುವುದು ಹೇಗೆ?

ಹಾಗಾಗಿ ದಿನದಿನವೂ ಯಾರೂ ಊರು ಸುತ್ತಲು ಹೋಗಲ್ಲ ಮತ್ತು ನೀವಂದುಕೊಂಡಂತೆ ಉಚಿತ ಬಸ್ ನಿಮ್ಮ ಗಂಡಾಳ್ವಿಕೆಗೆ ಕುತ್ತು ತರುವುದೂ ಇಲ್ಲ. ಯಾಕೆಂದರೆ ತಲೆಮಾರುಗಳಿಂದ ಫೀಡ್ ಆಗಿರುವ ಸಾಫ್ಟ್‌ವೇರ್ ಹೆಣ್ಮಕ್ಕಳ ಮೆದುಳಿನಲ್ಲಿಯೂ ಇದೆ. ಹೆಣ್ಮಕ್ಕಳು ಉಚಿತದ ಕಾರಣಕ್ಕೆ ಹೊರಹೋದರೂ ಮತ್ತದೇ ಜಾತ್ರೆಗೋ, ಮದುವೆಗೋ, ಬಂಧುಗಳ ಮನೆಗೋ ಅಷ್ಟೆ. ದೇಶ ಆಳಲಿಕ್ಕಲ್ಲ. ವಿದ್ಯಾವಂತರ ಮನೆಗಳಲ್ಲೆ ಒಳಗಿರಲಿ ಹೆಣ್ಣು. ಗಂಡಿರಲಿ ಲೋಕಸಂಗ್ರಹಕ್ಕೆ. ಆಳಲು ನಾನು, ವಿನಯ, ವಿಧೇಯತೆಗೆ, ಪಾಲನೆ ಪೋಷಣೆಗೆ ನೀನು ಅನ್ನೋ ಮನಸ್ಥಿತಿ ಇರುವಾಗ, ಹಳ್ಳಿಯ ಬಲವಾದ ಬೇರುಗಳು ಸುಲಭಕ್ಕೆ ಬಿಡುವವೇ? ಬಸ್ಸತ್ತಿ ಹೋಗುವುದರಿಂದ ಮೂಲ ಆಲೋಚನೆಗಳು ಬದಲಾಗುವುದಿಲ್ಲ. ಬುದ್ದಿ, ಮನಸುಗಳಲ್ಲಿ ಕಟ್ಟಿಕೊಂಡ ಮಾನಸಿಕ ಚೌಕಟ್ಟು ದಾಟಿ ಹೊರಹೋಗಲಾರದೇ, ಉಚಿತ ಬಸ್ಸಿನ ಕಾರಣಕ್ಕೆ ಹೆಂಗಸರು ಒಂದಿಷ್ಟು ಹೆಚ್ಚಿಗೆ ಹೊರಗೆ ಓಡಾಡಿದರೆ ಯಾವ ಕ್ರಾಂತಿಯೂ ಆಗುವುದಿಲ್ಲ.

ಆದರೆ… ಅನೇಕ ಬದಲಾವಣೆಗಳು ನಿಧಾನಕ್ಕೆ ಆಗುವ ಸಾಧ್ಯತೆಗಳಿವೆ. ಉಚಿತದ ಕಾರಣಕ್ಕಾಗಿ ನೆಪ ಯಾವುದಿದ್ದರೂ ಮೊದಲಿಗಿಂತ ಸ್ವಲ್ಪ ಹೆಚ್ಚು ಓಡಾಡಲು ಶುರುಮಾಡಬಹುದು ಹೆಂಗಸರು. ಅದು ನಿಧಾನಕ್ಕೆ ಹೆಚ್ಚಿನ ಸ್ವಾತಂತ್ರ್ಯದ, ಹೊಸ ಅವಕಾಶಗಳ, ಆಲೋಚನೆಗಳ ಬಾಗಿಲನ್ನೂ (women empowerment) ತೆರೆಯಬಹುದು. ಕೊನೆಯಾಗಬಹುದು ಒಂದು ದಿನ “ನಿನಗೇನ್ ಗೊತ್ತು ನಾಕ್ ಗ್ವಾಡ ಮಧ್ಯದಲ್ಲಿ ಕೂತಿರೌಳಗ?” ಅನ್ನುವ ಮಾತು. ಶಾಶ್ವತವಾಗಿ… ಕರ್ನಾಟಕದ ಗಂಡಸರು ಯಾರೂ ಬಳಸದಂತೆ ಮುಂದೆ.

ಎಷ್ಟೆಲ್ಲ ಗೊಂದಲಗಳ ನಡುವೆ ಜಾರಿಯಾಗುತ್ತಿರುವ ಈ ಯೋಜನೆ ಕಡೇಪಕ್ಷ ನಾಕ್ ಗ್ವಾಡೆಗಳ ನಡುವಿನಿಂದ ಹೊರಗೆ ದಾಟಿಸಲಿ ಹೆಂಗಸರ, ಕರೆದೊಯ್ಯಲಿ ಸ್ವಾತಂತ್ರ್ಯ, ಸಮಾನತೆಗಳ ಹೊಸದಾರಿಗೆ! ಉರುಳುವ ಬಸ್ಸಿನ ಚಕ್ರಗಳು ಭಯ ಹುಟ್ಟಿಸಲಿ ಗಂಡಾಳ್ವಿಕೆಯ ಬಯಕೆಗೆ, ಎಂದಾದರೊಂದು ದಿನ ಬರಲಿ ಹೆಣ್ಮಕ್ಕಳು ಅರ್ಧ ವಿಧಾನಸಭೆಯ ಕುರ್ಚಿಗೆ!

ಇದನ್ನೂ ಓದಿ: ಅನಿಸಿಕೆ: Indian Democracy: ಪರಮಾಧಿಕಾರ ಮತ್ತು ಸಮಾನತೆ ಎಂಬ ಸವಕಲು ನಾಣ್ಯಗಳು

Exit mobile version