| ಟಿ.ಎಸ್ ವೇಣುಗೋಪಾಲ್
ಪಂಡಿತ್ ರಾಜೀವ್ ತಾರಾನಾಥರಿಗೆ ಅಕ್ಟೋಬರ್ 17ರಂದು 90 ವರ್ಷ. ‘ಒರಟಾಗಿ ಕಂಡರೂ ತುಂಬಾ ಮೃದು ಹೃದಯದ ವ್ಯಕ್ತಿ’ ಇದು ಎಲ್ಲರೂ ಅವರ ಬಗ್ಗೆ ಹೇಳುವ ಮಾತು. ತುಂಬಾ ಚಿಕ್ಕವರಿದ್ದಾಗಿನಿಂದಲೂ ಸಂಗೀತದ ಗೀಳು ಅಂಟಿಸಿಕೊಂಡು, ಗ್ರಾಮೋಫೋನ್ ತಟ್ಟೆಯ ಸಂಗೀತ ಕೇಳಿಕೊಂಡು ಬೆಳೆದವರು. ಸರೋದಿನ ಸ್ಟ್ಯಾಕಾಟೋ ನಾದ ಕೇಳಲಾಗದೆ, ಅದು ಕರ್ಕಶವೆನಿಸಿ ಅದನ್ನು ದ್ವೇಷಿಸುತ್ತಿದ್ದ ರಾಜೀವರು ಉಸ್ತಾದ್ ಅಲಿ ಅಕ್ಬರ್ ಖಾನರ ಸರೋದ್ ಕೇಳಿ ಅದಕ್ಕೆ ಮರುಳಾದದ್ದು ಈಗ ಚರಿತ್ರೆ. ಯಾವ ನಾದ ಕೇಳಿದರೆ ಓಡಿಹೋಗುತ್ತಿದ್ದರೋ ಈಗ ಅದೇ ನಾದದ ಜೊತೆ ಪ್ರೀತಿಯಿಂದ ಬದುಕುತ್ತಿದ್ದಾರೆ.
ಮಗ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸು ಮಾಡಿ ಬದುಕು ಕಟ್ಟಿಕೊಳ್ಳಲೆಂದು ಮನೆಯವರು ಆಶಿಸಿದ್ದರು. ಆದರೆ ರಾಜೀವರು ಸಿನಿಮಾದಲ್ಲಿ ಹಿನ್ನೆಲೆ ಗಾಯಕನಾಗುವ ಕನಸು ಕಂಡಿದ್ದರು. ಮೊದಲಿನಿಂದಲೂ ಸಿನಿಮಾ ಸಂಗೀತದ ಗೀಳು. ಸೊಗಸಾಗಿ ಹಾಡುತ್ತಿದ್ದರು. ಇವರ ಸಿನಿಮಾ ಸಂಗೀತ ಗಾಯನಕ್ಕೆ ಅಪಾರ ಅಭಿಮಾನಿಗಳಿದ್ದರು. ತಲತ್ ಮಹಮೂದ್ ಅಂತಹವರೂ ಇವರ ಹಾಡನ್ನು ಮೆಚ್ಚಿಕೊಂಡು ಬಾಂಬೆಗೆ ಆಹ್ವಾನಿಸಿದ್ದರಂತೆ. ಆದರೆ ಆಮೇಲೆ ನಡೆದದ್ದೇ ಬೇರೆ.
ಆಕಾಶದಲ್ಲಿ ವಿಹರಿಸುತ್ತಿದ್ದ ಅಲಿ ಅಕ್ಬರ್ ಖಾನ್‍ರ ಸರೋ ದ್‍ನಾದವನ್ನು ಕಾರ್ಯಕ್ರಮವೊಂದರಲ್ಲಿ ಕೇಳುತ್ತಾ, ಕೇಳುತ್ತಾ ರಾಜೀವ ತಾರಾನಾಥರಿಗೆ ಮಧ್ಯಮವರ್ಗದ ರೊಮ್ಯಾಂಟಿಕ್ ಬಯಕೆಗಳೆಲ್ಲಾ ಮರತೇ ಹೋದವು. ಆ “ಟವರಿಂಗ್ ಮ್ಯೂಸಿಕ್” ಕೇಳುತ್ತಾ ಇವರಲ್ಲಿ ಮೂಡಿದ ಒಂದೇ ಒಂದು ಆಸೆಯೆಂದರೆ ಖಾನ್ ಸಾಹೇಬರ ಬಳಿ ಹೋಗಿ ಸರೋದ್ ಕಲಿಯಬೇಕು ಎನ್ನುವುದು.
ಅಲ್ಲಿಂದ ಮುಂದೆ ಗುರುಗಳಿಗೆ ತಮ್ಮನ್ನು ಒಪ್ಪಿಸಿಕೊಂಡು, ಅವರು ಹೇಳಿಕೊಟ್ಟಿದ್ದನ್ನೆಲ್ಲಾ ತನ್ನೊಳಗೆ ಬಿಟ್ಟುಕೊಳ್ಳುತ್ತಾ, ಹಾಗೆ ಬಿಟ್ಟುಕೊಂಡದ್ದನ್ನು ಪೋಷಿಸುತ್ತಾ, ಬೆಳೆಸುತ್ತಾ ಸಾಗಿದರು. ಗುರುವಿನ ಬಗ್ಗೆ ಇದ್ದ ಭಕ್ತಿಯಿಂದಾಗಿ ಕಲಿತದ್ದು ಚಿಗುರಿತು, ಬೆಳೆದು ಗಿಡವಾಯ್ತು, ಮರವಾಯ್ತು. ಕೊನೆಗೆ ಹಣ್ಣು ಬಿಡುತ್ತಾ ಹೋಯಿತು. ನಿರಂತರ ಅಭ್ಯಾಸದಿಂದ ಸಾಂಗೀತಿಕ ಕಲ್ಪನೆಗಳನ್ನೆಲ್ಲಾ ಕೈಯಲ್ಲಿ ತರುವುದಕ್ಕಾಯಿತು. ಸಾಧನೆಯಿಂದ ಬೆರಳುಗಳ ಕೌಶಲ್ಯ ಹಾಗೂ ಕಲ್ಪನೆಗಳು ಒಂದನ್ನೊಂದು ಪರಸ್ಪರ ಪೋಷಿಸುತ್ತಾ, ಬೆಳೆಯುತ್ತಾ ಹೋದವು. ರಾಜೀವರಿಗೆ ಸಂಗೀತದಲ್ಲಿ ಔತ್ತಮ್ಯವನ್ನು ಸಾಧಿಸುವುದಕ್ಕೆ ಸಾಧ್ಯವಾಯಿತು. ಇಂದು ರಾಜೀವ್ ತಾರಾನಾಥ್ ಅಪ್ರತಿಮ ಸರೋದ್ ವಾದಕರಾಗಿ ನಮ್ಮ ಮುಂದಿದ್ದಾರೆ.
ಜೀವನಕ್ಕಾಗಿ ಇಂಗ್ಲೀಷ್ ಅಧ್ಯಾಪಕ ವೃತ್ತಿಯನ್ನು ಮತ್ತೆ ಪ್ರಾರಂಭಿಸಿದರು. ಆದರೆ ವಿಧಿ ಬಿಡಬೇಕಲ್ಲ. ಆಕಸ್ಮಿಕವಾಗಿ ಭೇಟಿಯಾದ ಪಂಡಿತ್ ರವಿಶಂಕರ್ “ನಿನಗೆ ಸಂಗೀತ ಕಲಿಸಿದ ಮೈಹರ್ ಘರಾನೆಗೆ ನಿನ್ನ ಋಣ ಸಂದಾಯವಾಗಬೇಕಿದೆ. ಕೆಲಸ ಬಿಟ್ಟು ಸಂಗೀತ ಮುಂದುವರಿಸು” ಎಂದು ಅಪ್ಪಣೆ ಕೊಟ್ಟರು. ಅವರು ಹೇಳಿದ್ದು ಸರಿ ಅಂತ ತೋರಿತು. “ಈ ಸಾಹಿತ್ಯ, ಗೀಹಿತ್ಯ ಎಲ್ಲಾ ಸಾಕು. ನಾನು ಮತ್ತೆ ಸಂಗೀತಕ್ಕೆ ಹೋಗಲೇಬೇಕು” ಎಂದು ತೀವ್ರವಾಗಿ ಅನ್ನಿಸಿ, ಅಧ್ಯಾಪಕ ವೃತ್ತಿಗೆ ರಾಜೀನಾಮೆ ಕೊಟ್ಟರು. ಸಂಪೂರ್ಣವಾಗಿ ಸರೋದ್‍ನಲ್ಲೇ ಮುಳುಗಿ ಹೋದರು. ಈಗ “ಒಂದು ಸಣ್ಣ ಕಲ್ಲ ಹರಳಿನಿಂದ ಹಿಡಿದು ಸಮಗ್ರ ಭಾರತಕ್ಕೆ ಸ್ಪಂದಿಸುವ ಸಾಧ್ಯತೆಯನ್ನು” ಇವರಿಗೆ ಕೊಟ್ಟಿರುವ ಅಲಿ ಅಕ್ಬರರ ಸಂಗೀತದ ಮಾಧ್ಯಮದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.
ಇದನ್ನೂ ಓದಿ | ರವೀಂದ್ರನಾಥ ಟಾಗೋರ್ ಜನ್ಮದಿನಕ್ಕೆ ಅವರ 7 ಪುಟ್ಟ ಕವನಗಳು
ಇಂದಿಗೂ ಸರೋದಿನಷ್ಟೇ ಗಂಭೀರವಾಗಿ ಸಾಹಿತ್ಯವನ್ನೂ ಆಸ್ವಾದಿಸುತ್ತಾರೆ. ಒಳ್ಳೆಯ ಪದ್ಯವೋ, ಕಥೆಯೋ, ಬರಹವೋ ಕಂಡರೆ ತಕ್ಷಣ ‘ಆಹಾ’ ಅನ್ನುತ್ತಾರೆ. ಆ ‘ರೆಲಿಷ್’ ಅನ್ನು ಜೊತೆಯವರೊಡನೆ ಹಂಚಿಕೊಳ್ಳುತ್ತಾರೆ. ರಾಜೀವ್ ತಾರಾನಾಥರು ಸಿನಿಮಾಕ್ಕೂ ಸಂಗೀತ ನೀಡಿದ್ದಾರೆ. ಪುಣೆಯ ಫಿಲ್ಮ್ ಇನ್‍ಸ್ಟಿಟ್ಯೂಟಿನ ಸಂಗೀತ ವಿಭಾಗದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಸಂಸ್ಕಾರ, ಪಲ್ಲವಿ, ಖಂಡವಿದೆಕೋ ಮಾಂಸವಿದೆಕೋ, ಶೃಂಗಾರ ಮಾಸ, ಆಗಂತುಕ, ಕಾಂಚನಸೀತಾ, ಪೊಕ್ಕುವಯಿಲ್ ಮುಂತಾದ ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಅವುಗಳಲ್ಲಿ ಕೆಲವಕ್ಕೆ ಪ್ರಶಸ್ತಿಗಳೂ ಬಂದಿವೆ. ಯೆಮನ್, ಪೆನ್ಸಿಲ್ವೇನಿಯಾ ಮುಂತಾದ ಕಡೆಗಳಲ್ಲಿ ಸಾಹಿತ್ಯ ಮತ್ತು ಸಂಗೀತ ಇವುಗಳನ್ನು ಕಲಿಸಲು ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ್ದಾರೆ. ಭಾಷೆಗಳನ್ನೂ ತುಂಬಾ ಸಲೀಸಾಗಿ ಒಲಿಸಿಕೊಂಡು ಬಿಡುತ್ತಾರೆ. ಎಷ್ಟೋ ಭಾಷೆಗಳನ್ನು ಅದರ ಭಾಷಿಕರು ಮಾತನಾಡುವಷ್ಟೇ ಸಲೀಸಾಗಿ ಮಾತನಾಡುತ್ತಾರೆ.
ಎಲ್ಲದಕ್ಕಿಂತ ಹೆಚ್ಚಾಗಿ ತಾರಾನಾಥರು ತುಂಬಾ ದೊಡ್ಡ ಹೃದಯದ ಉದಾತ್ತ ಜೀವಿ. ಸುತ್ತಮುತ್ತಲಿನವರ ನೋವಿಗೆ ಅವರ ಹಾಗೆ ಸ್ಪಂದಿಸುವರು ಅಪರೂಪ. ಹಾಗಾಗಿಯೇ ಅವರನ್ನು ನಿಜವಾಗಿ ಪ್ರೀತಿಸುವ ಮಂದಿ ತುಂಬಾ ಇದ್ದಾರೆ. ಹಾಗೆ ಅವರನ್ನು ಪ್ರೀತಿಸುವ, ಅವರಿಂದ ಅಪಾರವಾಗಿ ಪಡೆದುಕೊಂಡ ತರಹಾವರಿ ಜನಕ್ಕೆ ತಮ್ಮ ಕೃತಜ್ಞತೆಗಳನ್ನು, ಪ್ರೀತಿಯನ್ನು ಸಲ್ಲಿಸೋಕೆ 17 ಅಕ್ಟೋಬರ್, 2022 ಒಂದು ಅಪರೂಪದ ಗಳಿಗೆ, ಅವಕಾಶ.
ಇದನ್ನೂ ಓದಿ | Dr APJ Abdul Kalam Birthday | ಭವ್ಯ ಭಾರತದ ಕನಸುಗಾರ, ಜನರ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ