Site icon Vistara News

ಮೊಗಸಾಲೆ ಅಂಕಣ | ಭಾರತದಲ್ಲಿ ಪಾದಯಾತ್ರೆ ಪಾಲಿಟಿಕ್ಸ್

bharat jodo

ಭಾರತ್ ಜೋಡೋ ಯಾತ್ರೆ ಇದೀಗ ದೇಶದ ಉದ್ದಗಲಕ್ಕೆ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಿತ್ಯವೂ ಹೆಜ್ಜೆ ಹಾಕುತ್ತಿರುವ ಈ ಯಾತ್ರೆ ಸೆಪ್ಟೆಂಬರ್ ೭ರಂದು ಕನ್ಯಾಕುಮಾರಿಯಲ್ಲಿ ಶುರುವಾಗಿದ್ದು ೧೫೦ ದಿವಸಗಳಲ್ಲಿ ೩೫೭೦ ಕಿಮೀ ದೂರ ಕ್ರಮಿಸಿ ಜಮ್ಮು ಕಾಶ್ಮೀರದಲ್ಲಿ ಸಮಾಪನಗೊಳ್ಳಲಿದೆ. ಬೆಲೆ ಏರಿಕೆ, ನಿರುದ್ಯೋಗ, ಕೋಮು ಸಂಘರ್ಷ ಸೇರಿದಂತೆ ಹತ್ತಾರು ಬಗೆಯ ಬಿಕ್ಕಟ್ಟು ದೇಶವನ್ನು ಅಟ್ಟಾಡಿಸುತ್ತಿರುವ ಈ ಸಮಯದಲ್ಲಿ ದೇಶವನ್ನೂ, ಜನಮನವನ್ನೂ ಒಗ್ಗೂಡಿಸುವ ಯತ್ನದ ಭಾಗವಾಗಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎನ್ನುವುದು ಸಂಘಟಕರು ನೀಡುತ್ತಿರುವ ವಿವರಣೆ. ದೇಶದಲ್ಲಿ ಇಂಥ ಯಾತ್ರೆಗಳಿಗೆ ಬರಗಾಲ ಎಂದೂ ಬರಲಿಲ್ಲ ಎನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಂಡು ಈಗ ಸಾಗಿರುವ ಯಾತ್ರೆಯ ಫಲಾಫಲಗಳನ್ನು ನೋಡುವ ಅಗತ್ಯವಿದೆ. ಇದು ಕಾಂಗ್ರೆಸ್ ಯಾತ್ರೆಯಲ್ಲ ಎನ್ನುವುದು ಒಂದು ವಿವರಣೆ, ರಾಹುಲ್ ಗಾಂಧಿ ಇದರ ನೇತೃತ್ವ ವಹಿಸಿಲ್ಲ ಅವರೇನಿದ್ದರೂ ಯಾತ್ರೆಯಲ್ಲಿ ಭಾಗವಹಿಸಿರುವ ಯಾತ್ರಿ ಎನ್ನುವುದು ಮತ್ತೊಂದು ವಿವರಣೆ. ಇವೆರಡೂ ವಿವರಣೆಗಳಲ್ಲಿ ಸತ್ಯದ ಅಂಶ ತಿಲಮಾತ್ರವೂ ಇಲ್ಲ ಎನ್ನುವುದು ಈಗ ನಿಚ್ಚಳವಾಗಿದೆ. ದೇಶದಲ್ಲಿ ನಡೆದಿರುವ ಮತ್ತೊಂದು ಪಾದಯಾತ್ರೆ ಪಾಲಿಟಿಕ್ಸ್ ಇದು ಎಂದು ಹೇಳಬಹುದು.

ಹೊಸ ರಾಜಕೀಯ ಪಕ್ಷದ ಹುಟ್ಟಿಗೆ ಅಥವಾ ಸತ್ತೇ ಹೋದಂತಿರುವ ಪಕ್ಷ ರಾಜಕಾರಣದ ಪುನರ್ಜನ್ಮಕ್ಕೆ ಇಲ್ಲವೇ ಜನರನ್ನು ಮರುಳು ಮಾಡುವುದಕ್ಕೆ ರಾಜಕೀಯ ಯಾತ್ರೆಗಳನ್ನು ಬಳಸಿಕೊಂಡ ಹಲವು ನಿದರ್ಶನಗಳು ಈ ಮಣ್ಣಿನಲ್ಲಿವೆ. ಸ್ವಾತಂತ್ರ್ಯೋತ್ತರ ಇಂಡಿಯಾದಲ್ಲಿ ನಡೆದ ಒಂದೊಂದೂ ಯಾತ್ರೆಯನ್ನು ಅವಲೋಕಿಸಿದರೆ ಈ ಮಾತು ಮನವರಿಕೆ ಆಗುತ್ತದೆ. ನಮ್ಮ ದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಯಾತ್ರೆ ಕೈಗೊಂಡು ಅದರಿಂದ ಅಗಣಿತ ಪ್ರಮಾಣದಲ್ಲಿ ರಾಜಕೀಯ ಪಡೆದ ರಾಜಕೀಯ ಪಕ್ಷಗಳಲ್ಲಿ ಭಾರತೀಯ ಜನತಾ ಪಾರ್ಟಿಗೆ ನಿಸ್ಸಂಶಯವಾಗಿ ಮೊದಲ ಸ್ಥಾನ. ಜನಮನದ ಹವಾ ಯಾವತ್ತ ಬೀಸುತ್ತಿದೆ, ಆ ಬೀಸಿನಲ್ಲಿ ರಾಜಕೀಯ ಲಾಭ ಪಡೆಯುವುದು ಹೇಗೆಂಬ ಕರಾರುವಾಕ್ ಲೆಕ್ಕಾಚಾರ ಆ ಪಕ್ಷದಲ್ಲಿದೆ. ಯಾತ್ರೆಗಳ ಮೂಲಕವೇ ಬಿಜೆಪಿ ಅಥವಾ ಬೇರೆ ಬೇರೆ ಪಕ್ಷಗಳು ರಾಜಕೀಯ ಲಾಭ ಗಳಿಸಬಹುದಾದರೆ ತನಗೇಕೆ ಆ ಲಾಭ ಪಡೆಯುವುದು ಸಾಧ್ಯವಿಲ್ಲ ಎಂಬ ಯೋಚನೆ ಇದೀಗ ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯಲ್ಲಿದೆ, ಅನುಮಾನ ಬೇಡ. ಯಾತ್ರೆ ಮುಕ್ತಾಯದ ವೇಳೆಗೆ ಹವಾ ಯಾವ ಕಡೆ ಬೀಸುತ್ತದೋ ಈಗಲೇ ಹೇಳುವುದು ಕಷ್ಟ. ಆದರೆ ಸದ್ಯಕ್ಕಂತೂ ಭಾರತ್ ಜೋಡೋ ಯಾತ್ರೆ ಅದು ಸಾಗಿರುವಲ್ಲೆಲ್ಲಾ ಜನರ ಮನಸ್ಸನ್ನು ಸೆಳೆಯುತ್ತಿದೆ.

ಮಹಾತ್ಮ ಗಾಂಧಿ ನೇತೃತ್ವದ ದಾಂಡಿ ಯಾತ್ರೆ

ಭಾರತ್ ಜೋಡೋ ಯಾತ್ರೆಯನ್ನು ನೋಡುವ ಪೂರ್ವದಲ್ಲಿ ದೇಶದಲ್ಲಿ ಇದುವರೆಗೆ ನಡೆದುಕೊಂಡು ಬಂದಿರುವ ಪಾದಯಾತ್ರೆ ಇತಿಹಾಸದತ್ತ ಇಣುಕು ನೋಟ ಹರಿಸಿದರೆ ೧೯೨೦ರಷ್ಟು ಹಿಂದೆಯೇ ಇದಕ್ಕೆ ನಿದರ್ಶನ ಸಿಗುತ್ತದೆ. ಸಬರಮತಿ ಆಶ್ರಮದಿಂದ ದಾಂಡಿವರೆಗೆ ಮಹಾತ್ಮ ಗಾಂಧಿ ನೇತೃತ್ವದಲ್ಲಿ ೨೪೧ ಮೈಲು ದೂರ ಕ್ರಮಿಸಿದ ಉಪ್ಪಿನ ಸತ್ಯಾಗ್ರಹ, ಮುಂದೆ ದೇಶದ ಉದ್ದಗಲಕ್ಕೆ ಕರ ನಿರಾಕರಣಾ ಚಳವಳಿಯಾಗಿ ರೂಪಾಂತರಗೊಂಡು ಫರಂಗಿ ಆಡಳಿತ ಬೆಚ್ಚಿ ಬೀಳುವಂತೆ ಮಾಡಿದ ಇತಿಹಾಸವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ದಾಂಡಿ ಯಾತ್ರೆ ಉದ್ದೇಶ ಬಹಳ ಸ್ಪಷ್ಟವಾಗಿತ್ತು, ಮಾತ್ರವಲ್ಲ ರಾಜಕೀಯ ಮುಕ್ತವೂ ಆಗಿತ್ತು. ಜನರ ನಿತ್ಯಾಗತ್ಯ ವಸ್ತುಗಳಲ್ಲಿ ಅತ್ಯಂತ ಮುಖ್ಯವಾದ ಉಪ್ಪಿನ ಉತ್ಪಾದನೆ ಸಮುದ್ರ ತೀರದ ಊರುಗಳಲ್ಲಿ ಗುಡಿ ಕೈಗಾರಿಕೆಯಾಗಿತ್ತು. ಅದನ್ನು ಜನರಿಂದ ಕಸಿದುಕೊಳ್ಳುವ ಮತ್ತು ತಾನು ಉತ್ಪಾದಿಸಿ ಮಾರುವ ಉಪ್ಪಿನ ಮೇಲೆ ಗರಿಷ್ಠ ತೆರಿಗೆ ವಿಧಿಸುವ ಬ್ರಿಟಿಷ್ ಸರ್ಕಾರದ ಅವಿವೇಕಿ ಆಡಳಿತದ ವಿರುದ್ಧ ಜನಜಾಗೃತಿ ಮೂಡಿಸುವುದು ಮತ್ತು ಆ ಜಾಗೃತಿಯನ್ನು ಸ್ವಾತಂತ್ರ್ಯ ಹೋರಾಟಕ್ಕೆ ಬಳಸಿಕೊಳ್ಳುವುದು ಗಾಂಧೀಜಿಯವರ ಏಕೈಕ ಮತ್ತು ಪರಮ ಗುರಿಯಾಗಿತ್ತು. ಇಷ್ಟರ ಹೊರತಾಗಿ ಒಳ ಅಜೆಂಡಾ ಅಲ್ಲಿರಲಿಲ್ಲ. ಒಂದೇ ಮಾತಿನಲ್ಲಿ ಬಣ್ಣಿಸಬಹುದಾದರೆ ರಾಜಕೀಯ ವಾಸನಾಮುಕ್ತ ಚಳವಳಿ ಅದು.

ಸ್ವಾತಂತ್ರ್ಯಾನಂತರ ಭಾರತ ನೋಡಿದ ಎಲ್ಲ ಯಾತ್ರೆಗಳೂ ಅಂತಿಮವಾಗಿ ರಾಜಕೀಯ ಉದ್ದೇಶಿತ ಯಾತ್ರೆಯೇ ಆಗಿರುವುದು ಗಾಂಧೀಜಿ ಪ್ರಣೀತ ಸತ್ಯಾಗ್ರಹಕ್ಕೂ ರಾಜಕೀಯ ಉದ್ದೇಶಿತ ಯಾತ್ರೆಗಳಿಗೂ ಇರುವ ಅಂತರವನ್ನು ಎತ್ತಿ ತೋರಿಸುತ್ತದೆ. ಯಾತ್ರೆಗಳಿಂದ ವಿವಿಧ ರಾಜಕೀಯ ಪಕ್ಷಗಳು ಪಡೆದ ರಾಜಕೀಯ ಲಾಭದ ಹೇರಳ ಡಿವಿಡೆಂಡು ನೋಡಿದರೆ ಅಂತರದ ಆಳಅಗಲ ಗೊತ್ತಾಗುತ್ತದೆ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಸಿಪಿಎಂ ಮತ್ತು ತೋಳ ಕುರಿಮರಿ ಕಥೆ

ಭಾರತ ಜೋಡೋ ಯಾತ್ರೆಯ ನೇತೃತ್ವ ತಮ್ಮದಲ್ಲ, ತಾವೇನಿದ್ದರೂ ಒಬ್ಬ ಯಾತ್ರಿ ಮಾತ್ರ ಎಂದು ಎಐಸಿಸಿ ಮಾಜಿ ಅಧ್ಯಕ್ಷರೂ ಆಗಿರುವ ಕೇರಳದ ವೈನಾಡ್ ಕ್ಷೇತ್ರದ ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಮತ್ತೆ ಮತ್ತೆ ಹೇಳುತ್ತಿದ್ದಾರೆ. ಹಾಗೆ ಹೇಳಬೇಕಾದ ಅಗತ್ಯವೇನಿದೆಯೋ ಅರ್ಥವಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ಶಾಂತಿಭಂಗಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಕೈಗೆತ್ತಿಕೊಳ್ಳುವ ಪ್ರಜಾಸತ್ತಾತ್ಮಕವಾದ ಎಲ್ಲ ಕಾರ್ಯಕ್ರಮಗಳಿಗೂ ಮುಕ್ತ ಅವಕಾಶ ಇರುವಾಗ, ಕೇಂದ್ರ ಸರ್ಕಾರ ಮತ್ತು ಬಿಜೆಪಿ ದುರಾಡಳಿತ, ಬೆಲೆ ಏರಿಕೆ, ನಿರುದ್ಯೋಗದಂಥ ಗಂಭೀರ ಸಮಸ್ಯೆಗಳ ವಿರುದ್ಧ ಪಾದಯಾತ್ರೆ ನಡೆಯುತ್ತಿದ್ದು ನಾಯಕತ್ವವನ್ನು ಹೆಮ್ಮೆಯಿಂದ ವಹಿಸಿಕೊಂಡಿರುವುದಾಗಿ ಅವರು ಹೇಳಿದ್ದರೆ ಅದು ಹೆಚ್ಚು ಜನರಿಗೆ ಸಕಾರಾತ್ಮಕವಾಗಿ ಮುಟ್ಟುತ್ತಿತ್ತು.

೨೦೧೪ರ ಲೋಕಸಭೆ ಚುನಾವಣೆಯಿಂದ ಹಿಡಿದು ಇಲ್ಲೀವರೆಗೆ ನಡೆದ ವಿಧಾನ ಸಭೆ, ಲೋಕಸಭಾ ಚುನವಣೆಗಳಲ್ಲಿ ಕಾಂಗ್ರೆಸ್ ಗಣನೀಯ ಸೋಲಿಗೆ ಒಳಗಾಗಿದೆ. ಚುನಾವಣೆಯಿಂದ ಚುನಾವಣೆಗೆ ದುರ್ಬಲವಾಗುತ್ತಿರುವ ಪಕ್ಷಕ್ಕೆ ಕಾಯಕಲ್ಪ ನೀಡುವುದು ಭಾರತ್ ಜೋಡೋ ಯಾತ್ರೆಯ ಮುಖ್ಯ ಉದ್ದೇಶ. ಅದನ್ನು ಕಾಂಗ್ರೆಸ್ ನಾಯಕರು ಬಾಯಿ ಬಿಟ್ಟು ಹೇಳುತ್ತಿಲ್ಲ. ಆದರೆ ಉದ್ದೇಶ ಅದಲ್ಲದೆ ಬೇರೇನೂ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಗುಟ್ಟು. ೨೦೨೪ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಅದಕ್ಕೂ ಪೂರ್ವದಲ್ಲಿ ಗುಜರಾತ್, ಹಿಮಾಚಲ ಪ್ರದೇಶ, ರಾಜಸ್ಥಾನ, ಕರ್ನಾಟಕ ಸೇರಿದಂತೆ ಹಲವು ರಾಜ್ಯ ವಿಧಾನ ಸಭೆಗೂ ಚುನಾವಣೆ ನಡೆಯಲಿದೆ. ಜನರ ಕಷ್ಟಕಾಲದಲ್ಲಿ ತಾನು ಅವರೊಂದಿಗೆ ಇರುವುದಾಗಿ ತೋರಿಸಿಕೊಳ್ಳುವ ಯಾತ್ರೆ, ರಾಜಕೀಯ ಅಜೆಂಡಾದಿಂದ ಮುಕ್ತವಾಗಿರುವುದು ಸಾಧ್ಯವಿಲ್ಲ ಎನ್ನಲು ಬರಲಿರುವ ಚುನಾವಣೆಗಳೂ ಒಳಗೊಂಡಂತೆ ಬೇಕಷ್ಟು ಸಾಂದರ್ಭಿಕ ಸಾಕ್ಷ್ಯಗಳಿವೆ.

ಉಪ್ಪಿನ ಸತ್ಯಾಗ್ರಹದ ಬಳಿಕ ಮಹಾತ್ಮ ಗಾಂಧಿ ಮತ್ತೆ ನೇತೃತ್ವ ವಹಿಸಿದ್ದು ೧೯೪೬-೪೭ರಲ್ಲಿ ನಡೆದ ಶಾಂತಿ ಯಾತ್ರೆಯಲ್ಲಿ. ವಿಭಜನಾ ಪೂರ್ವ ಮತ್ತು ನಂತರದ ಕೋಮು ಜ್ವಾಲೆಯಲ್ಲಿ ದೇಶ ನಲುಗುತ್ತಿದ್ದಾಗ ಹಿಂದೂ ಮುಸ್ಲಿಂ ಸಮುದಾಯದ ನಡುವೆ ಸೌಹಾರ್ದ ಬೆಸೆಯುವ ಉದ್ದೇಶ ಆ ಯಾತ್ರೆಯದಾಗಿತ್ತು. ಗಾಂಧೀಜಿ ನಿರೀಕ್ಷಿಸಿದ್ದ ಸೌಹಾರ್ದ ಭಾರತದ ಕನಸು ಹಾಗೇ ಉಳಿದು ಹೋಯಿತು. ಶಾಂತಿಯಾತ್ರೆ ದಾಂಡಿ ಯಾತ್ರೆಯಂತೆ ಸಮಾಜದ ಎಲ್ಲರನ್ನೂ ಆಕರ್ಷಿಸಲು ಸಾಧ್ಯವಾಗಲಿಲ್ಲ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದಕ್ಕೆ ಸುಣ್ಣ ಹಚ್ಚುತ್ತಿದ್ದಾರೆಂಬ ಆರೋಪ ಶಾಂತಿ ಯಾತ್ರೆ ಸಮಯದಲ್ಲಿ ಗಾಂಧೀಜಿಯವರಿಗೆ ಅಂಟಿಕೊಂಡಿತು. ಆ ನಂತರದಲ್ಲಿ ನಡೆದ ಯಾತ್ರೆಗಳೆಲ್ಲವಕ್ಕೂ ರಾಜಕೀಯ ಮೇಲುಗೈ ಪಡೆಯುವುದಷ್ಟೇ ಗುರಿಯಾಯಿತು. ಭಾರತ್ ಜೋಡೋ ಯಾತ್ರೆ ಉದ್ದೇಶವೂ ರಾಜಕೀಯವಲ್ಲದೆ ಮತ್ತೇನೂ ಅಲ್ಲ. ಜನರನ್ನು ಮುಟ್ಟುವ ಯತ್ನವಾಗಿರುವ ರಾಹುಲ್ ನೇತೃತ್ವದ ಯಾತ್ರೆ ಜನರ ಮನಸ್ಸಿನ ಮೇಲೆ ಎಷ್ಟು ಮತ್ತು ಎಂಥ ಪರಿಣಾಮ ಉಂಟುಮಾಡಲಿದೆ ಎನ್ನುವುದು ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಏರುತ್ತಿರುವ ಅದಾನಿ ಸಾಲ ಸಂಪತ್ತಿನ ಜ್ವರ, ಯಾರ ವರ?

ತೆಲುಗು ನಟ ಎನ್.ಟಿ.ರಾಮಾರಾವ್, ಆಂಧ್ರಪ್ರದೇಶದ ದೊರೆಯಾಗಬೇಕೆಂದು ಕನಸು ಕಾಣಲಾರಂಭಿಸಿದ್ದು ತಮಿಳುನಾಡು ರಾಜಕೀಯದಲ್ಲಿ ಎಂ.ಜಿ. ರಾಮಚಂದ್ರನ್ ಆಜೇಯರಾದುದನ್ನು ಕಂಡ ಬಳಿಕ. ಇದು ೧೯೮೩ರರ ಮಾತು. ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಅಂಜಯ್ಯ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅವರನ್ನು ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ ಹೀನಾಯವಾಗಿ ನಡೆಸಿಕೊಂಡಿದ್ದು ಎನ್‌ಟಿಆರ್ ರೊಟ್ಟಿ ತುಪ್ಪದಲ್ಲಿ ಬೀಳಲು ನೆಪವಾಯಿತು. ತೆಲುಗು ಸ್ವಾಭಿಮಾನದ “ತೆಲುಗು ಬಿಡ್ಡ” ಕಿಚ್ಚಿಗೆ ಆಜ್ಯವನ್ನು ಎನ್‌ಟಿಆರ್ ಎರೆದರು. ಚೈತನ್ಯ ರಥಂ ಯಾತ್ರೆ ಶುರು ಮಾಡಿದ ಅವರು ಅವಿಭಜಿತ ಆಂಧ್ರ ಪ್ರದೇಶವನ್ನು ನಾಲ್ಕು ಬಾರಿ ಸುತ್ತಿದರು. ಅವರು ಕ್ರಮಿಸಿದ ಒಟ್ಟು ದೂರ ನಾಲ್ಕು ಸಾವಿರ ಕಿಮೀ. ರಸ್ತೆ ಬದಿ ಅಂಗಡಿಗಳಲ್ಲಿ ಊಟ, ತಿಂಡಿ, ಚಹಾ ಸೇವಿಸುತ್ತ, ಮರದಡಿ ರಾತ್ರಿ ವಾಸ್ತವ್ಯ ಹೂಡುತ್ತ ಜನರ ಕರುಳನ್ನು ಅವರು ತಟ್ಟಿದರು. ತೆರೆಯಿಂದಿಳಿದು ಬಂದ ದೇವರಾಗಿ ಜನಕ್ಕೆ ಅವರು ಕಂಡರು. ಹಳ್ಳಿಹಳ್ಳಿಗಳಲ್ಲಿ ಜನ ಎನ್‌ಟಿಆರ್ ಅವರನ್ನು ಬರಮಾಡಿಕೊಂಡ ರೀತಿ, ಚುನಾವಣೆ ಸಮಯದಲ್ಲಿ ಮತವಾಗಿ ಪರಿವರ್ತನೆಗೊಂಡು ಕಾಂಗ್ರೆಸ್ಸು ಕಿತ್ತೆದ್ದು ಹೋಯಿತು. ತೆಲುಗು ದೇಶಂ ಪಕ್ಷ ತಾನು ಅಸ್ತಿತ್ವಕ್ಕೆ ಬಂದ ಒಂಬತ್ತೇ ತಿಂಗಳಲ್ಲಿ ಆಂಧ್ರ ಪ್ರದೇಶವನ್ನು ಕಬ್ಜಾ ಮಾಡಿಕೊಂಡಿತು. ಅಲ್ಲಿಂದ ಮುಂದಕ್ಕೆ ೨೧ ವರ್ಷ ಕಾಂಗ್ರೆಸ್ ಮುಕ್ತ ಸ್ಥಿತಿ ಆಂಧ್ರ ಪ್ರದೇಶದ್ದು.

ಎನ್‌ಟಿಆರ್‌ ಅವರ ಚೈತನ್ಯರಥಂ ಯಾತ್ರೆ

ಆಂಧ್ರ ಪ್ರದೇಶದಲ್ಲಿ ತಾನು ಕಳೆದುಕೊಂಡಿದ್ದನ್ನು ಮರಳಿ ಪಡೆಯುವುದಕ್ಕೆ ಕಾಂಗ್ರೆಸ್, ಎನ್‌ಟಿಆರ್ ತಂತ್ರವನ್ನು ಬಳಸಿ ಯಶಸ್ಸು ಕಂಡಿದ್ದು ೨೦೦೪ರ ವಿಧಾನ ಸಭಾ ಚುನಾವಣೆಯಲ್ಲಿ. ತೆಲುಗು ದೇಶಂ ಸರ್ಕಾರದ ದುರಾಡಳಿತ, ಸ್ವಜನ ಪಕ್ಷಪಾತ, ಬರಗಾಲ ಕಾಮಗಾರಿಯಲ್ಲಿ ನಡೆದಿದ್ದ ಭ್ರಷ್ಟಾಚಾರವನ್ನೆ ನೆಪವಾಗಿಟ್ಟುಕೊಂಡು ೨೦೦೩ರಲ್ಲಿ ಎಪಿಸಿಸಿ ಅಧ್ಯಕ್ಷರಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿ ೧೫೦೦ ಕಿಮೀ ಪಾದಯಾತ್ರೆ ನಡೆಸಿ ಆಂಧ್ರವನ್ನು ಸುತ್ತಿದರು. ಆ ಹೊತ್ತಿಗೆ ಎನ್‌ಟಿಆರ್ ಅಳಿಯ ಚಂದ್ರಬಾಬು ನಾಯ್ಡು ಆಡಳಿತ. ಜನಕ್ಕೆ ಅದು ಸಾಕಾಗಿ, ವೈಎಸ್‌ಆರ್ ಬೇಕು ಎನಿಸಿತ್ತು. ಕಾಂಗ್ರೆಸ್‌ಗೆ ಆಂಧ್ರ ಪ್ರದೇಶದ ಮಟ್ಟಿಗೆ ಪುನರ್ಜನ್ಮ ತಂದಿತ್ತವರು ವೈಎಸ್‌ಆರ್. ಆದರೆ ಮುಖ್ಯಮಂತ್ರಿಯಾಗಿ ಎರಡನೆ ಅವಧಿಯನ್ನು ಪೂರೈಸಲು ಅವರ ಆಕಸ್ಮಿಕ ಸಾವು ಬಿಡಲಿಲ್ಲ. ಅಪಘಾತದಲ್ಲಿ ತಂದೆ ಮಡಿದ ತರುವಾಯದಲ್ಲಿ ಕಾಂಗ್ರೆಸ್‌ನಿಂದ “ಕಿರುಕುಳ”ಕ್ಕೆ ಒಳಗಾದ ಮಗ ವೈ.ಎಸ್.ಜಗನ್‌ಮೋಹನ್ ರೆಡ್ಡಿ, ಕಾಂಗ್ರೆಸ್ ವಿರುದ್ಧದ ಸೇಡು ತೀರಿಸಿಕೊಳ್ಳಲು ಕಂಡುಕೊಂಡಿದ್ದು ಅಪ್ಪ ತೋರಿಸಿಕೊಟ್ಟು ಹೋಗಿದ್ದ ಯಾತ್ರಾ ರಾಜಕೀಯದ ತಂತ್ರವನ್ನೇ.

ಯುಪಿಎ ಎರಡನೇ ಅಧಿಕಾರಾವಧಿಯಲ್ಲಿ ಆಂಧ್ರ ಪ್ರದೇಶವನ್ನು ವಿಭಜಿಸಿ ತೆಲಂಗಾಣ, ಆಂಧ್ರಪ್ರದೇಶ ಎರಡು ರಾಜ್ಯ ರಚನೆಯಾಯಿತು. ಪ್ರತ್ಯೇಕ ತೆಲಂಗಾಣದ ಬೇಡಿಕೆ ಈಡೇರಿದ ಮರುಕ್ಷಣದಲ್ಲೇ ಯುಪಿಎ ಸಂಪುಟದಲ್ಲಿ ತಾವು ಹೊಂದಿದ್ದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡ ಕೆ. ಚಂದ್ರಶೇಖರ ರಾವ್ ತೆಲಂಗಾಣಾ ರಾಷ್ಟ್ರ ಸಮಿತಿ ಸರ್ಕಾರ ಸ್ಥಾಪಿಸಿ, ಕಾಂಗ್ರೆಸ್‌ಗೆ ರಾಜ್ಯದಲ್ಲಿ ನೆಲೆ ಇಲ್ಲದಂತೆ ಮಾಡಿದರು. ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಂಕಲ್ಪದೊಂದಿಗೆ ಜಗನ್ ಮೋಹನ್ ರೆಡ್ಡಿ “ಪ್ರಜಾ ಸಂಕಲ್ಪ ಯಾತ್ರೆ” ಕೈಗೆತ್ತಿಕೊಂಡು ಆಂಧ್ರವನ್ನು ಸುತ್ತಿದರು. ಅವರ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ನಂತರದ ಚುನಾವಣೆಯಲ್ಲಿ ೧೭೫ ವಿಧಾನ ಸಭಾ ಕ್ಷೇತ್ರದ ಪೈಕಿ ೧೫೧ ಕ್ಷೇತ್ರ ಜೈಸಿತು. ಲೋಕಸಭೆಯ ೨೫ ಕ್ಷೇತ್ರಗಳಲ್ಲಿ ೨೨ ಸೀಟನ್ನು ತನ್ನದನ್ನಾಗಿಸಿಕೊಂಡಿತು. ಕಾಂಗ್ರೆಸ್ಸನ್ನೂ, ತೆಲುಗು ದೇಶಂ ಪಕ್ಷವನ್ನೂ ಒಟ್ಟೊಟ್ಟಿಗೇ ಮೂಲೆಗುಂಪು ಮಾಡಿದ ಛಲವಂತಿಕೆ ಜಗನ್‌ರದಾಯಿತು.

ಇದನ್ನೂ ಓದಿ | ಮೊಗಸಾಲೆ ಅಂಕಣ | ಸಂಕಟ ಬಂದಾಗಲೆಲ್ಲ ವೆಂಕಟರಮಣ, ಕಾಂಗ್ರೆಸ್‍ನ ಹಳೆ ಚಾಳಿ

ಅತ್ತ ೧೯೮೩ರಲ್ಲಿ ಆಂಧ್ರ ಪ್ರದೇಶದಲ್ಲಿ ಎನ್‌ಟಿಆರ್ ನಾಡು ಸುತ್ತುವ ಕೆಲಸದಲ್ಲಿದ್ದಾಗಲೇ ಮಾಜಿ ಪ್ರಧಾನಿ ಚಂದ್ರಶೇಖರ್ ೪೨೬೦ ಕಿಮೀ ದೂರ ಕ್ರಮಿಸುವ ಭಾರತ ಯಾತ್ರಾ ಕಾರ್ಯಕ್ರಮ ಕೈಗೆತ್ತಿಕೊಂಡರು. ರಾಹುಲ್‌ರಿಗೆ ಇರುವಂತೆ ಬ್ಲ್ಯಾಕ್ ಕಮಾಂಡೋಗಳ ರಕ್ಷಣೆಯಾಗಲೀ, ಕಾರು ಜೀಪು, ಕ್ಯಾರವಾನ್ ಆಗಲೀ ಭಾಜಾಭಜಂತ್ರಿಯಾಗಲೀ ಇಲ್ಲದೆ ನಡೆದ ಪಾದಯಾತ್ರೆ ಹಿಂದಿದ್ದುದು ಸತ್ತಂತಿಹ ವಿರೋಧ ಪಕ್ಷಗಳಿಗೆ ಚೈತನ್ಯ ತುಂಬುವುದಾಗಿತ್ತು. ಆಗ ಅವರು ಜನತಾ ಪಕ್ಷದ ಅಧ್ಯಕ್ಷ. ತಾವು ಸುತ್ತಿದ ರಾಜ್ಯಗಳಲ್ಲಿ ಭಾರತ ಯಾತ್ರಾ ಕೇಂದ್ರದ ಹೆಸರಿಗೆ ಒಂದಿಷ್ಟು ಭೂಮಿಯನ್ನು ಮಂಜೂರು ಮಾಡಿಸಿಕೊಂಡಿದ್ದರ ಆಚೆಗೆ ಅವರು ಹೇಳುವಂಥ ರಾಜಕೀಯ ಲಾಭ ಮಾಡಿಕೊಳ್ಳಲಾಗಲಿಲ್ಲ.

ಲಾಲ್‌ಕೃಷ್ಣ ಆಡ್ವಾಣಿ ನೇತೃತ್ವದ ರಾಮರಥ ಯಾತ್ರೆ

ಯಾತ್ರೆಗಳಲ್ಲೆಲ್ಲ ಗಮನಾರ್ಹ ಯಾತ್ರೆಗಳೆಂದರೆ ಬಿಜೆಪಿ ನೇತೃತ್ವದಲ್ಲಿ ನಡೆದುದು. ೧೯೯೦ರಲ್ಲಿ ಎಲ್.ಕೆ. ಆಡ್ವಾಣಿ ನೇತೃತ್ವದಲ್ಲಿ ಗುಜರಾತ್‌ನ ಸೋಮನಾಥದಿಂದ ಉತ್ತರ ಪ್ರದೇಶದ ಅಯೋಧ್ಯಾವರೆಗಿನ ಉದ್ದೇಶಿತ ರಾಮ ರಥಯಾತ್ರೆ ಭಾರತದ ರಾಜಕೀಯದ ದಿಕ್ಕುದೆಸೆಯನ್ನೇ ಬದಲಿಸಿ ಹಾಕಿತು. ಮಾರ್ಗ ಮಧ್ಯೆ ಬಿಹಾರದಲ್ಲಿ ಯಾತ್ರೆಯನ್ನು ಅಂದಿದ್ದ ಲಾಲೂ ಪ್ರಸಾದ ಯಾದವ್ ಸರ್ಕಾರ ತಡೆಯಿತಷ್ಟೇ ಅಲ್ಲ ಆಡ್ವಾಣಿ ಸೇರಿದಂತೆ ಪ್ರಮುಖ ಯಾತ್ರಿಗಳನ್ನು ಬಂಧಿಸಿ ಕಂಬಿ ಹಿಂದೆ ಕುಳ್ಳಿರಿಸಿತು. ಬಿಜೆಪಿಗೆ ಅದರಿಂದ “ಆದದ್ದೆಲ್ಲಾ ಒಳಿತೇ ಆಯಿತು”. ೧೯೯೧ರ ಲೋಕಸಭಾ ಚುನಾವಣೆ ಪೂರ್ವದಲ್ಲಿ ಅದರ ಲೋಕಸಭಾ ಸದಸ್ಯರ ಸಂಖ್ಯೆ ೮೫. ನಂತರದ ಚುನವಣೆಯಲ್ಲಿ ಅದು ೧೨೫ಕ್ಕೆ ಏರಿತು. ಮಂಡಲ-ಕಮಂಡಲ ಯಾತ್ರೆಯ ಲಾಭವೂ ಬಿಜೆಪಿಗೇ ಆಯಿತು. ೧೯೯೩ರಲ್ಲಿ ಮತ್ತೆ ಅದೇ ಆಡ್ವಾಣಿ ನೇತೃತ್ವದಲ್ಲಿ ಜನಾದೇಶ ಯಾತ್ರೆ ನಡೆಯಿತು. ೧೯೯೭ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ವರ್ಷ. ಅದನ್ನು ಬಿಜೆಪಿ “ಸ್ವರ್ಣ ಜಯಂತಿ ರಥ ಯಾತ್ರೆ” ಎಂಬ ಹೆಸರಿನಲ್ಲಿ ದೇಶದ ಉದ್ದಗಲಕ್ಕೆ ಆಚರಿಸಿತು.

ದೇಶದ ಅಲ್ಲಲ್ಲಿ ಹೆಚ್ಚುತ್ತಿದ್ದ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ಯುಪಿಎ/ ಮನಮೋಹನ್ ಸಿಂಗ್ ಸರ್ಕಾರ ವಿಫಲವಾಗಿದೆ ಎಂಬ ಆರೋಪದೊಂದಿಗೆ ಭಾರತ ಸುರಕ್ಷಾ ಯಾತ್ರೆಯನ್ನು ಬಿಜೆಪಿ ೨೦೦೬ರಲ್ಲಿ ನಡೆಸಿತು. ಆಡ್ವಾಣಿ ನೇತೃತ್ವದ ಭಾರತ ಸುರಕ್ಷಾ ಯಾತ್ರೆ ಗುಜರಾತದ ದ್ವಾರಕಾದಿಂದ ದೆಹಲಿಗೆ; ರಾಜನಾಥ ಸಿಂಗ್ ನೇತೃತ್ವದ ಯಾತ್ರೆ ಓಡಿಶಾದ ಪುರಿಯಿಂದ ದೆಹಲಿಗೆ ನಡೆಯಿತು. ೧೯೯೧ರ ಭಾರತ ಏಕತಾ ಯಾತ್ರೆ ಬಿಜೆಪಿಯ ಪಾಲಿಗೆ ಮತ್ತೊಂದು ಜಾಕ್‌ಪಾಟ್. ಸ್ವಾತಂತ್ರ್ಯ ಬಂದ ಲಾಗಾಯ್ತೂ ಕಾಶ್ಮೀರ ಶ್ರೀನಗರದ ಲಾಲ್ ಚೌಕದಲ್ಲಿ ಭಾರತದ ತ್ರಿವರ್ಣ ಧ್ವಜದ ಬದಲಿಗೆ ಪಾಕಿಸ್ತಾನದ ಧ್ವಜವನ್ನು ಹಾರಿಸಲಾಗುತ್ತಿತ್ತು. ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರವಾಗಲೀ ಜಮ್ಮು ಕಾಶ್ಮೀರ ಸರ್ಕಾರವಾಗಲೀ ಈ ನಿಟ್ಟಿನಲ್ಲಿ ಯಾವ ಕ್ರಮವನ್ನೂ ತೆಗೆದುಕೊಂಡಿರಲಿಲ್ಲ. ಬಿಜೆಪಿಗೆ ಅದೇ ಒಂದು ವರವಾಯಿತು. ಮುರಳೀಮನೋಹರ ಜೋಷಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಭಾರತ ಏಕತಾ ಯಾತ್ರೆ ನಡೆಯಿತು. ಇದರ ಸಂಘಟನೆ ಜವಾಬ್ದಾರಿ ಹೊತ್ತಿದ್ದವರು ಹಾಲಿ ಪ್ರಧಾನಿ ನರೇಂದ್ರ ಮೋದಿ. ಯಾತ್ರೆ ೧೪ ರಾಜ್ಯಗಳಲ್ಲಿ ಹಾದು ಹೋಯಿತು. ೨೦೧೧ರಲ್ಲಿ ಮತ್ತೊಮ್ಮೆ ಬಿಜೆಪಿ ಪ್ರಾಯೋಜಿತ ಏಕತಾ ಯಾತ್ರೆ ಕೋಲ್ಕತ್ತಾದಿಂದ ದಹಲಿವರೆಗೆ ಅನುರಾಗ ಠಾಕೂರ್ ನೇತೃತ್ವದಲ್ಲಿ ನಡೆಯಿತು. ಅದು ಈಶಾನ್ಯ ಭಾಗದ ಎಂಟು ರಾಜ್ಯಗಳಲ್ಲಿ ಬಿಜೆಪಿ ಪರವಾದ ಹವಾ ಸೃಷ್ಟಿಸಲು ಸಾಕಷ್ಟು ನೆರವಯಿತು.

೨೦೦೨ರಲ್ಲಿ ಇನ್ನೇನು ವಿಧಾನ ಸಭಾ ಚುನಾವಣೆ ಬಂತು ಎನ್ನುವಾಗ ಅಂದಿನ ಮುಖ್ಯಮಂತ್ರಿ ಮೋದಿ ನೇತೃತ್ವದಲ್ಲಿ ಗುಜರಾತ್ ಗೌರವ ಯಾತ್ರಾ ನಡೆದು ಮತ್ತೆ ಆ ಪಕ್ಷ ಅಧಿಕಾರಕ್ಕೆ ಬಂತು. ೨೦೧೭ರಲ್ಲೂ ವಿಧಾನ ಸಭಾ ಚುನಾವಣೆಗೆ ಮೊದಲು ಬಿಜೆಪಿ ಯಾತ್ರೆ ಗುಜರಾತದಲ್ಲಿ ನಡೆದು ಆಡಳಿತ ಪಕ್ಷ ತಾನು ಬಯಸಿದ ವರ ಪಡೆಯಿತು. ೨೦೨೧ರಲ್ಲೂ ಬಿಜೆಪಿ ದೇಶದ ಉದ್ದಗಲಕ್ಕೆ ತನ್ನ ಆಡಳಿತವಿರುವ ೨೨ ರಾಜ್ಯಗಳಲ್ಲಿ ಜನಾದೇಶ ಯಾತ್ರೆ ಹಮ್ಮಿಕೊಂಡಿತ್ತು. ಕೋವಿಡ್ ಕಾಡುತ್ತಿದ್ದ ಸಮಯದಲ್ಲಿ ನಡೆದ ಜನಾದೇಶ ಯಾತ್ರೆ ನಿಗಾವಣೆಗಾಗಿ ಕೇಂದ್ರ ಸಂಪುಟದ ೩೯ ಸಚಿವರನ್ನು ಪಕ್ಷ ನಿಯೋಜಿಸಿತ್ತು.

ಅರವಿಂದ ಕೇಜ್ರೀವಾಲ್ ಕೂಡಾ ಯಾತ್ರಾ ಫಲಾನುಭವಿ ರಾಜಕಾರಣಿಯೇ. ಮೇಕ್ ಇಂಡಿಯಾ ನಂಬರ್ ಒನ್; ಕಿಸಾನ್ ಮಜದೂರ್ ಖೇತ್ ಬಚಾವೋ ಯಾತ್ರೆಯಲ್ಲದೆ ಉತ್ತರಾಖಂಡದಲ್ಲಿ ಕಳೆದ ವರ್ಷ ನಡೆದ ವಿಧಾನ ಸಭಾ ಚುನಾವಣೆಗೆ ಮೊದಲು ಆಪ್ ನಡೆಸಿದ್ದು ಉದ್ಯೋಗ ಭದ್ರತಾ ಯಾತ್ರೆ. ಅಂಥ ಲಾಭವೇನೂ ಆ ಪಕ್ಷಕ್ಕೆ ಅಲ್ಲಿ ಬರಲಿಲ್ಲ. ಆದರೆ ಮರಳಿ ಯತ್ನವ ಮಾಡು ಎನ್ನುವ ಮಾತಿನಲ್ಲಿ ಆಪ್ ನಂಬಿಕೆ ಇರಿಸಿಕೊಂಡಿದೆ.

ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಲು ಬಳಸಿಕೊಂಡಿದ್ದು ಯಾತ್ರಾ ರಾಜಕೀಯವನ್ನೇ ಎನ್ನುವುದು ಗಮನಿಸಬೇಕಾದ ಸಂಗತಿ. ೨೦೧೧ರ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಗೆ ಮೊದಲು ಅಲ್ಲಿದ್ದುದು ಸಿಪಿಎಂ ನೇತೃತ್ವದ ಸರ್ಕಾರ. ೩೩ ವರ್ಷದಿಂದ ಅದೊಂದೇ ಒಕ್ಕೂಟದ ಸರ್ಕಾರ. ಕಾಂಗ್ರೆಸ್ ಮುಖವಡಿಯಾಗಿ ಮಲಗುವಂತೆ ಮಾಡಿದ್ದ ಕಮ್ಯೂನಿಸ್ಟ್ ಆಳ್ವಿಕೆಗೆ ಎದುರೇ ಇಲ್ಲ ಎಂಬಂತಿದ್ದ ಕಾಲಘಟ್ಟದಲ್ಲಿ ಮಮತಾ ಬ್ಯಾನರ್ಜಿ ಯಾತ್ರೆ ನಡೆಸಿ, ಆ ರಾಜ್ಯದ ಜನರಲ್ಲಿ ಕುತೂಹಲ ಮೂಡಿಸಿದರು. ಕುತೂಹಲ ಮತವಾಗಿ ಪರಿವರ್ತನೆಗೊಂಡಿತು. ಅದರ ಪರಿಣಾಮ ಮೂರು ದಶಕದ ಸರ್ಕಾರ ಮತ್ತು ಆಡಳಿತ ಪಕ್ಷ/ಒಕ್ಕೂಟ ಮೂಲೆ ಹಿಡಿಯುವಂತಾಗಿದ್ದು. ಮಮತಾ ಗೆಲುವಿಗೆ ಹಲವು ಕಾರಣಗಳಿವೆ, ಅದರಲ್ಲಿ ಮುಖ್ಯವಾದುದು ಯಾತ್ರೆ ತಂದಿತ್ತ ಫಲ.

ಇದೀಗ ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ನಡೆಸಿದ್ದಾರೆ. ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಒಂದು ಕೈ ನೋಡುವ ಛಲ ಈ ಯಾತ್ರೆಯಲ್ಲಿದೆ. ಪಕ್ಷದ ಅಸ್ತಿತ್ವ ಸಂಪೂರ್ಣವಾಗಿ ಮರೆಯಾಗದಂತೆ ಬದುಕುಳಿಸುವ ಅಜೆಂಡಾವೂ ಇದೆ. ಕಾಂಗ್ರೆಸ್ ಅಧಿಕಾರಕ್ಕೆ ಮರಳೀತೇ ಎಂಬ ಚರ್ಚೆ ಈಗ ನಡೆಯುತ್ತಿದೆ. ಯಾತ್ರೆಯ ಯಶಸ್ಸು ಅಥವಾ ಸೋಲು, ಅದರ ನೇತೃತ್ವ ವಹಿಸಿರುವವರ ಪ್ರಾಮಾಣಿಕತೆಯನ್ನೂ, ಬದ್ಧತೆಯನ್ನೂ, ದೇಶ ಕಲ್ಯಾಣದ ರಾಜಕೀಯವನ್ನೂ ಅವಲಂಬಿಸಿರುತ್ತದೆ. ಏಕೆಂದರೆ ಒಂದು ಪಕ್ಷದ ಕಾರ್ಯತಂತ್ರ ಎಲ್ಲ ಪಕ್ಷಗಳಿಗೂ ಸಮಾನವಾಗಿ ಅನ್ವಯಿಸುವ ಸ್ಥಿತಿ ಸದ್ಯಕ್ಕೆ ಈ ದೇಶದಲ್ಲಂತೂ ಇಲ್ಲ.

(ಲೇಖಕರು ಹಿರಿಯ ಪತ್ರಕರ್ತ, ಅಂಕಣಕಾರ, ರಾಜಕೀಯ ವಿಶ್ಲೇಷಕರು)

Exit mobile version