Site icon Vistara News

ಪೋಸ್ಟ್‌ ಬಾಕ್ಸ್‌ 143 ಅಂಕಣ: ತರ್ಕವಿಲ್ಲ, ಅರ್ಥವಿಲ್ಲ, ಬರಿಯ ಪ್ರೀತಿಗೀತ!

post box 143

post box 143

kusumabale logo

ವಿನಾಕಾರಣವೇ,

ಯಾಕೋ ಮೂರು ದಿನದಿಂದ ಪುಷ್ಪ ಸಿನೆಮಾದ ಕ್ಲೈಮ್ಯಾಕ್ಸು ಕಾಡ್ತಿತ್ತು ಕಣೋ. ಕಡೆಯ ಇಪ್ಪತ್ತು ನಿಮಿಷಗಳನ್ನು ಮತ್ಮತ್ತೆ ನೋಡಿದೆ. ಒಂದೇ ಹಾಡನ್ನ ನೂರಾರು ಸಲ ಕೇಳ್ಕೇಳಿ ಉಜ್ಜಾಡೋ ಕಾಯಿಲೆ ಹಳೇದು. ಈಗ ಸೀನ್‌ಗಳನ್ನ ನೋಡ್ನೋಡಿ ಉಜ್ಜಾಡೋ ಹೊಚ್ಚ ಹೊಸ್ಸಾ ಖಾಯ್ಲೆ ಬಂತಾ? ಅಂತೆಲ್ಲ ನನ್ ಬಗ್ಗೆ ಓವರಾಗ್ ಥಿಂಕ್ ಮಾಡ್ಬೇಡ. ಇಲ್ ಕೇಳು, ಈ ಪುಷ್ಪಾ ಪಕ್ಕಾ ಕಮರ್ಷಿಯಲ್ ಪಿಚ್ಚರು. ನನ್ ಕೆಟಗರಿ ಏನಲ್ಲ. ಆದ್ರೂ ಇದು ಯಾಕಿಷ್ಟ ಆಯ್ತೂಂತ ಯೋಚಿಸ್ತಿದ್ದೆ. ಈ ಸಿನೆಮಾದಲ್ಲಿ ಕ್ಯಾರೆಕ್ಟರೈಸೇಷನ್ ಇದೆ. ನೀ ನೋಡಿಲ್ಲ ಅಲ್ವ? ಕೇಳದೇನ್ ಬಂತು. ನೀ ಇಂತಾ ಪಿಚ್ಚರೆಲ್ಲ ನೋಡಿರಕ್ ಸಾಧ್ಯಾನೇ ಇಲ್ಲ. ನಿನ್ಹತ್ರ ಟೈಮೂ ಇಲ್ಲ ನಂಗೊತ್ತು. ಈ ಪುಷ್ಪ ಒಬ್ಬ ಕಳ್ಳ ಕಣೋ. ರಕ್ತಚಂದನ ಮರ ಕದ್ ಸಾಗಿಸ್ತಾನೆ. ಒಬ್ಬ ಪೋಲೀಸ್ ಆಫೀಸರ್ ಬರ್ತಾನೆ. ಬನ್ವರ್ ಸಿಂಗ್ ಶೇಕಾವತ್. ನನ್ ಫೇವರಿಟ್ ಫಹಾದ್ ಫಾಸಿಲ್ ಆ ಪಾತ್ರಧಾರಿ. ಪುಷ್ಪಾಗೇನೂ ಆದರ್ಶ ಗೀದರ್ಶ ಇಲ್ಲ. ಪೋಲೀಸ್ ಕಾಟ ಕೊಟ್ನ? ಲಂಚ ಕೊಡದಪ್ಪಾ ಅನ್ನೋ ಜನ ಅವನು. ಲಂಚ ಕೊಡ್ತಾನೆ. ಆದ್ರೆ ಅವನಿಗೊಂದು ಆಟಿಟ್ಯೂಡಿರತ್ತಲ್ಲ? ಅದ್ ಮಾತ್ರ ಕಮ್ಮಿಯಾಗಲ್ಲ. ಪೋಲೀಸಿಗೆ ಅದ್ ಕಂಡ್ರಾಗಲ್ಲ. ಲಂಚದ ಹಣ ಎಷ್ಟು ಸಲ ಎಣಿಸಿಯೂ ಒಂದ್ ನೋಟ್ ಕಮ್ಮಿಯಾಗಿದೆ ಅಂತಾನೆ. ಎಣಿಸಿ ಎಣಿಸಿ ಸಾಕಾಗಿ, ಸರಿಯಾಗೇ ಇದೆ ಸಾರ್ ಅನ್ನೋ ಪುಷ್ಪಾಗೆ. ಇದೇ ಕಮ್ಮಿಯಾಗಿದ್ದಿದ್ದು “ಸಾರ್ʼ ಅನ್ನೋ ಮರ್ಯಾದೆ ಅಂತಾನೆ ಆಫೀಸರ್.

ಸಮಾಜದ ಒಪ್ಪಿತ ಸಂಬಂಧದ ತಂದೆಯ ಗುರುತಿಲ್ಲದ ಅವನ ಹಿನ್ನಲೆ ಕೆದಕ್ತಾನೆ. ಅವಮಾನಿಸ್ತಾನೆ. ಕಡೆಗೆ ಸೋತು ಶರಣಾದಂತೆ ನಟಿಸೋ ಪುಷ್ಪ, ಅವನ ವಿಶ್ವಾಸ ಗಳಿಸಿ, ತನ್ನದೇ ಮದುವೆ ದಿನ ಊರಾಚೆ ಕರ್ಕೊಂಡೋಗಿ ಪಾರ್ಟಿ ಮಾಡ್ತಾ ಪೋಲೀಸಿನ ರಿವಾಲ್ವರ್ ಕಿತ್ಕೊಂಡು ಅವನ ಯೂನಿಫಾರ್ಮ್ ಬಿಚ್ಚಿಸ್ತಾನೆ. ತಾನೂ ಬಟ್ಟೆ ಬಿಚ್ಚಿ ನಿಂತು, ಇಬ್ಬರ ಬರಿಮೈ ತೋರ್ತಾ “ನೋಡಿ ಸಾರ್, ನಾವಿಬ್ರೂ ಒಂದೇ ಅಲ್ವ? ಮತ್ತೆ ನೀವ್ಯಾಕ್ ನಂಗ್ ಅವಮಾನ ಮಾಡಿದ್ದು? ನಾನು ಹೀಗೇ ನಡ್ಕೊಂಡೋದ್ರೂ ನಾ ಪುಷ್ಪಾನೇ. ಆದ್ರೆ ನೀವು? ಈ ತರ ಹೋದ್ರೆ ನಿಮ್ ನಾಯಿನೂ ಗುರತ್ ಹಿಡಿಯಲ್ಲ” ಅಂತಾನೆ. ‌

ನಿಜವಾಗಿಯೂ ಅವನ ನಾಯಿ ಗುರುತು ಹಿಡಿಯಲ್ಲ ಪಿಚ್ಚರಲ್ಲಿ. ಅದ್ ಬಿಡು. ಆದ್ರೆ ಯೋಚ್ಸು, ನಾನು ಎಲ್ಲಿದ್ರೂ ಹೇಗಿದ್ರೂ ನಾನು ನಾನೇ. ಆದರೆ ನೀನು? ಯಾವ್ದೋ ಸ್ಥಾನ, ಅಧಿಕಾರದಂತಹ ಹೊರಗಿನ ಗುರುತುಗಳಿಂದ ನೀನಾಗಿದ್ದೀಯೆ. ಅವನ್ನು ಕಳಚಿದರೆ ನೀನು ಏನು? ಅನ್ನುವ ಪ್ರಶ್ನೆ ಅದೆಷ್ಟು ಮಹತ್ವದ್ದಲ್ವೇನೋ? ಒಬ್ಬ ಖ್ಯಾತ ಪತ್ರಕರ್ತರಿದ್ದರು. ದೊಡ್ಡ ಅಭಿಮಾನಿ ಬಳಗ ಅವರಿಗೆ. ಅವರಿಗೊಬ್ಬ ಸಹಾಯಕ. ಭಾರೀ ಬೇಡಿಕೆ ಅವನಿಗೆ. ಅವನೂ ಬೀಗುತ್ತಿದ್ದ. ಅವರು ಹೋದರು. ಅವನ ಡಿಮಾಂಡೂ ಹೋಯಿತು. ಯಾಕಂದ್ರೆ ಅವರ ಸಹಾಯಕ ಅನ್ನೋದಷ್ಟೆ ಅವನ ಐಡೆಂಟಿಟಿಯಾಗಿತ್ತು. ರಾಜಕೀಯ, ಆಡಳಿತದಲ್ಲಿ ದೊಡ್ಡ ದೊಡ್ಡ ಸ್ಥಾನದಲ್ಲಿದ್ದವರನ್ನೂ ನೋಡಿದ್ದೇನೆ ನಾನು. ಕುರ್ಚಿ ಇರುವವರೆಗಷ್ಟೇ ಅವರು ಚಲಾವಣೆಯಲ್ಲಿರುವ ನಾಣ್ಯ. ಇಂತಾ ಸಂಸ್ಥೆಯಲ್ಲಿ ನಾನು ಇದಾಗಿದ್ದೇನೆ ಎಂಬುದೇ ನಮ್ಮ ಗುರುತಾಗಬಾರದು. ಅದಿಲ್ಲದೇ ನಾವೇನು? ಹೊರಗಿನ ಯಾವ ಟ್ಯಾಗ್, ಕಿರೀಟ ಇಲ್ಲದೆಯೂ ಬರಿಯ ನಾವಾಗಿ, ಏಕಾಂಗಿ ವ್ಯಕ್ತಿಯಾಗಿ ಏನು ಎಂಬುದರಲ್ಲಿ ನಮ್ಮ ಗುರುತಿದೆ. ನಮ್ಮ ನಿಜವಿದೆ ಅನಿಸ್ತದೆ.

ಮೊನ್ನೆ ನಮ್ಮ ತೋಳ್ಪಾಡಿಯವ್ರು ಹೇಳಿದ್ದು ನೆನಪಾಗ್ತಿದೆ. “ನಮ್ಮನ್ನು ನೋಡುವವರನ್ನು ನೋಡಿ ನಾವು ಬದುಕಬಾರದು. ನಮ್ಮನ್ನು ನೋಡುವವರನ್ನು ನೋಡ್ತಾ ಇದ್ರೆ ನಾವು ಅವರಿಗಾಗಿ ಬದುಕ್ತೇವೆ. ನಾವು ಕೆಡ್ತೇವೆ. ಅವರನ್ನೂ ಕೆಡಿಸ್ತೇವೆ. ನಮ್ಮನ್ನು ನೋಡುವವರನ್ನು ನೋಡ್ತಾ ನಮ್ಮ ಕಣ್ಣು ಕುರುಡು, ಕೇಳಿ ಕಿವುಡು, ವ್ಯಕ್ತಿತ್ವ ಭ್ರಾಂತಿ. ಒಂದು ಕಲ್ಪಿತ ವ್ಯಕ್ತಿತ್ವದಲ್ಲಿ ಬದುಕ್ತಾ ಇರ್ತೇವೆ ನಾವು. ಪ್ರಜ್ಞಾಪೂರ್ವಕವಾದ ವ್ಯವಹಾರದಿಂದ ನಾವು ಬದುಕಿರುವುದೇ ಅಲ್ಲ. ನಿದ್ದೆಯಲ್ಲಿರುವಾಗ ನಾವು ಏನಾಗಿರ್ತೇವೆ? ಯಾರಾಗಿರ್ತೇವೆ? ಜೀವಂತ ಇರ್ತೇವೆ. ಆದರೆ ಯಾವ ಕಲ್ಪಿತ ವ್ಯಕ್ತಿತ್ವವೂ ಅಲ್ಲಿರುವುದಿಲ್ಲ. ಮರೆತುಹೋದ ಅವಸ್ಥೆಯಲ್ಲಿ, ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಇರ್ತೇವೆ. ಎಚ್ಚರವಾದ ಮೇಲೆ ಮತ್ತೆ ಏನೇನನ್ನೋ ಆರೋಪಿಸಿಕೊಳ್ತೇವೆ. ಮತ್ತೊಬ್ಬರಿಗೆ “ಇದು ನಾನು” ಅಂತ ಹೇಳೋಕೆ ರೆಡಿಯಾಗ್ತೇವೆ. ಇನ್ನೊಬ್ಬರ ಕಣ್ಣಲ್ಲಿ ನಮ್ಮನ್ನು ನೋಡ್ತೇವೆ”.

ಇದನ್ನೂ ಓದಿ: ಪೋಸ್ಟ್‌ ಬಾಕ್ಸ್‌ 143 | ಕೊಲ್ಲುವುದಾದರೆ ಕೊಂದುಬಿಡು, ಹೀಗೆ ಕಾಡಬೇಡ!

ಅವರ ಇಷ್ಟೂ ಮಾತುಗಳು ಡ್ರಿಪ್ ಇರಿಗೇಷನ್ನಿನ ಹಾಗೆ ನಿಧಾನಕ್ಕೆ ಒಳಗಿಳೀತಾ ಇವೆ. ನಾನು ಪ್ರಜ್ಞಾಪೂರ್ವಕವಾಗಿ ಮತ್ತು ಅಪ್ರಜ್ಞಾಪೂರ್ವಕವಾಗಿ ಏನೇನನ್ನು ಮಾಡುತ್ತಿರುವೆ ಅಂತ ಲಿಸ್ಟು ಮಾಡ್ಕೋತಿರುವೆ. ಪಟ್ ಅಂತ ಯಾವ್ದೋ ಕ್ಷಣದಲ್ಲಿ ನಿನ್ನ ಮೇಲೆ ಪ್ರೀತಿ ಹುಟ್ಟಿದ್ದಿದೆಯಲ್ಲಾ… ಅದು ನಿಜಕ್ಕೂ ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲೆ ಆದದ್ದು. ಪ್ರಜ್ಞಾಪೂರ್ವಕವಾಗಿ ಆದರೆ ಅದಕ್ಕೆ ಎಷ್ಟೊಂದು ಬೇಲಿಗಳು, ತರ್ಕಗಳು, ಬುದ್ಧಿಯ ಬಾಣಗಳು ಅಡ್ಡಬಂದು ಅಲ್ಲಿ ಪ್ರೇಮ ಸಂಭವಿಸಲು ಬಿಡುತ್ತಲೇ ಇರಲಿಲ್ಲ. ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಆದದ್ದನ್ನು ಪ್ರಜ್ಞಾಪೂರ್ವಕ ಸ್ಥಿತಿ ಸದಾ ಪ್ರಶ್ನಿಸುತ್ತದೆ. ನಿರೀಕ್ಷಿಸುತ್ತದೆ, ಪ್ರತಿಪ್ರೀತಿ ಬಯಸುತ್ತದೆ. ಬೇಸರ, ನೋವು ಎಲ್ಲ ಆಗ್ತದೆ. ಎಲ್ಲಕ್ಕೂ ನಿಜವೆಂದರೆ ಇದರಿಂದ ಬಿಡಿಸಿಕೊಳ್ಳಲು ಸದಾ ಪ್ರಯತ್ನಿಸ್ತಲೇ ಇರ್ತದೆ. ಪ್ರೇಮವೆಂದರೆ ಸುಖವಲ್ಲ ಗೆಳೆಯಾ, ಅದೊಂದು ನೋವು. ಪರಮಯಾತನೆ. ಪ್ರೇಮದಲ್ಲಿ ಬಿದ್ದವರು ರೊಮ್ಯಾಂಟಿಕ್ ಸಂಗತಿಗಳನ್ನು ಮಾತಾಡಬೇಕು. ಈ ಫಿಲಾಸಫಿಯೆಲ್ಲ ಬಿಡು ನೀನು ಅನ್ನಬೇಡವೋ, ಸಫರ್ ಆದರೆ ಮಾತ್ರ ಫಿಲಾಸಫರ್ ಆಗಲಿಕ್ಕಾಗೋದು. ಪ್ರೇಮ ಕೊಡುವಷ್ಟು ಸಫರಿಂಗ್ ಯಾವ್ದು ಕೊಡ್ತದೆ ಹೇಳು? ಈ ಸಫರಿಂಗ್ ಕೂಡ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಬದುಕುವುದರ ಫಲವಾ? ಯೋಚಿಸಿ ಹೇಳು.

ನೀನ್ಯಾಕಿಷ್ಟ ನನಗೆ ಅಂತ ಕಾರಣ ಹುಡುಕಲು ಯತ್ನಿಸುತ್ತೇನೆ. ಬಹಳ ಸಲ. ಒಂದೇ ಒಂದು ಕಾರಣವೂ ಸಿಗುವುದಿಲ್ಲ. ಯಾವ್ದೋ ಕ್ಷಣದಲ್ಲಿ ಯಾವ ಪೂರ್ವತಯಾರಿಯೂ ಇಲ್ಲದೇ, ತೋಳ್ಪಾಡಿಯವರಂದಂತೆ ಅಪ್ರಜ್ಞಾಪೂರ್ವಕವಾಗಿ ಹುಟ್ಟಿದ್ದಕ್ಕೆ ಯಾವ ಕಾರಣವೂ ಇಲ್ಲ ಕಣೋ. ಗುಲ್ಜಾರ್ ಬರೆಯುತ್ತಾರೆ “ನಿನ್ನನ್ನು ಪ್ರೀತಿಸುವುದಕ್ಕೆ ಅಂತಾ ಕಾರಣಗಳೇನೂ ಇಲ್ಲ, ಪ್ರೀತಿಯ ಸ್ವಭಾವವೇ ಅದು ಅಕಾರಣವಾಗಿರುವುದು” ಇದು ಮೊನ್ನೆ ಎಲ್ಲೋ ಫೇಸ್ಬುಕ್ಕಲ್ಲಿ ಸಿಕ್ಕು, ಅರೆ! ಅವರೂ ನಂಗನಿಸಿದ್ದೇ ಹೇಳಿದಾರಲ್ಲಾ ಅನಿಸಿತು.

ಇದನ್ನೂ ಓದಿ:‌ ಪೋಸ್ಟ್​ ಬಾಕ್ಸ್​ 143 | ಪೋಷಾಕಿಲ್ಲದಿದ್ದರೂ ನೀನು ರಾಜ, ನಾನು ಬೆದರಿದ ಪ್ರಜೆ; ಭಾವದಲ್ಲೇ ಪಾತ್ರ ಬದಲಾಗುತ್ತದಲ್ಲಾ?

ಯಾರಿಗಾಗಿಯೋ, ಏನೇನೋ ಆಗಿ, ಪ್ರಜ್ಞಾಪೂರ್ವಕವಾದ ಹುಸಿ ಸ್ಥಿತಿಯಲ್ಲಿ ಬದುಕಬಾರದು. ನಿನಗೆ ಇದು ಅಷ್ಟು ರುಚಿಸಲಿಕ್ಕಿಲ್ಲ. ನಂಗೊತ್ತಿದೆ. ಆದರೆ ಇದರಿಂದ ಪೂರ್ಣ ವಿಮುಖವಾಗಿ ಯೋಚಿಸೋ ಹುಡುಗನೂ ನೀನಲ್ಲ. ಅದೂ ಗೊತ್ತಿದೆ. ಆದರೆ ನಿಧಾನ ಯೋಚಿಸು, ಅಪ್ರಜ್ಞಾಪೂರ್ವಕ ಸ್ಥಿತಿ ಒಂದು ಶ್ರೇಷ್ಠ ಸ್ಥಿತಿ ಅನಿಸ್ತಿದೆ ನಂಗೆ. ಬರೆಯುವವರು ಬರೆಯುವ ಸಮಯದಲ್ಲಿ ತಮ್ಮನ್ನೆ ಮರೆತು ಒಂತರದ ಅಪ್ರಜ್ಞಾಪೂರ್ವಕ ಸ್ಥಿತೀಲಿರ್ತಾರೆ, ನಟಿಸುವವರೂ. ಈ ಕ್ಷಣ ರೈಲಿನಲ್ಲಿ ಕೂತು ಇದನ್ನು ಬರೆಯುವಾಗ ಸೊಲ್ಲಾಪುರದಿಂದ ಮೈಸೂರಿಗೆ ಹೋಗ್ತಿರೋ ಮಕ್ಕಳು ಬೋಗಿಯ ತುಂಬಾ ಹಾಡಿಕೊಂಡು ಕುಣಿಯುತ್ತಿದ್ದಾರೆ. ಎಂತಾ ಅಪ್ರಜ್ಞಾಪೂರ್ವಕ ಸ್ಥಿತಿ ಅದು! ಅಪ್ರಜ್ಞಾಪೂರ್ವಕ ಸ್ಥಿತಿಗೆ ಒಂದು ಮಟ್ಟಿನ ಮುಗ್ದತೆಯೂ ಪ್ರಾಪ್ತಿಯಾಗಿರುತ್ತದೆ ಅನಿಸುತ್ತದೆ.

ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ವಿನಾಕಾರಣ ಹುಟ್ಟಿದ್ದು ಶ್ರೇಷ್ಠವಾದರೆ, ಹಾಗೆ ಹುಟ್ಟಿದ ಪ್ರೀತಿಯೂ ಅದೆಷ್ಟು ಶ್ರೇಷ್ಠ! ವಾವ್, ಈ ಹೊಸ ಅರಿವು ಎಂತದೋ ಖುಷಿಕೊಡ್ತಿದೆ ಗೆಳೆಯಾ. ಈ ಹಂತದಲ್ಲಿ ನಮಗೆ ಒಂದಿಷ್ಟಾದರೂ ಮುಗ್ಧತೆಯನ್ನೂ ಅಪ್ರಜ್ಞಾಪೂರ್ವಕ ಸ್ಥಿತಿಯನ್ನೂ ಕಲ್ಪಿಸಲು ಸಾಧ್ಯವಾಗುವುದು ಪ್ರೇಮಕ್ಕೆ ಮಾತ್ರ ಅನ್ನುವುದಾದರೆ ಎಂತಾ ಶ್ರೇಷ್ಠ ಭಾವ ಅದು! ಹೌದೂ, ನಿನ್ನ ಮನಸ್ಸು ಏನಾಗಿತ್ತು ಆಗ? ಮೊದಲ ಬಾರಿ ಐ ಲವ್ ಯೂ ಅಂದಾಗ? ಅದು ಪ್ರಜ್ಞಾಪೂರ್ವಕ ಸ್ಥಿತಿಯೋ, ಅಪ್ರಜ್ಞಾಪೂರ್ವಕವೋ? ಅಥವಾ ಆ ಕ್ಷಣ ಅಪ್ರಜ್ಞಾಪೂರ್ವಕವಾಗಿ ಆಡಿ, ನಂತರ ಪ್ರಜ್ಞಾಪೂರ್ವಕವಾಗಿ ಬಹಳ ತರ್ಕದ ಯೋಚನೆ ಮಾಡ್ತಾ ಇರುವೆಯೋ ಒಳಗೊಳಗೇ?
ಹೇಳು ಎಂದಾದರೊಂದು ದಿನ. ನೀನು ನೀನು ಮಾತ್ರವಾಗಿ, ನಾನು ನಾನು ಮಾತ್ರವಾಗಿ ನಾವು ನಾವಾಗಿ ಕೂತು ಮಾತಾಡಬಹುದಾದ ಎಂದಾದರೊಂದು ದಿನ. ನಾನು ಕಾಯುವೆ.‌

ಇದನ್ನೂ ಓದಿ: ಪೋಸ್ಟ್‌ ಬಾಕ್ಸ್‌ 143 | ಪ್ರೇಮಲೋಕದ ಬಾಗಿಲು ಯಾವಾಗ ತೆಗೆಯುತ್ತೆ?

Exit mobile version