Site icon Vistara News

ಪೋಸ್ಟ್‌ ಬಾಕ್ಸ್‌ 143 | ಸೇರುವ ಗುರಿಗಿಂತ ಸಾಗುವ ದಾರಿಯೇ ಹಿತ

ಡಿಯರ್ ಕಂಟ್ರೋಲರ್,

ಥ್ಯಾಂಕ್ಯು ವೆರಿಮಚ್ ಅಷ್ಟೊಂದ್ ಬೈದಿದ್ದಕ್ಕೆ, ಪ್ರವಚನಕ್ಕೆ, ಬುದ್ಧಮಾತಿಗೆ. ನೀ ಹಂಗ್ ಬೈತಾ ಇದ್ರೆ ನನ್ ಬುದ್ಧಿ “ನೋಡ್ ನೋಡು, ಆಪ್ತಮಿತ್ರ ಸಿನೆಮಾದಲ್ಲಿ ಗಂಗಾ ನಾಗವಲ್ಲಿ ಆಗಿ ಬದ್ಲಾಗೋ ತರ, ಯಾವಾಗಾದ್ರೂ ರೊಮ್ಯಾಂಟಿಕ್ ಆಗ್ ಮಾತಾಡೋ ನಿನ್ ಹುಡುಗ ನಿಧಾನಕ್ಕೆ ಸ್ಕ್ರೂ ಡ್ರೈವರ್ ಹಿಡ್ಕೊಂಡಿರೋ ಮೆಕ್ಯಾನಿಕ್ ಆಗಿ ಬದ್ಲಾಗೋದನ್ ನೋಡು” ಅಂತ ಒಳಗೇ ಚುಡಾಯಿಸ್ತಿತ್ತು, ಅದ್ ಹೇಳ್ ಹೇಳೀ ನೀ ಹಂಗೇ ಆಗ್ಬಿಡದೇನೋ, ನಾನೂ ಹ್ಞೂಂ, ಹ್ಞೂಂ ಅಂತಾನೇ ಇದೀನಿ. ಸಾಹೇಬ್ರು ನನ್ನ ಸ್ವಭಾವವೆಂಬೋ ಸ್ಕೂಟರಿನ ನಟ್ಟು ಬೋಲ್ಟು ತಿರಗಸ್ತಾನೇ ಇದಾರೆ!

ನಮ್ ಸ್ವಭಾವಕ್ಕೆ ಏನೇನೋ ಕಾರಣಗಳಿರತ್ತೆ ಕಣೋ, ನಮ್ ಬಾಲ್ಯ, ಪರಿಸರ, ಬೆನ್ನಲ್ಲಿ ಹೊತ್ತ ಅಗೋಚರ ಸಿಹಿಕಹಿಯ ಮೂಟೆಗಳ ಭಾರ, ಇನ್ನೂ ಏನೇನೋ. ಇದೆಲ್ಲದರ ಜೊತೆಗೆ ಪ್ರತಿ ಮನುಷ್ಯನಿಗೂ ಒಂದ್ ಮೂಲಪ್ರವೃತ್ತಿ ಇದ್ದೇ ಇರತ್ತೆ. ಕಷ್ಟ ಅದನ್ ಬದಲಾಯಿಸ್ಕೊಳದು. ಅದರಲ್ಲೂ ನಮ್ ಇಷ್ಟದ ಪ್ರವೃತ್ತಿ ಕೇಳೋ ಸ್ವಭಾವಗಳನ್ನು ಬದಲಿಸಿಕೊಂಡ್ರಂತೂ ಆ ಪ್ರವೃತ್ತಿಯ ದಾರಿನೇ ಮುಚ್ಹೋಗತ್ತೆ. ಅದಾಗಬಾರದಲ್ವ? ಆದ್ರೆ ನಮ್ ಬೆನ್ ನಮಗ್ ಕಾಣದಿರೋ ಹಾಗೆ, ನನ್ ದೋಷಗಳು ನನಗ್ ಕಾಣದೇನೂ ಇರಬಹುದು. ಅದನ್ಯಾರಾದ್ರೂ ಗುರುತಿಸಿ ಹೇಳದು ಒಳ್ಳೆದೇ ಬಿಡು.

ಅಲ್ವೋ, ಫೋಕಸ್ ಇಲ್ಲ. ಸೀರಿಯಸ್ನೆಸ್ ಇಲ್ಲ, ಗುರಿ ಇಲ್ಲ, ಧೃಢತೆ ಇಲ್ಲ ಮಣ್ಣಿಲ್ಲ ಮಸಿ ಇಲ್ಲ ಅಂತ ಬೈತೀಯಲ್ಲಾ… ನನ್ನ ದೃಢತೆಗೆ ಒಂದ್ ಉದಾಹರಣೆ ಕೊಡ್ತೀನ್ ಕೇಳು. ನಂದೂ ನಿಂದೂ ಅಲ್ಲ, ಬಹುಶಃ ನಮ್ ಜನರೇಷನ್ ಎಲ್ರ ದೃಢತೆಯ ಪ್ರಶ್ನೆ ಇದು. ಹಿಂದಕ್ಕಾದ್ರೆ ಪತ್ರ ವ್ಯವಹಾರ ಇರ್ತಿತ್ತು. ಡಬ್ಬಿಗ್ ಹಾಕಿ ಕಾಯಬೇಕಿತ್ತು. ಈಗ ಹಾಗಲ್ಲ, ನಿನ್ ವಾಟ್ಸಪ್ ಆನ್ಲೈನ್ ಅಂತ ತೋರಿಸ್ತಾ ಇರತ್ತೆ, ನಾ ಏನು ಹೇಳಿದರೂ ಈ ಕ್ಷಣ ನಿನಗೆ ತಲುಪೋ ಸಾಧ್ಯತೆ ಇರತ್ತೆ. ಹಾಗಂತ ಮೂರೊತ್ತೂ ಏನಾದ್ರೂ ಹೇಳ್ತಾ ಇರಕಾಗತ್ತ? ಎದುರಿಗ್ ನೀ ಕೂತಿದ್ಯಾ, ಮಾತಾಡಂಗಿಲ್ಲ ಅನ್ನೋತರ ಇದು. ಹೆಂಗಪ್ಪಾ ಇರದು? ಇರ್ತೀನಲ್ವ? ಎಂತಾ ಮಾನಸಿಕ ದೃಢತೆ ಗೊತ್ತಾ ಹಾಗಿರದು?

ಅದೂ ಬಿಡು, ಮೊನ್ನೆ ಒಂದ್ ಪದ್ಯ ಬರದ್ನಾ? ಕಳಿಸ್ಲೇನೋ ಅಂದ್ರೆ “ಸದ್ಯ ಅದೆಲ್ಲ ಬೇಡ” ಅಂದ್ಬಿಟ್ಟೆ. ಪಿಚ್ಚರಲ್ಲಿ ಗಂಗಾ ನಾಗವಲ್ಲಿ ಆಗೋತರ, ನೀನು ಟ್ರಾಫಿಕ್ ಕಂಟ್ರೋಲರ್ ಆಗಿ ಬದಲಾಗಿ, ಬ್ರೇಕ್ ಹಾಕು ನಿನ್ನ ಭಾವನೆಗಳಿಗೆ ಅಂತ ರೆಡ್ ಸಿಗ್ನಲ್ ಒತ್ತಿ ನಿಂತೆ. ಆದ್ರೂ ನಾನು “ಹೋಯ್, ಇದ್ ಬರ್ದಿರದೇ ನಿಂಗೋಸ್ಕರ. ಪಾಪ ಈ ಪದ್ಯಕ್ಕಿರದೇ ನೀ ಒಬ್ಬ ಓದುಗ, ಸುಮ್ನೆ ಓದೋ” ಅಂತ ಹಠ ಮಾಡಿದ್ನಾ? ಇಲ್ಲ ತಾನೇ? ಧೃಢಚಿತ್ತದಿಂದ ಇದ್ದೆ ತಾನೇ? ಪಾಪದ್ ಹುಡುಗಿ ಸಿಕ್ಳು ಅಂತ ಸುಮ್ನೆ ಬೈತಾನೆ. ಒಂದಿಡೀ ದಿನ ಮೋಡ ನೋಡ್ತಾ ನೋಡ್ತಾ ಕಳೆದುಬಿಡ್ತೀನ್ ನಾನು. ಅದು ನಿನ್ನ ದೃಷ್ಟೀಲಿ ಕಳೆದ ಲೆಕ್ಕ, ನನ್ನ ಪಾಲಿಗೆ ಪಡೆದದ್ದು. ಗಳಿಸಿದ್ದೇನು ನೀನು ಅಂತ ಕೇಳಿದರೆ ವಿವರಿಸಬಲ್ಲ ಸಂಗತಿ ಅದಲ್ಲ. ಏನ್ ಮಾಡ್ಲಿ?

ಹತ್ತು ಕೆಲಸಗಳನ್ನ ಏಕಕಾಲದಲ್ಲಿ ಮಾಡ್ತೀನಿ ಅಂತ ಹೊರಡೋದು ನಿನ್ ಪ್ರಕಾರ ಚಾಂಚಲ್ಯ, ನನ್ ಪ್ರಕಾರ ಜೀವನಪ್ರೀತಿ. ಡಿಪಿ ಬದ್ಲಾಯಿಸ್ತಾನೇ ಇರೋದು ಕೂಡ ಚಂಚಲತೆ ಅಲ್ವೋ, ಅದೂ ಜೀವನಪ್ರೀತೀನೇ. ಎಲ್ಲಾ ಕಡೆ ಗುಂಡಿ ತೋಡಿದ್ರೆ ನೀರೆಲ್ಲೂ ಬರಲ್ಲ ಅನ್ನೋದು ನಿನ್ ಕಾಳಜಿ. ಬಗೆಬಗೆಯ ಮಣ್ಣು ಬಗೀತಾ ಅದರ ಗುಣಸ್ವಭಾವ ಬಣ್ಣ ವಾಸನೆಗಳನ್ನ ತಿಳಿಯೋದು ನನ್ ಆಸಕ್ತಿ. ಒಂದೇ ಹಾಡನ್ನ ಬ್ಯಾಕ್ ಟು ಬ್ಯಾಕ್ ಕೇಳ್ತಾ ಇಡೀ ದಿನಾನೇ ಕಳೆದುಬಿಡೋದು ನಿನಗೆ ಟೈಂ ವೇಸ್ಟ್ ಅನ್ಸತ್ತೆ. ನನಗೆ ಅದೊಂದು ಸಂತೃಪ್ತ ಸಂಪನ್ನ ದಿನ! ಈ ಊರ್ ಬಿಟ್ಮೇಲೆ ಆ ಊರ್ ಸೇರಬೇಕು ಅಂತ ಹೊರಡೋ ಗುರಿಯ ದಾರಿ ಸರೀನೇ. ಆದ್ರೆ ಮೈನ್ ರೋಡ್ ಅಕ್ಕಪಕ್ಕದ ಸಣ್ ತಿರುವಲ್ಲಿ ಚೆಂದದೊಂದು ತೊರೆ ಕಂಡ್ರೆ ತರ‍್ಗಣಾ ಅನ್ಸತ್ತೆ. ಗುರಿ ಅನ್ನೋ ಊರ್ ಸೇರಕಿಂತ ತೊರೆಯ ತೀರದ ಸಂಗ ಹಿತ ಅನ್ಸತ್ತೆ. ನಿಧಾನಕ್ ಹೋದ್ರಾಯ್ತ್ ಬಿಡೋ.

Forrest Gump ಸಿನೆಮಾ ನೋಡಿದ್ಯ? ನನ್ ಫೇವರಿಟ್ ಸಿನೆಮಾ ಅದು. ಎಷ್ಟು ಸಲ ನೋಡಿದೀನೋ. ಅವನ ಹಾಗೆ ಸುಮ್ಮನೇ ಎದುರಿಗೆ ಏನ್ ಸಿಗತ್ತೋ ಅದನ್ ಸ್ವೀಕರಿಸ್ತಾ ನಿರುದ್ದಿಶ್ಯ ದಾರೀಲ್ ನಡೀಬೇಕು ಅನ್ಸತ್ತೆ. ಫಾರೆಸ್ಟ್ ಗಂಪಿ ಅನ್ನು ಬೇಕಾರೆ. ನೋ ಪ್ರಾಬ್ಲೆಮ್. ಆದ್ರೆ ಮುಂದಿನ ತಿರುವಲ್ಲಿ ಏನಿದೆ ಅಂತ ಮುಂಚೆಯೇ ಗೊತ್ತಿರದೇ ಹೊಸ ಅಚ್ಚರಿಗೆ ಎದುರಾಗ್ತಾ ಹೋಗೋದ್ರಲ್ಲೂ ಒಂತರಾ ಮಜಾ ಇದೆ. ಗುರಿ, ಸಾಧನೆ ಎಲ್ಲ ಸಿಕ್ಕಾಪಟ್ಟೆ ಹೆವ್ವೀ ಪದಗಳು ಅನ್ಸತ್ತೋ ನಂಗೆ.

ಇದನ್ನೂ ಓದಿ | ಪೋಸ್ಟ್‌ ಬಾಕ್ಸ್‌ 143 | ನದಿಯ ವಾರ್ತೆಗೆ ಕಿವಿದೆರೆದ ಕಡಲು

ಆದ್ರೂ… ಕೋತಿ ತರ ಆಡಬೇಡ್ವೇ.. ಅಂತ ನೀ ಅದೆಷ್ಟು ಮುದ್ದಾಗ್ ಹೇಳ್ತೀಯಾಂದ್ರೆ ಅದನ್ ಪದೇ ಪದೇ ಕೇಳೋಕಾದ್ರೂ ಕೋತಿ ತರ ಆಡ್ತಾನೇ ಇರಣ ಅನ್ಸತ್ತೆ.

ಆದ್ರೆ ಸೀರಿಯಸ್ಸಾಗ್ ಒಂದ್ ವಿಷ್ಯ ಹೇಳ್ಳಾ? ಬಹಳ ಜನರನ್ನ ನಾವು ಆತ್ಮೀಯರು ಅನ್ಕೊಂಡಿರ‍್ತೀವಿ. ನಾವ್ ಹಾಗಂನ್ಕೊಂಡಿರೋ ಎಷ್ಟೋ ಜನ ನಮ್ ಸ್ವಭಾವದ ಓರೆಕೋರೆಗಳನ್ನ ಕಂಡ್ರೂ ಏನೂ ಹೇಳದೇ ಸುಮ್ನಾಗ್ಬಿಡ್ತಾರೆ. ನಮಗ್ಯಾಕೆ? ಅನ್ನೋ ಮನಸ್ಥಿತಿ. ನಮ್ ಹಳ್ಳಿ ಕಡೆ ಒಂದ್ ಮಾತಿದೆ “ಕಣ್ಣಿಲ್ಲಾ ಅಂದ್ರೆ ತಾನೇ ಕಷ್ಟ? ನೀ ಚೆಂದಗಾತಿ ಅಂದ್ಬುಡದಪ್ಪಾ”ಅಂತ. ಅರ್ಥಾತ್ ನಮಗೇನಾಗಬೇಕು? ಏನಾರ ಹಾಳಾಗೋಗ್ಲಿ ಜೈ ಅಂದ್ರಾಯ್ತಪ ಅನ್ನೋ ಕೆಟಗರಿ. ಜಗತ್ತಲ್ಲಿ ಅಂತೋರೇ ಜಾಸ್ತಿ ಕಣೋ. ಈ ಮನಸ್ಥಿತಿ ಇರೊರ‍್ಯಾರೂ ನಮ್ಮೋರಲ್ಲ. ಬೈದ್ ಹೇಳೋರೇ ಬಂಧುಗಳು ಅಂತಾರಲ್ಲಾ, ಆ ಲೆಕ್ದಲ್ಲಿ ನೀ ನನ್ ನಿಜವಾದ ಗೆಳೆಯ. ನೇರವಾಗಿ ಸ್ಪಷ್ಟವಾಗಿ ನೀನೀತರ ಮಾಡದ್ ಸರಿ ಇಲ್ಲ. ನಿನ್ನ ಸ್ವಭಾವದಲ್ಲಿ ಇಂತಿಂತದೆಲ್ಲ ಸರಿಯಾಗ್ಬೇಕು. ಆಗ ನಿನ್ ವ್ಯಕ್ತಿತ್ವ ಇನ್ನೂ ಚೆಂದ ಆಗತ್ತೆ. ನೀ ಇರಬೇಕಾದ್ ಹೀಗಲ್ಲ ಹೀಗೆ ಅಂತೆಲ್ಲ ಅಧಿಕಾರಯುತವಾಗಿ ಹೇಳ್ತೀಯಲ್ಲಾ… ನಿಜವಾದ ಪ್ರೀತಿ ಇದ್ದಲ್ಲಿ ಮಾತ್ರ ಧ್ವನಿಗೆ ಅಂತಾ ಅಧಿಕಾರದ ಟೋನ್ ಬರೋದು. ನಾನು ದೊಡ್ ಬುದ್ವಂತಾ. ನಾನು ಹೇಳುವವನಿದ್ದೇನೆ ನೀ ಕೇಳಬೇಕಷ್ಟೆ ಅನ್ನುವ ಅಹಂಕಾರದ ಮಾತುಗಳಲ್ಲ ನಿನ್ನವು. ಬದಲಾಗಿ ಪ್ರಾಮಾಣಿಕ ಕಾಳಜಿಯಲ್ಲಿ ಅದ್ದಿ ತೆಗೆದವು. ಹೇಳಬೇಕಾದ್ದನ್ನು ಸ್ಪಷ್ಟವಾಗಿ ಹೇಳಿ ಮುಗಿಸಿ, ಇದನ್ನು ಯಾಕ್ ಹೇಳಿದೆ ಗೊತ್ತಾ? ಅಂತ ವಿವರಿಸುವಾಗ ತಗ್ಗಿದ ದನಿಗೆ ಅಷ್ಟೇ ಬಿಂಕದಲಿ ಸಿಹಿತುಂಬಿ… ಹಹ್ಹಹ್ಹ. ಚೆಂದ ಕಣೋ ನೀನು. blessed to have u ಅನ್ಸತ್ತೆ. ನನ್ನ ಆಯ್ಕೆಗೆ ನಾನೇ ಕಾಲರ್ ಎತ್ಕೊಳಣಾನ್ಸತ್ತೆ. ನಿಜ್ಜಾ!

ಬದುಕಿನ ಕಡೆಗೆ ನಮ್ಮಿಬ್ಬರ ನೋಟದಲ್ಲಿ ಭಿನ್ನತೆಗಿಂತಲೂ, ವೈರುಧ್ಯದ್ದೇ ಒಂದು ಪಾಲು ಹೆಚ್ಚು. ನಿನ್ನೆಲ್ಲ ಮಾತುಗಳಿಗೂ ನನ್ನಲ್ಲಿ ಸಮರ್ಥ ಪ್ರತಿಮಾತುಗಳೂ ಇರಬಹುದು. ಹೀಗಲ್ಲ, ಇದು ಹೀಗೆ ನೋಡು ಅಂತ ವಾದಿಸಿ ಗೆಲ್ಲಬಹುದೇನೋ. ಆದರೆ ವಾದಿಸಲಾರೆ ಹುಡುಗಾ, ವಾದದಲ್ಲಿ ಗೆಲ್ಲುವ ಖುಷಿಗಿಂತ ನಿನ್ನನ್ನು ಗೆಲ್ಲುವ, ನೀನು ಗೆಲ್ಲುವ ಖುಷಿಯೇ ದೊಡ್ಡದು. ಬುದ್ಧಿ ಹೇಳುವಾಗ ನಿನಗೇ ಗೊತ್ತಿಲ್ಲದೆ ಅಪ್ಪನಾಗುವ, ಹಾಗಲ್ಲ ಕಣೇ ಹೀಗೆ ಅನ್ನುವಾಗ ಅಮ್ಮನಾಗುವ ನಿನ್ನ ರೂಪಾಂತರಗಳನ್ನು ನೋಡುತ್ತಾ, ಇನ್ನಷ್ಟು ಮತ್ತಷ್ಟು ಪುಟ್ಟ ಕೂಸಾಗುವ ಸಂಪತ್ತಿನ ಮುಂದೆ ಸವಾಲಿಗೆ ಎಂತಾ ಬೆಲೆ ಹೇಳು? ಏನಾದ್ರೂ ಬುದ್ಧಿ ಹೇಳು ಕೇಳ್ತೀನಿ. ಮಗು ತರ ಆಡ್ಬೇಡ ಅಂತ ಮಾತ್ರ ಹೇಳ್ಬೇಡ. ನಿಂಜೊತೆ ಹಾಗಿರದೇ ಇಷ್ಟ ನಂಗೆ. ಪ್ರಬುದ್ಧತೆಯ ಭಾರ ಕಳಚಿ, ಹಗುರಾಗಿ, ಮತ್ತೆ ಮಗುವಾಗಿ.

ಇದನ್ನೂ ಓದಿ | ಪೋಸ್ಟ್‌ ಬಾಕ್ಸ್‌ 143 | ತುಂಟ ಕೋತಿಗೂ ಗಂಭೀರ ಗಜಕ್ಕೂ ಪ್ರೇಮ ಅಂದ್ರೆ..

ಆದ್ರೆ ದುಷ್ಟಾ, ಪಾಪ ಮಗೂಗೆ ಇಷ್ಟೆಲ್ಲಾ ಬೈದಿದ್ದಕ್ಕೆ ಶಿಕ್ಷೆ ಖಂಡಿತಾ ಇದೆ ನಿಂಗೆ. ಎಷ್ಟೇ ಬ್ಯುಸಿ ಇದ್ರೂ ನಂಗೋಸ್ಕರ ಟೈಂ ಮಾಡ್ಕೊಂಡು ಜಯನಗರದ ರಾಜ್ ಲಸ್ಸಿ ಬಾರಲ್ಲಿ ಫಲೂಡ ಕೊಡ್ಸಬೇಕು… “ಎಲ್ಲಿದ್ದೆ ಇಲ್ಲೀತಂಕ, ಎಲ್ಲಿಂದ ಬಂದ್ಯಪ್ಪಾ, ನಿನ್ನ ಕಂಡು ನಾ ಯಾಕೆ ಕರಗಿದೆನೋ?” ಅಂತ ಗುನುಗ್ತಾ ತಿನ್ಬೇಕ್, ಒಂದೇ ಫಲೂಡ. ನಿಂಗೆ ಎರಡೇ ಎರಡು ಸಿಪ್ ಅಷ್ಟೇ ಶೇರ್ ಮಾಡದು. ಒಕೆನಾ?

ಅಲ್ ಕೂತಾಗ್ಲೂ “ಬೀ ಸೀರಿಯಸ್” ಅನ್ಬೇಕಲಾ ನೀನೂ… ಗಂಗಾ ನಾಗವಲ್ಲಿ ಆದಂಗೆ ನಾ ಏನಾಗ್ತೀನೋ ಗೊತ್ತಿಲ್ಲ ಮಾತ್ರ!

(ಅಂಕಣಕಾರ್ತಿ ಕತೆಗಾರರು. ಯೋಳ್ತೀನ್‌ ಕೇಳಿ- ಇವರ ಅಂಕಣ ಬರಹಗಳ ಸಂಕಲನ)

Exit mobile version