Site icon Vistara News

ಪೋಸ್ಟ್‌ ಬಾಕ್ಸ್‌ 143 | ಶಾಣ್ಯಾ ದುಷ್ಟರಾಗೋದು ಅಂದ್ರೇನು ಅಂತ ಗೊತ್ತಾ?

ಹೋಯ್ ಮಹಾಜಾಣ,

ಎಲ್ಲಿದ್ದೀ? ನಾ ಗದಗ ಸುತ್ಕೊಂಡು ಬಂದೆ. ಕಪ್ಪತ್ತಗುಡ್ಡ ಅನ್ನೋ ಕರ್ನಾಟಕದ ಮತ್ತೊಂದು ಸಹ್ಯಾದ್ರಿ ನೋಡಕ್ ಹೋಗಿದ್ದೆ. ಸಾವಿರ ಅಡಿಗಳ ಮೇಲೆ ಸುಯ್ಯೋ ಅಂತ ಒಂದೇ ಸಮ ನಮ್ಮನ್ ಹೊತ್ಕೊಂಡೇ ಹೋಗ್ಬಿಡತ್ತೇನೋ ಅನ್ನೋ ರೇಂಜಿಗೆ ಬೀಸೋ ಗಾಳಿಗೆ ಮುಖವೊಡ್ಡಿ ಕೂತಾಗ ನಿನ್ ನೆನಪಾಯ್ತು. ಆ ಹೊತ್ತಲ್ ನೀನೂ ನನ್ ಪಕ್ಕ ಕೂತಿದ್ರೆ ಅನ್ನೋ ಕಲ್ಪನೆ ಆ ಗಾಳಿಯಷ್ಟೇ ಹಿತವಾಗಿತ್ತು. ಫೋನಾದ್ರೂ ಮಾಡ್ ಮಾತಾಡಣ ಅಂದ್ರೆ ಆ ಕಾಡಲ್ಲಿ, ಜನರೇ ಇಲ್ಲದ ಸಾವಿರ ಅಡಿ ಹೈಟಲ್ಲಿ ಎಲ್ಲಿಂದ ನೆಟ್‌ವರ್ಕ್‌ ಸಿಗಬೇಕ್ ಹೇಳು? ಆದ್ರೆ ನೆನಪಿಗೆ, ಕನಸಿಗೆ ಟವರು, ನೆಟ್‌ವರ್ಕ್ ಯಾವ್ದೂ ಬೇಕಿಲ್ಲವಲ್ಲ.

ಹಾಗೇ ಗಾಳೀಲೂ, ನಿನ್ ನೆನಪಲ್ಲೂ ಒಟ್ಟೊಟ್ಟಿಗೇ ತೇಲೋವಾಗ ನಮ್ಮ ಗುಂಪಲ್ಲಿದ್ದ ಉತ್ತರ ಕರ್ನಾಟಕದ ಹಿರಿಯರೊಬ್ರು ಬಂದು ಪಕ್ಕದಲ್ಲಿ ಕೂತ್ರು. ಅವ್ರು ಹಿರಿಯ ಅಧಿಕಾರಿಗಳಾಗಿದ್ದವರು, ಈಗ ರಿಟೈರ್ ಆಗಿದಾರೆ. ಕವಿಗಳು ಕೂಡ. “ನಿನ್ ಬೆಸ್ಟ್ ಬಾಯ್ ಫ್ರೆಂಡ್ಸ್ ಎಲ್ಲಾ ೬೦ ಪ್ಲಸ್ಸೇ ತಾನೇ?” ಅಂತ ಆಗಾಗ್ ಛೇಡಿಸ್ತಿರ್ತಾರೆ ನನ್ ಫ್ರೆಂಡ್ಸೆಲ್ಲಾ. ಹಿರಿಯ ಜೀವಗಳ ಮಾತು ಕೇಳಕಿಷ್ಟ ಕಣೋ ನಂಗೆ. ಅವರೊಂದು ಜೀವನಾನುಭವದ ಪುಸ್ತಕ. ಕಷ್ಟ- ಸುಖಗಳ ಮೂಟೆ. ಸೋಲು ಗೆಲುವುಗಳ ಫೋಲ್ಡರು… “ಹೂಂ, ಸರಿ. ಮುಂದಕ್ ಹೇಳು” ಅಂತಿದ್ಯಾ ಅಲ್ವ? ಗೊತ್ತಾಯ್ತು.

ಅದೇ ಕಣೋ, ಹೇಳಿದ್ನಲ್ಲಾ, ಆ ಹಿರಿಯರು, ಪೋಲೀಸ್ ಪಾಟೀಲ್ ಅಂತ ಅವರ ಹೆಸರು. ಇದ್ಯಾವ ತರ ಹೆಸರೇ? ಅಂತ ಕೇಳ್ಬೇಡಪ್ಪ. ಆ ತರ ಹೆಸರಿದೆ. ಅದಕ್ಕೊಂದ್ ಕತೆಯೂ ಇದೆ. ಇನ್ಯಾವಾಗಾದ್ರೂ ಹೇಳ್ತೀನ್ ನಿಂಗೆ. ಗುಡ್ಡದ ಮೇಲ್ ಕೂತು ಅವರ ಮನೆ, ಸಂಸಾರದ ಬಗ್ಗೆ ಮಾತಾಡ್ತಿದ್ರು. ʻʻಎರಡ್ ಗಂಡು ಒಂದ್ ಹೆಣ್ಣು ಮೂರೂ ಮಕ್ಳು ದೊಡ್ ದೊಡ್ ಓದು ಓದಿ, ಬೆಂಗಳೂರಾಗ ದೊಡ್ ದೊಡ್ ಉದ್ಯೋಗದಾಗದಾರ. ಎಲ್ಯಾರ ಇರ್ಲಿ, ಏನಾರ ಮಾಡ್ತಿರ್ಲಿ, ನಾ ಸಣ್ ವಯಸಿಂದ ಮತ್ತೀಗ್ಲೂ ಅವರಿಗ್ ಹೇಳೂದ್ ಒಂದಾ ಶಾಣ್ಯಾ ದುಷ್ಟರಾಗಬೇಡ್ರಪ್ಪ, ಮತ್ತೇನರ ಆಗ್ರಿ ಅಂತ” ಅಂದ್ರು.

ಶಾಣ್ಯಾ ದುಷ್ಟರಾಗೋದು? ಇಂಟರೆಸ್ಟಿಂಗ್ ಅನಿಸ್ತಿದೆಯಲ್ವ ನಿಂಗೆ? ನಂಗೂ ಹಾಗೇ ಅನಿಸ್ತು. ಚೂರು ಗ್ರಹಿಸಿದ್ರೂ, ಅದ್ ಸರಿಯೋ ತಪ್ಪೋ, ಅವರ ವಿವರ ಏನಿದೆಯೋ ಕೇಳಣ ಅನಿಸ್ತು. ಅವರನ್ ಕೇಳ್ದಾಗ ಹೀಗ್ ವಿವರ ಕೊಟ್ರು. ಮಜಾ ಇದೆ ಕೇಳು. ಶಾಣ್ಯಾರು ಅಂದ್ರೆ ಗೊತ್ತಲ್ಲ ನಿಂಗೆ? ಬುದ್ವಂತರು. ದುಷ್ಟರು ಅಂದರೆ ಕೆಟ್ಟೋರು. ಯಾರೋ ಕೆಟ್ಟೋರಾಗೋದಕ್ಕಿಂತ ಈ ಶಾಣ್ಯಾ ಮಂದಿ ಅಂದ್ರೆ ಬುದ್ವಂತರು ಕೆಟ್ಟೋರಾದ್ರೆ ಅಪಾಯ ಅಂತ ಅವರ ನಂಬಿಕೆ. ಮತ್ತೆ ಅವರು ಸಮಾಜಾನ ಒಡೆಯೋ ಹಾಳು ಮಾಡೋ, ಶೋಷಿಸೋ ರೀತಿಯಲ್ಲಿ ಬುದ್ವಂತಿಕೆ ಬಳಸ್ತಾರೆ. ಬುದ್ದಿವಂತ ವಂಚಕರಾಗ್ತಾರೆ. ಅರ್ಥ ಆಗ್ತಿದ್ಯ ನಿನಗೆ? ಈಗ ಯಾರೋ ಅನಕ್ಷರಸ್ಥ ಕಳ್ಳ ಆದ್ರೆ ಏನಪ್ಪ ಕದೀತಾನೆ? ಹೇಗಪ್ಪ ಕದೀತಾನೆ? ಮಾಮೂಲಿ ಸಾಂಪ್ರದಾಯಿಕ ಕಳ್ತನ ಅವನದು. ಅದೇ ಬುದ್ವಂತ ಕಳ್ಳ ಆದ್ರೆ? ನೀಟಾಗಿ ಡ್ರೆಸ್ ಮಾಡ್ಕೊಂಡು ಕಂಪ್ಯೂಟರು, ಸ್ಮಾರ್ಟ್‌ಫೋನು ಇಟ್ಕೊಂಡ್ ಕದೀತಾನೆ. ಎರಡೂ ಕಳ್ತನಾನೇ ಒಪ್ಕೊಂಡೆ. ಆದ್ರೆ ಕದಿಯಕ್ ಉಪಯೋಗ್ಸೋ ಬುದ್ವಂತಿಕೇನ ದೇಶಕ್ ಒಳ್ಳೆದಾಗಕ್ ಉಪಯೋಗಿಸಬಹುದಲ್ವ? ಒಂತರಾ ಬಾಳ ದೊಡ್ ಅರ್ಥ ಇದೆ ಅನಿಸ್ತಿದೆ ಈ ಎರಡು ಪದಕ್ಕೆ. ರಾಜಕೀಯ, ಮಾಧ್ಯಮ ಎಲ್ಲಾನೂ ನೆನಪಿಸ್ಕೋ, ಶಾಣ್ಯಾ ದುಷ್ಟತನ ಐ ಮೀನ್ ಬುದ್ದಿವಂತ ವಂಚನೆ ಎಲ್ಲ ಕಡೆನೂ ಕೆಡವೋ ಕೆಲ್ಸಾನೇ ಮಾಡತ್ತೆ ಕಟ್ಟೋದಲ್ಲ. ಹಾಗನಿಸ್ತಿಲ್ವ ನಿಂಗೆ?

ಇದನ್ನೂ ಓದಿ | ಪೋಸ್ಟ್‌ ಬಾಕ್ಸ್‌ 143 | ಸೇರುವ ಗುರಿಗಿಂತ ಸಾಗುವ ದಾರಿಯೇ ಹಿತ

ನಿಂಗ್ ಹೇಳಿದ್ನಾ? ನನ್ ಕ್ಲಾಸ್‌ಮೇಟ್ ಒಬ್ಬ ಕಾಲೇಜಲ್ಲಿ ಯುನಿವವರ್ಸಿಟಿಗೇ ಫಸ್ಟ್ ರ‍್ಯಾಂಕ್. ಚಿಕ್ ವಯಸಿಗೇ ತಾಲೋಕಾಫೀಸಲ್ಲಿ ದೊಡ್ ಅಧಿಕಾರಿ. ಅದೂ ನಮ್ ತಾಲೋಕಲ್ಲೆ. ಎಷ್ಟು ಲಂಚದ ಮನುಷ್ಯ ಆಗ್ಹೋದ ಅಂದ್ರೆ… ಅವನನ್ನ ನೋಡ್ದಾಗೆಲ್ಲ ಇವನು ಇದಕ್ಕಾ ರ‍್ಯಾಂಕ್ ಬಂದಿದ್ದು ಅಂತ ಬಾಳ ಬೇಜಾರಾಗತ್ ನನಗೆ. ಯಾವ ದಾಖಲೇನ ಹೇಗ್ ಮಗುಚಿ, ಯಾವ್ ಭೂಮೀನ ಯಾರಿಗ್ ಮಾರಿ, ಎಲ್ಲಿ ಲಾಭ ಮಾಡ್ಬೇಕು ಅನ್ನೋದಕ್ಕೆ ಅವನ ಬುದ್ವಂತಿಕೆ ಉಪಯೋಗ್ಸೋಕಿಂತ ಒಂದ್ ವಿಧವಾ ವೇತನಕ್ಕೆ, ಆರ್‌ಟಿಸಿಗೆ, ಬೆಳೆ ಪರಿಹಾರಕ್ಕೆ ಇನ್ನೊಂದಕ್ಕೆ ಮತ್ತೊಂದಕ್ಕೆ ಅಂತ ದಿನಾ ಅಲೆಯೋ ಜನರ ಕಷ್ಟಗಳನ್ನ ಸ್ಮಾರ್ಟ್‌ ಆಗಿ ಹೇಗ್ ಬೇಗ ಪರಿಹಾರ ಮಾಡಬಹುದು ಅಂತ ಯೋಚ್ಸಕ್ ಬಳಸಿದ್ರೆ ಎಷ್ಟ್ ಚೆನಾಗಿರದಲ್ವ? ಅದ್ರಲ್ಲೂ ಬಡವರು, ಮಧ್ಯಮವರ್ಗದೋರು ಆಗಿದ್ದು, ಓದಿ ವಿದ್ಯಾವಂತರಾಗಿ ಕುರ್ಚೀಲ್ ಕೂತು, ಮತ್ತೆ ಬಡವರನ್ನೆ ಸುಲಿಯೋಕೆ ಓದಬೇಕ್ಯಾಕೆ? ಬುದ್ವಂತಿಕೆ ಗಳಿಸಬೇಕ್ಯಾಕೆ ಅಲ್ವ?

“ಶಾಣ್ಯಾ ದುಷ್ಟರಾಗಬೇಡ್ರಪಾ” ಅಂದ್ರೆ ಇಷ್ಟೆಲ್ಲ ವಿದ್ಯಾವಂತರಾಗಿ ಕೆಟ್ಟವರಾಗ್ಬೇಡ್ರಪ್ಪಾ, ಸಮಾಜಕ್ ಕೇಡು ಮಾಡಬೇಡ್ರಪ್ಪ, ವಂಚಕರಾಗ್ಬೇಡ್ರಪಾ ಭಗವಂತ ಕೊಟ್ಟಿರೋ ಬುದ್ದೀನ ಜಾಣತನಾನ ಕೆಟ್ಟದಕ್ ಬಳಸಬೇಡ್ರಪಾ ಅಂತ ಅವರ ಅರ್ಥ…ಅದನ್ನ ಎಷ್ಟು ಸರಳವಾಗ್ ಹೇಳಿದಾರ್ ನೋಡು. ಕೆದಕಿದಷ್ಟೋ ಹೊಸ ಅರ್ಥ ಆ ಎರಡು ಪದಕ್ಕೆ. ಅಲ್ವಾ?

ನಿನ್ನೂ ನಾನು ತುಂಬಾ ಜಾಣ, ಬುದ್ವಂತ ಅಂತ ಹೊಗಳ್ತಾ ಇರ್ತೀನಲ್ಲಾ… ಸುಳ್ಳೇನಲ್ಲ, ನಿಜವಾಗ್ಲೂ ಬುದ್ವಂತ ನೀನು. ಇದುವರ್ಗೂ ದುಷ್ಟ ಆಗಿಲ್ಲ ಅಂತ ನಂಬಿದೀನಿ. ಮುಂದೆ ಕೂಡ ಆಗಬೇಡ. ಶಾಣ್ಯಾ ದುಷ್ಟ ಮೊದಲೇ ಆಗಬೇಡ. ಹಾಗಾದ ದಿನ ನಿಂಜೊತೆ ನಾನಿಲ್ಲ. ಮತ್ತೆ ಇದು ನಂಗೂ ಅಪ್ಲೈ ಆಗತ್ತೆ ಆಯ್ತಾ? ನಾವ್ ಶಾಣ್ಯಾ ದುಷ್ಟರಾಗೋದ್ ಬೇಡಾಂತ ಪರಸ್ಪರ ಪ್ರಾಮಿಸ್ ಮಾಡ್ಕೊಳಣ. ಅಕಸ್ಮಾತ್ ಹಾಗಾಗೋ ಕಡೆ ಹೋಗ್ತಿದ್ರೆ ಪರಸ್ಪರ ಚೂರ್ ತಲೆಮೊಟಕಿಕೊಳ್ಳಣ. ಯಾಕಂದ್ರೆ ಈ ಶಾಣ್ಯಾ ದುಷ್ಟರೇ ಸಮಾಜಕ್ಕೆ ಬಾಳ ಅಪಾಯಕಾರಿ. ಅಲ್ವೇನೋ ಮುದ್ದೆ? ಈಗ್ ನಿನ್ ತಲೇಲಿ ಈ ಶಾಣ್ಯಾ ದುಷ್ಟರ ಲಿಸ್ಟ್ ಓಡ್ತಾ ಇದೀಯ? ಒಕೆ. ಸಿಕ್ಕಾಗ್ ಹೇಳು. ಅಥವಾ ಅಂತೋರ್ ಬಗ್ಗೆ ಯೋಚ್ಸಿ ಟೈಂ ವೇಸ್ಟ್ ಮಾಡೋ ಬದಲು. ನಿನ್ ಶಾಣ್ಯಾತನಾನ ಬೇರೆದಕ್ ಉಪಯೋಗ್ಸು. ಐ ಮೀನ್ ಒಳ್ಳೆ ಕೆಲ್ಸಕ್ಕೆ . ಆಯ್ತಾ? ಬೈ.

ಇದನ್ನೂ ಓದಿ | ಪೋಸ್ಟ್‌ ಬಾಕ್ಸ್‌ 143 | ನದಿಯ ವಾರ್ತೆಗೆ ಕಿವಿದೆರೆದ ಕಡಲು

Exit mobile version