ಕಿವಿಯಾಗೋನೇ,
ಇದೆಲ್ಲ ನಿನಗ್ಯಾಕೆ? ಅಂತ ನನಗೂ ಅನಿಸ್ತಾನೇ ಇರತ್ತೆ ಕಣೋ. ಪ್ರತಿ ಅನವಶ್ಯಕ ಮಾತು ಮತ್ತು ಮೆಸೇಜಿಗೆ. ಇಲ್ ಹೋದೆ. ಅಲ್ ಬಂದೆ, ಇದ್ ಹೀಗಾಯ್ತು ನೋಡು, ಹಾಗಾಯ್ತು ನೋಡು… ಹೀಗೇ ಏನೆಲ್ಲಾ ಹೇಳ್ತಾನೇ ಇರ್ತೀನಿ ನಿನಗೆ. ಆ ವಿಷಯ ಕಟ್ಟಿಕೊಂಡು ನಿನಗೆ ಆಗಬೇಕಾದ್ದು ಏನೇನೂ ಇರಲ್ಲ. ಆದರೂ ಹೇಳ್ತಿರ್ತೀನಿ. ಅನಗತ್ಯವಾಗಿ. “ಒಕೆ, ನಿಂಗರ್ಥ ಆಗಿದೆಯಲ್ಲಾ ಇದು. ಸದ್ಯ, ಇನ್ಮೇಲ್ ತಲೆತಿನ್ಬೇಡ” ಅಂತೀಯಾ ಗೊತ್ತು. ಹುಂ, ಅರ್ಥ ಆಗಿದೆ. ನೀ ಎಲ್ಲಿರ್ತೀಯೋ ಯಾವ ಪರಿಸ್ಥಿತಿಲಿರ್ತೀಯೋ, ಯಾವ ಮೂಡ್‌ನಲ್ಲಿರ್ತೀಯೋ ಗೊತ್ತಿಲ್ದೆ ದಬಾ ದಬಾ ಏನೋ ಹೇಳೋದು ಸರಿಯಲ್ಲ. ಗೊತ್ತೋ ನಂಗೂ. ಹೀಗೆ ಎಲ್ಲಾನು ವರದಿಗಾರಿಕೆ ಮಾಡಬಾರ್ದು ಅನ್ಕೋತಾನೇ ಇರ್ತೀನಿ. ಭೀಷ್ಮನನ್ನ ನೆನಪಿಸಿಕೊಂಡು ಎಷ್ಟೇ ಗಟ್ಟಿಯಾಗಿ ಶಪಥ ಮಾಡಿದ್ರೂ ಮತ್ತೆ ಮತ್ತೆ ಮುರೀತೀನಿ. “ಕಣ್ಣಲ್ಲೆ ಇದೆ ಎಲ್ಲಾ ಕಾಗದ, ನೀನೇ ನನ್ನಯಾ ಅಂಚೆಪೆಟ್ಟಿಗೆ” ಅಂತ ಜಯಂತ್ ಸರ್ ಬರ್ದದ್ನಾ ಸೀರಿಯಸ್ಸಾಗ್ ತಗೊಂಡ್ನಾಂತ? ಯಾಕಿರಬಹುದು ಹೀಗೆ?
ಅಲ್ವೋ ನನಗೇನು ಫ್ರೆಂಡ್ಸ್ ಕಡಿಮೆ ಇದಾರ? 16ರಿಂದ 96 ತನಕ ಎಲ್ಲಾ ತರದವ್ರೂ ಇದಾರೆ. ಸಿಕ್ಕಾಪಟ್ಟೆ ದೊಡ್ಡ ಬಳಗ ನಂದು. ಸೆನ್ಸಿಬಲ್ ಜನವೇ ಬಹುತೇಕ ಎಲ್ರೂ. ನಾ ಏನಾದ್ರೂ ಹೇಳಿದ್ರೆ ಕೇಳಲ್ಲಾಂತರ? ಪ್ರತಿಕ್ರಿಯಿಸಲ್ಲಾಂತರ? ಆದರೂ ಏನಾದ್ರೂ ಆದ ಕೂಡ್ಲೆ ನಿನಗೇ ವರದಿ. ಯಾಕೆ ಹೀಗೆ? ಪುಟ್ಟ ಹುಡುಗಿ ಶಾಲೆಯಿಂದೋಡಿ ಬಂದು ಅಮ್ಮನಿಗೋ, ಅಪ್ಪನಿಗೋ ವರದಿ ಒಪ್ಪಿಸುವ ಹಾಗೆ. ನನ್ ಚಿಕ್ ಚಿಕ್ಕ ಬೇಸರ, ಪುಟ್ ಪುಟಾಣಿ ಖುಷಿಗಳು, ಅಚ್ಚರಿಗಳು, ಹತಾಶೆಗಳು, ಸಿಹಿ-ಕಹಿ, ಹಠ, ಕುತೂಹಲ, ಸೋಲು, ಗೆಲುವು, ಭಯ, ನೆನಪು, ಮರೆವು, ದಿಕ್ಕುತೋರದ ಘಳಿಗೆಯ ಸಲಹೆ ಎಲ್ಲಕ್ಕೂ ನನಗೆ ನಿಂದೇ ನೆನಪು. ನಿನಗೆ ಹೇಳೋದು ಅಂದ್ರೆ ನನಗೆ ಸಂಭ್ರಮ, ನಂಬಿಕೆ, ಸುರಕ್ಷತಾ ಭಾವ. ಮುಖ್ಯ, ತಿರುಗಿ ಪುಟ್ಟ ಹುಡುಗಿಯಾದಂತಾ ವಿಚಿತ್ರ ಸಮಾಧಾನ.
ಒಂದೊಂದ್ಸಲ ಅನ್ಸತ್ತೆ ನಾವು ಆಯಾ ವಯಸಲ್ಲಿ ಸರಿಯಾಗಿ ಪೋಷಿಸ್ದೇ ಇರೋ, ನಿರ್ಲಕ್ಷಿಸಿರೋ ಭಾವಗಳು ಇನ್ಯಾವ್ದೋ ವಯಸಲ್ಲಿ ನಂಗ್ ಹಸಿವು ಅಂತ ಎದ್ ಕೂತ್ಕೋತಾವೇನೋ. ಬಹುಶಃ ಪುಟ್ಟ ಲಂಗದ ಹುಡುಗಿಯಾಗಿದ್ದಾಗ ನನ್ನ ಸುತ್ತ ಕಿವಿಗಳೇ ಇರಲಿಲ್ಲ ಯಾರಿಗೂ. ಮಳೆಗೆ ಬೆದರಿದ ಗುಬ್ಬಚ್ಚಿಯ ಹಾಗೆ ತರಗುಡುತ್ತಾ, ಕಂಪಿಸುತ್ತಾ ಮುದುಡಿಕೊಂಡು ಕೂತಿದ್ದೆನೇನೋ ಆಗ. ಒಂದಲ್ಲಾ ಒಂದು ದಿನ ಕಳೆದೀತು ಮಳೆಗಾಲ ಬಂದೀತು ಸೂರ್ಯಕಿರಣ ಅಂತ ಕಾಯ್ತಾ… ಪುಟ್ಟ ಹಕ್ಕಿಗೆ ರೆಕ್ಕೆ ಬಲೀತು. ಹಾರ್ತು, ಲೋಕ ನೋಡ್ತು… ಮುದುಡಿ ಕೂತಿದ್ದ ಮೂಲೆಯ ಬಿಟ್ಟೆದ್ದ ಹಕ್ಕಿ ಎಷ್ಟೆಲ್ಲಾ ದಾಪುಗಳ ದಾಟಿದ್ದಾಯ್ತು!
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 | ಕಣ್ಣೀರಿಗೆ ಸ್ಪಂದಿಸುವಾಗ ಮನುಷ್ಯ ದೇವರಾಗ್ತಾನೆ!
ಆದರೆ ಗೆಳೆಯಾ… ಒಂದು ಸರಿಯಾದ ಕಿವಿ ಸಿಕ್ಕಿರಲೇ ಇಲ್ಲ ನೋಡು. ಕಿವಿ ಇದ್ದವರಿಗೆಲ್ಲಾ ಹೇಳಲಿಕ್ಕಾಗದು ಕಣೋ. ಆ ಕಿವಿಗಳ ಮೂಲಕ ಹಾದು ತಲುಪುವ ಹೃದಯವೂ ಮುಖ್ಯ ತಾನೆ?
ನಿನಗೆ ಕಿರಿಕಿರಿ ಮಾಡ್ತಿದೀನಿ ಅನ್ಸತ್ತೆ. ಆದರೆ ಎಲ್ಲ ಮೆಸೇಜು ಸೇರಿದರೂ ನಿನ್ನ ದಿನದ ಅವಧಿಯ 5 ನಿಮಿಷಕ್ಕಿಂತ ಹೆಚ್ಚು ಎಂದೂ ಪಡೆದಿಲ್ಲ ಅಂತ ಖಾತ್ರಿ ಮಾಡಿಕೊಂಡು ಸಮಾಧಾನಮಾಡಿಕೊಳ್ತೇನೆ. ಆದರೂ ಅಷ್ಟು ಮಾತ್ರ ಸಮಯವನಾದರೂ ಯಾಕೆ ಕಿತ್ಕೋಬೇಕು ಅನಿಸತ್ತೆ. ಅಷ್ಟು ಮಾತ್ರ ಸಮಯ ನಿನ್ನನ್ನು ಕೇಳುವ ಹಕ್ಕಿರದ ಮೇಲೆ ಅದೆಂತಾ ಸಂಬಂಧ ಅನಿಸುತ್ತದೆ. ಗೋಳ್ ಹುಯ್ಕೋತೀನಿ ತುಂಬಾ ಅನಿಸತ್ತೆ. ಮೊದಲೇ ವೈರುಧ್ಯ ನಾವು. ನೀನಿರುವ ಹಾಗೇ ನಿನ್ನನ್ನು ನಾನು ಒಪ್ಪಿಕೊಳ್ಳುವಾಗ, ನಾನಿರುವ ಹಾಗೇ ನೀನು ನನ್ನನ್ನು ಒಪ್ಪಬಾರದೇಕೆ ಅನಿಸತ್ತೆ. ಹಾಗೆ ಕೇಳುವುದೂ ಒಂದು ರೀತಿಯ ಹೇರಿಕೆಯೇ ಅಲ್ಲವಾ ಅನಿಸತ್ತೆ.
ನಿಜವಾದ ನಿಜ ಏನ್ ಗೊತ್ತಾ? ನಾನು ನಿನಗೆ ಏನನ್ನೂ ಹೇಳಿರೋದೇ ಇಲ್ಲ. ನನ್ನ ವರದಿಗಳೆಲ್ಲ ಬ್ರೇಕಿಂಗ್ ನ್ಯೂಸಲ್ಲ. ನನ್ನನ್ನು ಛಿದ್ರಗೊಳಿಸಿದ/ಗೊಳಿಸುವ ಸಂಗತಿಗಳನ್ನು ನಾನು ನಿನಗೆ ಹೇಳುವುದೇ ಇಲ್ಲ. ಎದೆಛಿದ್ರಗಳನ್ನೆಲ್ಲ ಆ ಕ್ಷಣವೇ ವರದಿ ಮಾಡಲಾಗದು ಗೆಳೆಯ, ಅದಕ್ಕೆ ಕಾಲ, ಸ್ಥಳ, ಸನ್ನಿವೇಶಗಳು ಕೂಡಿಬರಬೇಕು. ಹಾಗಾಗಿ ಬ್ರೇಕಿಂಗ್ ನ್ಯೂಸುಗಳನ್ನು ಬೆಚ್ಚಗೆ ಮಲಗಿಸಿ, ಹೊದೆಸಿ, ಸಣ್ಣಪುಟ್ಟ ನಿತ್ಯವರದಿಗಳನ್ನು ವಟಗುಟ್ಟುತ್ತೇನೆ ನಿನ್ನೊಂದಿಗೆ…ದಿನದಿನವೂ. ಆದರೆ ನೀನು ಹಾಗಲ್ಲ, ಅನಿರೀಕ್ಷಿತವಾಗಿ ಏನನ್ನೋ ಹೇಳಿಬಿಡುತ್ತೀ. ಕಡಿಮೆ ಸಾಲುಗಳಲ್ಲಿ. ಕಿವಿಮನಸು ತುಂಬುವಂತದು. ಬಹಳ ಸಲ ನೀನು ಮೌನದಲ್ಲಿ ಮಾತಾಡುತ್ತೀ, ನಾನು ಮಾತಾಡುತ್ತಾ ಮೂಕಳಾಗಿರುತ್ತೇನೆ. ಆಡದ ಮಾತೂ ಕೇಳುತ್ತದೆ ಒಮ್ಮೊಮ್ಮೆ, ನನ್ನ ಮಾತು ನಿನಗೂ ನಿನ್ನ ಮಾತು ನನಗೂ. ಪ್ರೇಮದ ಸೊಗಸು ಇದು!
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 | ಒಂದು ಸಲವಾದರೂ ನೀನು ಸೋಲಬಾರದೇ!
ಈಚೆಗೆ ಈ ಸೊಗಸಿನ ಜೊತೆ ಸೋಜಿಗವೊಂದೂ ಸೇರಿಕೊಂಡಿದೆ. ನಾ ಏನಾದರೂ ಹೇಳೋಣ ಅಂದುಕೊಳ್ಳೋಷ್ಟರಲ್ಲಿ ಅದನ್ನು ನೀನೇ ನನಗೆ ಹೇಳಿ ಅಚ್ಚರಿ ಹುಟ್ಟಿಸಿರುತ್ತೀ. ಯಾರೊಂದಿಗೋ ನಾನಾಡಿದ ಮಾತನ್ನೆ ಝೆರಾಕ್ಸು ಮಷೀನಲ್ಲಿಟ್ಟು ತೆಗೆದಂತೆ ಅವರೊಂದಿಗೆ ನೀನೂ ಆಡಿರುತ್ತೀ. ಅಥವಾ ವೈಸ್ ವರ್ಸಾ. ಇನ್ನೊಬ್ಬರ ಮೆದುಳು, ಆಲೋಚನೆಗಳಿಗೂ ಸಿಸಿಕೆಮರಾ ಇಡೋ ತಂತ್ರಜ್ಞಾನ ಬಂದಿದೆಯಾ? ಅಥವಾ ಏನಾದ್ರೂ ಜಾದೂಗೀದೂ ಕಲ್ತು ಬಂದಿದೀಯೋ ಅರ್ಥವೇ ಆಗಲ್ಲ. ಆದರೆ ಈ ಮ್ಯಾಚಿಂಗ್ ಮ್ಯಾಚಿಂಗ್ ಮಾತ್ರ ಬೇಜಾನ್ ಖುಷಿ ಅನ್ಸತ್ತೆ. ಇದನ್ನೆ ವೇವ್ಲೆಂತ್ ಅನ್ನೋದ್ ತಾನೇ? ಆದ್ರೆ ನಾವಿಬ್ರೂ ಸ್ವಭಾವದಲ್ಲಿ ವೈರುಧ್ಯ ಅಲ್ವ? ಈ ಮ್ಯಾಚಿಂಗ್ ಹೆಂಗಾಯ್ತು? ಬಾಳ ಬುದ್ವಂತ ತಾನೇ ನೀನು? ಹೇಳು ನೋಡಣ.
ಅದೇನಾದ್ರೂ ಆಗಿರ್ಲಿ, ಆದ್ರೆ ನನ್ ಕಾಟ ಮಾತ್ರ ನಿಂಗ್ ತಪ್ಪಿದ್ದಲ್ಲ. ನನ್ನ ಅಚ್ಚರಿ, ಬೆರಗುಗಳೆಲ್ಲ ನಿನ್ನವೂ ಆಗಬೇಕು ಅಂತ ಬಯಸೋದರ ಹಿಂದಿನ ಸರಿತಪ್ಪುಗಳು ನನಗೆ ಗೊತ್ತಿಲ್ಲ. ನಾನು ನೋಡುವ ನೋಟದಲ್ಲಿ, ಮಾಡುವ ಆಲೋಚನೆಯಲ್ಲಿ ನಿನ್ನನ್ನೂ, ನಿನ್ನ ನೆನಪನ್ನೂ, ನಿನಗೆ ಹೇಳಬೇಕೆಂಬ ನೆಪವನ್ನೂ ಸದಾ ಜೊತೆಯಲ್ಲಿಟ್ಟುಕೊಂಡಿರುವುದಿಷ್ಟ ನನಗೆ. ಯಾಕೆಂದರೆ ಪ್ರೇಮಿಸಲು ಗೌರವ, ನಂಬಿಕೆಯಷ್ಟೇ, ಕನ್ಸಿಸ್ಟೆನ್ಸಿ ಕೂಡ ಮುಖ್ಯ ಅನ್ಸತ್ ಕಣೋ, ಎಲ್ ಹೋದ್ರೂ ಅದೊಂದು ಭಾವಾನ ಕ್ಯಾರೀ ಮಾಡ್ತಾನೇ ಇರಬೇಕನ್ಸತ್ತೆ. ಯಾವಾಗ್ಲೋ ಬೆಟ್ಟ ಹತ್ತಿ, ಇನ್ಯಾವಾಗ್ಲೋ ಹಳ್ಳಕ್ ಬೀಳೋದಲ್ಲ, ಪ್ರೇಮ ಅಂದರೆ ಸಂತೆಗೆ ಹೊರೋ ಮೂಟೆನಾ? ಸುಸ್ತಾದಾಗೆಲ್ಲ ಇಳ್ಸಿ ಮತ್ತೆ ಹೊರಕೆ? ಅದು ಜೀವದೊಳಗಿನ ಜೀವ. ಅಲ್ವೇನೋ? ಹಾಗಾಗಿ ಆಗಾಗ ಚೂರು ಜೀವ ಹಿಂಡೋದೂ ಸಹಿಸ್ಕೋಬೇಕಪ್ಪ ನೀನು…ಹ ಹ್ಹ ಹ್ಹ ಹ್ಹ.
ಹೆದರಬೇಡ್ವೋ, ಅಷ್ಟೆಲ್ಲ ತಡ್ಕೊಳ್ಳಾರದ ಕಾಟ ಕೊಡಲ್ಲ ನಿನಗೆ. ಒಕೆನಾ? ಸಿಗೋಣ, ಗಟ್ಟಿ ಹಗ್ಸ್ ನಿನಗೆ. ಬೈ