ಸದಾ ಗೆಲ್ಲುವವನೇ,
ಮತ್ತೆ ನಾನೇ ಸೋಲ್ತಿದೀನ್ ನೋಡು.
ಮಾತ್ಮಾತಾಡ್ತಿದ್ದಂಗೇ ಏನೋ ಕಿರಪಿರ ಶುರುವಾಗೋದು, ಮಾತಾಡ್ಬೇಡ ನಂಜೊತೆ ಬೈ. ಆಯ್ತ್ ಬಿಡು ಮಾತಾಡಲ್ಲ ಬೈ. ಅಂತ ಇಬ್ರೂ ಫೋನಿಟ್ಟ ಮೇಲೆ ಮತ್ತೆ ಸಾಪಾಸಾ ನಾನೇ ಹೇಳೋದು ಯಾವಾಗಲೂ.
ಪ್ರತಿಸಲ ಮುನಿಸಿಕೊಂಡು ರಸ್ತೆಯ ಆ ಬದೀಲಿ ದೂರದಲಿ ನೀನು ಈ ಬದಿಯ ತೀರದಲಿ ನಾನು ನಿಂತಾಗ್ಲೆಲ್ಲಾ ಹೀಗೇ… ಅವನೇ ಹೆಜ್ಜೆ ಇಡಲಿ ಮೊದಲು ಅಂತ ಕಾಯೋದೇ ಇಲ್ಲ. ಅಥವಾ ಮಧ್ಯದಲ್ಲಿದೆ ರೋಡು ಹೆಂಗೂ-ಆ ತುದಿಯ ನೀನೂ ಹತ್ತು ಹೆಜ್ಜೆ ಇಡು, ಇಲ್ಲಿಂದ ನಾನೂ ಇಡ್ತೀನಿ ಅನ್ನೋ ಮಾತೇ ಇಲ್ಲ. ನನ್ನ ತುದಿ ಬಿಟ್ಟು, ರಸ್ತೆದಾಟಿ ನೀ ನಿಂತ ತುದಿ ತಲುಪಿ ನಿನ್ನೂ ಎಳಕೊಂಡು ಬಂದು ಮಧ್ಯಕ್ಕೆ ನಿಲ್ಸಿ. “ಆಯ್ತ್ ನಡಿ ಈಗ ಅಂತದೇನಾಗಿಲ್ಲ” ಅಂದದ್ದೇ ಪ್ರತೀ ಸಲವೂ… ಆದರೆ ಎಷ್ಟ್ ಸಲಾಂತ ಹೀಗೆ ಹೇಳು? ಒಂದ್ಸಲವಾದರೂ ಆ ಕೆಲ್ಸ ನೀ ಮಾಡಲಿ ಅಂತ ಬಯಸಿದ್ರೆ ತಪ್ಪೇನಿದೆ ಹೇಳು? ನಾ ನಿಂತ್ ಜಾಗದ್ವರೆಗೂ ಬೇಡಾಪ, ರಸ್ತೆವರೆಗಾದ್ರೂ ನಡ್ಕೊಂಡು ಬಂದು ಕೈಚಾಚ್ತೀಯಾ? ಅದೂ ಇಲ್ಲ.
ಅದೆಷ್ಟೋ ಹಠ ನಿನಗೆ?
“ಹೆಣ್ಣಿಗೆ ಹಠ, ಗಂಡಿಗೆ ಚಟ ಇರಬಾರದು” ಅಂತ ನಮ್ ಕಡೆ ಹಳ್ಳಿಗಾದೆ. ಈ ಗಾದೆ ಮೇಲ್ನೋಟಕ್ಕೆ ಕಾಣಿಸುವ ಅರ್ಥ ಒಂದಿದ್ರೂ ನಂಗ್ ಇನ್ನೊಂದ್ ಅರ್ಥಾನೂ ಕಾಣತ್ತೆ. ಹೆಣ್ಣಿಗೆ ಹಠ ಇರಬಾರದು ಅವಳು ವಿಧೇಯಳಾಗಿರಬೇಕು ಅಂತಲ್ಲ, ಗಾದೆ ಮಾಡ್ದೋರ ಉದ್ದೇಶ ಅವಳನ್ನು ಚೌಕಟ್ಟಿಗೆ ಒಳಪಡ್ಸೋದ್ ಮಾತ್ರ ಅಲ್ಲ. ಹೆಣ್ಣೇನಾದ್ರೂ ಹಠಕ್ ನಿಂತ್ರೆ ಏನೇನ್ ಆಗ್ಬಾರದ ಅನಾಹುತ ಆಗತ್ತೆ ಅಂತ ಗೊತ್ತಿತ್ತು ಅವ್ರಿಗೆ. ನಮಗಿಂತ ಮಹಾಜಾಣ್ರು ಕಣೋ ನಮ್ ಜನಪದರು. ಸುಮ್ನೆ ಹಿಂದಕ್ ತಿರಗ್ ನೋಡು. ಹೆಣ್ಣು ಹಠಕ್ಕೆ ಬಿದ್ದಾಗಲೇ ಇತಿಹಾಸದ ಎಷ್ಟೋ ಘಟನೆಗಳು ಯೂಟರ್ನ್ ಹೊಡ್ದಿರದು, ಏನೆಲ್ಲಾ ನಡ್ದೋಗಿರದು. ಅದ್ ಗೊತ್ತಿದ್ದೇ “ಹೆಣ್ಣಿಗೆ ಹಠ ಇರ್ಬಾರ್ದೂಂತ ಗಾದೆ ಮಾಡಿರದು.
ಪ್ರೀತಿ ವಿಷಯದಲ್ಲಿ ಸೋಲು ಗೆಲುವಿನ ಲೆಕ್ಕ ಇಷ್ಟೇ ನೋಡು.
“ಎಷ್ಟು ಬಗ್ತೀಯ?” ಅಂದರೆ “ನಾ ಬಗ್ಗಲ್ಲಪ್ಪ” ಅಂತಾನೆ ಗಂಡು. ಬಗ್ಲೇಬೇಕು ಅಂದ್ರೆ, ತೀರಾ ಅನಿವಾರ್ಯ ಅಂದ್ರೆ ಮಂಡೀ ಮುಟ್ಟೋವರೆಗೂ ಬಗ್ಗಿ ಇನ್ನಾಗಲ್ಲ ನನ್ ಕೈಲಿ ಅಂತಾನೆ. ಸಮಾಜ, ಸ್ಥಾನ ಮಾನ, ಘನತೆ ಗೌರವ ಮಣ್ಣೂಮಸೀ ಪಾಪ. ಬಗ್ಗಕ್ ಚಾನ್ಸೇ ಇಲ್ಲ. ಅದೇ ನಾವ್ ಹೆಣ್ಮಕ್ಕಳು? ಚೂರೇ ಪ್ರೀತಿಯಿಂದ “ಎಷ್ಟ್ ಬಗ್ತೀಯಾ?” ಅಂತ ಕೇಳೋದೇ ತಡ. ತಗೋ ರೆಡಿ! ಎಷ್ಟ್ ಬಗ್ಬೇಕ್ ಹೇಳಪಾ ಅಂತಾರೆ. ಬಗ್ಗೂ ಬಗ್ತಾರೆ… ಯಾವ್ದನ್ನೂ ಕೇರ್ ಮಾಡ್ದೆ ಬಗ್ತಾರೆ. ಎಲ್ಲೀವರೆಗೂ? ಭೂಮಿಗೆ ಹಣೆ ತಾಕೋವರೆಗೂ. ಆಮೇಲೂ ಬಗ್ಗು ಅಂದ್ರೆ? ಅಷ್ಟೇ ನೋಡು. ಎರಡೇ ಆಗೋದು ಆಗ.
ಒಂದು- ಸೋತು ಇನ್ನಾಗಲ್ಲಪ್ಪಾ ನನ್ ಕೈಲಿ ಅಂತ ಬಿಟ್ಕೊಡೋದು.
ಇನ್ನೊಂದು – ವಾಪಸ್ ಎದ್ ನಿಂತು, ಇನ್ನು ನಾನು ಒಂದೇ ಒಂದು ಇಂಚು ಕೂಡ ಬಗ್ಗಲ್ಲ ಅಂತ ಗಟ್ಟಿಯಾಗ್ ತೀರ್ಮಾನ ಮಾಡೋದು. ಈ ಎರಡನೆದಿದೆಯಲ್ಲಾ… ಕಷ್ಟ ಇದು. ವಾಪಸ್ ತಿರುಗಿ ನೇರವಾಗಿ ನಿಂತ್ಮೇಲೆ ಅದು ಮೃದುತ್ವ ಕಳಕೊಂಡ ಕಲ್ಲು. ಬಗ್ಗೋ ಕೊನೇ ಕ್ಷಣದವರೆಗೂ ಹೂವಾಗಿದ್ದ ಹೂವೇನಾ ಇದಾ? ಅಂತ ಆಶ್ಚರ್ಯವಾಗೋಂತ ಬಂಡೆಕಲ್ಲು. ಆಮೇಲೆ ಅದನ್ನ ಕತ್ತರಿಸಬಹುದೇ ಹೊರತು ಬಗ್ಸೋಕಾಗಲ್ಲ. ಕಲ್ ಕತ್ತರ್ಸೋದು ಅಂದ್ರೆ ಹೂ ಕಿತ್ತಷ್ಟು ಸುಲಭಾನೂ ಅಲ್ಲ.
ಸೀಮೆಗಿಲ್ದೋನೇ, ಬೇಕಾ ಹೇಳು ಈ ಕಷ್ಟ ಎಲ್ಲ ನಿನಗೆ?
ಪ್ರೀತಿ ಅಂದ್ರೆ ಬಗ್ಗದ ಆಳ್ವಿಕೇನೂ ಅಲ್ಲ, ಬಗ್ಗಿ ಸಾಯಬೇಕಾದ ಗುಲಾಮಗಿರಿನೂ ಅಲ್ಲ. ನಿಂಗಿಷ್ಟವಾದ, ನೀನು ಎಲ್ಲ ಕಡೆ ಬಳಸೋ ಸಾಲಿದೆಯಲ್ಲ. “ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ” ಅಂತ. ಅದನ್ ಮತ್ತೆ ನೆನಪಿಸ್ಕೋ. ಹೀಗ್ ಕುವೆಂಪು ಹೇಳಿದ್ದು ಪ್ರೀತಿ ವಿಷ್ಯದಲ್ಲೂ ಅಪ್ಲೈ ಆಗತ್ತೆ ಅನ್ಸಲ್ವ ನಿನಗೆ? ನಮ್ ನಮ್ ನಿಜದ ಜಾಗ ಯಾವ್ದಾದ್ರೂ ಆಗಿರ್ಲಿ, ಕುರ್ಚಿ ಎಂತದಾದ್ರೂ ಆಗಿರ್ಲಿ ಪ್ರೀತಿ ವಿಷ್ಯದಲ್ಲಿ ಅದ್ಯಾವ್ದೂ ಲೆಕ್ಕಕ್ ಬರಲ್ಲ. ಇಲ್ಲಿ ನಾವಿಬ್ರೂ ಮುಖ್ಯರೂ ಹೌದು, ಅಮುಖ್ಯರೂ ಹೌದು. ಹಾಗನ್ಸಲ್ವ? ಪ್ರೀತಿ ಅಂದ್ರೆನೇ ಸೋತು ಗೆಲ್ಲೋದಲ್ವೇನೋ?
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 | ತುಂಟ ಕೋತಿಗೂ ಗಂಭೀರ ಗಜಕ್ಕೂ ಪ್ರೇಮ ಅಂದ್ರೆ..
ನಿನ್ನಷ್ಟು ಗಾಂಧೀ ಓದು ನನಗಿಲ್ಲ. ನನ್ ನೆನಪು ಸರಿ ಇದ್ರೆ ಗಾಂಧಿ ಹೇಳ್ತಾರೆ “ಸಣ್ ಸಣ್ ವಿಷಯಗಳಿಗೆ ಹೇಗೆ ಪ್ರತಿಕ್ರಿಯಿಸ್ತಾನೆ ಅನ್ನೋದ್ರಲ್ಲಿರತ್ತೆ ಮನುಷ್ಯನ ವ್ಯಕ್ತಿತ್ವ” ಅಂತ. ನಮ್ ನಡುವಿನ ಸಣ್ ಮುನಿಸು ದೊಡ್ ವಿಷ್ಯ ಅನ್ಸತ್ತ ನಿನಗೆ? ನೀ ಈ ಪರಿ ಹಠ ತೊಡುವಷ್ಟು?
NO ONE IS ALWAYS BUSY. IT ALL DEPENDS ON WHAT NUMBER YOU ARE ON THEIR PRIORITY LIST ಅಂತೊಂದು ಮಾತಿದ್ಯಲ್ಲೊ, ಎಷ್ಟೊಂದು ಕೆಲಸಗಳ ನಡುವೆಯೂ ನಾನು ಏನಾದರೂ ಕೇಳಿದರೆ ನೀನು ಪಟ್ಟಂತ ಪ್ರತಿಕ್ರಿಯಿಸುವಾಗ ಇದು ನೆನಪಾಗುತ್ತದೆ. ಹೀಗೆ ಹಠ ತೊಟ್ಟಾಗ ಕೋಪ ಕೂಡ ಬರ್ತದೆ. ನಿಜಕ್ಕೂ ಹಠವಾ ಹುಸಿಮುನಿಸಾ ನಿಂದು?
ಹುಸಿಜಂಭಕಾದರೆ ಏನೋ ಪಾಪ ಮಗು ಅಂತ ನಾನೇ ಮತ್ತೆ ಸೋಲುವ ಹೂವಾಗುವೆ. ಆದ್ರೆ ಅದು ನಿಜದ ಕೊಬ್ಬಾದ್ರೆ ಮಾತ್ರ ಕಲ್ಲು ನಾನು.
ಹೂ ಬೇಕೋ ಕಲ್ ಬೇಕೋ ನೀನೇ ಡಿಸೈಡ್ ಮಾಡ್ಕೋ. ಸಿಕ್ಕಾಪಟ್ಟೆ ತಲೆನೋಯ್ತಿದೆ. ಬೈ.
ಇದನ್ನೂ ಓದಿ | ಪೋಸ್ಟ್ ಬಾಕ್ಸ್ 143 | ನದಿಯ ವಾರ್ತೆಗೆ ಕಿವಿದೆರೆದ ಕಡಲು