– ಡಾ. ರೇಖಾ ರಾಜೇಂದ್ರಕುಮಾರ್
ಆಕೆ ಹಸಿ ಹಸಿ ಬಾಣಂತಿ. ದೇವರು ಕೊಟ್ಟ ವರವೋ ಎಂಬಂತಿರುವ ಮುದ್ದು ಮಗು ಪಕ್ಕದಲ್ಲೇ ಮಲಗಿಕೊಂಡಿದೆ. ಇಡೀ ಮನೆ ಆಕೆಯ ಕ್ಷೇಮ ಸಮಾಚಾರವನ್ನು ಕಾಪಾಡಿಕೊಳ್ಳಲು ಸಜ್ಜಾಗಿದೆ. ಆದರೆ, ಆಕೆ ಮಾತ್ರ ಪಕ್ಕದಲ್ಲೇ ತನ್ನ ಕರುಳ ಕುಡಿ ಮಲಗಿದೆ ಎನ್ನುವುದೇ ಗೊತ್ತಿಲ್ಲದಂತೆ ತನ್ನ ಪಾಡಿಗೆ ತಾನಿದ್ದಾಳೆ. ಮಗು ಹಸಿವಿನಿಂದ ಅಳುತ್ತಿದ್ದರೂ ಅದು ತನಗೆ ಕೇಳಿಸುತ್ತಲೇ ಇಲ್ಲ ಎಂಬಷ್ಟು ನಿರ್ಲಿಪ್ತವಾಗಿ ಎಲ್ಲೋ ಬೇರೆ ಕಡೆ ದೃಷ್ಟಿ ನೆಟ್ಟು ಕೂತಿದ್ದಾಳೆ. ಆಕೆಯ ಅಮ್ಮ ಬಂದು, ಮಗು ಎತ್ತಿಕೊಂಡು ಗದರಿ, “ಅಷ್ಟು ಹತ್ರದಲ್ಲಿ ಕೂತಿದ್ದೀಯಾ, ಮಗು ಅಷ್ಟು ಜೋರಾಗಿ ಬಡ್ಕೊಳ್ಳೋದು ಕೇಳಿಸಲ್ವಾ, ಎತ್ಕೊಂಡು ಹಾಲು ಕುಡಿಸಬಾರ್ದಾ ?” ಅಂತ ಬೈದರೂ ಯಾವುದೇ ಪ್ರತಿಕ್ರಿಯೆ ಇಲ್ಲ.
-ಇಂಥಹುದೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳುವುದು ಕೂಡಾ ಕಷ್ಟ ಅಲ್ವೇ? ತಾಯಿ ಎಂದರೆ ಹಾಗೆ, ಹೀಗೆ ಎಂದೆಲ್ಲ ಕಲ್ಪಿಸಿಕೊಳ್ಳುವ ನಮಗೆ ತಾಯಿಯೊಬ್ಬಳು ಈ ರೀತಿ ಕೂಡಾ ಇರಬಲ್ಲಳು ಎಂದರೆ ನಂಬುವುದು ಕಷ್ಟ. ಆದರೆ, ನಂಬಲೇಬೇಕು.. ಪ್ರಸವೋತ್ತರ ಖಿನ್ನತೆ (Postpartum Depression) ಎಂಬ ಸಮಸ್ಯೆ ಒಬ್ಬ ಸಾಮಾನ್ಯ ಹೆಣ್ಮಗಳನ್ನೂ ಈ ರೀತಿ ಮಾಡಿಬಿಡಬಲ್ಲುದು.
ಕೇವಲ ಮಗುವಿನ ಬಗ್ಗೆ ನಿರ್ಲಕ್ಷ್ಯವಷ್ಟೇ ಅಲ್ಲ, ಕೇವಲ ನಿರ್ಲಿಪ್ತತೆಯೂ ಅಲ್ಲ. ಕೆಲವರಂತೂ ದಿಢೀರನೆ ಅಳುವುದು, ಕೋಪಿಸಿಕೊಳ್ಳುವುದು, ಸಿಟ್ಟಿಂದ ಹುಚ್ಚಾಗುವುದು, ಯಾವುದೇ ವಿಷಯದಲ್ಲಿ ನಿರಾಸಕ್ತಿ, ನಿರುತ್ಸಾಹ, ಸದಾ ಅಳುತ್ತಿರುವುದು ಮಾಡುತ್ತಾರೆ. ಇನ್ನು ಕೆಲವರು ಗೋಡೆಗೆ ತಲೆ ಬಡಿದುಕೊಳ್ಳುವ ಮೂಲಕ ಅಥವಾ ಕೈ ಮೈ ಸುಟ್ಟುಕೊಂಡು ತನ್ನನ್ನು ತಾನೇ ದಂಡಿಸಿಕೊಳ್ಳುವುದೂ ಉಂಟು. ಕೆಲವರಿಗೆ ಆತ್ಮಹತ್ಯೆ ಮಾಡಿಕೊಳ್ಳೋಣ ಅನಿಸಿದರೆ ಕೆಲವರು ಈ ಕೃತ್ಯಕ್ಕೆ ಇಳಿದು ಪ್ರಾಣವನ್ನೇ ಕಳೆದುಕೊಂಡಿದ್ದೂ ಇದೆ.
ಸಾವಿರದಲ್ಲಿ ಒಬ್ಬ ಬಾಣಂತಿಯಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಗೆ ಬಾಣಂತಿ ಖಿನ್ನತೆ (Postpartum depression) ಎಂದು ಕರೆಯುತ್ತಾರೆ. ಈ ಸಮಸ್ಯೆ ಹಿಂದಿನಿಂದಲೇ ಇದೆಯಾದರೂ ಇತ್ತೀಚೆಗೆ ಹೆಚ್ಚೆಚ್ಚು ಗಮನ ಸೆಳೆಯುತ್ತಿದೆ. ಮಾಜಿ ಸಿಎಂ ಒಬ್ಬರ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡ ಬಳಿಕ ಇದು ಇನ್ನಷ್ಟು ಪ್ರಚಾರವನ್ನು ಪಡೆಯಿತು.
ಯಾಕೆ ಹೀಗಾಗುತ್ತದೆ?
ಹಾರ್ಮೋನ್‌ಗಳ ಏರುಪೇರು ಈ ಸಮಸ್ಯೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಮಿದುಳಿನಲ್ಲಿ ಉತ್ಪಾದಿಸಲ್ಪಟ್ಟ, ದೇಹದಲ್ಲಿ ಸ್ರವಿಸುವ ವಿವಿಧ ಹಾರ್ಮೋನುಗಳ ಏರುಪೇರು ಇದಕ್ಕೆ ಒಂದು ಕಾರಣ. ನಿದ್ದೆಯ ಕೊರತೆ, ಅನಾರೋಗ್ಯದಿಂದಾಗಿ ಅಥವಾ ಸಮಯದ ಅಭಾವದಿಂದಾಗಿ ತೀವ್ರ ಬಳಲಿಕೆಯಾದಾಗ, ಸಂದರ್ಭಗಳ ಸಮಯಗಳ ಹೊಂದಾಣಿಕೆಯ ಕೊರತೆಯಿಂದಾಗಿ, ಬೂದಿ ಮುಚ್ಚಿದ ಕೆಂಡದಂತೆ ಇದ್ದ ಈ ಖಿನ್ನತೆಯ ಕರಾಳ ಮುಖ ಅನಾವರಣಗೊಳ್ಳುತ್ತದೆ. ಇನ್ನು ಕೆಲವರ ವ್ಯಕ್ತಿತ್ವವೂ ಖಿನ್ನತೆಯ ಕಡೆಗೇ ವಾಲಲುಇಚ್ಛಿಸುವ, ಯಾವಾಗಲೂ ಋಣಾತ್ಮಕ ಚಿಂತನೆಗಳನ್ನೇ ಮಾಡುತ್ತಾ, ನಿರಾಶೆಯನ್ನೇ ವೈಭವೀಕರಿಸುವಂತೆ ಇರುತ್ತದೆ. ಇಂಥವರಲ್ಲಿ ಈ ಬಾಣಂತಿ ಸನ್ನಿ ಕಾಣಿಸಿಕೊಂಡರೆ ಹೆಚ್ಚು ತೀವ್ರವಾಗುತ್ತದೆ.
ಇವರಲ್ಲಿ ಈ ಅಪಾಯ ಜಾಸ್ತಿ
ಕೆಳಗೆ ತಿಳಿಸಿದ ಸಂದರ್ಭಗಳಿದ್ದರೆ , ಬಾಣಂತಿಯರಲ್ಲಿ ಖಿನ್ನತೆ ಕಾಣಿಸಿಕೊಳ್ಳುವ ಸಂಭವ ಜಾಸ್ತಿ.
ಈ ಹಿಂದೆ ಖಿನ್ನತೆ ತಲೆದೋರಿದ್ದರೆ, ಚಿಕ್ಕ ವಯಸ್ಸಿನಲ್ಲೇ ಬಾಣಂತನದ ಸವಾಲನ್ನು ಎದುರಿಸಿದರೆ, ಕುಟುಂಬದಲ್ಲಿ ಯಾರಿಗಾದರೂ ಖಿನ್ನತೆ ಇದ್ದಲ್ಲಿ, ಉದ್ಯೋಗದ ಒತ್ತಡ ಇರುವವರಲ್ಲಿ, ಬೇರೆ ಅನಾರೋಗ್ಯದ ಸಮಸ್ಯೆ ಇದ್ದರೆ, ಅಸ್ವಸ್ಥವಾಗಿರುವ ಇಲ್ಲವೇ ಹೆಚ್ಚು ಆರೈಕೆ ಬೇಕಿರುವ ಇನ್ನೊಂದು ಮಗು ಈಗಾಗಲೇ ಮನೆಯಲ್ಲಿದ್ದರೆ, ಅವಳಿ-ತ್ರಿವಳಿ ಮಕ್ಕಳು ಜನಿಸಿದರೆ, ಸಹಾಯಕ್ಕೆ ನಿಲ್ಲಬಲ್ಲವರು ಯಾರೂ ಇಲ್ಲದೆ ಇದ್ದಾಗ, ಗಂಡನಿಂದ ದೂರಾಗಿರುವ ಒಂಟಿ ಹೆಣ್ಮಕ್ಕಳಿಗೆ, ಗಂಡನೊಂದಿಗೆ ಏನಾದರೂ ಕಿರಿಕಿರಿ ಇದ್ದರೆ, ಮನೆಯಲ್ಲಿ ಸಮಸ್ಯೆಗಳಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ಮೂರು ವಿಧದ ಸಮಸ್ಯೆ
1. ಬೇಬಿ ಬ್ಲೂಸ್ – ಬಾಣಂತಿಯರಲ್ಲಿ ಕಂಡುಬರುವ ಖಿನ್ನತೆಯಲ್ಲಿ ಶೇಕಡಾ 70% ನವತಾಯಂದಿರು ಇದರಿಂದ ಬಳಲುತ್ತಾರೆ. ಇದ್ದಕ್ಕಿದ್ದಂತೆ ಸಂತೋಷವಾಗುವುದು, ವಿನಾ ಕಾರಣ ಮಂಕಾಗುವುದು ಕಂಡುಬರುತ್ತದೆ, ಸಾಧಾರಣವಾಗಿ ಶಿಶುವಿನ ಜನನವಾದ ೧೫ ದಿನಕ್ಕೆ ಈ ತೊಂದರೆಗಳು ಕ್ಷೀಣಿಸುತ್ತ ಹೋಗಿ ಆಕೆಯಲ್ಲಿ ಜೀವನೋತ್ಸಾಹ ಚಿಗುರಲು ಪ್ರಾರಂಭವಾಗುತ್ತದೆ.
2. ಬಾಣಂತಿಯ ಖಿನ್ನತೆ – ಇದು ಬೇಬಿ ಬ್ಲೂಸ್ ಗಿಂತ ತೀವ್ರತರದ್ದಾಗಿದ್ದು ಕೋಪ – ತಾಪ, ಮಗುವಿನ ಕಡೆ ಹಾಗೂ ತನ್ನ ಕಡೆ ನಿರ್ಲಕ್ಷ, ನೆಂಟರಿಷ್ಟರೊಡನೆ ಬೆರೆಯದೆ ಏಕಾಂಗಿಯಾಗಿ ಕುಳಿತಿರುವುದು- ಹೀಗಿನ ಲಕ್ಷಣಗಳನ್ನೊಳಗೊಂಡಿರುತ್ತದೆ.
3. ಬಾಣಂತಿಯರ ಮನೋರೋಗ ( ಬಾಣಂತಿ ಸನ್ನಿ ) – ಇದು ಅತಿ ತೀವ್ರಸ್ವರೂಪದ್ದಾಗಿದ್ದು, ಆಕೆ ಪೂರ್ತಿಯಾಗಿ ಖಿನ್ನತೆಯಲ್ಲಿ ಮುಳುಗಿದ್ದು, ಪ್ರಾಪಂಚಿಕ ವಿಷಯಗಳ , ವಿದ್ಯಮಾನಗಳ ಕಡೆ ಗಮನವೇ ಇರುವುದಿಲ್ಲ. ಸ್ವ ಸ್ವಚ್ಛತೆ, ಆಹಾರ ಸೇವನೆ , ನಿದ್ದೆಗಳಂಥ ಮೂಲಭೂತ ಸರಳ ಕೆಲಸಗಳ ಬಗ್ಗೆಯೂ ಚಿಂತಿಸದೆ, ಪುನಃ ಪುನಃ ಆತ್ಮಹತ್ಯೆಯ ದಿಕ್ಕಿನಲ್ಲಿ ಯೋಚನೆಯನ್ನೂ ಪ್ರಯತ್ನವನ್ನೂ ಮಾಡುತ್ತಾರೆ.
ಇದನ್ನೂ ಓದಿ| ವಿಟಮಿನ್ ಡಿ ಕೊರತೆ ನೀಗಿಸಲು ಹಾಲು, ನೀರು ಪರಿಣಾಮಕಾರಿ; ಅಧ್ಯಯನ ವರದಿ
ಚಿಕಿತ್ಸೆ ಯಾವಾಗ ಬೇಕು?
ಸಮಸ್ಯೆ ಪ್ರಾರಂಭವಾಗಿ ಎರಡು ವಾರಗಳ ನಂತರವೂ ಮುಂದುವರಿದರೆ ಮಾನಸಿಕ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. ಅನೇಕ ತರಹದ ಹಾಗೂ ಹಂತದ ಚಿಕಿತ್ಸೆಗಳಿವೆ. ಮನಸ್ಸನ್ನು ಖಿನ್ನತೆ ಮುಕ್ತಗೊಳಿಸಿ ಉಲ್ಲಾಸವಾಗಿಡುವ ಮಾತ್ರೆಗಳು, ಚುಚ್ಚುಮದ್ದುಗಳು ವಿಫುಲವಾಗಿವೆ. ಆದರೆ ಅದಕ್ಕಿಂತ ಮುಖ್ಯ, ಬಂಧುಗಳ ಸಹಕಾರ ಮತ್ತು ತಾಳ್ಮೆ. ಪತಿಯ, ಅತ್ತೆಯ ಹಾಗೂ ತಾಯಿಯ ಸಾಂಗತ್ಯ ಮತ್ತು ಸಂಪೂರ್ಣ ಸಹಾಯ ಇನ್ನಿಲ್ಲದಂತೆ ಅಗತ್ಯ. ಅವರೆಲ್ಲರ ಭಾವನಾತ್ಮಕ ಬೆಂಬಲ ಹಾಗೂ ಆ ಪ್ರಾಮಾಣಿಕ ಪ್ರಯತ್ನದಿಂದ ಆಕೆಯನ್ನು ಈ ಖಿನ್ನತೆಯ ಕೂಪದಿಂದ ಹೊರ ತರಬಹುದು. ದಿನನಿತ್ಯದ ಕೆಲಸಗಳನ್ನೂ ಮಾಡಿಕೊಳ್ಳಲಾಗದಿರುವಿಕೆ, ತನಗೆ, ಮನೆಯವರಿಗೆ ಅಥವಾ ಮಗುವಿಗೆ ದೈಹಿಕ ಹಿಂಸೆ ಕೊಡುವುದು, ಮಗುವಿಗೆ ಹಾಲೂಡಿಸದಿರುವುದು, ಆತ್ಮಹತ್ಯೆಯ ಪ್ರಯತ್ನ ಇಂತಹ ಮಿತಿಮೀರಿದ ಪರಿಸ್ಥಿತಿ ಇದ್ದಲ್ಲಿ ತ್ವರಿತವಾಗಿ ಚಿಕಿತ್ಸೆ ಕೊಡಬಹುದು.
ಇದನ್ನೂ ಓದಿ| Menstrual Hygiene day: ಮುಟ್ಟು ಕಳಂಕವಲ್ಲ, ಕೊಳಕೂ ಅಲ್ಲ; ಮೌಢ್ಯ ಬಿಟ್ಟು ಸ್ವಚ್ಛತೆಯತ್ತ ಗಮನಕೊಡಿ
ತಡೆಗಟ್ಟುವುದು ಹೇಗೆ?
1. ಗರ್ಭಿಣಿಯಿದ್ದಾಗ, ಕಾಲಕಾಲಕ್ಕೆ ಪರೀಕ್ಷೆ ಮಾಡುತ್ತಿದಂತಹ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು ಹೆರಿಗೆಯ ಬಗ್ಗೆ, ಬಾಣಂತನದ ಬಗ್ಗೆ ನಿಯಮಿತವಾಗಿ ಮಾಹಿತಿ ಕೊಟ್ಟು, ಅರಿವು ಮೂಡಿಸಿ ಮನೋ ತಯಾರಿ ಮಾಡುವುದು.
2. ಆಕೆ ಬಾಣಂತನದಲ್ಲಿ, ತನ್ನೊಬ್ಬಳ ಕೈಲೇ ಆಗದಿದ್ದ ಸಂದರ್ಭಗಳಲ್ಲಿ ಬೇರೆಯವರ ಸಹಾಯ ಪಡೆದು, ಮನಸ್ಸನ್ನು ನಿರಾಳವಾಗಿಸಬೇಕು.
3.. ಆಕೆ, ಇದೆಲ್ಲವೂ ಸಾಮಾನ್ಯ, ಈ ಕಷ್ಟದ ಘಟ್ಟ ನನ್ನ ಜೀವನದಲ್ಲಿ ಇದೇ ಥರ ಇರುವುದಿಲ್ಲ, ಇದು ಕೆಲ ದಿನಗಳ ಕಿರಿಕಿರಿ ಅಷ್ಟೇ, ಎಷ್ಟೊಂದು ಅತ್ಯಮೂಲ್ಯ ಬಹುಮಾನ ನನಗೆ ಸಿಕ್ಕಿದೆ ಎಂದು ಸ್ವ ಸಮಾಧಾನ ಮಾಡಿಕೊಂಡು ಮಗುವಿನ ಆರೈಕೆಯಲ್ಲಿ ತೊಡಗಬೇಕು.
4.. ಪ್ರಾಣಾಯಾಮ, ಧ್ಯಾನ, ಯೋಗದಂತಹ ಚಟುವಟಿಕೆಗಳಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಬೇಕು.
5. ಒಳ್ಳೆಯ ಧನಾತ್ಮಕ ವಿಷಯಗಳನ್ನು ಮನಸ್ಸಿಗೆ ತುಂಬುವ ಪುಸ್ತಕಗಳನ್ನು ಓದುವುದರಲ್ಲಿ ನಿರತ ರಾಗಬೇಕು.
6.ಕಾಫಿಯಲ್ಲಿ ಕೆಫೀನ್ ಅಂಶ ಇರುವುದರಿಂದ ಪದೇಪದೆ ಕಾಫಿ ಕುಡಿಯುವ ಅಭ್ಯಾಸವನ್ನು ಬಿಡಬೇಕು.
7. ಮದ್ಯಸೇವನೆಯಿಂದ ದೂರವಿರಬೇಕು.
8. ಸಂಬಂಧಿಗಳೊಡನೆ ನೆಂಟರಿಷ್ಟರೊಡನೆ ಬೆರೆತು ಸಮಯವನ್ನು ಉಲ್ಲಸಿತವಾಗಿ ಕಳೆಯಬೇಕು.
9. ದಿನಕ್ಕೆ 6ರಿಂದ 8 ಗಂಟೆಯಾದರೂ ನಿದ್ದೆ ಮಾಡಬೇಕು.
(ಲೇಖಕರು ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಹಾಗೂ ಐವಿಎಫ್ ಸ್ಪೆಷಲಿಸ್ಟ್ , ಚಂದನ ಆಸ್ಪತ್ರೆ ಮತ್ತು ಮಿರಾಕಲ್ ಐವಿಎಫ್ ಆಸ್ಪತ್ರೆ, ಬೆಂಗಳೂರು)