| ಮಾರುತಿ ಪಾವಗಡ
ಕಾಂಗ್ರೆಸ್ ನಾಯಕರು (Congress Party) ಧರ್ಮದ ವಿಚಾರದಲ್ಲಿ ಪದೇಪದೇ ತಮ್ಮ ದ್ವಂದ್ವ ನಿಲುವುಗಳಿಂದಲೇ ಕೈ ಸುಟ್ಟುಕೊಳ್ಳುತ್ತಿದ್ದಾರೆ. ರಾಮ ಮಂದಿರ (Ram Mandir) ವಿವಾದ 90ರ ದಶಕದ ಬಳಿಕ ಸಂಪೂರ್ಣ ರಾಜಕೀಯ ವಿಷಯವಾಯಿತು. ಇದೀಗ ಅಯೋಧ್ಯೆಯಲ್ಲಿ ರಾಮ ಮಂದಿರ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿದೆ. ಬಿಜೆಪಿ(BJP Party) ವಿಜಯೋತ್ಸವದಲ್ಲಿ ಮುಳುಗಿದೆ. ಆದರೆ ಕಾಂಗ್ರೆಸ್ ದ್ವಂದ್ವ ನಿಲುವಿನಲ್ಲಿ ಸಿಲುಕಿ ಫಜೀತಿಪಡುತ್ತಿದೆ!
ಇದೊಂದು ಬಿಜೆಪಿ ಪ್ರಾಯೋಜಿತ ಕಾರ್ಯಕ್ರಮ. ಹಾಗಾಗಿ ನಾವು ಮಂದಿರ ಉದ್ಘಾಟನೆಗೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ಘೋಷಿಸಿದ್ದು ಪಕ್ಷದ ಹಲವರು ಮುಖಂಡರಿಗೇ ಒಪ್ಪಿಗೆ ಆಗಿಲ್ಲ. ರಾಮ ಜನ್ಮಭೂಮಿ ಹಿಂದೂಗಳಿಗೆ ಸೇರಿದ್ದು ಎಂದು ಅಂತಿಮ ತೀರ್ಪು ಕೊಟ್ಟಿದ್ದು ಸುಪ್ರೀಂ ಕೋರ್ಟ್. ಈ ತೀರ್ಪನ್ನು ಮುಸ್ಲಿಮರೇ ಗೌರವಿಸಿದ್ದಾರೆ. ಮಸೀದಿ ನಿರ್ಮಿಸಲು 5 ಎಕರೆ ಜಾಗವನ್ನು ಸುಪ್ರೀಂ ಕೋರ್ಟ್ ಬೇರೆ ಕಡೆ ಕೊಡಿಸಿದೆ. ಹೀಗಿರುವಾಗ ಕಾಂಗ್ರೆಸ್‌ದೇನು ತಕರಾರು ಎಂದು ಜನ ಸಾಮಾನ್ಯರೇ ಪ್ರಶ್ನಿಸುತ್ತಿದ್ದಾರೆ. ಮಂದಿರ ಉದ್ಘಾಟನೆಯನ್ನು ಕಾಂಗ್ರೆಸ್ ಬಹಿಷ್ಕರಿಸಿದ್ದು ಮುಸ್ಲಿಮರನ್ನು ಓಲೈಸುವುದಕ್ಕಾಗಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಂದಿರ ಉದ್ಘಾಟನೆ ಬಿಜೆಪಿಗಂತೂ ಮುಂದಿನ ಚುನಾವಣೆಯಲ್ಲಿ ಭಾರಿ ಲಾಭ ತಂದು ಕೊಡುವ ನಿರೀಕ್ಷೆ ಇದೆ. ಲೋಕಸಭೆ ಕಣದಲ್ಲಿ ಬಿಜೆಪಿಯನ್ನು ಕಾಂಗ್ರೆಸ್ ಹೇಗೆ ಎದುರಿಸುತ್ತದೆ ಎಂಬ ಬಗ್ಗೆ ಕುತೂಹಲ ಮೂಡಿದೆ.
ಹೈಕಮಾಂಡ್ ನಿರ್ಧಾರಕ್ಕೆ ರಾಜ್ಯ ಕಾಂಗ್ರೆಸ್ ನಾಯಕರ ಅಸಮಾಧಾನ
ಅಯೋಧ್ಯೆ ಸಂಭ್ರಮದಿಂದ ದೂರ ಉಳಿಯುವ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ರಾಜ್ಯ ಕಾಂಗ್ರೆಸ್‌ನ ಬಹುತೇಕ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರಿಗೆ ಇಂತಹದ್ದೇ ಅಸ್ತ್ರ ಬೇಕಿತ್ತು. ಅದಕ್ಕೆ ತಕ್ಕಂತೆ ನಮ್ಮ ಹೈಕಮಾಂಡ್ ನಡೆದುಕೊಂಡಿದೆ. 2014ರ ಲೋಕಸಭಾ ಚುನಾವಣೆಗೂ ಮುನ್ನ ಶುರುವಾದ ನಮ್ಮ ಹೈಕಮಾಂಡ್ ಬ್ಯಾಡ್ ಟೈಮ್ ದಶಕ ಕಳೆದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕನಿಷ್ಠ ರಾಮಲಿಂಗರೆಡ್ಡಿ ಅವರಷ್ಟೂ ಯೋಚನೆಯನ್ನು ಕೈ ಹೈಕಮಾಂಡ್ ಮಾಡಿದರೂ ನಮಗೆ ಹಿಂದೂ ವಿರೋಧಿ ಹಣೆಪಟ್ಟಿ ಕಟ್ಟಲು ಆಗ್ತಿರಲಿಲ್ಲ. ಅತ್ತ ಆಯೋದ್ಯೆಯಲ್ಲಿ ಬಿಜೆಪಿ ಆರ್ಭಟದ ನಡುವೆ ಇತ್ತ ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲು ಕಾಂಗ್ರೆಸ್ ಸರ್ಕಾರ ಆದೇಶ ನೀಡಿತ್ತು. ಬಿಜೆಪಿಯವರಷ್ಟೇ ಅಲ್ಲ, ನಾವೂ ರಾಮಭಕ್ತರು ಎಂಬ ಸಂದೇಶ ರವಾನೆ ಮಾಡಿದ್ದಾರೆ. ಇಷ್ಟು ತಲೆ ನಮ್ಮ ಹೈಕಮಾಂಡ್ ಓಡಿಸಿದ್ರೆ ನಾವು ಹತ್ತು ವರ್ಷಗಳಿಂದ ಕೇಂದ್ರದಲ್ಲಿ ವಿಪಕ್ಷ ಸ್ಥಾನದಲ್ಲಿ ಕೂರುವ ಅಗತ್ಯ ಇರುತ್ತಿರಲಿಲ್ಲ. ಇವರು ಮಾಡಿರುವ ಬಾಯ್ಕಾಟ್ ನಿರ್ಧಾರದಿಂದಾಗಿ ದೆಹಲಿಯಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಬರಲು ರೆಡ್ ಕಾರ್ಪೆಟ್ ಹಾಕಿದಂತೆ ಆಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೈಕಮಾಂಡ್ ವಿರುದ್ಧ ವಿಧಾನಸೌಧದಲ್ಲಿ ಸಿಕ್ಕಾಗ ತಮ್ಮ ಅಳಲು ತೋಡಿಕೊಂಡರು.
ಲೋಕಸಭೆಗೆ ಯಡಿಯೂರಪ್ಪ-ಕುಮಾರಸ್ವಾಮಿ ಜೋಡೆತ್ತು!
ದೇಶದಲ್ಲಿ ಆಯೋಧ್ಯೆ ಬಗ್ಗೆ ಚರ್ಚೆ ನಡೆಯುತ್ತಿರುವ ನಡುವೆ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಬಗ್ಗೆ ದಿನಕೊಂದು ಹೊಸ ಚರ್ಚೆ ಆರಂಭ ಆಗ್ತಿದೆ. 2019ರಲ್ಲಿ ಜೋಡೆತ್ತು ಪಾಲಿಟಿಕ್ಸ್ ಭಾರಿ ಚರ್ಚೆ ಆಗಿತ್ತು. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಪರವಾಗಿ ನಟ ದರ್ಶನ್ ಮತ್ತು ಯಶ್ ಪ್ರಚಾರ ಮಾಡಿ ಜೋಡೆತ್ತುಗಳೆಂದೇ ಹೊಸ ಹೆಸರು ಪಡೆದಿದ್ದರು. ಕೊನೆಗೆ ಸುಸ್ತಾಗಿದ್ದ ಅಂದಿನ ಸಿಎಂ ಕುಮಾರಸ್ವಾಮಿ ಅವರು ಡಿ ಕೆ ಶಿವಕುಮಾರ್ ಅವರನ್ನು ತಮ್ಮ ಜತೆ ಕರೆದುಕೊಂಡು ಹೋಗಿ ನಿಜವಾದ ಜೋಡೆತ್ತು ನಾವೇ ಅಂತ ಮಂಡ್ಯದಲ್ಲಿ ಬಸ್ ಮೇಲೆ ನಿಂತು ಕೈ ಎತ್ತಿದ್ದರು. ಆದ್ರೆ ಮಂಡ್ಯದ ಜನ ಇವರಿಬ್ಬರಿಗೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಕೈ ಎತ್ತಿದರು. ಬಿಜೆಪಿ ಬೆಂಬಲಿತ ಸುಮಲತಾ ಅವರನ್ನು ಗೆಲ್ಲಿಸಿದರು. ಆದರೆ ಈಗ ಈ ಭಲೇ ಜೋಡಿ ಬದಲಾವಣೆ ಕಂಡಿದೆ. 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನ ಗೆಲ್ಲಬೇಕೆಂಬ ಗುರಿಯೊಂದಿಗೆ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಟಾಸ್ಕ್ ಕೊಟ್ಟು ಮೈತ್ರಿ ಫೈನಲ್ ಮಾಡಿಕೊಂಡಿದೆ. ಈ ಬೆನ್ನಲ್ಲೇ ಕುಮಾರಸ್ವಾಮಿ ಅಂಡ್ ಟೀಮ್ ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸಕ್ಕೆ ಎಂಟ್ರಿ ಕೊಟ್ಟು ಮೈತ್ರಿ ನೊಗ ಹೊತ್ತುಕೊಂಡು ಈ ಬಾರಿ ನಾವಿಬ್ಬರು ಜೋಡೆತ್ತಿನಂತೆ ಕೆಲಸ ಮಾಡೋಣ ಸರ್ ಅಂದಿದ್ದಾರಂತೆ ಕುಮಾರಸ್ವಾಮಿ!
ರಾಜ್ಯ ಕಾಂಗ್ರೆಸ್‌ಗೆ ಸವಾಲಾದ ಅಭ್ಯರ್ಥಿ ಆಯ್ಕೆ!
ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಗೆ ಈ ಬಾರಿ ಏನಾದರೂ ಮಾಡಿ ಅಧಿಕಾರ ಪಡೆಯುವ ಹಂಬಲ. ಹೀಗಾಗಿ ದಕ್ಷಿಣ ರಾಜ್ಯಗಳಲ್ಲಿ INDIA ಒಕ್ಕೂಟ ಕನಿಷ್ಠ 75ರ ಗಡಿ ದಾಟಿದರೆ ಬಿಜೆಪಿ ಅಷ್ಟು ಸುಲಭವಾಗಿ ಅಧಿಕಾರ ಪಡೆಯಲು ಸಾಧ್ಯವಿಲ್ಲ ಅನ್ನೋ ಲೆಕ್ಕಾಚಾರ ಹಾಕಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕನಿಷ್ಠ 20 ಸ್ಥಾನ ಗೆಲ್ಲುವ ಟಾಸ್ಕ್ ಹೈಕಮಾಂಡ್ ನೀಡಿದೆ. ಆದರೆ ಇತ್ತ ಹೈಕಮಾಂಡ್ ಪದೇಪದೇ ಭೇಟಿ ಮಾಡಿ ಸಭೆ ಮಾಡಿದರೂ ಸೂಕ್ತ ಅಭ್ಯರ್ಥಿ ಸಿಕ್ತಿಲ್ಲ. ಇರೋ ಸಚಿವರು ಅಭ್ಯರ್ಥಿ ಆಗಲು ಮುಂದಾಗುತ್ತಿಲ್ಲ. ಹಾಗಾಗಿ ಮೋದಿ ಅಲೆ ಎದುರು ಗೆಲ್ಲುವ ಕುದುರೆಗಾಗಿ ಕಾಂಗ್ರೆಸ್ ವರಿಷ್ಠರು ತಲಾಷ್ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: ವಿಧಾನಸೌಧ ರೌಂಡ್ಸ್: ‘ಗ್ಯಾರಂಟಿ ಪಕ್ಷʼಕ್ಕೆ ರಾಮನ ಭಯ, ರೇವಣ್ಣಗೆ ಶತ್ರು ಭಯ!