ಅಪ್ಪಂಗಳದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೈಸ್ ರಿಸರ್ಚ್ ಸೆಂಟರನ್ನು ನಾನು ಬಾಲ್ಯದಿಂದಲೂ ನೋಡುತ್ತಾ ಬೆಳೆದಿದ್ದೇನೆ. ಮಡಿಕೇರಿ- ಭಾಗಮಂಡಲದ ಹೆದ್ದಾರಿಯಲ್ಲಿ ಸುಮಾರು ನಲವತ್ತು ಎಕ್ರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಸಂಸ್ಥೆಯ ಬಗ್ಗೆ ಕುತೂಹಲದ ಜೊತೆಗೆ ರಸ್ತೆಯಂಚಿನಲ್ಲಿ ಸೊಗಸಾಗಿ ಬೆಳೆದ ಅವರ ಏಲಕ್ಕಿ ಸಸ್ಯಗಳನ್ನು ನಮ್ಮ ತೋಟದೊಂದಿಗೆ ಹೋಲಿಸಿಕೊಂಡಾಗ ಮೂಡುತ್ತಿದ್ದ ಸಣ್ಣ ಮಟ್ಟಿಗಿನ ಅಸೂಯೆ ಕೂಡ ನನ್ನ ಬಾಲ್ಯದ ದಿನಗಳ ಒಂದು ಅವಿಭಾಜ್ಯ ಅಂಗ.
ಕ್ಯಾನ್ಸರಿಗೆ ಕಿದ್ವಾಯಿ, ಹೃದಯಕ್ಕೆ ಜಯದೇವದಂತಹ ಸಂಸ್ಥೆಗಳು ನಮ್ಮ ರಾಜ್ಯದಲ್ಲಿದ್ದರೂ ಕರ್ನಾಟಕದ ಗ್ರಾಮೀಣ ಜನರು ಅಂತಹ ಸಂಸ್ಥೆಗೆ ನೇರವಾಗಿ ಹೋಗಲು ಹಿಂದೇಟು ಹಾಕುತ್ತಾ, ಆ ಸಂಸ್ಥೆಯೊಳಗೆ ತಮಗಿರಬಹುದಾದ ಪರಿಚಿತರನ್ನು ಹುಡುಕುವುದನ್ನು ನಾನು ಅನೇಕ ಬಾರಿ ಗಮನಿಸಿದ್ದೇನೆ.
“ಅದು ಸರಕಾರಿ ವೈದ್ಯಕೀಯ ಸಂಸ್ಥೆ.. ಯಾರಪ್ಪನದಲ್ಲಾರೀ…” ಎಂದು ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಿದ್ದ ಜನರ ಮೇಲೆ ಸಿಡುಕುತ್ತಿದ್ದ ನಾನು, ಸ್ವತಃ ಏಲಕ್ಕಿ ಬೆಳೆಗಾರನಾಗಿದ್ದರೂ ಅಪ್ಪಂಗಳದ ಸರಕಾರಿ ಸ್ಪೈಸ್ ರಿಸರ್ಚ್ ಸಂಸ್ಥೆಯ ಗೇಟಿನೊಳಗೆ ಹೋಗಲು ಇಷ್ಟು ವರ್ಷಗಳ ಕಾಲ ಮೀನಾಮೇಷ ಎಣಿಸಿದ್ದು ಮತ್ತು ಅಲ್ಲಿಯ ಹಿರಿಯ ವಿಜ್ಞಾನಿ ಮತ್ತು ಸಂಸ್ಥೆಯ ಮುಖ್ಯಸ್ಥರಾಗಿರುವ ಡಾ. ಅಂಕೇಗೌಡರ ಪರಿಚಯವಾದ ನಂತರವೇ ಅಲ್ಲಿಗೆ ಹೋಗಲು ಬಯಸಿದ್ದು, ಬಹುಶಃ ನನ್ನೊಳಗೂ ಇರುವ ಸುಪ್ತ ಭಾರತೀಯ ಮನಸ್ಥಿತಿಯ ಪ್ರತೀಕವಿರಬಹುದು!
ಕೃಷಿ ಮತ್ತು ಗ್ರಾಮೀಣ ಭಾರತದ ಬಗ್ಗೆ ಬರೆಯುವ ಅಂಕಣಗಳಿಂದ ವಿಶ್ವವಿಖ್ಯಾತರಾದ ಲೇಖಕ ಪಿ. ಸಾಯಿನಾಥರು, ಭಾರತದಲ್ಲಿ ಕೃಷಿ ಕ್ಷೇತ್ರದ ಈ ಬದಲಾವಣೆಗಳ ಬಗ್ಗೆ ಬಹಳ ಸೊಗಸಾಗಿ ಬರೆದಿದ್ದಾರೆ. ಹಿಂದೆ ಹರಿಯಾಣದಲ್ಲಿ ಎಮ್ಮೆ ಸಾಕುತ್ತಿದ್ದ ರೈತರು, ತಮ್ಮ ಎಮ್ಮೆ ಅಸ್ವಸ್ಥವಾದಾಗ ಅದನ್ನು ನೇರವಾಗಿ ಹರ್ಯಾಣದ ಹಿಸಾರಿನಲ್ಲಿರುವ ರಾಷ್ಟ್ರೀಯ ಎಮ್ಮೆಗಳ ರಿಸರ್ಚ್ ಸೆಂಟರಿನ ಮುಂದೆ ಕಟ್ಟಿಹಾಕಿ “ನೋಡ್ರಿ ಏನಾಗಿದೆ ನಮ್ಮ ಎಮ್ಮೆಗೆ” ಎಂದು ಹರಿಯಾಣ್ವಿ ಭಾಷೆಯಲ್ಲಿ ಒರಟಾಗಿ ಒದರುತ್ತಿದ್ದರು. ಅಲ್ಲಿಯ ವಿಜ್ಞಾನಿಗಳು ಮತ್ತು ವೈದ್ಯರು ರೈತರೊಂದಿಗೆ ಸರಳವಾಗಿ ಬೆರೆಯುತ್ತಾ, ಎಮ್ಮೆಯ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾ ಬಗೆಹರಿಸುವಾಗ ಎರಡೂ ಕಡೆಯವರಿಗೆ ಲಾಭವಾಗುತ್ತಿತ್ತು. ರೈತರು ಮತ್ತು ವಿಜ್ಞಾನಿಗಳ ನಡುವಿನ ಪರಸ್ಪರ ಅರಿವು ಮತ್ತು ಬಾಂಧವ್ಯ ಹೆಚ್ಚಾಗಲು ಎಮ್ಮೆ ನೆಪವಾಗುತ್ತಿತ್ತು ಮತ್ತು ಒಬ್ಬರಿಗೆ ಮತ್ತೊಬ್ಬರ ಪ್ರಾಯೋಗಿಕ ಸವಾಲುಗಳ ಮತ್ತು ಸಮಸ್ಯೆಗಳ ಬಗೆಗೆ ಬಹಳಷ್ಟು ಒಳನೋಟ ಸಿಗುತ್ತಿತ್ತು.
ಆದರೆ ಕಾಲಕ್ರಮೇಣ ನಗರ ಪ್ರದೇಶದ ಹಿನ್ನಲೆಯಿರುವ ಹೊಸಾ ವಿಜ್ಞಾನಿಗಳು ಬಂದಂತೆ ಮತ್ತು ಅವರ ಮತ್ತು ರೈತರ ನಡುವಿನ ಬಾಂಧವ್ಯ ವಿಭಿನ್ನ ಭಾಷೆ ಮತ್ತು ಆಧುನಿಕತೆಯ ಕಾರಣದಿಂದ ಸಡಿಲವಾಗುತ್ತಾ ಹೋದಂತೆ ತಮ್ಮ ಊರಿನಲ್ಲೆ ಎಮ್ಮೆಗಳ ಸಂಶೋಧನಾ ಕೇಂದ್ರವಿದ್ದರೂ ಎಮ್ಮೆಗೆ ಹುಷಾರು ತಪ್ಪಿದಾಗ ರೈತರು ಅದನ್ನು ವಿಜ್ಞಾನಿಗಳ ಬಳಿಗೆ ಹೊಡೆದುಕೊಂಡು ಬರುವುದನ್ನು ಕಾಲಕ್ರಮೇಣ ನಿಲ್ಲಿಸತೊಡಗಿದರು. ಅಲ್ಲಿಯ ವಿಜ್ಞಾನಿಗಳು ಎಮ್ಮೆಯ ಮೇಲೆ ಮಾಡುತ್ತಿದ್ದ ಸಂಶೋಧನೆ ಮತ್ತು ಪ್ರಬಂಧಗಳು ಅಂತರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದರೂ ಅವರು ತಮ್ಮದೇ ಊರಿನ ರೈತರು ಮತ್ತು ಎಮ್ಮೆಗಳಿಂದ ದೂರವಾಗುತ್ತಾ ಹೋದ ಈ ವಿಷಯವನ್ನು ಪಿ. ಸಾಯಿನಾಥ್ ಅವರ ಲೇಖನಗಳಲ್ಲಿ ಓದಿದ್ದ ನನಗೆ, ನಾನೊಬ್ಬ ಕೃಷಿಕನಾಗಿದ್ದರೂ ಕೃಷಿ ವಿಜ್ಞಾನಿಗಳನ್ನು ಮುಕ್ತವಾಗಿ ಭೇಟಿಯಾಗಲು ಮತ್ತು ಚರ್ಚಿಸಲು ಮನದೊಳಗೆ ಕೆಲವು ಹಿಂಜರಿಕೆಗಳಿದ್ದವು.
“ಕೃಷಿ ವಿಜ್ಞಾನಿಗಳಿಗೆ ನಮ್ಮ ಜೊತೆ ಮಾತನಾಡಲು ಸಮಯವಿರುತ್ತೋ ಏನೋ?!” ಎಂಬ ಸಂಕೋಚಗಳ ಮೂಟೆಯೊಂದಿಗೆ ನಾನು ಅಪ್ಪಂಗಳದ ಸ್ಪೈಸ್ ರಿಸರ್ಚ್ ಕೇಂದ್ರಕ್ಕೆ ಹೊರಟೆ. ಕೊರೊನಾ ವೈರಸ್ಸಿಗೆ ವ್ಯಾಕ್ಸಿನ್ ಪಡೆದವರು ಸ್ವಲ್ಪ ಧೈರ್ಯವಾಗಿ ಮನೆಬಿಡುವಂತೆ “ನಮ್ಗೆ ಡಾ. ಅಂಕೇಗೌಡರು ಗೊತ್ತು” ಎಂಬ ಆತ್ಮವಿಶ್ವಾಸ ಮನದ ಮೂಲೆಯಲ್ಲಿದ್ದ ಕಾರಣ ಮಾಸ್ಕು ಸರಿಪಡಿಸಿಕೊಳ್ಳಿ ಎಂದು ದಬಾಯಿಸಿದ ಸೆಕ್ಯುರಿಟಿಯವರನ್ನು “ಎಲ್ರೀ.. ಹಿರಿಯ ವಿಜ್ಞಾನಿ ಡಾ. ಅಂಕೇಗೌಡರ ಕಚೇರಿ” ಎಂದು ವಾಪಾಸ್ ದಬಾಯಿಸುತ್ತಾ ಆ ಸಂಸ್ಥೆಯ ಆವರಣವನ್ನು ಪ್ರವೇಶಿಸಿದೆ.
ಡಾ. ಅಂಕೇಗೌಡರು ಪ್ಲಾಂಟ್ ಫಿಸಿಯೋಲಜಿಸ್ಟ್ ಮತ್ತು ಕರಿಮೆಣಸು ಬೆಳೆಯ ಬಗ್ಗೆ ವಿಶೇಷ ಆಸಕ್ತಿಯಿರುವ ವ್ಯಕ್ತಿಯೆಂದು ಇತರರಿಂದ ಕೇಳಿ ತಿಳಿದಿದ್ದೆ. ಕೃಷಿ ವಿಜ್ಞಾನಿಗಳ ವಿಷಯ ಬಂದಾಗಲೆಲ್ಲ ನನಗೆ ತೇಜಸ್ವಿಯವರ “ಕರ್ವಾಲೋ” ಕಾದಂಬರಿ ನೆನಪಾಗುತ್ತದೆ. ಮೂಡಿಗೆರೆಯ ಜೇನು ಸಂಶೋಧನಾ ಕೇಂದ್ರದ ಖ್ಯಾತ ವಿಜ್ಞಾನಿಯಾದ ಕರ್ವಾಲೊ ಸಾಹೇಬರ ಬಗ್ಗೆ ಊರಿನ ಜನರು ಸುಮ್ಮಸುಮ್ಮನೆ “ನಮ್ಗೆ ಕರ್ವಾಲೋ ಗೊತ್ತು” ಎಂದು ತೇಜಸ್ವಿಯವರ ಮುಂದೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರಂತೆ. ಅಸಲಿಗೆ ಕರ್ವಾಲೋ ಸಾಹೇಬರು ಜೇನು ಕೃಷಿ ಮತ್ತು ಪರಿಸರದ ಬಗ್ಗೆ ಕುತೂಹಲವಿಲ್ಲದ ಆ ಪ್ರತಿಷ್ಠಿತ ಜನರಿಂದ ದೂರವಿದ್ದು ಮಂದಣ್ಣನೆಂಬ ಕೆಳಹಂತದ ನೌಕರನೊಂದಿಗೆ ಏತಕ್ಕಾಗಿ ಕಾಡು ಸುತ್ತುತ್ತಿದ್ದರೆಂಬ ವಿಷಯವನ್ನು ಆ ಕಾದಂಬರಿಯಲ್ಲಿ ತೇಜಸ್ವಿಯವರು ರಸವತ್ತಾಗಿ ಹೇಳುತ್ತಾ ಹೋಗುತ್ತಾರೆ. ಅಂಕೇಗೌಡರ ಕಚೇರಿಯ ಮುಂದೆ ನೇತು ಹಾಕಿದ್ದ ದಪ್ಪ ಅಕ್ಷರಗಳ ಅವರ ಹೆಸರಿನ ಬೋರ್ಡ್ ಮೇಲೆ ಕಣ್ಣಾಡಿಸಿ ನಾನು ಒಳಗೆ ಇಣುಕಿದಾಗ ನನ್ನನ್ನು ಮುಗುಳು ನಗುವಿನೊಂದಿಗೆ ಸ್ವಾಗತಿಸಿದ ಅಂಕೇಗೌಡರ ಮುಖ ಕಣ್ಣಿಗೆ ಕಾಣುತ್ತಿದ್ದರೂ, ನನ್ನ ಮನಸ್ಸಿನಲ್ಲಿ “ನಮ್ಗೆ ಅಂಕೇಗೌಡರು ಗೊತ್ತು.. ನಾವು ಬಹಳ ಕ್ಲೋಜು” ಎಂದು ಬೊಗಳೆ ಬಿಡುತ್ತಿದ್ದ ಮತ್ತು ಅಪ್ಪಿತಪ್ಪಿಯೂ ತಮ್ಮ ತೋಟದ ಕಡೆಗೆ ತಲೆ ಹಾಕದಿದ್ದ ಕೆಲವು ಪ್ರತಿಷ್ಠಿತರು ನೆನಪಾದರು.
ಕೊಡಗಿನ ಅನೇಕ ಭಾಗಗಳಲ್ಲಿ ಏಲಕ್ಕಿಯ ಪಾರುಪತ್ಯವಿದ್ದ ವಿಷಯವನ್ನು ನಮ್ಮ ಹಿರಿಯ ತಲೆಮಾರಿನ ಜನರನ್ನು ಕೇಳಿದರೆ ವಿಸ್ತಾರವಾಗಿ ಹೇಳುತ್ತಾರೆ. ಕಾಫಿ ಬೆಳೆಯಲು ಕಾಫಿ ಬೋರ್ಡು, ಪರ್ಮಿಟ್ಟು ಮತ್ತೊಂದು ಇದ್ದ ಕಾಲಘಟ್ಟದಲ್ಲಿ ಕೊಡಗಿನ ಹಿರಿಯ ತಲೆಮಾರಿನ ಜನರ ಕೈಯಲ್ಲಿ ಕಾಸು ಓಡಾಡುವಂತೆ ಮಾಡಿದ ಮೊದಲ ವಾಣಿಜ್ಯ ಬೆಲೆ ಇದೇ ಮಲಬಾರ್ ತಳಿಯ ಏಲಕ್ಕಿ. ವಿಪರೀತ ಮಳೆಯಾಗುವ ಪ್ರದೇಶಗಳು ಮತ್ತು ದಟ್ಟ ಅರಣ್ಯವಿರುವ ಕಡೆಗಳಲ್ಲಿ ಇದು ನೈಸರ್ಗಿಕವಾಗಿ ಹೆಚ್ಚು ಕೆಲಸವಿಲ್ಲದೆ ಉತ್ಪತ್ತಿಯಾಗುತ್ತಿತ್ತು.
ಇದನ್ನೂ ಓದಿ | ಪ್ರಣಾಮ್ ಭಾರತ್ ಅಂಕಣ | ನೆನಪುಗಳು ಮಾಸುವ ಮುನ್ನ
ತೊಂಬತ್ತರ ದಶಕ ಬರುತ್ತಿದ್ದಂತೆ ಏಲಕ್ಕಿಯ ಅಧಃಪತನವಾದದಕ್ಕೆ ಹಲವಾರು ಕಾರಣಗಳಿವೆ. ಬದಲಾದ ಹವಾಮಾನ, ಕಟ್ಟೆರೋಗ ಕೊಟ್ಟ ಮೊಸೈಕ್ ವೈರಸ್, ಕಡಿಮೆಯಾದ ಕಾಡು ಇತ್ಯಾದಿ ಕಾರಣಗಳಿಂದ ತೊಂಬತ್ತರ ದಶಕ ಬರುತ್ತಿದ್ದಂತೆ ಸಾವಿರಾರು ಕೆಜಿ ಏಲಕ್ಕಿ ಬೆಳೆಯುತ್ತಿದ್ದ ಬೆಳೆಗಾರರ ಮನೆಗಳಲ್ಲೂ ಏಲಕ್ಕಿ ಅಪರೂಪದ ವಸ್ತುವಾಯಿತು. ಕಾಫಿಗೆ ತೊಂಬತ್ತರ ದಶಕದಲ್ಲಿ ಬಂದ ಬಂಗಾರದ ಬೆಲೆಯ ಕಾರಣದಿಂದ ಊರಿಗೆ ಊರೇ ಮತಾಂತರವಾಗುವಂತೆ ಏಲಕ್ಕಿ ತೋಟಗಳ ಮರಗಳನ್ನು ಸವರಿದ ಜನ ರೋಬಸ್ಟಾ ಕಾಫಿಯ ಕಡೆಗೆ ತಮ್ಮ ನಿಷ್ಠೆಯನ್ನು ಬದಲಿಸಿದರು. ಏಲಕ್ಕಿ ಗೂಡುಗಳನ್ನು ಒಡೆದ ಜನರು ಅದನ್ನು ಮನೆಯ ಸ್ಟೋರ್ ರೂಮುಗಳನ್ನಾಗಿಸಿದರು.
ಅಂಕೇಗೌಡರ ತಂಡದ ಎರಡು ಯುವ ವಿಜ್ಞಾನಿಗಳಾದ ಹಾಸನದ ಶಿವಕುಮಾರ್ ಮತ್ತು ಮೂಡಿಗೆರೆಯವರಾದ ಅಕ್ಷಿತಾರವರು ನನ್ನನ್ನು ಪೀಲ್ಡ್ ವಿಸಿಟ್ ಮಾಡುವ ಸಲುವಾಗಿ ಅವರ ಬೆಳೆಯುತ್ತಿರುವ ವಿವಿಧ ತಳಿಯ ಏಲಕ್ಕಿತೋಟಕ್ಕೆ ಕರೆದೊಯ್ದರು. ದಷ್ಟಪುಷ್ಟವಾಗಿ ಬೆಳೆದ ಏಲಕ್ಕಿ ಕಾಂಡಗಳಿಂದ ನಳನಳಿಸುತ್ತಿದ್ದ ಏಲಕ್ಕಿ ತೋಟದಲ್ಲಿ ವಿವಿಧ ಬೆಳವಣಿಗೆಯ ಹಂತದಲ್ಲಿದ್ದ ಏಲಕ್ಕಿ ಕಟಾವಿಗೆ ಸಿದ್ಧವಾಗಿತ್ತು. ತೋಟದೊಳಗೆ ಓಡಾಡುತ್ತಾ ನನ್ನ ತಲೆಯಲ್ಲಿ ಮೂಡುತ್ತಿದ್ದ ನೂರಾರು ಪ್ರಶ್ನೆಗಳಿಗೆ ಯುವ ವಿಜ್ಞಾನಿಗಳು ಉತ್ತರಿಸುತ್ತಿರುವಾಗ, ಏಲಕ್ಕಿಯ ವಿಷಯದಲ್ಲಿ ನನಗಿದ್ದ ಅನೇಕ ತಪ್ಪು ಕಲ್ಪನೆಗಳು ಮಾಯವಾದವು. ವಿಜ್ಞಾನಿಗಳ ಕೆಲವು ಅಭಿಪ್ರಾಯಗಳು ನನಗೆ ಒಬ್ಬ ಸಾಮಾನ್ಯ ಬೆಳೆಗಾರನಿಗೆ ಪ್ರಾಯೋಗಿಕವಾಗಿ ಅನುಸರಿಸಲು ಕಷ್ಟವೆಂದು ಅನಿಸಿದದ್ದನ್ನು ನಾನು ನೇರವಾಗಿ ಅವರಿಗೆ ಹೇಳಿದಾಗಲೂ ಅವರು ಬೇಸರಿಸಿಕೊಳ್ಳಲಿಲ್ಲ..
“ಏಲಕ್ಕಿಯಲ್ಲಿ ಕಾಫಿಗಿಂತ ಕೆಲಸ ಜಾಸ್ತಿಯಿದೆ” ಎಂದು ಯುವ ವಿಜ್ಞಾನಿ, ಹಾರ್ಟಿಕಲ್ಚರಿಸ್ಟ್ ಅಕ್ಷಿತಾರವರು ಹೇಳಿದಾಗ ಆ ಏಲಕ್ಕಿ ತೋಟದ ಕೆಸರಿನಲ್ಲಿ ನಾನು ಆಘಾತದಿಂದ ಜಾರಿ ಬಿದ್ದು ಬಿಡುತ್ತಿದ್ದೆ. ಏಲಕ್ಕಿಯಿಂದ ಕಾಫಿ ಕೃಷಿಗೆ ಹೊರಳಿದ ಅನೇಕ ಬೆಳೆಗಾರರು ಕಾಫಿಯಲ್ಲಿ ವರ್ಷ ಪೂರ್ತಿ ಕೆಲಸವಿರುತ್ತದೆ, ಏಲಕ್ಕಿಯಲ್ಲಿ ಅತೀ ಕಡಿಮೆ ಕೆಲಸವೆಂದು ಹೇಳುತ್ತಿದ್ದ ಮಾತುಗಳನ್ನು ನಾನು ಕೇಳಿದ್ದೆ. ಮಳೆಗಾಲ ಆರಂಭವಾಗುವಾಗ ಏಲಕ್ಕಿಯ ತೋಟದ ಕಳೆ ಗಿಡಗಳನ್ನು ನಾಶ ಮಾಡುವುದು, ಏಲಕ್ಕಿ ಕುಯ್ದು ಒಣಗಿಸುವುದು ಮತ್ತು ಏಲಕ್ಕಿ ಗಿಡಗಳನ್ನು ಮಂಗಗಳ ಹಾವಳಿಯಿಂದ ರಕ್ಷಿಸುವ ಕೆಲಸ ಬಿಟ್ಟರೆ ಬೇರೆ ಕೆಲಸವನ್ನು ಏಲಕ್ಕಿಯಲ್ಲಿ ನಮ್ಮ ಹಿರಿಯರು ಮಾಡುತ್ತಿರಲಿಲ್ಲ. ಬಹುಶಃ ಆ ಕಾರಣದಿಂದಲೋ ಎನೋ ನಮ್ಮ ಹಿರಿಯರಿಗೆ ಕಾರ್ಮಿಕರ ಕೊರತೆಯನ್ನು ಏಲಕ್ಕಿಯಲ್ಲಿ ಎದುರಿಸಿ ಗೊತ್ತಿರಲಿಲ್ಲ.
ಇದನ್ನೂ ಓದಿ | ಪ್ರಣಾಮ್ ಭಾರತ್ ಅಂಕಣ | ಫ್ಯಾಮಿಲಿ ಮೆಕ್ಯಾನಿಕ್ ಕಥೆ
ಹಿಂದಿನ ಕಾಲದಲ್ಲಿ, ಫಲವತ್ತಾದ ಕಾಡುಗಳಲ್ಲಿ ಏಲಕ್ಕಿಯನ್ನು ಬಿಸಾಕಿದರೂ ಅದು ಹುಟ್ಟಿ ಬೆಳೆದು ಚನ್ನಾಗಿ ಹಿಡಿಯುತ್ತಿತ್ತು. ಆದರೆ ಮಣ್ಣಿನ ಫಲವತ್ತತೆ ಕಡಿಮೆಯಾದಂತೆ ಏಲಕ್ಕಿಯಲ್ಲಿ ಫಸಲು ಕುಂಠಿತವಾಗಿ ಅದಕ್ಕೂ ವರ್ಷದಲ್ಲಿ ಕನಿಷ್ಠ ಪಕ್ಷ ಎರಡು ಬಾರಿ ಯನ್‌ಪಿಕೆ ರಸಕೊಬ್ಬರ ಕೊಟ್ಟು ಬೆಳೆಸಿದರೆ ಮಾತ್ರ ಉತ್ತಮ ಫಸಲನ್ನು ನಿರೀಕ್ಷಿಸಬಹುದೆಂದು ಅಕ್ಷಿತಾರವರು ತಿಳಿಸಿದರು. ಬೇಸಿಗೆಯಲ್ಲಿ ನೀರು ಕಡಿಮೆಯಾದಾಗ ನೀರು ಹಾಯಿಸುವುದು ಮತ್ತು ಕೀಟ ಬಾಧೆಯಿದ್ದಾಗ ಕೀಟನಾಶಕದ ಸಿಂಪಡಣೆಯ ಬಗ್ಗೆಯೂ ಮಾತನಾಡಿದರು. ಏಲಕ್ಕಿಯ ಬಣ್ಣ ಹಸಿರಾಗಿದ್ದರೆ ಮಾತ್ರ ಉತ್ತಮ ಧಾರಣೆ ಸಿಗುವ ಕಾರಣ ಏಲಕ್ಕಿ ಬಣ್ಣವನ್ನು ಸಂರಕ್ಷಿಸುವ ಬಗ್ಗೆಯೂ ಮಾತನಾಡಿದರು. ಥ್ರಿಫ್ಸ್ ಕೀಟದ ಹಾವಳಿಯನ್ನು ತಡೆಯಲು ಫಿಪಾನಿನ್ ಸಿಂಪಡಣೆ ಮತ್ತು ಕಾಂಡ ಹಾಗು ಕಾಯಿ ಕೊರೆಯುವ ಕೀಟದ ಹತೋಟಿಗೆ ಕ್ವಿನಾಲ್ ಫಾಸ್ ಸಿಂಪಡಣೆಯ ಬಗ್ಗೆಯೂ ಅವರು ಹೇಳುತ್ತಾ ಹೋದರು.
ಮಲೆನಾಡಿನ ಗ್ರಾಮೀಣ ಏಲಕ್ಕಿ ಬೆಳೆಗಾರರು ತಮ್ಮ ತೋಟದಲ್ಲಿ ಏಲಕ್ಕಿ ಗಿಡವನ್ನು ನೆಟ್ಟು ಅವರ ಅಪ್ಪನ ಕಾಲದಲ್ಲಿ ಏಲಕ್ಕಿಯನ್ನು ನೈಸರ್ಗಿಕವಾಗಿ ಬೆಳೆದಂತೆ ಈಗ ಬೆಳೆಯಬಹುದೆಂದು ನಿರೀಕ್ಷಿಸಿ ನಿರಾಶರಾಗುತ್ತಿದ್ದರೆ, ಅನೇಕ ಕೇರಳಿಗರು ಏಲಕ್ಕಿಯ ಹಳೇಯ ಮಲಬಾರ್ ತಳಿಗಳಿಂದ ದೂರವಾಗಿ ನೆಲ್ಯಾಣಿ ಮತ್ತಿತರ ತಳಿಗಳನ್ನು ಬೆಳೆಸುತ್ತಿದ್ದಾರೆ. ಅವರು ಏಲಕ್ಕಿಗೆ ರಸಗೊಬ್ಬರ, ಕೀಟ ನಾಶಕ ಮತ್ತು ಬೇಸಿಗೆಯಲ್ಲಿ ನೀರಾವರಿ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದಾರೆ. ಏಲಕ್ಕಿಗೆ ಕೆಲವರ್ಷಗಳ ಹಿಂದೆ ಬಂಗಾರದ ಬೆಲೆ ಬಂದಾಗಲೂ ಏಲಕ್ಕಿಯ ಮೇಲೆ ಹಣ ಹಾಕಿ ಹಣ ಬಾಚಿದವರೂ ಕೂಡ ವೈಜ್ಞಾನಿಕವಾಗಿ ಮತ್ತು ವಾಣಿಜ್ಯದ ದೃಷ್ಟಿಯಿಂದ ಏಲಕ್ಕಿ ಬೆಳೆದವರೇ ಹೊರತು ಅಪ್ಪ ನೆಟ್ಟ ಆಲದ ಮರಕ್ಕೆ ಸುತ್ತು ಬರುತ್ತಿರುವ ಸಣ್ಣ ಗ್ರಾಮೀಣ ಬೆಳೆಗಾರರಲ್ಲ.
ಈ ವಿಜ್ಞಾನಿಗಳ ಮಾತುಗಳನ್ನು ಕೇಳುತ್ತಿದ್ದಂತೆ ಇಂದಿನ ದಿನ ಏಲಕ್ಕಿಯನ್ನು ಬೆಳೆಯಬೇಕಾದರೆ ಅದರಲ್ಲೂ ಕಾಫಿಯಷ್ಟೆ ಕೆಲಸವಿದೆಯೆಂದೆನಿಸಿತು. ಏಲಕ್ಕಿ ತೋಟದಲ್ಲಿ ಹಳೇ ಗಿಡಗಳಿಗೆ ಎಂಟು ಹತ್ತು ವರ್ಷವಾದಾಗ ಅವುಗಳ ಗಿಡಗಳನ್ನು ಕಿತ್ತು, ಹೊಸಾ ಗಿಡವನ್ನು ನೆಡಬೇಕಾಗಿ ಬರುವ ವಿಷಯವೂ ಜ್ಞಾಪಕವಾಯಿತು. ಬಹುಶಃ ಅವರ ಎಲ್ಲಾ ಉಪದೇಶಗಳನ್ನು ಅಳವಡಿಸಿಕೊಳ್ಳಲು ಕಷ್ಟವಾದರೂ, ವರ್ಷಕ್ಕೆ ಎರಡು ಬಾರಿ ರಸಗೊಬ್ಬರ ಕೊಡುವುದು ಮತ್ತು ಬೇಸಿಗೆಯಲ್ಲಿ ಕನಿಷ್ಠ ಒಂದು ಬಾರಿಯಾದರೂ ನೀರು ನೀಡದಿದ್ದರೆ ಉತ್ತಮ ಫಸಲನ್ನು ಏಲಕ್ಕಿಯಲ್ಲಿ ಪಡೆಯಲು ಕಷ್ಟವಾಗಬಹುದು. ಬೆಳೆಗಾರನಿಗೆ ಕಾರ್ಮಿಕರ ಮತ್ತು ಸಂಪನ್ಮೂಲಗಳ ವಿಷಯದಲ್ಲಿರುವ ಸಮಸ್ಯೆಗಳನ್ನು, ವಿಜ್ಞಾನಿಗಳ ಉಪದೇಶದ ಜೊತೆಯಲ್ಲಿ ತಾಳೆ ಹಾಕಿ ಮಧ್ಯ ಪಥವನ್ನು ಅನುಸರಿಸುವುದು ಸಮಂಜಸವೆಂದು ನನ್ನ ಮನಸ್ಸಿನಲ್ಲಿ ಅನಿಸುತ್ತಿತ್ತು. ಆದರೆ ಕಟ್ಟೆಯಂತಹ ಮಾರಕ ರೋಗದ ವಿಷಯಕ್ಕೆ ಬಂದಾಗ ರೋಗಗ್ರಸ್ತ ಗಿಡಗಳನ್ನು ಮುಲಾಜಿಲ್ಲದೆ ಕಿತ್ತು ನಾಶಮಾಡಬೇಕೆನ್ನುವ ವಿಜ್ಞಾನಿಗಳ ಮಾತನ್ನು ಚಾಚೂ ತಪ್ಪದೆ ಅನುಸರಿಸುವುದರಲ್ಲಿ ಯಾವುದೇ ಅನುಮಾನಗಳಿರಬಾರದು.
ಇದನ್ನೂ ಓದಿ | ಪ್ರಣಾಮ್ ಭಾರತ್ ಅಂಕಣ: ಸ್ಟೆತಾಸ್ಕೋಪಿನ ಆತ್ಮಕಥೆ
ಜೊತೆಗಿದ್ದ ಮತ್ತೊಬ್ಬ ಯುವ ವಿಜ್ಞಾನಿ ಶಿವಕುಮಾರರು ಪ್ಲ್ಯಾಂಟ್ ಬ್ರೀಡರ್ ಆಗಿದ್ದ ಕಾರಣ ಪ್ರಾಯೋಗಿಕ ಹಂತದಲ್ಲಿರುವ ಮತ್ತು ಮುಂದೆ ಮಾರುಕಟ್ಟೆಗೆ ಬರಲಿರುವ ಏಲಕ್ಕಿಯ ಹೊಸಾ ತಳಿಗಳನ್ನು ವಿಶೇಷ ಆಸಕ್ತಿಯಿಂದ ನನಗೆ ತೋರಿಸುತ್ತಾ ಹೋದರು. ನೆಲ್ಯಾಣಿ ಮತ್ತು ಮಲಬಾರಿ ತಳಿಗಳ ಪರಿಚಯ ಮಾತ್ರವಿದ್ದ ನನಗೆ ಏಲಕ್ಕಿಯಲ್ಲಿ ಇನ್ನೂರಕ್ಕೂ ಹೆಚ್ಚು ತಳಿಗಳ ಬಗ್ಗೆ ಈ ಕೇಂದ್ರದಲ್ಲಿ ಸಂಶೋಧನೆ ನಡೆಯುತ್ತಿರುವ ವಿಚಾರ ಅಚ್ಚರಿಯ ಸಂಗತಿಯಾಗಿತ್ತು. ಅಪ್ಪಂಗಳದ ಸ್ಪೈಸ್ ರಿಸರ್ಚ್ ಸೆಂಟರಿನಲ್ಲಿ ಕರಿಮೆಣಸಿನ ನೂರಾರು ತಳಿಗಳನ್ನೂ ಶಿವಕುಮಾರರು ನನಗೆ ತೋರಿಸುತ್ತಾ ಪ್ರಪಂಚದ ವಿವಿಧ ಭಾಗಗಳಿಂದ ಅವುಗಳನ್ನು ಸಂಗ್ರಹಿಸಿ ತಂದ ಕಥೆಯನ್ನು ಹೇಳಿದರು. ಕೆಲವು ತಳಿಗಳ ಎಲೆಗಳನ್ನು ಮೂಸಿ ನೋಡಲು ಹೇಳಿ ಅದರ ವಿಭಿನ್ನತೆಯನ್ನು ತಿಳಿಸಿದರೆ ಮತ್ತೊಂದು ಕರಿಮೆಣಸಿನ ತಳಿಯ ಎಲೆಯನ್ನು ತಿನ್ನಲು ಹೇಳಿದರು. ಅದರ ರುಚಿ ಸ್ವಲ್ಪ ಸಿಹಿಯಾಗಿರುವ ವೀಳ್ಯದೆಲೆಯ ರುಚಿಯಂತಿತ್ತು. ಕರಿಮೆಣಸಿನ ಗ್ಲಾಸ್ ಹೌಸಿನ ನರ್ಸರಿಯಲ್ಲಿ ಒಂದು ತಳಿಗೆ ಇನ್ನೊಂದು ತಳಿಯನ್ನು ಕಸಿಕಟ್ಟುವ ಕೆಲಸವನ್ನು ಬಹಳ ಸರಳವಾಗಿ ನನಗೆ ವಿವರಿಸಿದರು. ಹಳೇ ಬ್ಲೇಡಿನಲ್ಲಿ ಎರಡು ಬೇರೆ ಬೇರೆ ತಳಿಯ ಬಳ್ಳಿಗಳನ್ನು ತಮಗೆ ಬೇಕಾದ ಆಕಾರದಲ್ಲಿ ಕುಯ್ದು ಜೋಡಿಸಿ ಪಾಲಿತೀನ್ ಕಟ್ಟಿ ಕಸಿ ಗಿಡ ತಯಾರಿಸುವುದು ಮಕ್ಕಳಾಟವೆಂಬಂತೆ ವಿವರಿಸಿದರು. ಬಹುಶಃ ಕ್ಲಿಷ್ಟಕರ ಸಂಗತಿಗಳನ್ನು ಜನಸಾಮಾನ್ಯರಿಗೆ ಸರಳೀಕರಿಸಿ ಹೇಳುವ ವಿಶೇಷ ಜ್ಞಾನವೇ ವಿಜ್ಞಾನವೆಂದು ಅವರ ಮಾತುಗಳನ್ನು ಕೇಳುತ್ತಿದ್ದ ನನಗೆ ಅನಿಸತೊಡಗಿತು. ನಮ್ಮ ಹಳ್ಳಿಗಳಲ್ಲಿ ವಿಪರೀತ ಹವಾ ತಿನ್ನುವ, ಹೋರಿಯ ಬೀಜ ಒಡೆಯುವ ಪರಿಣತರಿಗೆ ಈ ವಿಜ್ಞಾನಿಯಲ್ಲಿರುವ ಸರಳತೆಯನ್ನು ಪರಿಚಯಿಸಬೇಕೆನಿಸಿತು. ಬಹುಶಃ ಅಂತಹವರನ್ನು ಕಂಡು ಅನುಭವವಿರುವ ಹಳ್ಳಿಯ ರೈತ ಈ ಕೃಷಿ ವಿಜ್ಞಾನಿಗಳ ಹೆಸರಿನ ಮುಂದಿರುವ ಪೆಥಾಲಜಿಸ್ಟ್, ಎಂಟಮಾಲಜಿಸ್ಟ್ ಎಂಬ ನಾಲಗೆ ಮಗುಚದ ಆಂಗ್ಲ ಹೆಸರುಗಳನ್ನು ಕೇಳಿ ಇವರ ಬಳಿಗೆ ಬರಲು ಅನವಶ್ಯ ಭಯ ಪಡುತ್ತಿರಬಹುದು!! ಅಸಲಿಗೆ ಈ ವಿಜ್ಞಾನಿಗಳು ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವ ಸರಳ ಜನ.
ಆ ಸಂಸ್ಥೆಯ ಮುಖ್ಯಸ್ಥರಾದ ಅಂಕೇಗೌಡರನ್ನು ಅಲ್ಲಿಂದ ಹೊರಡುವಾಗಲೂ ಭೇಟಿಯಾದೆ. ನಾನು ಅಲ್ಲಿಯ ವಿಜ್ಞಾನಿಗಳಿಂದ ವಿಸ್ಮಿತನಾಗಿದ್ದ ವಿಷಯವನ್ನು ಅವರು ಗಮನಿಸಿರಬಹುದು. ಅವರು ದಶಕಗಳ ಹಿಂದೆ ಇಲ್ಲಿಗೆ ವಿಜ್ಞಾನಿಯಾಗಿ ಬಂದಿದ್ದಾಗ ಇಲ್ಲಿಯ ಕೆಲವು ಪ್ರಗತಿಪರ ಬೆಳೆಗಾರರಿಂದಲೂ ಅಂಕೇಗೌಡರು ಮೂಕವಿಸ್ಮಿತರಾಗಿದ್ದರಂತೆ. ಚೆಟ್ಟಳ್ಳಿಯ ಸಿ.ಪಿ. ಅಪ್ಪಣ್ಣನವರು ಏಲಕ್ಕಿ ಕೃಷಿಯಲ್ಲಿ ಎಷ್ಟು ಪರಿಣತಿಯನ್ನು ಪಡೆದಿದ್ದರೆಂದರೆ ಅವರು ಲಕ್ಷ್ಮಿ ಹೆಸರಿನ ಹೊಸಾ ತಳಿಯನ್ನೂ ತಯಾರಿಸಿ ರೈತರಿಗೆ ಹಂಚಿದ ವಿಷಯವನ್ನು ಅಂಕೇಗೌಡರು ನನಗೆ ತಿಳಿಸಿದರು. ಸಿಪಿ ಅಪ್ಪಣನವರ ಹೆಸರನ್ನು ಇತ್ತೀಚೆಗೆ ಡಾ. ಪಾಟ್ಕರ್ ಅವರ ಜೊತೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಕೇಳಿದಂತಿತ್ತು. ಅದೇ ಪ್ರಗತಿಪರ ಕೃಷಿಕ ಡಾ. ಪಾಟ್ಕರ್ ನಮ್ಮ ಜಿಲ್ಲೆಯ ಮೊದಲ ಆಸ್ಪತ್ರೆ ಸ್ಥಾಪಿಸುವಾಗ ನೆರವಾದ ವ್ಯಕ್ತಿಯೆಂದು ತದನಂತರ ಗೊತ್ತಾಯಿತು.
ಒಂದಂತೂ ಸತ್ಯ.. ಏಲಕ್ಕಿ ಕೃಷಿ ತನ್ನ ಗತವೈಭವಕ್ಕೆ ಮರಳಲು ವಿಜ್ಞಾನಿಗಳ ಜೊತೆಗೆ ಕೃಷಿಕರೂ ಕೈಜೋಡಿಸಬೇಕಿದೆ. ಒಂದು ಕಾಲದಲ್ಲಿ ಸಾವಿರಾರು ಕೆಜಿ ಬೆಳೆಯುತ್ತಿದ್ದವರು ಈಗ ನಿಧಾನಕ್ಕೆ ಮತ್ತೆ ಏಲಕ್ಕಿ ಕೃಷಿಯುತ್ತ ಒಲವು ತೋರುತ್ತಿದ್ದಾರೆ. ಹೊಸಾ ತಳಿಗಳು, ಕಟ್ಟೆರೋಗದ ಹತೋಟಿ ಮತ್ತು ಉತ್ತಮ ಧಾರಣೆಯ ಆಶಾಕಿರಣವಿದ್ದರೆ ಏಲಕ್ಕಿ ಮತ್ತೆ ಕೊಡಗಿನ ಬೆಟ್ಟಸಾಲುಗಳಲ್ಲಿ ಪುಟಿದೇಳಬಹುದು. ಬ್ರಹ್ಮಗಿರಿ, ಪುಷ್ಪಗಿರಿ ತಪ್ಪಲಿನ ಸಣ್ಣ ಬೆಳೆಗಾರರು ಮತ್ತೆ ಗತ್ತಿನಿಂದ ಶುಕ್ರವಾರದ ಸಂತೆಯ ದಿನ ಮಡಿಕೇರಿಯಲ್ಲಿ ಓಡಾಡಬಹುದು. ಬಹುಶಃ ಏಲಕ್ಕಿಗೆ ಕೊಡಗಿನಲ್ಲಿ ಎರಡನೇ ಇನ್ನಿಂಗ್ಸಿನ ಆಟ ಇನ್ನೂ ಬಾಕಿಯಿರಬಹುದು. I am hopeful.. ನಾನು ಆಶಾವಾದಿ!!