“ರೂಮು ಚೆನ್ನಾಗಿಲ್ಲ.. ಬೇರೆ ರೂಮು ಕೊಡಿ ಎಂದು ವಿದ್ಯಾರ್ಥಿನಿ ಮತ್ತು ಅವರ ಪೋಷಕರು ವಾಗ್ವಾದ ಮಾಡ್ತಾ ಇದ್ದಾರೆ ಸಾರ್” ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಸತಿಗೃಹಗಳ ಉಸ್ತುವಾರಿ ಹೊತ್ತಿರುವ ಸ್ಟಾಫ್ ನನಗೆ ಕರೆ ಮಾಡಿ ತಿಳಿಸಿದರು. ಕೊಡಗು ವೈದ್ಯಕೀಯ ಕಾಲೇಜು ಮತ್ತು ಹಾಸ್ಟೆಲಿಗೆ ಹೊಸಾ ಬ್ಯಾಚಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ದಾಖಲಾತಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಇಂತಹ ವಿಚಾರಗಳು ಮತ್ತು ಕರೆಗಳು ಸರ್ವೇಸಾಮಾನ್ಯ. ಅವರಿಗೆ ನನ್ನನ್ನು ಬಂದು ಕಾಣಲು ಹೇಳಿ ಎಂದು ತಿಳಿಸಿ ಹಾಸ್ಟೆಲಿನಲ್ಲಿರುವ ಕೆಲವು ಸಮಸ್ಯೆಗಳನ್ನು ನಾನು ಪಟ್ಟಿ ಮಾಡತೊಡಗಿದೆ.
ಮೊನ್ನೆಯಷ್ಟೆ ಹುಡುಗರ ಹಾಸ್ಟೆಲ್ಲಿಗೆ ಹೋದಾಗ ಅವರು ತಮ್ಮ ರೂಮುಗಳನ್ನು ಗಬ್ಬೆಬ್ಬಿಸಿದ್ದು ಕಂಡು ನಾನು ಕೆರಳಿದ್ದೆ. ಕಿತ್ತು ಬಂದ ಕಬರ್ಡುಗಳು, ಆಫ್ ಮಾಡದ ಕಾರಣಕ್ಕೆ ನೆಗೆದು ಬಿದ್ದ ಗೀಝರ್‌ಗಳು ನನ್ನತ್ತ ನೋಡುತ್ತಾ ದಯವಿಟ್ಟು ವಿದ್ಯಾರ್ಥಿಗಳ ಬುಡಕ್ಕೆ ಯಾರಾದರು ಬಿಸಿ ಮುಟ್ಟಿಸಿ ಎಂದು ಅಂಗಾಲಾಚುವಂತಿತ್ತು. ರೂಮನ್ನು ಶುಚಿಯಾಗಿಟ್ಟುಕೊಳ್ಳದವರು ಮುಂದೆ ತಮ್ಮ ಜೀವನವನ್ನು ಹೇಗೆ ಕಟ್ಟಿಕೊಳ್ಳುವರು ಎಂದು ನಿನ್ನೆ ಸಂಜೆ ಹುಡುಗರ ಹಾಸ್ಟೆಲಿನಲ್ಲಿ ಸಣ್ಣ ಬೌದ್ಧಿಕ್ ತೆಗೆದುಕೊಂಡಿದ್ದೆ. ನಾನು ಕೊಡಗು ಮೆಡಿಕಲ್ ಕಾಲೇಜಿನ ವಾರ್ಡನ್ ಆಗಿ ಜವಾಬ್ದಾರಿ ತೆಗೆದುಕೊಂಡ ಮೊದಲನೆಯ ವಾರದಲ್ಲಿರುವ ಕಾರಣ ನಾನು ಈ ಎಲ್ಲಾ ವ್ಯವಸ್ಥೆಯನ್ನು ಅರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮುನ್ನವೇ ಏನಾದರು ಅನಾಹುತವಾಗದಿರಲಿ ಎಂದು ದೇವರನ್ನು ಪ್ರಾರ್ಥಿಸುತ್ತಿದ್ದೆ. ಒಂದೆರಡು ವಿಕೆಟ್ ಕೀಳದಿದ್ದರೆ ಯಾವ ಬ್ಯಾಟ್ಸ್‌ಮನ್ ಕೂಡ ಬೌಲರುಗಳಿಗೆ ಮರ್ಯಾದೆ ಕೊಡದ ಕಾರಣ ಒಂದೆರಡು ಪುಂಡರನ್ನು ಹುಡುಕಿ ಅವರನ್ನು ರುಬ್ಬುವ ಸ್ಕೀಮನ್ನೂ ತಯಾರಿ ಮಾಡುತ್ತಿದ್ದೆ. ಸ್ಕೂಲು ಮಕ್ಕಳ ಬ್ಯಾಗಿನ ವಿಚಾರ ಪತ್ರಿಕೆಯಲ್ಲಿ ಬಂದ ನಂತರವಂತೂ ಹಾಸ್ಟೆಲಿನಲ್ಲಿರುವ ನನ್ನ ಪಕ್ಕಾ ಶಿಷ್ಯರಿಂದ ಹಾಸ್ಟೆಲ್ ಒಳಗಡೆ ನಡೆಯುವ ಪ್ರತಿಯೊಂದು ವ್ಯವಹಾರದ ಕುರಿತು ಮಾಹಿತಿ ಕಲೆಹಾಕುತ್ತಿದ್ದೆ.
ನವಂಬರ್ ತಿಂಗಳ ಕನ್ನಡದ ಕಾರ್ಯಕ್ರಮಗಳಿಂದಾಗಿ ನಾನು ಮಕ್ಕಳ ಜೊತೆಗೆ ಬೆರೆಯದಿದ್ದರೆ ಈ ಮಕ್ಕಳ ಸ್ಥಿತಿಗತಿ ಅಥವಾ ಹಾಸ್ಟೆಲ್ ವಾರ್ಡನ್ ವಿಚಾರದ ಕುರಿತಾಗಿ ನನಗೆ ಯಾವುದೇ ಆಸಕ್ತಿಯಿರುತ್ತಿರಲಿಲ್ಲ. ಸುಮಾರು ಆರು ನೂರು ಜನ ಮಕ್ಕಳು ಮೂರು ಹೊತ್ತು ಊಟ ಮಾಡುವ ವಸತಿಗೃಹಗಳನ್ನು ನಡೆಸುವುದು ಬಹಳ ಸವಾಲಿನದ್ದಾಗಿರುತ್ತದೆ ಮತ್ತು ನಾನು ಈ ಕೆಲಸಗಳಿಂದ ಬಹಳಷ್ಟನ್ನು ಕಲಿಯಲಿದ್ದೇನೆ ಎಂಬ ಕಾರಣದಿಂದ ಚೀಫ್ ವಾರ್ಡನ್ ಹುದ್ದೆಯನ್ನು ಒಪ್ಪಿಕೊಂಡೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಮತ್ತು ಭಾರತದ ವಿವಿಧ ರಾಜ್ಯಗಳಿಂದ ಪ್ರತಿ ವರ್ಷ ಬರುವ ನೂರೈವತ್ತು ಪ್ರತಿಭಾಶಾಲಿಗಳಿಗೆ ಒಂದಷ್ಟು ಮೆಂಟರ್ ಮಾಡುತ್ತಾ ಪ್ರತಿ ಬ್ಯಾಚಿನಲ್ಲಿ ಹತ್ತು ಮಂದಿ ಉತ್ತಮ ನಾಯಕತ್ವ ಗುಣವಿರುವವರನ್ನು ಹೆಕ್ಕಿ ಜವಾಬ್ದಾರಿ ನೀಡಿದರೆ ಅವರು ಮುಂದೆ ಸಮಾಜಕ್ಕೂ ಮತ್ತು ತಮ್ಮ ಊರಿಗೂ ಆಸ್ತಿಯಾಗುತ್ತಾರೆಂಬ ಅಭಿಪ್ರಾಯವು ನನಗೆ ಈ ಹುದ್ದೆಯನ್ನು ಸ್ವೀಕರಿಸಲು ಪ್ರೇರಣೆ ನೀಡಿತು. ಪ್ರಾಕ್ಟೀಸ್ ಮಾಡೋದು ಬಿಟ್ಟು ಈ ಕಿರಿಕಿರಿಯ ವಾರ್ಡನ್ ಕೆಲಸ ನಿನಗೆ ಬೇಕಿತ್ತಾ ಎಂದು ನನ್ನ ಮಕ್ಕಳ ವಿಭಾಗದ ಸಹೋದ್ಯೋಗಿಗಳೊಬ್ಬರು ಕೇಳಿಯೇ ಬಿಟ್ಟರು. ಸವಾಲುಗಳನ್ನು ಸ್ವೀಕರಿಸದಿದ್ದರೆ ಮತ್ತು ನಾವು ನಮ್ಮ ಆರಾಮದಾಯಕ ವಲಯದ ಹೊರಗಡೆ ಹೆಜ್ಜೆ ಹಾಕದಿದ್ದರೆ ನಮ್ಮ ಬೆಳವಣಿಗೆ ಕುಂಠಿತವಾಗುತ್ತದೆ ಎಂಬುದು ನನ್ನ ನಿಲುವಾದ ಕಾರಣ ನನ್ನ ಇಂತಹ ಅಚ್ಚರಿಯ ಆಯ್ಕೆಗಳಲ್ಲಿ ಹೆಚ್ಚಿನವರಿಗೆ ಲಾಜಿಕ್ ಕಾಣುವುದಿಲ್ಲ.
ಈ ಆಲೋಚನೆಗಳೆಲ್ಲ ನನ್ನ ಮನಸ್ಸಿನಲ್ಲಿ ಓಡುತ್ತಿದ್ದಂತೆ ನಮ್ಮ ಸ್ಟಾಫ್ ಜೊತೆಗೆ ರೂಮ್ ಚೇಂಜ್ ಮಾಡ್ಲೇ ಬೇಕು ಎಂದು ಮಂಡ್ಯ ಸೊಗಡಿನ ಗ್ರಾಮೀಣ ಕನ್ನಡದಲ್ಲಿ ಆಗ್ರಹಿಸುತ್ತಿದ್ದ ತಂದೆ ಮಗಳು ನನ್ನ ಕಣ್ಣಿಗೆ ಬಿದ್ದರು. ಅವರ ಹಿನ್ನೆಲೆಯನ್ನು ವಿಚಾರಿಸಿದಾಗ ಅವರ ಹೆಸರು ತಮ್ಮೇಗೌಡರು ಮತ್ತು ಅವರು ಬೆಂಗಳೂರಿನಲ್ಲಿ ಪೋಲೀಸ್ ಇಲಾಖೆಯ ಉದ್ಯೋಗಿಯಾಗಿರುವ ವಿಷಯ ನನ್ನ ಗಮನಕ್ಕೆ ಬಂತು. ಮಗಳನ್ನು ಮುದ್ದಾಗಿ ಸಾಕಿರುತ್ತಾರೆ ಮತ್ತು ಅವಳು ಕೇಳಿದ್ದೆಲ್ಲ ಕೊಡಿಸಿರುತ್ತಾರೆ ಎಂದು ಅವರ ಹಾವಭಾವ ಹೇಳುತ್ತಿತ್ತು. ಅವಳು ತನ್ನ ರೂಮಿನ ವಾರ್ಡ್‌ರೋಬಿನೊಳಗೆ ಫಂಗಸ್ ಬಂದಿದೆ ಎಂದು ಅವಳು ಆತಂಕ ವ್ಯಕ್ತಪಡಿಸಿದಾಗ ತಮ್ಮೇಗೌಡರು ತಮ್ಮ ಮಗಳ ರೂಮ್ ಬದಲಿಸಬೇಕೆಂದು ನಮ್ಮ ಸಿಬ್ಬಂದಿಗಳೊಂದಿಗೆ ಹಠ ಹಿಡಿದಿದ್ದಾರೆ.
ಕೊಡಗಿನ ಹವಾಮಾನದಲ್ಲಿ ಫಂಗಸ್ ಬರುವುದು ಸಾಮಾನ್ಯ ಮತ್ತು ನಮ್ಮ ಹಾಸ್ಟೆಲಿನೊಳಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಮತ್ತು ಮಳೆಗಾಲದಲ್ಲಿ ನೀರು ನುಗ್ಗುವುದು ಕೆಲವೊಮ್ಮೆ ಘಟಿಸುತ್ತದೆ. ಒಂದು ವೇಳೆ ನಿಮ್ಮ ಮಗಳಿಗೆ ಈ ಸರಕಾರಿ ಹಾಸ್ಟೆಲ್ ಹೊಂದಾಣಿಕೆಯಾಗದಿದ್ದರೆ ಹೊರಗಡೆ ಖಾಸಗಿಯಾಗಿ ವ್ಯವಸ್ಥೆ ಮಾಡಿ ಹೇಗೂ ನಿಯಮಾವಳಿಗಳ ಪ್ರಕಾರ ಶೇಖಡಾ 60% ಮಕ್ಕಳಿಗಷ್ಟೇ ವಸತಿ ಕೊಡುವುದು ನಮ್ಮ ಜವಾಬ್ದಾರಿ ಎಂದು ನಾನು ಧೃಡವಾಗಿ ಹೇಳಿದೆ. ಹಾಸ್ಟೆಲ್ ಸಿಬ್ಬಂದಿಗಳನ್ನು ಏರೋಪ್ಲೇನ್ ಹತ್ತಿಸುವ ಮೂಡಿನಲ್ಲಿದ್ದ ತಮ್ಮೇಗೌಡರು ಕಕ್ಕಾಬಿಕ್ಕಿಯಾದರು. ನಾನು ಗಮನಿಸಿದಂತೆ ಅವಳಿಗೆ ಮಂಜೂರಾಗಿದ್ದ ರೂಮು ಹುಡುಗರ ಹಾಸ್ಟೆಲಿನ ರೂಮಿಗಿಂತ ಬಹಳಷ್ಟು ಅಚ್ಚುಕಟ್ಟಾಗಿತ್ತು. ವಾರ್ಡ್ ರೋಬಿನ ಬಣ್ಣ ಮಾಸಿ ಫಂಗಸ್ ಬಂದಿರುವ ಈ ರೂಮಿನ ಬದಲು ವಾರ್ಡ್ ರೋಬಿನ ಬಾಗಿಲುಗಳು ಕಿತ್ತೋಗಿರುವ ಹುಡುಗರ ಹಾಸ್ಟೆಲ್ ರೂಮುಗಳನ್ನು ನೋಡಿದ್ದರೆ ತಮ್ಮೇಗೌಡರು ಮತ್ತವರ ಮಗಳು ನಮ್ಮ ಮೇಲೆ ವಿವಿಧ ಸೆಕ್ಷನ್ ಜಡಿದುಬಿಡುತ್ತಿದ್ದರು. ಅವರ ಮಗಳು ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಓದಿ ಬಂದಿರುವ ಕಾರಣ ನಮ್ಮ ಸಂಸ್ಥೆ ಅವರಿಗೆ ʻಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುʼವಿನಂತೆ ಕಂಡಿರಬಹುದು ಆದರೆ ಪ್ರಪಂಚ ಜ್ಞಾನವಿರುವ ಹೆತ್ತವರು ತಿಳಿ ಹೇಳದೆ ಮಕ್ಕಳ ಪರ ಅಂಧ ವಕಾಲತ್ತು ವಹಿಸಿದರೆ ಹೇಗೆ ಎಂದು ತಮ್ಮೇಗೌಡರನ್ನು ವಿಚಾರಿಸಿಕೊಂಡೆ.
ಇದನ್ನೂ ಓದಿ | ಪ್ರಣಾಮ್ ಭಾರತ್ ಅಂಕಣ | ʻದನ ಕಾಯೋನುʼ !
ಪರಸ್ಪರ ಪರಿಚಯ ಹೆಚ್ಚಾದಂತೆ ಮತ್ತು ನನ್ನ ನಡವಳಿಕೆ ಗಮನಿಸುತ್ತಿದ್ದಂತೆ ತಮ್ಮೇಗೌಡರಿಗೆ ನಾನು ಮಿಲಿಟರಿ ಹಿನ್ನಲೆಯವನಿರಬಹುದೆಂಬ ಗುಮಾನಿ ಬಂತು. ತಮಾಷೆಯೇನೆಂದರೆ ತಮ್ಮೇಗೌಡರು ಕೂಡು ಪೋಲಿಸ್ ಕೆಲಸ ಸೇರುವ ಮೊದಲು ಬಾರ್ಡರ್ ಸೆಕ್ಯುರಿಟಿ ಫೋರ್ಸ್‌ನಲ್ಲಿ ಯೋಧರಾಗಿದ್ದವರು. ನಮ್ಮ ಈ ಪರಿಚಯಗಳು ಸ್ಪಷ್ಟವಾಗುತ್ತಿದ್ದಂತೆ ತಮ್ಮೇಗೌಡರು ಮಗಳ ಪರ ವಕಾಲತ್ತು ವಹಿಸುವುದನ್ನು ಬಿಟ್ಟು ನನ್ನ ಕಡೆಗೆ ಪಕ್ಷಾಂತರ ಮಾಡಿದರು. ನಾನು ಗಡಿಭಾಗದ ಟೆಂಟುಗಳಲ್ಲಿ ನಾನು ಕಳೆದ ದಿನಗಳನ್ನು ಮತ್ತು ತಮ್ಮೆಗೌಡರು ತಮ್ಮ ಮಿಲಿಟರಿ ಬ್ಯಾರಕ್ಕಿನಲ್ಲಿ ಕಳೆದ ಸವಾಲಿನ ದಿನಗಳ ಕಥೆಗಳನ್ನು ಹೇಳಲು ಶುರುಮಾಡಿದರು. ದಿನಕ್ಕೆ ಎರಡು ಸಲ ಮಾತ್ರ ನೀರು ಬರುತ್ತದೆ ಎಂಬ ವಿಚಾರ ಬಂದಾಗ ನಾನು ಹಿಮವನ್ನು ಕರಗಿಸಿ ಸಿಗುತ್ತಿದ್ದ ಒಂದು ಬಕೆಟ್ ನೀರಲ್ಲಿ ಜೀವನ ನಡೆಸುತ್ತಿದ್ದ ಅರುಣಾಚಲ ಪ್ರದೇಶದ ಕಥೆಗಳನ್ನು ಹೇಳಿದೆ. ನಾನು ಮತ್ತು ತಮ್ಮೇಗೌಡರ ಮಿಲಿಟರಿ ಜೀವನದ ಕಥೆಗಳನ್ನು ಕೇಳಿದ ನಂತರ ಕ್ರೈಸ್ಟ್ ಕಾಲೇಜಿನಿಂದ ಬಂದ ಅವರ ಮಗಳು ನಮ್ಮ ಸರಕಾರಿ ಹಾಸ್ಟೆಲನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಂಡಂತಿತ್ತು.
ಕ್ರೈಸ್ಟ್, ಅಲೋಶಿಯಸ್ ಮುಂತಾದ ಹೆಸರಾಂತ ಸಂಸ್ಥೆಗಳಿಂದ ಮತ್ತು ದೊಡ್ಡ ನಗರಗಳಿಂದ ಬಂದ ಮಕ್ಕಳ ಒಡನಾಟವು ಕರ್ನಾಟಕದ ತೀರಾ ಹಿಂದುಳಿದ ಗ್ರಾಮೀಣ ಭಾಗದಿಂದ ಬಂದವರ ಜೊತೆಗೆ ಈ ಸಂಸ್ಥೆಯಲ್ಲಿ ಮುಂದಿನ ಐದು ವರ್ಷಗಳ ಕಾಲ ನಡೆಯುತ್ತದೆ. ಈ ಸಮಾಗಮದಿಂದಾಗಿ ವಿದ್ಯಾರ್ಥಿಗಳ ಅನುಭವವು ವಿಸ್ತಾರವಾಗುತ್ತದೆ. ಬಹುರೂಪಿ ಪ್ರತಿಭೆಗಳಾಗಿ ಸರಕಾರಿ ಕಾಲೇಜಿನಲ್ಲಿ ಕಲಿತ ಮಕ್ಕಳು ಬೆಳೆಯುತ್ತಾರೆಂಬ ವಿಚಾರಗಳನ್ನು ತಮ್ಮೆಗೌಡರಿಗೆ ತಿಳಿಸುತ್ತಿದ್ದಂತೆ ಅವರ ಮತ್ತವರ ಶ್ರೀಮತಿಯವರ ಮುಖದಲ್ಲಿದ್ದ ಆತಂಕದ ಛಾಯೆ ಮಾಯವಾದವು. ರೈಲಿನ ಬೋಗಿಯಲ್ಲಿ ಸಿಗುವ ಅಪರಿಚಿತ ಸೈನಿಕನ ಬಳಿ ತನ್ನ ಸಾಮಾನು ಸರಂಜಾಮುಗಳ ಬಗ್ಗೆ ನಿಗಾ ಇಡಲು “ತೋಡಾ ದೇಖ್ ಲೇನಾ” ಎಂದು ಹೇಳಿ ನಮ್ಮ ಸೈನಿಕರು ನಿಶ್ಚಿಂತರಾಗಿ ಮೂತ್ರ ವಿಸರ್ಜನೆಗೆ ಹೋಗುತ್ತಾರೆ. ಆ ಮತ್ತೊಬ್ಬ ಸೈನಿಕನ ಊರು, ಜಾತಿ ಮತ್ತು ಹೆಸರು ಗೊತ್ತಿಲ್ಲದಿದ್ದರೂ ಒಬ್ಬ ಸೈನಿಕನಿಗೆ ಮತ್ತೊಬ್ಬ ಸೈನಿಕನ ಮೇಲೆ ಅಷ್ಟು ಗಾಢವಾದ ನಂಬಿಕೆಯಿರುತ್ತದೆ. ನಾನೂ ಕೂಡ ಮಾಜಿ ಎಂದು ಗೊತ್ತಾದ ಕ್ಷಣದಿಂದ ತಮ್ಮೇಗೌಡ ಕುಟುಂಬದವರ ಮಾತಿನ ಧಾಟಿ ಬದಲಾಗಿತ್ತು. ತಮ್ಮೇಗೌಡರೂ ಕೂಡ ತಮ್ಮ ಮಗಳನ್ನು ನಮ್ಮ ಹಾಸ್ಟೆಲಿಗೆ ಸೇರಿಸಿ ಕೊನೆಗೆ ಹೋಗುವಾಗ ನಗು ಮುಖದೊಂದಿಗೆ “ತೋಡಾ ದೇಖ್ ಲೇನಾ ಸಾಬ್” ಎಂದು ನಗುತ್ತಾ ಹೋದರು.
ಇದನ್ನೂ ಓದಿ | ಪ್ರಣಾಮ್ ಭಾರತ್ ಅಂಕಣ | ಒಂದು ಬೊಗಸೆ ಏಲಕ್ಕಿ