Site icon Vistara News

ಪ್ರಣಾಮ್‌ ಭಾರತ್‌ ಅಂಕಣ | ನೆನಪುಗಳು ಮಾಸುವ ಮುನ್ನ

m c nanaiah

ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯ ಮೌಲ್ಯಮಾಪನವನ್ನು ಮಾಡುವಲ್ಲಿ ಅನೇಕ ಬಾರಿ ಸಮಾಜ ಎಡವುತ್ತದೆ. ಅದೇ ಕಾರಣಕ್ಕೆ ಇರಬೇಕು ತನ್ನ ಸರಕಾರ ಪುನರಾಯ್ಕೆಯಾಗದಿದ್ದಾಗ “ನಮ್ಮನ್ನು ಇತಿಹಾಸವು ಗುರುತಿಸುವುದು” ಎಂದು ಅಟಲ್‌ಜೀ ಮಾರ್ಮಿಕವಾಗಿ ನುಡಿದದ್ದು. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಮ್ಮೇಳ, ಸಂಘಟನೆ, ಹಣ ಮತ್ತು ಜಾತಿ ಬೆಂಬಲವು ಸಾಧಾರಣರನ್ನೂ ಜನನಾಯಕರನ್ನಾಗಿಸುತ್ತದೆ.

ಇಂತಿಪ್ಪ ವ್ಯವಸ್ಥೆಯ ನಡುವೆ ತಾವು ನಂಬಿದ್ದ ತತ್ವಗಳಿಗಾಗಿ ಒಂಟಿಸಲಗದಂತೆ ನಡೆಯುವುದಕ್ಕೆ ಪ್ರಖರವಾದ ಆತ್ಮಜ್ವಾಲೆಯಿರಬೇಕು. ಅಧಿಕಾರದಲ್ಲಿರಲು ಎಲ್ಲಾ ಸರ್ಕಸ್ಸುಗಳನ್ನು ಮಾಡುವವರನ್ನು ನಾವು ನೋಡಿದ್ದೇವೆ. ಆದರೆ ತಮ್ಮ “ಖಂಡಿತವಾದ”ದಿಂದಾಗಿ ಅನೇಕ ಬಾರಿ ಅಧಿಕಾರದಲ್ಲಿರುವುದನ್ನು ತಪ್ಪಿಸಿಕೊಂಡ ಮತ್ತು ತಮ್ಮ ಇದೇ ನಿಷ್ಠುರತೆ ಮತ್ತು ಸಾಮರ್ಥ್ಯದಿಂದಾಗಿ ತಮ್ಮ ಪಕ್ಷಕ್ಕೆ ತಮ್ಮ ಜಿಲ್ಲೆಯೊಳಗೆ ನೆಲೆಯಿರದಿದ್ದರೂ ರಾಜ್ಯಮಟ್ಟದಲ್ಲಿ ಗೌರವನ್ನು ಸಂಪಾದಿಸುತ್ತಾ, ತಮಗೆ ದೊರೆತ ಸ್ಥಾನಮಾನಗಳ ಗೌರವವನ್ನು ಹೆಚ್ಚಿಸಿದ ಅಪರೂಪದ ರಾಜಕಾರಣಿ ಎಂ.ಸಿ ನಾಣಯ್ಯನವರು. ಅವರ ಐವತ್ತು ವರ್ಷಗಳ ಸಾರ್ವಜನಿಕ ಜೀವನದ ಘಟನೆಗಳನ್ನು ದಾಖಲಿಸಿರುವ ಪುಸ್ತಕ “ನೆನಪುಗಳು ಮಾಸುವ ಮುನ್ನ” ಅವರು ತುಳಿದ ಹಾದಿಯ ಮೇಲೆ ಮತ್ತೆ ಬೆಳಕು ಚೆಲ್ಲುತ್ತದೆ. ಲೇಖಕ ಭಾರದ್ವಾಜ ಆನಂದ ತೀರ್ಥರು ನಾಣಯ್ಯನವರ ಜೀವನದ ಪಯಣವನ್ನು ಮತ್ತು ನಿಲುವುಗಳನ್ನು ಈ ಪುಸ್ತಕದಲ್ಲಿ ಸಮರ್ಥವಾಗಿ ಸರೆಹಿಡಿದಿದ್ದಾರೆ. ನೆನಪುಗಳು ಮಾಸುವ ಮುನ್ನ ಓದಿದ ನಂತರ ನಾಣಯ್ಯನವರ ವ್ಯಕ್ತಿತ್ವದ ಹಲವು ಆಯಾಮಗಳು ಸ್ಪಷ್ಟವಾದವು. ಎಪ್ಪತ್ತು – ಎಂಬತ್ತರ ದಶಕದಲ್ಲಿ ಕರ್ನಾಟಕದಲ್ಲಿದ್ದ ಮೌಲ್ಯಾಧಾರಿತ ರಾಜಕೀಯದ ಕಥೆಗಳು ಆಗಿನ ನಾಯಕರ ಬಗೆಗಿನ ಗೌರವವನ್ನು ಹೆಚ್ಚುಮಾಡುವುದರ ಜೊತೆ ಇಂದಿನ ದಿನಕ್ಕೆ ಅವೆಲ್ಲ ಫ್ಯಾಂಟಸಿಯಂತೆ ಕಾಣಿಸುತ್ತದೆ!

ದೇವೇಗೌಡ – ಜೆ.ಹೆಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದ ತೊಂಬತ್ತರ ದಶಕದಲ್ಲಿ ಮಂತ್ರಿಮಂಡಲದ ಜೊತೆಗೆ ಪಕ್ಷದ ಬಣಗಳನ್ನು ಜೊತೆಗಿಟ್ಟುಕೊಳ್ಳುವ ಫೆವಿಕಾಲ್ ಮಾದರಿಯಲ್ಲಿ ಕೆಲಸ ಮಾಡಿದ ನಾಣಯ್ಯನವರು ಆ ಸರಕಾರದ ಪ್ರಭಾವಿ ಮಂತ್ರಿಗಳಲ್ಲಿ ಒಬ್ಬರು. ಎ.ಕೆ ಸುಬ್ಬಯ್ಯ ಮತ್ತು ಎಂ.ಸಿ ನಾಣಯ್ಯನವರು ಕಾಲೇಜಿನ ದಿನಗಳಿಂದಲೂ ರಾಜಕೀಯ ಪ್ರತಿರೋಧಿಗಳಾಗಿ ಅನೇಕ ಬಾರಿ ಸೆಣೆಸಾಡಿದವರು. ಅಪ್ರತಿಮ ಧೈರ್ಯ, ಪ್ರತಿಭೆ ಮತ್ತು ವಿಟ್ ಇದ್ದರೂ ಸುಬ್ಬಯ್ಯನವರು ಸಾರ್ವಜನಿಕ ಜೀವನದಲ್ಲಿ ಹೆಚ್ಚಿನದ್ದನ್ನು ಸಾಧಿಸಲಾಗದೆ ಬಹಳ ಬೇಗ ರಿಲವೆನ್ಸ್ ಕಳೆದುಕೊಂಡರು‌. ಸುಬ್ಬಯ್ಯನವರಿಗೆ ತಮ್ಮ ರೆಬಲ್ ಇಮೇಜಿನಿಂದ ಕಡೆಯ ತನಕವೂ ಹೊರಬರಲು ಆಗಲೇ ಇಲ್ಲ. ಎಡಪಂಥೀಯ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನಾಂತರವಾಗಿ ಒಂಟಿ ಪಯಣದಲ್ಲಿದ್ದ ನಾಣಯ್ಯನವರು ರೆಬಲ್ ಹಾದಿ ತುಳಿದಿದ್ದರೂ ಕೊನೆಗೆ ತೃತೀಯ ರಂಗದಲ್ಲಿ ನೆಲೆ ಕಂಡುಕೊಂಡವರು.

ಕರುಣಾನಿಧಿ, ಜೆಎಚ್‌ ಪಟೇಲ್‌, ಸಿದ್ದರಾಮಯ್ಯ ಜತೆಗೆ ನಾಣಯ್ಯನವರು

ನಾಣಯ್ಯನವರು ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟ ಮಾಡುತ್ತಾ ಬೆಳೆದು ಕೊನೆಗೆ ದೇವರಾಜ ಅರಸ್ ಮೇಲಿನ ವೈಯುಕ್ತಿಕ ಅಭಿಮಾನದ ಏಕ ಮಾತ್ರ ಕಾರಣಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತು ಶಾಸಕರಾದವರು. ಆಗಿನ ಕಾಲದ ಕಾಂಗ್ರೆಸಿನಲ್ಲಿದ್ದ ಗಾಂಧಿ ಪರಿವಾರದ ಫ್ಯೂಡಲ್ ವ್ಯವಸ್ಥೆಯನ್ನು ನಾಣಯ್ಯನವರಿಗೆ ಮಾನಸಿಕವಾಗಿ ಒಪ್ಪಿಕೊಳ್ಳಲು ಸಾಧ್ಯವಾಗದೆ ಇದ್ದದ್ದು ಅವರ “ರಾಜಕೀಯ ಬೆಳವಣಿಗೆಗೆ” ಮುಳ್ಳಾಯಿತು. ಗುಂಡೂರಾಯರ ಶೈಲಿಯನ್ನು ಅನುಸರಿಸಿದ್ದರೆ ನಾಣಯ್ಯನವರ ವಿದ್ವತ್ತು ಅವರನ್ನು ಬಹುಶಃ ರಾಜ್ಯಸಭೆಯ ಅಂಗಳದಲ್ಲಿ ತಂದು ಕೂರಿಸುತ್ತಿತ್ತು. ದೇವರಾಜ ಅರಸುರವವರ ಶಿಷ್ಯಂದಿರಲ್ಲಿ ನಾವು ನಾಣಯ್ಯನವರನ್ನು ಗುರುತಿಸುವುದು ತಪ್ಪಾಗುತ್ತದೆ, ಏಕೆಂದರೆ ನಾಣಯ್ಯನವರು ತಮ್ಮ ಸಾಮರ್ಥ್ಯದಿಂದಾಗಿ‌ ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಮಾಡಿದ್ದರು. ದೇವರಾಜ ಅರಸುರವರ ಮೇಲಿನ ಅಭಿಮಾನದಿಂದಾಗಿ ಮತ್ತು ಉಳುವವನೇ ಭೂಮಿಯ ಒಡೆಯ ಯೋಜನೆಯ ಬಗೆಗಿನ ಮೆಚ್ಚುಗೆಯಿಂದಾಗಿ ಅರಸುರವರ ಜೊತೆಯಲ್ಲಿ ಹೋದರೆ ವಿನಾ ಯಾವಾಗ ಕಾಂಗ್ರೆಸ್ಸಿಗೆ ಅರಸು ಬೇಡವಾದರೋ ಆಗಿನಿಂದ ಅದೇ ಕಾಂಗ್ರೆಸ್ ನಾಣಯ್ಯನವರಿಗೆ ಬೇಡವಾಯಿತು. ಇಂತಹ ರೀತಿಯ ವರ್ತನೆಗಳನ್ನು ಇಂದಿನ ಕಾಲಮಾನದಲ್ಲಿ ಕಲ್ಪಿಸಲೂ ಅಸಾಧ್ಯ.

ಪ್ರಾದೇಶಿಕ ಪಕ್ಷ, ರಾಜ್ಯದ ಸ್ವಾಯತ್ತತೆ ಇತ್ಯಾದಿ ಶಬ್ದಗಳು ಈಗ ಹೊಸಾ ಹುರುಪಿನೊಂದಿಗೆ ಮತ್ತೆ ಚಲಾವಣೆಯಲ್ಲಿರುವ ಸಮಯ. ಜನತಾ ಪಾರ್ಟಿಗೂ ಎಂಬತ್ತದ ದಶಕದಲ್ಲಿ ಹೈಕಮಾಂಡ್ ಮಾದರಿಯ ನಾಯಕತ್ವವನ್ನು ಚಂದ್ರಶೇಖರ್ ಅವರಂತಹ ನಾಯಕರು ಕೊಡುತ್ತಿದ್ದರು ಎಂಬ ವಿಷಯ ಬಿಟ್ಟರೆ ನಂತರದ ವರ್ಷಗಳಲ್ಲಿ ದೊಡ್ಡಗೌಡರು, ಪಟೇಲರು ಮತ್ತು ಹೆಗಡೆಯಂತವರು ಆ ಪಕ್ಷದ ಎಲ್ಲಾ ತೀರ್ಮಾನಗಳನ್ನು ಬೆಂಗಳೂರಿನಲ್ಲಿ ತಗೆದುಕೊಳ್ಳುತ್ತಿದ್ದರು. ಯಾರಿಗೆ ಟಿಕೆಟ್ ಕೊಡಬೇಕು, ಯಾರು ಮಂತ್ರಿಯಾಗಬೇಕೆಂಬ ನಿರ್ಧಾರಗಳನ್ನು ಅವರು ತುಂಬು ಕುಟುಂಬದ ಹಾಗೆ ಕಿತ್ತಾಡಿಕೊಂಡು ಪಡೆಯುತ್ತಿದ್ದರೇ ವಿನಾ ದೆಹಲಿಯ ದೌಡಿರುತ್ತಿರಲಿಲ್ಲ. ಅವರನ್ನು ಪ್ರಾದೇಶಿಕ ಪಕ್ಷವೆಂದು ಜನ ಒಪ್ಪಿಕೊಂಡಿದ್ದರಿಂದ, ಕರ್ನಾಟಕದ ಜನತೆ ಅವರಿಗೆ ಸಂಪೂರ್ಣವಾದ ಬಹುಮತವನ್ನು ನೀಡಿ ಐದು ವರ್ಷಗಳ ಕಾಲ ಆಡಳಿತ ನಡೆಸಲು ಅನುವು ಮಾಡಿಕೊಟ್ಟಿದ್ದರು. ಹಲವು ಸಮಾನ ಮನಸ್ಕ ಸಮಾಜವಾದಿ ನಾಯಕರು ಕಟ್ಟಿ ಬೆಳೆಸಿದ ಪಕ್ಷ ವೈಯುಕ್ತಿಕ ಪ್ರತಿಷ್ಠೆಯ ಕಾರಣಕ್ಕಾಗಿ ತಮ್ಮ ಕಣ್ಣಮುಂದೆ ಜೀವ ಕಳೆದುಕೊಂಡದ್ದನ್ನು ನಾಣಯ್ಯನವರು ನೋಡಿ ನೊಂದುಕೊಂಡರು. ಜಾರ್ಜ್ ಫರ್ನಾಂಡೀಸರಿಗೆ ಕೇಂದ್ರದಲ್ಲಿ ಅಟಲ್‌ಜಿ ಮೇಲಿದ್ದ ಒಲವು ರಾಜ್ಯದಲ್ಲಿ ಜನತಾದಳ ಒಡೆಯಲು ವೇದಿಕೆಯನ್ನು ನಿರ್ಮಾಣ ಮಾಡಿದ ವಿಷಯವನ್ನು ಗ್ರಹಿಸಿದವರಲ್ಲಿ ಬಹುಶಃ ನಾಣಯ್ಯನವರು ಮೊದಲಿಗರು. ಛಿದ್ರವಾಗುವ ಮೊದಲಿದ್ದ ಜನತಾದಳ ಬಹುಶಃ ಕರ್ನಾಟಕದ ಕಟ್ಟ ಕಡೆಯ ಪ್ರಾದೇಶಿಕ ಪಕ್ಷ ! ಅದರಲ್ಲಿ‌ ಎಲ್ಲಾ ಜಾತಿ ಮತ್ತು ಧರ್ಮಕ್ಕೆ ಸೇರಿದ ನಾಯಕರಿದ್ದರು. ಅದು ಒಕ್ಕಲಿಗರಾಗಿದ್ದ ದೇವೇಗೌಡರನ್ನು, ಲಿಂಗಾಯಿತರಾಗಿದ್ದ ಪಟೇಲರು ಮತ್ತು ಬೊಮ್ಮಾಯಿಯವರನ್ನು ಮತ್ತು ಜಾತಿ ಬೆಂಬಲವಿಲ್ಲದ ರಾಮಕೃಷ್ಣ ಹೆಗಡೆಯವರನ್ನೂ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು.

ಇದನ್ನೂ ಓದಿ | ಪ್ರಣಾಮ್‌ ಭಾರತ್‌ ಅಂಕಣ | ಫ್ಯಾಮಿಲಿ ಮೆಕ್ಯಾನಿಕ್‌ ಕಥೆ

ಹೆಗಡೆಯವರಂತೂ ದೇವರಾಜ್ ಅರಸ್ ನಂತರ ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿಯೆಂಬ ಖ್ಯಾತಿಗೆ ಪಾತ್ರರಾಗುತ್ತಾ ತಾವೂ ರಾಷ್ಟ್ರಮಟ್ಟದಲ್ಲಿ ಬೆಳೆದರು ಮತ್ತು ಪ್ರಾದೇಶಿಕ ಪಕ್ಷವನ್ನು ರಾಜ್ಯದಲ್ಲಿ ಬೆಳೆಸಿದರು. ಅದೇ ಪ್ರಾದೇಶಿಕ ಪಕ್ಷ ಯಾವುದೇ ಒಂದು ಮಠದ ಅಥವಾ ಜಾತಿಯ ಹಂಗಿನಲ್ಲಿ ನಿಲ್ಲದೆ, ಅತಂತ್ರ ರಾಜಕಾರಣ ಲಾಭ ಪಡೆದು ಕನ್ನಡಿಗನೊಬ್ಬನನ್ನು ಅಲ್ಪಕಾಲದ ಮಟ್ಟಿಗೆ ಪ್ರಧಾನಿಯ ಸ್ಥಾನದಲ್ಲಿ ಕೂರಿಸಿತ್ತು ಮತ್ತು ಅಲ್ಪಸಂಖ್ಯಾತನೊಬ್ಬನನನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡಿತು. ಅದೇ ಸಮಯದಲ್ಲಿ ಹಣಬಲ ಮತ್ತು ಸ್ವಕ್ಷೇತ್ರದಲ್ಲಿ ಗೆದ್ದು ಬರುವ ಬಲವಿಲ್ಲದಿದ್ದ ನಾಣಯ್ಯನವರು ಅವರ ಅರ್ಹತೆ ಮತ್ತು ಸಾಮರ್ಥ್ಯದ ಆಧಾರದಲ್ಲಿ ಯಾರಿಗೂ ದಮ್ಮಯ್ಯ ಹಾಕದೆ ನಿರಾಯಾಸವಾಗಿ ಮಂತ್ರಿಯಾದರು. ಪಟೇಲರು ಚುಕ್ಕಾಣಿ ಹಿಡಿದ ಸಮಯದಲ್ಲಂತೂ ಸದನದಲ್ಲಿ ಯಾವ ಮಂತ್ರಿ ಗೈರುಹಾಜರಾದರೂ ಅವರ ಪರವಾಗಿ ಉತ್ತರಿಸುತ್ತಾ ಮಧ್ಯಾಹ್ನದ ನಂತರದ ಮುಖ್ಯಮಂತ್ರಿಯಾಗಿ ಗುರುತಿಸಿಕೊಂಡರು. ಹಲವು ಬಣಗಳಾಗಿದ್ದ ಜನತಾದಳದಲ್ಲಿದ್ದ ಎಲ್ಲರೊಡನೆಯೂ ನಾಣಯ್ಯನವರು ಅತ್ಯುತ್ತಮವಾದ ಕೆಮಿಸ್ಟ್ರಿಯನ್ನು ಹೊಂದಿದ್ದರು. ಆಗಿನ ರಾಜಕೀಯದಲ್ಲಿ ಕೆಮಿಸ್ಟ್ರಿ ಮುಖ್ಯವಾಗಿತ್ತೆ ಹೊರತು ಈಗಿನ ದಿನದಂತೆ ಮ್ಯಾಥಮೆಟಿಕ್ಸ್ ಮತ್ತು ಇಕಾನಾಮಿಕ್ಸ್ ಆಗಿರಲಿಲ್ಲ.

ನಾಣಯ್ಯನವರು ತಾವು ಒಡನಾಡಿದ ಅನೇಕ ಹಿರಿಯ ರಾಜಕಾರಣಿಗಳ ಮತ್ತು ಮುಖ್ಯಮಂತ್ರಿಗಳ ವ್ಯಕ್ತಿತ್ವವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ್ದಾರೆ. ತಮ್ಮ ಪುಸ್ತಕದಲ್ಲಿ ಯಾವುದೇ ರಾಗ -ದ್ವೇಷವಿಲ್ಲದೆ ಎಲ್ಲರ ಬಗ್ಗೆಯೂ “ಖಂಡಿತವಾದಿಯಾಗಿ” ತಮ್ಮ ನಿಲುವನ್ನು ಹೊರಹಾಕಿದ್ದಾರೆ‌. ಸಿಇಟಿ ಪರೀಕ್ಷೆಯನ್ನು ನಾನು ಮಾಜಿ ಮುಖ್ಯಮಂತ್ರಿ ಮೊಯಿಲಿವರ ಕೊಡುಗೆಯೆಂದು ತಿಳಿದಿದ್ದೆ. ಆದರೆ ಅದು ಕೋರ್ಟ್ ನಿರ್ದೇಶನವಿದ್ದ ಅನಿವಾರ್ಯ ಕಾರಣಕ್ಕಾಗಿ ಆಯಿತೆಂಬ ವಿಷಯವನ್ನು ನಾಣಯ್ಯನವರು ಈ ಪುಸ್ತಕದಲ್ಲಿ ವಿವರಿಸುವ ಜೊತೆಗೆ ದಕ್ಷ ಅಧಿಕಾರಿ ಹರೀಶ್ ಗೌಡರ ಶ್ರಮವನ್ನೂ ಶ್ಲಾಘಿಸಿದ್ದಾರೆ. ಕರ್ನಾಟಕದ ರಾಜಕೀಯದಲ್ಲಿನ ವರ್ಣರಂಜಿತ ಮುಖ್ಯಮಂತ್ರಿಗಳಾದ ಗುಂಡೂರಾವ್ ಮತ್ತು ಬಂಗಾರಪ್ಪನವರ ವ್ಯಕ್ತಿ ಚಿತ್ರಣವನ್ನು ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ. ನಾಣಯ್ಯನವರು ಪಟೇಲರ ವ್ಯಕ್ತಿತ್ವದಲ್ಲಿದ್ದ ಪ್ರಾಮಾಣಿಕತೆ, ನೇರನುಡಿ ಮತ್ತು ಧೈರ್ಯವನ್ನು ಮೆಚ್ಚಿಕೊಂಡದ್ದು ಈ ಪುಸ್ತಕದ ಉದ್ದಕ್ಕೂ ಗೋಚರಿಸುತ್ತದೆ. ಸುದೀರ್ಘ ರಾಜಕೀಯ ಪಯಣದಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ ಆದರೆ ಯಾರ ವಿರುದ್ಧವೂ ನಾಣಯ್ಯನವರು ತಮ್ಮ ಮನಸ್ಸಿನಲ್ಲಿ ಕಹಿಯನ್ನು ಇಟ್ಟುಕೊಳ್ಳದಿರುವುದು ಅವರ ದೊಡ್ಡತನಕ್ಕೆ ಸಾಕ್ಷಿ.

ಮಾನ್ಯ ಎಂ.ಸಿ ನಾಣಯ್ಯನವರು ಇಂದಿನ ದಿನ ರಾಜಕೀಯವಾಗಿ ಚಲಾವಣೆಯಲ್ಲಿ ಇಲ್ಲದವರೆಂದೇ ಹೇಳಬಹುದು. ಆದರೆ ಅವರು ಜನರ ನಡುವೆ ಇಂದಿಗೂ ಅಪಾರವಾದ ಗೌರವವನ್ನು ಉಳಿಸಿಕೊಂಡಿರುವ ಹಿರಿಯರು. 2018ರಲ್ಲಿ ಅವರು ತಮ್ಮ ಹಳೇ ಒಡನಾಡಿ ಸಿದ್ದರಾಮಯ್ಯನವರ ಒತ್ತಾಯದ ಕಾರಣಕ್ಕೂ ಏನೋ ಕಾಂಗ್ರೆಸ್ಸಿಗೆ ಸಾಂಕೇತಿಕವಾಗಿ ಮರಳಿದರು‌. ಹಲವಾರು ವರ್ಷಗಳ ಕಾಲ ಮಾಜಿ ಮಂತ್ರಿಯಾಗಿದ್ದವರು ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್‌ಗೆ ಮರಳುವಾಗ ಅವರ ಜೊತೆಯಲ್ಲಿ ದೊಡ್ಡ ಜನಸಮೂಹವಿಲ್ಲವೆಂದು ಅನೇಕರು ಮೂದಲಿಸಿದರು. ಬಹುಶಃ ಜನರನ್ನು ಕಟ್ಟಿಕೊಂಡು ತಾಳಕ್ಕೆ ತಕ್ಕಂತೆ ಕುಣಿಯುವುದು ನಾಣಯ್ಯನವರ ಬ್ರಾಂಡ್ ಆಫ್ ಪಾಲಿಟಿಕ್ಸ್ ಅಗಿರಲಿಲ್ಲ ಎಂಬ ಭಾವನೆ ಮೂಡುತ್ತದೆ. ಅವರು ಸಾರ್ವಜನಿಕ ಜೀವನದಲ್ಲಿ ಜನರ ನಡುವೆಯಿದ್ದರೂ ತಮ್ಮ ಮನಸ್ಸಿಗೆ ಒಪ್ಪಿಗೆಯಾಗದಿದ್ದಾಗ ಅನೇಕ ಬಾರಿ ಒಂಟಿ ಹಾದಿಯನ್ನು ತುಳಿಯಲು ಧೈರ್ಯಮಾಡಿದವರು. ಗುಂಡುರಾಯರು ಇಂದಿರಾ ಬಣಕ್ಕೆ ನಿಷ್ಠರಾಗಿ ಮುಖ್ಯಮಂತ್ರಿಯಾದಾಗ ಅವರ ಜೊತೆಗೆ ಸೇರಿ ಮಂತ್ರಿಯಾಗುವ ಬದಲು ರಾಜಕೀಯ ಅಜ್ಞಾತವಾಸಕ್ಕೆ ಹೋದವರು ಇದೇ ನಾಣಯ್ಯನವರು.‌

ಇದನ್ನೂ ಓದಿ | ಪ್ರಣಾಮ್ ಭಾರತ್ ಅಂಕಣ: ಸ್ಟೆತಾಸ್ಕೋಪಿನ ಆತ್ಮಕಥೆ

ಸೆಪ್ಟೆಂಬರ್ ಹದಿನೇಳನೇಯ ತಾರೀಖಿನಂದು ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ನಾಣಯ್ಯನವರೂ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಎಂಬತ್ಮೂರು ವಸಂತಗಳನ್ನು ಕಂಡಿರುವ ನಾಣಯ್ಯನವರಿಗೆ ತೊಂಬತ್ತರ ದಶಕದಲ್ಲಿ ಕೊಡಗಿನ ಅಧಿಕಾರಿ ವರ್ಗ ಮತ್ತು ವಿವಿಧ ಇಲಾಖೆಗಳ ಮೇಲಿದ್ದ ಹಿಡಿತವು ನರೇಂದ್ರ ಮೋದಿಯವರಿಗೆ ಈಗ ದೇಶದ ಮೇಲಿರುವ ಹಿಡಿತಕ್ಕಿಂತಲೂ ದೃಢವಾಗಿತ್ತೆಂದರೆ ಈಗಿನ ತಲೆಮಾರಿನವರು ನಂಬುವುದು ಕಷ್ಟ. ಮೋದಿಯವರ ಜೊತೆಗೆ ನಮ್ಮ‌ ನಾಣಯ್ಯನವರಿಗೂ ಹುಟ್ಟು ಹಬ್ಬದ ಶುಭಾಶಯಗಳು..

(ಲೇಖಕ ಮೇಜರ್‌ ಡಾ.ಕುಶ್ವಂತ್‌ ಕೋಳಿಬೈಲು ಅವರು ಕೊಡಗಿನ ವೈದ್ಯ, ಯೋಧ ಮತ್ತು ಕತೆಗಾರ. ಸೇನೆಯಿಂದ ನಿವೃತ್ತರು, ವೈದ್ಯಕೀಯದಲ್ಲಿ ಪ್ರವೃತ್ತರು. ಕೊಡಗಿನ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳ ತಜ್ಞ, ಕಾಫಿ ಕೃಷಿಕ. ʻಕಾವೇರಿ ತೀರದಿಂದʼ ಮತ್ತು ʻಕೂರ್ಗ್‌ ರೆಜಿಮೆಂಟ್ʼ ಇವರ ಕತಾಸಂಕಲನಗಳು. ʼಮುತ್ತಿನ ಹಾರʼ ಹನಿಕವಿತೆಗಳ ಸಂಕಲನ. ವೈದ್ಯಕೀಯ ಹಾಗೂ ಸೇನೆಗೆ ಸಂಬಂಧಿಸಿದ ಅಂಕಣಗಳನ್ನು ಬರೆದಿದ್ದಾರೆ. ಕೊಡಗಿನ ಹಾಗೂ ದೇಶದ ಆಗುಹೋಗುಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಕುಶ್ವಂತ್‌ ಸಮಾಜಸೇವೆಯಲ್ಲೂ ಸಕ್ರಿಯರು.)

Exit mobile version