Site icon Vistara News

Prerane column : ನಿಮ್ಮ ನಿಮ್ಮ ಬದುಕಿಗೆ ನೀವೇ ಜವಾಬ್ದಾರಿ; ಅದನ್ನು ಬೇರೆಯವರ ಮೇಲೆ ಹೊರಿಸಿದರೆ ನೀವು Waste Body!

Sadguru Jaggi vasudev Prerane

ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್‌
(Sadguru Jaggi Vasudev, Isha Foundation)
ಬಹಳಷ್ಟು ಮಂದಿ, ಜವಾಬ್ದಾರಿಯೆಂದರೆ (Responsibility) – ಆಪಾದನೆ, ಅವರಿವರ ಮೇಲೆ ತಪ್ಪು ಹೊರಿಸುವುದು, ಮುಂತಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಇದೊಂದು ತಪ್ಪು ಗ್ರಹಿಕೆ. ನಿಮ್ಮ ಜೀವನದಲ್ಲಿ ಅಂತಹ ಸಂದರ್ಭ ಬರಲು ಹಲವು ಕಾರಣಗಳಿರಬಹುದು. ಅದು ಹಾಗೆ ರೂಪುಗೊಳ್ಳಲು ಹಲವು ಮಂದಿ ಕಾರಣರಾಗಿರಲೂಬಹುದು. ಆದರೆ ನನ್ನ ಪ್ರಶ್ನೆ ’ಯಾರು ಜವಾಬ್ದಾರರು’ ಎಂಬುದೇ ಹೊರತು ’ಯಾರು ಕಾರಣ, ತಪ್ಪು ಯಾರದು’ ಎಂಬುದಲ್ಲ (Prerane Column).

ಶಂಕರನ್ ಪಿಳ್ಳೆ ಕುಡಿದು ರಸ್ತೆಯಲ್ಲಿ ಗಲಾಟೆ ಮಾಡಿದರು. ಪೊಲೀಸರು ಬಂದು ಬಂಧಿಸಿ, ಕೋರ್ಟಿನಲ್ಲಿ ಹಾಜರು ಪಡಿಸಿದರು. ಶಂಕರನ್ ಪಿಳ್ಳೆ ತೂರಾಡುತ್ತಲೇ (Alcoholic Shankaran Pillai) ಎದ್ದು ನಿಂತರು. ನ್ಯಾಯಾಧೀಶರಿಗೆ ಕೋಪ ಬಂತು. ತಪ್ಪುನಿನ್ನದಲ್ಲ, ನೀನು ಕುಡಿದ ವಿಸ್ಕಿ ನಿನ್ನನ್ನು ಹೀಗೆ ಆಟವಾಡಿಸುತ್ತಿದೆʼ ಎಂದರು. ಕೂಡಲೇ ಶಂಕರನ್‌ ಪಿಳ್ಳೆ ಕಣ್ಣೀರು ಹಾಕುತ್ತಾ, “ಸ್ವಾಮಿ! ನೀವು ಅರ್ಥಮಾಡಿಕೊಂಡಷ್ಟು ನನ್ನ ಹೆಂಡತಿಯೂ ಅರ್ಥಮಾಡಿಕೊಳ್ಳಲಿಲ್ಲ! ಅವಳು ಯಾವಾಗಲೂ ನನ್ನ ಇಂತಹ ಸ್ಥಿತಿಗೆ ನಾನೇ ಜವಾಬ್ದಾರನೆಂದು ಹೇಳುತ್ತಾಳೆ’ ಎಂದರು. ಇವರಂತೆಯೇ ಹಲವಾರು ಮಂದಿ. ತಮ್ಮ ಜೀವನದ ಜವಾಬ್ದಾರಿಯನ್ನು ವಹಿಸಿಕೊಳ್ಳದೆ, ಅದನ್ನು ಬಿಟ್ಟುಬಿಡಲೂ ಸಾಧ್ಯವಾಗದೆ, ಈಜಲೂ ಆಗದೆ, ದಡವನ್ನೂ ಸೇರಲಾರದೆ ಒದ್ದಾಡುತ್ತಾರೆ.

Response + Ability= Responsibility

ಜವಾಬ್ದಾರಿಯೆಂದರೆ ಇಂಗ್ಲೀಷಿನಲ್ಲಿ Responsibility (ರೆಸ್ಪಾನ್ಸಿಬಿಲಿಟಿ) ಎಂದರ್ಥ. ಅದನ್ನು ಬಿಡಿಸಿದರೆ Response + Ability(ರೆಸ್ಪಾನ್ಸ್ + ಎಬಿಲಿಟಿ). ಜವಾಬ್ದಾರಿಯೆಂದರೆ, ’ಜವಾಬು ನೀಡುವ ಸಾಮರ್ಥ್ಯ ಅಥವಾ ಸ್ಪಂದಿಸುವ ನಿಮ್ಮ ಸಾಮರ್ಥ್ಯ’. ಅಂದರೆ ಉಪಾಧ್ಯಾಯರು ಕೇಳುವ ಪ್ರಶ್ನೆಗಳಿಗೆ ಉತ್ತರ ಹೇಳುವುದು ಎಂದರ್ಥವಲ್ಲ.

ನಿಮ್ಮ ಜೀವನದಲ್ಲಿ ಪ್ರತಿಯೊಂದು ಕ್ಷಣವೂ ಈ ಪ್ರಪಂಚದ ಘಟನೆಗಳಿಗೆ ಸ್ಪಂದಿಸುತ್ತಲೇ ಇದ್ದೀರಲ್ಲವೆ? ಇಲ್ಲಿ ಸ್ಪಂದಿಸುವುದೆಂದರೆ – ನೀವಿರುವ ರೂಮಿನಲ್ಲಿ ಬಹಳ ಚಳಿಯಿದೆ. ಹೊದಿಕೆಯಿಂದ ಬೆಚ್ಚಗೆ ಮಾಡಿಕೊಳ್ಳುತ್ತೀರಿ. ಅದು ಆ ಚಳಿಯ ವಾತಾವರಣಕ್ಕೆ ನಿಮ್ಮ ದೇಹ ಸ್ಪಂದಿಸಿದ ರೀತಿ (ರೆಸ್ಪಾನ್ಸ್).
ನಿಮ್ಮ ಮಗು ಪ್ರೀತಿಯಿಂದ ನಿಮ್ಮನ್ನು ಅಪ್ಪಿಕೊಂಡು ಮುತ್ತಿಕ್ಕಿತು. ನಿಮ್ಮ ಕಣ್ಣಲ್ಲಿ ಹರಿಯುವ ಆನಂದಬಾಷ್ಪ, ನಿಮ್ಮ ಮನಸ್ಸು ಮತ್ತು ದೇಹ ಸ್ಪಂದಿಸಿದ ರೀತಿ. ನೀವು ಸೆಳೆದುಕೊಳ್ಳುವ ಶ್ವಾಸ ಆ ಮರವು ಹೊರಬಿಟ್ಟ ಗಾಳಿ ತಾನೆ! ಹೀಗೆ ನೀವು ಮತ್ತು ಆ ಮರ ನಿರಂತರವಾಗಿ ಪರಸ್ಪರ ಸ್ಪಂದಿಸುತ್ತ ಜೀವಿಸುತ್ತಿದ್ದೀರಿ.

ಈ ಪ್ರಪಂಚದಲ್ಲಿ ನಡೆಯುವ ಎಲ್ಲ ಕ್ರಿಯೆಗಳಿಗೂ ದೈಹಿಕವಾಗಿ, ಮಾನಸಿಕವಾಗಿ, ನಿಮ್ಮ ಬುದ್ಧಿ-ಶಕ್ತಿಗನುಗುಣವಾಗಿ ನೀವು ಸ್ಪಂದಿಸುತ್ತಲೇ ಬಂದಿದ್ದೀರಿ. ನಿಮ್ಮ ಜೀವನವೆಂಬುದು ಒಂದು ನಿರಂತರವಾಗಿ ಮುಂದುವರಿಯುತ್ತಿರುವ ಸ್ಪಂದನವೇ ಆಗಿದೆ. ಜವಾಬ್ದಾರಿಯೆಂದರೆ ’ನಿಮ್ಮ ಸ್ಪಂದಿಸುವ ಸಾಮರ್ಥ್ಯ’. ಯಾವುದೇ ಸನ್ನಿವೇಶದಲ್ಲಿಯೂ ’ನಾನು ಜವಾಬ್ದಾರ’ನೆಂದು ಪರಿಗಣಿಸುವಾಗ, ಆ ಸನ್ನಿವೇಶಕ್ಕೆ ಸ್ಪಂದಿಸುವ ಸಾಮರ್ಥ್ಯ ನಿಮ್ಮಲ್ಲಿದೆ ಎಂದರ್ಥ. ’ನಾನು ಜವಾಬ್ದಾರನಲ್ಲ’ವೆಂದು ಜಾರಿಕೊಂಡರೆ ಅದಕ್ಕೆ ಸ್ಪಂದಿಸುವ ನೀಡುವ ಸಾಮರ್ಥ್ಯ ನಿಮ್ಮಲ್ಲಿ ಇಲ್ಲದಂತಾಗುತ್ತದೆ.

ನಾನು ಕೇಳುವುದೇನೆಂದರೆ, ನಿಮ್ಮ ಜೀವನದಲ್ಲಿ ಬರಬಹುದಾದ ಸನ್ನಿವೇಶಗಳು ಅನುಕೂಲಕರವಾಗಿರಬಹುದು, ಇಲ್ಲದಿರಬಹುದು. ನಿರೀಕ್ಷಿಸಿದಂತೆಯೋ ಅಥವಾ ಅನಿರೀಕ್ಷಿತವಾಗಿಯೋ ಇರಬಹುದು. ಸಾಧಕವಾಗಿರಬಹುದು, ಬಾಧಕವಾಗಿಯೂ ಇರಬಹುದು. ಯಾವುದೇ ರೀತಿಯ ಸನ್ನಿವೇಶವನ್ನು ನೀವು ಎದುರಿಸಬೇಕಾದರೂ, ಅದಕ್ಕೆ ತಕ್ಕ ರೀತಿಯಲ್ಲಿ ಸ್ಪಂದಿಸುವ ಸಾಮರ್ಥ್ಯವನ್ನು ಹೊಂದಲು ನಿಮಗೆ ಆಸೆ ಇದೆಯೆ? ಅಥವಾ ಅದಕ್ಕೆ ಸ್ಪಂದಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳಲು ನಿಮಗಿಷ್ಟವೆ?
ಎಂತಹ ಸನ್ನಿವೇಶದಲ್ಲಾದರೂ ಅದಕ್ಕೆ ಸ್ಪಂದಿಸಲು ಸಮರ್ಥವಾಗಿರಬೇಕೆಂಬುದು ನಿಮ್ಮ ಬಯಕೆಯಾದರೆ, ಅದಕ್ಕೆ ’ನಾನೇ ಸಂಪೂರ್ಣ ಜವಾಬ್ದಾರ’ನೆಂದಾಗ ಮಾತ್ರ ಅದು ಸಾಧ್ಯವಾಗುತ್ತದೆ.

ಜವಾಬ್ದಾರಿ ವಹಿಸಿಕೊಂಡಾಗ ಮಾತ್ರ ಸಾಮರ್ಥ್ಯ ಹೊರಬರುತ್ತದೆ

ನಾನು ಜವಾಬ್ದಾರನೆಂದಾಗ ನೀವು ಸಮರ್ಥಶಾಲಿಗಳಾಗುತ್ತೀರಿ, ಅಲ್ಲವೆಂದರೆ ಕೈಲಾಗದವರಾಗುತ್ತೀರಿ.
ನಾನು ಜವಾಬ್ದಾರ, ಎಂದರೆ ನಿಮ್ಮ ಜೀವನ ನಿಮ್ಮ ಕೈಲ್ಲಿದೆ. ಇಲ್ಲ, ಇಲ್ಲ. ನನ್ನ ಅತ್ತೆ, ಮಾವ ಇನ್ಯಾರೋ…… ಎಂದು ಹಿಂತೆಗೆದರೆ ನಿಮ್ಮ ಜೀವನವನ್ನು ನಿಮ್ಮ ಸಂಬಂಧಿಕರು ಹೈಜಾಕ್ ಮಾಡಲು, ನೀವಾಗಿಯೇ ಅನುಮತಿ ನೀಡುತ್ತಿದ್ದೀರಿ!

ಏನೇ ನಡೆಯಲಿ ನನ್ನ ಜೀವನದ ಘಟನೆಗಳಿಗೆ ನಾನೇ ಜವಾಬ್ದಾರನೆಂದು, ಮನಃಪೂರ್ತಿಯಾಗಿ ಕಂಡರೆ, ನೀವು ನಿಮ್ಮ ಜೀವನದಲ್ಲಿ ರೂಪಿಸಿಕೊಳ್ಳುವುದು ಆನಂದ, ಪ್ರೀತಿ ಮಾತ್ರ. ಅದು ನಿಮ್ಮ ಅಭಿವೃದ್ಧಿಗಿರುವ ಆಧಾರ.
ಸಾಮಾನ್ಯವಾಗಿ, ಜವಾಬ್ದಾರಿಯೆಂದರೆ, ಹೊರೆಗಳನ್ನು ಹೊರುವುದು ಎಂದು ಅರ್ಥಮಾಡಿಕೊಳ್ಳುವವರೇ ಹೆಚ್ಚು.
ಜವಾಬ್ದಾರಿಯೆಂಬುದನ್ನು ಕರ್ತವ್ಯವೆಂದು ತಪ್ಪಾಗಿ ಭಾವಿಸುವುದರಿಂದಲೇ ಅದು ಭಾರವೆಂದು ತೋರುವುದು. ಚಿಕ್ಕ ವಯಸ್ಸಿನಿಂದಲೇ ನಿಮ್ಮಲ್ಲೊಂದು ಕರ್ತವ್ಯದ ಭಾವನೆಯನ್ನು ಬೆಳೆಸಿರುತ್ತಾರೆ. ಮಗನನ್ನು ವಿದ್ಯಾವಂತನನ್ನಾಗಿ ಮಾಡುವುದು ತಂದೆಯ ಕರ್ತವ್ಯ. ವಯಸ್ಸಾಗಿರುವ ತಂದೆಯನ್ನು ನೋಡಿಕೊಳ್ಳಬೇಕಾದುದು ಮಗನ ಕರ್ತವ್ಯ. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರು ಮಾಡುವುದು ಶಿಕ್ಷಕರ ಕರ್ತವ್ಯ. ಸಂವಿಧಾನವನ್ನು ಗೌರವಿಸಿ ನಡೆದುಕೊಳ್ಳುವುದು ಪ್ರಜೆಗಳ ಕರ್ತವ್ಯ. ಗಡಿಯನ್ನು ಕಾಯುವುದು ರಕ್ಷಣಾದಳದ ಕರ್ತವ್ಯವೆಂದು, ಪದೇ ಪದೇ ಹೇಳುತ್ತಾ ಕರ್ತವ್ಯವೆಂಬ ಪದವನ್ನು ನಿಮ್ಮಲ್ಲಿ ಆಳವಾಗಿ ಬೇರೂರಿಸಿರುತ್ತಾರೆ. ಕರ್ತವ್ಯವೆಂದು ಬಗೆದು ನೀವು ನೆನೆದ ಎಲ್ಲವನ್ನೂ ಸರಿಯಾಗಿ ಮಾಡಿದರೂ, ನಿಮಗೆ ಕಳಂಕ ಮಾತ್ರ ತಪ್ಪುವುದಿಲ್ಲ.

ಚಪ್ಪಲಿ ಅಂಗಡಿಯ ಕೆಲಸಗಾರರ ಜವಾಬ್ದಾರಿ

ಒಂದು ದಿನ, ಚಪ್ಪಲಿ ತಯಾರಿಸುವ ಕಾರ್ಖಾನೆಯೊಂದರ ಯಜಮಾನನು ಅದನ್ನು ನೋಡಲು ಬಂದಿದ್ದರು. ಅಲ್ಲೊಂದು ವಿಭಾಗದಲ್ಲಿ ಕೆಲಸ ಸರಾಗವಾಗಿ ನಡೆಯುತ್ತಿತ್ತು. ಕೆಲಸಗಾರನೊಬ್ಬ ರಟ್ಟಿನ ಪೆಟ್ಟಿಗೆಯೊಂದನ್ನು ತೆಗೆದುಕೊಂಡು ಅದಕ್ಕೆ ಲೇಬಲ್ ಅಂಟಿಸಿ, ಮುಂದಿನವರಿಗೆ ತಳ್ಳಿದ. ಇನ್ನೊಬ್ಬ ಅದರಲ್ಲಿ ಒಂಟಿ ಚಪ್ಪಲಿಯನ್ನು ಹಾಕಿದ. ಆನಂತರ ಬೇರೊಬ್ಬನು ಅದನ್ನು ಮುಚ್ಚಿ ಪ್ಯಾಕ್ ಮಾಡಿದ. ಆ ಪೆಟ್ಟಿಗೆಯನ್ನು ಮಾರಾಟದ ವಿಭಾಗಕ್ಕೆ ಹೋಗುವ ಗಾಡಿಯಲ್ಲಿ ಹಾಕಲಾಯಿತು.

ಇಲ್ಲಿ ನಡೆಯುತ್ತಿರುವುದೇನು? ಚಪ್ಪಲಿಗಳನ್ನು ಜೋಡಿಯಾಗಿ ತಾನೇ ತಯಾರು ಮಾಡುವುದು? ಅದೇಕೆ ಒಂಟಿ ಚಪ್ಪಲಿಯನ್ನು ಹಾಕಿ ಪ್ಯಾಕ್‌ ಮಾಡುತ್ತಿದ್ದೀರಿ? ಎಂದು ಯಜಮಾನ ಕೋಪದಿಂದ ವಿಚಾರಿಸಿದ.

ಯಜಮಾನರೆ, ಇಲ್ಲಿ ಎಲ್ಲಾ ಕೆಲಸಗಾರರೂ ತಾವು ಪಡೆಯುವ ಸಂಬಳಕ್ಕೆ ತಕ್ಕ ಕೆಲಸವನ್ನಷ್ಟೇ ಮಾಡುವುದು. ಈಗ ಸಮಸ್ಯೆ ಏನಾಗಿದೆಯೆಂದರೆ, ಎಡಗಾಲಿನ ಚಪ್ಪಲಿಯನ್ನು ಪೆಟ್ಟಿಗೆಯಲ್ಲಿ ಹಾಕಬೇಕಾಗಿರುವ ಕೆಲಸಗಾರ ಈ ದಿನ ರಜೆ’ ಎಂದು ಮೇಲ್ವಿಚಾರಕನಿಂದ ಉತ್ತರ ಬಂತು.! ಅವರವರ ಕರ್ತವ್ಯದಲ್ಲಿ ನಿಷ್ಠೆಯಿಂದ ದುಡಿಯುವ ಕೆಲಸಗಾರರಿದ್ದರೂ, ಆ ಯಜಮಾನನ ವ್ಯಾಪಾರ ಏನಾಗುತ್ತದೆಂದು ಯೋಚನೆ ಮಾಡಿ ನೋಡಿ.

ಪೂರ್ಣವಾಗಿ ಜವಾಬ್ದಾರಿಯಿಲ್ಲದೆ, ಕರ್ತವ್ಯವನ್ನು ಮಾತ್ರ ಮಾಡಿದರೆ, ಅದು ನಿಮ್ಮ ಬೆಳವಣಿಗೆಗೆ ಯಾವ ರೀತಿಯಲ್ಲಿಯೂ ಸಹಾಯಕವಾಗಲಾರದು. ಬೇಗನೆ ನೀವು ಕೋಪಗೊಂಡು, ಉದ್ವೇಗದಿಂದ ಕೂಡಿ ನಿರಾಶರಾಗುತ್ತೀರಿ. ಹೀಗಾಗಿ ನಿಮ್ಮ ಜೀವನ ಯಾಂತ್ರಿಕವಾಗಿಬಿಡುತ್ತದೆ. ಯಾರೋ ಹೇಳಿದ್ದಾರೆಂದು ಕೆಲಸವನ್ನು ಮಾಡದೆ, ನೀವೇ, ನಿಮ್ಮ ಕರ್ತವ್ಯವೆಂದು ಜವಾಬ್ದಾರಿಯನ್ನು ಅರಿತು ಮಾಡಿದಾಗ ಮಾತ್ರ ದುಃಖವಿರುವುದಿಲ್ಲ.
ಮೊದಲಿಗೆ ಜವಾಬ್ದಾರಿಯೆಂಬುದನ್ನು ಒಂದು ಕೆಲಸ ಮಾತ್ರವೆಂದು ಪರಿಗಣಿಸಬೇಡಿ. ಜವಾಬ್ದಾರಿಯು ನಮ್ಮ ಭಾವನೆಗಳಲ್ಲೊಂದು ಎಂದು ಪರಿಗಣಿಸಿ. ಯಾವುದಾದರೊಂದಕ್ಕೆ ನೀವು ಮನಃಪೂರ್ವಕವಾಗಿ, ಸಂಪೂರ್ಣವಾಗಿ ಜವಾಬ್ದಾರಿಯನ್ನು ವಹಿಸಿಕೊಂಡರೆ, ಆಗ ಇದು ನನ್ನದು ಎಂಬ ಭಾವನೆಯುಂಟಾಗುತ್ತದೆ. ಯಾವಾಗ ಅದನ್ನು ನಿಮ್ಮದನ್ನಾಗಿಯೇ ಭಾವಿಸುತ್ತೀರೋ ಆಗ ಅದು ಭಾರವಾಗಿರುವುದಿಲ್ಲ. ಇದಕ್ಕೆ ನಾನು ಜವಾಬ್ದಾರನೆಂದು ಭಾವಿಸುವಾಗ ಇದು ನನ್ನ ಪತಿ, ನನ್ನ ಮನೆ, ನನ್ನ ವಾಹನವೆಂದು ಭಾವಿಸುತ್ತೀರಿ, ಸಂಪೂರ್ಣವಾಗಿ ಅದರಲ್ಲಿ ತೊಡಗುತ್ತೀರಿ. ಆಗ ಯಾವುದೂ ಭಾರವೆನಿಸುವುದಿಲ್ಲ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಜೆನ್‌ ಗುರು ಹೇಳಿದ ಜವಾಬ್ದಾರಿಯ ಕಥೆ

ಹುಯ್-ತಿ ಎಂಬ ಜೆನ್ ಗುರುವಿದ್ದರು. ಅವರು ಯಾವಾಗಲೂ ಒಂದು ದೊಡ್ಡ ಗಂಟನ್ನು ಹೊತ್ತುಕೊಂಡು ತಿರುಗುತ್ತಿದ್ದರು. ಅದರಲ್ಲಿ ಏನೇನೋ ವಸ್ತುಗಳಿದ್ದುವು. ಪ್ರತಿಯೊಂದು ಊರಿನಲ್ಲಿಯೂ ಮಕ್ಕಳನ್ನು ನೋಡಿದಾಗ, ಅದರಿಂದ ಸಿಹಿತಿಂಡಿಗಳನ್ನು ತೆಗೆದು ಹಂಚುತ್ತಿದ್ದರು.

ಒಮ್ಮೆ ಮತ್ತೊಬ್ಬ ಜೆನ್ ಗುರು, ಹುಯ್-ತಿಯವರನ್ನು, ಜೆನ್ ಎಂದರೇನು? ಎಂದು ಪ್ರಶ್ನಿಸಿದರು. ಹುಯ್-ತಿ ಕೂಡಲೇ ತನ್ನ ಗಂಟನ್ನು ಕೆಳಗಿರಿಸಿ ನಿಂತರು.

ಜೆನ್‌ನ ಉದ್ದೇಶವೇನು? ಎಂಬ ಮುಂದಿನ ಪ್ರಶ್ನೆಗೆ, ಹುಯ್-ತಿ ಕೆಳಗಿರಿಸಿದ್ದ ಗಂಟನ್ನು ಹೊತ್ತುಕೊಂಡು ನಡೆದರು.
ಗಂಟನ್ನು ಅವರು, ತಮ್ಮದೆಂದು ಭಾವಿಸದಿದ್ದರೆ ಕೆಳಗೆ ಹಾಕಲು ಸಾಧ್ಯವಾಗುತ್ತದೆ. ಹಾಗೆಯೇ ಸಂತೋಷವಾಗಿ ಅದನ್ನು ಹೊರಲೂ ಸಹ ಸಾಧ್ಯವಾಗುತ್ತದೆಯೆಂಬುದನ್ನು ಅವರು ಸೂಕ್ಷ್ಮವಾಗಿ ತಿಳಿಸಿದರು.

ಇಡೀ ಭೂಮಿಯನ್ನೇ ನೀವು ತಲೆಯ ಮೇಲೆ ಹೊತ್ತಿದ್ದರೂ ಭಾರವೆನಿಸುವುದಿಲ್ಲ. ಆದರೆ ನಾನು ಜವಾಬ್ದಾರನಲ್ಲ ಎಂಬ ಭಾವನೆಯೊಂದಿಗೆ ಒಂದು ಗುಂಡುಸೂಜಿಯನ್ನು ತೆಗೆದುಕೊಂಡರೂ ಅದು ಟನ್‌ಗಟ್ಟಲೆ ಭಾರವಾಗುತ್ತದೆ. ನೀವಿದನ್ನು ಪ್ರತಿದಿನವೂ ಅನುಭವಿಸುತ್ತಿರುವ ಸತ್ಯವೆಂದು ಹೇಳಬಹುದಲ್ಲವೆ?

ಮೂಲಭೂತವಾಗಿ, ‘ನಾನು ಜವಾಬ್ದಾರ’ ಎಂದು ಭಾವಿಸುವಾಗ ನಿಮ್ಮ ಬದುಕಿಗೆ ಒಪ್ಪುವಂತೆ ಸ್ಪಂದಿಸುತ್ತೀರಿ. ‘ನಾನು ಜವಾಬ್ದಾರನಲ್ಲ’ ಎಂದು ಭಾವಿಸಿದರೆ, ಅದು ವಿರೋಧ ಹಾಗೂ ಅಸಮ್ಮತಿಯನ್ನು ಸೂಚಿಸುತ್ತದೆ.

(ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ನಾಯಕ. isha.sadhguru.org/in/kn) (ಸದ್ಗುರುಗಳ ಇತರ ಪುಸ್ತಕ/ವಿವರಗಳಿಗೆ ಸಂಪರ್ಕಿಸಿ – kannadapublications@ishafoundation.org)

Exit mobile version