Site icon Vistara News

Prerane : ಆಧ್ಯಾತ್ಮಿಕ ಸಾಧನೆಗಳನ್ನು ಮಾಡುವುದು ಜ್ಞಾನಿಯಾಗಲು ಅಲ್ಲ!

Sadhguru prerane

Sadhguru

ಸದ್ಗುರು ಜಗ್ಗಿ ವಾಸುದೇವ್‌
ದೊಡ್ಡದಿರಲಿ, ಚಿಕ್ಕದಿರಲಿ ಪ್ರತಿಯೊಂದು ಜೀವಿಯೂ ಸೃಷ್ಟಿಯ ಜೊತೆಗೆ ಮತ್ತು ಸೃಷ್ಟಿಯ ಮೂಲಕ್ಕೆ ನಿರಂತರ ಸಂಬಂಧ ಹೊಂದಿರುತ್ತದೆ. ಈ ರೀತಿಯ ಸಂಬಂಧ ಈಗಾಗಲೇ ಇರುವಾಗ ಏನು ಮಾಡಬಹುದು? ಈ ಸಂಬಂಧದ ಗುಣಮಟ್ಟವನ್ನು ಹೆಚ್ಚಿಸಬಹುದಷ್ಟೇ. ನಾವಿರುವ ಈ ಭೂಮಿಯನ್ನು ಶಪಿಸುತ್ತ ಕೂರಬಹುದು ಅಥವಾ ಜೀವನ ನಡೆಸಲು ನಮಗೆ ಅನುವು ಮಾಡಿಕೊಟ್ಟಿರುವುದಕ್ಕೆ ಈ ಭೂಮಿಗೆ ಧನ್ಯವಾದಗಳೊಡನೆ ವಂದಿಸುತ್ತ ಬದುಕಬಹುದು.

ನಾವು ಈ ಸಂಬಂಧವನ್ನು ನಿರ್ವಹಿಸುವ ಮನೋಭಾವದಿಂದಾಗಿ ಬಹುದೊಡ್ಡ ವ್ಯತ್ಯಾಸ ಏರ್ಪಡುವುದು. ಇದು ಸಂಬಂಧದ ರೀತಿಯನ್ನು ಬದಲಿಸಿಕೊಳ್ಳುವ ವಿಷಯ. ಸೃಷ್ಟಿಯೊಡನೆ ನಿಮ್ಮ ಸಂಬಂಧ ಕೇವಲ ದೈಹಿಕವಾದರೆ ನಿಮ್ಮಲ್ಲಿ ಹಲವು ಸಂಗತಿಗಳು ಅರಿವಿಗೆ ಬರುವವು. ನಿಮ್ಮದು ಮಾನಸಿಕ ಸಂಬಂಧವಾದರೆ ಮತ್ತಷ್ಟು ವಿಷಯಗಳು ಅರಿವಾಗುವುದು. ಸೃಷ್ಟಿಯೊಡನೆ ನಿಮ್ಮ ಸಂಬಂಧ ಭಾವನಾತ್ಮಕ ಸ್ತರಕ್ಕೆ ಬಂದರೆ ಬೇರೊಂದು ರೀತಿಯ ವಿಷಯ ಸಂಗತಿಗಳು ಅರಿವಿಗೆ ಬರುವವು.

ಆದರೆ ಸೃಷ್ಟಿಯ ಬಗ್ಗೆ ನಿಮಗೆ ಸಂಪೂರ್ಣ ಅರಿವು ಆಗುವುದಿಲ್ಲ. ನೀವು ಗಮನಿಸಿರಬಹುದು, ಹುಟ್ಟಿದಾಗಿನಿಂದ ಈ ವರೆಗಿನ ಸಮಯದಲ್ಲಿ ನಿಮ್ಮೊಳಗೆ ದೈಹಿಕವಾದ ಎಷ್ಟೋ ಸಂಗತಿಗಳು ಬದಲಾಗುತ್ತಿರುವುದು. ಹಾಗೆಯೇ ನಿಮ್ಮ ಮಾನಸಿಕ, ಬೌದ್ಧಿಕ, ಭಾವನಾತ್ಮಕ ಸಂಗತಿಗಳೂ ಸಹ ಬದಲಾವಣೆ ಹೊಂದುತ್ತಿವೆ. ಈ ಬದಲಾವಣೆ ಇನ್ನೂ ಮುಂದುವರೆಯುವುದು. ನೀವು ಪ್ರಯತ್ನ ಪಟ್ಟರೂ ಇದನ್ನು ನಿಲ್ಲಿಸಲಾರಿರಿ.

ಒಂದು ವಿಧದಲ್ಲಿ ಇಡೀ ಆಧ್ಯಾತ್ಮಿಕ ಪ್ರಕ್ರಿಯೆಯೆಂದರೆ ಇಷ್ಟೇ; ಕೇವಲ ದೈಹಿಕ, ಮಾನಸಿಕ, ಭಾವನಾತ್ಮಕ ಸಂಬಂಧವಾಗಿರುವುದನ್ನು ಸೂಕ್ಷ್ಮತರ ಸ್ತರದ ಅಸ್ತಿತ್ವಕ್ಕೆ ಏರಿಸಿಕೊಳ್ಳುವುದು. ಸಂಪೂರ್ಣ ಅರಿವು ಈ ಸ್ತರದಿಂದ ಮಾತ್ರ ಸಾಧ್ಯ.

ಇದನ್ನು ಹೀಗೆ ವಿವರಿಸಬಹುದು. ಒಬ್ಬ ದಗಾಕೋರ ತಿಳಿದವನಾಗಿರುತ್ತಾನೆ. ಒಬ್ಬ ಮೂಢನೂ ತಿಳಿದಿರುತ್ತಾನೆ. ಆದರೆ ಒಬ್ಬ ಜ್ಞಾನಿಯು ಖಾಲಿ ಪುಟದಂತೆ. ಜ್ಞಾನಿಯು ಖಾಲಿ ಪುಟದಂತಿರುವ ಕಾರಣ ಅವನು ಏನನ್ನು ಬೇಕಾದರೂ ಗ್ರಹಿಸಬಲ್ಲ. ಪುಟದ ಮೇಲೆ ಆಗಲೇ ಏನಾದರೂ ಮುದ್ರಿತವಾಗಿದ್ದು ಅದರ ಮೇಲೆ ಏನು ಬರೆದರೂ ಗೊಂದಲಕ್ಕೆ ದಾರಿಯಾಗುವುದು.

ʻಕರ್ಮ’ದ ಬಗ್ಗೆ ವಿಶದವಾಗಿ ವಿವರಿಸುತ್ತ ಗೊಂದಲ ಎಬ್ಬಿಸುವ ದೀರ್ಘ ಭಾಷಣಗಳ ಅರ್ಥ ನೀವು ಖಾಲಿ ಪುಟವಾಗದೆ ಉಳಿದಿರುವುದು. ಈಗಾಗಲೇ ಬಹಳ ವಿಷಯಗಳನ್ನು ಬರೆದುದಾಗಿದೆ. ಇನ್ನು ಬರೆಯುವುದೆಲ್ಲ ಎಲ್ಲೊ ಕಳೆದುಹೋಗುವುದಷ್ಟೆ. ಆಗಲೇ ತುಂಬಿಹೋಗಿರುವ ಪುಟದ ಮೇಲೆ ನೀವು ಏನೇ ಬರೆದರೂ ಅದೆಷ್ಟೇ ಅರ್ಥವತ್ತಾದ, ಮಹತ್ವದ ವಿಷಯವಾದರೂ ಅದು ವಿರೂಪಗೊಳ್ಳುವುದು ಖಚಿತ. ಆದುದರಿಂದಲೇ ಈ ದೇಶದಲ್ಲಿ ಜನ ನಿಮ್ಮನ್ನು ನೋಡಿ, ʻಕರ್ಮ’ ಎಂದು ಮಾತು ಮುಗಿಸುವರು.

ನಿಜವಾಗಿ, ಎಲ್ಲ ಆಧ್ಯಾತ್ಮಿಕ ಸಾಧನೆಗಳನ್ನು ಮಾಡುವುದು ಜ್ಞಾನಿಯಾಗಲು ಅಲ್ಲ. ನಿಮ್ಮನ್ನೊಂದು ಖಾಲಿ ಪುಟದಂತಾಗಿಸಿಕೊಳ್ಳುವುದಕ್ಕೆ. ಆಗ ಅದರ ಮೇಲೆ ಏನನ್ನು ಬೇಕಾದರೂ ಮೂಡಿಸಿಕೊಳ್ಳಬಹುದು. ನೀವು ಒಂದು ಖಾಲಿ ಪುಟವಾಗಿ, ಹಾಗೆಯೇ ಉಳಿದುಕೊಂಡರೆ ನಿಮ್ಮಲ್ಲಿ ಜೀವನ ಅದು ಇರುವಂತೆಯೇ ಮೂಡುವುದು ಸಾಧ್ಯ. ನೀವು ಸಿನೆಮಾ ಥಿಯೇಟರಿಗೆ ಹೋಗಿದ್ದೀರಲ್ಲವೇ? ಅಲ್ಲಿನ ಬಿಳಿ ಪರದೆಯ ಮೇಲೆ ಅದೆಷ್ಟೋ ಸಿನಿಮಾಗಳನ್ನು ನೋಡಿದ್ದೀರಿ. ಯಾವುದೇ ಚಿತ್ರವನ್ನು ಮಿಕ್ಕಾದ ಚಿತ್ರಗಳು ವಿರೂಪಗೊಳಿಸುವುದಿಲ್ಲ ಅಲ್ಲವೇ? ಏಕೆಂದರೆ ಪರದೆಯ ಮೇಲೆ ಮೂಡುವ ಸಿನೆಮಾ ಚಿತ್ರವನ್ನು ಮೂಡಿಸಿದುದು ಕೇವಲ ಸೂಕ್ಷ್ಮ ಬೆಳಕಷ್ಟೇ. ಅದೇ ಚಿತ್ರವನ್ನು ಮೂಡಿಸಲು ಬಣ್ಣದ ಬಳಪವನ್ನೋ ಅಥವ ಬಣ್ಣದ ಕುಂಚವನ್ನೋ ಬಳಸಿದ್ದರೆ ಆ ಬಿಳಿಯ ಪರದೆಯನ್ನು ಎಂದೋ ತೆಗೆದು ಬಿಸಾಡಬೇಕಿತ್ತು.

ಇದೇ ರೀತಿ, ಸೃಷ್ಟಿಯೊಡನೆ ನಿಮ್ಮ ಸಂಬಂಧವೂ ಕೂಡ. ಸೃಷ್ಟಿಯ ಜೊತೆ ನಿಮ್ಮ ಸಂಬಂಧ ದೈಹಿಕ, ಮಾನಸಿಕ ಅಥವಾ ಭಾವನಾತ್ಮಕ ಸ್ತರದಲ್ಲಿ ಇದ್ದರೆ ಅಲ್ಲಿ ವಿವಿಧ ಬಣ್ಣದ ಕಲೆಗಳು ಉಳಿದು ಬಿಳಿಯ ಖಾಲಿ ಪುಟ ಇಲ್ಲದಾಗುವುದು. ಇನ್ನೂ ಸೂಕ್ಷ್ಮವಾದ ಆಕಾಶಿಕ ಸ್ತರಕ್ಕೆ ಏರಿದರೆ ಸೃಷ್ಟಿಯೊಂದಿಗಿನ ನಿಮ್ಮ ಸಂಬಂಧವೂ ಕೂಡ ಆಳವಾಗಿ, ಗಾಢವಾಗಿ ಆದರೆ ಅಷ್ಟೇ ಸೂಕ್ಷ್ಮತಮವಾದ ರೀತಿಯಲ್ಲಿ ಇರುವುದು. ಆಗ ನೀವು ಯಾವ ಚಿತ್ರವನ್ನು ಬೇಕಾದರೂ ಇಷ್ಟಬಂದಂತೆ ಮೂಡಿಸಿಕೊಳ್ಳಬಹುದು. ಸಾಕೆನಿಸಿದಾಗ ಅಳಿಸಿಬಿಡಬಹುದು. ಗೆರೆಯಷ್ಟೂ ಕಲೆ ಉಳಿಯದೆ, ಸಂಬಂಧ ಸ್ವಚ್ಛವಾಗಿಯೇ ಇರುವುದು. ಹಿಂದಿನ ಚಿತ್ರದ ಕಿಂಚಿತ್ ಬಣ್ಣ ಅಥವ ಚಿಕ್ಕ ಗೆರೆ ಉಳಿದುಕೊಂಡರೂ ಮುಂದಿನ ಚಿತ್ರಕ್ಕೆ ಕಲಸಿಕೊಂಡು ಅನಾಹುತವಾಗುವುದು. ಈಗ ಆಗುತ್ತಿರುವುದೂ ಇದೇ. ಹಿಂದಿನ ಚಿತ್ರಗಳ ಗುರುತು ಉಳಿದುಕೊಂಡಿರುವುದು.

ಸೃಷ್ಟಿಯ ಜೊತೆ ಮತ್ತು ಸೃಷ್ಟಿಕರ್ತನ ಜೊತೆ ನಿಮ್ಮ ಸಂಬಂಧವನ್ನು ಬದಲಿಸಿಕೊಳ್ಳಬೇಕಷ್ಟೇ. ಹೇಗೆ? ಒಂದು ಸಂಗತಿ ಖಚಿತ ಮಾಡಿಕೊಳ್ಳಿ. ಸೃಷ್ಟಿ-ಸೃಷ್ಟಿಕರ್ತನ ಜೊತೆ ನಿಮ್ಮ ಸಂಬಂಧದ ಬಗ್ಗೆ ನಿಮಗೆ ಆಯ್ಕೆಯೇ ಇಲ್ಲ. ಯಾವ ರೀತಿಯಾದರೂ ಸರಿ ಈ ಸಂಬಂಧ ಇದ್ದೇ ಇರುವುದು. ಇದು ನಿಮಗೆ ಅನಿವಾರ್ಯ. ಸೃಷ್ಟಿಯ ಜೊತೆ ಯಾವುದೇ ವಿಧವಾದ ಸಂಬಂಧ ಇಲ್ಲದೆ ನೀವು ಇಲ್ಲಿ ಕುಳಿತಿರಲು ಸಾಧ್ಯವೇ? ನಿಮಗೆ ಗೊತ್ತಿಲ್ಲದಿರಬಹುದು; ಆದರೆ ಸಂಬಂಧವಂತೂ ಇದ್ದೇ ಇರುತ್ತದೆ. ನೀವು ಭೌತಿಕವಾದ ಎಲ್ಲವನ್ನೂ ಸಂಪೂರ್ಣವಾಗಿ ಮೀರಿ ಹೋಗುವವರೆಗೆ ಈ ಸಂಬಂಧ ಇದ್ದದ್ದೇ.

ನೀವು ಹೇಗೆ ಕುಳಿತರೂ, ನಿಂತರೂ ಹೇಗೆ ಮಲಗಿದರೂ ಈ ಸಂಬಂಧವನ್ನು ಮಾತ್ರ ಕಡಿದುಕೊಳ್ಳಲು ಸಾಧ್ಯವಿಲ್ಲ. ಇದರರ್ಥ, ನೀವು ಸೃಷ್ಟಿಯೊಡನೆ ಸಂಬಂಧ ಇರಿಸಿಕೊಳ್ಳಲು ಪ್ರಯತ್ನ ಪಡಬೇಕಿಲ್ಲ. ಅಂದರೆ ನಿಮ್ಮ ಸಮಸ್ಯೆಗೆ ಅರ್ಧ ಪರಿಹಾರ ಸಿಕ್ಕಂತೆ. ಮಿಕ್ಕ ಅರ್ಧ; ನಿಮ್ಮನ್ನು ನೀವು ಅತಿಯಾಗಿ ಪರಿಗಣಿಸದೆ ಇದ್ದರಾಯಿತು.

ನಾನು ನಿಮಗೆ ಬೋಧನೆ ಮಾಡುತ್ತಿಲ್ಲ. ಕೇವಲ ಒಂದು ವಿಧಾನವನ್ನು ಹೇಳುತ್ತಿದ್ದೇನೆ. ಬೋಧನೆಗೂ ವಿಧಾನಕ್ಕೂ ಇರುವ ಅಂತರ ನಿಮಗೆ ಗೊತ್ತೇ? ಬೋಧನೆಯನ್ನು ವಿಶ್ಲೇಷಿಸಬಹುದು; ಅರ್ಥಮಾಡಿಕೊಳ್ಳಬಹುದು. ಆದರೆ ವಿಧಾನವನ್ನು ಕೇವಲ ಉಪಯೋಗ ಮಾಡಿಕೊಳ್ಳಬೇಕು. ಅದರ ವಿಶ್ಲೇಷಣೆಯಾಗಲೀ ಅರ್ಥಮಾಡಿ ಕೊಳ್ಳುವುದಾಗಲೀ ಇಲ್ಲ. ಹೀಗೆಯೇ ನಾನು ಹೇಳುತ್ತಿರುವ ವಿಧಾನವೂ ಕೂಡ. ಇದರಲ್ಲಿ ನೀವು ಹೆಚ್ಚು ಕಷ್ಟ ಪಡಬೇಕಿಲ್ಲ. ನೀವು ಈ ಸೃಷ್ಟಿಯಲ್ಲಿ ಎಷ್ಟು ಚಿಕ್ಕ- ಹುಲುಮಾನವ ಎಂಬುದನ್ನು ನಿರಂತರವಾಗಿ ಅರಿವಿನಲ್ಲಿ ಇಟ್ಟುಕೊಂಡರೆ ಸಾಕು.

ಪರ್ವತಗಳನ್ನು ನೋಡಿ; ನೀವೆಷ್ಟು ಚಿಕ್ಕವರು ಗಮನಿಸಿ. ಆಕಾಶವನ್ನು ಗಮನಿಸಿ. ಅದರಡಿ ಇರುವ ನೀವು ಎಷ್ಟು ಸಣ್ಣವರು ಎಂಬುದನ್ನು ಗಟ್ಟಿಮಾಡಿಕೊಳ್ಳಿ. ಆಕಾಶದ ಅಂತರವನ್ನು ಅಳೆಯಲು ನೋಡಿ; ನಿಮ್ಮ ದೃಷ್ಟಿಯ ಮಿತಿಯನ್ನು ಅರಿತುಕೊಳ್ಳಿ. ಹೀಗೆಯೇ, ಪ್ರತಿಯೊಂದು ವಿಷಯದಲ್ಲಿಯೂ ನಿಮ್ಮ ಮಿತಿಗಳನ್ನು ಅಳೆಯುತ್ತಲೇ ಈ ಸೃಷ್ಟಿಯಲ್ಲಿ ನೀವು ಒಂದು ಅತ್ಯಂತ ಸಣ್ಣ ಭಾಗವೆಂಬುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿರಿ. ಅಂದರೆ ನಿಮ್ಮನ್ನು ನೀವು ಕೀಳಾಗಿ ಕಾಣಿರಿ ಎಂದು ನಾನು ಹೇಳುತ್ತಿಲ್ಲ. ಆದರೆ ವಾಸ್ತವವಾಗಿ ನೀವು ಈ ಸೃಷ್ಟಿಯಲ್ಲಿ ಎಲ್ಲಿ ನಿಲ್ಲುವಿರಿ ಎಂಬುದನ್ನು ಗಮನಿಸಿ ಎನ್ನುತ್ತಿದ್ದೇನೆ. ನಿಮ್ಮನ್ನು ನೀವು ಕೀಳಾಗಿಸಬೇಕಿಲ್ಲ. ಅಂತೆಯೇ ಸೃಷ್ಟಿಯಲ್ಲಿನ ನಿಮ್ಮ ಸ್ಥಾನವನ್ನು ಇಲ್ಲದ ಹಿರಿತನಕ್ಕೆ ಏರಿಸಿಕೊಳ್ಳುವುದೂ ಬೇಕಿಲ್ಲ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ನಿಮಗೆ ನೀವು ಸುಳ್ಳು ಹೇಳಿಕೊಳ್ಳದಿರಿ. ಸುಮ್ಮನೆ ಈ ಅಸ್ತಿತ್ವದಲ್ಲಿ ನಿಮ್ಮ ಕ್ಷುದ್ರತೆಯನ್ನು ಗಮನಿಸಿ. ಈ ಸಂಗತಿಯನ್ನು ನಿರಂತರ ನೆನಪಿನಲ್ಲಿ ಇರಿಸಿಕೊಳ್ಳಿ- ʻʻನನ್ನ ಅಸ್ತಿತ್ವ ಇಷ್ಟೇ. ಮಹಾಶೂನ್ಯದಲ್ಲಿ ಇರುವ ಒಂದು ಯಃಕಶ್ಚಿತ್ ಶೂನ್ಯʼʼ ನೀವು ಯಾರಾದರೆ ಏನು, ನಿಮ್ಮನ್ನು ನೀವು ಏನೆಂದು ತಿಳಿದಿರುವಿರಿ, ನಿಮ್ಮ ಮಹಾನತೆ ಏನು- ಇವು ಯಾವುದಕ್ಕೂ ಬೆಲೆಯಿಲ್ಲ. ನೀವು ನಾಳೆ ಬೆಳಗ್ಗೆ ಇಲ್ಲಿಂದ ಕಣ್ಮರೆಯಾದರೆ ಏನಂತೆ? ಜಗತ್ತಿಗೆ ಯಾವ ನಷ್ಟವೂ ಇಲ್ಲದೆ ಮುಂದುವರೆಯುತ್ತದೆ. ಇದು ನಿಮಗೆ ಅನ್ವಯಿಸಿದಂತೆ ನನಗೂ ಅನ್ವಯಿಸುತ್ತದೆ. ಎಲ್ಲರಿಗೂ ಇದೇ ಸಂಗತಿ. ಇದನ್ನು ಜನ ಅರಿಯದೆ ಹೋದಷ್ಟೂ ಅವರ ಜೀವನವೂ ಮೌಢ್ಯತೆಯಿಂದ ತುಂಬಿಕೊಳ್ಳುವುದು. ಈ ಸಂಗತಿಯನ್ನು ಮನದಟ್ಟು ಮಾಡಿಕೊಂಡಷ್ಟೂ ಜನ ಬುದ್ಧಿಪೂರ್ವಕ ಬಾಳು ನಡೆಸುವರು.

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

ಇದನ್ನೂ ಓದಿ : Prerane | ನ್ಯಾಯ ಸಮ್ಮತವಾಗಿರಲಿ ನಮ್ಮ ದೃಷ್ಟಿ

Exit mobile version