Site icon Vistara News

Prerane : ಪ್ರಾಮಾಣಿಕತೆಯೇ ಅಧ್ಯಾತ್ಮದ ಮೂಲ

Sadhguru's Column in the vistara news

ಸದ್ಗುರು ಜಗ್ಗಿ ವಾಸುದೇವ್‌

ಸದ್ಗುರು ಜಗ್ಗಿ ವಾಸುದೇವ್‌
ಜನರು ಮತೀಯರಾದ ( ಮತ ಧರ್ಮಗಳನ್ನು ಪಾಲಿಸುವವರು) ಕ್ಷಣ, ಎಲ್ಲಾ ಸಂಘರ್ಷಗಳ ಕೊನೆಯಾಗಬೇಕಿದ್ದ ಕ್ಷಣವಾಗಿರಬೇಕಿತ್ತು. ದುರದೃಷ್ಟವಶಾತ್, ಪ್ರಪಂಚದ ಎಲ್ಲೆಡೆಯೂ ಮತಧರ್ಮವೇ ಸಂಘರ್ಷದ ಮುಖ್ಯ ಕಾರಣವಾಗಿದೆ. ಇದು ಸಾವಿರಾರು ವರ್ಷಗಳ ಕಾಲ ಭೂಮಿಯಲ್ಲಿ ಅತಿ ಹೆಚ್ಚಿನ ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಅತಿ ಹೆಚ್ಚು ನೋವನ್ನು ಉಂಟುಮಾಡಿದೆ.

ಇದರ ಕಾರಣವೇನೆಂದರೆ, ಮತ-ಧರ್ಮವೆನ್ನವುದು ಮೂಲತಃ ನಂಬಿಕೆಯ ಕಟ್ಟುಪಾಡುಗಳು. ನಂಬಿಕೆಗಳ ಮೂಲವೇನು? ನಂಬಿಕೆಯೆಂದರೆ ನಿಮಗೆ ತಿಳಿದಿಲ್ಲ ಎಂದು. ನಿಮಗೆ ಯಾವುದರ ಬಗ್ಗೆಯಾದರೂ ತಿಳಿದಿದ್ದರೆ, ನೀವು ಅದನ್ನು ನಂಬುವ ಅಗತ್ಯವಿರುವುದಿಲ್ಲ, ನಿಮಗೆ ಅದರ ಬಗ್ಗೆ ತಿಳಿದಿದೆಯಷ್ಟೆ. ಉದಾಹರಣೆಗೆ, ನಿಮಗೆ ಎರಡು ಕೈಗಳಿವೆ ಎಂದು ನೀವು ನಂಬುತ್ತೀರಾ ಅಥವಾ ನಿಮಗೆ ಎರಡು ಕೈಗಳಿವೆ ಎಂದು ನಿಮಗೆ ತಿಳಿದಿದೆಯೇ? ಕೈಗಳನ್ನು ನೋಡಲು ನಿಮಗೆ ಕಣ್ಣುಗಳಿರದಿದ್ದರೂ, ನಿಮಗೆ ಎರಡು ಕೈಗಳಿವೆ ಎಂದು ನಿಮಗೆ ತಿಳಿದಿರುತ್ತದೆ.

ಕೈಗಳ ವಿಷಯದಲ್ಲಿ, ನಿಮಗೆ ತಿಳಿದಿದೆ; ಆದರೆ ದೇವರ ವಿಷಯದಲ್ಲಿ ನಂಬುತ್ತೀರಿ-ಯಾಕೆ? ನಿಮಗೆ ತಿಳಿದಿಲ್ಲವೆಂದು ಒಪ್ಪಿಕೊಳ್ಳುವಷ್ಟು ನೀವು ಪ್ರಾಮಾಣಿಕರಲ್ಲದ ಕಾರಣ ನಂಬಿಕೆಗಳು ಹುಟ್ಟುತ್ತವೆ. ಸಾಂಸ್ಕೃತಿಕವಾಗಿ ಅಥವಾ ಸಾಮಾನ್ಯವಾಗಿ ನಿಮಗೆ ಯಾವುದು ಅನುಕೂಲವೆನಿಸುತ್ತದೋ, ಅದನ್ನು ನೀವು ನಂಬುತ್ತೀರ. ದೇವರಿದ್ದಾನೆ ಎಂದು ನಂಬುತ್ತೀರೋ ಅಥವಾ ದೇವರಿಲ್ಲ ಎಂದು ನೀವು ನಂಬುತ್ತೀರೋ, ಇವೆರಡರಲ್ಲೇನೂ ವ್ಯತ್ಯಾಸವಿಲ್ಲ; ನೀವಿಬ್ಬರೂ ಒಂದೇ ದೋಣಿಯಲ್ಲಿದ್ದೀರಿ. ನಿಮಗೆ ತಿಳಿಯದೇ ಇರುವ ವಿಷಯವನ್ನು ನೀವು ನಂಬುತ್ತಿದ್ದೀರ.

ನೀವು ಏನನ್ನಾದರೂ ನಂಬಿದಾಕ್ಷಣ, ನೀವೊಂದು ಮಟ್ಟದ ಆತ್ಮವಿಶ್ವಾಸದೊಂದಿಗೆ ಕೆಲಸಗಳನ್ನು ಮಾಡಬಹುದು. ಸ್ಪಷ್ಟತೆ ಇಲ್ಲದ ಆತ್ಮವಿಶ್ವಾಸ ಒಂದು ವಿಪತ್ತೇ ಸರಿ. ನೀವು ಪ್ರಪಂಚದಲ್ಲಿ ನೋಡುತ್ತಿರುವುದು ಇದನ್ನೇ. ನಂಬಿಕೆಯ ಕಟ್ಟುಪಾಡುಗಳು ಜನರಲ್ಲಿ ಆತ್ಮವಿಶ್ವಾಸದ ಭಾವನೆಯನ್ನು ಕೆರಳಿಸುತ್ತದೆ ಮತ್ತು ಸ್ಪಷ್ಟತೆಯಿಲ್ಲದ ಈ ಆತ್ಮವಿಶ್ವಾಸವು ಭೂಮಿಯಲ್ಲಿ ಒಂದು ದೊಡ್ಡ ವಿಪತ್ತನ್ನೇ ಸೃಷ್ಟಿಸುತ್ತದೆ. ಪ್ರಪಂಚದಲ್ಲಿ ಎಲ್ಲಾ ಸಂಘರ್ಷಗಳು ನಡೆಯುವುದು ಒಬ್ಬ ವ್ಯಕ್ತಿಯ ನಂಬಿಕೆಗೆ ಇನ್ನೊಬ್ಬರ ನಂಬಿಕೆ ವಿರುದ್ಧವಾಗಿದೆಯೆಂದು. ನೀವು ನಿಮ್ಮ ಮಾರ್ಗ ಸರಿಯೆಂದು, ಇನ್ನೊಬ್ಬರು ಅವರ ಮಾರ್ಗ ಸರಿಯೆಂದು ನಂಬಿದಾಕ್ಷಣ, ನಿಮ್ಮಿಬ್ಬರ ನಡುವೆ ಸಂಘರ್ಷ ಖಚಿತ.

ನಂಬಿಕೆಯ ಕಟ್ಟುಪಾಡುಗಳಿಗೆ ನಿರ್ದಿಷ್ಟವಾದ ಅನುಕೂಲತೆಯಿರುವುದರಿಂದ ಅವುಗಳು ಹುಟ್ಟಿಕೊಳ್ಳುತ್ತವೆ. ಅದೊಂದು ಸಾಂತ್ವನ. ಕಳೆದುಹೋದವರಿಗೆ ಮತ್ತು ತೊಂದರೆಗೀಡಾದವರಿಗೆ ಮಾತ್ರ ಸಾಂತ್ವನದ ಅಗತ್ಯವಿರುತ್ತದೆ. ದುರದೃಷ್ಟವಶಾತ್, ಮಾನವತೆಯ ಹೆಚ್ಚಿನ ಭಾಗವನ್ನು ಈ ಸ್ಥಿತಿಯಲ್ಲಿ ದೀರ್ಘಕಾಲದವರೆಗೆ ಇಡಲಾಗಿದೆ, ಮತ್ತೀಗ ಸಾಂತ್ವನವನ್ನು ಮಾರುವುದು ಅಗತ್ಯವಾಗಿದೆ. “ಚಿಂತಿಸಬೇಡಿ, ದೇವರು ನಿಮ್ಮೊಂದಿಗಿದ್ದಾನೆ” ಎಂದು ಅವರಿಗೆ ನೀವು ಹೇಳಬೇಕಷ್ಟೆ. ಅವರಿಗೆ ಅಷ್ಟೇ ಸಾಕು. ದೇವರು ನಿಮ್ಮ ಜೊತೆ ಇದ್ದಾನೆಯೋ ಅಥವಾ ಇಲ್ಲವೋ ಎನ್ನುವುದಲ್ಲ ವಿಷಯ; ಯಾರೋ ನಿಮ್ಮ ಜೊತೆ ಇದ್ದಾರೆ ಎಂದು ನಿಮಗೆ ಅನಿಸುತ್ತದೆ. ಇದೇ ಅವರನ್ನು ಮಾನಸಿಕವಾಗಿ ಸ್ವಸ್ಥವಾಗಿಟ್ಟಿರುವುದು; ಇಲ್ಲದಿದ್ದರೆ ಅವರು ಕುಸಿದು ಹೋಗುತ್ತಾರೆ.

ಒಬ್ಬ ವ್ಯಕ್ತಿ ತಾನೇ ಸ್ವಭಾವಯುತವಾಗಿ ಹೊಂದಬಲ್ಲ ಪರಿಪೂರ್ಣವಾದ ಆನಂದದ ಸ್ಥಿತಿ ಮತ್ತು ಅವನ ಪ್ರಸ್ತುತ ಮಟ್ಟದ ಅಸ್ಥಿರತೆಯ ನಡುವಿನ ಅಂತರವನ್ನು ಧರ್ಮವು ತುಂಬಿದೆ. ನೀವು ಸಾಂತ್ವನವನ್ನು ಅರಸುತ್ತಿದ್ದರೆ, ಅದರ ಅಗತ್ಯ ಖಂಡಿತವಾಗಿಯೂ ಇದೆ. ಹೆಚ್ಚಿನವರು ಅರಸುತ್ತಿರುವುದು ಸಾಂತ್ವನವನ್ನು, ಮುಕ್ತಿಯನ್ನಲ್ಲ. ಸಾಂತ್ವನವು ನಿದ್ದೆ ಮಾತ್ರೆಯಿದ್ದ ಹಾಗೆ; ಅದು ನಿಮ್ಮನ್ನು ನಿದ್ದೆಗೆ ತಳ್ಳುತ್ತದೆ. ನಾವು ಜೀವನದಲ್ಲಿ ಮಲಗಿ ನಿದ್ರಿಸಬೇಕೇ ಅಥವಾ ಹೊಸ ಸಾಧ್ಯತೆಗಳಿಂದ ನಾವು ಜೀವಂತವಾಗಬೇಕೇ ಎನ್ನುವುದು ನಮ್ಮ ಆಯ್ಕೆ.

ಎಲ್ಲೋ ಒಂದು ಹಂತದಲ್ಲಿ, ಎಲ್ಲಾ ಮತಧರ್ಮಗಳು ಆಧ್ಯಾತ್ಮಿಕ ಪ್ರಕ್ರಿಯೆಗಳಾಗಿಯೇ ಆರಂಭವಾದವು. ಆದರೆ, ಅದನ್ನು ಸಂಘಟಿಸುವ ಉತ್ಸುಕತೆಯಿಂದ, ಅದರ ಮೂಲತತ್ವವನ್ನು ಕಳೆದುಕೊಂಡವು. ಆಧ್ಯಾತ್ಮಿಕತೆಯ ಅಧಃಪತನವೇ ಮತಧರ್ಮ. ಮತಧರ್ಮ ಮತ್ತು ಆಧ್ಯಾತ್ಮಿಕ ಪ್ರಕ್ರಿಯೆಯ ನಡುವಿನ ವ್ಯತ್ಯಾಸವನ್ನು ನಾವು ಅರ್ಥಮಾಡಿಕೊಳ್ಳೋಣ. ನೀವೊಂದು ಮತಧರ್ಮಕ್ಕೆ ಸೇರಿದವರು ಎಂದಾಕ್ಷಣ, ನಿಮ್ಮನ್ನು ನೀವು ನಂಬುವವರು ಎಂದು ಕರೆದುಕೊಳ್ಳುತ್ತೀರಿ. ನೀವು ʻʻನಾನೊಂದು ಆಧ್ಯಾತ್ಮಿಕ ಪಥದಲ್ಲಿದ್ದೀನಿ” ಎಂದಾಕ್ಷಣ, ನಿಮ್ಮನ್ನು ನೀವು ಅನ್ವೇಷಕರು ಎಂದು ಕರೆದುಕೊಳ್ಳುತ್ತೀರಿ.

ನಂಬುವುದರ ಮತ್ತು ಅನ್ವೇಷಣೆಯ ನಡುವಿನ ವ್ಯತ್ಯಾಸವೇನು? ನಿಮಗೆ ತಿಳಿಯದದ್ದನ್ನು ಮಾತ್ರ ನೀವು ಅರಸಬಲ್ಲಿರಿ. ಅಥವಾ ಬೇರೆ ಮಾತಿನಲ್ಲಿ ಹೇಳುವುದಾರೆ, ಅರಸುವುದರ ಆಧಾರತತ್ವವಿದು; ನಿಮ್ಮದೇ ಜೀವನದ ಸಾರಭೂತವಾದ ಸ್ವರೂಪವು ನಿಮಗೆ ತಿಳಿದಿಲ್ಲವೆಂಬುದು ನಿಮಗೆ ಮನವರಿಕೆಯಾಗಿದೆ. ನಿಮಗೆ ನಿಮ್ಮ ಸೃಷ್ಟಿಯ ಮೂಲ ತಿಳಿದಿಲ್ಲ. ನೀವು ಯಾರು, ನೀವು ಏನು, ನೀವು ಎಲ್ಲಿಂದ ಬಂದಿರಿ, ನೀವು ಎಲ್ಲಿಗೆ ಹೋಗುವಿರಿ ಎಂಬುದು ನಿಮಗೆ ತಿಳಿದಿಲ್ಲ. ಅದನ್ನು ತಿಳಿಯಲು ನೀವು ಅರಸುತ್ತಿದ್ದೀರಿ. ನೀವು, “ನನಗೇನೂ ತಿಳಿಯದು” ಎನ್ನುವ ಸ್ಥಿತಿಯಲ್ಲಿದ್ದರೆ, ನಿಮಗೆ ಯಾರೊಂದಿಗೆ ಹೋರಾಡಲು ಸಾಧ್ಯವಿರುವುದಿಲ್ಲ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಆಧ್ಯಾತ್ಮಿಕ ಪ್ರಕ್ರಿಯೆಯಲ್ಲಿ, ಎಲ್ಲಕ್ಕಿಂತ ಮುಖ್ಯವಾದ ವಿಷಯವಿದು: ನಿಮ್ಮೊಂದಿಗೆ ನೀವು ಪ್ರಾಮಾಣಿಕರಾಗಿದ್ದು, “ನನಗೇನು ಗೊತ್ತಿದೆಯೋ, ಅದು ನನಗೆ ಗೊತ್ತಿದೆ; ನನಗೇನು ಗೊತ್ತಿಲ್ಲವೋ, ಅದು ನನಗೆ ಗೊತ್ತಿಲ್ಲ.” ಎಂಬುದುನ್ನು ನೋಡಲು ಸಿದ್ಧರಿರಬೇಕು. ಕೃಷ್ಟ, ಜೀಸಸ್, ಅಥವಾ ಬೇರೆ ಯಾರಾದರೂ ಏನು ಹೇಳಿದರೆಂಬುದು ಮುಖ್ಯವಲ್ಲ – ಅವರು ಸತ್ಯವನ್ನೇ ಹೇಳುತ್ತಿರಬಹುದು – ಹೀಗೆ ಹೇಳುವುದಕ್ಕೆ ಕ್ಷಮೆಯಿರಲಿ, ಅವರು ಹೇಳಿದ್ದು ಸತ್ಯವೆಂದು ನಿಮಗೆ ತಿಳಿದಿಲ್ಲ – ನೀವದನ್ನು ಅನುಭವಿಸಿಲ್ಲ ಅಥವಾ ನೋಡಿಲ್ಲ. ನಿಮಗೆ ನಿಜವಾಗಿಯೂ ತಿಳಿದಿಲ್ಲವೆಂದು ಒಪ್ಪಿಕೊಳ್ಳುವಷ್ಟು ಪ್ರಾಮಾಣಿಕರಾಗಿ ಇರಬಾರದೇಕೇ? “ನನಗೆ ಗೊತ್ತಿಲ್ಲ” ಎನ್ನುವುದೊಂದು ಅಗಾಧವಾದ ಸಾಧ್ಯತೆ. ಅದು ಅರಿವಿನ ತಳಹದಿ. ನಿಮಗೆ ಗೊತ್ತಿಲ್ಲ ಎನ್ನುವುದು ನಿಮಗೆ ಮನವರಿಕೆಯಾದಾಗಲೇ ತಿಳಿಯುವ ಸಾಧ್ಯತೆಯು ತೆರೆದುಕೊಳ್ಳುತ್ತದೆ. ಯಾವ ಕ್ಷಣದಲ್ಲಿ ನೀವು ಅದನ್ನು ನಿಮಗೆ ಅನುಕೂಲವೆನಿಸುವ ಒಂದು ನಂಬಿಕೆಯಿಂದ ಕೊಲ್ಲುತ್ತೀರೋ, ತಿಳಿಯುವ ಎಲ್ಲಾ ಸಾಧ್ಯತೆಯನ್ನೂ ನೀವು ನಾಶ ಮಾಡುತ್ತೀರ.

ನೀವು ಆಧ್ಯಾತ್ಮಿಕರಾಗುವುದು, ನೀವು ಮೇಲ್ಮುಖವಾಗಿ ಕೆಳಮುಖವಾಗಿ ಅಥವಾ ಸುತ್ತಲೂ ನೋಡಿದಿರಿ ಎಂದಲ್ಲ, ಆಧ್ಯಾತ್ಮಿಕರಾಗುವುದೆಂದರೆ ನೀವು ಒಳಮುಖರಾದಿರಿ ಎಂದು. ಒಳಮುಖವಾಗುವುದು ಎಂದರೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮವೆಂದಲ್ಲ. ಆಂತರ್ಯದಲ್ಲಿರುವುದು ಆಯಾಮರಹಿತವಾದದ್ದು. ಯಾವುದು ಆಯಾಮರಹಿತವೋ, ಅದನ್ನು ಪ್ರಾಮಾಣಿಕರಲ್ಲದವರಿಂದ ತಲುಪಲು ಅಸಾಧ್ಯ. ನೀವು ಬೇರೆಯವರೊಂದಿಗೆ ಪ್ರಾಮಾಣಿಕರಾಗಿರಿ ಎಂದು ನಾನು ಹೇಳುತ್ತಿಲ್ಲ – ಹಾಗೆ ಮಾಡಲು ಅನೇಕ ಸಮಸ್ಯೆಗಳಿರಬಹುದು. ನಾನು ಹೇಳುತ್ತಿರುವುದು, ನಿಮ್ಮೊಂದಿಗೆ ನೀವೇ ಪ್ರಾಮಾಣಿಕವಾಗಿರುವುದರ ಬಗ್ಗೆ. ನೀವು ಈ ಒಂದು ವಿಷಯಕ್ಕೆ ಅರ್ಹರಲ್ಲವೇ?

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

ಇದನ್ನೂ ಓದಿ : Prerane : ಜೀವನ ದರ್ಶನ ವೈವಿಧ್ಯ

Exit mobile version