Site icon Vistara News

Prerane : ಕರ್ಮದ ಪುನರಾವರ್ತನೆಯನ್ನು ಮುರಿಯುವ ಅವಕಾಶ

prerane spiritual column by sadhguru jaggi vasudev

sadhguru

ಪ್ರತಿಯೊಬ್ಬರ ಕರ್ಮದ ರಚನೆಯು ಮೂಲತಃ ಆವರ್ತನೀಯವಾಗಿದೆ. ಈ ಆವರ್ತನೆಯು ಒಂದು ಜೀವಿತಾವಧಿಯಿಂದ ಇನ್ನೊಂದು ಜೀವಿತಾವಧಿಯಲ್ಲಿ ಮಾತ್ರ ನಡೆಯುವುದಲ್ಲ. ನೀವು ಸಾಕಷ್ಟು ಗಮನವಿತ್ತರೆ, ಆ ಘಟನೆಗಳು ಸಾಮಾನ್ಯವಾಗಿ ಹನ್ನೆರಡೂಕಾಲು, ಹನ್ನೆರಡೂವರೆ ವರ್ಷಗಳಗಳಿಗೊಮ್ಮೆ ಪುನರಾವರ್ತನೆ ಯಾಗುತ್ತವೆಯೆಂದು ನೀವು ನೋಡಬಲ್ಲಿರಿ.

ನೀವು ಇನ್ನೂ ನಿಕಟವಾಗಿ ಗಮನಿಸಿದರೆ, ಒಂದು ವರ್ಷದ ಅವಧಿಯಲ್ಲೂ, ಅದೇ ಮಾದರಿಯು ಅನೇಕ ಬಾರಿ ನಡೆಯುತ್ತಿರುವುದನ್ನು ನೀವು ನೋಡಬಹುದು. ನೀವು ಇನ್ನೂ ಹೆಚ್ಚು ನಿಕಟವಾಗಿ ಗಮನಿಸಿದರೆ, ಅದೇ ಆವರ್ತನವು ಒಂದು ದಿನದೊಳಗೆ ಅನೇಕ ಬಾರಿ ನಡೆಯುತ್ತಿರುತ್ತದೆ. ವಾಸ್ತವವಾಗಿ ಕರ್ಮದ ಆವರ್ತನವು ಪ್ರತಿ 40 ನಿಮಿಷಗಳಿಗೊಮ್ಮೆ ನಡೆಯುತ್ತದೆ. ಈ 40 ನಿಮಿಷದ ಆವರ್ತನಗಳನ್ನು ’ಘಳಿಗೆ’ ಎಂದು ಕರೆಯಲಾಗುತ್ತದೆ. ಆದ್ದರಿಂದ ಪ್ರತಿ 40 ನಿಮಿಷಗಳಲ್ಲಿ, ನಿಮಗೆ ಅದನ್ನು ಮುರಿಯುವ ಅವಕಾಶವಿದೆ.

ಇದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಜೀವನವು ಮೂರ್ಖವಾದ ಪುನರಾವರ್ತನೆಯೆಂದು, ಪ್ರತಿ 40 ನಿಮಿಷಗಳಿಗೂ ನೀವು ಅದೇ ಸಂಗತಿಗಳನ್ನು ಮತ್ತೆ ಮತ್ತೆ ಮಾಡುತ್ತಿದ್ದೀರೆಂದು ನಿಮಗೆ ಅರ್ಥವಾದರೆ, ಅದು ನಡೆಯುತ್ತಿರುವ ರೀತಿ ಸರಿಯಲ್ಲವೆಂದು ನಿಮಗೆ ಎರಡು ದಿನಗಳಲ್ಲಿ ಮನವರಿಕೆಯಾಗುತ್ತದೆ. ನೀವು ಇದನ್ನು 12 ವರ್ಷಗಳಿಗೊಮ್ಮೆ ಮಾತ್ರ ನೋಡಿದರೆ, ಇದು ಸರಿಯಲ್ಲವೆಂದು ನಿಮಗೆ ಅರ್ಥವಾಗಲು 24 ರಿಂದ 48 ವರ್ಷಗಳು ಬೇಕಾಗುತ್ತದೆ. ಮತ್ತು ನೀವಿದನ್ನು ಜೀವಿತಾವಧಿಗೊಮ್ಮೆ ಮನವರಿಕೆಯಾದರೆ, ಇದು ಸರಿಯಲ್ಲವೆಂದು ನಿಮಗೆ ಅರ್ಥವಾಗಲು ಕೆಲವು ಜೀವಿತಾವಧಿಗಳೇ ಬೇಕಾಗುತ್ತದೆ.

ಇದು ನೀವೆಷ್ಟು ಪ್ರಜ್ಞಾಪೂರ್ವಕವಾಗಿದ್ದೀರ ಎಂಬುದರ ಮೇಲೆ ಅವಲಂಬಿತವಾಗಿದೆ. ನೀವು ಹೆಚ್ಚು ಹೆಚ್ಚು ಪ್ರಜ್ಞಾಪೂರ್ವಕವಾದಂತೆಲ್ಲ, ಪ್ರಜ್ಞೆಯಿಲ್ಲದೆ ಬಾಳುವುದು ಒಳ್ಳೆಯದಲ್ಲವೆಂದು ನಿಮಗೆ ಹೆಚ್ಚು ಹೆಚ್ಚು ತಿಳಿಯುತ್ತದೆ. ಹಾಗಾಗಿ, ಪ್ರತಿ 40 ನಿಮಿಷಗಳಿಗೊಮ್ಮೆ, ಅದರ ಬಗ್ಗೆ ಪ್ರಜ್ಞಾಪೂರ್ವಕವಾಗಲು, ಆವರ್ತನವನ್ನು ಮುರಿಯಲು, ನಿಮ್ಮ ಪ್ರಸ್ತುತ ಮಿತಿಗಳನ್ನು ಮೀರಲು ನಿಮಗೊಂದು ಅವಕಾಶವಿದೆ.

ಆಧ್ಯಾತ್ಮಿಕ ಪ್ರಕ್ರಿಯೆ ಆರಂಭಿಸಲು 3 ಮಾರ್ಗ

ಆಧ್ಯಾತ್ಮಿಕ ಪ್ರಕ್ರಿಯೆಯನ್ನು ಅನುಸರಿಸಲು ಮೂರು ಮಾರ್ಗಗಳಿವೆ. ಕೆಲ ಜೀವಿತಾವಧಿಗಳಲ್ಲಿ ಸೂಕ್ತವಾದ ಕೆಲಸಗಳನ್ನು ಮಾಡುವುದರಿಂದ ನಿಧಾನವಾಗಿ ನೀವು ಅಲ್ಲಿ ತಲುಪುವುದು ಒಂದು ಮಾರ್ಗ. ನಿಮ್ಮ ಪ್ರಸ್ತುತ ಸಂದರ್ಭಗಳಲ್ಲಿ ನಿಮಗೆ ಸಾಧ್ಯವಾದಷ್ಟನ್ನು ಮಾಡಿ, ನಿಮ್ಮನ್ನು ಮುಕ್ತವಾಗಿರಿಸಿಕೊಂಡು, ಪ್ರಕ್ರಿಯೆಗೆ ನೀವು ಲಭ್ಯವಿರುವುದು ಇನ್ನೊಂದು ಮಾರ್ಗ.

prerane spiritual column by sadhguru jaggi vasudev

ನಿಮ್ಮ ಜೀವನದ ಕೊನೆಯ ಕ್ಷಣದಲ್ಲಿ, ಅದು ನಡೆಯವುದನ್ನು ನಾವು ನೋಡುತ್ತೇವೆ. ಮತ್ತೊಂದು ಮಾರ್ಗವಿದೆ – ನಿಮಗೆ ಈಗಲೇ ಏನೋ ತಿಳಿಯಬೇಕಿದೆ. ನಿಮಗೆ ಈಗಲೇ ನಿಮ್ಮ ಮಿತಿಗಳನ್ನು ಮೀರಿ, ಅದರಾಚೆ ಹೋಗಬೇಕಿದೆ. ಹೀಗಿದ್ದಾಗ ನಿಮ್ಮ ಸುತ್ತ ಏನಾಗುತ್ತಿದೆ ಎಂಬುದರ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬಾರದು, ಏಕೆಂದರೆ ಯಾರೂ ಒಪ್ಪದಂತಹ ಅನೇಕ ಸಂಗತಿಗಳು ಘಟಿಸುತ್ತವೆ. ಅದನ್ನು ಸಮಾಜ ಅನುಮೋದಿಸುವುದಿಲ್ಲ, ಜನರು ಅನಮೋದಿಸುವುದಿಲ್ಲ, ನಿಮ್ಮ ಕುಟುಂಬವೂ ಅನಮೋದಿಸುವುದಿಲ್ಲ ಏಕೆಂದರೆ ನಿಮ್ಮ ವ್ಯಕ್ತಿತ್ವ ಒಂದು ರೀತಿಯದ್ದಾಗಿತ್ತು. ಅದು ಬದಲಾದರೆ, ಅವರಿಗೆ ನಿಮ್ಮ ಜೊತೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ.

ನೀವು ಮದುವೆ ಮಾಡಿಕೊಂಡಿರಿ ಎಂದುಕೊಳ್ಳೋಣ. ನಿಮ್ಮ ವ್ಯಕ್ತಿತ್ವ ಒಂದು ರೀತಿಯಲ್ಲಿ ಇದ್ದುದರಿಂದ ನಿಮ್ಮ ಸಂಗಾತಿಯು ನಿಮ್ಮನ್ನು ಮದುವೆಯಾದರು. ನಿಮ್ಮ ವ್ಯಕ್ತಿತ್ವ ಬದಲಾದರೆ, ಅದು ಸುಂದರವಾದ ಬದಲಾವಣೆಯಾದರೂ, ಅದು ಬೇರೆಯ ವ್ಯಕ್ತಿತ್ವವಾದ್ದರಿಂದ ನೀವು ಅವರಿಗೆ ಬೇರೆ ವ್ಯಕ್ತಿಯೇ ಆಗಿಬಿಡುತ್ತೀರಿ. ನಿಮ್ಮನ್ನೊಂದು ಮಹಾನ್ ಸಾಧ್ಯತೆಯಾಗಿ, “ಅವರು ಆಧ್ಯಾತ್ಮಿಕವಾಗಿ ಮುಂದೆ ಹೋಗಿದ್ದಾರೆ. ನನಗಿಂತ ಮುಂದೆ ಹೋಗಿರುವ ವ್ಯಕ್ತಿ ನನ್ನೊಂದಿಗಿರುವುದು ಅದ್ಭುತ” ಎಂದು ನೋಡುವ ವಿವೇಕ ಮತ್ತು ಪ್ರಜ್ಞೆ ಇಲ್ಲದ ಹೊರತು ಅವರು ನಿಮ್ಮೊಂದಿಗೆ ಬಾಳಲಾರರು.

ಅಷ್ಟು ಪ್ರಜ್ಞೆ ಇದ್ದರೆ, ಒಳ್ಳೆಯದು. ಆದರೆ ಆ ಪ್ರಜ್ಞೆ ಬಂದಾಗ ಸಂಬಂಧವು ಪರಿವರ್ತಿತವಾಗಬೇಕು. ಅದು ಹಿಂದಿದ್ದ ಹಾಗಿರಲು ಸಾಧ್ಯವಿಲ್ಲ. ನಿಮ್ಮ ಹತ್ತಿರದವರು ನಿಮಗಿಂತ ಬಹಳ ಮುಂದೆ ಹೋಗಿದ್ದಾರೆ ಎಂದು ಗುರುತಿಸಿದಾಗ, ಆ ಸಂಬಂಧವು ಕೇವಲ ಗಂಡ ಹೆಂಡತಿ, ತಾಯಿ ಮಗ, ಅದು ಇದು ಆಗಿ ಮುಂದುವರೆಯಲು ಆಗುವುದಿಲ್ಲ. ಹಾಗಾಗಿ, ಒಂದು ವಿಧದಲ್ಲಿ, ನೀವು ಯಾವುದಕ್ಕೆ ಬೆಲೆ ಕೊಡುತ್ತಿದ್ದರೋ, ಅದು ಮುರಿದು ಹೋಗುತ್ತದೆ – ಒಂದೋ ಭೌತಿಕವಾಗಿ ಮುರಿಯುತ್ತದೆ, ಅಥವಾ ನೀವು ಒಂದೇ ಸ್ಥಳದಲ್ಲಿದ್ದರೂ ಅದು ಬದಲಾಗಿರುತ್ತದೆ. ಸಮಾಜದಲ್ಲಿ ಎಷ್ಟು ಜನರು ಅದಕ್ಕೆ ಸಿದ್ಧರಿದ್ದಾರೆ?

ಆದ್ದರಿಂದ, ಬಹಳ ಜನರಿಗೆ ಮಿಕ್ಕ ಎರಡು ಆಯ್ಕೆಗಳು ಉತ್ತಮವಾಗಿರುತ್ತದೆ: ನೀವು ಸೂಕ್ತವಾದ ಸಂಗತಿಗಳನ್ನು ಮಾಡಿ, ನಿಮ್ಮ ಗುರುಗಳಿಗೆ ಲಭ್ಯವಿರಿ. ಕೊನೆಯ ಘಳಿಗೆಯು ಬಂದಾಗ, ಅವರು ಅದನ್ನು ನೋಡಿಕೊಳ್ಳುತ್ತಾರೆ. ಅಥವಾ, ಗುರುಗಳಿಗೆ ಲಭ್ಯವಿರಲು ನೀವು ಸಿದ್ಧರಿಲ್ಲದಿದ್ದು, ನೀವು ಕೆಲ ಸಣ್ಣ ಸಣ್ಣ ಸಂಗತಿಗಳನ್ನು ಮಾಡಲು ಸಿದ್ಧರಿದ್ದೀರ ಎಂದೆಣಿಸೋಣ. ನಿಮ್ಮನ್ನು ನೀವು ಯಾವುದಾರೊಂದು ರೀತಿಯಲ್ಲಿ ಪೋಷಿಸಿಕೊಳ್ಳಿ, ಆಗ ಮುಂದೆ ಭವಿಷ್ಯದಲ್ಲಿ ನಿಮಗೆ ಏನಾದರೂ ಆಗಬಹುದು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ನಿಮಗೆ ಹಾಗಾಗಬೇಕೆಂದು ನಾನು ಆಶಿಸುವುದಿಲ್ಲ. ನಿಮ್ಮ ಮಿತಿಗಳನ್ನು ನೀವು ಒಂದೋ ಈಗ ಮುರಿಯಬೇಕು, ಅಥವಾ ಕೊನೆಪಕ್ಷ ಅದು ನಿಮ್ಮ ಸಾವಿನ ಘಳಿಗೆಯಲ್ಲಾದರೂ ಆಗಬೇಕು. ನಾನು ಸಹನೆಯ ಸ್ವಭಾವದವನಲ್ಲ. ನಾನು ಅಸಹನೆಯನ್ನು ಅನೇಕ ಜನ್ಮಗಳ ಕಾಲ ಅಭ್ಯಾಸ ಮಾಡಿದ್ದೇನೆ. ಜನರು ನನ್ನನ್ನು ಅತ್ಯಂತ ಸಹನಶೀಲನೆಂದು ಪರಿಗಣಿಸುತ್ತಾರೆ, ಏಕೆಂದರೆ ನನ್ನ ಸಮ್ಮತಿಯನ್ನು ಸಹನೆಯೆಂದು ನೋಡಲಾಗುತ್ತದೆ, ಆದರೆ ನನಗೆ ತಾಳ್ಮೆಯಿಲ್ಲ. ನನಗೆ ಎಲ್ಲವೂ ತ್ವರಿತಗತಿಯಲ್ಲಿ ನಡೆಯಬೇಕು. ನಿಧಾನವಾಗಿ ನಡೆಯುವುದ್ಯಾವುದೂ ನನಗೆ ಇಷ್ಟವಾಗುವುದಿಲ್ಲ.

ನಿಮ್ಮ ಮತ್ತು ಪರಮ ಐಕ್ಯತೆಯೆ ನಡುವೆ ಯಾವುದೋ ಒಂದು ಪರ್ವತ ನಿಂತಿಲ್ಲ. ಅದರ ನಡುವಿರುವುದು ನೀವಲ್ಲದೇ ಬೇರೇನೂ ಅಲ್ಲ – ನಿಮ್ಮದೇ ಮಾನಸಿಕ ರಚನೆಯಷ್ಟೆ. ನೀವು ಅದನ್ನು ಮುರಿಯಬೇಕಾದರೆ, ನಾವು ವ್ಯತಿರಿಕ್ತವಾಗಿ ಏನಾದರೂ ಮಾಡಬೇಕು. ನೀವು ಮಾಡಬಹುದಾದ ಒಂದು ಸರಳ ವಿಷಯವೆಂದರೆ: ನಿಮಗೆ ಇಷ್ಟವಿಲ್ಲದ ಯಾರೊಂದಿಗಾದರೂ ಪ್ರೀತಿಯಿಂದ, ಸಂತೋಷದಿಂದ ಒಂದಷ್ಟು ಸಮಯವನ್ನು ಕಳೆಯಿರಿ. ಬಹಳಷ್ಟು ಮಿತಿಗಳು ಬಿದ್ದು ಹೋಗತ್ತವೆ. ಆದರೆ ನೀವು ಯಾವಾಗಲೂ ನಿಮಗೆ ಇಷ್ಟವಿರುವವರೊಂದಿಗೆ ಕಾಲ ಕಳೆಯುತ್ತಿದ್ದರೆ ಅದು ನಿಮಗೆ ಒಳ್ಳೆಯದಲ್ಲ.

ನೀವು ಇಷ್ಟಪಡುವುದನ್ನು ಆಯ್ಕೆ ಮಾಡಿಕೊಂಡರೆ, ಅದು ನಿಮ್ಮ ವ್ಯಕ್ತಿತ್ವವನ್ನು ಬಲಪಡಿಸುತ್ತದೆ. ನಿಮಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಲು ಕಲಿಯಿರಿ, ನೀವು ಇಷ್ಟಪಡದ ಜನರೊಂದಿಗಿದ್ದೂ ನಿಮ್ಮ ಜೀವನವನ್ನು ವಿವೇಕಯುತವಾಗಿ, ಪ್ರೀತಿಯಿಂದ, ಸಂತೋಷದಿಂದ ಬಾಳಿರಿ. ಆಗ ಎಲ್ಲ ಮಿತಿಗಳು ಮುರಿದು ಹೋಗುತ್ತದೆ.

ಇದನ್ನೂ ಓದಿ : Prerane : ಪ್ರಾಮಾಣಿಕತೆಯೇ ಅಧ್ಯಾತ್ಮದ ಮೂಲ

Exit mobile version