Site icon Vistara News

Prerane : ಆಧ್ಯಾತ್ಮಿಕ ಮಾರ್ಗದಲ್ಲಿ ಪುರಾಣ ಗ್ರಂಥಗಳಿಗೆ ಮಹತ್ವವಿದೆಯೇ?

prerane spiritual column by sadhguru jaggi vasudev

sadhguru

ಸದ್ಗುರು ಜಗ್ಗಿ ವಾಸುದೇವ್‌
ಜ್ಞಾನ ಎನ್ನುವುದು ನೆನಪುಗಳ ಶೇಖರಣೆ. ಹಾಗೇ ತಿಳುವಳಿಕೆ ಎನ್ನುವುದು ನಮ್ಮ ಜೀವನದ ಗ್ರಹಿಕೆಯೇ ಆಗಿದೆ. ಜ್ಞಾನ ಎನ್ನುವುದು ಜೀವನದ ಬಗ್ಗೆ ಇರುವ ನಿಮ್ಮ ತೀರ್ಮಾನ ಅಷ್ಟೇ. ನೆನಪುಗಳ ಶೇಖರಣೆಯಿಂದ ನೀವು ಜೀವನದ ಬಗ್ಗೆ ಒಂದು ತೀರ್ಮಾನಕ್ಕೆ ಬಂದರೆ ಅದು ಪೂರ್ವಾಗ್ರಹವುಳ್ಳ ಜ್ಞಾನವಾಗುತ್ತದೆ. ಅದು ನಿಮಗೆ ಹೊಸದಾಗಿ ಏನನ್ನೂ ಅನುಭವಿಸಲು ಬಿಡುವುದಿಲ್ಲ. ನಿಮಗೆ ಹೊಸ ಅನುಭವವೇನೂ ಆಗುವುದಿಲ್ಲ. ಜ್ಞಾನವು ನಿಮ್ಮ ಬದುಕುಳಿಯುವಿಕೆಗೆ ಖಂಡಿತ ಪ್ರಯೋಜನವಾಗುತ್ತದೆ, ಆದರೆ ಅದು ನಿಮ್ಮನ್ನೆಂದೂ ಮುಕ್ತಿಯತ್ತ ನಡೆಸುವುದಿಲ್ಲ.

ಹಾಗಾದರೆ ನೀವು ನಿಮ್ಮ ಬದುಕಿಗಾಗಿ ಏನನ್ನೂ ಮಾಡಬಾರದೇ? ಖಂಡಿತ ಮಾಡಬೇಕು. ನಿಮ್ಮ ಮೆದುಳಿನ ಒಂದು ಪುಟ್ಟ ಭಾಗದಷ್ಟೇ ಇರುವ ಒಂದು ಸಣ್ಣ ಕ್ರಿಮಿಯೇ ಅಚ್ಚುಕಟ್ಟಾಗಿ ಇಲ್ಲಿ ಬದುಕಬಹುದಾದರೆ, ನಿಮ್ಮ ಈ ದೊಡ್ಡ ಮಿದುಳನ್ನು ಕೇವಲ ನಿಮ್ಮ ಬದುಕುಳಿಯುವಿಕೆಗಷ್ಟೇ ಬಳಸಿಕೊಳ್ಳಬೇಕೆ? ಯೋಗ ಪದ್ಧತಿಯಲ್ಲಿ ನಾವು ಮೆದುಳನ್ನು ಹದಿನಾರು ಭಾಗಗಳನ್ನಾಗಿ ವಿಭಜಿತ್ತೇವೆ. ನಾವು ಈ ಭೌತಿಕ ಪ್ರಪಂಚದಲ್ಲಿ ಬದುಕಲು ಈ ಹದಿನಾರನೇ ಒಂದು ಭಾಗದಷ್ಟು ಬುದ್ಧಿಯ ಉಪಯೋಗ ಸಾಕು ಎನ್ನುತ್ತಾರೆ. ಹಾಗಾಗಿ ಉಳಿದ ಹದಿನೈದು ಭಾಗಗಳನ್ನು ನಾವು ನಮ್ಮ ಅಂತರ್ಯದ ಯೋಗಕ್ಷೇಮಕ್ಕಾಗಿ ಕೇಂದ್ರೀಕರಿಸಬಹುದು.

ಏಕೆಂದರೆ ಅದು ಈ ಭೌತಿಕ ಪ್ರಪಂಚಕ್ಕಿಂತ ಬೃಹತ್ತಾದುದು. ಈ ಬ್ರಹ್ಮಾಂಡದ ನಾಲ್ಕು ಪರ್ಸೆಂಟ್ ಮಾತ್ರವೇ ಸೃಷ್ಟಿ ಮತ್ತು ಉಳಿದದ್ದೆಲ್ಲಾ ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಎನರ್ಜಿ ಎಂದು ವಿಜ್ಞಾನಿಗಳು ಕೂಡ ಸಮರ್ಥಿಸಿದ್ದಾರೆ. ಆದ್ದರಿಂದ ಕೇವಲ ನಿಮ್ಮ ಮನಸ್ಸಿನ ನಾಲ್ಕು ಪರ್ಸೆಂಟ್ ಅಷ್ಟೇ ಸಾಕು ಆದರೆ, ನಮ್ಮ ಯೋಗ ಸಮೂಹವು ಇನ್ನೂ ಸ್ವಲ್ಪ ಧಾರಾಳವಾಗಿದ್ದರು. ಈ ವಸ್ತು ಪ್ರಪಂಚವನ್ನು ಯಶಸ್ವಿಯಾಗಿ ನಿಭಾಯಿಸಲು ಅವರು ಆರು ಪರ್ಸೆಂಟ್‌ಗಿಂತ ಜಾಸ್ತಿಯೇ ನೀಡಿದ್ದಾರೆ!

ಹಾಗಾಗಿ, ನಮ್ಮ ಗ್ರಂಥಗಳು ಜ್ಞಾನದ ಸಂಗ್ರಹ ಎಂದು ನಾನು ಗೌರವ ಪೂರ್ವಕವಾಗಿ ಹೇಳುತ್ತೇನೆ. ಅದೇನಾದರೂ ಎಂಜಿನಿಯರಿಂಗ್, ಸಾಹಿತ್ಯ ಅಥವಾ ಇತಿಹಾಸದ ಪುಸ್ತಕವಾಗಿದ್ದರೆ, ಅದನ್ನು ಓದಿ ಎಂದು ಹೇಳುತ್ತಿದ್ದೆ. ಆದರೆ ನೀವಿಲ್ಲೇ ಇದ್ದು, ಜೀವಿಸುತ್ತಾ ಇರುವಾಗ, ನಿಮ್ಮ ’ಜೀವ’ದ ಕುರಿತಾದ ಬೇರೆ ಯಾವುದೋ ಪುಸ್ತಕವನ್ನು ಓದುವುದಕ್ಕಿಂತ, ‘ನೀವು’ ಎಂಬ ಪುಸ್ತಕವನ್ನು ಓದುವುದು ಉತ್ತಮ.

ಏಕೆಂದರೆ, ‘ನೀವು’ ಆ ಸೃಷ್ಟಿಕರ್ತನೇ ಖುದ್ದಾಗಿ ಬರೆದ ಪುಸ್ತಕ. ಜೀವನದ ಬಗ್ಗೆ ತಿಳಿವು ಬೇಕೆಂದರೆ, ಇದನ್ನು ಓದಿ ತಿಳಿದುಕೊಳ್ಳುವುದು ಉತ್ತಮ. ದೇವರೇ ಬರೆದಿರಬಹುದಾದಂತ ಬೇರೆ ಯಾವ ಪುಸ್ತಕವನ್ನೇ ತೆಗೆದುಕೊಂಡರೂ, ಅದು ಯಾವುದಾದರೂ ಮನುಷ್ಯ ಭಾಷೆಯಲ್ಲಿ ಇದ್ದರೆ ಅದನ್ನು ಖಂಡಿತವಾಗಿಯೂ ಮಾನವರೇ ಬರೆದಿರುತ್ತಾರೆ. ಮತ್ತು ಈ ಮಾನವ ಮನಸ್ಸು ಬಹಳಷ್ಟು ಅಸ್ಪಷ್ಟತೆ-ಗೊಂದಲಗಳಿಂದ ತುಂಬಿರುತ್ತದೆ. ನೀವೇನಾದರೂ ಇವತ್ತು ಏನನ್ನೋ ನೋಡಿ, ಅದನ್ನು ನಿಮ್ಮ ನೆರೆಯವರಿಗೆ ಹೇಳಿದರೆ, ಅವರು ಅದನ್ನು ಮತ್ತೊಬ್ಬರಿಗೆ ಹೋಗಿ ಹೇಳಿರುತ್ತಾರೆ. ಹಾಗೆ ಅದು ಇಪ್ಪತ್ನಾಲ್ಕು ಗಂಟೆಗಳಲ್ಲಿ ಇಪ್ಪತೈದು ಜನರನ್ನು ದಾಟಿ ನಿಮಗೆ ಬರುವಷ್ಟರಲ್ಲಿ, ನೀವು ಆ ಕಥೆಯನ್ನು ಗುರುತಿಸಲು ಸಾಧ್ಯವೇ? ಮಾನವರು ಬಹಳ ಗೊಂದಲ ಜೀವಿಗಳು ಎಂಬುದು ಸ್ಪಷ್ಟ. ಇನ್ನು ಸಾವಿರಾರು ವರ್ಷಗಳಿಂದ ಯಾವುದಾದರೂ ಬಂದಿದೆಯೆಂದರೆ, ಏನೆಲ್ಲಾ ಆಗಿರಬಹುದು ಎಂದು ನೀವೇ ಊಹಿಸಿಕೊಳ್ಳಿ.

ನಿಮ್ಮನ್ನು ನೀವು ಅರಿಯಬೇಕೆಂದರೆ, ಬೇರೆ ಯಾರೋ ಬರೆದಿರುವ ಪುಸ್ತಕವನ್ನು ಓದಬೇಡಿ. ನಿಮ್ಮ ಬಗ್ಗೆ ನೀವೇ ಒಂದು ಪುಸ್ತಕದಲ್ಲಿ ಓದುತ್ತಿದ್ದೀರಿ ಎಂದರೆ, ನೀವು ಕೇವಲ ದಂತ ಕಥೆ ಎಂದು ಅರ್ಥ. ನೀವು ನಿಮ್ಮೊಳಗೆ ಹೊಕ್ಕು ನೋಡಬೇಕು. ಈ ಅಂತರ್ ಅಧ್ಯಯನಕ್ಕೆ ನೀವು ಕೆಲವು ಅವಶ್ಯವಿರುವ ಸಾಧನಗಳನ್ನು ಹೊಂದಿರಬೇಕು. ಹಾಗೆಂದು ನಾನು ಪುಸ್ತಕಗಳಲ್ಲಿ ಬರೆದಿರುವುದೆಲ್ಲಾ ತಪ್ಪು ಎಂದು ಹೇಳುತ್ತಿಲ್ಲ. ನಿಮ್ಮನ್ನು ನೀವು ಅರಿತುಕೊಳ್ಳಲು ನೀವು ಇನ್ನೂ ಆಳವಾದ ಆಯಾಮದತ್ತ ಸಾಗಿದರೆ, ಆಗ ಈ ಗ್ರಂಥಗಳೆಲ್ಲ ಸಹಜವಾಗಿಯೇ ಹಳತಾಗಿಬಿಡುತ್ತವೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಕೃಷ್ಣನು ಅರ್ಜುನನಿಗೆ ಗೀತೋಪದೇಶವನ್ನು ಮಾಡುವಾಗ, ಪ್ರತಿ ಸಾರಿಯೂ ಕೃಷ್ಣನು ಏನನ್ನಾದರೂ ಹೇಳಿದಾಗ, ಅಂದಿನ ದಿನಗಳಲ್ಲಿ ಅತ್ಯುತ್ತಮವಾದ ವಿಧ್ಯಾಭ್ಯಾಸವನ್ನು ಪಡೆದಿದ್ದ ರಾಜಕುಮಾರನಾದ ಅರ್ಜುನನು ಪ್ರತಿಯೊಂದಕ್ಕೂ, “ಇಲ್ಲ ಈ ಗ್ರಂಥದಲ್ಲಿ ಬೇರೆಯೇ ಇದೆ.” ಎಂದು ಹೇಳುತ್ತಿದ್ದ. ಅವನು ತಾನು ಓದಿದ್ದ ಎಲ್ಲಾ ಪುಸ್ತಕಗಳನ್ನೂ ಸೂಚಿಸುತ್ತಿದ್ದ. ಆಗ ಕೃಷ್ಣನು ನಗುತ್ತಾ ಹೇಳುತ್ತಾನೆ, “ಒಬ್ಬ ಮನುಷ್ಯನಲ್ಲಿ ಒಳಗಿನ ಜ್ಯೋತಿಯು ಬೆಳಗಿದರೆ, ನಿನ್ನ ಗ್ರಂಥಗಳೆಲ್ಲವೂ, ಪ್ರವಾಹವು ಬಂದಿರುವಾಗ ನೀರಿನಿಂದ ತುಂಬಿದ ಒಂದು ತೊಟ್ಟಿಯಂತೆ ಆಗುತ್ತದೆ.”

ನೀವು ಮರಳುಗಾಡಿನಲ್ಲಿದ್ದರೆ, ಒಂದು ತೊಟ್ಟಿಯ ನೀರು ನಿಮಗೆ ಸಮುದ್ರದಂತೆ ಭಾಸವಾಗಬಹುದು. ಆದರೆ, ಪ್ರವಾಹದ ಸಮಯದಲ್ಲಿ ಒಂದು ತೊಟ್ಟಿಯ ನೀರಿಗೆ ಅರ್ಥವಾದರೂ ಎಲ್ಲಿರುತ್ತದೆ? ಆ ಸೃಷ್ಟಿಕರ್ತನೇ ಪ್ರತಿ ಕ್ಷಣವೂ ನಿಮ್ಮಲ್ಲಿ ತುಡಿಯುತ್ತಿರುವಾಗ ನೀವು ನಿಮ್ಮೊಳಗೇ ನೋಡಬೇಕು.

ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.

ಇದನ್ನೂ ಓದಿ : Mahavir Jayanti 2023 : ನಯನ ಪಥಗಾಮಿ ಭವತು ಮೇ

Exit mobile version