ಸದ್ಗುರು ಜಗ್ಗಿ ವಾಸುದೇವ್
ಜಡತ್ವ ಒಂದು ಖಾಯಿಲೆ. ಅದು ಜೀವನ ವಿರೋಧಿ. ನಿಶ್ಚಲತೆ, ಪ್ರಕಟವಾಗದ ಅಗಾಧವಾದ ಜೀವನ. ಅದು ಅಲ್ಲಿದೆ ಅಷ್ಟೇ – ಬಹಳ ಪ್ರಾಬಲ್ಯದಿಂದ. ಅದೇ ದೈವ. ದೈವವೆಂದರೆ ನಿಶ್ಚಲತೆ, ಜಡತ್ವವಲ್ಲ. ಮನಸ್ಸು ಎಂದರೆ ಜಡತೆ. ಸಾಧನೆಯು (ಅಧ್ಯಾತ್ಮದ ಅಭ್ಯಾಸ) ನಿಮ್ಮನ್ನು ಜಡತ್ವದಿಂದ ನಿಶ್ಚಲತೆಯೆಡೆಗೆ ಕರೆದೊಯ್ಯುವ ಶಕ್ತಿ. ಆದರೆ, ಜಡತ್ವ ಹಾಗು ನಿಶ್ಚಲತೆಯ ನಡುವೆ, ಅವುಗಳು ಜೊತೆಯಲ್ಲಿದ್ದಾಗ ಅಂತಹ ವ್ಯತ್ಯಾಸವೇನು ಇಲ್ಲ ಎಂದೆನಿಸುತ್ತದೆ, ಏಕೆಂದರೆ ನಿಮ್ಮ ತಾರ್ಕಿಕ ಮನಸ್ಸು ಬರಿ ಚಲನೆ ಇರುವುದು ಮತ್ತು ಇಲ್ಲದಿರುವುದನ್ನಷ್ಟೇ ಅರ್ಥ ಮಾಡಿಕೊಳ್ಳುವುದು.
ಭೌತಿಕವಾಗಿ, ನಾವು ಜಡತೆ ಮತ್ತು ನಿಶ್ಚಲತೆ ಎರಡನ್ನು ಒಂದೇ ರೀತಿ ಕಾಣಬಹುದು, ಆದರೆ ಗುಣಾತ್ಮಕವಾಗಿ ಅವು ಎರಡು ವಿಭಿನ್ನ ಪ್ರಪಂಚಗಳು. ಧ್ಯಾನ ಮಾಡುತ್ತಿರುವವರೂ, ಮಲಗಿ ನಿದ್ರಿಸುತ್ತಿರುವವರೂ ಒಂದೇ ರೀತಿಯಾಗಿ ಕಾಣಬಹುದು. ಒಬ್ಬರು ಕುಳಿತು ನಿದ್ರೆ ಮಾಡುತ್ತಿದ್ದಾರೆ, ಮತ್ತೊಬ್ಬರು ಮಲಗಿ ನಿದ್ರಿಸುತ್ತಿದ್ದಾರೆ ಅಷ್ಟೇ. ಎರಡರ ವ್ಯತ್ಯಾಸ ತಿಳಿಯದವರು, ಇಷ್ಟನ್ನೇ ಕಾಣುವುದು. ಪ್ರಪಂಚದ ಬುದ್ಧಿಜೀವಿಗಳು ಧ್ಯಾನವನ್ನು ಎಷ್ಟು ವ್ಯಂಗ್ಯವಾಗಿ ಕಾಣುತ್ತಾರೆ ಎಂದು ಗಮನಿಸಿದ್ದೀರಾ. ಅವರ ತರ್ಕ “ಇದು ನಿದ್ದೆ ಮಾಡಲೂ ಬಾರದವರಿಗೆ ಮಾತ್ರ” ಎಂದು. ಬಾಹ್ಯದಲ್ಲಿ, ಜಡತ್ವಕ್ಕೂ ನಿಶ್ಚಲತೆಗೂ ಯಾವುದೇ ವ್ಯತ್ಯಾಸ ಕಾಣದೆ ಇರಬಹುದು, ಆದರೆ, ಆಂತರಿಕವಾಗಿ ಬಹಳಷ್ಟು ವ್ಯತ್ಯಾಸವಿದೆ. ಜಡತ್ವದಿಂದ ನಿಶ್ಚಲತೆಯೆಡೆಗೆ, ಅಜ್ಞಾನದಿಂದ ಜ್ಞಾನದೆಡೆಗೆ, ಇಷ್ಟೇ ವ್ಯತ್ಯಾಸ. ಒಂದು ರೀತಿಯಲ್ಲಿ, ಎಲ್ಲವೂ ಒಂದೇ ಆದರೆ, ಅದರ ಗುಣಾತ್ಮಕತೆ ಬದಲಾಗಬೇಕು.
ಆದರೆ, ನೀವು ಆಜ್ಞಾದಲ್ಲಿ ಮುಳುಗಿ ಹೋಗಿದ್ದಾಗ, ನಿಮಗೆ ಅವುಗಳ ಗುಣಾತ್ಮಕ ವ್ಯತ್ಯಾಸ ತಿಳಿಯುವುದಾದರೂ ಹೇಗೆ? ಆದ್ದರಿಂದಲೇ ಸಾಧನೆಯ ಪೂರ್ಣ ಚಕ್ರ ಕ್ರಮಿಸಬೇಕು. ಒಬ್ಬ ವ್ಯಕ್ತಿಯ ಮೂರ್ಖತೆಯ ಮೇಲೆ ಸಾಧನೆಯ ಕಾಲಾವಧಿ ನಿರ್ಣಯಿಸಲ್ಪಡುತ್ತದೆ. ಭೌತಿಕವಾಗಿ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನೀವೇ ಆ ಪರಿಧಿಯತ್ತ ಸರಿಯಿರಿ ಮತ್ತು ಏನಿದೆಯೆಂದು ಮನಗಾಣಿರಿ. ಸ್ವಲ್ಪ ಅನಾನುಕೂಲವೆಂದು ನಿಲ್ಲಿಸಿದರೆ, ನಿಮಗೆ ಅದು ಏನೆಂದು ಎಂದಿಗೂ ತಿಳಿಯಲು ಸಾಧ್ಯವಿಲ್ಲ. ನಿಲ್ಲದೆ ಆ ಪರಿಧಿಯತ್ತ ನಡೆಯಿರಿ. ನೀವು ಅನಾನುಕೂಲತೆಯತ್ತ ವಾಲುತ್ತಿದ್ದರೂ ಬಿಡಬೇಡಿ; ಇನ್ನೂ ಮುಂದುವರೆಯಿರಿ ಮತ್ತು ಮತ್ತಷ್ಟು ಮುಂದುವರೆಯಿರಿ. ಎಲ್ಲಿಯವರೆಗೆಂದರೆ ಪರಮಾರ್ಥ ತಲುಪಬೇಕು, ಗರಿಷ್ಟವಾಗಬೇಕು. ಆಗಷ್ಟೇ ನಿಮ್ಮ ಮನಸ್ಸು ತನ್ನಷ್ಟಕ್ಕೇ ತಲ್ಲೀನವಾಗುತ್ತದೆ. ನೀವು ಬೇರೆ ಏನೂ ಸಾಧನೆ ಮಾಡಬೇಕಾಗಿಲ್ಲ.
ಈ ಒಂದು ಸಾಧನೆಯಷ್ಟೇ ಬೇಕಾಗಿರುವುದು. ಬೇರೆ ಎಲ್ಲಾ ಸಾಧನೆಳು ಈ ಪರಮಾರ್ಥವನ್ನು ತಲುಪುವುದಕ್ಕೆ ಅಷ್ಟೇ. ನೀವು ಹೇಗಿರಬೇಕೆಂದರೆ, ನಿಮ್ಮ ಸಂಕಲ್ಪವು ಧೃಡವಾಗಿರಬೇಕು. 12 ವರ್ಷಗಳ ಕಾಲ ಯಾರನ್ನಾದರೂ ಹಿಮಾಲಯಕ್ಕೆ ಹೋಗಿ ಇರಬೇಕೆನ್ನುವುದು, ಅಲ್ಲಿನ ಹಿಮಗಲ್ಲುಗಳು ಜ್ಞಾನೋದಯ ನೀಡುತ್ತದೆ ಎಂದು ಅಲ್ಲ. ‘ಅವರು’ ಈ ಪರಮಾರ್ಥವನ್ನು ಕಂಡುಕೊಳ್ಳಲು ತಮ್ಮ ಬದುಕಿನ 12 ವರ್ಷಗಳನ್ನು ಎಲ್ಲ ಕಾಠಿಣ್ಯಗಳೊಂದಿಗೆ ವ್ಯರ್ಥಮಾಡಲು ತಯಾರಾಗಿದ್ದಾರೆ ಎಂದು. ಈ ರೀತಿಯ ಸಂಕಲ್ಪ ಮೂಡಿದರೆ ಆ ವ್ಯಕ್ತಿಯು ಅದಕ್ಕೆ ಬಹಳ ಹತ್ತಿರವಾಗಿದ್ದಾರೆ ಎಂದರ್ಥ. ಅಕ್ಷರಶಃ ಇದು ನಿಮ್ಮ ಜೀವನವನ್ನು ವ್ಯರ್ಥ ಮಾಡಿದಿರಿ ಎಂದಾಗುತ್ತದೆ.
ಇಡೀ ಪ್ರಪಂಚವೇ ತಿಂದುಂಡು, ಕುಡಿಯುತ್ತಾ, ಕುಣಿಯುತ್ತಾ ಹಾಯಾಗಿ ಜೀವನವನ್ನು ಅನುಭವಿಸುತ್ತಿರುವಾಗ, ಏನೂ ಆಗುವುದಿಲ್ಲ ಎಂಬ ಅರಿವಿದ್ದರೂ, ನೀವು ಮಾತ್ರ ಕೊರೆಯುವ ಚಳಿಯಲ್ಲಿ “ಶಿವ ಶಿವ ಶಿವ” ಎಂದು ಜಪಿಸುತ್ತಾ ಕುಳಿತಿರುತ್ತೀರಿ. ಶಿವನು ಪ್ರತ್ಯಕ್ಷನಾಗಿ ನಿಮ್ಮನ್ನೇನು ಅನುಗ್ರಹಿಸುವುದಿಲ್ಲ. ನೀವು ಹಸಿದರೆ ಹಸಿದಿರುತ್ತೀರಿ, ಚಳಿಯಾದರೆ ನಡುಗುತ್ತಾ ಇರುತ್ತೀರಿ ಅಷ್ಟೇ. ಅಲ್ಲಿರುವುದು ವ್ಯರ್ಥ ಪ್ರಯತ್ನವೆಂಬ ಅರಿವೂ ನಿಮಗೆ ಇರುತ್ತದೆ. ಆದರೂ ನೀವು ಅಲ್ಲಿರುತ್ತೀರಿ, ಏಕೆಂದರೆ ನಿಮ್ಮ ಜೀವನೋದ್ದೇಶವೇ ಬೇರೆಯಾಗಿರುತ್ತದೆ. ಒಮ್ಮೆ ಸಂಕಲ್ಪವಾದರೆ, 12 ವರ್ಷಗಳೂ ಕಾಯಬೇಕಾಗಿಲ್ಲ. ಒಂದೇ ಒಂದು ಕ್ಷಣದಲ್ಲಿಯೇ ಕಾರ್ಯವು ಕೈಗೂಡಬಹುದು. ಯಾರೂ 12 ವರ್ಷಗಳೂ ಕಾಯಬೇಕಾಗಿಲ್ಲ. ಇದು ಒಂದೇ ಘಳಿಗೆಯಲ್ಲಿ ಕೂಡ ಆಗಬಹುದು.
ಏಕೆ ಹೀಗಾಗುತ್ತದೆಯೆಂದರೆ, ನೀವು ಈ ಕ್ಷಣವನ್ನು ಸರಿಯಾಗಿ ಬಳಸುವುದಿಲ್ಲ, ಅದಕ್ಕಾಗಿ ಮುಂದಿನ ಆ ಕ್ಷಣಕ್ಕಾಗಿ ಕಾಯಬೇಕಾಗುತ್ತದೆ. ನೀವು ಧೃಡಚಿತ್ತರಾಗಿರುತ್ತಿರೋ ಅಥವಾ ಪ್ರತಿ ಬಾರಿ ಕಾಠಿಣ್ಯಗಳು ಎದುರಾದಾಗ, ‘ಇದು ನನ್ನಿಂದಾಗದು’ ಎಂದು ಬಿಟ್ಟು ಬಿಡುತ್ತೀರೋ. ಹೀಗೆ ಯೋಚಿಸಿದರೆ, ಇದು ಖಂಡಿತವಾಗಿ ನಿಮ್ಮದಾಗಲೂ ಸಾಧ್ಯವಿಲ್ಲ. ದಾರಿಯು ಕಠಿಣವಲ್ಲ, ನೀವು ಅದನ್ನು ಕಠಿಣವಾಗಿಸುತ್ತೀರಿ ಇದು ಸರಳ ಮಾರ್ಗ. ನೀವು ಸರಳವಾಗಿದ್ದರೆ, ಅದೂ ಸರಳವೇ. ನೀವು ಗೊಂದಲದಿಂದಿದ್ದರೆ, ದಾರಿಯೂ ಅಂಕುಡೊಂಕಾಗಿರುತ್ತದೆ.
ನೀವು ಎಷ್ಟು ಸರಳ ಹಾಗೂ ಸರಾಗವಾಗಿ ಇರುತ್ತೀರೋ, ಬದುಕು ಅಷ್ಟು ಸರಳವಾಗುತ್ತದೆ. ನೀವು ಗೋಜಲಾದಾಗಲೇ, ನೋಡಿ, ಬದುಕೂ ದುಸ್ತರವಾಗುತ್ತದೆ. ಆದ್ದರಿಂದ ನಾವು ಗೊಂದಲದಲ್ಲಿರಬಾರದು. ಈಗಾಗಲೇ ನಿಮ್ಮಲ್ಲಿ ಗೋಜಲಾಗಿ, ಕಗ್ಗಂಟಾಗಿರುವ ಭೂತಕಾಲವಿದೆ. ಈ ಗಂಟುಗಳು ಈಗಾಗಲೇ ನಿಮಗೆ ಸಾಕಷ್ಟು ನೋವುಂಟು ಮಾಡಿ, ನಿಮ್ಮನ್ನು ಆಳಕ್ಕೆ ತಳ್ಳಿ, ಸಾಕಷ್ಟು ರೀತಿಯಲ್ಲಿ ಕಾಡುತ್ತಿರುತ್ತದೆ. ಕೆಲವರು ಇದನ್ನು ಅರ್ಥಮಾಡಿಕೊಂಡಿರುತ್ತಾರೆ, ಕೆಲವರು ಇದನ್ನು ಇನ್ನೂ ಅರ್ಥ ಮಾಡಿಕೊಳ್ಳಬೇಕಿದೆ, ಆದರೆ ಇದು ಎಲ್ಲರಲ್ಲೂ ಇದ್ದೇ ಇದೆ. ನಿಮ್ಮಲ್ಲಿ ಒಂದಾದರೂ ಖಾಲಿ ಕುಳಿ ಇದ್ದೇ ಇರುತ್ತದೆ ಮತ್ತು ಅದು ನಿಮ್ಮನ್ನು ತಿಂದು ಹಾಕತ್ತಿರುತ್ತದೆ. ನೀವು ಹಿಂದೆ ಸೃಷ್ಟಿ ಮಾಡಿರುವುದು ಸಾಕು. ಜೀವನದಲ್ಲಿ ಬಂದ ಅನೇಕ ಸದವಕಾಶಗಳನ್ನು ಕಳೆದು ಕೊಂಡಾಗಿದೆ, ಇದೂ ಕೂಡ ವ್ಯರ್ಥವಾಗಬಾರದು.
ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.
ಇದನ್ನೂ ಓದಿ | Prerane | ಯೋಗ ಹಾಗೂ ಭಾವನಾತ್ಮಕ ಪ್ರಜ್ಞೆ