Site icon Vistara News

ರಾಜ ಮಾರ್ಗ ಅಂಕಣ | ದುಡ್ಡನ್ನು ನಾವು ರೂಲ್‌ ಮಾಡಬೇಕು, ದುಡ್ಡು ನಮ್ಮನ್ನು ರೂಲ್‌ ಮಾಡುವಂತೆ ಆಗಬಾರದು

money

ಹಿಂದೆ ಸಾಕಷ್ಟು ತರಬೇತಿಯಲ್ಲಿ ನಾನು ದುಡ್ಡಿನಿಂದ ಹಾಸಿಗೆ ಖರೀದಿ ಮಾಡಬಹುದು. ಆದರೆ ನಿದ್ದೆ ಖರೀದಿ ಮಾಡಲು ಸಾಧ್ಯವಿಲ್ಲ ಎಂದೆಲ್ಲ ಹತ್ತಾರು ಉದಾಹರಣೆ ಕೊಡುತ್ತಿದ್ದೆ! ಚಂದವಾದ ಚಪ್ಪಾಳೆಗಳು ದೊರೆಯುತ್ತ ಇದ್ದವು. ಆದರೆ ಕ್ರಮೇಣ ನನಗೆ ದುಡ್ಡಿನ ಪ್ರಾಮುಖ್ಯತೆ ಗೊತ್ತಾಯ್ತು. ಯಾರು ದುಡ್ಡನ್ನು ಪ್ರೀತಿ ಮಾಡ್ತಾರೋ ಅವರು ಮಾತ್ರ ದುಡ್ಡು ಮಾಡ್ತಾರೆ ಎಂದು ಗೊತ್ತಾಯ್ತು.

ಜಗತ್ತಿನ ಎರಡನೇ ಅತೀ ದೊಡ್ಡ ಶ್ರೀಮಂತ ವಾರನ್ ಬಫೆಟ್ ಅಮೆರಿಕದಲ್ಲಿ ಇದ್ದಾನೆ. ಅವನದ್ದೇ ಹತ್ತಾರು ಇನ್ಶೂರೆನ್ಸ್ ಕಂಪನಿಗಳು ಇವೆ. ಇಂದಿಗೂ ಆತ ಕೋಟಿ ಕೋಟಿ ಡಾಲರ್ ಸಂಪಾದನೆ ಮಾಡ್ತಾ ಇದ್ದಾನೆ.

ಒಮ್ಮೆ ಆತನ ಒಬ್ಬಳೇ ಮಗಳು ಬಂದು “ಅಪ್ಪ, ನನಗೆ ಫ್ರೆಂಡ್ಸ್ ಜೊತೆ ಯುರೋಪ್ ಪ್ರವಾಸ ಹೋಗಲು ಇದೆ. 2000 ಡಾಲರ್ ಹಣ ಬೇಕು” ಎಂದಳು. ಅಪ್ಪನ ಅತೀ ಮುದ್ದಿನ ಮಗಳು ಅವಳು. ಅಪ್ಪ ಸರಿ ಎಂದು ಹೇಳಿ ತನ್ನ ಚೆಕ್ ಪುಸ್ತಕ ತೆಗೆದು 2000 ಡಾಲರ್ ಚೆಕ್ ಅವಳ ಹೆಸರಿಗೆ ಬರೆದು ಹಾಳೆ ಹರಿದು ಕೊಟ್ಟರು.

ಮಗಳು ಹೋದ ನಂತರ ಅವರ ಆಪ್ತ ಕಾರ್ಯದರ್ಶಿ ತನ್ನ ಬಾಸನ್ನು ಕೇಳಿದರು – ಸರ್, ನಿಮ್ಮ ಡ್ರಾಯರ್ ಒಳಗೆ ಬೇಕಾದಷ್ಟು ನಗದು ಹಣ ಇತ್ತು. ಅದನ್ನೇ ಕೊಡಬಹುದಿತ್ತು ಅಲ್ವಾ ಮಗಳಿಗೆ!

ಆಗ ಬಫೆಟ್ ನಗುತ್ತಾ ಹೇಳಿದರು. ನಾನು ಚೆಕ್ ಕೊಟ್ಟ ಕಾರಣ ಅವಳು ಬ್ಯಾಂಕಿಗೆ ಹೋಗಿ ಎಲ್ಲರ ಜೊತೆ ಕ್ಯೂ ನಿಲ್ಲುತ್ತಾಳೆ. ಹಣಕ್ಕಾಗಿ ಸ್ವಲ್ಪ ಹೊತ್ತು ಕಾಯುತ್ತಾಳೆ. ಅದರಿಂದ ಅವಳಿಗೆ ದುಡ್ಡಿನ ಮಹತ್ವ ಗೊತ್ತಾಗುತ್ತದೆ. ಆಗ ಅವಳು ದುಂದುವೆಚ್ಚ ಮಾಡುವುದಿಲ್ಲ ಎಂದರು!

ಯೋಚನೆ ಮಾಡಿ. ಹೌದಲ್ಲ. ಎಲ್ಲಾ ಪೋಷಕರು ಕೂಡ ಹೀಗೆ ಯೋಚನೆ ಮಾಡಬೇಕು ಅಲ್ವಾ? ಹಣಕಾಸು ನಿರ್ವಹಣೆಯನ್ನು ಇಂದು ಪ್ರತೀ ಒಬ್ಬರೂ ಕಲಿಯಲೇ ಬೇಕಾದ ಅಗತ್ಯ ಇದೆ.

ಎಷ್ಟೋ ಜನ ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚಿ ಎನ್ನುತ್ತಾರೆ. ಅದನ್ನು ನಾನಂತೂ ಒಪ್ಪುವುದಿಲ್ಲ. ನಮ್ಮ ಕೌಶಲ, ಸಾಮರ್ಥ್ಯ ಹಾಗೂ ಬುದ್ಧಿವಂತಿಕೆ ಇವುಗಳನ್ನು ನಮ್ಮ ಬಂಡವಾಳವಾಗಿ ಮಾಡಿ ನಮ್ಮ ಮಿತಿಯಲ್ಲಿ ಬೇಕಾದಷ್ಟು ದುಡ್ಡನ್ನು ಸಂಪಾದನೆ ಮಾಡಬಹುದು. ಅದು ಕೂಡ ಅತ್ಯಂತ ನ್ಯಾಯವಾದ ದಾರಿಯಲ್ಲಿ!

ನಂತರ ಸಂಪಾದನೆ ಮಾಡಿದ ದುಡ್ಡನ್ನು ಸರಿಯಾದ ಯೋಜನೆ ಹಾಕಿಕೊಂಡು ಖರ್ಚು ಮಾಡುವುದು ಅಷ್ಟೇ ಮುಖ್ಯ. ಸಂಪಾದನೆಯ 15% ಭಾಗ ಆರಂಭದಿಂದಲೇ ಉಳಿತಾಯ ಮಾಡುತ್ತ ಹೋದರೆ ಬಿಕ್ಕಟ್ಟು ಕಾಲದಲ್ಲಿ ಯಾರ ಮುಂದೆಯೂ ಕೈ ಚಾಚುವ ಅಥವ ಸಾಲ ಮಾಡುವ ಸಾಧ್ಯತೆಯನ್ನು ತಪ್ಪಿಸಬಹುದು.

ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಲವನ್ನು ಮಾಡದೆ ಬದುಕುವುದೇ ಕಷ್ಟ ಎಂದು ಹಲವರು ಸ್ಟ್ರಾಂಗ್ ಆಗಿ ವಾದವನ್ನು ಮಾಡುತ್ತಾರೆ. ಅದು ಒಪ್ಪತಕ್ಕ ಮಾತೇ. ಆದರೆ ಅಲ್ಲಿ ಕೂಡ ನಿಮ್ಮ ಸಾಲದ EMI ನಿಮ್ಮ ಒಟ್ಟು ಆದಾಯದ 30% ಮೀರದ ಹಾಗೆ ಜಾಣ್ಮೆ ಮತ್ತು ಸ್ವಲ್ಪ ಎಚ್ಚರಿಕೆಯಿಂದ ಪ್ಲಾನ್ ಮಾಡಿದರೆ ತುಂಬಾ ಸಾಲವನ್ನು ಕೂಡ ಚೆನ್ನಾಗಿ ಮ್ಯಾನೇಜ್ ಮಾಡಬಹುದು. ಹಲವಾರು ಕಡೆ ಒಂದಿಷ್ಟು ಸಣ್ಣ ಸಣ್ಣ ಸಾಲಗಳನ್ನು ಮಾಡುವುದಕ್ಕಿಂತ ಒಂದೇ ಕಡೆಯಲ್ಲಿ ಸ್ವಲ್ಪ ದೊಡ್ಡ ಸಾಲವನ್ನು ಮಾಡುವುದು ಹೆಚ್ಚು ಲಾಭದಾಯಕ!

ಆದರೂ ನನ್ನ ಒಂದು ಸಲಹೆ. ಒಮ್ಮೆ ಸಾಲವಿಲ್ಲದೆ ಬದುಕಲು ಆರಂಭ ಮಾಡಿ. ಆಗ ಮಾತ್ರ ನೀವು ಚಂದವಾಗಿ ಉಳಿತಾಯ ಮಾಡುತ್ತೀರಿ. ಒಮ್ಮೆ ಸಾಲ ಇಲ್ಲದ ಬದುಕಿನ ರುಚಿ ನಿಮಗೆ ದೊರೆತರೆ ನೀವು ಸಾಲ ಮಾಡಲು ನೂರು ಬಾರಿ ಯೋಚನೆ ಮಾಡುತ್ತೀರಿ!

ಸಾಲಕ್ಕೆ ಹೊರಡುವಾಗ ಕೆಲವು ಪಾಲಿಸಿ ಇಟ್ಟುಕೊಳ್ಳಿ. ಒಂದು ಸಾಲ ಪೂರ್ತಿ ಆಗದೇ ಇನ್ನೊಂದು ಸಾಲವನ್ನು ಮಾಡುವುದಿಲ್ಲ ಎನ್ನುವುದು ನಿಮ್ಮ ಸಿಂಪಲ್ ಪಾಲಿಸಿ ಆಗಲಿ. ಅನಿವಾರ್ಯ ಸಂದರ್ಭವನ್ನು ಹೊರತುಪಡಿಸಿ ಯಾರ ಹತ್ತಿರವೂ ಕೈ ಸಾಲ ಮಾಡುವುದು ಬೇಡ. ಹಾಗೆಯೇ ಯಾರಿಗಾದ್ರೂ ಕೈ ಸಾಲ ಕೊಡುವುದಕ್ಕೆ ಮೊದಲು ಎರಡೆರಡು ಬಾರಿ ಯೋಚಿಸಿ.

ಕೈ ಸಾಲವನ್ನು ಕೊಡುವುದಕ್ಕಿಂತ ನಿಮ್ಮ ಆತ್ಮೀಯರಾದ ಗೆಳೆಯರಿಗೆ ಅಥವಾ ಬಂಧುಗಳಿಗೆ ಒಂದಿಷ್ಟು (ನಿಮ್ಮ ಹತ್ತಿರ ಇದ್ದರೆ ಮಾತ್ರ) ಹೀಗೇ ಧನ ಸಹಾಯವನ್ನು ಮಾಡುವುದು ಒಳ್ಳೆಯದು. ಕೈ ಸಾಲ ಕೊಟ್ಟರೆ ದುಡ್ಡು ಮತ್ತು ಗೆಳೆತನ ಎರಡೂ ನೀವು ಕಳೆದುಕೊಳ್ಳುತ್ತೀರಿ!

ಅನಿವಾರ್ಯತೆ ಇದ್ದರೆ ಮಾತ್ರ ಸಾಲ ಮಾಡಿ. ಸಾಲದ ಅರ್ಜಿಗೆ ಸಹಿ ಮಾಡುವ ಮೊದಲು ಬ್ಯಾಂಕಿನ ಸಾಲ ಮರುಪಾವತಿಯ ನಿಯಮಗಳನ್ನು ಬ್ಯಾಂಕಲ್ಲಿ ಚೆನ್ನಾಗಿ ಕೇಳಿ ತಿಳಿದುಕೊಳ್ಳಿ. ಪ್ರತಿಷ್ಠೆಗಾಗಿ ಅಥವಾ ಯಾರನ್ನೋ ಖುಷಿಪಡಿಸಲು ಬೇಕಾಗಿ ಸಾಲ ಮಾಡುವುದು ಬೇಡ. ಅತೀ ಕೊಳ್ಳುಬಾಕತನಕ್ಕೆ ಬಲಿ ಆಗಬೇಡಿ. ಆಮಿಷ ಒಡ್ಡುವ ಜಾಹೀರಾತುಗಳು ನಿಮ್ಮನ್ನು ಖಂಡಿತವಾಗಿ ಖಾಲಿ ಮಾಡುತ್ತವೆ.

ಅಗತ್ಯ ಇಲ್ಲದಿದ್ದರೂ ವರ್ಷಕ್ಕೊಂದು ಟಿವಿ, ಪ್ರತೀ ವರ್ಷಕ್ಕೊಂದು ಮೊಬೈಲ್, ವರ್ಷಕ್ಕೊಂದು ಕಾರ್, ವರ್ಷಕ್ಕೊಂದು ಫ್ರಿಜ್, ವರ್ಷಕ್ಕೆ ಒಂದು ಡಜನ್ ಸೀರೆ, ಒಂದು ಡಜನ್ ಶರ್ಟ್ ಖರೀದಿ ಮಾಡುವವರು ಬಹಳ ಮಂದಿ ಇದ್ದಾರೆ. ಇದನ್ನು ತಕ್ಷಣ ನಿಲ್ಲಿಸಿ.

ಇನ್ನೂ ಒಂದು ಮಾತು ನಾನು ನನ್ನ ಯುವ ಗೆಳೆಯರಿಗೆ ಹೇಳಬೇಕು. ರಕ್ತ ಬಿಸಿ ಇದ್ದಾಗ ಸಿಕ್ಕಾಪಟ್ಟೆ ದುಡ್ಡನ್ನು
ಮಾಡುವ ದಂಧೆಗೆ ಬಲಿ ಬೀಳಬೇಡಿ. ಹಾಗೆಯೇ ಖರ್ಚು ಮಾಡುವಾಗಲೂ ತುಂಬಾ ಉದಾರತೆ ಬೇಡ. ಆರೋಗ್ಯ ನಿರ್ಲಕ್ಷ್ಯ ಮಾಡಿ ದುಡ್ಡಿನ ಹಿಂದೆ ಓಡುವುದು ಬೇಡ. ಕಿಸೆಯಲ್ಲಿ ಕ್ಯಾಲ್ಕುಲೇಟರನ್ನು ಇಟ್ಟುಕೊಂಡು ಸಂಪಾದನೆಗೆ ಹೊರಡುವ ಅಥವ ಖರ್ಚಿಗೆ ಹೊರಡುವ ಹಲವರನ್ನು ನೋಡುವಾಗ ನನಗೆ ತುಂಬಾ ದುಃಖ ಆಗುತ್ತದೆ!

ಇನ್ನೊಂದು ಅಂಶವನ್ನು ನಾವು ಗಮನಿಸಲೆ ಬೇಕು.
ಬ್ಯಾಂಕಿಗೆ ಹೋಗಿ ಉದ್ದದ ಕ್ಯೂ ನಿಂತು ನಾವು ಕಷ್ಟ ಪಟ್ಟು ದುಡಿದ ದುಡ್ಡನ್ನು ಡ್ರಾ ಮಾಡುವಾಗ ನಮ್ಮ ಹಣವು ನಿಧಾನಕ್ಕೆ ಖರ್ಚು ಆಗುತ್ತಿತ್ತು. ಅದೇ ಎಟಿಎಂ ಕಾರ್ಡ್, ವೀಸಾ ಕಾರ್ಡ್, ಕ್ರೆಡಿಟ್ ಕಾರ್ಡ್ ಬಂದಾಗ ನಮ್ಮ ದುಡ್ಡು ಸ್ವಲ್ಪ ಹೆಚ್ಚು ವೇಗವಾಗಿ ಖರ್ಚು ಆಗಲು ಆರಂಭ ಆಯಿತು. ಈಗ ಗೂಗಲ್ ಪೇ, ಫೋನ್ ಪೇ ಯುಗದಲ್ಲಿ (ನಾನು ಅವುಗಳ ವಿರೋಧಿ ಅಲ್ಲ) ದುಡ್ಡು ಇನ್ನೂ ಹೆಚ್ಚು ವೇಗವಾಗಿ ಖರ್ಚು ಆಗ್ತಾ ಇದೆ. ಈ ಬಗ್ಗೆ ಕೂಡ ಸ್ವಲ್ಪ ಯೋಚಿಸಿ.

ಏನಿದ್ದರೂ ನೀವು ದುಡ್ಡನ್ನು ರೂಲ್ ಮಾಡಿ. ದುಡ್ಡು ನಿಮ್ಮನ್ನು ರೂಲ್ ಮಾಡಲು ಬಿಡಬೇಡಿ ಎನ್ನುವುದು ಮಾತ್ರ ನನ್ನ ಕಾಳಜಿ.

ಇದನ್ನೂ ಓದಿ | ರಾಜ ಮಾರ್ಗ | ಬಲಗಾಲು ಕತ್ತರಿಸುವಾಗ ಆಕೆ ಚೀರಿ ಚೀರಿ ಕೇಳಿದ್ದು ಒಂದೇ ಪ್ರಶ್ನೆ: ಡಾಕ್ಟರ್‌ ನಾನು ಮತ್ತೆ ಡ್ಯಾನ್ಸ್‌ ಮಾಡಬಹುದಾ?

Exit mobile version