Site icon Vistara News

ರಾಜ ಮಾರ್ಗ ಅಂಕಣ : ಇಡೀ ಭಾರತಕ್ಕೆ ರಾಮ ಮಂದಿರದ ಕನಸು ಹಂಚಿದ ಅಶೋಕ್‌ ಸಿಂಘಾಲ್

Ashok singhal

2020 ಆಗಸ್ಟ್ ಐದರಂದು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ (Shri Rama Janmabhoomi) ಶ್ರೀರಾಮ ಮಂದಿರದ (Shri Rama Mandir) ಭೂಮಿಪೂಜನ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು. 2024ರ ಜನವರಿ ತಿಂಗಳ ಒಂದು ಅದ್ಭುತವಾದ ಮುಹೂರ್ತದಲ್ಲಿ ರಾಮ ಮಂದಿರದ ಉದ್ಘಾಟನೆ (Inauguration of Shri Rama Mandir) ನಡೆಯುವ ಐತಿಹಾಸಿಕ ಕ್ಷಣದಲ್ಲಿ ನಮ್ಮ ರಾಷ್ಟ್ರವು ಓರ್ವ ಮೇರು ವ್ಯಕ್ತಿಯನ್ನು ನೆನಪು (ರಾಜ ಮಾರ್ಗ ಅಂಕಣ) ಮಾಡದಿರಲು ಸಾಧ್ಯವೇ ಇಲ್ಲ! ಇಡೀ ಭಾರತಕ್ಕೆ ಭವ್ಯ ರಾಮ ಮಂದಿರದ ಕನಸು ಹಂಚಿದವರು ಅವರು! ಅವರೇ ವಿಶ್ವ ಹಿಂದೂ ಪರಿಷತ್ತಿನ (Vishwa hindu Parishat) ಮಹಾ ನಾಯಕ ಅಶೋಕ್ ಸಿಂಘಾಲ್! (Ashok Singhal)

ಸರಕಾರಿ ಹುದ್ದೆ ತೊರೆದು ಆರೆಸೆಸ್ ಪ್ರಚಾರಕ ಆದರು

ಅಶೋಕ್‌ ಸಿಂಘಾಲ್‌ (Ashok Singhal) ಅವರು ಹುಟ್ಟಿದ್ದು ಆಗ್ರಾದಲ್ಲಿ (27 ಸೆಪ್ಟೆಂಬರ್, 1926). ಅವರ ತಂದೆ ಓರ್ವ ಸರಕಾರಿ ಅಧಿಕಾರಿ ಆಗಿದ್ದರು. ಅವರ ಅಣ್ಣ ಉತ್ತರಪ್ರದೇಶ ಪೊಲೀಸ್ ಇಲಾಖೆಯ ಡಿಜಿಪಿ ಆಗಿದ್ದರು. ಅಶೋಕ್ ಸಿಂಘಾಲ್ ಓದಿದ್ದು ಲೋಹಶಾಸ್ತ್ರದಲ್ಲಿ BE ಪದವಿ. ಬನಾರಸ್ ವಿವಿಯಿಂದ ಅವರು ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿ ಪದವಿ ಪಡೆದು ಹೊರಬಂದವರು.

ಅವರ ತಂದೆಗೆ ಮಗನು ಸರಕಾರಿ ಹುದ್ದೆಗೆ ಸೇರಲಿ ಎಂದು ಆಸೆ ಇತ್ತು. ಆದರೆ ತನ್ನ 16ನೆಯ ವಯಸ್ಸಿನಿಂದ ಆರೆಸ್ಸೆಸ್‌ ಶಾಖೆಗೆ ಹೋಗಲು ಆರಂಭಿಸಿದ್ದ ಹುಡುಗನಿಗೆ ರಾಷ್ಟ್ರದ ಚಿಂತನೆ! ರಾಷ್ಟ್ರದ ಸೇವೆಗೆ ಹವಿಸ್ಸು ಆಗುವ ಸಂಕಲ್ಪ. ಅದಕ್ಕಾಗಿ ಅವರು ಸರಕಾರಿ ಕೆಲಸವನ್ನು ಧಿಕ್ಕರಿಸಿ ಆರೆಸ್ಸೆಸ್ಸಿನ ಪೂರ್ಣಕಾಲಿಕ ಪ್ರಚಾರಕ ಆದರು.

ಪರಿವ್ರಾಜಕ ಸಂತನ ಬದುಕು

ಪ್ರಚಾರಕರ ಬದುಕು ಅಂದರೆ ಒಂದು ರೀತಿ ಜಂಗಮ ಸಂತನಂತೆ ಬದುಕುವುದು. ಅವರಿಗೆ ಇಡೀ ಭಾರತವೇ ಮನೆ. ಊಟ, ತಿಂಡಿಗಳ ಪರಿವೆಯೇ ಇರುವುದಿಲ್ಲ. ಹಾಗೆ ದೆಹಲಿ, ಉತ್ತರಪ್ರದೇಶ, ಹರಿಯಾಣ ರಾಜ್ಯಗಳ ಉಸ್ತುವಾರಿಯನ್ನು ತೆಗೆದುಕೊಂಡು ಅವರು ನಿತ್ಯವೂ ಭಾರತ ಸಂಚಾರ ಮಾಡಿದರು. ರಾಷ್ಟ್ರಧರ್ಮದ ಬೋಧನೆ ಮಾಡಿದರು.

ವಿಶ್ವ ಹಿಂದೂ ಪರಿಷತ್ ವಿಶ್ವ ಮಟ್ಟದ ಕಾರ್ಯಾಧ್ಯಕ್ಷ

1980ರಲ್ಲಿ ಅವರು ವಿಶ್ವ ಹಿಂದೂ ಪರಿಷತ್ ಸೇವೆಗೆ ಸೇರಿದರು. ಆರಂಭದಲ್ಲಿ ಜೊತೆ ಕಾರ್ಯದರ್ಶಿ, ನಂತರ ಪ್ರಧಾನ ಕಾರ್ಯದರ್ಶಿ, 1991ರಿಂದ ವಿಶ್ವಮಟ್ಟದ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡರು. ಮುಂದಿನ 20 ವರ್ಷಗಳ ಕಾಲ ಅವರು ವಿಶ್ವ ಮಟ್ಟದ ಹಿಂದೂ ನಾಯಕರಾಗಿ ಸಂಸ್ಥೆಗೆ ಮಾರ್ಗದರ್ಶನವನ್ನು ಮಾಡಿದರು. ಸಂಸ್ಥೆಯನ್ನು ಆಲದ ಮರವಾಗಿ ಬೆಳೆಸಿದರು.

ಪಾದರಸದ ವೇಗ, ಖಡಕ್ ಆದ ನಿಲುವು, ಪ್ರಬುದ್ಧ ಭಾಷಣ

ಅವರ ಅವಧಿಯಲ್ಲಿ ನಡೆದ ಕೆಲವು ಮಹತ್ವದ ಘಟನೆಯನ್ನು ನಾನು ಇಲ್ಲಿ ಬರೆಯಬೇಕು. 1981ರಲ್ಲಿ ತಮಿಳುನಾಡಿನ ತಿರುವನ್ವೇಲಿ ಜಿಲ್ಲೆಯ ಮೀನಾಕ್ಷಿಪುರಂ ಎಂಬಲ್ಲಿ 1100 ದಲಿತರು ಹಣದ ಆಮಿಷಕ್ಕೆ ಬಲಿಯಾಗಿ ಬೇರೆ ಧರ್ಮಕ್ಕೆ ಮತಾಂತರ ಆಗಿದ್ದರು. ಈ ಘಟನೆಯು ಅಶೋಕ್ ಸಿಂಘಾಲ್ ಅವರನ್ನು ತೀವ್ರವಾಗಿ ಕಾಡಿತು. ದಲಿತರನ್ನು ಮೇಲ್ಜಾತಿಯವರು ಕೆಟ್ಟದಾಗಿ ನಡೆಸಿಕೊಳ್ಳುವ ಕೀಳು ಸಂಸ್ಕೃತಿಯನ್ನು ಅವರು ಬಲವಾಗಿ ಖಂಡಿಸಿದರು. ಅಷ್ಟು ಮಾತ್ರವಲ್ಲ ದಲಿತ ಬಂಧುಗಳಲ್ಲಿ ಸ್ವಾಭಿಮಾನವನ್ನು ಬೆಳೆಸುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ದಲಿತರಿಗಾಗಿ 200 ಶ್ರೇಷ್ಠವಾದ ಮಂದಿರಗಳನ್ನು ಸ್ಥಾಪಿಸಿತು. ಇದರಿಂದ ಮತಾಂತರ ಕಡಿಮೆ ಆದದ್ದು ಮಾತ್ರವಲ್ಲ, ಮೀನಾಕ್ಷಿಪುರಂನಲ್ಲಿ ಮತಾಂತರ ಆದ 900 ದಲಿತರು ಮತ್ತೆ ಹಿಂದೂ ಧರ್ಮಕ್ಕೆ ಮರಳಿದರು! ಅಶೋಕ್ ಸಿಂಘಾಲ್ ಅವರು ತನ್ನ ಗಟ್ಟಿಯಾದ ನಿಲುವುಗಳಲ್ಲಿ ರಾಜಿ ಮಾಡಿಕೊಂಡ ಉದಾಹರಣೆ ನಮಗೆ ಎಲ್ಲಿಯೂ ಸಿಗುವುದಿಲ್ಲ.

ರಾಮಮಂದಿರದ ನಿರ್ಮಾಣದ ಗಟ್ಟಿ ನಿರ್ಣಯ

ಅವರ ನಾಯಕತ್ವದಲ್ಲಿ VHP ಮೊದಲನೇ ಬಾರಿಗೆ ಸಂತರ ಸಮ್ಮೇಳನ(ಧರ್ಮ ಸಂಸತ್ತು)ವನ್ನು ಆಯೋಜಿಸಿತ್ತು. 1984ರಲ್ಲಿ ದೆಹಲಿಯ ಬೃಹತ್ ಆದ ವಿಜ್ಞಾನ ಭವನದಲ್ಲಿ ನಡೆದ ಈ ಮೊದಲ ಧರ್ಮ ಸಂಸತ್ತು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರವನ್ನು ಸ್ಥಾಪಿಸುವ ಐತಿಹಾಸಿಕವಾದ ನಿರ್ಣಯವನ್ನು ಸ್ವೀಕಾರ ಮಾಡಿತು!

ರಾಮ ಮಂದಿರ ನಿರ್ಮಾಣಕ್ಕೆ ಹಿಂದೆ ನೂರಾರು ಹೋರಾಟಗಳು ನಡೆದಿದ್ದರೂ ಅಂದು ತೆಗೆದುಕೊಂಡ ನಿರ್ಣಯವು ಮಂದಿರದ ಸ್ಥಾಪನೆಗೆ ಹೊಸತಾದ ದಿಕ್ಕನ್ನು ತೋರಿಸಿತು! ಅಲ್ಲಿಂದ ಅಶೋಕ್ ಸಿಂಘಾಲ್ (Ashok Singhal) ಅವರು ಒಂದು ದಿನವೂ ವಿಶ್ರಾಂತಿ ಪಡೆಯದೆ ರಾಮ ಮಂದಿರದ ಕನಸನ್ನು ಇಡೀ ಭಾರತಕ್ಕೆ ಹಂಚಲು ಹೊರಟು ನಿಂತರು!

ದೇಶವನ್ನು ಒಗ್ಗೂಡಿಸಿದ ರಾಮ ಶಿಲಾ ಪೂಜನೆಯ ಕಾರ್ಯಕ್ರಮ

ದೇಶದ ಹಳ್ಳಿ ಹಳ್ಳಿಗಳಲ್ಲಿ ‘ಶ್ರೀ ರಾಮರಥ’ವು ಚಲಿಸಿತು. ಪ್ರತೀ ಗ್ರಾಮಗಳಲ್ಲಿ ‘ ಶ್ರೀ ರಾಮ ಶಿಲಾ ಪೂಜನ’ (Shri Rama Shilapoojana) ಕಾರ್ಯಕ್ರಮವು ಚಂದವಾಗಿ ನಡೆಯಿತು. ಇಡೀ ಭಾರತದಲ್ಲಿ ರಾಮ ಮಂದಿರದ ಬಗ್ಗೆ ಜಾಗೃತಿ ಮೂಡಿತು. 1990ರಲ್ಲಿ ಪ್ರಮುಖ ಮಂದಿರಗಳ ವಿನ್ಯಾಸಗಾರ ಆದ ಚಂದ್ರಕಾಂತ ಸೋಮಾಪುರ ಅವರನ್ನು ಮಂದಿರದ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಂದಿರದ ನೀಲ ನಕಾಶೆ ಸಿದ್ಧ ಮಾಡಿಸಿ, ಅದಕ್ಕೆ ಸಂತರ ಮಂಡಳಿಯಿಂದ ಅಂಗೀಕಾರ ಸಿಂಘಾಲ್ ಪಡೆದರು.

ಅಡ್ವಾಣಿ ರಥಯಾತ್ರೆಗೆ ಹೆಗಲು ಕೊಟ್ಟರು

1990 ಸೆಪ್ಟೆಂಬರ್ ತಿಂಗಳಲ್ಲಿ ಗುಜರಾತಿನ ಸೋಮನಾಥ ಮಂದಿರದಿಂದ ಹೊರಟ ಎಲ್‌.ಕೆ. ಅಡ್ವಾಣಿ ನೇತೃತ್ವದ ರಥಯಾತ್ರೆಗೆ (LK Advani Ratha yatra) ಅಶೋಕ್ ಸಿಂಘಾಲ್ ಕೂಡ ಹೆಗಲು ಕೊಟ್ಟರು. ಸಾವಿರಾರು ಕರಸೇವಕರ ಪಡೆಯನ್ನು ಕಟ್ಟಿದರು. ಜಗತ್ತಿನ ಯಾವ ಶಕ್ತಿಯೂ ರಾಮಮಂದಿರದ ನಿರ್ಮಾಣವನ್ನು ತಡೆಯಲು ಸಾಧ್ಯವಿಲ್ಲ ಎಂದು ಗಟ್ಟಿಯಾಗಿ ಗುಡುಗಿದರು. ಮಂದಿರ ನಿರ್ಮಾಣವನ್ನು ತಡೆದರೆ ಸರಕಾರಗಳು ಉರುಳುವುದು ಖಂಡಿತ ಎಂದು ಘರ್ಜನೆ ಮಾಡಿದರು.

‘ಮಂದಿರ ವಹೀ ಬನಾಯೆಂಗೆ’ ಘೋಷಣೆಯು ಮುಗಿಲು ಮುಟ್ಟಿತು!

ವರ್ಷಗಟ್ಟಲೆ ರಾಮ ಜನ್ಮ ಭೂಮಿಯ ವ್ಯಾಜ್ಯಗಳು ಕೋರ್ಟಿನಿಂದ ಕೋರ್ಟಿಗೆ ವರ್ಗಾವಣೆ ಆಗಿ ಪರಿಹಾರ ದೊರೆಯದೆ ಹೋದಾಗ ತುಂಬಾ ತಾಳ್ಮೆಯಿಂದ ಕಾದರು. ಉಭಯ ಮಾತುಕತೆಗಳ ಮೂಲಕ ವಿವಾದವನ್ನು ಪರಿಹರಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಿದರು.

ಮುಂದೆ ದೇಶದಲ್ಲಿ ರಚನೆ ಆದ ಬಹುಮತದ ಸರಕಾರಗಳು ರಾಮಮಂದಿರದ ಅಜೆಂಡಾವನ್ನು ಮರೆತುಬಿಟ್ಟು ವರ್ತಿಸಿದಾಗ ಆಮರಣಾಂತ ಉಪವಾಸ ಕೂತರು. ಕೊನೆಯ ಉಸಿರಿನವರೆಗೂ ರಾಮಮಂದಿರ ಬಿಟ್ಟರೆ ಬೇರೇನೂ ಯೋಚನೆ ಮಾಡಲಿಲ್ಲ.

ಭವ್ಯವಾದ ಅಯೋಧ್ಯೆಯ ರಾಮಮಂದಿರದ ಕನವರಿಕೆಯಲ್ಲೇ 2015ರ ನವೆಂಬರ್ 17ರಂದು ಅಶೋಕ್ ಸಿಂಘಾಲ್ ಅವರು ತಮ್ಮ ಕೊನೆಯ ಉಸಿರೆಳೆದರು. ಅವರ ಬದುಕಿನ ಆಧಾರಿತವಾದ ಪುಸ್ತಕ ‘ ಹಿಂದೂತ್ವ ಕೆ ಪುರೋಧಾ’ ಸಿಂಘಾಲ್ ಅವರ ಹೋರಾಟದ ಪುಟಗಳನ್ನು ನಮಗೆ ಪರಿಚಯ ಮಾಡುತ್ತದೆ.

ಬದುಕು ಬದಲಿಸಬಲ್ಲ ನೂರಾರು ಸ್ಫೂರ್ತಿಯುತ ಕಥೆಗಳಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಸಿಂಘಾಲ್ ಅವರನ್ನು ಭಾರತವು ಮರೆಯಲಿಲ್ಲ

ಅವರ ಕೊಡುಗೆಯನ್ನು ಭಾರತ ಸರಕಾರವು ಮರೆಯಲಿಲ್ಲ. ಆಗಸ್ಟ್ ಐದರಂದು ನಡೆದ ಶ್ರೀ ರಾಮ ಮಂದಿರದ ಭೂಮಿ ಪೂಜನ ಕಾರ್ಯಕ್ರಮಕ್ಕೆ ಸಿಂಘಾಲ್ ಅವರ ಅಣ್ಣನ ಮಗ ಸಲೀಲ್ ಸೆಹೆಗಲ್ ಅವರನ್ನು ಪತ್ನಿ ಸಮೇತ ಮಂದಿರ ನಿರ್ಮಾಣ ಟ್ರಸ್ಟ್ ಗೌರವದಿಂದ ಆಮಂತ್ರಿಸಿತ್ತು. ಆ ದಂಪತಿಗಳು ಪ್ರಧಾನಿ ಮೋದಿಯವರ ಪಕ್ಕದಲ್ಲಿ ಕುಳಿತು ಧಾರ್ಮಿಕ ಕಾರ್ಯಗಳಲ್ಲಿ ಸಹಭಾಗಿ ಆಗಿದ್ದರು. ಮುಂದಿನ ವರ್ಷದ ಜನವರಿ ತಿಂಗಳಲ್ಲಿ ನಡೆಯುವ ಮಂದಿರ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಅಶೋಕ್ ಸಿಂಘಾಲ್ (Ashok Singhal) ಅವರನ್ನು ಖಂಡಿತವಾಗಿ ನೆನಪಿಸುವ ಕೆಲಸವನ್ನು ರಾಮ ಮಂದಿರ ಟ್ರಸ್ಟ್ ಮಾಡಲಿದೆ. ಆ ಮೂಲಕ ಅಶೋಕ್ ಸಿಂಘಾಲ್ ಅವರು ಆತ್ಮ ಶರೀರಿಯಾಗಿ ನಿಂತು ದಿವ್ಯವಾದ ರಾಮಮಂದಿರವನ್ನು ನೋಡಲಿದ್ದಾರೆ ಎನ್ನುವುದು ಖಚಿತ.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ವಿಲನ್‌ ಆಗಿ ಆರಂಭ, ಲೆಜೆಂಡ್‌ ಆಗಿ ನಿರ್ಗಮನ; ಸ್ಟುವರ್ಟ್‌ ಬ್ರಾಡ್‌ ಬದುಕಿನ ಎಲ್ಲೂ ಕೇಳದ ಕಥೆಗಳು!

Exit mobile version