ಭಾರತದ ‘ಕೀರ್ತಿ ಮುಕುಟ’ ಎಂದೇ ಎಲ್ಲರಿಂದ ಕರೆಯಲ್ಪಡುವ ಜಮ್ಮು ಕಾಶ್ಮೀರವು ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರದ ಗಮನವನ್ನು ಹೆಚ್ಚು ಸೆಳೆಯುತ್ತಿದೆ. ಒಂದು ಕಡೆಯಲ್ಲಿ ಪ್ರಾಕೃತಿಕ ಸೌಂದರ್ಯ! ಇನ್ನೊಂದು ಕಡೆ ಶಾಶ್ವತ ಶಾಂತಿ ಸ್ಥಾಪನೆಯ ಬಹುದೊಡ್ಡ ಕನಸು ಮತ್ತು ನಿರಂತರ ಪ್ರಯತ್ನಗಳು! ಮತ್ತೊಂದು ಕಡೆ ಸೆರಗಿನ ಕೆಂಡವಾಗಿರುವ ಭಯೋತ್ಪಾದನಾ ಚಟುವಟಿಕೆ! ಅದರೊಂದಿಗೆ ಆಂತರಿಕ ಕ್ಷೋಭೆಗಳು. ಹೀಗೆ ಎಲ್ಲವೂ ಸೇರಿದರೆ ಅದು ಕಾಶ್ಮೀರ ಆಗುತ್ತದೆ!
ಶ್ರೀನಗರವು ಅದರ ರಾಜಧಾನಿ. ಅಲ್ಲಿ ಶಾಂತಿ ಸ್ಥಾಪನೆಯ ಕನಸು ಹೊತ್ತುಕೊಂಡು CRPF ಇನ್ ಸ್ಪೆಕ್ಟರ್ ಜನರಲ್ ನೇಮಕವನ್ನು ಕಳೆದ ವರ್ಷವೇ ಕೇಂದ್ರ ಸರ್ಕಾರವು ಮಾಡಿದೆ. ಆ ಹುದ್ದೆಗೆ ನೇಮಕ ಆದ ಮೊದಲ ಮಹಿಳೆ ಎಂಬ ಕೀರ್ತಿಯೊಂದಿಗೆ ಅವರು ಕಳೆದ ವರ್ಷ ಸೆಪ್ಟೆಂಬರ್ ಒಂದರಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ! ಚಾರು ಸಿನ್ಹ ಐಪಿಎಸ್ ಕಾಶ್ಮೀರದ ಭರವಸೆ.
ಅವರ ಟ್ರ್ಯಾಕ್ ರೆಕಾರ್ಡ್ ನೋಡಿದರೆ ನೀವು ಖಂಡಿತವಾಗಿಯೂ ವಿಸ್ಮಯ ಪಡುತ್ತೀರಿ.
ಆಕೆ ಹೈದರಾಬಾದಿನವರು. ಹೈದರಾಬಾದಿನ ಸೈಂಟ್ ಫ್ರಾನ್ಸಿಸ್ ಕಾಲೇಜಿನಲ್ಲಿ ಇಂಗ್ಲಿಷ್ ಮೇಜರ್ ಜೊತೆಗೆ ಪದವಿಯನ್ನು ಪಡೆದವರು. ನಂತರದಲ್ಲಿ ರಾಜನೀತಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಅಧ್ಯಯನ ಅವರದ್ದು. ಮೊದಲ ಪ್ರಯತ್ನದಲ್ಲಿ ರಾಂಕ್ ಪಡೆದು ಐಪಿಎಸ್ ಪರೀಕ್ಷೆ ಗೆದ್ದವರು! ಅವರು ತೆಲಂಗಾಣದ 1996ರ ಕೇಡರಿನ ಐಪಿಎಸ್ ಅಧಿಕಾರಿ.
ಕಳೆದ ಇಪ್ಪತ್ತಾರು ವರ್ಷಗಳ ಅವಧಿಯಲ್ಲಿ ಅವರ ಸೇವೆಯಲ್ಲಿ ಒಂದು ಕಪ್ಪುಚುಕ್ಕೆ ಕೂಡ ಇಲ್ಲ! ಅವರು ಸುದೀರ್ಘ ಅವಧಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ನಕ್ಸಲ್ ಚಟುವಟಿಕೆ, ಕೋಮುವಾದ ಮತ್ತು ರಕ್ತಪಾತದ ನಡುವೆ ಕರ್ತವ್ಯ ನಿಭಾಯಿಸಿ ಕೂಡ ಗೆದ್ದವರು. ಪ್ರಕಾಶಂ, ನಿಜಾಮಾಬಾದ್, ಚಿತ್ತೂರು, ಮೆಹಬೂಬ್ ನಗರ, ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಅವರು SP ಆಗಿದ್ದಾಗ ನಕ್ಸಲ್ ಚಟುವಟಿಕೆಗಳು ಪೂರ್ತಿಯಾಗಿ ನಿಂತೇ ಹೋಗಿತ್ತು!
ಕೋಮು ಪ್ರಚೋದನಕಾರಿ ಚಟುವಟಿಕೆ ಮಾಡುವವರಿಗೆ ಅವರು ಸಿಂಹಸ್ವಪ್ನ ಆದರು. ಚಾರು ಮೇಡಂ ಅರೆಸ್ಟ್ ಮಾಡಿದರು ಅಂದರೆ ಜಾಮೀನು ಕೂಡ ಸಿಗೋದಿಲ್ಲ ಎಂದು ಅಪರಾಧಿಗಳಿಗೆ ಅವರು ಅರ್ಥ ಮಾಡಿಸಿದ್ದರು! ಸೋಶಿಯಲ್ ಮೀಡಿಯಾವನ್ನು ಜಾಲಾಡಿ ಸಾಕ್ಷಿಗಳನ್ನು ಸಂಗ್ರಹ ಮಾಡುವುದರಲ್ಲಿ ಅವರು ಸಿದ್ಧ ಹಸ್ತರು. ಲಂಚಕೋರರಾದ ಅಧಿಕಾರಿಗಳು ಅವರ ಮುಂದೆ ನಿಲ್ಲಲು ಹೆದರುವ ಪ್ರಸಂಗ ಇತ್ತು. ಭ್ರಷ್ಟ ಅಪರಾಧಿಗಳು ರಾತ್ರಿ ಕೂಡ ಮನೆಯಿಂದ ಹೊರಬರಲು ಹೆದರುತ್ತಿದ್ದರು.
ಚಿತ್ತೂರು ಜಿಲ್ಲೆಯಲ್ಲಿ ಅವರು ಕರ್ತವ್ಯ ನಿರತರಾಗಿದ್ದಾಗ ಅಲ್ಲಿನ HIV ಪೀಡಿತ ಮಹಿಳೆಯರು ಮತ್ತು ಮಕ್ಕಳನ್ನು ಮನೆಯವರೇ ಮನೆಯಿಂದ ಹೊರಹಾಕಿದಾಗ ಸಂತ್ರಸ್ತರ ಆಸ್ತಿ ಹಕ್ಕಿಗಾಗಿ ಚಾರು ಮೇಡಂ ಬೀದಿಗೆ ಇಳಿದು ಹೋರಾಟ ಮಾಡಿದ್ದರು!
ಒಮ್ಮೆ ಓರ್ವ ಯುವ ಪತ್ರಕರ್ತ ಅವರನ್ನು ಹೊಗಳುವ ಭರದಲ್ಲಿ “ಚಾರು ಮೇಡಂ ಅವರು ಮಹಿಳಾ ಅಧಿಕಾರಿ ಆಗಿದ್ದರೂ” ಅಂತ ನ್ಯೂಸ್ ಮಾಡಿದ್ದ. ಅವನನ್ನು ಚಾರು ಮೇಡಂ ಸ್ಟೇಷನ್‌ಗೆ ಕರೆಸಿ, ನನ್ನನ್ನು ಐಪಿಎಸ್ ಅಧಿಕಾರಿ ಅಂತ ಕರೆಯಿರಿ. ‘ಮಹಿಳಾ ಅಧಿಕಾರಿ’ ಎಂದು ವಿಶೇಷವಾಗಿ ಗುರುತಿಸುವ ಅಗತ್ಯ ಇಲ್ಲ ಅಂತ ಕ್ಲಾಸ್ ತೆಗೆದುಕೊಂಡಿದ್ದರು!
ಇನ್ನೊಮ್ಮೆ ಇನ್ನೊಬ್ಬ ತರಲೆ ಪತ್ರಕರ್ತ ಕ್ಯಾಮೆರಾ ಹಿಡಿದು ಅವರು ಹೋದಲ್ಲೆಲ್ಲ ಬಿಡದೆ ಹಿಂಬಾಲಿಸಿ ಕೊಂಡು ಬರಲು ಆರಂಭಿಸಿದ. “ಏನ್ರೀ, ಪೋಲಿಸ್ ಅಧಿಕಾರಿಗಳಿಗೆ ಖಾಸಗಿ ಜೀವನ ಇಲ್ಲವಾ?” ಅಂತ ಮೇಡಂ ಬೈದು ರುಬ್ಬಿದ್ದರು. ಇಂತಹ ಘಟನೆಗಳು ನೂರಾರು ನಡೆದಿದ್ದು ಚಾರೂ ಮೇಡಂ ‘ಸಿಕ್ಕಾಪಟ್ಟೆ ಖಡಕ್’ ಎಂದು ಪ್ರತೀತಿ ಬೆಳೆಯಿತು!
ಮುಂದೆ ಬಿಹಾರದ ನಕ್ಸಲ್ ನಿಬಿಡ ಪ್ರದೇಶದಲ್ಲಿ CRPF IG ಆಗಿ ಅಲ್ಲಿನ ಸರಕಾರವು ಅವರ ಸೇವೆಯನ್ನು ಬಯಸಿದಾಗ ಚಾರೂ ಮೇಡಂ ರಾತ್ರಿ ಹಗಲು ಕೆಲಸ ಮಾಡಿ ಗೆದ್ದಿರುವುದು ರೋಚಕ ಸಾಹಸವೇ ಆಗಿದೆ. ಆಕೆ ಯಾವ ವಿಧ್ವಂಸಕ ಶಕ್ತಿಗಳಿಗೆ ಕೂಡ ಹೆದರಿದ ಉದಾಹರಣೆ ಇಲ್ಲವೇ ಇಲ್ಲ. ನೋ ಕಾಂಪ್ರಮೈಸ್ ಅಧಿಕಾರಿ ಅವರು!
ಮುಂದೆ IG (ತರಬೇತಿ) ಹುದ್ದೆಯನ್ನು ಅಲಂಕರಿಸಿದ ಅವರು ಇಪ್ಪತ್ತೆಂಟು ಪೋಲಿಸ್ ಅಕಾಡೆಮಿಗಳ 12,000ಕ್ಕಿಂತ ಅಧಿಕ ಪೋಲಿಸ್ ಪೇದೆಗಳಿಗೆ ತರಬೇತಿಯನ್ನು ನೀಡಿ ದಾಖಲೆ ಮಾಡಿದ್ದರು!
ಕ್ರಿಮಿನಲ್ ಅಪರಾಧಿಗಳ ಬಗ್ಗೆ ಅವರು ಎಷ್ಟು ನಿರ್ದಯಿ ಆಗಿದ್ದರೂ ತಮ್ಮ ಜೊತೆಗೆ ಕೆಲಸ ಮಾಡುವ ಪೋಲಿಸ್ ಮತ್ತು CRPF ಜವಾನರ ಬಗ್ಗೆ ಅಷ್ಟೇ ಕಾಳಜಿ ವಹಿಸುತ್ತಿದ್ದರು. ಅವರ ಮಾನಸಿಕ ಆರೋಗ್ಯದ ಬಗ್ಗೆ, ಕೌಟುಂಬಿಕ ಸಮಸ್ಯೆಗಳ ಬಗ್ಗೆ ನೂರಾರು ಕಾರ್ಯಾಗಾರಗಳನ್ನು ಅವರು ಮಾಡಿದ್ದಾರೆ. ಪೊಲೀಸರ ಪತ್ನಿಯರನ್ನು ಕೂಡ ಸೇರಿಸಿ ಕೌಟುಂಬಿಕ ಸಾಮರಸ್ಯ ಮತ್ತು ಒತ್ತಡ ನಿರ್ವಹಣೆ ಬಗ್ಗೆ ಅವರು ನೀಡುವ ತರಬೇತಿಗಳು ಬಹಳ ಜನಪ್ರಿಯ ಆದವು. CRPF ಯೋಧರ ಮನೆಗಳಿಗೂ ಮೇಡಂ ಭೇಟಿ ಕೊಡುತ್ತಿದ್ದರು. ಹಾಗೆ ಹೋಗುವಾಗ ಪೋಲಿಸ್ ದಿರಸಿನಲ್ಲಿ ಹೋಗದೆ ಸಾದಾ ಸೀರೆಯಲ್ಲಿ ಹೋಗುತ್ತಿದ್ದರು ಮತ್ತು ಅವರ ಮಕ್ಕಳಿಗೆ ಉಡುಗೊರೆ ತೆಗೆದುಕೊಂಡು ಹೋಗಲು ಮರೆಯುತ್ತಿರಲಿಲ್ಲ!
ಕಳೆದ ವರ್ಷ ಅವರು ಜಮ್ಮು ವಲಯದ CRPF IG ಆಗಿ ಅಧಿಕಾರ ಸ್ವೀಕರಿಸಿದ್ದರು. ಆಗ ‘ಜೈಷ್ ಏ ಮೊಹಮ್ಮದ್’ ಭಯೋತ್ಪಾದಕ ಸಂಘಟನೆಯ ಮೂವರು ಪ್ರಮುಖರನ್ನು ಎನ್ಕೌಂಟರ್ ಮಾಡಿ ಉಡಾಯಿಸಿದ್ದನ್ನು ದೇಶ ಇಂದಿಗೂ ಮರೆತಿಲ್ಲ.
ಅಂತಹ ಹಿನ್ನೆಲೆ ಮತ್ತು ದಿಟ್ಟತನ ಹೊಂದಿರುವ ಚಾರು ಮೇಡಂ ಶ್ರೀನಗರದ ಕೇಂದ್ರೀಯ ಮೀಸಲು ಪಡೆಯ IG ಆಗಿ ಈಗಾಗಲೇ ಮಿಂಚಿದ್ದಾರೆ. ಶಾಂತಿಯ ಹಳಿಗೆ ಮರಳಲು ಯತ್ನಿಸುತ್ತಿರುವ ರಾಜ್ಯಕ್ಕೆ ಒಬ್ಬ ಖಡಕ್ ಪೋಲಿಸ್ ಅಧಿಕಾರಿ ಸಿಕ್ಕಿದ್ದಾರೆ. ಆ ಸ್ಥಾನಕ್ಕೆ ಆಯ್ಕೆ ಆದ ಮೊದಲ ಮಹಿಳಾ ಐಪಿಎಸ್ ಆಕೆ ಎಂದು ಬರೆಯುವ ಧೈರ್ಯವನ್ನು ನಾನಂತೂ ಮಾಡುವುದಿಲ್ಲ! ಚಾರು ಮೇಡಂ, ನಿಮಗೆ ಶುಭವಾಗಲಿ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅಮಿತಾಭ್ ಗೆದ್ದ 6 ಸವಾಲುಗಳು! ತಿರಸ್ಕಾರ, ಅಪಮಾನ, ನೋವುಗಳನ್ನು ಮೀರಿ ನಿಂತ ಖುಷಿ
ಇದನ್ನೂ ಓದಬೇಕು | ರಾಜಮಾರ್ಗ ಅಂಕಣ | ನೇಮಿಚಂದ್ರ: ಅವರ ಪುಸ್ತಕಗಳು ಖಂಡಿತವಾಗಿಯೂ ನಮ್ಮ `ಬದುಕು ಬದಲಿಸಬಹುದು’