ನಾನು ಮೆಡಿಕಲ್ ವಿದ್ಯಾರ್ಥಿಗಳು (Medical students) ಸಿಕ್ಕಿದಾಗ ಮೊದಲು ಕೇಳುವ ಪ್ರಶ್ನೆ – ನೀವು ಯಾವ ರೀತಿಯ ವೈದ್ಯರಾಗುತ್ತೀರಿ?ಅದಕ್ಕೆ ಅವರ ಮೊದಲ ಉತ್ತರ ಸೇವೆ ಮಾಡಬೇಕು ಎಂದೇ ಆಗಿರುತ್ತದೆ! ಮುಂದುವರಿದು ಅವರು ಹೇಳುವುದು ಕ್ಲಿನಿಕ್ ನಡೆಸಬೇಕು, ನರ್ಸಿಂಗ್ ಹೋಂ ಮಾಡಬೇಕು, ಸರಕಾರಿ ಆಸ್ಪತ್ರೆಯಲ್ಲಿ ವೈದ್ಯನಾಗಬೇಕು…. ಹೀಗೆ ಮುಂದುವರಿಯುತ್ತಾರೆ. ನಾನು ಅವರನ್ನು ಮುಂದೆ ಕೂರಿಸಿ ಹೇಳುವ ಕಥೆ ಡಾಕ್ಟರ್ ಜೋನಾಸ್ ಸಾಕ್ (Dr. Jonas salk) ಅವರದ್ದು! ನೀವೂ ಕೇಳಿ (ರಾಜ ಮಾರ್ಗ ಅಂಕಣ).
ಪೋಲಿಯೊ: ಜಗತ್ತಿನ ಭಯಾನಕ ಕಾಯಿಲೆ
1930ರ ದಶಕದಲ್ಲಿ ಜಗತ್ತನ್ನು ತೀವ್ರವಾಗಿ ಕಾಡುವ ಯಾವುದಾದರೂ ಕಾಯಿಲೆ ಇದ್ದರೆ ಅದು ಪೋಲಿಯೋ (Polio disease) ಆಗಿತ್ತು. ಜಗತ್ತಿನಲ್ಲಿ ನೂರು ಮಕ್ಕಳಲ್ಲಿ 3-4 ಮಕ್ಕಳು ಪೊಲಿಯೋದಿಂದ ಬಳಲುತ್ತಿದ್ದರು. ಪೋಲಿಯೋ ಬಂದರೆ ಸಾವು ಅಥವಾ ಶಾಶ್ವತವಾದ ಅಂಗವಿಕಲತೆ ಖಂಡಿತ ಎಂದು ಜನರು ನಿರ್ಧಾರಕ್ಕೆ ಬಂದಿದ್ದರು. ಅಮೆರಿಕದ ಅತ್ಯಂತ ಜನಪ್ರಿಯ ಅಧ್ಯಕ್ಷ ಆಗಿದ್ದ ಫ್ರಾಂಕ್ಲಿನ್ ರೂಸ್‌ವೆಲ್ಟ್ 1921ರಲ್ಲಿ ಈ ಪೋಲಿಯೋ ಕಾಯಿಲೆಗೆ ತುತ್ತಾಗಿ ಶಾಶ್ವತವಾಗಿ ವೀಲ್ ಚೇರಿಗೆ ಅಂಟಿಕೊಳ್ಳಬೇಕಾಯಿತು. ಆಗ ಜಗತ್ತಿನಾದ್ಯಂತ ಪೋಲಿಯೋ ಕಾಯಿಲೆಗೆ ಲಸಿಕೆಯನ್ನು (Vaccine for Polio) ಕಂಡುಹಿಡಿಯಬೇಕು ಎಂಬ ಒತ್ತಡ ಹೆಚ್ಚಾಗಿತ್ತು. ಆಗ ಅಮೆರಿಕಾದ ಪಿಟ್ಸ್‌ಬರ್ಗ್ ನಗರದಲ್ಲಿ ಸಂಶೋಧನಾ ನಿರತನಾಗಿದ್ದ ವೈದ್ಯ ಡಾಕ್ಟರ್ ಜೋನಾಸ್ ಸಾಕ್ ಜಗತ್ತನ್ನೇ ಮರೆತು ಲಸಿಕೆ ಹುಡುಕುವ ಕೆಲಸದಲ್ಲಿ ಮುಳುಗಿಬಿಟ್ಟರು.
1930ರಿಂದಲೂ ಪೋಲಿಯೋ ಲಸಿಕೆ ಹುಡುಕುವ ಪ್ರಯತ್ನ ಜಾರಿ ಇತ್ತು. ಜಗತ್ತಿನ ಮೂಲೆ ಮೂಲೆಗಳಲ್ಲಿ ಹಲವು ವಿಜ್ಞಾನಿಗಳು ನಿರಂತರ ಪ್ರಯತ್ನ ಮಾಡುತ್ತಲೇ ಇದ್ದರು. ನ್ಯೂಯಾರ್ಕ್ ಸಿಟಿ ಒಳಗಿನ ಯೂನಿವರ್ಸಿಟಿ ಮೆಡಿಕಲ್ ಕಾಲೇಜಿನ ಒಳಗೆ ಕೂತು ಡಾಕ್ಟರ್ ಸಾಕ್ ಹೊರ ಜಗತ್ತನ್ನೆ ಮರೆತಿದ್ದರು. ಆ ಕಾಲದಲ್ಲಿ ಆ ಕಾಲೇಜು ಬಡವರ ಕಾಲೇಜು ಎಂಬ ಹೆಸರು ಪಡೆದಿತ್ತು. ಅದರಲ್ಲಿ ಉತ್ತಮ ಲೈಬ್ರೆರಿ, ಆಧುನಿಕ ಪ್ರಯೋಗಶಾಲೆ ಇರಲಿಲ್ಲ. ಮೂಲಭೂತ ಸೌಕರ್ಯಗಳು ಇರಲಿಲ್ಲ. ಆದರೆ ಅದ್ಯಾವುದೂ ಡಾಕ್ಟರ್ ಜೋನಾಸ್ ಅವರಿಗೆ ಕೊರತೆ ಅನ್ನಿಸಲಿಲ್ಲ. ಅವರ ತಲೆಯಲ್ಲಿ ಒಂದೇ ಕೀಟ ಕೂತಿತ್ತು. ಅದು ಜಗತ್ತನ್ನು ಪೋಲಿಯೋದಿಂದ ವಿಮೋಚನೆ ಮಾಡುವುದು.
ಸಾಯಿಸಿದ ವೈರಸ್ ಕೋಶಗಳು ಚಮತ್ಕಾರ ಮಾಡಿದವು
ಪೋಲಿಯೋ ವೈರಸ್ ಅವರು ಹೇಳಿದ್ದನ್ನು ಕೇಳುತ್ತಿರಲಿಲ್ಲ. ಅವುಗಳನ್ನು ಫಾರ್ಮಾಲ್ಡಿನ್ ದ್ರಾವಣದಲ್ಲಿ ಹಾಕಿದಾಗ ಅವುಗಳು ಸಾಯುತ್ತಿದ್ದವು. ಸತ್ತು ಹೋಗಿರುವ ವೈರಸ್‌ಗಳನ್ನು ಮತ್ತೆ ಮಾನವ ದೇಹದಲ್ಲಿ ಇಂಜೆಕ್ಟ್ ಮಾಡಿದಾಗ ಪೋಲಿಯೋ ರೋಗಕ್ಕೆ ನಿರೋಧತೆ ಉಂಟಾಗುವ ಸೂಚನೆ ಕಂಡುಬಂದಿತ್ತು!
ಯೋಚನೆ ಏನೋ ಸರಿ! ಆದರೆ ಇಂಜೆಕ್ಟ್ ಮಾಡುವುದು ಯಾರಿಗೆ? ಪ್ರಯೋಗಪಶು ಆಗಲು ಯಾರು ಮುಂದೆ ಬರುತ್ತಾರೆ? ಕೊನೆಗೆ ಡಾಕ್ಟರ್ ಸಾಕ್ ತನ್ನನ್ನೇ ಅಪಾಯಕ್ಕೆ ಒಡ್ಡಿಕೊಳ್ಳಲು ನಿರ್ಧಾರ ಮಾಡುತ್ತಾರೆ. ತನ್ನ ಮೇಲೆ, ತನ್ನ ಪ್ರೀತಿಯ ಮಡದಿ ಮೇಲೆ, ತನ್ನ ಮೂವರು ಮಕ್ಕಳ ಮೇಲೆ ಆ ಲಸಿಕೆ ಇಂಜೆಕ್ಟ್ ಮಾಡುತ್ತಾರೆ! ಅವರು ನಿರೀಕ್ಷೆ ಮಾಡಿದ ಪಾಸಿಟಿವ್ ಫಲಿತಾಂಶ ದೊರೆತಾಗ ಖುಷಿ ಪಟ್ಟರು.
ಮುಂದೆ ಅಮೆರಿಕಾದಲ್ಲಿ ನಾಲ್ಕು ಲಕ್ಷ ಮಕ್ಕಳಿಗೆ ಉಚಿತ ಲಸಿಕೆ ಹಾಕಲಾಯಿತು. ಡಾಕ್ಟರ್ ಸಾಕ್ ಸ್ವತಃ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಹೋಗಿ ತನ್ನ ಪೋಲಿಯೋ ಲಸಿಕೆ ಬಗ್ಗೆ ಪ್ರಚಾರ ಮಾಡಿದರು. ಜನರ ಭಯ ನಿವಾರಣೆ ಮಾಡಲು ರೇಡಿಯೋ ಮತ್ತು ಟಿವಿ ಶೋಗಳ ಮೊರೆ ಹೋಗಿ ಪ್ರಾತ್ಯಕ್ಷಿಕೆ ಕೊಟ್ಟರು. ಅವರು ನಿರಂತರ ಏಳು ವರ್ಷಗಳ ಕಾಲ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಎಲ್ಲ ಕಡೆ ಹೋಗಿ ಲಸಿಕೆಯ ಪ್ರಚಾರ ಮಾಡಿದರು.
ಏಪ್ರಿಲ್ 12, 1955 ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ದೊರೆಯಿತು!
ಆ ದಿನ ಡಾಕ್ಟರ್ ಸಾಕ್ ಅವರ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯು ಅಂಗೀಕಾರ ಕೊಟ್ಟಿತು. ಆಗ ಡಾಕ್ಟರ್ ಸಾಕ್ ಪುಟ್ಟ ಮಗುವಿನ ಹಾಗೆ ಆನಂದ ಬಾಷ್ಪ ಸುರಿಸಿದರು. ಅದರ ಜೊತೆಗೆ ಅವರ ಲಸಿಕೆಯು ಜಗತ್ತಿನ ಅತ್ಯುಪಯುಕ್ತ (Most Essential Medicine) ಔಷಧ ಎಂದು ಮಾನ್ಯತೆ ಪಡೆಯಿತು.
ಆಗಿನ ಲೆಕ್ಕದ ಪ್ರಕಾರ ಅವರು ಪೋಲಿಯೋ ಲಸಿಕೆಯನ್ನು ಪೇಟೆಂಟ್ ಮಾಡಲು ಭಾರಿ ಬೇಡಿಕೆಗಳು ಬಂದಿದ್ದವು. ಅದರ ಪೇಟೆಂಟ್ ಮೌಲ್ಯ ಏಳು ಬಿಲಿಯನ್ ಡಾಲರ್ ಎಂದು ಅಧಿಕೃತ ಲೆಕ್ಕಾಚಾರ ಇತ್ತು! ಆದರೆ ಡಾಕ್ಟರ್ ಜೋನಾಸ್ ಸಾಕ್ ಅದನ್ನು ನಿರಾಕರಣೆ ಮಾಡಿ ತನ್ನ ಲಸಿಕೆಯನ್ನು ಯಾರು ಬೇಕಾದರೂ ಉಪಯೋಗ ಮಾಡಿ ಎಂದು ಬಿಟ್ಟರು! ಸೂರ್ಯ ತನ್ನ ಬೆಳಕಿಗೆ ಪೇಟೆಂಟ್ ಪಡೆಯುವುದಿಲ್ಲ. ಆದ್ದರಿಂದ ನನ್ನ ಲಸಿಕೆ ಮಾರಾಟಕ್ಕೆ ಅಲ್ಲ, ಜಗತ್ತಿನ ಒಳಿತಿಗೆ ಎಂದು ಹೇಳಿ ಡಾಕ್ಟರ್ ಸಾಕ್ ಮಾನವ ಕುಲಕ್ಕೆ ಬಹಳ ದೊಡ್ಡ ಉಪಕಾರ ಮಾಡಿದರು! ಮುಂದಿನ 25 ವರ್ಷಗಳ ನಂತರ ಪೋಲಿಯೋ ಅಮೆರಿಕಾದಲ್ಲಿ ಪೂರ್ತಿ ನಿರ್ನಾಮ ಆಯಿತು. 1959ರ ಹೊತ್ತಿಗೆ ಜಗತ್ತಿನ 90 ರಾಷ್ಟ್ರಗಳು ಸಾಕ್ ಅವರ ಲಸಿಕೆಯನ್ನು ತನ್ನ ಮಕ್ಕಳಿಗೆ ಉಚಿತವಾಗಿ ನೀಡಿ ಅದ್ಭುತ ಫಲಿತಾಂಶ ಪಡೆದವು. ಭಾರತವೂ ಈ ಪಟ್ಟಿಯಲ್ಲಿ ಇದೆ.
ಇದೇ ಡಾಕ್ಟರ್ ಸಾಕ್ ಮುಂದೆ HIV ಲಸಿಕೆಯನ್ನು ಕಂಡು ಹಿಡಿಯುವ ಪ್ರಯತ್ನ ಮಾಡಿದರೂ ಸಫಲ ಆಗಲಿಲ್ಲ.
ನಿಮ್ಮ ಅಪೂರ್ಣವಾದ ಕನಸು ಏನು ಎಂದು ಡಾಕ್ಟರ್ ಸಾಕ್ ಅವರನ್ನು ಕೇಳಿದಾಗ ಅವರು ಹೇಳಿದ ಮಾತು ತುಂಬಾನೇ ಭಾವನಾತ್ಮಕ ಆಗಿತ್ತು: ‘ನನಗೆ ಸಾಧ್ಯ ಆದರೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಲಸಿಕೆ ಕಂಡುಹಿಡಿಯಲು ಪ್ರಯತ್ನ ಮಾಡಬೇಕು!’
ಡಾಕ್ಟರ್ ಜೋನಾಸ್ ಸಾಕ್ ತನ್ನ ಎಂಬತ್ತನೆ ವಯಸ್ಸಿನಲ್ಲಿ 1985ರಲ್ಲಿ ನಿಧನರಾದರು. ನಿಮಗೆ ಯಾರಾದ್ರೂ ಮೆಡಿಕಲ್ ವಿದ್ಯಾರ್ಥಿಗಳು ಮಾತಾಡಲು ಸಿಕ್ಕಿದರೆ ಈ ಕಥೆ ಹೇಳದೇ ಅವರಿಗೆ ಟಾಟಾ ಹೇಳಬೇಡಿ!
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ದೇಶದ ಅತಿಪುರಾತನ ಫಿಲಂ ಸ್ಟುಡಿಯೋ AVM ರೂಪುಗೊಂಡ ಕಥೆ