1965ನೇ ಇಸವಿ ಭಾರತ-ಪಾಕಿಸ್ತಾನ ಯುದ್ಧವು ಶಿಖರ ಸ್ಥಿತಿಯಲ್ಲಿ ಇತ್ತು. ಆಗ ಭಾರತದ ಒಂದು ಯುದ್ದ ವಿಮಾನವನ್ನು ಪಾಕ್ ಸೈನಿಕರು ಪಾಕಿಸ್ತಾನದಲ್ಲಿ ಹೊಡೆದು ಉರುಳಿಸಿದ್ದರು. ಅದರ ಪೈಲಟ್ ಆಗಿದ್ದವರು ಫ್ಲೈಯಿಂಗ್ ಆಫೀಸರ್ ನಂದಾ ಕಾರ್ಯಪ್ಪ. ಅವರು ಭಾರತೀಯ ಸೇನೆಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರ ಏಕಮಾತ್ರ ಪುತ್ರ. ಅವರನ್ನು ಪಾಕ್ ಸೈನಿಕರು ಯುದ್ಧ ಕೈದಿಯಾಗಿ ಸೆರೆ ಹಿಡಿದರು. ಈ ಸುದ್ದಿಯು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಆಯೂಬ್ ಖಾನರಿಗೆ ತಿಳಿಯಿತು. ಅವರು ಸ್ವಾತಂತ್ರ್ಯದ ಪೂರ್ವದಲ್ಲಿ ಕಾರ್ಯಪ್ಪನವರ ಅಧೀನ ಸೈನ್ಯದಲ್ಲಿ ಕೆಲಸ ಮಾಡಿದ್ದರು. ಅವರಿಗೆ ಕಾರ್ಯಪ್ಪ ಬಗ್ಗೆ ಭಾರಿ ಗೌರವ ಇತ್ತು.
ಅವರು ಪಾಕ್ ರೇಡಿಯೊದ ಮೂಲಕ ಜನರಲ್ ಕಾರ್ಯಪ್ಪ ಅವರನ್ನು ಸಂಪರ್ಕ ಮಾಡಿ “ನಿಮ್ಮ ಮಗ ನಮ್ಮ ಯುದ್ಧಕೈದಿಯಾಗಿ ನಮ್ಮ ಜೊತೆ ಸುರಕ್ಷಿತವಾಗಿ ಇದ್ದಾನೆ. ನೀವು ಬಯಸಿದರೆ ನಿಮ್ಮ ಮಗನನ್ನು ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸಿಕೊಡುತ್ತೇನೆ” ಎಂದರು.
ಈ ಕಡೆಯಿಂದ 67 ವರ್ಷದ ಭಾರತೀಯ ಸೇನೆಗಳ ಮಹಾ ದಂಡನಾಯಕ ಕೆ.ಎಂ ಕಾರಿಯಪ್ಪ ಗುಡುಗಿದ್ದರು – “ನನ್ನ ಮಗ ಎಂಬ ಕಾರಣಕ್ಕೆ ನನ್ನ ಮಗನಿಗೆ ಯಾವ ರಿಯಾಯಿತಿ ಕೂಡ ಬೇಡ! ಪಾಕಿಸ್ತಾನದ ಕಡೆಯಿಂದ ನಾನು ಯಾವ ಸೈನಿಕನ ಬಿಡುಗಡೆಯ ಭಿಕ್ಷೆ ಕೂಡ ಬೇಡುವುದಿಲ್ಲ!”
ತನ್ನ ಏಕಮಾತ್ರ ಪುತ್ರ ನಂದಾ ಕಾರ್ಯಪ್ಪ ಬಗ್ಗೆ ಈ ರೀತಿ ಗುಡುಗಿದ ಜನರಲ್ ಕಾರ್ಯಪ್ಪ ಅವರ ಬಗ್ಗೆ ಒಂದು ಪುಸ್ತಕವನ್ನೇ ಬರೆಯುವಷ್ಟು ಮಾಹಿತಿಗಳನ್ನು ಒಂದೆಡೆ ಕಲೆ ಹಾಕಿ ಕೂತಿದ್ದೇನೆ. ಆದರೆ ಈ ಅಂಕಣದ ಪರಿಮಿತಿಯಲ್ಲಿ ಕೆಲವೇ ಕೆಲವು ಸ್ಫೂರ್ತಿದಾಯಕ ವಿಷಯಗಳು ತಮ್ಮ ಮುಂದೆ!
-ನಮಗೆಲ್ಲ ತಿಳಿದಿರುವಂತೆ ಕೊಡಗು ಜಿಲ್ಲೆಯು ಅತೀ ಹೆಚ್ಚು ಸೈನಿಕರಿಗೆ ಜನ್ಮ ಕೊಟ್ಟಿದೆ. ಅದರಲ್ಲಿ ಕೂಡ ಜನರಲ್ ಕಾರ್ಯಪ್ಪ ಅವರದ್ದು ಬಹಳ ದೊಡ್ಡ ಹೆಸರು. ಅವರು ಸಣ್ಣ ಹುಡುಗ ಇದ್ದಾಗ ಅವರ ತಾಯಿ ಕಾವೇರಿ ಅವರು ಮಗನನ್ನು ದೇವರ ಮುಂದೆ ನಿಲ್ಲಿಸಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಲಂಚಕ್ಕೆ ಯಾವ ಕಾಲದಲ್ಲಿ ಕೂಡ ಕೈಯನ್ನು ಮುಂದೆ ಚಾಚುವುದಿಲ್ಲ ಎಂದು ಪ್ರತಿಜ್ಞೆ ಮಾಡಿಸಿದ್ದರಂತೆ!
-ಸ್ವಾತಂತ್ರ್ಯದ ಪೂರ್ವದಲ್ಲಿ ಬ್ರಿಟಿಷ್ ಸೇನೆಯನ್ನು ಸೇರಿದ ಕಾರ್ಯಪ್ಪ ಅವರು ಧೈರ್ಯವಾಗಿ ಹೋರಾಡಿದರು. ಅವರ ದಿಟ್ಟತನ ಕಂಡ ಬ್ರಿಟಿಷರು ಅವರಿಗೆ ‘ಆರ್ಡರ್ ಆಫ್ ದ ಬ್ರಿಟಿಷ್ ಎಂಪಾಯಾರ್’ ಎಂಬ ತಮ್ಮ ರಾಣಿಯ ಗೌರವದ
ಪ್ರಶಸ್ತಿಯನ್ನು ನೀಡಿದ್ದರು!
-ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶದ ಸೈನ್ಯದ ಮೂರೂ ವಿಭಾಗಗಳಿಗೆ ಒಬ್ಬ ‘ಮಹಾ ದಂಡ ನಾಯಕʼ ನೇಮಕ ಆಗಬೇಕು ಎಂದು ಸರಕಾರವು ಬಯಸಿದಾಗ ಆ ಹುದ್ದೆಗೆ ನೇಮಕ ಆದವರು ಜನರಲ್ ಕಾರ್ಯಪ್ಪನವರು. ಆಗ ಅವರ ಮುಂದೆ ಬೆಟ್ಟದಷ್ಟು ದೊಡ್ಡ ಸವಾಲುಗಳು ಇದ್ದವು. ಸೈನಿಕರ ಶಿಸ್ತು, ಉತ್ಸಾಹಗಳು ಪಾತಾಳಕ್ಕೆ ಹೋಗಿದ್ದವು. ಮುಂದಿನ ನಾಲ್ಕು ವರ್ಷಗಳ ಕಾಲ ಭಾರತೀಯ ಸೇನೆಯ ಆಧುನೀಕರಣಕ್ಕೆ ಅವಿಶ್ರಾಂತವಾಗಿ ದುಡಿದವರು ಅವರು. ಮುಂದೆ ನಡೆದ ಎರಡೂ ಯುದ್ಧಗಳಲ್ಲಿ ಭಾರತವನ್ನು ಗೆಲ್ಲಿಸಿದ ಕೀರ್ತಿ ಕೂಡ ಅವರಿಗೇ ಸಲ್ಲಬೇಕು.
-ಒಮ್ಮೆ ಪ್ರಧಾನಿ ನೆಹರೂ ಸೇನೆಯ ವಿಷಯದಲ್ಲಿ ಮೂಗು ತೂರಿಸಲು ಪ್ರಯತ್ನಿಸಿದಾಗ ಸಿಡಿದು ನಿಂತ ಜನರಲ್ ಕಾರ್ಯಪ್ಪ ಹೇಳಿದ್ದು ಹೀಗೆ – ‘ನಮ್ಮ ಸೈನಿಕರ ನಿಷ್ಠೆ ಇರುವುದು ರಾಷ್ಟ್ರಕ್ಕೆ ಹೊರತು ಪ್ರಧಾನಿಗೆ ಅಲ್ಲ! ಸೇನೆಯ ವಿಷಯದಲ್ಲಿ ಯಾರು ಹಸ್ತಕ್ಷೇಪ ಮಾಡಿದರೂ ನಾವು ಸಹಿಸುವುದಿಲ್ಲ!’
-ನಿವೃತ್ತ ಸೈನಿಕರ ಬಗ್ಗೆ ಅತೀವ ಕಾಳಜಿಯಿಂದ ಅವರ ನಿವೃತ್ತಿ ವೇತನ ಸೌಲಭ್ಯಗಳು ದೊರೆಯುವಂತೆ ಅವರು ಪ್ರಧಾನಿ ನೆಹರೂ ಅವರಿಗೆ ಮತ್ತೆ ಮತ್ತೆ ಪತ್ರಗಳನ್ನು ಬರೆದರು. ಕೊಡಗಿನ ತನ್ನ ಮನೆಯನ್ನು ನಿವೃತ್ತ ಸೈನಿಕರ ಭವನಕ್ಕೆ ಬಿಟ್ಟುಕೊಟ್ಟರು.
-ಭಾರತ ಸರಕಾರ ಅವರಿಗೆ ಸೇನೆಯ ಅತ್ಯುನ್ನತ ಗೌರವವಾದ ‘ಫೀಲ್ಡ್ ಮಾರ್ಷಲ್’ ಪದವಿ ನೀಡಿ ಗೌರವಿಸಿತು. ಆಗ ಅವರಿಗೆ 86 ವರ್ಷ ದಾಟಿತ್ತು! ಅದು ಅವರಿಗೆ ತುಂಬಾ ತಡವಾಗಿ ದೊರೆಯಿತು ಎಂದು ನನ್ನ ಅಭಿಪ್ರಾಯ.
– 90ರ ವರ್ಷದಲ್ಲಿ ಅವರನ್ನು ಒಂದು ಪತ್ರಿಕೆಯು ಸಂದರ್ಶನ ಮಾಡಿತು. ಆಗ ಅವರ ಕೊಡಗಿನ ಮನೆ ರೋಷನಾರಾದಲ್ಲಿ ಅವರು ನಿವೃತ್ತ ಜೀವನ ನಡೆಸುತ್ತಿದ್ದರು. ಆಗಲೂ ಒಂದಲ್ಲ ಒಂದು ಸೇನಾ ಸಂಬಂಧಿ ಚಟುವಟಿಕೆಯಲ್ಲಿ ಅವರು ಬ್ಯುಸಿ ಇದ್ದರು. ಪತ್ರಿಕೆಗೆ ಅವರು ಹೇಳಿದ ಪ್ರಮುಖ ಮಾತು – ‘ನನಗೆ ಇರುವ ಒಂದೇ ಒಂದು ಅಸಮಾಧಾನ ಎಂದರೆ ದಿನಕ್ಕೆ ಕೇವಲ 24 ಘಂಟೆ ಇರುವುದು! ಅದನ್ನು 48 ಘಂಟೆ ಮಾಡು ಎಂದು ನಾನು ದೇವರನ್ನು ಕೇಳುತ್ತೇನೆ! ಏಕೆಂದರೆ ಮಾಡಬೇಕಾದ ಕೆಲಸ ಬ್ರಹ್ಮಾಂಡ ಇದೆ! ಕಾಲ ಕಡಿಮೆ ಇದೆ!’
ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅವರು 1993 ಮೇ 15ರಂದು ವಿಧಿವಶರಾದರು. ಆಗ ಅವರಿಗೆ 94 ವರ್ಷ ವಯಸ್ಸು. ಭಾರತೀಯ ಸೇನೆಯ ಇತಿಹಾಸವನ್ನು ಎಲ್ಲಿಂದ ಅಧ್ಯಯನ ಮಾಡಲು ಆರಂಭ ಮಾಡಿದರೂ ಜನರಲ್ ಕಾರ್ಯಪ್ಪ ಅವರ ಹೆಸರು ಎತ್ತರದಲ್ಲಿ ನಿಲ್ಲುತ್ತದೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ನೇತಾಜಿ ಪ್ರಾಣ ಉಳಿಸಲು ತನ್ನ ಗಂಡನನ್ನೇ ಕೊಂದು ಹಾಕಿದ ನೀರಾ ಆರ್ಯ!