Site icon Vistara News

ರಾಜ ಮಾರ್ಗ ಅಂಕಣ : ಶತಮಾನದ ವಿಜ್ಞಾನಿ ಎಂಬ ಖ್ಯಾತಿ ಇತ್ತು; ಆದರೆ, ಅಲೆಮಾರಿಯ ಹಾಗೆ ಬದುಕಬೇಕಾಯಿತು!

Alebert Einstein

#image_title

ಮಹಾ ವಿಜ್ಞಾನಿಯಾದ ಆಲ್ಬರ್ಟ್ ಐನ್‌ಸ್ಟೀನ್ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ! ಆತನ ಮಹಾನ್ ಸಂಶೋಧನೆಗಳು, ಜೀವನೋತ್ಸಾಹ, ಹಾಸ್ಯ ಪ್ರಜ್ಞೆ, ಜಗತ್ತನ್ನು ಪ್ರೀತಿಸಿದ ರೀತಿ… ಇವುಗಳನ್ನು ಗಮನಿಸುತ್ತ ಹೋದಾಗ ನಮಗೆ ಅವರೊಬ್ಬ ದೊಡ್ಡ ಅಚ್ಚರಿಯ ಮೂಟೆಯಾಗಿ ಗೋಚರಿಸುತ್ತಾರೆ! ಆತನ ಒಂದೊಂದು ಸಂಶೋಧನೆಗಳು ಕೂಡ ವಿಶ್ವಮಾನ್ಯತೆಯನ್ನು ಪಡೆದವು. ಮಾರ್ಚ್‌ 14 ಅವರ ಹುಟ್ಟುಹಬ್ಬ (ಜನನ: ಮಾ. 14, 1879). ಈ ನೆನಪಿನಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳೋಣ.

1905ರ ಒಂದೇ ವರ್ಷದಲ್ಲಿ ನಾಲ್ಕು ಮಹಾ ಸಂಶೋಧನೆಗಳು!

ಜರ್ಮನ್ ಮೂಲದ ಈ ಯುವ ವಿಜ್ಞಾನಿಯು ಒಂದೇ ವರ್ಷದಲ್ಲಿ (1905) ವಿಜ್ಞಾನದ ಜಗತ್ತನ್ನು ನಡುಗಿಸುವ ನಾಲ್ಕು ಮಹತ್ವದ ಸಂಶೋಧನೆಗಳನ್ನು ಪೂರ್ತಿ ಮಾಡಿದಾಗ ಎಲ್ಲರೂ ಅಚ್ಚರಿಯಲ್ಲಿ ಮುಳುಗಿಬಿಟ್ಟರು! ಆಗ ಆತನ ವಯಸ್ಸು ಕೇವಲ 26 ಆಗಿತ್ತು! ಒಬ್ಬ ಸಾಮಾನ್ಯ ಬುದ್ಧಿಮತ್ತೆಯ ಹುಡುಗ ಎಂದು ತನ್ನ ವಿದ್ಯಾರ್ಥಿ ಜೀವನದಲ್ಲಿ ಎಲ್ಲರಿಂದಲೂ ಕರೆಸಿಕೊಂಡ ಆತ ಆಧುನಿಕ ಭೌತ ವಿಜ್ಞಾನದ ಅತ್ಯಂತ ಮಹತ್ವದ ನಾಲ್ಕು ಶ್ರೇಷ್ಠವಾದ ಸಂಶೋಧನೆಗಳನ್ನು ಪೂರ್ತಿ ಮಾಡಿದ್ದರು.

ಆ ಸಂಶೋಧನೆಗಳೆಂದರೆ…..
1) ಸಾಪೇಕ್ಷ ಸಿದ್ಧಾಂತ (Theory of Relativity).
2) ಕ್ವಾಂಟಮ್ ಮೆಕಾನಿಕ್ಸ್ ಆಧಾರ ಆಗಿಟ್ಟುಕೊಂಡು ಹಲವು ಜಾಗತಿಕ ಮಟ್ಟದ ಸಂಶೋಧನೆಗಳು.
3) ದ್ರವ್ಯರಾಶಿ ಶಕ್ತಿ ಸಂಬಂಧವನ್ನು ವಿವರಿಸುವ ವಿಶ್ವ ಪ್ರಸಿದ್ಧ ಸಮೀಕರಣ( E= mc2).. ಈ ಸಮೀಕರಣವು ಮುಂದೆ ಅಣು ಬಾಂಬಿನ ಆವಿಷ್ಕಾರಕ್ಕೂ ಕಾರಣವಾಯಿತು!
4) ದ್ಯುತಿ ವಿದ್ಯುತ್ ಪರಿಣಾಮಕ್ಕೆ ಆತನು ಕೊಟ್ಟ ವೈಜ್ಞಾನಿಕವಾದ ವಿವರಣೆ. (Explanation to the Photo Electric Effect). ಈ ಸಂಶೋಧನೆಯು ಮುಂದೆ 1921ರಲ್ಲಿ ಆ ವಿಜ್ಞಾನಿಗೆ ನೊಬೆಲ್ ಬಹುಮಾನ ದೊರೆಯುವಂತೆ ಮಾಡಿತು.

ಅಮೆರಿಕಾದ ಟೈಮ್ಸ್ ಪತ್ರಿಕೆಯು ಮುಂದೆ ಆತನನ್ನು ಶತಮಾನದ ಮಹಾವಿಜ್ಞಾನಿ ಎಂದು ಕರೆಯಿತು! ಆವರ್ತ ಕೋಷ್ಟಕದ ಒಂದು ಪ್ರಮುಖವಾದ ಸಂಶ್ಲೇಷಿತ ಧಾತುವಿಗೆ ಆತನ ಹೆಸರನ್ನು ಇಡಲಾಯಿತು (ಐನ್‌ಸ್ಟೀನಿಯಮ್).

ಜಗತ್ತನ್ನು ಗೊಂದಲದಲ್ಲಿ ಕೆಡವಿದ ಸಾಪೇಕ್ಷ ಸಿದ್ಧಾಂತ!

ಆತನ ನಾಲ್ಕು ಸಂಶೋಧನೆಗಳಿಗೆ ನಾಲ್ಕು ನೊಬೆಲ್ ಬಹುಮಾನ ದೊರೆಯಬೇಕಿತ್ತು ಎಂಬ ಜಗತ್ತಿನ ಹೆಚ್ಚಿನ ವಿಜ್ಞಾನಿಗಳ ಅಭಿಪ್ರಾಯವು ಹರಡಿದ್ದ ಕಾಲ ಅದು. ಆದರೆ ಆತನ ಸಾಪೇಕ್ಷ ಸಿದ್ಧಾಂತವು ಎಲ್ಲೆಡೆ ಭಾರೀ ಚರ್ಚೆಗೆ ಕಾರಣವಾಯಿತು. ಅದು ಯಾರಿಗೂ ಸುಲಭದಲ್ಲಿ ಅರ್ಥ ಆಗದೆ ಹೋದಾಗ ಅದನ್ನು ಅರ್ಥ ಮಾಡಿಸಲು ಸ್ವತಃ ಆಲ್ಬರ್ಟ್ ಐನ್‌ಸ್ಟೀನ್ ಹಲವು ಪ್ರಮುಖ ದೇಶಗಳಿಗೆ ತೆರಳಬೇಕಾಯಿತು! ಆತನ ಹಾಸ್ಯಪ್ರಜ್ಞೆ ಮತ್ತು ಮೊನಚು ಭಾಷೆ ಇರುವ ಭಾಷಣಗಳು ಕೂಡ ಆ ಕಾಲದಲ್ಲಿ ಜಗತ್ತಿನ ಗಮನಸೆಳೆದವು. ಅವುಗಳ ಬಗ್ಗೆ ನೂರಾರು ಹಾಸ್ಯದ ಸಂಗತಿಗಳು ಅಲ್ಲಲ್ಲಿ ಹರಿದಾಡುತ್ತಿದ್ದು ಅವುಗಳಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದು ನಮಗೆ ಅರ್ಥವೇ ಆಗುವುದಿಲ್ಲ!

ಆತನ ಗುಂಗುರು ಕೂದಲು, ದೊಡ್ಡದಾದ ಕಣ್ಣುಗಳು, ಭಾವಾವೇಶದ ಮಾತುಗಳು ಮತ್ತು ತನ್ನ ಬಗ್ಗೆಯೇ ಜೋಕ್ಸ್ ಮಾಡುವ ಪ್ರವೃತ್ತಿ ನಿಜಕ್ಕೂ ಗ್ರೇಟ್. ಒಮ್ಮೆ ಆತನೇ ತನ್ನನ್ನು ‘ಕಾರ್ಟೂನಿಸ್ಟರ ಇಷ್ಟದ ವ್ಯಕ್ತಿತ್ವ’ ಎಂದು ಬಣ್ಣಿಸಿ ಕೊಂಡಿದ್ದಾರೆ!

ಭಾರತದ ಬಗ್ಗೆ ಭಾರೀ ಪ್ರೀತಿ ಮತ್ತು ಗೌರವ

ಆಲ್ಬರ್ಟ್ ಐನ್‌ಸ್ಟೀನ್ ಯಾವತ್ತೂ ಭಾರತಕ್ಕೆ ಬಂದಿರಲಿಲ್ಲ. ಆದರೆ ಭಾರತದ ಹಲವು ಲೆಜೆಂಡ್ ವಿಜ್ಞಾನಿಗಳ ಒಡನಾಟ ಇತ್ತು. ಭಾರತದ ಆಗಿನ ಶ್ರೇಷ್ಠ ವಿಜ್ಞಾನಿ ಆಗಿದ್ದ ಸತ್ಯೇಂದ್ರನಾಥ್ ಬೋಸ್ ಜೊತೆ ಆತನು ಹಲವು ಸಂಶೋಧನೆಗಳನ್ನು ಮಾಡಿದ್ದರು. ಗಾಂಧೀಜಿಯನ್ನು ಅವರು ಎಂದಿಗೂ ಭೇಟಿ ಮಾಡದಿದ್ದರೂ ಅವರ ಬಗ್ಗೆ ಅಪಾರವಾದ ಗೌರವ ಮತ್ತು ಅಚ್ಚರಿ ಹೊಂದಿದ್ದರು. ಒಂದು ತುಂಡು ಬಟ್ಟೆಯನ್ನು ತೊಟ್ಟುಕೊಂಡು ಅವರು ಹೇಗೆ ಭಾರತದಲ್ಲಿ ರಾಷ್ಟ್ರಪಿತ ಆದರು ಅನ್ನೋದೇ ನನಗೆ ವಿಸ್ಮಯ ಎಂದು ಐನ್‌ಸ್ಟೀನ್ ಒಮ್ಮೆ ಹೇಳಿದ್ದಾರೆ. ರಾಷ್ಟ್ರಕವಿ ರವೀಂದ್ರನಾಥ್ ಟ್ಯಾಗೋರ್ ಅವರನ್ನು ಒಮ್ಮೆ ಮಾತ್ರ ಭೇಟಿ ಮಾಡಿದ್ದರು ಮತ್ತು ಆ ಭೇಟಿಯು ಸ್ಮರಣೀಯ ಆಗಿತ್ತು ಎಂದು ವಿಜ್ಞಾನಿ ಹೇಳಿದ್ದರು!

‘ಇಡೀ ಜಗತ್ತಿನ ವಿಜ್ಞಾನ ಮತ್ತು ಗಣಿತವು ಭಾರತಕ್ಕೆ ಋಣಿ ಆಗಿರಬೇಕು. ಏಕೆಂದರೆ ಇಡೀ ಜಗತ್ತಿಗೆ ಕೂಡಿಸುವುದನ್ನು ಕಲಿಸಿಕೊಟ್ಟವರು ಭಾರತೀಯರು! ಜಗತ್ತಿಗೆ ಸಂಖ್ಯೆಗಳನ್ನು, ಬೀಜಗಣಿತವನ್ನು, ಕ್ಯಾಲ್ಕುಲಸ್ ಇವುಗಳನ್ನು ಪರಿಚಯ ಮಾಡಿದ್ದೇ ಭಾರತೀಯರು’ ಎಂದು ಗಟ್ಟಿಯಾಗಿ ಹೇಳಿದವರು ಆಲ್ಬರ್ಟ್ ಐನ್‌ಸ್ಟೀನ್. ಭಾರತೀಯ ಸಂಗೀತದ ಬಗ್ಗೆ ಕೂಡ ಅವರು ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ.

ಅಲೆಮಾರಿಯಾಯಿತು ವಿಜ್ಞಾನಿಯ ಬದುಕು!

ಇಂತಹ ಮೇರು ಸಾಧನೆ ಮಾಡಿದ ವಿಜ್ಞಾನಿಯು ಕೂಡ ಒಂದೇ ಕಡೆ ಸ್ಥಿರವಾಗಿ ನೆಲೆಕಾಣದೆ ದೇಶಾಂತರ ಅಲೆಯಬೇಕಾಯಿತು ಅಂದರೆ ನೀವು, ನಾವು ನಂಬಲೇಬೇಕು. ಜರ್ಮನಿಯಲ್ಲಿ ಹುಟ್ಟಿ ತನ್ನ ಬಾಲ್ಯದ 17 ವರ್ಷಗಳನ್ನು ಕಳೆದ ವಿಜ್ಞಾನಿಯು ಮುಂದೆ ಜರ್ಮನಿ ಮತ್ತು ಜರ್ಮನಿಯ ಪೌರತ್ವವನ್ನು ಕಳೆದುಕೊಂಡರು. ನಾಲ್ಕು ವರ್ಷ ಆ ಮೇಧಾವಿಗೆ ಯಾವ ದೇಶದ ಪೌರತ್ವವೂ ಇಲ್ಲದೆ ತೊಂದರೆ ಎದುರಿಸಿದರು!

ಮುಂದೆ ಸ್ವಿಜರ್ಲ್ಯಾಂಡ್ ಪ್ರವೇಶಿಸಿ ಬಹು ಕಷ್ಟಪಟ್ಟು ಅಲ್ಲಿನ ಪೌರತ್ವವನ್ನು ಪಡೆದುಕೊಂಡರು. ತನ್ನ ಜೀವನದ ದೀರ್ಘ ಅವಧಿಯನ್ನು ವಿಜ್ಞಾನಿಯು ಅಲ್ಲಿಯೇ ಕಳೆದರು. ಅದರ ನಂತರ ಅಮೆರಿಕದಲ್ಲಿ ನೆಲೆನಿಂತರು. ತನ್ನ ಜೀವನದ ಕೊನೆಯ ಭಾಗದಲ್ಲಿ ಮತ್ತೆ ಜರ್ಮನಿಗೆ ಬಂದು ಅಲ್ಲಿಯ ಪೌರರಾದರು. ಹಿಟ್ಲರ್ ಮತ್ತು ನಾಝಿಗಳ ಕಿರುಕುಳವನ್ನು ಕೂಡ ಅನುಭವಿಸಿದರು. ಈ ಎಲ್ಲಾ ನೋವುಗಳ ನಡುವೆ ಕೂಡ ತನ್ನ ಜೀವನೋತ್ಸಾಹ ಮತ್ತು
ಹಾಸ್ಯಪ್ರಜ್ಞೆಗಳನ್ನು ಉಳಿಸಿಕೊಂಡು ಲೆಜೆಂಡ್ ಆದರು.

ತನ್ನ ಸಂಶೋಧನೆಯ ಶ್ರೇಷ್ಠವಾದ ಕೊಡುಗೆಗಳನ್ನು ಮಾನವನ ಕಲ್ಯಾಣಕ್ಕೆ ವಿನಿಯೋಗ ಮಾಡಿ ಈ ವಿಜ್ಞಾನಿಯು 1955ರಲ್ಲಿ ನಿರ್ಗಮಿಸಿದರು.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಮಕ್ಕಳ ಮೇಲೆ ವಿಪರೀತ ನಂಬಿಕೆ ಇಡ್ಬೇಡಿ, ಎಲ್ಲವನ್ನೂ ಸಮರ್ಥಿಸಬೇಡಿ!

Exit mobile version