ಅಂಕಣ
ರಾಜ ಮಾರ್ಗ ಅಂಕಣ : ಶತಮಾನದ ವಿಜ್ಞಾನಿ ಎಂಬ ಖ್ಯಾತಿ ಇತ್ತು; ಆದರೆ, ಅಲೆಮಾರಿಯ ಹಾಗೆ ಬದುಕಬೇಕಾಯಿತು!
ರಾಜ ಮಾರ್ಗ ಅಂಕಣ: ಆಲ್ಬರ್ಟ್ ಐನ್‌ಸ್ಟೀನ್ ಜಗತ್ತು ಕಂಡ ಮಹಾವಿಜ್ಞಾನಿಗಳಲ್ಲಿ ಒಬ್ಬರು. ಅವರಿಗೆ ಶತಮಾನದ ವಿಜ್ಞಾನಿ ಎಂಬ ಬಿರುದಿತ್ತು. ತಮ್ಮ ಸಂಶೋಧನೆ ಮಾತ್ರವಲ್ಲ, ಉತ್ತಮ ನಡವಳಿಕೆಗಳು ಕೂಡಾ ಅವರಿಗೆ ಗೌರವ ತಂದುಕೊಟ್ಟವು. ಅಂಥ ಮಹಾ ಸಾಧಕ ಭಾರತದ ಗೆಳೆಯ ಎನ್ನುವುದೂ ನಮಗೆ ಹೆಮ್ಮೆ.
ಮಹಾ ವಿಜ್ಞಾನಿಯಾದ ಆಲ್ಬರ್ಟ್ ಐನ್‌ಸ್ಟೀನ್ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ! ಆತನ ಮಹಾನ್ ಸಂಶೋಧನೆಗಳು, ಜೀವನೋತ್ಸಾಹ, ಹಾಸ್ಯ ಪ್ರಜ್ಞೆ, ಜಗತ್ತನ್ನು ಪ್ರೀತಿಸಿದ ರೀತಿ… ಇವುಗಳನ್ನು ಗಮನಿಸುತ್ತ ಹೋದಾಗ ನಮಗೆ ಅವರೊಬ್ಬ ದೊಡ್ಡ ಅಚ್ಚರಿಯ ಮೂಟೆಯಾಗಿ ಗೋಚರಿಸುತ್ತಾರೆ! ಆತನ ಒಂದೊಂದು ಸಂಶೋಧನೆಗಳು ಕೂಡ ವಿಶ್ವಮಾನ್ಯತೆಯನ್ನು ಪಡೆದವು. ಮಾರ್ಚ್ 14 ಅವರ ಹುಟ್ಟುಹಬ್ಬ (ಜನನ: ಮಾ. 14, 1879). ಈ ನೆನಪಿನಲ್ಲಿ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳೋಣ.
1905ರ ಒಂದೇ ವರ್ಷದಲ್ಲಿ ನಾಲ್ಕು ಮಹಾ ಸಂಶೋಧನೆಗಳು!
ಜರ್ಮನ್ ಮೂಲದ ಈ ಯುವ ವಿಜ್ಞಾನಿಯು ಒಂದೇ ವರ್ಷದಲ್ಲಿ (1905) ವಿಜ್ಞಾನದ ಜಗತ್ತನ್ನು ನಡುಗಿಸುವ ನಾಲ್ಕು ಮಹತ್ವದ ಸಂಶೋಧನೆಗಳನ್ನು ಪೂರ್ತಿ ಮಾಡಿದಾಗ ಎಲ್ಲರೂ ಅಚ್ಚರಿಯಲ್ಲಿ ಮುಳುಗಿಬಿಟ್ಟರು! ಆಗ ಆತನ ವಯಸ್ಸು ಕೇವಲ 26 ಆಗಿತ್ತು! ಒಬ್ಬ ಸಾಮಾನ್ಯ ಬುದ್ಧಿಮತ್ತೆಯ ಹುಡುಗ ಎಂದು ತನ್ನ ವಿದ್ಯಾರ್ಥಿ ಜೀವನದಲ್ಲಿ ಎಲ್ಲರಿಂದಲೂ ಕರೆಸಿಕೊಂಡ ಆತ ಆಧುನಿಕ ಭೌತ ವಿಜ್ಞಾನದ ಅತ್ಯಂತ ಮಹತ್ವದ ನಾಲ್ಕು ಶ್ರೇಷ್ಠವಾದ ಸಂಶೋಧನೆಗಳನ್ನು ಪೂರ್ತಿ ಮಾಡಿದ್ದರು.
ಆ ಸಂಶೋಧನೆಗಳೆಂದರೆ…..
1) ಸಾಪೇಕ್ಷ ಸಿದ್ಧಾಂತ (Theory of Relativity).
2) ಕ್ವಾಂಟಮ್ ಮೆಕಾನಿಕ್ಸ್ ಆಧಾರ ಆಗಿಟ್ಟುಕೊಂಡು ಹಲವು ಜಾಗತಿಕ ಮಟ್ಟದ ಸಂಶೋಧನೆಗಳು.
3) ದ್ರವ್ಯರಾಶಿ ಶಕ್ತಿ ಸಂಬಂಧವನ್ನು ವಿವರಿಸುವ ವಿಶ್ವ ಪ್ರಸಿದ್ಧ ಸಮೀಕರಣ( E= mc2).. ಈ ಸಮೀಕರಣವು ಮುಂದೆ ಅಣು ಬಾಂಬಿನ ಆವಿಷ್ಕಾರಕ್ಕೂ ಕಾರಣವಾಯಿತು!
4) ದ್ಯುತಿ ವಿದ್ಯುತ್ ಪರಿಣಾಮಕ್ಕೆ ಆತನು ಕೊಟ್ಟ ವೈಜ್ಞಾನಿಕವಾದ ವಿವರಣೆ. (Explanation to the Photo Electric Effect). ಈ ಸಂಶೋಧನೆಯು ಮುಂದೆ 1921ರಲ್ಲಿ ಆ ವಿಜ್ಞಾನಿಗೆ ನೊಬೆಲ್ ಬಹುಮಾನ ದೊರೆಯುವಂತೆ ಮಾಡಿತು.
ಅಮೆರಿಕಾದ ಟೈಮ್ಸ್ ಪತ್ರಿಕೆಯು ಮುಂದೆ ಆತನನ್ನು ಶತಮಾನದ ಮಹಾವಿಜ್ಞಾನಿ ಎಂದು ಕರೆಯಿತು! ಆವರ್ತ ಕೋಷ್ಟಕದ ಒಂದು ಪ್ರಮುಖವಾದ ಸಂಶ್ಲೇಷಿತ ಧಾತುವಿಗೆ ಆತನ ಹೆಸರನ್ನು ಇಡಲಾಯಿತು (ಐನ್‌ಸ್ಟೀನಿಯಮ್).
ಜಗತ್ತನ್ನು ಗೊಂದಲದಲ್ಲಿ ಕೆಡವಿದ ಸಾಪೇಕ್ಷ ಸಿದ್ಧಾಂತ!
ಆತನ ನಾಲ್ಕು ಸಂಶೋಧನೆಗಳಿಗೆ ನಾಲ್ಕು ನೊಬೆಲ್ ಬಹುಮಾನ ದೊರೆಯಬೇಕಿತ್ತು ಎಂಬ ಜಗತ್ತಿನ ಹೆಚ್ಚಿನ ವಿಜ್ಞಾನಿಗಳ ಅಭಿಪ್ರಾಯವು ಹರಡಿದ್ದ ಕಾಲ ಅದು. ಆದರೆ ಆತನ ಸಾಪೇಕ್ಷ ಸಿದ್ಧಾಂತವು ಎಲ್ಲೆಡೆ ಭಾರೀ ಚರ್ಚೆಗೆ ಕಾರಣವಾಯಿತು. ಅದು ಯಾರಿಗೂ ಸುಲಭದಲ್ಲಿ ಅರ್ಥ ಆಗದೆ ಹೋದಾಗ ಅದನ್ನು ಅರ್ಥ ಮಾಡಿಸಲು ಸ್ವತಃ ಆಲ್ಬರ್ಟ್ ಐನ್‌ಸ್ಟೀನ್ ಹಲವು ಪ್ರಮುಖ ದೇಶಗಳಿಗೆ ತೆರಳಬೇಕಾಯಿತು! ಆತನ ಹಾಸ್ಯಪ್ರಜ್ಞೆ ಮತ್ತು ಮೊನಚು ಭಾಷೆ ಇರುವ ಭಾಷಣಗಳು ಕೂಡ ಆ ಕಾಲದಲ್ಲಿ ಜಗತ್ತಿನ ಗಮನಸೆಳೆದವು. ಅವುಗಳ ಬಗ್ಗೆ ನೂರಾರು ಹಾಸ್ಯದ ಸಂಗತಿಗಳು ಅಲ್ಲಲ್ಲಿ ಹರಿದಾಡುತ್ತಿದ್ದು ಅವುಗಳಲ್ಲಿ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದು ನಮಗೆ ಅರ್ಥವೇ ಆಗುವುದಿಲ್ಲ!
ಆತನ ಗುಂಗುರು ಕೂದಲು, ದೊಡ್ಡದಾದ ಕಣ್ಣುಗಳು, ಭಾವಾವೇಶದ ಮಾತುಗಳು ಮತ್ತು ತನ್ನ ಬಗ್ಗೆಯೇ ಜೋಕ್ಸ್ ಮಾಡುವ ಪ್ರವೃತ್ತಿ ನಿಜಕ್ಕೂ ಗ್ರೇಟ್. ಒಮ್ಮೆ ಆತನೇ ತನ್ನನ್ನು ‘ಕಾರ್ಟೂನಿಸ್ಟರ ಇಷ್ಟದ ವ್ಯಕ್ತಿತ್ವ’ ಎಂದು ಬಣ್ಣಿಸಿ ಕೊಂಡಿದ್ದಾರೆ!
ಭಾರತದ ಬಗ್ಗೆ ಭಾರೀ ಪ್ರೀತಿ ಮತ್ತು ಗೌರವ
ಆಲ್ಬರ್ಟ್ ಐನ್‌ಸ್ಟೀನ್ ಯಾವತ್ತೂ ಭಾರತಕ್ಕೆ ಬಂದಿರಲಿಲ್ಲ. ಆದರೆ ಭಾರತದ ಹಲವು ಲೆಜೆಂಡ್ ವಿಜ್ಞಾನಿಗಳ ಒಡನಾಟ ಇತ್ತು. ಭಾರತದ ಆಗಿನ ಶ್ರೇಷ್ಠ ವಿಜ್ಞಾನಿ ಆಗಿದ್ದ ಸತ್ಯೇಂದ್ರನಾಥ್ ಬೋಸ್ ಜೊತೆ ಆತನು ಹಲವು ಸಂಶೋಧನೆಗಳನ್ನು ಮಾಡಿದ್ದರು. ಗಾಂಧೀಜಿಯನ್ನು ಅವರು ಎಂದಿಗೂ ಭೇಟಿ ಮಾಡದಿದ್ದರೂ ಅವರ ಬಗ್ಗೆ ಅಪಾರವಾದ ಗೌರವ ಮತ್ತು ಅಚ್ಚರಿ ಹೊಂದಿದ್ದರು. ಒಂದು ತುಂಡು ಬಟ್ಟೆಯನ್ನು ತೊಟ್ಟುಕೊಂಡು ಅವರು ಹೇಗೆ ಭಾರತದಲ್ಲಿ ರಾಷ್ಟ್ರಪಿತ ಆದರು ಅನ್ನೋದೇ ನನಗೆ ವಿಸ್ಮಯ ಎಂದು ಐನ್‌ಸ್ಟೀನ್ ಒಮ್ಮೆ ಹೇಳಿದ್ದಾರೆ. ರಾಷ್ಟ್ರಕವಿ ರವೀಂದ್ರನಾಥ್ ಟ್ಯಾಗೋರ್ ಅವರನ್ನು ಒಮ್ಮೆ ಮಾತ್ರ ಭೇಟಿ ಮಾಡಿದ್ದರು ಮತ್ತು ಆ ಭೇಟಿಯು ಸ್ಮರಣೀಯ ಆಗಿತ್ತು ಎಂದು ವಿಜ್ಞಾನಿ ಹೇಳಿದ್ದರು!
‘ಇಡೀ ಜಗತ್ತಿನ ವಿಜ್ಞಾನ ಮತ್ತು ಗಣಿತವು ಭಾರತಕ್ಕೆ ಋಣಿ ಆಗಿರಬೇಕು. ಏಕೆಂದರೆ ಇಡೀ ಜಗತ್ತಿಗೆ ಕೂಡಿಸುವುದನ್ನು ಕಲಿಸಿಕೊಟ್ಟವರು ಭಾರತೀಯರು! ಜಗತ್ತಿಗೆ ಸಂಖ್ಯೆಗಳನ್ನು, ಬೀಜಗಣಿತವನ್ನು, ಕ್ಯಾಲ್ಕುಲಸ್ ಇವುಗಳನ್ನು ಪರಿಚಯ ಮಾಡಿದ್ದೇ ಭಾರತೀಯರು’ ಎಂದು ಗಟ್ಟಿಯಾಗಿ ಹೇಳಿದವರು ಆಲ್ಬರ್ಟ್ ಐನ್‌ಸ್ಟೀನ್. ಭಾರತೀಯ ಸಂಗೀತದ ಬಗ್ಗೆ ಕೂಡ ಅವರು ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ.
ಅಲೆಮಾರಿಯಾಯಿತು ವಿಜ್ಞಾನಿಯ ಬದುಕು!
ಇಂತಹ ಮೇರು ಸಾಧನೆ ಮಾಡಿದ ವಿಜ್ಞಾನಿಯು ಕೂಡ ಒಂದೇ ಕಡೆ ಸ್ಥಿರವಾಗಿ ನೆಲೆಕಾಣದೆ ದೇಶಾಂತರ ಅಲೆಯಬೇಕಾಯಿತು ಅಂದರೆ ನೀವು, ನಾವು ನಂಬಲೇಬೇಕು. ಜರ್ಮನಿಯಲ್ಲಿ ಹುಟ್ಟಿ ತನ್ನ ಬಾಲ್ಯದ 17 ವರ್ಷಗಳನ್ನು ಕಳೆದ ವಿಜ್ಞಾನಿಯು ಮುಂದೆ ಜರ್ಮನಿ ಮತ್ತು ಜರ್ಮನಿಯ ಪೌರತ್ವವನ್ನು ಕಳೆದುಕೊಂಡರು. ನಾಲ್ಕು ವರ್ಷ ಆ ಮೇಧಾವಿಗೆ ಯಾವ ದೇಶದ ಪೌರತ್ವವೂ ಇಲ್ಲದೆ ತೊಂದರೆ ಎದುರಿಸಿದರು!
ಮುಂದೆ ಸ್ವಿಜರ್ಲ್ಯಾಂಡ್ ಪ್ರವೇಶಿಸಿ ಬಹು ಕಷ್ಟಪಟ್ಟು ಅಲ್ಲಿನ ಪೌರತ್ವವನ್ನು ಪಡೆದುಕೊಂಡರು. ತನ್ನ ಜೀವನದ ದೀರ್ಘ ಅವಧಿಯನ್ನು ವಿಜ್ಞಾನಿಯು ಅಲ್ಲಿಯೇ ಕಳೆದರು. ಅದರ ನಂತರ ಅಮೆರಿಕದಲ್ಲಿ ನೆಲೆನಿಂತರು. ತನ್ನ ಜೀವನದ ಕೊನೆಯ ಭಾಗದಲ್ಲಿ ಮತ್ತೆ ಜರ್ಮನಿಗೆ ಬಂದು ಅಲ್ಲಿಯ ಪೌರರಾದರು. ಹಿಟ್ಲರ್ ಮತ್ತು ನಾಝಿಗಳ ಕಿರುಕುಳವನ್ನು ಕೂಡ ಅನುಭವಿಸಿದರು. ಈ ಎಲ್ಲಾ ನೋವುಗಳ ನಡುವೆ ಕೂಡ ತನ್ನ ಜೀವನೋತ್ಸಾಹ ಮತ್ತು
ಹಾಸ್ಯಪ್ರಜ್ಞೆಗಳನ್ನು ಉಳಿಸಿಕೊಂಡು ಲೆಜೆಂಡ್ ಆದರು.
ತನ್ನ ಸಂಶೋಧನೆಯ ಶ್ರೇಷ್ಠವಾದ ಕೊಡುಗೆಗಳನ್ನು ಮಾನವನ ಕಲ್ಯಾಣಕ್ಕೆ ವಿನಿಯೋಗ ಮಾಡಿ ಈ ವಿಜ್ಞಾನಿಯು 1955ರಲ್ಲಿ ನಿರ್ಗಮಿಸಿದರು.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಮಕ್ಕಳ ಮೇಲೆ ವಿಪರೀತ ನಂಬಿಕೆ ಇಡ್ಬೇಡಿ, ಎಲ್ಲವನ್ನೂ ಸಮರ್ಥಿಸಬೇಡಿ!
ಅಂಕಣ
ಸೈಬರ್ ಸೇಫ್ಟಿ ಅಂಕಣ: ಆಧಾರ್‌ಗೆ ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರ ಆಗಬಲ್ಲದೇ?
ಆಧಾರ್‌ಗೆ ಸಂಬಂಧಿಸಿದ ಗೌಪ್ಯತೆ ಮತ್ತು ಭದ್ರತಾ ಕಾಳಜಿಗಳಿಗೆ ಸಂಭಾವ್ಯ ಪರಿಹಾರವಾಗಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಪ್ರಸ್ತಾಪಿಸಲಾಗಿದೆ. ಇದು ಸುರಕ್ಷಿತ ಹೌದು. ಆದರೆ ಇದು ಕಾರ್ಯರೂಪಕ್ಕೆ ಬರುವವರೆಗೆ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.
ಆಧಾರ್ ನಮ್ಮ ದಿನನಿತ್ಯದ ವಹಿವಾಟಿನಲ್ಲಿ ಪ್ರಮುಖ ಪಾತ್ರವಹಿಸಿದೆ. ಗುರುತಿನ ಚೀಟಿಯಾಗಿ, ಅಡ್ರಸ್ ಫ್ರೂಫ್ ಆಗಿ, ಮುಖ್ಯವಾಗಿ ಭಾರತೀಯ ಪೌರತ್ವವನ್ನು ದೃಢೀಕರಿಸುವ ದಾಖಲೆಯಾಗಿ ಬಳಕೆಯಲ್ಲಿದೆ. ಆಧಾರ್ ಒಂದು ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯಾಗಿದ್ದು, ಇದನ್ನು 2009ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು. ಇದು ಭಾರತದ ಎಲ್ಲಾ ಪ್ರಜೆಗಳಿಗೆ ಅವರ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಡೇಟಾವನ್ನು ಆಧರಿಸಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಒದಗಿಸುತ್ತದೆ. ವೈಯಕ್ತಿಕ ಡೇಟಾದ ಗೌಪ್ಯತೆ ಮತ್ತು ಸುರಕ್ಷತೆಯ ಮೇಲಿನ ಕಾಳಜಿಯಿಂದಾಗಿ, ಆರಂಭದಲ್ಲಿ ಆಧಾರ್ ಬಳಕೆಯ ಬಗ್ಗೆ ಅನೇಕ ಅನುಮಾನಗಳಿದ್ದವು. ಅದೇ ಸಮಯದಲ್ಲಿ ಬಂದ ವರ್ಲ್ಡ್ ಎಕನಾಮಿಕ್ ಫೋರಂನ 2019ರ ಜಾಗತಿಕ ರಿಸ್ಕ್ ವರದಿಯ ಪ್ರಕಾರ, 2018ರಲ್ಲಿ ಆದ ಆಧಾರ್‌ನ ಮಾಹಿತಿ ಸೋರಿಕೆ ಪ್ರಪಂಚದಲ್ಲೇ ಅತಿ ದೊಡ್ಡ ಮಾಹಿತಿ ಸೋರಿಕೆ. ಆಗಸ್ಟ್ 2017 ಮತ್ತು ಜನವರಿ 2018ರ ನಡುವೆ, ಸುಮಾರು 110 ಕೋಟಿ ಭಾರತೀಯರ ಆಧಾರ್ ಸಂಖ್ಯೆಗಳು, ಹೆಸರುಗಳು, ಇಮೇಲ್ ವಿಳಾಸಗಳು, ಭೌತಿಕ ಸ್ಥಳಗಳು, ಫೋನ್ ಸಂಖ್ಯೆಗಳು ಮತ್ತು ಛಾಯಾಚಿತ್ರಗಳು ಡೇಟಾ ಉಲ್ಲಂಘನೆಗೆ ಗುರಿಯಾಗಿತ್ತು ಎಂದು ವಿಶ್ವದ ದೊಡ್ಡ ಆಂಟಿವೈರಸ್ ಸಂಸ್ಥೆಗಳಲ್ಲಿ ಒಂದಾದ ಅವಾಸ್ಟ್ ತನ್ನ ವರದಿಯಲ್ಲಿ ಹೇಳಿದೆ.
ಈ ಕಳವಳಗಳಿಗೆ ಪ್ರತಿಕ್ರಿಯೆಯಾಗಿ, ಭಾರತ ಸರ್ಕಾರವು 2019ರಲ್ಲಿ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯನ್ನು ಪರಿಚಯಿಸಿತು. ಇದು ಭಾರತದಲ್ಲಿ ವೈಯಕ್ತಿಕ ಡೇಟಾದ ಸಂಗ್ರಹಣೆ, ಬಳಕೆ ಮತ್ತು ವರ್ಗಾವಣೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಮಸೂದೆಯು ಪ್ರಸ್ತುತ ಪರಿಶೀಲನೆಯಲ್ಲಿದೆ ಮತ್ತು ಇನ್ನೂ ಕಾನೂನಾಗಿ ಅಂಗೀಕಾರವಾಗಲಿಲ್ಲ. ಅದನ್ನು ಪರಿಷ್ಕರಿಸಿ 2022ರಲ್ಲಿ ಸರ್ಕಾರ ಹೊಸದಾಗಿ ಮಸೂದೆಯನ್ನು ಮಂಡಿಸಿದೆ.
ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸರ್ಕಾರಿ ವಿಭಾಗಗಳಿಂದ ಮಾಹಿತಿ ಸೋರಿಕೆಯು ಕ್ರಮವಾಗಿ 2020ರಲ್ಲಿ 10, 2021ರಲ್ಲಿ 5 ಮತ್ತು 2022ರಲ್ಲಿ 7 ಎಂದು ಮಿನಿಸ್ಟರಿ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ (MeitY)ಯ ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಮಾರ್ಚ್ ತಿಂಗಳಿನ ಎರಡನೆಯ ವಾರದಲ್ಲಿ ನೀವೂ ಒಂದು ವರದಿ ಓದಿರಬಹುದು. ದೆಹಲಿ ಪೊಲೀಸರು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ(UIDAI) ಆಧಾರ್ ವ್ಯವಸ್ಥೆಯಲ್ಲಿನ ಹಲವಾರು ದೋಷಗಳನ್ನು ವಂಚಕರು ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಸೂಚನೆ ನೀಡಿದ್ದಾರೆ. ಬ್ಯಾಂಕ್ ವಂಚನೆ ಸೇರಿದಂತೆ ಕೆಲವು ಪ್ರಕರಣಗಳ ತನಿಖೆಯಲ್ಲಿ, ಆಧಾರ್ ಐಡಿಗಳನ್ನು ರಚಿಸುವಾಗ ಮುಖದ ಬಯೋಮೆಟ್ರಿಕ್‌ಗಳನ್ನು ಹೊಂದಿಕೆ ಮಾಡುತ್ತಿಲ್ಲ ಎಂಬ ಅಂಶ ತಿಳಿದುಬಂತು ಎಂದು ಹೇಳಿದ್ದಾರೆ. ಇದರಿಂದ ಆಧಾರ್‌ನಲ್ಲಿರುವ ಜನರ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿಲ್ಲ ಎಂಬ ಚರ್ಚೆ ಮತ್ತೆ ಹೊಗೆ ಆಡುತ್ತಿದೆ.
ಆಧಾರ್ ಆಧಾರಿತ ಫಿಂಗರ್‌ಪ್ರಿಂಟ್ ದೃಢೀಕರಣ ಮತ್ತು ವಂಚನೆಯ ಪ್ರಯತ್ನಗಳನ್ನು ವೇಗವಾಗಿ ಪತ್ತೆಹಚ್ಚಲು ಎಐ/ಎಂಎಲ್ ಆಧಾರಿತ ಹೊಸ ಭದ್ರತಾ ತಂತ್ರಜ್ಞಾನವನ್ನು ಆಂತರಿಕವಾಗಿ ಅಭಿವೃದ್ಧಿಪಡಿಸಿದೆ.
ಈಗ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಬೇಕಾಗಿರುವುದರಿಂದ, ಆಧಾರ್‌ನ ಸುರಕ್ಷತಾ ನ್ಯೂನತೆಗಳು ಸೈಬರ್ ಕ್ರಿಮಿನಲ್‌ಗಳಿಗೆ ಪ್ಯಾನ್ ಮಾಹಿತಿಯನ್ನೂ ಬಹಿರಂಗಗೊಳಿಸುವ ಅಪಾಯವಿದೆ. ಈ ಸಂದರ್ಭದಲ್ಲಿ ನಿಮಗೆ ಸುಪ್ರೀಂ ಕೋರ್ಟಿನ ಒಂದು ತೀರ್ಪಿನ ಬಗ್ಗೆ ನೆನಪಿಸುತ್ತೇನೆ. ಸುಪ್ರೀಂ ಕೋರ್ಟ್‌ನ ಪ್ರಕಾರ ಯಾರೂ ಆಧಾರ್‌ಗೆ ಬೇಡಿಕೆ ಇಡುವಂತಿಲ್ಲ, ಬ್ಯಾಂಕ್‌ಗಳಿಗೂ ಬೇಡ. ನೀವು ಬೇರೆ ಯಾವುದೇ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆಗಳನ್ನು ಬಳಸಬಹುದು. DBT (ನೇರ ಲಾಭ ವರ್ಗಾವಣೆ) ಫಲಾನುಭವಿಯ ಹೊರತು ನೀವು ಆಧಾರ್ ಅನ್ನು ಹಂಚಿಕೊಳ್ಳಬೇಕಾಗಿಲ್ಲ ಎಂದು UIDAI ಹೇಳುತ್ತದೆ. ಅಷ್ಟು ಬೇಕಾದರೆ, ನೀವು ನಿಮ್ಮ ಆಧಾರ್‌ನ ಮಧ್ಯದ ಎಂಟು ಅಂಕೆಗಳನ್ನು ಮಸಕುಗೊಳಿಸಿ ಹಂಚಿಕೊಳ್ಳಬಹುದು. ಯಾರಾದರೂ ಒತ್ತಾಯಿಸಿದರೆ, ಇದರ ಬಗ್ಗೆ UIDAI ಏನು ಹೇಳುತ್ತದೆ (https://uidai.gov.in/kn/) ಎಂಬುದನ್ನು ಅವರಿಗೆ ತಿಳಿಸಿ ಹೇಳಿ.
ಆಧಾರ್‌ಗೆ ಸಂಬಂಧಿಸಿದ ಗೌಪ್ಯತೆ ಮತ್ತು ಭದ್ರತಾ ಕಾಳಜಿಗಳಿಗೆ ಸಂಭಾವ್ಯ ಪರಿಹಾರವಾಗಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಪ್ರಸ್ತಾಪಿಸಲಾಗಿದೆ. ಈ ಬ್ಲಾಕ್ ಚೈನ್ ತಂತ್ರಜ್ಞಾನ ಎಂದರೇನು?
ಬ್ಲಾಕ್‌ಚೈನ್ ವಿಕೇಂದ್ರೀಕೃತ ಡಿಜಿಟಲ್ ಲೆಡ್ಜರ್ ಆಗಿದ್ದು ಅದರಲ್ಲಿ ಡೇಟಾವನ್ನು ಸುರಕ್ಷಿತ ಮತ್ತು ಟ್ಯಾಂಪರ್-ಪ್ರೂಫ್ ರೀತಿಯಲ್ಲಿ ಸಂಗ್ರಹಿಸಬಹುದು. ಮುಖ್ಯವಾಗಿ, ಬ್ಲಾಕ್‌ಚೈನ್ ಬಳಸುವ ಮೂಲಕ, ಆಧಾರ್‌ನಲ್ಲಿ ಸಂಗ್ರಹವಾಗಿರುವ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಬಹುದು ಮತ್ತು ಹ್ಯಾಕಿಂಗ್ ಮತ್ತು ಟ್ಯಾಂಪರಿಂಗ್‌ಗೆ ನಿರೋಧಕವಾದ ರೀತಿಯಲ್ಲಿ ಸುರಕ್ಷಿತಗೊಳಿಸಬಹುದು.
ಇದನ್ನೂ ಓದಿ: ಹೊಸ ಅಂಕಣ: ಸೈಬರ್ ಸೇಫ್ಟಿ: ಜಾಣರಾಗಿ, ಜಾಗರೂಕರಾಗಿರಿ!
ಒಬ್ಬ ವ್ಯಕ್ತಿಯ ಆಧಾರ್‌ನಲ್ಲಿ ಅಡಕವಾಗಿರುವ ವೈಯಕ್ತಿಕ ಮಾಹಿತಿ ಬ್ಲಾಕ್‌ಚೈನಿನಲ್ಲಿದ್ದರೆ ಆ ಸಂಗ್ರಹವನ್ನು ಭೇದಿಸಲು ಮತ್ತು ಬದಲಾಯಿಸಲು ಹ್ಯಾಕರ್‌ಗಳಿಗೆ ಬಹಳ ಕಷ್ಟವಾಗಿರುತ್ತದೆ. ಮಾಹಿತಿಯ ಸೋರಿಕೆ, ಡೇಟಾ ಉಲ್ಲಂಘನೆ ಮತ್ತು ಗುರುತಿನ ಕಳ್ಳತನದ ಅಪಾಯವನ್ನು ಸಮರ್ಥವಾಗಿ ಕಡಿಮೆ ಮಾಡುತ್ತದೆ. ಆಧಾರ್‌ನಲ್ಲಿ ಸಂಗ್ರಹವಾಗಿರುವ ಡೇಟಾಗೆ ಮಾಡಿದ ಬದಲಾವಣೆಗಳ ಬಗ್ಗೆ ಬ್ಲಾಕ್‌ಚೈನ್ ಟ್ಯಾಂಪರ್-ಪ್ರೂಫ್ ದಾಖಲೆಯನ್ನು ರಚಿಸುವ ಮೂಲಕ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.
ಬ್ಲಾಕ್‌ಚೈನ್ ತಂತ್ರಜ್ಞಾನ ಹಸ್ತಚಾಲಿತ ಪರಿಶೀಲನೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಡೇಟಾದಲ್ಲಿನ ದೋಷಗಳು ಮತ್ತು ಅಸಂಗತತೆಗಳ ಅಪಾಯವನ್ನು ಕಡಿಮೆ ಮಾಡಿ ಆಧಾರ್‌ನ ದಕ್ಷತೆ, ನಿಖರತೆಯನ್ನು ಹೆಚ್ಚಿಸುತ್ತದೆ.
ಆಧಾರ್‌ಗೆ ಬ್ಲಾಕ್‌ಚೈನ್ ತಂತ್ರಜ್ಞಾನದ ಆಧಾರವನ್ನು ಕೊಡಲು ಪರಿಗಣಿಸಬೇಕಾದ ಕೆಲವು ಅಂಶಗಳು:
- ಇದಕ್ಕೆ ಹೊಸ ಪ್ರೋಟೋಕಾಲ್‌ಗಳು ಮತ್ತು ಬೇಕಾದ ಮೂಲಸೌಕರ್ಯಗಳ ಅಭಿವೃದ್ಧಿಯ ಅವಶ್ಯಕತೆ ಮತ್ತು ಭಾರತ ಸರ್ಕಾರ, ಖಾಸಗಿ ಕಂಪನಿಗಳು ಮತ್ತು ನಾಗರಿಕರ ಸಹಕಾರದ ಅಗತ್ಯವಿರುತ್ತದೆ.
- ಬ್ಲಾಕ್‌ಚೈನ್ ತಂತ್ರಜ್ಞಾನದ ವಿಸ್ತರತೆ (scalability) ಮತ್ತು ಕಾರ್ಯಕ್ಷಮತೆ, ವಿಶೇಷವಾಗಿ ಆಧಾರ್‌ನಷ್ಟು ದೊಡ್ಡ ವ್ಯವಸ್ಥೆಯಲ್ಲಿ ಇದುವರೆಗೂ ಯಾರೂ ಪರೀಕ್ಷಿಸಿಲ್ಲ.
- ಆಧಾರ್‌ಗಾಗಿ ಬ್ಲಾಕ್‌ಚೈನ್ ಅನ್ನು ಬಳಸಲು ಕಾನೂನು ಮತ್ತು ನಿಯಂತ್ರಕಗಳ ವ್ಯಾಪ್ತಿ ಮತ್ತು ಪರಿಣಾಮಗಳು, ಜೊತೆಗೆ ಮುಖ್ಯವಾಗಿ ಡೇಟಾ ರಕ್ಷಣೆ ಮತ್ತು ಗೌಪ್ಯತೆ ಕಾನೂನುಗಳಿಗೆ ಸಂಬಂಧಿಸಿದಂತೆ ಖಚಿತಪಡಿಸಬೇಕು.
ಇದೆಲ್ಲಾ ಕಾರ್ಯರೂಪಕ್ಕೆ ಬರುವವರೆಗೆ UIDAIಯ mAadhaar ಆಪ್ ಬಳಸಿಕೊಳ್ಳಿ. ಆಂಡ್ರಾಯ್ಡ್ ಮತ್ತು ಐಫೋನುಗಳಿಗೆ ಲಭ್ಯ. ಅನವಶ್ಯಕವಾಗಿ ಎಲ್ಲೆಂದರಲ್ಲಿ ಆಧಾರ್ ಬಳಸಬೇಡಿ. ನಿಮ್ಮ ಜಾಗ್ರತೆಯಲ್ಲಿ ನೀವಿರಿ.
ಇದನ್ನೂ ಓದಿ: ಗ್ಲೋಕಲ್ ಲೋಕ ಅಂಕಣ: ಎಐ ಇದೆ, ಚಾಟ್ ಜಿಪಿಟಿ ಬಂದಿದೆ, ಮುಂದೇನು?
ಅಂಕಣ
ಭಾವಲೋಕದೊಳ್.. : ಈ ಹಾಡೆಂದರೆ, ಬದುಕನು ರಮಿಸೋ ತಾಯಮ್ಮ, ಹೃದಯದ ಮಾತಿನ ಗುಂಗಮ್ಮ!
ಭಾವಲೋಕದೊಳ್: ಈ ಹಾಡುಗಳೆಂದರೆ ಒಂಥರಾ ಮಗು, ಒಂಥರಾ ನಗು, ಇನ್ನೊಂದು ಥರಾ ಹುಚ್ಚುಹಿಡಿಸೋ ಗುಂಗು. ಎದೆಯೊಳಗಿನ ಎಲ್ಲ ಭಾವನೆಗಳನ್ನು ಅರೆದು ಹೊಯ್ದ ಸಾಲು..
ಕೆಲವೊಂದು ಹಾಡುಗಳೆ ಹಾಗೇ ಅಲ್ವಾ? ಗೊತ್ತಿಲ್ಲದೆ ಮನಸ್ಸಿನಾಳಕ್ಕೆ ಇಳಿದುಬಿಡುತ್ತವೆ. ಎಲ್ಲೋ ಒಮ್ಮೆ ಕೇಳಿದ ಸಾಲುಗಳೇ ಎದೆಗವಚಿಕೊಂಡು ಕಾಡಲು ಶುರುವಿಟ್ಟುಬಿಡುತ್ತದೆ. ಹಾಡಿನ ಭಾವ, ಎದೆಯಾಳದ ಸಾಹಿತ್ಯ, ಮನಮಿಡಿಯುವ ಸಂಗೀತ, ಸ್ವರ ಮೀಟುವ ನಾದತಂತಿಗಳು, ಹಾಡುಗನ ಶೃತಿಯ ಲಹರಿಯಲ್ಲೊಂದು ಗಟ್ಟಿ ಸೆಳೆತ, ಕಣ್ಣಿಗೆ ಕಟ್ಟುವ ಕಲ್ಪನೆಗಳು ಕಣ್ಣಲ್ಲಿ ನೀರು ಜಿನುಗಿಸಿ ಎದೆ ಭಾರ ಇಳಿಸಿ ಮನಸ್ಸಿಗೊಂದು ಮುದ ನೀಡುತ್ತದೆ.
ನೋವಿರಲಿ, ನಗುವಿರಲಿ, ಕಷ್ಟದ ದಿನಗಳಿರಲಿ, ಸಂಭ್ರಮದ ಸಡಗರವಿರಲಿ, ವಿಷಾದದ ಆಕ್ರಂದನವಿರಲಿ, ಸೋಲಿನ ಹತಾಶೆಯಿರಲಿ, ಗೆಲುವಿನ ಉನ್ಮಾದವಿರಲಿ ಒಂಟಿತನದ ಬೇಸರವಿರಲಿ, ಪ್ರೀತಿಯ ಅಪ್ಪುಗೆಯಿರಲಿ, ಸ್ನೇಹದ ಒಡನಾಟವಿರಲಿ, ಪ್ರಕೃತಿಯ ನಿರ್ಲಿಪ್ತ ಶಾಂತಿಯಿರಲಿ, ಅದು ಯಾವುದೇ ಭಾವವಿದ್ದರೂ ಮುದ್ದು ಮಗುವಿಗೆ ಅಮ್ಮನ ಮಡಿಲು ಬೇಕೆನಿಸುವಂತೆ ನಮ್ಮಿಷ್ಟದ ಹಾಡೊಂದು ಆಗಾಗ ಭಾವಬದುಕಿಗೆ ಬೇಕೆನಿಸುತ್ತದೆ. ಕಿವಿ ಹಾಡಿನ ಸಾಲುಗಳ ಏರಿಳಿತ ಆಲಿಸುತ್ತಿದ್ದರೆ ಹೃದಯದೊಳಗಿನ ಭಾವ ತರಂಗ ತಲೆಯಾಡಿಸುತ್ತಿರುತ್ತದೆ.
ಕೆಲವೊಂದು ಹಾಡುಗಳಂತೂ ನನಗಾಗೇ ಬರೆದಿರೋದು ಅನಿಸುತ್ತದೆ. ಹಾಡಿನ ಸಾಹಿತ್ಯ ನನ್ನ ಜೀವನದ ಪ್ರತಿಕನ್ನಡಿ ಅನಿಸುತ್ತದೆ. ಹಾಡಿನ ಸಾಹಿತಿ ಕತ್ತಲೆಯ ಮರೆಯಲ್ಲಿ ನನ್ನ ಬದುಕನ್ನೇ ಕದ್ದು ನೋಡಿ ಬಿಳಿ ಹಾಳೆಯ ಮೇಲೆ ಸಾಲುಗಳಾಗಿ ಗೀಚಿ ಹಾಡಾಗಿ ಹೊರತಂದಿರುವನೇನೋ ಅನಿಸುತ್ತದೆ. ಎಲ್ಲೋ ಹುಡುಕುತ್ತಿರುವ ಪ್ರಶ್ನೆಗಳಿಗೆ ಯಾವುದೋ ಸಿನಿಮಾದ ಯಾವುದೋ ಹಾಡು ಉತ್ತರ ನೀಡುತ್ತದೆ. ಸಾವಿರಾರು ಸಿನಿಮಾದ ಲಕ್ಷಾಂತರ ಹಾಡುಗಳ ಕೋಟ್ಯಾಂತರ ಸಾಲುಗಳಿದ್ದರೂ ನಮ್ಮಿಷ್ಟದ ಹಾಡಿನ ಸಾಲು ಮಾತ್ರ ನನ್ನದೇ ಎನಿಸುತ್ತದೆ.
ಒಂದು ಹಾಡಿಗೆ ಅದೆಂಥ ಶಕ್ತಿ ಇದೆ ಗೊತ್ತಾ!? ಒಂದು ಹಾಡು, ಕೈಕಟ್ಟಿ ಕೂತು ಕಣ್ಣಿರಾದಾಗ ಬೆನ್ನು ತಟ್ಟಿ ನಡೆ ಮುಂದೆ ಅಂತ ಮುನ್ನಡೆಸುತ್ತದೆ. ಪ್ರೀತಿಯ ಸೋಲಿಗೆ ಪಕ್ಕದಲ್ಲೆ ಕೂತು ಸಾಂತ್ವನವಾಗುತ್ತದೆ. ಜೋಳಿಗೆ ತುಂಬ ಕಷ್ಟ ತುಂಬಿರುವ ಬದುಕಿಗೆ ಸಾಧನೆಯ ಶಿಖರ ಏರುವ ಧೈರ್ಯ ತುಂಬಿಸುತ್ತದೆ, ಸಿಹಿ ಖುಷಿಯ ಕ್ಷಣಗಳನ್ನು ಸಂತೋಷ ಭರಿತ ಹಾಡೊಂದು ಮತ್ತಷ್ಟು ಹೆಚ್ಚಿಸುತ್ತದೆ, ಪ್ರೀತಿಯಲ್ಲಿ ಮುಳುಗಿದ ಯೌವ್ವನದ ಮನಸ್ಸಿಗೆ ಪ್ರೇಮಗೀತೆಯೊಂದು ಮತ್ತಷ್ಟು ಮುದ ನೀಡುತ್ತದೆ, ಕೋಪದ ಕ್ರೌರ್ಯದಲ್ಲಿ ಹಾಡಿನ ಸಾಲೊಂದು ಜ್ವಾಲಾಮುಖಿ ಏರಿಸುತ್ತದೆ. ಎಂದೋ ನಡೆದ ಘಟನೆಗಳ ನೆನಪುಗಳು ಪರದೆಯ ಮೇಲಿನ ಚಿತ್ರದಂತೆ ಕಣ್ಣ ಮುಂದೆ ಓಡುತ್ತಿರುತ್ತದೆ. ಹೀಗೆ ಪ್ರತಿ ಘಟನೆಗಳು ಮನುಷ್ಯನೊಳಗಿನ ಯಾವುದೋ ಭಾವವನ್ನು ಹಾಡಾಗಿ ಹಾಡಿಸುತ್ತದೆ.
ಸಂಗೀತ ಗೊತ್ತಿಲ್ಲದವನೂ ಕೆಲವು ಹಾಡುಗಳಿಗೆ ತಲೆಯಾಡಿಸುತ್ತಾ ತಲ್ಲೀನನಾಗುತ್ತಾನೆಂದರೆ ಅದು ಹಾಡಿನ ಶಕ್ತಿ, ಸಂಗೀತದ ಮಹಿಮೆ. ಅಂದಿನ ಗ್ರಾಮೋಫೋನ್, ಟೇಪ್ ರೆಕಾರ್ಡರ್ ಕ್ಯಾಸೆಟ್ಸ್‌ನಿಂದ ಹಿಡಿದು ಇವತ್ತಿನ ಬ್ಲೂಟೂತ್,
ಹೆಡ್‌ಫೋನ್, ಇಯರ್‌ಫೋನ್‌ವರೆಗೂ ಹಾಡುಗಳು ಬದಲಾಗಿವೆ. ಹಾಡುಗಳ ಶೈಲಿಯು ಬದಲಾಗಿದೆ, ಹಾಡು ಕೇಳುವ ಸಾಧನಗಳು ಬದಲಾಗಿದೆ. ಆದರೆ ಹಾಡು ಕೇಳುವುದು ಮಾತ್ರ ಬದಲಾಗಿಲ್ಲ. ಯಾಕೆಂದರೆ ಹಾಡು, ಸಂಗೀತ ಅಂತ್ಯವೇ ಇಲ್ಲದ ನಿರಂತರ!…
ಹಾಡಿಗೆ ಭಾಷೆ ಮುಖ್ಯ ಅಲ್ಲ ಭಾವನೆ ಮುಖ್ಯ, ಎಷ್ಟೋ ಸಲ ಹಾಡಿನ ಸಾಹಿತ್ಯ ಅರ್ಥವಾಗದಿದ್ದರೂ ಅದರ ನಾದಕ್ಕೆ ಮನಸ್ಸು ಸೋತು ಹೋಗಿರುತ್ತದೆ. ವಿಶ್ವದಲ್ಲಿ ಅದೆಷ್ಟೊ ಭಾಷೆಗಳು, ಭಾಷೆಗೆ ತಕ್ಕಂತೆ ಸಂಗೀತ, ಸಂಗೀತಕ್ಕೆ ತಕ್ಕಂತೆ ಸಾಹಿತ್ಯ, ಸಾಹಿತ್ಯಕ್ಕೆ ತಕ್ಕಂತೆ ಹೆಜ್ಜೆಯ ಗೆಜ್ಜೆಗಳಿವೆ. ಹಿಂದೂಸ್ತಾನಿ, ಕರ್ನಾಟಿಕ್ ಶಾಸ್ತ್ರೀಯ ಸಂಗೀತ, ಜಾನಪದ ಸಂಗೀತ, ವೆಸ್ಟರ್ನ್ ಮ್ಯೂಸಿಕ್, ರಾಕ್ ಮ್ಯೂಸಿಕ್, ಪಾಪ್ ಮ್ಯೂಸಿಕ್, ರ‍್ಯಾಪ್ ಸಾಂಗ್ಸ್, ಭಾವಗೀತೆಗಳು, ಗಝಲ್, ಲಾವಣಿ, ಭಾಂಗ್ರಾ, ಸೂಫಿ, ಡಿಜೆ ಹೀಗೆ ನೂರಾರು ಬಗೆಯ ಶೈಲಿಗಳು ಸಂಗೀತದ ಎಲ್ಲೆಗಳನ್ನು ಮೀರಿ ನಿಂತಿವೆ.
ಪ್ರತಿಸಲ ಕೇವಲ ತನ್ಮಯತೆಗೆ ಅಲ್ಲದೇ ಯಾವುದೋ ಕೆಲಸ ಮಾಡುವಾಗ ಪ್ಲೇ ಆಗುವ ಹಳೇ ಹಾಡುಗಳು, ಕಾರ್‌ನಲ್ಲಿ ಹೋಗುವಾಗ ಬರುವ ಎಫ್ ಎಂನ ಹಾಡುಗಳು, ರೆಸ್ಟೊರೆಂಟ್‌ನಲ್ಲಿನ ಸಣ್ಣ ದನಿಯ ಹಾಡುಗಳು, ಹಬ್ಬ, ಜಾತ್ರೆಗಳಲ್ಲಿ ಹಾಕುವ ಜೋರು ದನಿಯ ಹಾಡುಗಳು ಬೋರ್ ಎನಿಸದೆ ಆ ಕ್ಷಣಗಳನ್ನು ಎಂಗೇಜ್ ಮಾಡಿಸುತ್ತದೆ. ಒಂಟಿ ಪಯಣದಲ್ಲೋ, ಮುಸ್ಸಂಜೆಯ ಮಳೆಯಲ್ಲೊ, ಕಡಲ ತೀರದ ಹೆಜ್ಜೆಯಲ್ಲೊ, ಆಗಸದ ಹಾರಾಟದಲ್ಲೊ,
ಒಂದು ಲಾಂಗ್ ಡ್ರೈವ್‌ನಲ್ಲೊ ಕಿವಿಗೆ ಹಾಡೊಂದು ಬೀಳುತ್ತಿದ್ದರೆ, ಸುತ್ತಲಿನ ಪ್ರಪಂಚವನ್ನೆ ಮರೆತು ನಮ್ಮೊಳಗೆ ಕಳೆದುಹೋಗುತ್ತೇವೆ.
ದೇಹವನ್ನು ಬದುಕಿಸುವುದು ನೀರು, ನಿದ್ರೆ, ಆಹಾರ
ಮನಸ ಬದುಕಿಸುವುದು ಸಂಗೀತ, ಸಾಹಿತ್ಯ, ಸಂಚಾರ….
ಇದನ್ನೂ ಓದಿ : ಭಾವಲೋಕದೊಳ್ ಅಂಕಣ : ನೆನಪು, ಮರೆವುಗಳ ಮಾಯಾಜಾಲ; ಕೆಲವನ್ನು ಮರೆತೆನೆಂದರೂ ಮರೆಯಲಿ ಹೇಗೆ?
ಅಂಕಣ
ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-7, ನಿಮಗೆ ಸ್ಫೂರ್ತಿ ನೀಡುವ ಮೂರು ಘಟನೆಗಳು!
ರಾಜ ಮಾರ್ಗ ಅಂಕಣ : ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ. ಪರೀಕ್ಷೆಗೆ ತೆರಳುವ ಮುನ್ನ ಪ್ರತಿ ದಿನ ಈ ಮೂವರು ಸಾಧಕರನ್ನು ನೆನಪು ಮಾಡಿಕೊಳ್ಳಿ.. ಅಷ್ಟು ಸಾಕು.
ಪ್ರೀತಿಯ ವಿದ್ಯಾರ್ಥಿಗಳೇ,
ಮೊದಲಾಗಿ ನಿಮಗೆ ಎಸೆಸೆಲ್ಸಿ ಪರೀಕ್ಷೆಗೆ ಆಲ್ ದ ಬೆಸ್ಟ್. ಇಡೀ ವರ್ಷ ಒಂದು ಪರೀಕ್ಷೆಗಾಗಿ ಕಷ್ಟ ಪಟ್ಟು ಓದಿರುವ ನಿಮಗೆ ಅಭಿನಂದನೆಗಳು. ಹಾಗೆಯೇ ನಿಮ್ಮನ್ನು ಪರೀಕ್ಷೆಗಾಗಿ ಪ್ರಿಪೇರ್ ಮಾಡಿದ ನಿಮ್ಮ ಅಧ್ಯಾಪಕರಿಗೂ ಅಭಿನಂದನೆಗಳು. ಇವತ್ತು ನಾನು ನಿಮಗೆ ಪರೀಕ್ಷೆಗಳ ಬಗ್ಗೆ ಏನೂ ಹೇಳುವುದಿಲ್ಲ. ಇಡೀ ವರ್ಷ ನಿಮಗೆ ಅದನ್ನು ಹಲವು ಬಾರಿ ಹೇಳಿ ಆಗಿದೆ. ಇವತ್ತು ನಾನು ನಿಮಗೆ ತುಂಬಾ ಸ್ಫೂರ್ತಿ ತುಂಬುವ ಮೂರು ವ್ಯಕ್ತಿತ್ವಗಳು ಮತ್ತು ಅದಕ್ಕೆ ಪೂರಕವಾದ ಮೂರು ಘಟನೆಗಳನ್ನು ವಿವರಿಸಬೇಕು. ಓದುತ್ತಾ ಹೋಗಿ…..
1. ವಿಶ್ವ ವಿಜಯೀ ಸೋಟೋ ಮೇಯರ್!
ಜಗತ್ತಿನ ಬೆಸ್ಟ್ ಹೈ ಜಂಪರ್ ಯಾರು ಎಂದು ಗೂಗಲ್ ಸರ್ಚ್ ಮಾಡಿದರೆ ಬರುವ ಮೊದಲ ಹೆಸರು ಜೆವಿಯರ್ ಸೋಟೋ ಮೇಯರ್! ಆತನು ಕ್ಯೂಬಾ ದೇಶದ ಮಹೋನ್ನತ ಹೈ ಜಂಪರ್. 1992ರ ಒಲಿಂಪಿಕ್ಸ್ ಕೂಟದಲ್ಲಿ ಆತ 2-45 ಮೀಟರ್ ಎತ್ತರ ಜಿಗಿದು ವಿಶ್ವದಾಖಲೆಯನ್ನು ಮಾಡಿದ್ದನು! ಅಷ್ಟು ಎತ್ತರ ಯಾರಿಗೂ ಹಾರಲು ಸಾಧ್ಯವೇ ಇಲ್ಲ ಎಂದು ಕ್ರೀಡಾ ವಿಮರ್ಶಕರು ಹೇಳಿದ್ದರು. ನಿನಗೆ ಅಷ್ಟು ಎತ್ತರ ಹಾರಲು ಹೇಗೆ ಸಾಧ್ಯ ಆಯಿತು ಎಂದು ಅವನನ್ನು ಪತ್ರಕರ್ತರು ಕೇಳಿದಾಗ ಅವನು ಕೊಟ್ಟ ಉತ್ತರ ಅದ್ಭುತ ಆಗಿತ್ತು..!
My HEART jumps FIRST and then my BODY follows!
ಅಂದರೆ ನಾನು ಹಾರುವಾಗ ನನ್ನ ಹೃದಯವು ಮೊದಲು ಹಾರುತ್ತದೆ, ಮತ್ತು ನನ್ನ ದೇಹವು ಅದನ್ನು ಹಿಂಬಾಲಿಸುತ್ತದೆ!
ಯಾವುದೇ ಕೆಲಸವನ್ನು ಭಾವನೆಗಳನ್ನು ಹಾಕಿ ಮಾಡಿದರೆ ಫಲಿತಾಂಶ ಅದ್ಭುತವಾಗಿ ಇರುತ್ತದೆ ಅನ್ನುವುದಕ್ಕೆ ಸೋಟೋ ಮೇಯರ್ ಸಾಧನೆ ಒಂದು ಅದ್ಭುತ ನಿದರ್ಶನ.
2. ವಿಶ್ವ ವಿಜಯೀ ಈಜು ಪಟು ಮೈಕೆಲ್ ಫೆಲ್ಪ್ಸ್
ಜಗತ್ತಿನ ಬೆಸ್ಟ್ ಸ್ವಿಮ್ಮರ್ ಯಾರು ಎಂಬ ಪ್ರಶ್ನೆಗೆ ಗೂಗಲ್ ಕೊಡುವ ನೇರ ಉತ್ತರ ಅಮೆರಿಕಾದ ಮೈಕೆಲ್ ಪೆಲ್ಪ್ಸ್! ಆತನು ಅಮೆರಿಕದ ಈಜುಪಟು. ಆತನನ್ನು ‘ಬಾಲ್ಟಿಮೋರ್‌ನ ಬುಲೆಟ್’ ಎಂದೇ ಕರೆಯಲಾಗುತ್ತದೆ. ಆತನು ಎರಡು ಒಲಿಂಪಿಕ್ಸ್ ಕೂಟಗಳಲ್ಲಿ ಗೆದ್ದ ಒಟ್ಟು ಮೆಡಲ್‌ಗಳ ಸಂಖ್ಯೆಯೇ ಬರೋಬ್ಬರಿ 28! ಅದರಲ್ಲಿ 23 ಚಿನ್ನದ ಪದಕಗಳು, 3 ಬೆಳ್ಳಿಯ ಪದಕಗಳು, 2 ಕಂಚಿನ ಪದಕಗಳು!
ಅಷ್ಟು ಒಲಿಂಪಿಕ್ಸ್ ಪದಕಗಳನ್ನು ಇದುವರೆಗೆ ಯಾರೂ ಗೆಲ್ಲಲು ಸಾಧ್ಯವೇ ಆಗಲಿಲ್ಲ! ಮುಂದೆ ಸಾಧ್ಯವೂ ಇಲ್ಲ! ಭಗವಂತ ಅವನನ್ನು ಈಜುವುದಕ್ಕಾಗಿ ಸೃಷ್ಟಿ ಮಾಡಿರಬೇಕು! ಅದೇ ರೀತಿ ವಿಶ್ವ ಚಾಂಪಿಯನ್‌ಷಿಪ್ ಕೂಟಗಳಲ್ಲಿ ಆತನದ್ದು ಅದ್ಭುತವಾದ ಸಾಧನೆ. 26 ಚಿನ್ನ, 6 ಬೆಳ್ಳಿ, 1 ಕಂಚು! ಆತನು ತನ್ನ ಜೀವನದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಸ್ವಿಮ್ಮಿಂಗ್ ಪೂಲ್‌ಗಳಲ್ಲಿ ಕಳೆದನು ಅಂದರೆ ಅದು ಅದ್ಭುತ! ಒಂದು ದಿನವೂ ಪ್ರಾಕ್ಟೀಸ್ ಮಿಸ್ ಮಾಡದೆ ದಿನಕ್ಕೆ 12 ಘಂಟೆಯ ಕಾಲ ಅವನು ನೀರಿನಲ್ಲಿ ಈಜುತ್ತಾ ಇರುತ್ತಿದ್ದ!
ನಮಗೆಲ್ಲ ತಿಳಿದಿರುವಂತೆ ಸೆಪ್ಟೆಂಬರ್ 11, 2001ರಂದು ಅಮೆರಿಕಾದ ಟ್ವಿನ್ ಟವರ್ ಮೇಲೆ ಭಯೋತ್ಪಾದಕ ದಾಳಿ ನಡೆದು ಇಡೀ ಅಮೆರಿಕ ತಲ್ಲಣಪಟ್ಟ ದಿನ ಕೂಡ ಬೆಳಿಗ್ಗೆ ಮೈಕೆಲ್ ಈಜುಕೊಳದಲ್ಲಿ ಈಜುತ್ತ ತನ್ನ ಕೋಚ್‌ಗೆ ಕಾಲ್ ಮಾಡಿ – ಸರ್, ಎಲ್ಲಿದ್ದೀರಿ? ನಾನಾಗಲೇ ಪೂಲಲ್ಲಿ ರೆಡಿ ಇದ್ದೇನೆ ಎಂದನಂತೆ!
ಯಾವ ಕ್ಷೇತ್ರದಲ್ಲಾದರೂ ಸಾಧನೆ ಮಾಡಬೇಕು ಎಂಬ ಹಸಿವು ಇದ್ದವರು ಅದನ್ನು ತಪಸ್ಸಿನಂತೆ ಸ್ವೀಕಾರ ಮಾಡಿದರೆ ಮಾತ್ರ ಯಶಸ್ಸು ದೊರೆಯಲು ಸಾಧ್ಯ ಎಂದು ಮೈಕೆಲ್ ಫೆಲ್ಪ್ಸ್ ನಮಗೆ ತೋರಿಸಿಕೊಟ್ಟಿದ್ದಾನೆ.
3. ದಾಖಲೆಗಳ ಮೇಲೆ ದಾಖಲೆ ಬರೆದ ಸರ್ಗೆಯಿ ಬೂಬ್ಕಾ!
ವಿಶ್ವಮಟ್ಟದ ಬೆಸ್ಟ್ ಪೋಲ್ ವಾಲ್ಟರ್ ಯಾರು ಮತ್ತು ಅತೀ ಹೆಚ್ಚು ಕ್ರೀಡೆಯ ವಿಶ್ವದಾಖಲೆ ಹೊಂದಿದವರು ಯಾರು ಈ ಎರಡೂ ಪ್ರಶ್ನೆಗೆ ಗೂಗಲ್ ಥಟ್ಟನೆ ನೀಡುವ ಉತ್ತರ ಯುಕ್ರೇನ್ ದೇಶದ ಸರ್ಗೆಯಿ ಬೂಬ್ಕಾ! ಆತನ ಬದುಕೇ ಒಂದು ಅದ್ಭುತ ಯಶೋಗಾಥೆ! ಪೋಲ್ ವಾಲ್ಟ್ ಎಂಬ ಕ್ಲಿಷ್ಟಕರವಾದ ಸ್ಪರ್ಧೆಯಲ್ಲಿ ಆತನಿಗೆ ದಶಕಗಳ ಕಾಲ ಪ್ರತಿಸ್ಪರ್ಧಿಯೇ ಇರಲಿಲ್ಲ! ಬರೋಬ್ಬರಿ ಮೂವತ್ತೈದು ಬಾರಿ ಆತನು ತನ್ನದೇ ರೆಕಾರ್ಡ್ ಮುರಿಯುತ್ತಾ ಹೋದನು. ತನ್ನ ಸ್ಪರ್ಧಾ ಅವಧಿಯಲ್ಲಿ ಆತನು ಒಮ್ಮೆ ಮಾತ್ರ ತನ್ನ ವಿಶ್ವದಾಖಲೆಯನ್ನು ಕಳೆದುಕೊಂಡಿದ್ದನು!
ಆತನು ನಿವೃತ್ತಿ ಹೊಂದುವಾಗ ಹೇಳಿದ ಮಾತು ನನಗೆ ಭಾರಿ ಪ್ರೇರಣೆ ಕೊಟ್ಟಿದೆ.
‘ನಾನು ನನ್ನ ಇಡೀ ಜೀವನದಲ್ಲಿ ಯಾರ ಜೊತೆಯೂ ಸ್ಪರ್ಧೆ ಮಾಡಲು ಹೋಗಲಿಲ್ಲ. ನನಗೆ ನನ್ನ ಹಿಂದಿನ ಸಾಧನೆಗಳೇ ಬೆಂಚ್ ಮಾರ್ಕ್! ನನ್ನ ನಿಜವಾದ ಸಾಮರ್ಥ್ಯದ ಅಲ್ಟಿಮೇಟ್ ಜಂಪ್ ಇನ್ನೂ ಬಾಕಿ ಇದೆ!’
ಬೂಬ್ಕಾ ಹೇಳಿದ ಮಾತುಗಳನ್ನು ವಿವರಿಸುವ ಅಗತ್ಯ ಇಲ್ಲ ಎಂದು ನನಗೆ ಅನಿಸುತ್ತದೆ. ಈ ಮೂವರು ಶಿಖರ ಸಾಧಕರ ಸಾಧನೆಗಳೇ ಇಂದಿನಿಂದ ನಿಮಗೆ ಸ್ಫೂರ್ತಿಯಾಗಿ ನಿಲ್ಲಲಿ. ನಿಮಗೆ ಶುಭವೇ ಆಗಲಿ.
ಇವುಗಳನ್ನೂ ಓದಿ: ಸರಣಿಯ ಹಿಂದಿನ ಲೇಖನಗಳು
- 1. ರಾಜ ಮಾರ್ಗ: ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
- 2. ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಯಾವ ಪ್ರಶ್ನೆ ಬರ್ತದೆ? ಕೊನೇ ಕ್ಷಣದ ಸಿದ್ಧತೆ ಹೇಗಿರಬೇಕು? ಇಲ್ಲಿವೆ ಪವರ್ಫುಲ್ ಟಿಪ್ಸ್-ಭಾಗ 2
- 3. ರಾಜ ಮಾರ್ಗ : SSLC ಪರೀಕ್ಷೆ ಅಂತಿಮ ತಯಾರಿ ಭಾಗ-3 ; ವಿಜ್ಞಾನದಲ್ಲಿ ಖುಷಿ ಕೊಡುವ ಅಪ್ಲಿಕೇಶನ್ ಪ್ರಶ್ನೆಗಳು
- 4. ರಾಜ ಮಾರ್ಗ : ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ತಯಾರಿ ಭಾಗ-4; ಗಣಿತದ ಕುತೂಹಲಕಾರಿ ಅಪ್ಲಿಕೇಶನ್ ಪ್ರಶ್ನೆಗಳು
- 5. ರಾಜ ಮಾರ್ಗ ಅಂಕಣ: ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-5, ನೀವೂ ಈ ಯಶೋಗಾಥೆಗಳ ಗುಂಪಿಗೆ ಸೇರಬಹುದು!
- 6. ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಭಾಗ-6, ನಿಮ್ಮದೂ ಒಂದು ಯಶೋಗಾಥೆ ಯಾಕಾಗಬಾರದು?
ಅಂಕಣ
ಗೋ ಸಂಪತ್ತು: ಆಹಾರವಾಗಿ ಮಾತ್ರವಲ್ಲ, ಔಷಧವಾಗಿಯೂ ಮಜ್ಜಿಗೆಗೆ ಮಹತ್ವವಿದೆ!
ಗೋವಿನ ಮಹತ್ವ ಮತ್ತು ವಿಚಾರಗಳನ್ನು ತಿಳಿಸುವ ಲೇಖನ ಮಾಲೆ “ಗೋ ಸಂಪತ್ತು” ನಲ್ಲಿ ಈ ವಾರ ದೇಶಿ ಗೋವಿನ ಮಜ್ಜಿಗೆಯ ಮಹತ್ವವನ್ನು (importance of buttermilk) ತಿಳಿಸಿಕೊಡಲಾಗಿದೆ.
ದಿನಾಂತೇ ಚ ಪಿಬೇದ್‌ದುಗ್ಧಂ ನಿಶಾಂತೇ ಚ ಪಿಬೇತ್ವಯಃ|
ಭೋಜನಾಂತೇ ಪಿಬೇತ್ತಕ್ರಂ ಕಿಂ ವೈದ್ಯಸ್ಯ ಪ್ರಯೋಜನಮ್||
ವೇದದ ಈ ಎರಡು ಸಾಲಿನಲ್ಲಿ ಆಹಾರ ವ್ಯವಸ್ಥೆಯೇ ಅಡಗಿದೆ. ಇದರರ್ಥ ಸಾಯಂಕಾಲ ಹಾಲನ್ನು ಕುಡಿಯಬೇಕು, ಬೆಳಿಗ್ಗೆ ನೀರನ್ನು ಕುಡಿಯಬೇಕು, ಊಟದ ಕೊನೆಯಲ್ಲಿ ಮಜ್ಜಿಗೆಯನ್ನು ಸೇವಿಸಬೇಕು. ಹೀಗೆ ಮಾಡಿದರೆ ವೈದ್ಯನಿಗೆ ಕೆಲಸವಿರುವುದಿಲ್ಲ ಎನ್ನುವುದೇ ಆಗಿದೆ. ಇದರಿಂದ ಬಡವರ ಪಾನೀಯವೆಂದೇ ಹೇಳಲಾಗುವ ಮಜ್ಜಿಗೆ ವೇದ ಕಾಲದಿಂದಲೂ ಬಹು ಪ್ರಾಮುಖ್ಯತೆಯನ್ನು ಪಡೆದ ಒಂದು ಪೇಯ ಎನ್ನುವುದು ದೃಢವಾಗುತ್ತದೆ.
ಮನುಷ್ಯನಿಗೆ ಅಮೃತ, ದೇವತೆಗಳಿಗೆ ನೀರು, ಪಿತೃಗಳಿಗೆ ಮಗ ಹೇಗೆ ಮುಖ್ಯವೋ ಹಾಗೆಯೇ ದೇವೇಂದ್ರನಿಗೆ ಮಜ್ಜಿಗೆ ದುರ್ಲಭ ಎನ್ನುತ್ತದೆ ಸಂಸ್ಕೃತ ಶ್ಲೋಕವೊಂದು. ಮತ್ತೊಂದು ಶ್ಲೋಕದಲ್ಲಿ ಸ್ವರ್ಗದಲ್ಲಿ ದೇವತೆಗಳು ಅಮೃತಪಾನದಿಂದ ಅಮರತ್ವ ಹೊಂದುವಂತೆ, ಭೂಮಿಯಲ್ಲಿ ಮಜ್ಜಿಗೆಯಿಂದ ಮನುಷ್ಯರು ದೀರ್ಘಾಯುಷ್ಯವನ್ನು ಹೊಂದುತ್ತಾರೆಂದು ಹೇಳಲಾಗಿದೆ.
ದೇವರಿಗೆ ಅಮೃತ ಹೇಗೆ ಮಹತ್ವವೋ ಹಾಗೆಯೇ ಮಾನವರಿಗೆ ಮಜ್ಜಿಗೆ ಶ್ರೇಷ್ಠ ಎಂದು ಹೇಳಲಾಗಿದೆ. ಹೀಗಾಗಿ ವೇದ ಕಾಲದಿಂದಲೂ ಮಜ್ಜಿಗೆಯನ್ನು ಜನರು ಬಳಸುತ್ತಾ ಅದರ ಲಾಭವನ್ನು ಪಡೆದುಕೊಂಡು ಬಂದಿರುವುದು ಸ್ಪಷ್ಟವಾಗುತ್ತದೆ.
ವೇದಗಳಲ್ಲಿ ಮಜ್ಜಿಗೆಯ ಮಹತ್ವವನ್ನು ಬಹಳವಾಗಿ ಹಲವು ಕಡೆಗಳಲ್ಲಿ ವರ್ಣಿಸಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಮಜ್ಜಿಗೆಯನ್ನು ಆಯುರ್ವೇದ ಚಿಕಿತ್ಸೆಯಲ್ಲಿ ಬಹಳವಾಗಿ ಉಪಯೋಗಿಸುವ ಹಲವು ಪ್ರಮುಖ ಆಹಾರ ಪದಾರ್ಥಗಳಲ್ಲಿ ಒಂದು ಎಂದು ಪರಿಗಣಿಸಿರುವುದೇ ಆಗಿದೆ. ಇಂತಹ ಮಜ್ಜಿಗೆಯನ್ನು ಆಯುರ್ವೇದದಲ್ಲಿ ರೋಗಿಗಳ ಚಿಕಿತ್ಸೆಗಷ್ಟೇ ಅಲ್ಲದೆ ರೋಗವನ್ನು ತಡೆಯುವ ಉದ್ದೇಶದಿಂದ ರೋಗಿಗಳಿಗೆ ಆಹಾರದ ರೂಪದಲ್ಲಿ ಬಳಸಲು ಸೂಚಿಸಿರುವುದು ಕಂಡುಬರುತ್ತದೆ. ಹಾಗೆಯೇ ಆಯುರ್ವೇದದಲ್ಲಿ ಐದು ಪ್ರಕಾರದ ಮಜ್ಜಿಗೆಯನ್ನು ನಿರ್ದೇಶಿಸಲಾಗಿದೆ. ಅಂತೆಯೇ ಮಜ್ಜಿಗೆಯಲ್ಲಿನ ನೀರಿನ ಆಧಾರ ಮೇಲೂ ನಾನಾ ಭೇದಗಳನ್ನು ಆಯುರ್ವೇದದಲ್ಲಿ ವರ್ಣಿಸಲಾಗಿದೆ. ಹುಳಿ, ಅತಿಯಾದ ಹುಳಿ, ಒಗರು ಎಂಬ ರುಚಿಯ ಆಧಾರದ ಮೇಲೂ ಮಜ್ಜಿಗೆಯನ್ನು ಮೂರು ರೀತಿ ವಿಭಜಿಸಲಾಗಿದೆ.
ಪಿತ್ತ ಕಡಿಮೆ ಮಾಡುವ ಮಜ್ಜಿಗೆ
ನಾವು ನಿತ್ಯ ಬಳಸುವ ಮಜ್ಜಿಗೆ ಹುಳಿ ಅಥವಾ ಸಿಹಿಯಾಗಿರುತ್ತದೆ. ಸಿಹಿ ಮಜ್ಜಿಗೆಯು ಪಿತ್ತವನ್ನು ಕಡಿಮೆ ಮಾಡುವುದರೊಂದಿಗೆ ಕಫವನ್ನು ಹೆಚ್ಚಿಸಿದರೆ, ಹುಳಿ ಮಜ್ಜಿಗೆಯು ವಾತವನ್ನು ನಾಶ ಮಾಡುವುದರೊಂದಿಗೆ ರಕ್ತ ಪಿತ್ತವನ್ನು ವರ್ಧಿಸುತ್ತದೆ. ಇನ್ನು ಒಗರು ಮಜ್ಜಿಗೆಯು ಕಫಶಾಮಕವಾಗಿದೆ. ಹೀಗೆ ಮಜ್ಜಿಗೆಯು ತ್ರಿದೋಷ ನಿವಾರಕ ಎಂದೆನಿಸಿಕೊಂಡಿದೆ.
ತೆಳು, ದಪ್ಪ ಹಾಗೂ ತೀರಾ ದಪ್ಪ ಎಂಬ ಸಾಂದ್ರತೆಯ ಆಧಾರದ ಮೇಲೂ ಮಜ್ಜಿಗೆಯನ್ನು ಮೂರು ರೀತಿ ವಿಭಜಿಸಲಾಗಿದೆ. ಇದರಲ್ಲಿ ತೆಳ್ಳನೆ ಮಜ್ಜಿಗೆ ಬಹುಬೇಗ ಜೀರ್ಣವಾಗುವ ಗುಣವನ್ನು ಹೊಂದಿದ್ದರೆ, ದಪ್ಪ ಹಾಗೂ ತೀರ ದಪ್ಪ ಸಾಂದ್ರತೆಯ ಮಜ್ಜಿಗೆಯೂ ಬೇಗ ಜೀರ್ಣವಾಗದ ಗುಣವನ್ನು ಹೊಂದಿದೆ. ಮುಖ್ಯವಾಗಿ ಪಚನಶಕ್ತಿಗೆ ಅನುಕೂಲವಾಗುವಂತೆ ಈ ವಿಂಗಡನೆಯನ್ನು ಮಾಡಲಾಗಿದೆ. ಪೂರ್ತಿ ಜಿಡ್ಡು ತೆಗೆದ, ಅರ್ಧ ಜಿಡ್ಡು ತೆಗೆದ ಹಾಗೂ ಜಿಡ್ಡಿನಾಂಶ ತೆಗೆಯದ ಮಜ್ಜಿಗೆ ಎಂಬುದಾಗಿ ಜಿಡ್ಡಿನ ಅಂಶದ ಆಧಾರದ ಮೇಲೂ ಮಜ್ಜಿಗೆಯನ್ನು ಮೂರು ರೀತಿ ವಿಭಜಿಸಲಾಗಿದೆ. ಇದರಲ್ಲಿ ಪೂರ್ತಿ ಜಿಡ್ಡು ತೆಗೆದ ಮಜ್ಜಿಗೆಯು ಹಗುರವಾಗಿದ್ದು ಬಹುಬೇಗ ಪಚನವಾಗು ವಂತಹುದಾದರೆ, ಅರ್ಧ ಜಿಡ್ಡು ತೆಗೆದ ಮಜ್ಜಿಗೆಯು ಪಚನಕ್ಕೆ ಭಾರವಾದುದಾಗಿದೆ. ಇನ್ನು ಜಿಡ್ಡಿನಾಂಶ ತೆಗೆಯದ ಮಜ್ಜಿಗೆಯು ಅತ್ಯಂತ ವೀರ್ಯ ವರ್ಧಕವಾಗಿರುವುದು ಸಾಬೀತಾಗಿದೆ.
ಮಜ್ಜಿಗೆಯಲ್ಲಿಯೂ ಹಲವು ಬಗೆಯುಂಟು!
ಇನ್ನು ನೀರಿನ ಅಂಶ ಅವಲಂಬಿಸಿ ಮೊಸರಿಗೆ ನೀರು ಸೇರಿಸುವ ಆಧಾರದ ಮೇಲೂ ಮಜ್ಜಿಗೆಯ ಹಲವು ಬಗೆಗಳನ್ನು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಅವುಗಳೆಂದರೆ;
ಘೋಲ: ನೀರು ಸೇರಿಸದೆ ಹಾಗೆಯೇ ಮೊಸರನ್ನು ಕಡೆದು ಉಪಯೋಗಿಸುವಂತಹ ಮಜ್ಜಿಗೆ ಇದು. ಇದು ವಾತಾ, ಪಿತ್ತ ಶಮನ ಮಾಡುವಂತಹದ್ದು.
ಮಥಿತ: ಸಾರ ಭಾಗ ತೆಗೆದು, ನೀರು ಸೇರಿಸಿ ಕಡೆದಿರುವ ಮಜ್ಜಿಗೆ ಇದು. ಇದು ಕಫ ಮತ್ತು ಪಿತ್ತಗಳನ್ನು ಶಮನ ಮಾಡುತ್ತದೆ.
ಶ್ವೇತಮಂಥ: ಸಮಭಾಗ ನೀರು ಸೇರಿಸಿ ಕಡೆದ ಮಜ್ಜಿಗೆ ಇದು. ಇದು ಸಿಹಿಯಾಗಿದ್ದು, ಪಚನಕ್ಕೆ ಹಗುರವಾಗಿದ್ದು, ರಕ್ತಪಿತ್ತವನ್ನು ಕಡಿಮೆ ಮಾಡುತ್ತದೆ.
ಉದಶ್ವಿತ್: ಅರ್ಧ ಭಾಗ ನೀರು ಸೇರಿಸಿ ಪಡೆಯುವ ಮಜ್ಜಿಗೆ ಇದು. ಇಂತಹ ಮಜ್ಜಿಗೆ ಬಲವರ್ಧಕವಾದುದು ಎನ್ನಲಾಗಿದೆ.
ತಕ್ರ: ಮೊಸರಿನ ಕಾಲು ಭಾಗ ಅಥವಾ ಅರ್ಧ ಭಾಗ ನೀರು ಸೇರಿಸಿ ಕಡೆದಿರುವ ಮಜ್ಜಿಗೆ ಇದು. ಇದು ತ್ರಿದೋಷ ನಿವಾರಕವಾದುದಾಗಿದೆ.
ಕಾಲಶೇಯ: ಮೊಸರಿನ ಎರಡು ಭಾಗ ನೀರು ಸೇರಿಸಿ ಕಡೆದಿರುವ ಮಜ್ಜಿಗೆ ಇದು. ಇದು ಜೀರ್ಣಕ್ಕೆ ಅತ್ಯಂತ ಹಗುರವಾದುದಾಗಿದೆ.
ದಂಡಾಹತ: ಮೊಸರಿನ ಒಂದೂವರೆ ಭಾಗ ನೀರು ಸೇರಿಸಿ ಕಡೆದಿರುವಂತಹ ಮಜ್ಜಿಗೆ ಇದು.
ಕರಮಂಥ: ಕೈಯಿಂದ ಕಡೆದಿರುವ ಮಜ್ಜಿಗೆ ಇದು. ಇದು ಅತಿಸಾರದಂತಹ ಕಾಯಿಲೆಗೆ ಅತಿ ಉಪಯುಕ್ತ ವಾದುದಾಗಿದೆ.
ಚಚ್ಚಿಕ: ಮೊಸರಿಗೆ ನೀರು ಹಾಕದೇ ಕಡೆದು, ಕೆನೆ ತೆಗೆದು ನಂತರ ನೀರು ಹಾಕಿ ಕಡೆದ ಮಜ್ಜಿಗೆ ಇದು.
ಗಾಲಿತ: ವಸ್ತ್ರದಿಂದ ಸೋಸಿದ ಮಜ್ಜಿಗೆ ಇದು.
ಷೌಡವ: ನಾನಾ ಹಣ್ಣುಗಳನ್ನು ಸೇರಿಸಿ ಕಡೆದಿರುವಂತಹ ಮಜ್ಜಿಗೆ ಇದು.
ಹೀಗೆ ಗೋವಿನ ಉತ್ಪನ್ನಗಳಲ್ಲಿ ಹಾಲು, ಮೊಸರು, ತುಪ್ಪದಂತೆ ಮಜ್ಜಿಗೆಯನ್ನು ಕೂಡ ವೇದ ಶಾಸ್ತ್ರಗಳಲ್ಲಿ ಮಾನವನ ದೇಹಕ್ಕೆ ಅತಿ ಅವಶ್ಯಕವಾಗಿ ಬೇಕಾದ ಒಂದು ಪೇಯ ಎಂದು ಹೇಳಲಾಗಿದೆ.
ಮಜ್ಜಿಗೆ ತಯಾರಿಸಲು ಎರಡು ವಿಧಾನ
ಇಂತಹ ಬಹುಪಯೋಗಿ ಮಜ್ಜಿಗೆಯನ್ನು ಸಾಮಾನ್ಯವಾಗಿ ಎರಡು ವಿಧಾನಗಳಲ್ಲಿ ತಯಾರಿಸಲಾಗುತ್ತದೆ. ಮೊದಲನೆಯದು ಮೊಸರನ್ನು ಕಡೆದು, ಅದರಿಂದ ಬೆಣ್ಣೆ ತೆಗೆದಾದ ಬಳಿಕ ಉಳಿದದ್ದು ಮಜ್ಜಿಗೆಯಾದರೆ, ಎರಡನೆಯದು ಮೊಸರಿಗೆ ನೇರವಾಗಿ ಹೆಚ್ಚು ನೀರನ್ನು ಸೇರಿಸಿ ಬೆಣ್ಣೆ ಸಹಿತ ಮಜ್ಜಿಗೆಯನ್ನು ಸಿದ್ಧಪಡಿಸುವುದಾಗಿದೆ.
ಮೊಸರಿಗೆ ನೀರನ್ನು ಬೆರೆಸಿ ಚೆನ್ನಾಗಿ ಕಡೆದಾಗ ಶಾಖ ಉತ್ಪತ್ತಿಯಾಗಿ ಹಲವು ಗುಣಗಳ ಪರಿವರ್ತನೆಯೊಂದಿಗೆ ಬೆಣ್ಣೆಯು ಬೇರ್ಪಡುತ್ತದೆ. ಹೀಗೆ ಬೆಣ್ಣೆಯಿಂದ ಬೇರ್ಪಟ್ಟ ಉಳಿದ ಭಾಗವನ್ನು ಮಜ್ಜಿಗೆಯಾಗಿ ಉಪಯೋಗಿಸಬೇಕು ಎಂದು ಹೇಳಲಾಗಿದೆ. ಇಂತಹ ಮಜ್ಜಿಗೆಯನ್ನು ಮಟ್ಟಾ ಎಂದು ಕರೆಯಲಾಗಿದೆ. ಸಂಸ್ಕೃತ ಭಾಷೆಯಲ್ಲಿ ಇದನ್ನು ಶಕ್ರಂ ಅಥವಾ ತಕ್ರ ಎಂದು ಹೇಳಲಾಗಿದೆ. ಉತ್ತರ ಹಿಂದೂಸ್ತಾನದಲ್ಲಿ ಇದನ್ನು ಲಸ್ಸಿ ಎಂದು ಸಹ ಕರೆಯುವುದುಂಟು.
ಮಜ್ಜಿಗೆಯನ್ನು ಕೇವಲ ಪಾನಕ ಅಥವಾ ಒಂದು ಪೇಯ ಎಂದು ಹೇಳುವುದು ಕಷ್ಟ. ಭಾರತೀಯರ ಭೋಜನವು ಮಜ್ಜಿಗೆಯ ಸೇವನೆಯೊಂದಿಗೆ ಕೊನೆಗೊಳ್ಳದಿದ್ದರೆ, ಅದು ಅಪೂರ್ಣ ಎಂದು ಹೇಳಲಾಗುತ್ತದೆ. ಇದು ಕೇವಲ ಮಾತಿಗಲ್ಲದೆ, ಮಜ್ಜಿಗೆಯ ಸೇವನೆ ಆರೋಗ್ಯಕ್ಕೆ ಬಹು ಮುಖ್ಯವಾದುದಾಗಿದೆ. ಹೀಗಾಗಿ ನಮ್ಮ ಪೂರ್ವಜರು ಮಜ್ಜಿಗೆಯನ್ನು ಕೇವಲ ಒಂದು ಆಹಾರ ಪದಾರ್ಥವೆಂದು ಪರಿಗಣಿಸಿರಲಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಮಜ್ಜಿಗೆಯಲ್ಲಿರುವ ಸಾಕಷ್ಟು ಔಷಧೀಯ ಗುಣಗಳನ್ನು ವೈಜ್ಞಾನಿಕ ಜಗತ್ತು ಕಂಡುಕೊಂಡಿದೆ. ಹೀಗಾಗಿ ಮಜ್ಜಿಗೆಯು ಮಾನವನಿಗೆ ಅಮೃತ ಸಮಾನವಾದುದು ಎಂದೇ ಹೇಳಲಾಗುತ್ತದೆ.
ಔಷಧಿಯಾಗಿ ಮಜ್ಜಿಗೆ ಬಳಕೆ
ಇಂತಹ ಮಜ್ಜಿಗೆಯ ಸೇವನೆಯಿಂದ ತೆರೆದ ಗಾಯ, ಬಾಯಿ ಹುಣ್ಣು, ರಕ್ತಸ್ರಾವದಂತಹ ರೋಗಗಳು ಬಹುಬೇಗ ಗುಣವಾಗುವುದು ಸಾಬೀತಾಗಿದೆ. ಹೀಗಾಗಿಯೇ ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಸೋರಿಯಾಸಿಸ್‌ನಂತಹ ಚರ್ಮ ರೋಗದಿಂದ ಬಳಲುತ್ತಿರುವವರಿಗೆ ನೀಡುವ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಮಜ್ಜಿಗೆಯನ್ನು ಇಂದಿಗೂ ಬಳಸಲಾಗುತ್ತದೆ. ಮುಖ್ಯವಾಗಿ ಇದರಲ್ಲಿ ಕ್ಯಾಲ್ಸಿಯಂ ಹಾಗೂ ಫಾಸ್ಪರಸ್ ಅಂಶ ಹೆಚ್ಚಾಗಿದ್ದು ಮೂಳೆಗಳಿಗೆ ಅಗತ್ಯವಾದ ಶಕ್ತಿಯನ್ನು ಸಹ ನೀಡುತ್ತದೆ.
ಸ್ವಾಸ್ಥ್ಯ ಜೀವನಕ್ಕಾಗಿ ರಾತ್ರಿ ಮಲಗುವ ಮುನ್ನು ಒಂದು ಲೋಟ ಹಾಲನ್ನು ಕುಡಿಯಬೇಕು, ಬೆಳಗ್ಗೆ ಎದ್ದು ಶೌಚಕ್ಕೆ ಹೋಗಿ ಬಂದ ನಂತರ ನೀರನ್ನು ಕುಡಿಯಬೇಕು, ಹಾಗೆಯೇ ಊಟದ ಮಧ್ಯೆ ನೀರನ್ನು ಕುಡಿಯದೆ ಊಟದ ಕೊನೆಯಲ್ಲಿ ಮಜ್ಜಿಗೆಯನ್ನು ಕುಡಿಯಬೇಕು ಎಂಬುದಾಗಿ ನಮ್ಮ ಆರೋಗ್ಯ ಗ್ರಂಥಗಳಲ್ಲಿ ಹಲವೆಡೆ ಸೂಚಿಸಲಾಗಿದೆ. ಹೀಗಾಗಿ ಇದು ನಮಗೆ ನಮ್ಮ ಪೂರ್ವಜರು ಹೇಳಿಕೊಟ್ಟಿರುವ ಆರೋಗ್ಯ ಸೂತ್ರ ಎಂದೇ ಹೇಳಬಹುದು.
ಕೆಲವು ಸಂದರ್ಭಗಳಲ್ಲಿ ಮಜ್ಜಿಗೆಯ ಸೇವನೆ ಯೋಗ್ಯವಲ್ಲವೆಂದು ಹೇಳಲಾಗಿದೆ. ಉಷ್ಣ ಕಾಲದಲ್ಲಿ ದುರ್ಬಲ ರೋಗಿಗಳು ಸೇರಿದಂತೆ ಮೂರ್ಚೆ ಮತ್ತು ತಲೆ ತಿರುಗುವಿಕೆಯ ಸಂದರ್ಭದಲ್ಲಿ ಹಾಗೂ ರಕ್ತ ಮತ್ತು ಪಿತ್ತ ವಿಕಾರಗಳಲ್ಲಿ ಮಜ್ಜಿಗೆಯನ್ನು ಉಪಯೋಗಿಸಬಾರದು ಎಂದು ಹೇಳಲಾಗಿದೆ. ಹಾಗೆಯೇ ಸಂಧಿವಾತದವರು ಮತ್ತು ಅಸ್ತಮಾ ಇರುವವರು ಮಜ್ಜಿಗೆಯನ್ನು ಸೇವಿಸಬಾರದೆಂದು ಹೇಳಲಾಗಿದೆ. ಮುಖ್ಯವಾಗಿ ವಾಣಿಜ್ಯ ದೃಷ್ಟಿಕೋನದಿಂದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮಾರಾಟವಾಗುತ್ತಿರುವ ಮತ್ತು ಶೇಖರಿಸಿದ ಮಸಾಲೆ ಮಜ್ಜಿಗೆ ಎಂದಿಗೂ ಆರೋಗ್ಯಕರವಲ್ಲ ಎಂಬುದನ್ನು ಅರಿಯಬೇಕಾಗಿದೆ.
ಇದನ್ನೂ ಓದಿ : ಗೋ ಸಂಪತ್ತು: ಬೆಣ್ಣೆಯೆಂಬ ನವನೀತದ ಅನಿಯಮಿತ ಉಪಯೋಗ!
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ6 hours ago
Chenab Bridge | ಐಫೆಲ್ ಟವರ್ಗಿಂತಲೂ ಎತ್ತರದ ರೈಲ್ವೇ ಸೇತುವೆ ಜಮ್ಮು ಕಾಶ್ಮೀರದಲ್ಲಿ ಲೋಕಾರ್ಪಣೆಗೆ ಸಿದ್ಧ
-
ಕರ್ನಾಟಕ7 hours ago
SSLC Exam 2023: ಇಂದಿನಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
-
ಪ್ರಮುಖ ಸುದ್ದಿ15 hours ago
ವಿಸ್ತಾರ ಸಂಪಾದಕೀಯ: ಹಿಂದಿ ಬಗ್ಗೆ ಪೂರ್ವಗ್ರಹ ಬೇಡ, ಹಾಗಂತ ಹೇರಿಕೆ ಸಲ್ಲದು
-
ಕ್ರಿಕೆಟ್22 hours ago
IPL 2023: ಗುಜರಾತ್ vs ಚೆನ್ನೈ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ವೈರಲ್ ನ್ಯೂಸ್22 hours ago
Viral Video: ಇದು ರೋಲ್ಸ್ ರಾಯ್ಸ್ ಆಫ್ ಆಟೋ; ಒಂದು ಬಟನ್ ಪ್ರೆಸ್ ಮಾಡಿದ್ರೆ ಸಾಕು ಮೇಲ್ಭಾಗ ತೆರೆದುಕೊಳ್ಳತ್ತೆ!
-
ಕರ್ನಾಟಕ19 hours ago
ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
-
ಕ್ರಿಕೆಟ್19 hours ago
IPL 203 : ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಇಲ್ಲಿದೆ