ಇತ್ತೀಚಿನ ವರ್ಷಗಳಲ್ಲಿ ನಿಮ್ಮನ್ನು ಪ್ರಭಾವಿಸಿದ ಲೇಖಕಿ ಯಾರು ಎಂದು ನನ್ನನ್ನು ಯಾರಾದರೂ ಕೇಳಿದರೆ ಒಂದು ಕ್ಷಣ ಕೂಡ ಯೋಚನೆ ಮಾಡದೆ ನಾನು ಹೇಳುವ ಮೊದಲು ಹೆಸರು ನೇಮಿಚಂದ್ರ! ಇಂದು ಲಕ್ಷ ಲಕ್ಷ ಯುವ ಜನತೆಯನ್ನು ಪುಸ್ತಕ ಓದಲು ಪ್ರೇರಣೆ ನೀಡಿದ ಒಬ್ಬ ಕನ್ನಡದ ಲೇಖಕಿ ಇದ್ದರೆ ಅದು ನೇಮಿಚಂದ್ರ! ನನ್ನ ಪ್ರತಿ ಒಂದು ತರಬೇತಿಯ ಕಾರ್ಯಕ್ರಮದಲ್ಲಿ ನಾನು ನೀಡುವ ಅತಿ ಹೆಚ್ಚು ಕಥೆಗಳು ಅವರ ಪುಸ್ತಕಗಳಿಂದ ಆರಿಸಿದ್ದು!
ನೇಮಿಚಂದ್ರ ತನ್ನ ಬಾಲ್ಯವನ್ನು ಕಳೆದದ್ದು ತುಮಕೂರಿನಲ್ಲಿ. ಆಗ ಅವರ ಓರಗೆಯ ಹುಡುಗರಿಗೆ ಸಾಮಾನ್ಯ ವಿಜ್ಞಾನವನ್ನು ಕಲಿಸಿದರೆ ಹುಡುಗಿಯರಿಗೆ ಹೋಂ ಸೈನ್ಸ್ ಪಾಠವನ್ನು ಮಾಡುತ್ತಿದ್ದರು! ಈ ತಾರತಮ್ಯವು ಅವರಿಗೆ ನೋವು ಕೊಡುತ್ತಿತ್ತು. ಮುಂದೆ ಅವರು ಹೈಸ್ಕೂಲಲ್ಲಿ ಇದ್ದಾಗ ಮೈಸೂರಿನ ಒಂದು ವಿಜ್ಞಾನ ಸಂಸ್ಥೆಯು ಒಂದು ವಿಜ್ಞಾನ ಪ್ರಬಂಧ ಬರೆಯುವ ಸ್ಪರ್ಧೆ ಏರ್ಪಡಿಸಿತ್ತು. ಅದರಲ್ಲಿ ಅವರು ಬಹುಮಾನ ಗೆದ್ದಾಗ ದೊರೆತ ಎರಡು ಪುಸ್ತಕಗಳು – ಅಡುಗೆ ಮತ್ತು ತಾಯಿ ಮಗು! ಹುಡುಗರಿಗೆ ಬಹುಮಾನವಾಗಿ ಬಣ್ಣ ಬಣ್ಣದ ವಿಜ್ಞಾನಿಗಳ ಪುಸ್ತಕ ನೀಡಿದ್ದರು. ಮತ್ತೆ ಅದೇ ತಾರತಮ್ಯ!
ಓದಲು ಲೈಬ್ರರಿಗೆ ಹೋದರೆ ಮಹಿಳಾ ವಿಜ್ಞಾನಿಗಳ, ಮಹಿಳಾ ಸಾಧಕರ ಬಗ್ಗೆ ಹೆಚ್ಚು ಪುಸ್ತಕಗಳು ಇರುತ್ತಲೇ ಇರಲಿಲ್ಲ. ಈ ಕೊರತೆಯು ಅವರನ್ನು ಬಹುವಾಗಿ ಕಾಡಿತು. ಮುಂದೆ ಪಿಯುಸಿ ಮುಗಿಸಿ ಎಂಜಿನಿಯರಿಂಗ್ ಓದಲು ಹೊರಟಾಗ ಬಹಳ ಮಂದಿ ಕುಹಕದಲ್ಲಿ ಅವರಿಗೆ “ಹುಡುಗಿಯರಿಗೆ ಎಂಜಿನಿಯರಿಂಗ್ ಯಾಕೆ ಬೇಕು? ಅಲ್ಲಿ ಕಾರ್ಪೆಂಟರ್, ಫೌಂಡ್ರಿ ಕೆಲಸ ಮಾಡಿಸ್ತಾರೆ.” ಅಂತ ಗಾಳಿ ತೆಗೆಯುವ ಕೆಲಸ ಮಾಡಿದರು! ಆದರೂ ಹಟಕ್ಕೆ ಬಿದ್ದು ಎಂಜಿನಿಯರಿಂಗ್ ಓದಿದ ನೇಮಿಚಂದ್ರ ರಾಂಕ್ ಪಡೆದು ಹೊರಬಂದರು!
ಮುಂದೆ ಬೆಂಗಳೂರಿನ ಶ್ರೇಷ್ಠವಾದ HAL ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿ ಮತ್ತು ಮೆನೇಜರ್ ಆಗಿ ಸೇವೆ ಸಲ್ಲಿಸಿದರು. ವಿವಿಧ ಯುದ್ಧದ ವಿಮಾನಗಳನ್ನು ತಯಾರು ಮಾಡಿ ಭಾರತೀಯ ಸೇನೆಗೆ ಕೊಟ್ಟರು. ಇವಿಷ್ಟು ಅವರ ಪ್ರೊಫೈಲ್ ಹಾಗೂ ಹಿನ್ನೆಲೆಗಳು.
ಹಿಂದುಸ್ತಾನ್ ಆರೋನೆಟಿಕ್ ಲಿಮಿಟೆಡ್ ಸಂಸ್ಥೆಯಲ್ಲಿ ವಿಜ್ಞಾನಿ ಆಗಿದ್ದಾಗ ಬಾಲ್ಯದಲ್ಲಾದ ತಾರತಮ್ಯದ ಘಟನೆಗಳನ್ನು ಮನಸಿನಲ್ಲಿ ಇಟ್ಟುಕೊಂಡು ಅವರು ಬರೆಯಲು ಆರಂಭ ಮಾಡಿದರು. ಮೊದಲು ಅವರ ಒಂದಿಷ್ಟು ಕವಿತೆಗಳು ತುಷಾರ ಪತ್ರಿಕೆಯಲ್ಲಿ ಮೂಡಿ ಬಂದವು. ಆದರೆ ಅವರಿಗೆ ಬೇಗನೇ ಅರ್ಥವಾಯಿತು ಏನೆಂದರೆ ‘ಸಣ್ಣ ಕಥೆ’ ತನ್ನ ಶಕ್ತಿಶಾಲಿ ಅಭಿವ್ಯಕ್ತಿ ಮಾಧ್ಯಮ ಎಂದು! ಅದು ‘ಕನ್ನಡದ ಭಾಗ್ಯ’ ಎಂದೇ ಹೇಳಬಹುದು. ನೇಮಿಚಂದ್ರ ಮುಂದಿನ ಮೂರೂವರೆ ದಶಕಗಳ ಕಾಲ ಕನ್ನಡದಲ್ಲಿ ಬರೆಯುತ್ತ ಸಾಗಿದರು.
ಒಂದೊಂದು ಸಣ್ಣ ಕಥೆ, ಜೀವನ ಚರಿತ್ರೆ, ಕಾದಂಬರಿ, ವಿಜ್ಞಾನ ಲೇಖನ, ವೈಚಾರಿಕ ಲೇಖನ.. ಇವುಗಳನ್ನು ಬರೆಯುವಾಗ ಅವರ ಅಗಾಧವಾದ ಅಧ್ಯಯನ, ಓದು, ಪ್ರವಾಸ, ಜೀವನದ ದಟ್ಟ ಅನುಭವಗಳು ಸೇರಿಕೊಳ್ಳುವ ಕಾರಣ ಅವರ ಎಲ್ಲಾ ಪುಸ್ತಕಗಳು ಓದುಗರಿಗೆ ಬಹುಬೇಗ ತಟ್ಟಿದವು. ಕನ್ನಡದ ಅತೀ ಶ್ರೇಷ್ಠವಾದ ಸ್ತ್ರೀ ಸಂವೇದನೆಯ ಲೇಖಕಿಯಾಗಿ ಅವರು ಮೂಡಿಬರಲು ಹೆಚ್ಚು ದಿನಗಳು ಬೇಕಾಗಲಿಲ್ಲ.
ಅವರ ಬರೆದ ಮಹಿಳಾ ವಿಜ್ಞಾನಿಗಳ ಕಥೆ, ಮಹಿಳಾ ವೈಮಾನಿಕರ ಕಥೆ, ನೊಬೆಲ್ ವಿಜೇತ ಮಹಿಳೆಯರು, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು ಇವು ನಾಲ್ಕು ಶ್ರೇಷ್ಠ ಪುಸ್ತಕಗಳು ಕನ್ನಡಕ್ಕಂತೂ ಹೊಸ ಅನುಭವ ನೀಡಿದವು! ಅವುಗಳು ಮೈ ನವಿರೇಳಿಸುವ ಹೋರಾಟದ ಕಥೆಗಳು!
ನಿಮ್ಮ ಮನೆಗೊಂದು ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಇವುಗಳು ಮಕ್ಕಳಿಗಾಗಿ ಅವರು ಬರೆದ ಸಣ್ಣ ಸಣ್ಣ ಪುಸ್ತಕಗಳು.
ಜೀವನ ಚರಿತ್ರೆಯ ವಿಭಾಗದಲ್ಲಿ ಬೆಳಗೆರೆ ಜಾನಕಮ್ಮ, ಬೆಳಕಿಗೊಂದು ಕಿರಣ ಮೇರಿ ಕ್ಯೂರಿ, ಥಾಮಸ್ ಆಲ್ವಾ ಎಡಿಸನ್, ವೆಲ್ಲೂರು ಆಸ್ಪತ್ರೆಯ ಸ್ಥಾಪಕಿ ಡಾಕ್ಟರ್ ಐಡಾ ಸೋಫಿಯಾ ಸ್ಕಡರ್ ಅವರ ಬದುಕಿನ ಕಥೆಗಳು ನಮ್ಮನ್ನು ಅನೂಹ್ಯವಾದ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ.
ವಿಜ್ಞಾನಿಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲು ಅವರು ತಮ್ಮ ರಜೆಯ ಅವಧಿಯಲ್ಲಿ ದೀರ್ಘವಾದ ಯುರೋಪ್ ಮತ್ತು ಅಮೆರಿಕ ಪ್ರವಾಸಗಳನ್ನು ಮಾಡಿದರು. ಆಗ ಹಿಟ್ಲರ್ ನಡೆಸಿದ ನಾಝಿ ಕ್ಯಾಂಪಿನ ಸಂತ್ರಸ್ತರ ಕುಟುಂಬವನ್ನು ಭೇಟಿ ಆದದ್ದು, ಮೇರಿ ಕ್ಯೂರಿ ಅವರ ಊರಲ್ಲಿ ಸುತ್ತಾಡಿದ್ದು, ಅಮೆರಿಕಾದ ಪೆರುವಿನ ಕಣಿವೆಯಲ್ಲಿ ಹಲವು ದಿನ ಹುಡುಕಾಟಗಳನ್ನು ನಡೆಸಿದ್ದು, ಅಮೆಜಾನ್ ನದಿಯ ಉದ್ದಕ್ಕೂ ದೋಣಿ ವಿಹಾರ ಮಾಡಿದ್ದು, 18 ಧೂಮಕೇತುಗಳನ್ನು ಕಂಡು ಹಿಡಿದ ಮಹಿಳಾ ವಿಜ್ಞಾನಿ ಕ್ಯಾರೋಲಿನ್ ಹರ್ಷಲ್ ಬರೆದ ಡೈರಿಯ ಪುಟ ಓದಿದ್ದು…ಇವೆಲ್ಲ ಅನುಭವಗಳು ಮುಂದೆ ಅವರ ಹಲವು ಪುಸ್ತಕಗಳಿಗೆ ಭರಪೂರ ಸಾಮಗ್ರಿಯನ್ನು ಒದಗಿಸಿದವು. ಅವರು ಬರೆದ ಎರಡು ಶ್ರೇಷ್ಠವಾದ ಪ್ರವಾಸ ಕಥನಗಳು ಎಂದರೆ ‘ಒಂದು ಕನಸಿನ ಪಯಣ’ ಮತ್ತು ‘ಪೆರುವಿನ ಪವಿತ್ರ ಕಣಿವೆಯಲ್ಲಿ’! ಈ ಪುಸ್ತಕಗಳನ್ನು ಓದುತ್ತಾ ಹೋದಂತೆ ನಮ್ಮ ಕೈಯನ್ನು ಹಿಡಿದು ಯುರೋಪ್ ಮತ್ತು ಅಮೆರಿಕಾ ಖಂಡಗಳ ಪ್ರವಾಸಗಳನ್ನು ಮಾಡಿಸುತ್ತವೆ. ಇವು ಕನ್ನಡದ ಶ್ರೇಷ್ಠ ಪ್ರವಾಸ ಕಥನಗಳಲ್ಲಿ ಎತ್ತರವಾದ ಸ್ಥಾನ ಪಡೆದಿವೆ.
ಮಹಾಯುದ್ದದ ಹಿನ್ನೆಲೆಯ ಕಥೆಯನ್ನು ಹೊಂದಿರುವ ಅವರ ‘ಯಾದ್ ವಶೆಮ್’ ಕನ್ನಡದ ಬಹು ಶ್ರೇಷ್ಠ ಕಾದಂಬರಿಗಳಲ್ಲಿ ಸ್ಥಾನ ಪಡೆಯಿತು. ಅದನ್ನು ಓದುತ್ತಾ ಹೋದಂತೆ ಯುದ್ಧಗಳ ಕ್ರೌರ್ಯ ಕಣ್ಣ ಮುಂದೆ ಬಂದು ನಮ್ಮ ರಕ್ತ ಬಿಸಿಯಾಗುತ್ತಾ ಹೋಗುತ್ತದೆ!
ನೇಮಚಂದ್ರ ಅವರ ಸಣ್ಣ ಕತೆಗಳ ಸಂಕಲನಗಳು ನಮ್ಮನ್ನು ಪೂರ್ತಿ ಆವರಿಸುವ ಸಾಮರ್ಥ್ಯವನ್ನು ಪಡೆದಿವೆ. ಅವುಗಳಲ್ಲಿ ಅತ್ಯುತ್ತಮ ಪುಸ್ತಕಗಳು ಇವು.
೧) ಬದುಕು ಬದಲಿಸಬಹುದು.
೨) ಸಾವೇ ನಾಳೆ ಬಾ.
೩)ಸೋಲೆಂಬುವುದು ಅಲ್ಪ ವಿರಾಮ.
೪) ನೇಮಿಚಂದ್ರರ ಕಥೆಗಳು.
೫) ನೋವಿಗದ್ದಿದ ಕುಂಚ
೬) ಸಂತಸ ನನ್ನೆದೆಯ ಹಾಡು ಹಕ್ಕಿ.
೭) ನನ್ನ ಕಥೆ ನಮ್ಮ ಕಥೆ.
೮) ದುಡಿವ ಹಾದಿಯಲ್ಲಿ ಜೊತೆಯಾಗಿ.
೯) ಕಳೆಯಬೇಕಿದೆ ನಿನ್ನ ಜೊತೆಗೆ ಒಂದು ಶಾಮಲ ಸಂಜೆ.
೧೦) ಮತ್ತೆ ಬರೆದ ಕಥೆಗಳು.
೧೧) ನನ್ನ ಕನಸುಗಳಲ್ಲಿ ನೀವಿದ್ದೀರಿ.
ಇವುಗಳೆಲ್ಲವೂ ಬದುಕಿನ ಹೋರಾಟದ, ಸೌಂದರ್ಯದ, ಅನುಭವದ ಕಥೆಗಳು! ಶ್ರೇಷ್ಠ ಸಾಧಕರ ಸಾಧನೆಯ ಕಥೆಗಳು! ಓದಿ ಮುಗಿಸಿ ಪುಸ್ತಕ ಕೆಳಗಿಟ್ಟ ನಂತರವೂ ನಮಗೆ ಅವುಗಳ ಗುಂಗಿನಿಂದ ಹೊರಬರಲು ಸಾಧ್ಯವೇ ಆಗುವುದಿಲ್ಲ! ನೇಮಚಂದ್ರ ಅವರ ಪ್ರತೀ ಕಥೆಯೂ ಜೀವನದ ಸಕಾರಾತ್ಮಕ ಮುಖಗಳನ್ನು ಪರಿಚಯ ಮಾಡುವ ಕಾರಣ ವಿಕಸನದ ಕಥೆಗಳಾಗಿಯೂ ಜನಪ್ರಿಯತೆ ಪಡೆದಿವೆ. ಅವೆಲ್ಲವೂ ಭಾವಸ್ಪರ್ಷದ ಕಥೆಗಳು. ಅವುಗಳನ್ನು ಓದುವಾಗ ನಮಗೆ ಅರಿವೇ ಇಲ್ಲದಂತೆ ಕಣ್ಣೀರು ಸುರಿಯುತ್ತದೆ. ನೇಮಚಂದ್ರ ಅವರ ಹೆಸರು ಇವತ್ತು ಬಹಳ ಎತ್ತರದಲ್ಲಿ ಇರಲು ಕಾರಣ ಇಂಥ ನೂರಾರು ಕಥೆಗಳು!
ನೇಮಿಚಂದ್ರ ಅವರು ಇಂದು ಕನ್ನಡದ ಟ್ರೆಂಡ್ ಸೆಟ್ಟರ್ ಲೇಖಕಿ. ಅವರಿಗೆ ಲಕ್ಷಾಂತರ ಯುವ ಓದುಗರು ಇದ್ದಾರೆ. ಅವರ ಹಲವು ಪುಸ್ತಕಗಳಿಗೆ ಅತ್ತಿಮಬ್ಬೆ ಪ್ರಶಸ್ತಿ, ಗೊರೂರು ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸಂದೇಶ ಪ್ರಶಸ್ತಿ,ಅಮ್ಮ ಪ್ರಶಸ್ತಿ ಇವುಗಳು ದೊರೆತಿವೆ. ಕನ್ನಡ ಸಾಹಿತ್ಯ ಅಕಾಡೆಮಿಯ ಶ್ರೇಷ್ಠ ಜೀವಮಾನದ ಪ್ರಶಸ್ತಿ ಪಡೆದ ಕನ್ನಡದ ಕೆಲವೇ ಲೇಖಕರಲ್ಲಿ ಅವರು ಒಬ್ಬರು. ತನ್ನ ಹೃದಯಸ್ಪರ್ಶಿ ಕಥೆಗಳ ಮೂಲಕ ಕನ್ನಡದ ಯುವ ಓದುಗರ
ಭಾವಕೋಶವನ್ನು ಶ್ರೀಮಂತವನ್ನಾಗಿ ಮಾಡಿರುವ ನೇಮಿಚಂದ್ರ ಅವರಿಗೆ ನಮ್ಮ ಧನ್ಯವಾದಗಳು. ಅವರ ಪುಸ್ತಕಗಳು ನಮ್ಮ ಬದುಕನ್ನು ಬದಲಿಸುವುದು ಖಂಡಿತ!
ಇದನ್ನೂ ಓದಿ| ರಾಜ ಮಾರ್ಗ ಅಂಕಣ| 3 ವರ್ಷ ಹಾಸಿಗೆ ಮೇಲೆ ಶವದಂತೆ ಬಿದ್ದುಕೊಂಡಿದ್ದ ಈ ಮಹಾನ್ ನಟ ಚಿಯಾನ್ ವಿಕ್ರಮ್!