ದೀಪಾವಳಿಯು ದೇಶದ ಅತೀ ದೊಡ್ಡ ಹಬ್ಬ. ಜಗತ್ತಿನ ಎರಡನೆಯ ಅತೀ ದೊಡ್ಡ ಹಬ್ಬ. ಜಗತ್ತಿನ 130ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸದಲ್ಲಿ ಆಚರಿಸುವ ಕೆಲವೇ ಕೆಲವು ವಿದೇಶದ ಹಬ್ಬಗಳಲ್ಲಿ ದೀಪಾವಳಿ ಕೂಡ ಒಂದು. ದೀಪಾವಳಿಯನ್ನು ಒಂದು ಹಬ್ಬ ಎನ್ನುವುದಕ್ಕಿಂತ ಹಲವು ಹಬ್ಬಗಳ ಸಂಕೀರ್ಣ ಎನ್ನಬಹುದು. ಭಾರತೀಯರ ಹಬ್ಬಗಳೇ ಹಾಗೆ! ನವರಾತ್ರಿ ಒಂಬತ್ತು ದಿನಗಳ ಹಬ್ಬ ಆದರೆ ಶಿವರಾತ್ರಿಯು ಮೂರು ದಿನಗಳ ಹಬ್ಬ! ದೀಪಾವಳಿಯು ಮೂರು ದಿನಗಳ ಭರ್ಜರಿ ಹಬ್ಬ.
ನಮ್ಮೊಳಗಿನ ಬೆಳಕಿನ ಬೀಜಗಳು!
ಬೆಳಕು ಹುಟ್ಟಬೇಕಾದರೆ ಕತ್ತಲೆಯು ಸಾಯಬೇಕು. ಬೆಳಕು ಹುಟ್ಟುವುದೇ ಕತ್ತಲೆಯ ಅನುಪಸ್ಥಿತಿಯಲ್ಲಿ! ಕತ್ತಲೆಯು ಅಜ್ಞಾನದ ಪ್ರತೀಕವಾದರೆ ಬೆಳಕು ಜ್ಞಾನದ ಸಂಕೇತ. ಇಡೀ ಜಗತ್ತಿಗೆ ಜ್ಞಾನವನ್ನು ಹಂಚಿದ ರಾಷ್ಟ್ರದಲ್ಲಿ ಬೆಳಕಿಗೆ ಹೆಚ್ಚು ಆದ್ಯತೆ. ಕತ್ತಲೆಯು ಅಹಂನ ಸಂಕೇತವಾದರೆ ಬೆಳಕು ಸಜ್ಜನಿಕೆಯ ಸಂಕೇತ! ಕತ್ತಲೆಯು ದರ್ಪದ ಸಂಕೇತವಾದರೆ ಬೆಳಕು ಮುಗ್ಧತೆಯ ಸಂಕೇತ! ಕತ್ತಲೆಯು ಮೌಢ್ಯದ ಸಂಕೇತವಾದರೆ ಬೆಳಕು ವಿಜ್ಞಾನದ ಸಂಕೇತ! ಕತ್ತಲೆಯು ಸಂಶಯದ ಸಂಕೇತವಾದರೆ ಬೆಳಕು ನಂಬಿಕೆಯ ಸಂಕೇತ!
ದೀಪಾವಳಿ ಬೆಳಕಿನ ಹಬ್ಬದ ಬೆಳಕಿನ ಬೀಜಗಳನ್ನು ಒಂದೊಂದಾಗಿ ನೋಡಿಕೊಂಡು ಬರೋಣ.
ಮೊದಲನೆಯ ಬೆಳಕಿನ ಬೀಜ – ನಮ್ಮೊಳಗಿನ ನರಕಾಸುರ
ದುಷ್ಟನಾದ ನರಕಾಸುರನಿಗೆ ಅಮರತ್ವವನ್ನು ಪಡೆಯಬೇಕು ಎಂಬ ದುರಾಸೆ ಉಂಟಾಯಿತು. ಅದಕ್ಕೆ ದೇವರನ್ನು ಕುರಿತು ತಪಸ್ಸು ಮಾಡಿ ಪಡೆದ ವರವು ಅದಕ್ಕೆ ಪೂರಕ ಆದದ್ದೇ. ಕೇವಲ ಕ್ಷತ್ರಿಯ ಕನ್ಯೆಯಲ್ಲಿ ಹುಟ್ಟಿದ ಮಗುವಿನಿಂದ ಮಾತ್ರ ತನಗೆ ಸಾವು ಬರಲಿ ಎಂಬುದು ವರ! ಅದು ಪೂರ್ತಿ ಆಗಬೇಕಾದರೆ ಕ್ಷತ್ರಿಯ ಕನ್ಯೆಯರು ಹೆರಬೇಕು! ಅದನ್ನೇ ತಡೆದರೆ ? ಸೃಷ್ಟಿ ಚಕ್ರವನ್ನೇ ತಡೆಯಲು ಹೊರಟರೆ..?
ಅದಕ್ಕಾಗಿ ಆತ ಜಗತ್ತಿನ ಸಾವಿರಾರು ಕ್ಷತ್ರಿಯ ಕನ್ಯೆಯರನ್ನು ಬಂಧಿಸಿ ತಂದು ಸೆರೆಮನೆಯಲ್ಲಿ ಕೂಡಿ ಹಾಕುತ್ತಾನೆ. ತನ್ನ ಅಮರತ್ವದ ಸ್ವಾರ್ಥಕ್ಕಾಗಿ ಹದಿಹರೆಯದ ಕ್ಷತ್ರಿಯ ಕನ್ಯೆಯರ ಕಾಮನೆಗಳನ್ನು ಬಲಿ ಕೊಡುತ್ತಾನೆ. ಅವರೆಲ್ಲರೂ ಕೃಷ್ಣನ ಮೊರೆ ಹೋದಾಗ ದೇವರು ಬಂದು ನರಕಾಸುರನ ಸಂಹಾರ ಮಾಡಿ ಅಷ್ಟೂ ಕ್ಷತ್ರಿಯ ಕನ್ಯೆಯರನ್ನು ಸೆರೆಯಿಂದ ಬಿಡಿಸುತ್ತಾನೆ. ಅಮರತ್ವದ ದುರಾಸೆಯನ್ನು ಸುಟ್ಟು ಹಾಕಿ ಅವರ ಸ್ತ್ರೀ ಸಹಜ ಕಾಮನೆಗಳ ಹಣತೆ ಹಚ್ಚುತ್ತಾನೆ. ಸೆರೆಮನೆಯ ದಾಸ್ಯವನ್ನು ಕಳೆದು ಸ್ವಾತಂತ್ರ್ಯದ ಹಣತೆ ಹಚ್ಚುತ್ತಾನೆ!
ಎರಡನೆಯ ಬೆಳಕಿನ ಬೀಜ – ಶ್ರೀರಾಮ ದೇವ ಮನೆಗೆ ಬಂದ!
ವಿಜಯ ದಶಮಿಯಂದು ರಾವಣನ ವಧೆ ಮಾಡಿದ ಶ್ರೀರಾಮ ದೇವರು ದೀಪಾವಳಿ ಅಮಾವಾಸ್ಯೆಯ ದಿನ ಮತ್ತೆ ತನ್ನ ತಾಯ್ನೆಲವಾದ ಅಯೋಧ್ಯೆಗೆ ಮರಳುತ್ತಾನೆ.
ಅಯೋಧ್ಯೆಯ ಜನ ತಮ್ಮ ರಾಮ ದೇವರನ್ನು ದೀಪ ಹಚ್ಚಿ, ತಳಿರು ತೋರಣಗಳಿಂದ ಸ್ವಾಗತ ಮಾಡಿದರು. ಹದಿನಾಲ್ಕು ವರ್ಷಗಳ ನಂತರ ತಮ್ಮ ಮನೆ, ಮನದ ದೇವರನ್ನು ಮನೆ ತುಂಬಿಸಿದ ಅವರ ಆನಂದಕ್ಕೆ ಪಾರವೇ ಇರಲಿಲ್ಲ. ಸ್ವರ್ಗಕ್ಕಿಂತ ಹಿರಿದಾದ ತನ್ನ ಅಯೋಧ್ಯೆಗೆ ಹಿಂದಿರುಗಿದಾಗ ರಾಮನ ಖುಷಿ ಎಷ್ಟಿರಬಹುದು? ಅಷ್ಟೂ ದಿನ ಪಾದುಕೆಗಳನ್ನು ಸಿಂಹಾಸನದ ಮೇಲೆ ಇಟ್ಟು ಪೂಜೆ ಮಾಡುತ್ತ ರಾಮನ ದಾರಿ ಕಾಯುತ್ತಿದ್ದ ಭರತನ ಖುಷಿ ಎಷ್ಟಿರಬಹುದು? ತನ್ನ ತಪ್ಪುಗಳಿಗಾಗಿ ಕಣ್ಣೀರು ಸುರಿಸುತ್ತ ಹದಿನಾಲ್ಕು ವರ್ಷಗಳ ಕಾಲ ಕತ್ತಲೆಯ ಕೋಣೆಯಲ್ಲಿ ಪ್ರಾಯಶ್ಚಿತ್ತ ಮಾಡುತ್ತಿದ್ದ ಕೈಕೇಯಿ ದೇವಿಯ ಪ್ರೀತಿ ಎಷ್ಟಿರಬಹುದು? ತನ್ನ ಗಂಡನ ನಿರೀಕ್ಷೆಯಲ್ಲಿ ಅಷ್ಟೂ ದಿನ ಚಂದ್ರಕಾಂತ ಶಿಲೆಯ ಮೇಲೆ ಮಲಗಿದರೂ ವಿರಹದ ಬಿಸಿ ಉಸಿರನ್ನು ಹತ್ತಿಕ್ಕುತ್ತಿದ್ದ ಲಕ್ಷ್ಮಣನ ಹೆಂಡತಿ ಊರ್ಮಿಳೆಯ ತಾಳ್ಮೆಯು ಎಷ್ಟಿರಬಹುದು? ಇವೆಲ್ಲ ನಿರೀಕ್ಷೆಗಳ ಕಾರ್ಮೋಡವು ಕರಗಿಹೋಗಿ ರಾಮದೇವರು ಅಯೋಧ್ಯೆಯ ನೆಲದಲ್ಲಿ ಊರಿದ ದೇಶಾಭಿಮಾನದ ಪಾದವು ಅದು ಖಂಡಿತವಾಗಿ ಎರಡನೆಯ ಬೆಳಕಿನ ಬೀಜ!
ಮೂರನೇ ಬೆಳಕಿನ ಬೀಜ – ಗೋ ಪೂಜೆ
ಮೂವತ್ತಮೂರು ಕೋಟಿ ದೇವತೆಗಳು ಗೋಮಾತೆಯ ಮೈಯ್ಯಲ್ಲಿ ವಾಸವಾಗಿವೆ ಎಂದು ನಂಬುವ ಹಿಂದೂಗಳು, ಗೋಮಾತೆಯ ಹಾಲು ಕುಡಿದು ಆಕೆಯನ್ನು ಎರಡನೇ ತಾಯಿಯಾಗಿ ಸ್ವೀಕಾರ ಮಾಡಿದ ಹಿಂದೂಗಳು ರಾಷ್ಟ್ರೀಯ ಪ್ರಾಣಿಯಾಗಿ ಹುಲಿಯು ಆಯ್ಕೆ ಆದಾಗ ಒಂದಕ್ಷರ ಪ್ರತಿಭಟನೆ ಮಾಡಲಿಲ್ಲ! ಗೋಪೂಜೆಯ ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಾಣಿಯಾಗಿ ಗೋಮಾತೆಯನ್ನು ಘೋಷಿಸಲು ಸರಕಾರಗಳು ಸಂಕಲ್ಪ ಮಾಡಬೇಕು. ಗ್ರಾಮಕ್ಕೆ ಒಂದರ ಹಾಗೆ ಒಂದು ಗೋಶಾಲೆ ಸ್ಥಾಪನೆ, ಅನುಕೂಲತೆ ಇರುವವರು ಒಂದಾದರೂ ದನವನ್ನು ಮನೆಯಲ್ಲಿ ಸಾಕುವ ಜವಾಬ್ದಾರಿ ತೆಗೆದುಕೊಳ್ಳುವುದು ಮೂರನೇ ಬೆಳಕಿನ ಬೀಜ! ಇಲ್ಲವಾದರೆ ಗೋಪೂಜೆಯು ಒಂದು ದಿನದ ಆಚರಣೆಗೆ ಸೀಮಿತ ಆಗಬಹುದು!
ನಾಲ್ಕನೆಯ ಬೆಳಕಿನ ಬೀಜ – ಲಕ್ಷ್ಮಿ ಪೂಜೆ!
ನಮ್ಮ ಹಿರಿಯರು ದುಡ್ಡು, ಬಂಗಾರವನ್ನು ಮಾತ್ರ ಸಂಪತ್ತು ಎಂದು ಭಾವಿಸಿದವರು ಅಲ್ಲ! ಧನ, ಧಾನ್ಯ, ಸಂತಾನ, ವಿಜಯ, ಶೌರ್ಯ, ಆಯಸ್ಸು. ಹೀಗೆ ಎಲ್ಲವೂ ಸಂಪತ್ತಿನ ವಿವಿಧ ಮುಖಗಳು. ಈ ಎಲ್ಲ ಸಂಪತ್ತುಗಳು ನಮ್ಮ ಮನೆಗೆ ನ್ಯಾಯವಾದ ಮಾರ್ಗದಲ್ಲಿ ಬರಲಿ ಮತ್ತು ಶಾಶ್ವತವಾಗಿ ನೆಲೆಯಾಗಲಿ ಎನ್ನುವುದೇ ನಾಲ್ಕನೇ ಬೆಳಕಿನ ಬೀಜ.
ಐದನೇ ಬೆಳಕಿನ ಬೀಜ – ನಮ್ಮೊಳಗಿನ ಬಲಿಯ ಬಲಿ!
ಇಡೀ ಜಗತ್ತನ್ನು ತನ್ನ ಶಕ್ತಿ ಹಾಗೂ ಸಾಮರ್ಥ್ಯಗಳ ಮೂಲಕ ಗೆಲ್ಲಲು ಹೊರಟ ಬಲಿ ಚಕ್ರವರ್ತಿ ಅದಕ್ಕಾಗಿ ಆರಿಸಿಕೊಂಡ ದಾರಿ ನೂರು ಯಜ್ಞಗಳನ್ನು ಮಾಡುವುದು. ಆತನು ಸಾಮ್ರಾಜ್ಯಶಾಹಿ ಚಿಂತನೆಯವನು! ಇಡೀ ಭೂಮಿಯನ್ನು ಗೆದ್ದರೂ ಆತನ ಸಾಮ್ರಾಜ್ಯ ವಿಸ್ತರಣೆಯ ದಾಹ ಇಂಗಲೇ ಇಲ್ಲ. ಕೊನೆಗೆ ದೇವೇಂದ್ರನ ಅಮರಾವತಿಯ ಮೇಲೆ ಅವನ ಕಣ್ಣು ಬಿದ್ದಾಗ ದೇವತೆಗಳ ಪ್ರಾರ್ಥನೆಯ ಫಲವಾಗಿ ಮಹಾವಿಷ್ಣುವು ವಾಮನ ಮೂರ್ತಿಯಾಗಿ ಬಂದು ಅವನನ್ನು ಪಾತಾಳಕ್ಕೆ ತಳ್ಳಿದ್ದು ನಮಗೆಲ್ಲ ಗೊತ್ತಿದೆ. ಸಾಮ್ರಾಜ್ಯ ದಾಹವು ತೊಲಗಿ, ನಮ್ಮೊಳಗಿನ ಅಹಂ ನಾಶವಾಗಿ ವಿವೇಕ ಶಕ್ತಿಯು ಮೂಡುವುದೇ ಬೆಳಕಿನ ಐದನೇ ಬೀಜ. ಗದ್ದೆಯ ನಡುವೆ ದೊಂದಿಯ ದೀಪವನ್ನು ಹಚ್ಚಿ ಅದರ ಬೆಳಕಿನಲ್ಲಿ ಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ಜಾನಪದರ ಪಾಡ್ದನಗಳು ನಮ್ಮ ಬೆಳಕಿನ ಬೀಜಗಳು.
ಈ ಎಲ್ಲ ಬೆಳಕಿನ ಬೀಜಗಳು ನಮ್ಮೊಳಗಿನ ತಮವನ್ನು ಕಳೆದು ಸುಜ್ಞಾನದ ಹಣತೆಯನ್ನು ಬೆಳಗಲಿ ಎನ್ನುವುದೇ ನಮ್ಮ ಪ್ರಾರ್ಥನೆ ಆಗಲಿ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ನಂಬಿಕೆಗಳಿಂದ ಪವಾಡ ನಡೆಯೋದು ನಿಜವಾ? ದೇವರು ದೊಡ್ಡವನಾ, ವಿಜ್ಞಾನವಾ?