ಅಮಿತಾಭ್ ಬಚ್ಚನ್ ಬಾಲಿವುಡ್ ರಂಗಕ್ಕೆ ಪದಾರ್ಪಣೆ ಮಾಡಿ 53 ವರ್ಷಗಳು ಪೂರ್ತಿ ಆದವು. ಆತನ ಪ್ರತಿಭೆ, ಅಭಿನಯ ಸಾಮರ್ಥ್ಯ ಮತ್ತು ಸವಾಲನ್ನು ಸ್ವೀಕರಿಸುವ ರೀತಿಗೆ ಯಾರಾದರೂ ಫಿದಾ ಆಗಲೇ ಬೇಕು. ಆತನ ಜೀವನದಲ್ಲಿ ಬಂದ ಅಷ್ಟೂ ಏರಿಳಿತಗಳು ಆತನ ಬದುಕಿಗೆ ನಿರ್ಣಾಯಕ ತಿರುವನ್ನು ಕೊಡುತ್ತಾ ಹೋದವು.
ಆತ ಎದುರಿಸಿರುವ ಮತ್ತು ಗೆದ್ದಿರುವ ನೂರಾರು ಸವಾಲುಗಳಲ್ಲಿ ಕೇವಲ ಆರು ಸವಾಲುಗಳ ಬಗ್ಗೆ ಮಾತ್ರ ನಾನು ಇಲ್ಲಿ ಬರೆಯುತ್ತೇನೆ.
1) ಪದವಿ ಶಿಕ್ಷಣ ಪಡೆದ ಯುವಕ ಮೊದಲ ಅರ್ಜಿ ಹಾಕಿದ್ದು ಆಕಾಶವಾಣಿಗೆ. ಅದು ವಾರ್ತೆಗಳನ್ನು ಓದುವ ಉದ್ಯೋಗ. ಆದರೆ ಅಮಿತಾಭ್ ಅರ್ಜಿ ಕಸದ ತೊಟ್ಟಿ ಸೇರಿತು. ಯಾಕೆಂದರೆ ಆತನ ಧ್ವನಿಯಲ್ಲಿ ಸ್ಪಷ್ಟತೆ ಇಲ್ಲ ಎಂದಿತ್ತು ಆಕಾಶವಾಣಿ!
ಮುಂದೆ 2000ರ ನಂತರ ಕೌನ್ ಬನೇಗಾ ಕರೋಡ್ ಪತಿ ಸರಣಿ ಆರಂಭ ಆದ ನಂತರ ರಿಜೆಕ್ಟ್ ಆಗಿದ್ದ ಅದೇ ಧ್ವನಿಯು ನಮ್ಮ ಡ್ರಾಯಿಂಗ್ ರೂಮನ್ನು ಅಲ್ಲಾಡಿಸಿ ಬಿಟ್ಟದ್ದು ನಮಗೆಲ್ಲ ಗೊತ್ತಿದೆ. ಈಗ ಅಮಿತಾಬ್ ಬಚ್ಚನ್ ಧ್ವನಿಯು ಕೋಟಿ ಬೆಲೆಗೆ ವಿಮೆಯನ್ನು ಕೂಡ ಪಡೆದಿದೆ!
2) ಅಮಿತಾಭ್ ಬಚ್ಚನ್ ಆಕಾಶವಾಣಿಯಲ್ಲಿ ರಿಜೆಕ್ಟ್ ಆದ ನಂತರ ಅರ್ಜಿ ಹಾಕಿದ್ದು ದೂರದರ್ಶನಕ್ಕೆ. ಅಲ್ಲಿ ಕೂಡ ವಾರ್ತೆ ಓದುವ ಉದ್ಯೋಗ. ಆದರೆ ದುರದೃಷ್ಟ ಅಲ್ಲಿಯೂ ಬೆನ್ನು ಬಿಡಲಿಲ್ಲ. ಅಮಿತಾಭ್ ಮತ್ತೆ ರಿಜೆಕ್ಟ್ ಆದರು. ಕಾರಣ ಅವರ ಮುಖವು ಫೋಟೊಜೆನಿಕ್ ಅಲ್ಲ ಎಂದು ಕಾರಣ ನೀಡಿತು ದೂರದರ್ಶನ! ಆದರೆ ಮುಂದೆ ಕೆಲವೇ ವರ್ಷಗಳ ಅವಧಿಯಲ್ಲಿ ಅದೇ ಅಮಿತಾಭ್ ಮುಖವು ಅತೀ ಹೆಚ್ಚು ತಾರಾಮೌಲ್ಯವನ್ನು ಪಡೆಯಿತು!
3) ಅಮಿತಾಭ್ ಅಭಿನಯಿಸಿದ ಮೊದಲ ಸಿನಿಮಾ ಸಾಥ್ ಹಿಂದೂಸ್ತಾನಿ. ಅದು ಫ್ಲಾಪ್ ಆಯಿತು. ಮುಂದೆ ಆತನ ಏಳು ಸಿನೆಮಾಗಳು ದಯನೀಯವಾಗಿ ಸೋತವು! ಬೇರೆ ಯಾರಾದರೂ ಆಗಿದ್ದರೆ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ಬೇರೆ ಕ್ಷೇತ್ರ ಹುಡುಕುತ್ತಿದ್ದರು. ಆದರೆ ಅಮಿತಾಭ್ ಹಾಗೆ ಮಾಡಲಿಲ್ಲ. ಬೆಟ್ಟದಷ್ಟು ತಾಳ್ಮೆ ಮತ್ತು ಬದ್ಧತೆ ಆತನನ್ನು ಗೆಲ್ಲಿಸಿತು. ಎಂಟನೇ ಸಿನಿಮಾ ಜಂಜೀರ್ ಸೂಪರ್ ಹಿಟ್ ಆಯಿತು! ಮುಂದೆ ಆಂಗ್ರಿ ಯಂಗ್ ಮ್ಯಾನ್ ಹಿಂದೆ ತಿರುಗಿ ನೋಡಲೇ ಇಲ್ಲ!
4) ಅಮಿತಾಭ್ ಬಚ್ಚನ್ ತನ್ನ ಸಾಧನೆಯ ತುತ್ತ ತುದಿಯಲ್ಲಿ ಇದ್ದಾಗ ಪ್ರೀತಿ ಮಾಡಿದ್ದು ಆಗಿನ ಕೃಷ್ಣ ಸುಂದರಿ ರೇಖಾರನ್ನು. ಆದರೆ ದುರಹಂಕಾರ ಮತ್ತು ಮಹತ್ವಾಕಾಂಕ್ಷೆ ಹೊಂದಿದ್ದ ರೇಖಾ ನಿಷ್ಠೆಯನ್ನು ಬದಲಾಯಿಸಿ ಬೇರೆಯವರ ಜತೆ ಹೊರಟರು! ಆಗ ತುಂಬಾ ನೊಂದ ಅಮಿತಾಭ್ ಮುಂದೆ ಶೋಲೆ ಸಿನೆಮಾ ಶೂಟಿಂಗ್ ಹೊತ್ತಲ್ಲಿ ಜಯಾ ಬಾಧುರಿಯನ್ನು ಪ್ರೀತಿಸಿ ಮದುವೆ ಆದರು ಮತ್ತು ಅದೇ ನಿಷ್ಠೆಯಿಂದ ಮುಂದುವರಿದರು.
5) ಅಮಿತಾಭ್ ಎದುರಿಸಿದ ಅತ್ಯಂತ ಕಷ್ಟವಾದ ಸವಾಲು ಅವರ ಆರೋಗ್ಯಕ್ಕೆ ಸಂಬಂಧಪಟ್ಟದ್ದು. ಬೆಂಗಳೂರಿನಲ್ಲಿ ಕೂಲಿ ಸಿನಿಮಾ ಶೂಟಿಂಗ್ ಹೊತ್ತಲ್ಲಿ ಫೈಟಿಂಗ್ ಸೀನ್ ಶೂಟ್ ಮಾಡುತ್ತಿದ್ದಾಗ ಕಬ್ಬಿಣದ ಟೇಬಲ್ ಮೇಲೆ ಬಿದ್ದು ಹೊಟ್ಟೆಗೆ ಗಾಯ ಮಾಡಿಕೊಂಡರು. ಹೊಟ್ಟೆ ಒಳಗಿನ ರಕ್ತಸ್ರಾವ ನಿಯಂತ್ರಣಕ್ಕೆ ಬರಲಿಲ್ಲ. ಅಮಿತಾಭ್ ಅಸ್ತಮಾ ರೋಗಿ ಕೂಡ. ವೈದ್ಯರು ಕೈಚೆಲ್ಲಿ ಕೂತರು. ದೇಶದಾದ್ಯಂತ ಅಭಿಮಾನಿಗಳು ಅಮಿತಾಭ್ ಪರವಾಗಿ ಪೂಜೆ, ಪುನಸ್ಕಾರಗಳನ್ನು ನಡೆಸಿದರು. ಸಾಮೂಹಿಕ ಪ್ರಾರ್ಥನೆಗಳು ನಡೆದವು. ಅತ್ಯಂತ ಪ್ರಬಲವಾದ ಇಚ್ಛಾಶಕ್ತಿಯ ನೆರವಿನಿಂದ ಅಮಿತಾಭ್ ಕಂ ಬ್ಯಾಕ್ ಮಾಡಿದರು. ಮತ್ತೆ ಎದ್ದುಬಂದು ಮೊದಲಿಗಿಂತ ಹೆಚ್ಚು ಸಕ್ರಿಯರಾಗಿ ಸಿನಿಮಾರಂಗದಲ್ಲಿ ತೊಡಗಿಸಿಕೊಂಡರು! ಆತನ ಮಹಾನ್ ಸಿನಿಮಾಗಳು ಬಂದದ್ದು ಈ ಘಟನೆಯು ನಡೆದ ನಂತರವೇ!
6) ಅಮಿತಾಭ್ ಮುಂದೆ ಬಂದ ಅತೀ ದೊಡ್ಡ ಸವಾಲು ದುಡ್ಡಿನ ಸಮಸ್ಯೆ! ಅಮಿತಾಭ್ ತನ್ನ ಹೆಸರಿನ ಒಂದು ಕಂಪೆನಿ (ABCL) ಸ್ಥಾಪನೆ ಮಾಡಿ ಸಿನಿಮ ನಿರ್ಮಾಣ ಕ್ಷೇತ್ರಕ್ಕೆ ಇಳಿದರು. ಅತಿಯಾದ ಆತ್ಮವಿಶ್ವಾಸದಿಂದ ಬೆಂಗಳೂರಿನಲ್ಲಿ ವಿಶ್ವ ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಿದರು. ಎಲ್ಲವೂ ಲಾಸ್ ಆಯಿತು. ನಿರ್ಮಾಣ ಮಾಡಿದ ಸಿನಿಮಾಗಳು ಕೈ ಕೊಟ್ಟವು! ಅಮಿತಾಭ್ ಎಲ್ಲವನ್ನೂ ಕಳೆದುಕೊಂಡು ದಿವಾಳಿ ಆದರು. ಸ್ವಂತ ಮನೆಯನ್ನು ಮಾರಿ ಬಾಡಿಗೆ ಮನೆಗೆ ಬಂದರು. ಅಮಿತಾಭ್ ಜೀವನದ ಅತ್ಯಂತ ಕರಾಳ ದಿನಗಳು ಅವು.
ಆಗ ಆತನ ನೆರವಿಗೆ ಬಂದವರು ಅವರ ತಂದೆಯ ಸ್ನೇಹಿತರಾದ ಧೀರುಭಾಯ್ ಅಂಬಾನಿಯವರು. ಅವರು ಅಮಿತಾಭ್ ಅವರನ್ನು ತನ್ನ ಮನೆಗೆ ಕರೆಸಿ ನೀಡಿದ ಅದ್ಭುತ ಸಲಹೆ – ಅಮಿತಾಬ್, ನೀನು ಏನು ಚೆನ್ನಾಗಿ ಮಾಡುತ್ತೀಯೋ ಅದನ್ನು ಮಾತ್ರ ಮಾಡು! ನಿನ್ನ ಸಾಮರ್ಥ್ಯ ಇರುವುದು ಅಭಿನಯದಲ್ಲಿ! ಅದನ್ನು ಮಾತ್ರ ಮಾಡು. ಕಂಪೆನಿ ನಡೆಸುವುದು ನಿನ್ನ ಪ್ಯಾಶನ್ ಅಲ್ಲ! ಅದು ಬೇಡ ಅಂದರು.
ಅಂಬಾನಿಯವರ ಮಾತನ್ನು ಗಂಭೀರವಾಗಿ ಪರಿಗಣಿಸಿದ ಅಮಿತಾಭ್ ತನ್ನ ಕಂಪೆನಿಗೆ ಬೀಗ ಜಡಿದು ಮತ್ತೆ ಅಭಿನಯ ಕ್ಷೇತ್ರವನ್ನು ಪ್ರವೇಶ ಮಾಡಿದರು. ಕಳೆದುಕೊಂಡ ಎಲ್ಲವನ್ನೂ ಮತ್ತೆ ಗೆದ್ದರು. ಎಲ್ಲಿ ಬಿದ್ದಿದ್ದರೋ ಅಲ್ಲಿಯೇ ಮತ್ತೆ ಎದ್ದು ಬಂದರು!
ಈ ಆರು ಸವಾಲುಗಳನ್ನು ಅಮಿತಾಬ್ ಬಚ್ಚನ್ ಗೆದ್ದ ರೀತಿಯು ನಿಜಕ್ಕೂ ನಮಗೆ ಪ್ರೇರಣಾದಾಯಕ ಆಗಿದೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಕ್ರಿಕೆಟ್ ಮತ್ತು ಚೆಸ್ ಆಟದಲ್ಲಿ ಪ್ರೆಡಿಕ್ಷನ್ ನಡೆಯುವುದಿಲ್ಲ! ಬದುಕಿನಲ್ಲಿ ಕೂಡ!