Site icon Vistara News

ರಾಜ ಮಾರ್ಗ ಅಂಕಣ : ನಾವೂ ನಮ್ಮದೇ ಸ್ಪೆಷಲ್‌ ಬ್ರಾಂಡ್‌ ಕ್ರಿಯೇಟ್‌ ಮಾಡಿಕೊಳ್ಳುವುದು ಹೇಗೆ?

raja-marga-column: How to creat our own brand value?

raja-marga-column: How to creat our own brand value?

ಜಗತ್ತಿನ ಮೊಟ್ಟ ಮೊದಲ ಮೋಟಾರ್ ಕಾರನ್ನು ಸಂಶೋಧನೆ ಮಾಡಿದವನು ಕಾರ್ಲ್ ಬೆಂಝ್ ಎಂಬ ಜರ್ಮನಿಯ ವ್ಯಾಪಾರಿ (1844-1929). ಅದೇ ಕಾರ್ಲ್ ಬೆಂಝ್ 1886 ಜುಲೈ ತಿಂಗಳ 3ರಂದು ತನ್ನ ಮೊದಲ ಕಾರನ್ನು ಜರ್ಮನಿಯ ರಸ್ತೆಯಲ್ಲಿ ಓಡಿಸುತ್ತಾ ಹೇಳಿದ ಮಾತು ತುಂಬಾನೇ ಪ್ರಾಮುಖ್ಯ ಆದದ್ದು. “ಮುಂದೆ ಜನರು ನನ್ನನ್ನು ನೆನಪು ಇಟ್ಟುಕೊಳ್ಳುವರೋ ಇಲ್ಲವೋ ನನಗೆ ಗೊತ್ತಿಲ್ಲ. ಆದ್ರೆ ನಾನು ಕಂಡು ಹಿಡಿದ ಈ ಕಾರು ಶತಮಾನಗಳ ನಂತರವೂ ಜಗತ್ತಿನಾದ್ಯಂತ ಓಡ್ತಾ ಇರುತ್ತದೆ!” ಆತನ ಆತ್ಮವಿಶ್ವಾಸವು ಆಗಿನ ಕಾಲಕ್ಕೆ ನಗೆಪಾಟಲಿಗೆ ತುತ್ತಾಗಿತ್ತು. ಜನರು ಅದನ್ನು ಭಂಡ ಧೈರ್ಯ ಎಂದು ಕರೆದರು. ಆದರೆ ಅವನ ಕಾರುಗಳು ಅವನು ಹೇಳಿದ ಹಾಗೆ ಶತಮಾನಗಳ ಆಚೆಗೂ ಓಡಿದವು. ಈಗಲೂ ಅವನ ಕಾರಿನ ಅಪ್ಡೇಟೆಡ್ ವರ್ಷನ್ (ರಾಜ ಮಾರ್ಗ ಅಂಕಣ) ಆಗಿರುವ ಮರ್ಸಿಡಿಸ್ ಬೆಂಝ್ ಜಗತ್ತಿನ ಮಾರುಕಟ್ಟೆಯನ್ನು ಆಳುತ್ತಿದೆ! ಆತನ ಆತ್ಮವಿಶ್ವಾಸ ಮತ್ತು ತನ್ನ ಬ್ರಾಂಡ್ ಮೇಲಿನ ನಂಬಿಕೆ ನನಗೆ ವಿಸ್ಮಯ ಅಂತ ಅನ್ನಿಸುತ್ತಿದೆ.

ಕಾರ್ಲ್‌ ಬೆಂಜ್‌

ತನ್ನ ಬ್ರಾಂಡ್ ಕಾರ್ ಬಗ್ಗೆ ಹೆನ್ರಿ ಫೋರ್ಡ್ ಹೇಳಿದ್ದೇನು?

ಆಧುನಿಕ ಮೋಟಾರ್ ವಾಹನಗಳ ಮೂಲಕ ಜಗತ್ತಿನ ದೃಷ್ಟಿಕೋನವನ್ನು ಬದಲಾಯಿಸಿದ ಹೆನ್ರಿ ಫೋರ್ಡ್ ಮುಂದೆ ಇದನ್ನೇ ಮುಂದುವರಿಸಿದರು.1903ರ ಜುಲೈ 15ರಂದು ತನ್ನ ವೈಭವದ ಕಾರಲ್ಲಿ ಕುಳಿತು ಅಮೆರಿಕದ ಮಿಚಿಗನ್ ನಗರದ ಬೀದಿಗಳಲ್ಲಿ ತನ್ನ ಕಂಪೆನಿ ಕಾರನ್ನು ಓಡಿಸುತ್ತಾರೆ. ಆ ದಿನ ಅವರು ಹೇಳಿದ ಮಾತು ಕೇಳಿ. “ನನ್ನ ಕಾರುಗಳು ಪ್ರತೀ ಲೀಟರ್ ಪೆಟ್ರೋಲ್ ಕುಡಿದು 30 ಕಿಲೋಮೀಟರ್ ಓಡುತ್ತವೆ. ಅದರಲ್ಲಿ ಇಂಧನದ ಮೂಲಕ ಓಡುವುದು 20 ಕಿಲೋಮೀಟರ್. ಉಳಿದ 10 ಕಿಲೋಮೀಟರ್ ಓಡುವುದು ನನ್ನ ಹೆಸರಿನ ಮೇಲೆ!” ಇದನ್ನು ಕಾರ್ಪೊರೇಟ್ ಜಗತ್ತು ಇಂದು ವಿಶ್ವಾಸಾರ್ಹತೆ (ಕ್ರೆಡಿಬಿಲಿಟಿ) ಎಂದು ಕರೆಯುತ್ತದೆ.

ಹೆನ್ರಿಫೋರ್ಡ್‌ ಕಟ್ಟಿದ ಬ್ರಾಂಡ್‌ ಕೋಟೆ

ಇವೆರಡೂ ಘಟನೆಗಳು ನಮಗೆ ಬ್ರಾಂಡ್ ಕಂಪೆನಿಗಳ ಸಕ್ಸೆಸ್ ರಹಸ್ಯವನ್ನು ತೆರೆದಿಡುತ್ತವೆ. ಅದುವೇ ಕ್ವಾಲಿಟಿ ಚೆಕ್ ಮತ್ತು ಕ್ರೆಡಿಬಿಲಿಟಿ. ಪ್ರತೀ ಒಂದು ಬ್ರಾಂಡೆಡ್ ಕಂಪೆನಿಯು ಕೂಡ ಇಂದು ಇವೆರಡು ಅಂಶಗಳಿಗೆ ತುಂಬಾ ಪ್ರಾಮುಖ್ಯತೆ ಕೊಡುತ್ತದೆ.

ನೋಕಿಯಾ ಮೊಬೈಲ್ ಕಂಪನಿ ಮಾಡಿದ ನಿರ್ಧಾರ ಅದು ಅದ್ಭುತ!

ದಶಕಗಳ ಹಿಂದೆ ನೋಕಿಯಾ ಮೊಬೈಲ್ ಕಂಪೆನಿಯ ಯಾವುದೋ ಒಂದು ಬ್ರಾಂಡ್ ಹ್ಯಾಂಡ್ ಸೆಟ್ ಅಸ್ಸಾಂ ರಾಜ್ಯದ ಯಾವುದೋ ಒಂದು ಸಣ್ಣ ಹಳ್ಳಿಯಲ್ಲಿ ಬ್ಲಾಸ್ಟ್ ಆಯ್ತು. ಆ ಸುದ್ದಿಯು ಪತ್ರಿಕೆಗಳ ಒಂದು ಮೂಲೆಯಲ್ಲಿ ಪ್ರಕಟ ಆಗಿತ್ತು. ಆದರೆ ತಕ್ಷಣ ನೋಕಿಯಾ ಕಂಪೆನಿ ಏನು ಮಾಡಿತು ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ಕಂಪೆನಿಯು ಕೋಟಿ ಕೋಟಿ ರೂ. ಬಂಡವಾಳ ಹೂಡಿದ್ದ ಆ ಬ್ರಾಂಡನ್ನು ಹಿಂದೆ ಮುಂದೆ ನೋಡದೆ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಿತು! ಮಾತ್ರವಲ್ಲ ಆ ಬ್ರಾಂಡಿನ ಎಲ್ಲಾ ಹ್ಯಾಂಡ್ ಸೆಟ್‌ಗಳನ್ನು ಗ್ರಾಹಕರಿಂದ ಮರು ಖರೀದಿ ಮಾಡಿತು!

ನೋಕಿಯಾ ಎಂಬ ಬ್ರಾಂಡ್

ಒಂದು ಬ್ರಾಂಡೆಡ್ ಕಂಪೆನಿಯು ತನ್ನ ಗ್ರಾಹಕರ ಕ್ರೆಡಿಬಿಲಿಟಿಯನ್ನು ಉಳಿಸಿಕೊಳ್ಳುವ ಜಾಣ್ಮೆ ಇದು!

ಒಂದು ಕಾಲದಲ್ಲಿ ಭಾರತದಲ್ಲಿ ವಾಚ್ ಅಂದ್ರೆ HMT ಮತ್ತು HMT ಮಾತ್ರ ಆಗಿತ್ತು! ಪ್ರತೀ ಒಬ್ಬ ಯುವಕನು ತನ್ನ ಪ್ರಿಯತಮೆಗೆ HMT ವಾಚ್ ಗಿಫ್ಟ್ ಕೊಡಬೇಕು ಎಂದು ಹಂಬಲಿಸುವ ದಿನಗಳು. ಆದರೆ ಆ ಕಂಪನಿಯು ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಅಪ್ಡೇಟ್ ಆಗಲೇ ಇಲ್ಲ. ಗ್ರಾಹಕರ ನಾಡಿಮಿಡಿತದ ಅಧ್ಯಯನವನ್ನು ಮಾಡಲೇ ಇಲ್ಲ. ಕಸ್ಟಮರ್ ಕೇರ್ ಸೆಂಟರ್ ನೇಮಕ ಮಾಡಲೇ ಇಲ್ಲ. ಪರಿಣಾಮವಾಗಿ 2016ರಲ್ಲಿ HMT ವಾಚ್ ಕಂಪನಿ ಬಾಗಿಲು ಮುಚ್ಚಿತ್ತು! ಅದೇ ಹೊತ್ತಿಗೆ ಬಹಳ ಸ್ಟ್ರಾಂಗ್ ಅದ ಕಸ್ಟಮರ್ ಕೇರ್ ಸೆಂಟರನ್ನು ಹೊಂದಿರುವ ಮತ್ತು ಕಸ್ಟಮರ್ ಡಿಲೈಟ್ ಆಶಯವನ್ನು ಹೊಂದಿರುವ ಟೈಟಾನ್ ವಾಚ್ ಇಂದು ದೇಶದ ಮಾರುಕಟ್ಟೆಯನ್ನು ಆಳುತ್ತಾ ಇದೆ! ಟೈಟಾನ್ ವಾಚ್ ಹಿಂದೆ ಟಾಟಾ ಕಂಪೆನಿಯ ಗುಡ್ ವಿಲ್ ಇತ್ತು ಅಂದರೆ ನಾವು ನಂಬಲೇ ಬೇಕು!

‌ಎಚ್‌ಎಂಟಿ ಮತ್ತು ಟೈಟಾನ್

ಎಲ್ಲರೂ ಓಡುವುದು ಬ್ರಾಂಡ್‌ಗಳ ಹಿಂದೆ!

ಭಾರತದಲ್ಲಿ ದಶಕಗಳ ಹಿಂದೆ ಬೆಸ್ಟ್ ಬೈಕ್ ಯಾವುದು ಎಂದು ಕೇಳಿದರೆ ಎಲ್ಲರ ಉತ್ತರ ಒಂದೇ ಆಗಿತ್ತು. ಅದು ಯಮಾಹಾ. ಈಗಲೂ ಅದೇ ಉತ್ತರ ಬರುತ್ತದೆ! ಮುಂದೆ ಹಲವು ದಶಕಗಳು ಕಳೆದರೂ ಅದೇ ಉತ್ತರ ಬರುವ ಸಾಧ್ಯತೆ ಇದೆ. ಅದು ಯಮಾಹಾ ಬೈಕ್ ಹುಟ್ಟು ಹಾಕಿರುವ ಬ್ರಾಂಡ್ ನೇಮ್ ಮತ್ತು ಕ್ರೆಡಿಬಿಲಿಟಿ! ನಮ್ಮ ಬೈಕ್ ಎಂದಿಗೂ ರಸ್ತೆಯಲ್ಲಿ ಕೈ ಕೊಡುವುದಿಲ್ಲ ಎಂಬ ಕಂಪೆನಿಯ ಬದ್ಧತೆಯು ಗ್ರಾಹಕರಿಗೆ ಟಚ್ ಆಗಿದೆ.

ಹಿಂದೆ – ಇಂದು – ಮುಂದೆ ಹೀಗೆ ಭಾರತದ ಸಾರಿಗೆಯ ಪ್ರಪಂಚವನ್ನು ಆಳ್ವಿಕೆ ಮಾಡಿದ್ದು ಒಂದೇ ಬ್ರಾಂಡ್ – TATA, TATA ಮತ್ತು TATA! ಅದು ಹೇಗೆ?

ಇವತ್ತಿಗೂ ಎಲೆಕ್ಟ್ರಾನಿಕ್ ವಸ್ತುಗಳು ಅಂದಾಗ ಫಿಲಿಪ್ಸ್, ಡ್ರೆಸ್ ಮೆಟೀರಿಯಲ್ ಅಂದಾಗ ರೇಮಂಡ್, ಗೋಡೆ ಗಡಿಯಾರ ಅಂದಾಗ ಅಜಂತಾ, ಬಾಲ್ ಪೆನ್ನು ಅಂದಾಗ ರೆನಾಲ್ಡ್, ಶೂಸ್ ಅಂದಾಗ ಬಾಟಾ, ಮಿಲ್ಕ್ ಚಾಕೊಲೇಟ್ ಅಂದಾಗ ಅಮುಲ್, ಸೀರೆ ಅಂದಾಗ ಕಾಂಜೀವರಂ, ಮನರಂಜನೆ ಅಂದಾಗ ಡಿಸ್ನಿ, ನಗೆ ಅಂದಾಗ ಚಾಪ್ಲಿನ್, ಟ್ರಕ್ ಅಂದರೆ ಮಹೀಂದ್ರ………. ತಮ್ಮ ಬ್ರಾಂಡ್ ನಂಬಿಕೆಯನ್ನು ಉಳಿಸಿಕೊಳ್ಳಲು ಸಾಧ್ಯ ಅದದ್ದು ಹೇಗೆ? ಯೋಚನೆ ಮಾಡಿ.

ಬ್ರಾಂಡ್ ಕಂಪನಿಗಳು ಹೇಗೆ ಯೋಚನೆ ಮಾಡುತ್ತವೆ?

ಭಾರತ ಸರಕಾರವು ಜನಸಂಖ್ಯೆಯ ನಿಯಂತ್ರಣಕ್ಕೆ ಅನುಗುಣವಾಗಿ ಸಣ್ಣ ಸಣ್ಣ ಕುಟುಂಬದ ಪ್ರಚಾರಕ್ಕೆ ಇಳಿದಾಗ TATA ಕಂಪೆನಿ ನ್ಯಾನೋ ಕಾರುಗಳನ್ನು ಮಾರುಕಟ್ಟೆಗೆ ತಂದಿತು. ಸಣ್ಣ ಕುಟುಂಬಗಳ ಕನಸಿನ ಕಾರು ಅದು. ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ ದೇಶದಲ್ಲಿ ಒಂದು ಸಂಚಲನ ಉಂಟಾದಾಗ ಬಾಬಾ ರಾಮದೇವ್ ಅದನ್ನು ಗಮನಿಸಿ ಸ್ವದೇಶೀ ಬ್ರಾಂಡ್ ಅದ ಪತಂಜಲಿಯನ್ನು ಚಂದವಾಗಿ ಮಾರ್ಕೆಟ್ ಮಾಡಿದರು! ಪತಂಜಲಿ ಆಟಾ, ಪತಂಜಲಿ ಘೀ, ಪತಂಜಲಿ ಉಪ್ಪಿನಕಾಯಿ….. ಹೀಗೆ ನೂರಾರು ಪತಂಜಲಿಯ ಉತ್ಪನ್ನಗಳು ವರ್ತಮಾನ ಕಾಲದ ಆವಶ್ಯಕತೆ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಟ್ರೆಂಡ್ ಸೆಟ್ಟರ್ ಆಗಿರುವುದೇ ಬ್ರಾಂಡ್ ಕಂಪೆನಿಗಳ ಆದ್ಯತೆ ಆಗಿದೆ ಎಂಬುದನ್ನು ಪ್ರೂವ್ ಮಾಡಿತು.

ನಾವು ನಮ್ಮ ಕ್ಷೇತ್ರದ ಬ್ರಾಂಡ್ ಆಗುವುದು ಯಾವಾಗ?

ಅದೇ ರೀತಿಯಾಗಿ ನಟನೆ ಅಂದಾಗ ಅಮಿತಾಬ್, ಚಿತ್ರ ನಿರ್ಮಾಣ ಅಂದಾಗ ಆಮಿರ್ ಖಾನ್, ಮ್ಯೂಸಿಕ್ ಅಂದಾಗ ರೆಹಮಾನ್, ಫ್ಯೂಷನ್ ಮ್ಯೂಸಿಕ್ ಅಂದಾಗ ಹರಿಹರನ್, ಕ್ರಿಕೆಟ್ ಅಂದಾಗ ಸಚಿನ್, ಫುಟ್ಬಾಲ್ ಅಂದಾಗ ರೆನಾಲ್ದೋ, ಬರವಣಿಗೆ ಅಂದಾಗ ಚೇತನ್ ಭಗತ್, ಕರ್ನಾಟಕ ಸಂಗೀತ ಅಂದಾಗ ಸುಬ್ಬುಲಕ್ಷ್ಮಿ, ಭಜನ್ ಅಂದಾಗ ಭೀಮಸೇನ್ ಜೋಶಿ, ತಬಲಾ ಅಂದಾಗ ಝಾಕೀರ್ ಹುಸೇನ್, ಚಾರಿಟಿ ಅಂದಾಗ ಅಜೀಂ ಪ್ರೇಂಜಿ, ಫ್ಲೂಟ್ ಅಂದಾಗ ಚೌರಾಸಿಯಾ, ಹೊಟೇಲು ಉದ್ಯಮ ಅಂದಾಗ ತಾಜ್, ಉಪ್ಪಿನಕಾಯಿ ಅಂದಾಗ ಬೆಡೇಕರ್, ಸಣ್ಣ ಕತೆಗಳು ಅಂದಾಗ ಆರ್. ಕೆ.ನಾರಾಯಣನ್, ಸಿನಿಮಾ ಸ್ಟುಡಿಯೋ ಅಂದಾಗ ರಾಮೋಜಿ ರಾವ್, ಐಟಿ ಕ್ಷೇತ್ರ ಅಂದಾಗ ಇನ್ಫೋಸಿಸ್ ಯಾಕೆ ತಟ್ಟನೇ ನೆನಪಿಗೆ ಬರುತ್ತಾರೆ? ಅವರೆಲ್ಲರೂ ಕ್ರಿಯೇಟ್ ಮಾಡಿದ ಬ್ರಾಂಡ್ ವ್ಯಾಲ್ಯೂ ಯಾವುದು? ಯೋಚನೆ ಮಾಡಿ.

ನಾವೂ ನಮ್ಮ ಕ್ಷೇತ್ರದ ಒಂದು ಬ್ರಾಂಡ್ ಆಗುವುದು ಯಾವಾಗ?

ಇದನ್ನೂ ಓದಿ: ರಾಜ ಮಾರ್ಗ ಅಂಕಣ : 81ರ ವಯಸ್ಸಿನಲ್ಲಿಯೂ ಕಲರಿ ಪಾಠ ಮಾಡುತ್ತಿದ್ದಾರೆ ಮೀನಾಕ್ಷಿ ಅಮ್ಮ!

Exit mobile version