ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮೆಯಾದರೂ ಆತ್ಮಹತ್ಯೆ ಮಾಡಬೇಕು ಎಂಬ ಯೋಚನೆ ಬರುತ್ತದೆ ಎನ್ನುತ್ತದೆ ಸಂಶೋಧನೆ. ಹಾಗೆ ಯೋಚನೆ ಬಂದ ತಕ್ಷಣ ಪ್ರತಿಯೊಬ್ಬರೂ ಆತ್ಮಹತ್ಯೆ ಮಾಡುತ್ತಾ ಹೋದರೆ ಜಗತ್ತಿನಲ್ಲಿ ಕೊನೆಗೆ ಉಳಿಯುವುದು ಯಾರು? ಯೋಚನೆ ಮಾಡಿ.
ಕುಂದಾಪುರದಲ್ಲಿ ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಕಡಿಮೆ ಬಂತು ಎಂಬ ಕಾರಣಕ್ಕೆ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಉಡುಪಿಯಲ್ಲಿ ಸೆಕೆಂಡ್ ಪಿಯುಸಿ ಮಾರ್ಕ್ಸ್ ಕಡಿಮೆ ಆಯ್ತು ಎಂದು ನೊಂದುಕೊಂಡ ಹುಡುಗಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮಂಗಳೂರಿನಲ್ಲಿ ತನ್ನ ಏಕಮುಖ ಪ್ರೀತಿ ಸೋತಿತು ಎಂಬ ಕಾರಣಕ್ಕೆ ಒಬ್ಬ ಹದಿಹರೆಯದ ಹುಡುಗ ಆತ್ಮಹತ್ಯೆ ಮಾಡಿಕೊಂಡ. ವ್ಯಾಪಾರದಲ್ಲಿ ನಷ್ಟ ಆಯಿತು ಎಂಬ ಕಾರಣಕ್ಕೆ ಒಂದು ಇಡೀ ಕುಟುಂಬವೇ ಸಾವಿಗೆ ಶರಣಾಗುತ್ತದೆ. ಮೊಬೈಲ್ ಬಳಕೆ ಹೆಚ್ಚು ಮಾಡಿದ್ದಕ್ಕೆ ಅಮ್ಮ ಬೈದರು ಎಂಬ ಕಾರಣಕ್ಕೆ ಮಗಳು ಬಾವಿಗೆ ಹಾರಿ ಉಸಿರು ಚೆಲ್ಲುತ್ತಾಳೆ.
ಆರ್ಥಿಕ ಸಂಕಷ್ಟದ ಕಾರಣಕ್ಕೆ, ಪ್ರೀತಿ ವಿಫಲತೆಯ ಕಾರಣಕ್ಕೆ, ಪರೀಕ್ಷೆಯ ಅಂಕಗಳು ಕಡಿಮೆ ಆಯ್ತು ಎಂಬ ಕಾರಣಕ್ಕೆ, ಪದೇ ಪದೇ ಸೋಲು ಬಂತು ಎಂಬ ಕಾರಣಕ್ಕೆ, ಸಾಂಸಾರಿಕ ವಿಫಲತೆಗಳಿಗೆ, ಸಣ್ಣ ಸಣ್ಣ ಸೋಲುಗಳಿಗೆ ಹೆದರಿ… ಹೀಗೆ ಹಲವು ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ, ಮತ್ತು ಈ ಪಿಡುಗಿಗೆ ಹೆಚ್ಚು ಬಲಿಯಾಗುವವರು ಹದಿಹರೆಯದ ಯುವಜನತೆ ಎನ್ನುವುದು ಕೂಡ ಆತಂಕಕಾರಿ. ಯಾಕೆ ಹೀಗಾಗುತ್ತಿದೆ?
ಬಾಕ್ಸಿಂಗ್ ದಂತಕತೆ ಮೊಹಮದ್ ಅಲಿ ಹೇಳಿದ ಮಾತು – ಯಾವುದೇ ಕ್ರೀಡೆಯಲ್ಲಿ ಕೆಳಗೆ ಬೀಳುವುದು ಸೋಲು ಅಲ್ಲ. ಕೆಳಗೆ ಬಿದ್ದಾಗ ಏಳದೆ ಇರುವುದು ಸೋಲು!
ಸೋಲು ಬಂದಾಗ ಎದುರಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗುವವರು ಯೋಚನೆ ಮಾಡಬೇಕು ಏನೆಂದರೆ ಸಾವು ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡುವುದಿಲ್ಲ. ಅದು ನಿಮ್ಮನ್ನು ನಂಬಿದವರನ್ನು ಪಾತಾಳಕ್ಕೆ ತಳ್ಳುತ್ತದೆ ಮತ್ತು ಇನ್ನೂ ನೂರು ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ಸಮಸ್ಯೆಗಳನ್ನು ಎದುರಿಸದೆ ಪಲಾಯನ ಮಾಡಿದವರನ್ನು ಅವರ ಕುಟುಂಬ ಮತ್ತು ಸಮಾಜಗಳು ಮುಂದೆ ಎಂದಿಗೂ ಕ್ಷಮಿಸುವುದಿಲ್ಲ!
ತನಗೆ ಎದುರಾದ ಸವಾಲುಗಳಿಗೆ ಬೆನ್ನು ಹಾಕಿ ಆತ್ಮಹತ್ಯೆ ಮಾಡುವುದು ಎಂದಾದರೆ ಅಮಿತಾಬ್ ಬಚ್ಚನ್ ಈವರೆಗೆ ಎಷ್ಟು ಬಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿತ್ತು? ಹದಿಮೂರು ಚುನಾವಣೆ ಸೋತ ಅಬ್ರಹಾಂ ಲಿಂಕನ್ ಎಷ್ಟು ಬಾರಿ ನೇಣು ಹಾಕಿಕೊಳ್ಳಬೇಕಿತ್ತು? ಹಲವು ಬಾರಿ ತನ್ನ ಬೈಕ್ ಫ್ಯಾಕ್ಟರಿ ಸುಟ್ಟು ಹೋಗಿ ದಿವಾಳಿ ಆದ ಜಪಾನ್ ಉದ್ಯಮಿ ಹೊಂಡಾ ಎಷ್ಟು ಬಾರಿ ತನ್ನನ್ನು ತಾನು ಶೂಟ್ ಮಾಡಿಕೊಳ್ಳಬೇಕಿತ್ತು? ಹಸಿವು ಮತ್ತು ಬಡತನ ಸಾಯಲು ಕಾರಣ ಎಂದರೆ ರಸ್ತೆ ಬದಿಯಲ್ಲಿ ಜೋಪಡಿ ಕಟ್ಟಿ ಅದರಲ್ಲಿ ರಾತ್ರಿ ಹೊತ್ತು ಮಲಗುವ ಅಲೆಮಾರಿಗಳು ಎಷ್ಟು ಬಾರಿ ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಕು? ಯೋಚಿಸಿ.
ಒಬ್ಬ ಹದಿಹರೆಯದ ಹುಡುಗ ತನ್ನ ಪ್ರೀತಿಯ ಹುಡುಗಿಯು ತಿರಸ್ಕಾರ ಮಾಡಿದಳು ಎಂಬ ಕಾರಣಕ್ಕೆ ವಿಷ ಕುಡಿದು ಸಾಯುತ್ತಾನೆ. ಅವನ ಉದ್ದೇಶ ತಾನು ಸಾಯುವುದಕ್ಕಿಂತ ಆಕೆಗೆ ಬುದ್ಧಿ ಕಲಿಸಬೇಕು ಎಂದು ಇರುತ್ತದೆ! ಅವನ ಸಾವಿನಿಂದ ಅವಳು ಬುದ್ಧಿ ಕಲಿತಳಾ? ಅವಳು ಬೇರೊಬ್ಬನನ್ನು ಮದುವೆಯಾಗಿ ಸೊಂಟದ ಮೇಲೆ ಒಂದು ಮಗುವನ್ನು ಎತ್ತಿಕೊಂಡ ದೃಶ್ಯ ಒಮ್ಮೆ ಕಲ್ಪಿಸಿಕೊಂಡರೆ ಅವನು ಖಂಡಿತವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ!
ಪರೀಕ್ಷೆಯಲ್ಲಿ ಅಂಕ ಕಡಿಮೆ ಆಯ್ತು ಎಂದು ಸುಸೈಡ್ ಮಾಡಿಕೊಳ್ಳಲು ಹೊರಡುವ ಮಕ್ಕಳಿಗೆ ಹೇಳುವುದು ಏನೆಂದರೆ ಪರೀಕ್ಷೆಯ ಅಂಕಗಳು ಮಾತ್ರ ನಿಮ್ಮ ಯಶಸ್ಸು ಅಲ್ಲ. ಅದೊಂದೇ ನಿಮ್ಮ ಪ್ರತಿಭೆಯ ಪೂರ್ತಿ ಮಾಪನ ಅಲ್ಲ. ಪರೀಕ್ಷೆಯಲ್ಲಿ ಫೇಲ್ ಆದವರೆಲ್ಲ ಆತ್ಮಹತ್ಯೆ ಮಾಡಲು ಹೊರಟಿದ್ದರೆ ರವಿ ಬೆಳಗೆರೆ, ಅಮಿತಾಬ್ ಬಚ್ಚನ್, ಆಮಿರ್ ಖಾನ್, ಶ್ರೀನಿವಾಸ್ ರಾಮಾನುಜಂ, ಆರ್ ಕೆ ನಾರಾಯಣ್ ಮೊದಲಾದವರು ಸುಸೈಡ್ ಮಾಡಬೇಕಿತ್ತು ಅಲ್ವಾ?
ಪರೀಕ್ಷೆಯಲ್ಲಿ ಫೇಲ್ ಆಗಿ ಕೂಡ ಜೀವನದ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ಪಾಸಾದವರು ಸಾವಿರಾರು ಜನರು ಇದ್ದಾರೆ. ಅಂಕಗಳೆ ಮುಖ್ಯ ಎಂಬ ನಮ್ಮ ಶಿಕ್ಷಣ ವ್ಯವಸ್ಥೆಯು ಉಂಟುಮಾಡಿದ ಭ್ರಮೆ ಮತ್ತು ಅಂಕಗಳನ್ನು ಪಡೆಯುವುದೇ ಶಿಕ್ಷಣದ ಉದ್ದೇಶ ಎಂದು ನಮ್ಮ ಹೆತ್ತವರ ಮೈಂಡ್ ಸೆಟ್‌ಗಳು ಬದಲಾಗುವವರೆಗೂ ಈ ಅನಾಹುತಗಳು ನಡೆಯುತ್ತಲೆ ಇರುತ್ತವೆ.
‘ನನ್ನ ಮಗನಿಗೆ ಬರೇ ಗೆಲ್ಲುವುದನ್ನು ಕಲಿಸಬೇಡಿ, ಅವನಿಗೆ ಸೋಲುವುದನ್ನು ಕೂಡ ಕಲಿಸಿಕೊಡಿ’ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ತನ್ನ ಮಗನ ಶಿಕ್ಷಕಿಗೆ ಬರೆದ ಪತ್ರದ ಆಶಯವು ನಮಗೆ ಅರ್ಥ ಆದರೆ ಸಾಕು! ಸೋಲು ಬಂತು ಅಂದರೆ ಎಲ್ಲವೂ ಮುಗಿದುಹೋಯಿತು ಎಂದು ಅರ್ಥ ಅಲ್ಲ. ಯಶಸ್ಸು ಸ್ವಲ್ಪ ದೂರ ಇದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು!
ಪದೇ ಪದೇ ಸೋಲು ಬಂದಾಗ ನಾವು ಯೋಚಿಸಬೇಕಾದದ್ದು ಎಲ್ಲವನ್ನೂ ಕೈಚೆಲ್ಲಬೇಕು ಎಂದರ್ಥ ಅಲ್ಲ! ನಮ್ಮ ಯೋಜನೆಯಲ್ಲಿ ಎಲ್ಲೋ, ಏನೋ ದೋಷ ಇದೆ ಎಂದು! ಅದನ್ನು ಟ್ರೇಸ್ ಮಾಡಿ ಸರಿಪಡಿಸಿಕೊಂಡರೆ ಸಾಕು!
ಒಬ್ಬನಿಗೆ ಸೋಲು ಬಂತು ಅಂದರೆ ಡಿಪ್ರೆಸ್ ಆಗಬೇಕು ಎಂದು ಅರ್ಥ ಅಲ್ಲ. ಸೋಲಿನ ಕಾರಣ ಹುಡುಕಬೇಕು! ಆತ್ಮಾವಲೋಕನ ಮಾಡಬೇಕು ಎಂದು ನಾವು ಅರ್ಥ ಮಾಡಿಕೊಳ್ಳಬೇಕು!
ಸತತವಾಗಿ ಸೋಲು ಬಂತು ಅಂದರೆ ನಿಮ್ಮಲ್ಲಿ ಪ್ರತಿಭೆ ಮತ್ತು ಸಾಮರ್ಥ್ಯಗಳು ಬತ್ತಿ ಹೋಗಿವೆ ಅಂತ ಅರ್ಥ ಅಲ್ಲ! ನಿಮಗೆ ನಿಮ್ಮ ಮೇಲೆ ನಂಬಿಕೆ ಕಡಿಮೆ ಆಗಿದೆ ಎಂದರ್ಥ!
ಹಾಯಿ ದೋಣಿಯಲ್ಲಿ ಹೋಗುವಾಗ ಎದುರು ಪ್ರವಾಹ ಬಂತು ಅಂದರೆ ದೋಣಿಯನ್ನು ಬದಲಾವಣೆ ಮಾಡಬೇಕು ಅಂತ ಅರ್ಥ ಅಲ್ಲ. ನಿಮ್ಮ ಹಾಯಿಯ ದಿಕ್ಕನ್ನು ಬದಲಾಯಿಸಬೇಕು ಅಷ್ಟೇ!
ಸಾವು ಅತ್ಯಂತ ಭಯಾನಕವಾದ ಸ್ಥಿತಿ! ಒಮ್ಮೆ ಸಾವಿನ ಮನೆಯನ್ನು ಭೇಟಿ ಮಾಡಿ ನೋಡಿ! ನಿಮಗೆ ಅದರ ಗಂಭೀರತೆ ಅರ್ಥ ಆಗುತ್ತದೆ. ಸಾವು ಉಂಟುಮಾಡುವ ಶಾಶ್ವತ ನೋವು, ಶೂನ್ಯತೆ, ಅನಿಶ್ಚಿತತೆ, ನಷ್ಟಗಳನ್ನು ಒಮ್ಮೆ ಯೋಚನೆ ಮಾಡಿದರೆ ನಾವು ಖಂಡಿತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ!
ನಮ್ಮ ಮನಸಿನ ಭಾವನೆಗಳನ್ನು ಮುಕ್ತವಾಗಿ ಹೇಳಲು ಅವಕಾಶ ದೊರೆತರೆ ನಾವು ಅಂತರ್ಮುಖಿ ಆಗುವುದಿಲ್ಲ. ಮನೆಯವರ ಜೊತೆ, ಗೆಳೆಯರ ಜೊತೆ ಮನಸ್ಸು ತೆರೆದು ಮಾತಾಡುವ ಅವಕಾಶ ಪಡೆದಷ್ಟು ನಾವು ಬಹಿರ್ಮುಖಿ ಆಗುತ್ತೇವೆ. ಆಗ ಆತ್ಮಹತ್ಯೆಯ ಯೋಚನೆಗಳು ಕಡಿಮೆ ಆಗುತ್ತವೆ. ನಮ್ಮ ಜೊತೆ ಯಾರೋ ಕೊನೆಯವರೆಗೆ ಇರುತ್ತಾರೆ ಎನ್ನುವ ಫೀಲ್ ನಮ್ಮನ್ನು ಬಲಿಷ್ಠ ಮಾಡುತ್ತದೆ. ತನ್ನ ಸಂಸಾರವನ್ನು ನಂಬಿಕೆಗೆ ತೆಗೆದುಕೊಂಡ, ಮನೆಯವರನ್ನು ಸಹಜವಾಗಿ ಪ್ರೀತಿಸುವ ಯಾವುದೇ ವ್ಯಕ್ತಿಗಳು ಖಂಡಿತವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ!
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅಮಿತಾಭ್ ಗೆದ್ದ 6 ಸವಾಲುಗಳು! ತಿರಸ್ಕಾರ, ಅಪಮಾನ, ನೋವುಗಳನ್ನು ಮೀರಿ ನಿಂತ ಖುಷಿ