ಹಿಂದೂ ಧರ್ಮದ ನಂಬಿಕೆಗಳು (Faiths in Hindu Religion) ಎಷ್ಟು ವೈಜ್ಞಾನಿಕ ತಳಹದಿಯನ್ನು (Scientific base) ಹೊಂದಿವೆ ಎಂದು ನಾವು ಅಧ್ಯಯನ ಮಾಡುತ್ತ ಮುಂದೆ ಹೋದಾಗ ನೂರಾರು ಅಚ್ಚರಿಯ ಸಂಗತಿಗಳು ನಮಗೆ ದೊರೆಯುತ್ತವೆ. ಹಿಂದೂಗಳ ಸಣ್ಣ, ದೊಡ್ಡ ಪ್ರತಿಯೊಂದು ಹಬ್ಬವೂ ಒಂದಲ್ಲ ಒಂದು ಪೌರಾಣಿಕ ಕಥೆಯ ಹಿನ್ನೆಲೆಯನ್ನು ಹೊಂದಿರುತ್ತದೆ. ಕಾರ್ತಿಕ ಮಾಸದಲ್ಲಿ ಆಚರಣೆ ಮಾಡುವ ಹಲವಾರು ಹಬ್ಬಗಳಲ್ಲಿ ತುಳಸಿ ಪೂಜೆಯೂ ಒಂದು. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಹಿಂದೂಗಳಿಗೆ ತುಳಸಿ ಹಬ್ಬದ (Tulsi Festival) ಸಂಭ್ರಮ (Raja Marga Column).
ಮನೆ ಸಲ್ಲಕ್ಷಣಗಳಲ್ಲಿ ತುಳಸಿ ಕೂಡ ಒಂದು
ಒಂದು ಮನೆ ಎಂದರೆ ಹೀಗೇ ಇರಬೇಕು ಎನ್ನುವ ಕಲ್ಪನೆ ಅದ್ಭುತವಾದದ್ದು. ಒಂದು ಮನೆ ಪರಿಪೂರ್ಣ ಆಗಬೇಕಾದರೆ ಶುದ್ಧ ನೀರಿನ ಬಾವಿ ಮತ್ತು ತುಳಸಿ ಕಟ್ಟೆ ಇರಲೇಬೇಕು ಎನ್ನುತ್ತದೆ ಧಾರ್ಮಿಕ ನಂಬಿಕೆ. ಮನೆಯ ಸುತ್ತ ತುಳಸಿವನವನ್ನು ಮಾಡುವುದರಿಂದ ಸೊಳ್ಳೆಗಳು ಮನೆಯ ಒಳಗೆ ಬರುವುದಿಲ್ಲ, ಅದರಿಂದ ಸೊಳ್ಳೆಯಿಂದ ಬರುವ ಮಲೇರಿಯಾ ಇತ್ಯಾದಿ ಕಾಯಿಲೆಗಳು ಮನೆಯ ಒಳಗೆ ಬರುವುದಿಲ್ಲ ಅನ್ನುತ್ತದೆ ಆಧುನಿಕ ವಿಜ್ಞಾನ. ತುಳಸಿಯನ್ನು ಒಂದು ಔಷಧಿಯ ಮೂಲಿಕೆಯಾಗಿ ನಮ್ಮ ಹಿರಿಯರು ಗುರುತು ಮಾಡಿದರು. ಬೆಳಿಗ್ಗೆ ತುಳಸಿಕಟ್ಟೆಯ ಮುಂದೆ ಸೂರ್ಯೋದಯಕ್ಕೆ ಹಸೆ ಬರೆದು, ತುಳಸಿಕಟ್ಟೆಗೆ ನೀರು ಹಾಕಿ, ಪ್ರದಕ್ಷಿಣೆ ಹಾಕಿ, ನಮಸ್ಕಾರ ಮಾಡಿದ ನಂತರವೇ ಹಿಂದೂಗಳ ದಿನ ಆರಂಭ ಆಗುವುದು. ಸಂಜೆ ತುಳಸಿಕಟ್ಟೆಗೆ ದೀಪ ಇಡದೇ ದಿನ ಮುಕ್ತಾಯ ಆಗುವುದಿಲ್ಲ. ಇದೆಲ್ಲವನ್ನೂ ಮಾಡುವುದು ಗೃಹಿಣಿಯರು ಆದ್ದರಿಂದ ತುಳಸಿ ಪೂಜೆಯು ಗೃಹಿಣಿಯರ ಹಬ್ಬ.
ಈ ತುಳಸಿ ಎಂದರೆ ಯಾರು?
ತುಳಸಿ ಅಥವಾ ವೃಂದಾ ಎಂದರೆ ಕಾಲನೇಮಿ ಎಂಬ ಅಸುರನ ಮಗಳು. ಆಕೆ ಸಮುದ್ರ ಮಥನದ ಹೊತ್ತಿನಲ್ಲಿ ಹುಟ್ಟಿದವಳು ಎಂಬ ನಂಬಿಕೆ ಕೂಡ ಇದೆ. ಆಕೆ ಮಹಾವಿಷ್ಣುವಿನ ಆರಾಧಕಿ. ಅವಳು ವಂಶಧರ್ಮದಂತೆ ಮದುವೆ ಆದದ್ದು ಜಲಂಧರ ಎಂಬ ಶಕ್ತಿಶಾಲಿ ರಾಕ್ಷಸನನ್ನು. ಅವನು ಈಶ್ವರನ ಸಿಟ್ಟಿನಿಂದ ಜನಿಸಿದವನು. ಮಹಾ ಶಕ್ತಿವಂತ.
ಆತನು ಈಶ್ವರನನ್ನು ಕುರಿತು ತಪಸ್ಸು ಮಾಡಿ ಪಡೆದ ವರವೆಂದರೆ ಅದೃಶ್ಯ ಆಗುವುದು. ಎಲ್ಲಿಯವರೆಗೆ ಪತ್ನಿಯ ಪಾವಿತ್ರ್ಯತೆ ಇರುತ್ತದೆಯೋ ಅಲ್ಲಿಯವರೆಗೆ ಆತನಿಗೆ ಆ ಶಕ್ತಿಯು ಇರುತ್ತದೆ. ಆತ ತನ್ನ ಶಕ್ತಿಯನ್ನು ಉಪಯೋಗಿಸಿ ದೇವತೆಗಳ ಅಮರಾವತಿಯನ್ನು ಗೆದ್ದು ದೇವತೆಗಳನ್ನು ಓಡಿಸುತ್ತಾನೆ. ದುರಾಚಾರಗಳನ್ನು ಮಾಡುತ್ತಾನೆ. ತನ್ನ ಅದೃಶ್ಯನಾಗುವ ವರದ ಶಕ್ತಿಯಿಂದ ಅಜೇಯನಾಗಿ ಉಳಿಯುತ್ತಾನೆ. ಆಗ ಆತನ ಸಂಹಾರಕ್ಕಾಗಿ ವಿಷ್ಣುವು ಆತನ ವರವನ್ನು ಮುರಿಯುವ ಅನಿವಾರ್ಯತೆ ಉಂಟಾಗುತ್ತದೆ. ಅದಕ್ಕಾಗಿ ಆತನು ಜಲಂಧರನ ವೇಷದಲ್ಲಿ ಆಕೆಯ ಅರಮನೆಗೆ ಬರುತ್ತಾನೆ. ಆಗ ಆಕೆಯ ಪಾತಿವೃತ್ಯ ನಷ್ಟ ಆಗುತ್ತದೆ. ಅದರಿಂದಾಗಿ ಜಲಂಧರನ ನಾಶವು ಸುಲಭ ಆಗುತ್ತದೆ.
ವೃಂದಾ ಮಹಾವಿಷ್ಣುವಿಗೆ ಶಾಪ ಕೊಡುತ್ತಾಳೆ
ಇದರಿಂದಾಗಿ ಸಿಟ್ಟು ಮಾಡಿಕೊಂಡ ವೃಂದಾ ಮಹಾವಿಷ್ಣುವಿಗೆ ‘ಕಲ್ಲಾಗಿ ಹೋಗು’ ಎಂದು ಶಾಪ ಕೊಡುತ್ತಾಳೆ. ತಾನು ಕೂಡ ಕಲ್ಲಾಗಿ ಮನೆಯ ಮುಂದೆ ತುಳಸಿ ಕಟ್ಟೆ ಆಗುತ್ತಾಳೆ. ವಿಷ್ಣುದೇವರು ಆಕೆ ಕೊಟ್ಟ ಶಾಪವನ್ನು ನಗುತ್ತಾ ಸ್ವೀಕಾರ ಮಾಡಿ ತಾನೂ ಶಾಲಿಗ್ರಾಮವಾಗಿ ಆಕೆಯ ಜೊತೆ ಇರುತ್ತಾನೆ ಮತ್ತು ಆಕೆಯ ಪಾವಿತ್ರ್ಯತೆಯನ್ನು ವರವಾಗಿ ನೀಡುತ್ತಾನೆ. ಮುಂದೆ ಆಕೆಯನ್ನು ಜನರು ಪೂಜೆ ಮಾಡಬೇಕು ಎಂದು ಅಪ್ಪಣೆ ಕೊಡುತ್ತಾನೆ. ಈ ಕಥೆಯ
ಮೂರ್ತರೂಪವೇ ತುಳಸಿ ಪೂಜೆ.
ತುಳಸಿ ಪೂಜೆಯ ಆಚರಣೆ ಹೇಗೆ?
ಮನೆಯ ಮುಂದೆ ಇರುವ ತುಳಸಿ ಕಟ್ಟೆಯನ್ನು ಸ್ವಚ್ಛ ಮಾಡಿ ಅದರ ಮೇಲೆ ರಂಗೋಲಿ ಬರೆದು ಹೂವಿನ ಅಲಂಕಾರ ಮಾಡುತ್ತಾರೆ. ಕುಂಕುಮದ ಬೊಟ್ಟು ಇಡುತ್ತಾರೆ. ನೆಲ್ಲಿಕಾಯಿ ಮತ್ತು ಹುಣಸೆ ಗೆಲ್ಲನ್ನು ತಪ್ಪದೆ ಇಡುತ್ತಾರೆ. ತುಳಸಿಯ ಮುಂದೆ ಹಸೆ, ಚಿತ್ತಾರ ಬಿಡಿಸಿ ದೀಪಗಳಿಂದ ಅಲಂಕಾರ ಮಾಡುತ್ತಾರೆ. ಮುಂದೆ ನಡೆಯುವುದು ಷೋಡಶ ಉಪಚಾರ ಪೂಜೆ. ಅಂದರೆ ಮನೆಗೆ ಅತಿಥಿಗಳು ಬಂದರೆ ನಾವು ಹೇಗೆ ಆದರಣೆ ಮಾಡುತ್ತೆವೆಯೋ ಹಾಗೆ. ಹೂವು, ದೀಪಗಳು, ಹಣ್ಣು ಕಾಯಿ, ಪಂಚಕಜ್ಜಾಯ ನೈವೇದ್ಯ, ಭಜನೆ, ಆರತಿ ಮೊದಲಾದ ಉಪಚಾರಗಳ ಮೂಲಕ ತುಳಸಿಯನ್ನು ಪೂಜೆ ಮಾಡಿ ತುಳಸಿ ಮತ್ತು ವಿಷ್ಣುವಿನ ವಿವಾಹವನ್ನು ಸಂಭ್ರಮಿಸುವ ಹಬ್ಬ ಇದು.
ಇದನ್ನೂ ಓದಿ: Raja Marga Column : ಅಂದು ಕಪಿಲ್ ದೇವ್ ಮೈಯಲ್ಲಿ ಆವೇಶ ಬಂದಿತ್ತು, ಥೇಟ್ ಕಾಂತಾರ ಸ್ಟೈಲಲ್ಲಿ!
ತುಳಸಿಕಟ್ಟೆಯಲ್ಲಿ ಮಹಾ ವಿಷ್ಣುದೇವರನ್ನು ಶಾಲಿಗ್ರಾಮವಾಗಿ ಆವಾಹನೆ ಮಾಡಿರುತ್ತಾರೆ. ನೆಲ್ಲಿ ಕಾಯಿಯನ್ನು ತುಪ್ಪದಲ್ಲಿ ಮುಳುಗಿಸಿ ತುಳಸಿಗೆ ಪೂಜೆ ಮಾಡುತ್ತಾರೆ. ಹಣ್ಣು ಕಾಯಿ, ಪಂಚ ಕಜ್ಜಾಯ ನೈವೇದ್ಯಗಳ ಮೂಲಕ ಸಾಂಪ್ರದಾಯಿಕ ತುಳಸಿಪೂಜೆ ಮುಕ್ತಾಯ ಆಗುತ್ತದೆ. ತುಳಸಿ ಮಾತೆಯ ಅನುಗ್ರಹದಿಂದ ಗೃಹಿಣಿಯರ ಮಾಂಗಲ್ಯಯೋಗ ಮತ್ತು ಸಂಪತ್ತು ವೃದ್ದಿಯಾಗುತ್ತದೆ ಎನ್ನುತ್ತವೆ ನಮ್ಮ ಶಾಸ್ತ್ರಗಳು.
||ಪ್ರಸೀದ ತುಳಸೀದೇವಿ ಪ್ರಸೀದ ಹರಿ ವಲ್ಲಭೇ||
||ಕ್ಷೀರೋಧಮಥನೋದ್ಭೂತೆ ತುಳಸಿ ತ್ವಾಂ ನಮಾಮ್ಯಹಮ್||
(ಮಹಾವಿಷ್ಣುವಿನ ಪತ್ನಿಯಾದ ಮತ್ತು ಸಮುದ್ರ ಮಥನದಲ್ಲಿ ಜನ್ಮ ತಾಳಿದ ತುಳಸಿದೇವಿಗೆ ನಮ್ಮ ನಮನಗಳು. ಆಕೆಯ ಅನುಗ್ರಹ ನಮಗೆಲ್ಲ ದೊರೆಯಲಿ)