Site icon Vistara News

ರಾಜ ಮಾರ್ಗ ಅಂಕಣ | ವೈರಿ ಕೋಟೆಯನ್ನು ಪುಡಿಗಟ್ಟುತ್ತಿದ್ದ ಹಾಕಿ ಆಟದ ವಿಶ್ವವಿಜೇತ ಧ್ಯಾನ್‌ಚಂದ್‌ಗೆ Happy Birthday!

dhyan chand

ಜನರು ಅವರನ್ನು ಹಾಕಿ ಮಾಂತ್ರಿಕ ಎಂದು ಕರೆದರು. ಹಾಕಿ ವಿಝಾರ್ಡ್ ಎಂದು ಪ್ರೀತಿಯಿಂದ ಕರೆದರು. ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿಗೆ ಇಂದು ಅಪಾರವಾದ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದೆ ಎಂದಾದರೆ ಅದಕ್ಕೆ ಕಾರಣ ಅವರು. ಇಂದು ಅವರ ಹುಟ್ಟುಹಬ್ಬವನ್ನು ರಾಷ್ಟ್ರೀಯ ಕ್ರೀಡಾದಿನವಾಗಿ ಆಚರಣೆ ಮಾಡುವುದು ಕೂಡ ನಾವು ಅವರಿಗೆ ಕೊಟ್ಟಿರುವ ಗೌರವ. ಅದರ ಜೊತೆಗೆ ರಾಷ್ಟ್ರದ ಮಹೋನ್ನತ ಕ್ರೀಡಾಪಟುವಿಗೆ ನೀಡುವ ಖೇಲ್ ರತ್ನ ಪ್ರಶಸ್ತಿಯನ್ನು 2021ರಿಂದ ಅವರ ಹೆಸರಲ್ಲಿ ಕೊಡುತ್ತಿರುವುದು ಕೂಡ ‌ ಅವರ ಮೇಲಿನ ಅಭಿಮಾನದಿಂದ.

ಈ ಎಲ್ಲ ಗೌರವಗಳಿಗೆ ಅತ್ಯಂತ ಅರ್ಹರಾದವರು ಭಾರತದ ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನಚಂದ್!

1905ನೆ ಆಗಸ್ಟ್ 29ರಂದು ಜನಿಸಿದ ಧ್ಯಾನಚಂದ್ ಅವರ ತಂದೆ ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಸೈನಿಕರಾಗಿದ್ದರು. ಅಪ್ಪನಿಂದ ಪ್ರೇರಣೆ ಪಡೆದು ಧ್ಯಾನಚಂದ್ ಕೂಡ ಅದೇ ಸೈನ್ಯಕ್ಕೆ ಸೇರಿದರು. ಆಶ್ಚರ್ಯ ಅಂದರೆ ಅವರು 16ನೆ ವರ್ಷದವರೆಗೆ ಯಾವುದೇ ಕ್ರೀಡೆಯಲ್ಲಿ ಆಸಕ್ತರಾಗಿರಲಿಲ್ಲ. ರೆಸ್ಲಿಂಗ್ ಅವರ ಆಸಕ್ತಿಯ ಕ್ಷೇತ್ರ ಆಗಿತ್ತು. ಮೊದಲು ಸೇನೆಯ ಟೀಮಲ್ಲಿ ಆಡಿದ ಅವರು ಕೆಲವೇ ವರ್ಷಗಳ ಒಳಗೆ ಭಾರತ ತಂಡದ ಪ್ರಮುಖ ಆಟಗಾರ ಆದರು. 1926-1949ರ ಸುದೀರ್ಘ ಅವಧಿಯಲ್ಲಿ ಭಾರತಕ್ಕೆ ಆಡಿದ ಅವರು ಆಡಿದ್ದು 185 ಅಂತಾರಾಷ್ಟ್ರೀಯ ಪಂದ್ಯಗಳನ್ನು. ಸಿಡಿಸಿದ್ದು ಬರೋಬ್ಬರಿ 570 ಗೋಲ್‌ಗಳನ್ನು! ಹಾಕಿಯಲ್ಲಿ ಈ ಸಾಧನೆಯನ್ನು ಬೇರೆ ಯಾವ ಆಟಗಾರನೂ ಮಾಡಿಲ್ಲ ಅನ್ನುವುದು ಅವರ ಶ್ರೇಷ್ಠತೆಗೆ ಸಾಕ್ಷಿ ಆಗಿದೆ! ಕ್ರೀಡಾಂಗಣದಲ್ಲಿ ಸ್ಟಿಕ್ ಹಿಡಿದು ಬಾಲನ್ನು ಡ್ರಿಬಲ್ ಮಾಡುತ್ತ ಆಕ್ರಮಣಕಾರಿಯಾಗಿ ವೈರಿಗಳ ಕೋಟೆಗೆ ನುಗ್ಗುವ ಅವರ ಧೈರ್ಯ, ಕ್ಷಮತೆ ಮತ್ತು ಕೌಶಲಗಳು ದೇಶಕ್ಕೆ ಬಹುದೊಡ್ಡ ಹೆಸರು ತಂದು ಕೊಟ್ಟವು.

ಮೇಜರ್ ಧ್ಯಾನಚಂದ್ ಅವರನ್ನು ಭಾರತವು ಮರೆಯದಿರಲು ಪ್ರಮುಖ ಕಾರಣ 1928, 1932 ಮತ್ತು 1936ರ ಒಲಿಂಪಿಕ್ಸ್ ಕೂಟಗಳು. ಈ ಮೂರೂ ಒಲಿಂಪಿಕ್ಸ್ ಕೂಟಗಳಲ್ಲಿ ಭಾರತ ಚಿನ್ನದ ಪದಕವನ್ನು ಗೆದ್ದಿತ್ತು ಮತ್ತು ಧ್ಯಾನಚಂದ್ ಭಾರತದ ಪರವಾಗಿ ನಿರ್ಣಾಯಕ ಆಟ ಆಡಿದ್ದರು! ಕೊನೆಯ ಎರಡು ಕೂಟಗಳಲ್ಲಿ ಅವರು ಭಾರತೀಯ ಹಾಕಿ ತಂಡದ ಕ್ಯಾಪ್ಟನ್ ಆಗಿದ್ದರು. ಅಲ್ಲಿಂದ ಸ್ಫೂರ್ತಿ ಪಡೆದು ಭಾರತೀಯ ಹಾಕಿ ತಂಡವು ಒಟ್ಟು ಎಂಟು ಒಲಿಂಪಿಕ್ಸ್ ಚಿನ್ನದ ಪದಕಗಳನ್ನು ಪಡೆದಿದ್ದು ಕೂಡ ಮಹಾನ್ ಸಾಧನೆ. ಬೇರೆ ಯಾವ ರಾಷ್ಟ್ರವೂ ಈ ಸಾಧನೆ ಮಾಡಿಲ್ಲ ಅನ್ನುವುದು ನಮ್ಮ ಹೆಚ್ಚುಗಾರಿಕೆ. ಇದಕ್ಕೆಲ್ಲ ಆರಂಭದ ಪ್ರೇರಣೆ ಕೊಟ್ಟವರು ಮೇಜರ್ ಧ್ಯಾನಚಂದ್ ಅವರೇ ಆಗಿದ್ದಾರೆ.

ಧ್ಯಾನಚಂದ್

1928ರ ಆಮಸ್ಟರಡಾಂ ಒಲಿಂಪಿಕ್ಸನಲ್ಲಿ ಭಾರತ ಮೊದಲ ಬಾರಿಗೆ ಚಿನ್ನ ಗೆದ್ದಿತ್ತು. ಧ್ಯಾನಚಂದ್ ಜಾದೂ ಮಾಡಿದ್ದರು. ಕೂಟವು ಮುಗಿದಾಗ ಒಲಿಂಪಿಕ್ಸ್ ಅಧಿಕಾರಿಗಳು ಅವರ ಹಾಕ್ಕಿ ಸ್ಟಿಕನ್ನು ತೆಗೆದುಕೊಂಡು ಒಳಗೆ ಮ್ಯಾಗ್ನೆಟ್ ಇದೆಯಾ ಎಂದು ಪರೀಕ್ಷೆ ಮಾಡಿದ್ದರು! ಅವರ ಆಟದ ವೈಭವದ ದಿನಗಳಲ್ಲಿ ಭಾರತವನ್ನು ಆಳುತ್ತಿದ್ದ ಬ್ರಿಟಿಷ್ ಸರಕಾರವು ಅವರನ್ನು ಸಂಪರ್ಕ ಮಾಡಿ ಇಂಗ್ಲೆಂಡ್ ಪರವಾಗಿ ಆಡಲು ಆಮಿಷ ಕೊಟ್ಟಿತ್ತು. ಅವರಿಗೆ ಅವರು ಇಷ್ಟಪಟ್ಟ ವೇತನ ಮತ್ತು ಇಂಗ್ಲಿಷ್ ಸೇನೆಯಲ್ಲಿ ಬಹುದೊಡ್ಡ ಹುದ್ದೆಯನ್ನು ಆಫರ್ ಮಾಡಿತ್ತು! ಧ್ಯಾನಚಂದ್ ಆ ಅತೀ ದೊಡ್ಡ ಆಫರನ್ನು ನಿರಾಕರಣೆ ಮಾಡಿ ತನ್ನ ನಿಷ್ಠೆಯು ಕೇವಲ ಭಾರತಕ್ಕೇ ಎಂದು ಹೇಳಿದ್ದರು!

ಅವರ ಜೀವನದ ದೊಡ್ಡ ಸಾಧನೆ ದಾಖಲು ಆದದ್ದು 1936ರ ಬರ್ಲಿನ್ ಒಲಿಂಪಿಕ್ಸ್ ನಲ್ಲಿ. ಆಗ ಜರ್ಮನಿಯಲ್ಲಿ ಸರ್ವಾಧಿಕಾರಿ ಹಿಟ್ಲರ್ ಆಡಳಿತ ನಡೆಸುತ್ತಿದ್ದರು. ಭಾರತ ಮತ್ತು ಜರ್ಮನಿಯ ಪಂದ್ಯವನ್ನು ವೀಕ್ಷಣೆ ಮಾಡಲು ಸ್ವತಃ ಹಿಟ್ಲರ್ ಬಂದು ಕೂತಿದ್ದರು. ಭಾರತ ಆ ಪಂದ್ಯವನ್ನು 8-1 ಗೋಲ್ ಅಂತರದಲ್ಲಿ ಗೆದ್ದಾಗ ಹಿಟ್ಲರ್ ಸ್ವತಃ ಇಳಿದುಬಂದು ಧ್ಯಾನಚಂದ್ ಅವರ ಬೆನ್ನು ತಟ್ಟಿದ್ದರು!

ಇಂತಹ ನೂರಾರು ರೋಮಾಂಚಕ ಘಟನೆಗಳು ಅವರ ಆತ್ಮಚರಿತ್ರೆ GOAL ಎಂಬ ಪುಸ್ತಕದಲ್ಲಿ ಇವೆ.
ಅಂತಹ ಧ್ಯಾನಚಂದ್ ಮುಂದೆ ಪದ್ಮಭೂಷಣ ಪ್ರಶಸ್ತಿ ಪಡೆದರು. ದೆಹಲಿಯಲ್ಲಿ ಇರುವ ‘ನ್ಯಾಷನಲ್ ಸ್ಟೇಡಿಯಂ’ ಅವರ ಹೆಸರು ಪಡೆಯಿತು. ಆದರೆ ಅವರಿಗೆ ಭಾರತ ರತ್ನ ಪ್ರಶಸ್ತಿ ಯಾಕೆ ದೊರೆತಿಲ್ಲ ಅನ್ನುವುದು ಇನ್ನೂ ಬಗೆಹರಿಯದ ಪ್ರಶ್ನೆ.

ಲೆಜೆಂಡ್ ಆಟಗಾರ ಮೇಜರ್ ಧ್ಯಾನಚಂದ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ| ವಿಶ್ವವನ್ನೇ ಗೆಲ್ಲುವ ಕಡೆಗೆ ಓಡುತ್ತಿರುವ ಅವನಿಗೆ ಕಾಲೇ ಇಲ್ಲ! No Excuse ಎಂದವನ ಕಥೆ ಇದು!

Exit mobile version